“ಕಲಾ ವಿನ್ಯಾಸಗಳು”

ಸೂಕ್ಷ್ಮ ಸಂವೇದನಾತ್ಮಕ ಕಲಾ ವಿನ್ಯಾಸಗಳು ಈ ದೇಶದ ಮುಖ್ಯ ನಗರಗಳ ತುಂಬೆಲ್ಲ ಹರಡಿವೆ. ಇನ್ನೂ ಹರಡುತ್ತಲೂ ಇವೆ. ಯಾವ ಹಾದಿಗೆ ಹೋದರೂ ಒಂದಕ್ಕಿಂತ ಒಂದು ಅಕರ್ಷಕ. ಇಸ್ಲಾಮಿನ ಕಟ್ಟು ನಿಯಮಗಳಿಗೆ ಒಳಪಟ್ಟೇ ಇಲ್ಲಿನ ಕಲಾವಿಕಾಸ ಕೂಡಾ ನಡೆಯಬೇಕು. ಹೀಗಾಗಿ ಅಸಂಗತ ವಿನ್ಯಾಸ ಹಾಗೂ ಕೆಲವು ನಿರ್ದಿಷ್ಟ ವಿನ್ಯಾಸಗಳಿಗಷ್ಟೆ ಇಲ್ಲಿನ ಚಿತ್ರ ಹಾಗೂ ಶಿಲ್ಪದಲ್ಲಿ ಅವಕಾಶ. ಆದರೂ ಇವು ಸೊಗಸಿಗೆ ಕಡಿಮೆ ಇಲ್ಲ. ಈ ದೇಶದಲ್ಲಿ ಫೋಟೊ ತೆಗೆದುಕೊಳ್ಳಲಿಕ್ಕೆ ಅನುಮತಿ ಇಲ್ಲ. ಹಾಗೆ ತೆಗೆದುಕೊಳ್ಳಬೇಕಿದ್ದರೆ ಅಲ್ಲಿಯ ದೇಶದ ವಾರ್ತಾಇಲಾಖೆಯ ಮಂತ್ರಿಗಳಿಂದ ಪರವಾನಿಗೆಯ ಪತ್ರ ಪಡೆಯಬೇಕು. ನಾವೇನು ಅಂತಹ ಸಾಹಸ ಮಾಡಲಿಲ್ಲ. ತೆಗೆದು ತಯಾರಾಗಿಯೇ ಇದ್ದ ಕೆಲವೊಂದು ಪೋಸ್ಟರ್‌ಕಾರ್ಡ್  ಮಾರ್ಕೆಟ್‌ದಿಂದ ಕೊಂಡೆವು. ಏನೇ ಅಂದರೂ ವ್ಯೂ ಕಾರ್ಡ್ ಬೇರೆ, ಸ್ವಂತ ಅನುಭವ ಬೇರೆಯೇ, ಸಮಯ ಹೆಚ್ಚು ಸಿಗಬೇಕಷ್ಟೆ. ಗುತ್ತಿಯವರಿಗೂ ಅನೇಕ ವಿಷಯಗಳಲ್ಲಿ ಆಸಕ್ತಿ ಇರುವದರಿಂದ ನಮ್ಮನ್ನೆಲ್ಲಾ ಹೊಂದಿಸಿಕೊಂಡು ಹೊರಡುತ್ತಾರೆ. ಈ ಮೊದಲೇ ಹೇಳಿದಂತೆ ಗುರುವಾರ- ಶುಕ್ರವಾರ ರಜೆ. ಹೊರಗಡೆ ಬಿಸಿಲಿರುತ್ತಿದ್ದರೂ ಅಷ್ಟಿಷ್ಟು ಆರಾಮ ತೆಗೆದುಕೊಂಡು ಎದ್ದುಬಿಡುವದು ಅವರದೊಂದು ಸ್ವಭಾವ. ನಾನಂತೂ ನನ್ನ ಸ್ವಭಾವಕ್ಕೆ ಅನುಗುಣವಾಗಿ ಪ್ರಖರ ಬಿಸಿಲು ಏರುತ್ತಿದ್ದಂತೆ ಕಿಟಕಿಯ ಕರ್ಟನ್ ಸರಿಸಿ ಕತ್ತಲು ಮಾಡಿ, ‘ರಜೆ ಇರುವದರಿಂದ ಎಲ್ಲರೂ ಸ್ವಲ್ಪ ಸುಮ್ಮನೆ ಮಲಗಿರಿ’ ಎಂದು ಕಿರುಚಾಡುತ್ತಿದ್ದೆ. ಹುಡುಗರೂ ಅಪ್ಪನ ಪಾರ್ಟಿ ಮುಗಿಯಿತಲ್ಲ, ಎಲ್ಲರ ಮೇಲೆ ದುಸು ಮುಸು ಮಾಡುತ್ತ ಮತ್ತೊಂದು ರೌಂಡ್‌ ಚಹ ಮಾಡಿ ತಯಾರಾಗಿ ಹೊರಬೀಳುವಲ್ಲಿ ಅದೆಷ್ಟು ಸಲ ‘ಹುಡುಗರನ್ನು ಅದೇಕೆ ಹೀಗೆ ಇದೇನು ಮಾಡಿದ್ದೀರಿ, ಅಲ್ಲಿಯಾಕೆ ಸಾಮಾನು ಚೆಲ್ಲುವುದು, ಬಟ್ಟೆಯಾಕೆ ಸರಿಯಾಗಿಡುವದಿಲ್ಲವೆಂದು ನನ್ನ ನಿದ್ದೆ ಕೆಡಿಸಿದ ಅವರಪ್ಪನ ಮೇಲಿನ ಸಿಟ್ಟನ್ನೆಲ್ಲ ಇಲ್ಲಿ ಉಪಯೋಗಿಸುತ್ತಿದ್ದೆ. ಒಂದು ಸಲ ಹೊರಟರೆ ಎಲ್ಲ ಸರಿಹೋಗುತ್ತದೆ ಎಂದೋ ಏನೋ ಗುತ್ತಿಯವರು ಏನೂ ಅನ್ನದೆ ಹುಡುಗರನ್ನ ಮುಂದೆ ಹಾಕಿಕೊಂಡು ಕಾರಿನಲ್ಲಿ ಕುಳಿತು ಹಾರ್ನ್ ಹಾಕಲು ಶುರುಮಾಡುವರು. ನನಗೋ ಈ ಬಿಸಿಲು, ನಿದ್ದೆ ಕೆಡಿಸಿರುವದು, ಅಲ್ಲದೆ ಇವರ ಒದರಾಟ, ಹಾರ್ನ್‌ಗಳ ಸಪ್ಪಳದಿಂದ ಮೈಪರಿಚಿಕೊಳ್ಳುವಂತಾಗುತ್ತಿತ್ತು. ಬಾಗಿಲು ಲಾಕ್ ಮಾಡಿಕೊಂಡು ಬಂದು ಕಾರಿನಲ್ಲಿ ಕುಳಿತುಬಿಡುತ್ತಿದ್ದೆ.

ನಾನು ದುಸು ಮುಸುಗೊಂಡಾಗಲೆಲ್ಲ ಇವರು ಮಮ್ಮಿ ಎಂದೇ ಕರೆಯುವರು ಡುಮ್ಮಿಎನ್ನುವುದಿಲ್ಲವಲ್ಲ ಎಂದು ಒಳಗೊಳಗೇ ಸಮಾಧಾನ. ಹೀಗಾಗಿ ಇಂತಹ ಸಂದರ್ಭದಲ್ಲಿ ‘ಮಮ್ಮಿ ಯಾವ ಕಡೆ ಹೊರಡುವದು?’ ಎಂದು ಹುಡುಗರಡೆಗೆ ನೋಡಿ ನನ್ನನ್ನು ಸಹಜ ಸ್ಥಿತಿಗೆ ತಂದೇ ಬಿಡುತ್ತಿದ್ದರು. ನಗರದಲ್ಲಿ ಹೊಸದೇನಾದರೂ ಇದ್ದರೆ ಶೇ. 95 ತಪ್ಪದೇ ನೋಡುತ್ತೇವೆ. ನಾವು ಆಗೀಗ ಹೋದಾಗಲ್ಲ ಏನಾದರೂ ಬದಲಾವಣೆಗಳು ಇದ್ದೇಇರುತ್ತಿದ್ದವು. ಅಬ್ಬರ ಉಬ್ಬರದಿಂದ ಬೆಳೆಯುವ ನಗರಿಗೆ ತಮ್ಮದೇ ಅದ ಧಾರ್ಮಿಕ-ಸಾಂಸ್ಕೃತಿಕ ಕಲಾ ಕೃತಿಗಳನ್ನು ಅಲ್ಲಲ್ಲಿ ರೂಪಿಸಿ ನಗರದ ಅಂದ ಚೆಂದವನ್ನು ಹೆಚ್ಚಿಸಿದ್ದಾರೆ.

ಸುಮಾರು ಹತ್ತು ವರ್ಷಗಳ ಮೊದಲು ಇಂತಹ ಯಾವ ಯೋಚನೆಯೂ ಇರದ ಸರಕಾರ ಒಮ್ಮಿಂದೊಮ್ಮೆಲೆ ಕಣ್ಣು ತೆಗದಂತೆ ಕಾಣಿಸಿತು. ಹೀಗಾಗಿ ಜೆಡ್ಡಾದಲ್ಲಿ ಮೊದಲನೆಯದಾಗಿ ಸುಂದರ ವಿನ್ಯಾಸದಲ್ಲಿ ಮೂಡಿಬಂದ ವಿನ್ಯಾಸವೆಂದರೆ ಹಮ್ರಾ ಸ್ಥಳದಲ್ಲಿರುವ ‘ಪೃಥ್ವಿ’ ಇದರ ವಿನ್ಯಾಸಕಾರ ಅರ್ನಾಲೊ ಪಾಮ್‌ಡ್‌ರೋ. ನಾಲ್ಕು ರಸ್ತೆಗಳು ಕೊಡುವ ನಡುವೆ ವಿಶಾಲ ಎತ್ತರದ ಸ್ಥಳದಲ್ಲಿ ಈ “ಪೃಥ್ವಿ” ಕಟ್ಟಿದ್ದಾರೆ ಪಂಚಲೋಹದಿಂದ ಕಟ್ಟಿದ್ದು. ಅಂತೆಯೇ ಬಿಸಿಲಿಗೆ ಬಣ್ಣ ಬಣ್ಣಗಳಲ್ಲಿ ಜಗತ್ತಿನ ದೇಶಗಳೆಲ್ಲ ಎದ್ದುಕಾಣುತ್ತವೆ.

ಕಾರವಾನ್ ಸೂಪರ್ ಮಾರ್ಕೆಟ್ ಹತ್ತಿರ ಇರುವ ವಿನ್ಯಾಸವೆಂದರೆ ಅಮೃತಶಿಲೆಗಳ ಮೇಲೆ ತುಂಬಿ ಇಟ್ಟ ಹಿಟ್ಟಿನ ಚೀಲಗಳು. ಸಂಗಮವರಿ ಕಲ್ಲುಗಳನ್ನೇ ಹಿಟ್ಟಿನ ಚೀಲದಂತೆ ತಗ್ಗು-ಉಬ್ಬಾಗಿ ಕೆತ್ತಿದ್ದಾರೆ. ಈಗ ಅಲ್ಲಿ ಒಂದರ ಮೇಲೊಂದು ಒಗೆದು ಇಳಿಸಿಹೋಗಿದ್ದಾರೋನೋ ಅನ್ನುವಷ್ಟು ನೈಜತೆ ಇದೆ.

ಕಾರಂಜಿಗಳಂತೂ ಸಾಕಷ್ಟು. ಹಣ ಸಾಕಷ್ಟು ಇವರಿಗೆ. ಎಲ್ಲಿ ನೋಡಿದಲ್ಲೆಲ್ಲ ಸಂಗಮವರಿ ಕಾರಂಜಗಳೇ. ರಾತ್ರಿ ಬಣ್ಣದ ದೀಪಗಳ ಜೊತೆಗೆ ನೆಳಲು ಬೆಳಕುಗಳ ಸಂಯೋಜನೆಯಲ್ಲಿ ಎಷ್ಟು ನೋಡಿದರೂ ಕಡಿಮೆಯೇ.

ನಗರದ ಹೆಸರು ಕಬ್ಬಿಣ ತಂತಿಗಳಲ್ಲಿ ಅರಬ್ಬಿ ಶಬ್ದಗಳನ್ನೊಳ ಗೊಂಡದ್ದು ಜಿರಾಫೆ ಯಾಕಾರದಂತೆಯೇ ಇದೆ. ಅರಬ್ಬ ಬಾರದ ನಮಗೆ ಜಿರಾಫೆಯಾಗಿ ಕಾಣಿಸುತ್ತದೆ ಎಂದು ನಾವನ್ನುತ್ತಿದ್ದರೆ, ಬೇರೆ ಕಾರಿನ ಮಕ್ಕಳು ಆ ಕಡೆಗೆ ಕೈ ಮಾಡಿ ಜೆಡ್ಡಾ ಎಂದು ಓದುತ್ತಿದ್ದವು. ಬಹಳ ದಿನಗಳ ನಂತರ ತಿಳಿಯಿತು ಅದು ಜೆಡ್ಡಾ ಹೆಸರೆಂದು.

* ಖಗೋಳ ವಿಜ್ಞಾನ ಪ್ರತಿಬಿಂಬಿಸುವ ಸೂರ್ಯ-ಚಂದ್ರ-ಪೃಥ್ವಿ.
* ಇಂಜಿನೀಯೆರಿಂಗ್ ತಂತ್ರಜ್ಞಾನದ ಗಡಿಯಾರ- ಕಂಪಾಸ್.
* ನಿಸರ್ಗ ಪ್ರತಿಬಿಂಬಿಸುವ ಹೂಗೊಂಚಲುಗಳು, ಕ್ಯಾಕ್ಟಸ್ ಪಕ್ಷಿಯ ಹಾರುವಿಕೆ.
* ಸಾಮಾಜಿಕ, ಧಾರ್ಮಿಕ ವಿಷಯಗಳನ್ನು ಪ್ರತಿಬಿಂಬಿಸುವ ಲಾಟೀನುಗಳು (ರಮಜಾನದಲ್ಲಿ ರಾತ್ರಿ ಲಾಟೀನು ಹಿಡಿದುಕೊಂಡು ಅಡ್ಡಾಡುವದು) ಅದರಂತೆ ಆಕಾಶದೆಡೆಗೆ ಎರಡೂ ಕೈ ಎತ್ತಿ ಬೇಡಿಕೊಳ್ಳುವ ಕೈಗಳು, ಸ್ಟ್ಯಾಂಡ್ ಮೇಲೆ ಇಟ್ಟು ಓದುವ ಕುರಾನ್ ಪುಸ್ತಕ, ನೀರಿನ ಹೂಜಿಗಳು, ಮರುಭೂಮಿಯಲ್ಲಿರುವ ಬುಡ್‌ವಿನ್ ಮನೆಗಳು, ಇಂಥ ವಿನ್ಯಾಸಗಳು ಸಾಕಷ್ಟು. ಇವಕ್ಕೆಲ್ಲ ಅಂದಚೆಂದಕ್ಕೆಂದು ಅಲ್ಲಲ್ಲಿ ಕಾರಂಜಿಗಳು ಉದಾರನಗಳು ಅನೇಕ.

ಜೆಡ್ಡಾ ಹೊರವಲಯದಿಂದ ಮಕ್ಕಾಕ್ಕೆ ಕೊಡುವ ರಸ್ತೆಯಲ್ಲಿನ ಬೆಳೆಯುವ ಚಂದ್ರನ ವಿನ್ಯಾಸ ‘ಲಾಫೆಂಟೆಯ’ ವಿಚಾರಾತ್ಮಕ ವಿನ್ಯಾಸ ಸರಳ ಹಾಗೂ ಸುಂದರ. ನಡುವೆ ಗೋಲಾಕಾರದ ಅಮೃತಶಿಲೆಯ ಕಲ್ಲು. ಇದು ಪೂರ್ಣಚಂದ್ರ. ಇದರ ಹಿಂದುಗಡೆ ಅಮಾವಾಸ್ಯೆಯ ನಂತರ ಹುಟ್ಟುವ ಚಂದ್ರನ ಅವಸ್ಥೆಗಳು. ಇದರ ಮುಂದುಗಡೆ ಹುಣ್ಣಮೆಯಾದ ನಂತರ ಇಳಿಮುಖವಾಗುವ ಅರ್ಧಚಂದ್ರಾಕೃತಿಗಳು. ರಸ್ತೆಯ ಎರಡೂ ಬದಿಗೆ ಇದೆ. ಹುಡುಗರಿಗೆ ಚಂದ್ರನ ಪಾಠಹೇಳಿಕೊಡುವಂತಿದೆ.

ಸಮುದ್ರದ ದಂಡ ‘ಕಾರ್ನಿಶ್’ ಗುಂಟ ನೂರಾರು ಕಣ್ಣ್ಸೆಳೆಯುವ ಅಮೂಲ್ಯ ಕಲಾ ವಿನ್ಯಾಸಗಳ ಸಾಲು ಅಂಕೆ ಮೀರಿದ್ದೆನಿಸುವಂತಿವೆ. ಎಲ್ಲ ಕಬ್ಬಿನ-ತಂತಿಗಳೆಲ್ಲ ಜೋಡಿಸಿ ಗಟ್ಟಿಮುಟ್ಸ್ಯಾಗಿ ನೆಲದ ಮೇಲೆ ನಿಲ್ಲುವಂತೆ ಮಾಡಿ ಬಣ್ಣಕೊಡಲಾಗಿದೆ. ‘ಮೀನು ಗಾರರ ಬಲಿ’ ದಪ್ಪ ತಂತಿಗಳಲ್ಲಿ ನಿಜವಾದ ಬಲಿಯಂತೆಯೇ ಹೊಂದಿಸಲಾಗಿದೆ. ಎತ್ತರಕ್ಕೆ ನಿಲ್ಲಿಸಿದ್ದಾರೆ. ಮತ್ತೊಂದೆಡೆಗೆ ಖರ್ಜೂರ ಗಿಡಗಳ ವಿನ್ಯಾಸ. ಅದರ ಎಲೆ- ಕಾಯಿ ಸಹಜವಾಗಿ ಮೂಡಿಬಂದಂತಿದೆ. ಇವುಗಳ ವಿನ್ಯಾಸಕಾರ ಅಬ್ದುಲ್ ಹತಿಮ್ ರದ್ವಿ. (Abdul Hatim Radvi).

ಹಳೇ ಕೋಸ್ಟ್‌ಗಾರ್ಡ್ Motor Boats ಗಳನ್ನು ಎತ್ತಿ ತಂದು ಅವುಗಳನ್ನು ಎತ್ತರದ ಮೇಲಿಟ್ಟು ಒಳ್ಳೆ ಬಣ್ಣ ಕೊಟ್ಟಿದ್ದಾರೆ. ಅದರಂತೆ ಒಂದೆಡೆಗೆ ಸಾಕಷ್ಟು ದೊಡ್ಡದೇ ಇರುವ ಹಡಗನ್ನೂ ನಿಲ್ಲಿಸಿದ್ದಾರೆ. ಸುತ್ತೆಲ್ಲ ಝಗಝಗಿಸುವ ದೀಪಗಳು. ಮಕ್ಕಳಿಗೆ ಗಾರ್ಡ್ ಬೋಟ್‌ಗಳು, ಪ್ರವಾಸಿ ಹಡಗುಗಳು ಹೇಗಿರುತ್ತವೆ ಎನ್ನುವಲ್ಲಿ ಪರಿಚಯಿಸಲು ಇದೊಂದು ಒಳ್ಳೆಯ ಸೌಲಭ್ಯ. ಟಿಕೆಟ್ ಕೊಡಬೇಕಿಲ್ಲ.

ಹತ್ತಿರದಲ್ಲಿಯೇ ಹೆನ್ರಿಮೂರ್‌ ರಚಿಸಿದ ಶಿಲ್ಪವೊಂದಿದೆ. ದೊಡ್ಡ ಗ್ರೆನಾಯಿಟ್ ದಲ್ಲಿ ಕೊರೆದ ಇಂಗ್ಲೀಷ್ 8ರಂತೆ ಕಾಣುವ ಈ ಆಕಾರ ಮಗು ಕುಳಿತಂತೆ ಅನಿಸುವದು ದೊಡ್ಡವರಿಂದ ಹಿಡಿದು ಹುಡುಗರಿಗೆಲ್ಲ ಇಂತಹ ಅನೇಕ ಕಡೆಗೆ ಒಳತೂರಿ ಹೋಗಿ ನಿಂತು ಫೋಟೋ ತೆಗೆಸಿಕೊಳ್ಳುವಾಸೆ.

ಮತ್ತೊಂದೆಡೆಗೆ ‘ಒಮ್ಮೆಲೆ ಹಾರುವ ಪಕ್ಷಿಗಳು’ ತಂತಿಯ ವಿನ್ಯಾಸ ಮಕ್ಕಳನ್ನು ವಿಚಾರಾತ್ಮಕ ಲೋಕಕ್ಕೆ ಒಯ್ಯುವ ಕಲೆಯಂತಿದೆ. ಒಂದು ಗುಂಪು ಪಕ್ಷಿಗಳು ಹೆದರಿ ಕೊಂಡು ಎಲ್ಲ ದಿಕ್ಕಿಗೂ ಒಮ್ಮೆಲೆ ಹಾರುತ್ತಿವೆ. ಪ್ರತಿಯೊಂದು ಪಕ್ಷಿಯ ಕಾಲು, ಕೊಕ್ಕರೆ, ಪಕ್ಕಗಳು, ಕಣ್ಣಿಗೆ ಕಾಣಲಾರದಂತಹ ತಂತಿಗಳಿಂದ ಹೊಂದಿಸಿದ ಲಾಫೆಂಟೆಯಿ ಕಲೆ ಸೂಕ್ಷ್ಮವಾದುದು.

ಇಲ್ಲಿ ಬಹಳೆಡೆಗೆ ಕಾಣುವ ಸುಂದರ ನೋಟವೆಂದರೆ ಅಮೃತಶಿಲೆಯಲ್ಲಿ ಕೊರೆದ ಗಡಿಗೆ ಅಥವಾ ಹೂಜೆಯಂತೆ ಕಾಣುವ ನೀರಿಡುವ ಕೊಡಗಳು. ಕೊಡಗಳಿಗೆ ನಲ್ಲಿ ಜೋಡಿಸಿ ಎತ್ತರ ಕಲ್ಲುಗಳ ಮೇಲಿಟ್ಟು ಸ್ವಲ್ಫ ಬಾಗಿಸಿದಂತೆ ಮಾಡಿ ಒಂದೇ ಸಮನೆ ನೀರು ಬೀಳುವಂತೆ ಮಾಡಿದ್ದಾರೆ. ಹಮ್ರಾ  ಹತ್ತಿರದಲ್ಲಿರುವ ಈ ಒಂದು ದೃಶ್ಯ ಬಹಳ ಆಕರ್ಷಕ. ಸುತ್ತೆಲ್ಲ ಎಂಟುಕೊಡಗಳಲ್ಲಿ ನೀರು ತುಂಬುತ್ತಿವೆ. ಕೆಳಗಿನ ಸುತ್ತಿನಲ್ಲಿ ಒಂದೊಂದು ಕಲ್ಲಿನ ಮೇಲೆ ಒಂದೊಂದು ಕೊಡ ಬಾಗಿಸಿ ಇಟ್ಟು ನೀರು ಸುರಿಯುವಂತೆ ಮಾಡಿದ್ಧಾರೆ. ತುಂಬಿದ ಕೊಡ ಎತ್ತಿಕೊಳ್ಳುವದೊಂದೇ  ಬಾಕಿ, ಎಷ್ಟರಮಟ್ಟಿಗೆ ನೈಜತೆ. ನೋಡಿ ಬೆರಗಾದೆ.

ಈ ತರಹದ ಕೊಡಗಳು ನಮ್ಮ ಕಡೆಯಂತಹವಲ್ಲ. ಹೂಜೆಯಂತೆ ಉದ್ದಾಗಿದ್ದು ಕಂಠ ಸಣ್ಣದಾಗಿರುತ್ತದೆ. ಇದು ಅರಬ್ಬಿಯರದೇ ಆದ ಒಂದು ತರಹದ ಕುಂಭ ಕಲೆ. ಈಗಲಾದರೂ ಅಲ್ಲಲ್ಲಿ ಇಂತಹ ಮಣ್ಣಿನ ಹೂಜೆಗಳಷ್ಟು ಸುತಳಿಯಿಂದ ಕಟ್ಟಿ ಬೆನ್ನಿಗೆ ಹಾಕಿಕೊಂಡು ಪಾಯಸ ಉಣ್ಣುವಂತಹ ಅಗಲ ಬಟ್ಟಲುಗಳಲ್ಲಿ ನೀರು ಕೊಡುತ್ತಾ ಅಡ್ಡಾಡುತ್ತಾರೆ. (ಅದರೆ ಈಗ Cold drink cola ದ ಯುಗದಲ್ಲಿ ಮೇಲಾಗಿ ಶ್ರೀಮಂತ ದೇಶದಲ್ಲಿ ಹೊರಗೆ ಹೋದಲ್ಲಿ ನೀರು ಕುಡಿಯುವವರು ಕಾಣುವದೇ ಇಲ್ಲ. ಎಲ್ಲಾದರೂ ಶೇ. 5 ಇರಬಹುದಷ್ಟೇ). ಇದು ನೂರಾರು ವರ್ಷ ಗಳಿಂದ ನಡೆಸಿಕೊಂಡು ಬರುತ್ತಿರುವ ಪದ್ಧತಿ ಅವರದು. ತಮ್ಮ ಈ ಪದ್ಧತಿಯ ನೆನಪು ಕಾಯ್ದಿಡಲು ಪಟ್ಟಣದ ಅನೇಕ ಭಾಗಗಳಲ್ಲಿ ಬೇರೆ ಬೇರೆ ವಿನ್ಯಾಸಗಳ ಹೊಂದಾಣಿಕೆ ಯಲ್ಲಿ ಸುಂದರವಾಗಿ ಜೋಡಿಸಿದ್ದಾರೆ.

ಹಳೆಯ ವಿಮಾನ ನಿಲ್ದಾಣದ ಹತ್ತಿರ ಇರುವ (ಕಂದಾರಾ ಹೊರವಲಯ) ಸೂಕ್‌ದಲ್ಲಿ (‍ಪೇಟೆ) ಎತ್ತರ ಮೆಟ್ಟಲಾಕಾರದ ಕಟ್ಟೆ ಮಾಡಿ ಮೇಲೆ 1940ರಲ್ಲಿ ಮೊದಲು ಬಂದಿಳಿದ ನಂತರ ಸಾಕಷ್ಟು ಬಳಕೆಯಾದ ವಿಮಾನವೊಂದನ್ನು ಹೊಸದರಂತೆ ಮಾಡಿ ನೆನಪಿಗೋಸ್ಕರ ಇಟ್ಟಿದ್ದಾರೆ.

ಶಾಪಿಂಗ್ ಎಂದು ಪಟ್ಟಣಕ್ಕೆ (ಬಲದ್) ಹೋಗಬೇಕಾದರೆ ಪ್ಯಾಲಸ್ಟೈನ್ ಬ್ರಿಡ್ಜ್‌ದಾಟಿ ಹೋಗಬೇಕಾಗುವುದು. ಅಲ್ಲಿ ಬಲಗಡೆಗೆ ಕಾಣುವ ಆಕರ್ಷಕ “ಅಭರಣಗಳ ಪೆಟ್ಟಿಗೆ”. ಅತೀ ದೊಡ್ಡ ಬಂಗಾರದ ಅಭರಣ ಪೆಟ್ಟಿಗೆ ಸ್ವಲ್ಪ ನೆಲದಲ್ಲಿ ಹುಗಿದವರ ತರಹ ವಾಲಿಸಿ ಇಟ್ಟು ಪೆಟ್ಟಿಗೆ ಬಾಯಿ ತೆಗೆದು ಹಿಂದೆ ಸರಿಸಿ ಎತ್ತರಿಸಿ ಇಡಲಾಗಿದೆ. ಅದರೊಳಗೆ ಕಾಣುವ ಆಭರಣಗಳಾದ ಮುತ್ತಿನ ಸರಗಳು, ಬಳೆ, ಕಡಗಗಳು, ನೆಕ್ಲಸ್, ಕಿವಿಯ ಝಮಕಿಗಳು, ವಜ್ರದ ಹಾರಗಳು, ನಡಪಟ್ಟಿ  ಮುಂತಾದವುಗಳು ಎಲ್ಲ ನಿಜವಾದವುಗಳಂತೆಯೇ ಇವೆ. ಅರ್ಧಮರ್ಧ ಮುತ್ತಿನ ಸರ ಹೊರಗೆ ಬಂದಿದೆ. ಅವೆಲ್ಲ ಝಗಮಗಿಸಲು ಬೇಕಾಗುವ ಬೆಳಕಿನ ಹೊಂದಾಣಿಕೆ ಕೂಡಾ ನೋಡುವಂತಿದೆ. ಈಗಷ್ಟೋ ಯಾವಳೋ ಸುಂದರಿ ಅಥವಾ ಅಭರಣಪ್ರಿಯೇ ಹೊರಗಿನಿಂದ ಬಂದು ಅಭರಣಗಳನ್ನೆಲ್ಲ ಒಂದೊಂದಾಗಿ ಕಳಚಿಟ್ಟಂತೆ ಅಸ್ತವ್ಯಸ್ತ ಹೊಂದಾಣಿಕೆಯ ನೈಜತೆ ಮತ್ತೆ ಮತ್ತೆ ನೋಡುವಂತಹುದು. ನಾನದೆಷ್ಟೋ ನೂರು ಸಲ ನೋಡಿದರೂ ಮತ್ತೆ ಆ ರಸ್ತೆಯಲ್ಲಿ ಹೋಗುವಾಗ ಕಣ್ಣು ತಾನಾಗಿಯೇ ಬಂಗಾರ ಪೆಟ್ಟಗೆಯ ಹುಡುಕುವತ್ತ ಹೋಗುತ್ತಿದ್ದವು.

ನಗರದ ಮಧ್ಯಕ್ಕೆ ‘ಬಲಾದ್’ ಎಂದೇ ಹೆಸರು. ಹಾಗೂ ಕ್ವೀನ್ಸ್‌ ಬಿಲ್ಡಿಂಗ್ (Queens Building) ಎಂದೂ ಕರೆಯುವರು. ಅಲ್ಲಿ ಸುಮಾರು 2 ಕಿ.ಮೀ. ಉದ್ದ ಗಲಕ್ಕೆ ಸುತ್ತು ಹೊಡೆದರೆ ಈ ಎಲ್ಲ ಕಲಾವಿನ್ಯಾಸಗಳನ್ನು ನೋಡುತ್ತ ಖುಷಿ ಪಡುತ್ತೇವೆ.

ಅಲ್ಲಿ ಮೇಲಿಂದ ಮೇಲೆ ಬಿರುಗಾಳಿ ಜಾಸ್ತಿ. ಇಂತಹ ಸುಂದರ ವಿನ್ಯಾಸಗಳ ಮೇಲೆ ಧೂಳು ಬಿದ್ದು ಅವೆಲ್ಲ ಮಬ್ಬಾಗುವದು ಸಹಜ. ಅದರೆ ಅಲ್ಲಿಯ ನಗರ ಸಭೆಯವರು ಅವುಗಳ ಮೇಲೆ ಧೂಳು ಕೊಡದಂತೆ ಸಾಕಷ್ಟು ಎಚ್ಚರಿಕೆ ವಹಿಸುತ್ತಾರೆ. ನಮ್ಮಲ್ಲಿ ಪಾರ್ಕುಗಳಲ್ಲಿರುವ ಕಲಾಕೃತಿಗಳು, ಮೂರ್ತಿಗಳ ಸ್ಥಿತಿಗಳೊಂದಿಗೆ ಇವನ್ನು ಹೋಲಿಸಲಾಗದು. ನಮ್ಮಲ್ಲಿ ಉತ್ಕೃಷ್ಟ ಕಲೆಯಿದೆ ಎಚ್ಚರವಿಲ್ಲ. ಇಲ್ಲಿ ಕಲೆ ಅಮದಾಗಿದೆ. ಅದರೆ ಕಾಯ್ದಿಡುವ ಎಚ್ಚರವಿದೆ.

ಇತ್ತೀಚೆಗಷ್ಟೇ ನಾವಿರುವ ಕ್ಯಾಂಪಸ್ ಪ್ರದೇಶದಿಂದ ಹೊರಬೀಳುವ ರಸ್ತೆ ಗಳು ಮುಖ್ಯವಾಗಿ ಮಕ್ಕಾ, ಮದೀನಾ ರಸ್ತೆಗಳಿಗೆ ಕೂಡುತ್ತವೆ. ಒಂದೈದು ನಿಮಿಷದ ಕಾರು ಹಾದಿ. ಅಷ್ಟೇ. ವಿಮಾನ ನಿಲ್ದಾಣದ ಹೊರ ರಸ್ತೆಯ ಒಂದು ಸಣ್ಣ Bridge ಹತ್ತಿಳಿದರೆ ಅಲ್ಲಿ ಆಕರ್ಪಕವಾಗಿ ಕಾಣುವಂತೆ ಕೋಟೆಗಳನ್ನು ಕಟ್ಟಿದ್ದಾರೆ. ಇಲ್ಲಿಂದ ಮೂರು ರಸ್ತೆಗಳು ಮೂರು ದಿಕ್ಕಿಗೆ ಒಡೆಯುತ್ತವೆ. ಪ್ರತಿದಿಕ್ಕಿಗೂ ಒಂದೊಂದು ಕೋಟೆಯಾಕಾರದಂತೆ ಕಟ್ಟಿ ಹೊರಗಡೆ ಮಹಾದ್ವಾರದಂತೆ ರೂಪಿಸಿದ್ದಾರೆ. ಹೊರ ಪ್ರವಾಸಿಗರಿಗೆ ‘ನಗರದ ಒಳಹೋಗಲು ಸ್ವಾಗತ’ ಎನ್ನುವಂತಿದೆ. ನಮ್ಮ ಬಾಂಬೆಯ ಗೇಟ್‌ವೇ ಆಫ್ ಇಂಡಿಯಾದಂತೆಯೇ ಅಥವಾ ಪ್ಯಾರಿಸ್ಸಿನ ಕಾನ್‌ಕಾರ್ಡ್‌ದಂತೆಯೇ ಆಕರ್ಷಕ ಮಾಡಿದ್ದಾರೆ. ಅವುಗಳಿಗೆ ಒಂದೊಂದು ಕಥೆ ಇದೆ. ಅದರೆ ಇಲ್ಲಿಯ ಮಹಾದ್ವಾರಗಳಿಗೆ ಏನೂ ಕಥೆಯಿಲ್ಲ. ಬುಡ್‌ವಿನ್ ಜನರು ಕೊತ್ತಳಗಳು ಎಂದು ನೆನಪಿಸುತ್ತದೆ ಅಷ್ಟೇ. ಅದೆಷ್ಟು ಲೈಟು ಬಿಟ್ಟಿರುತ್ತಾರೆ ಅಂದರೆ ಬಹುಶಃ ಓದುಗರು ಊಹಿಸಲಿಕ್ಕೆ ಸಾಧ್ಯವೇ ಇಲ್ಲ. ಆದರೆ ಅಲ್ಲಿಯೂ ಈ ಅರಬಿ ಕುಟುಂಬಗಳು ತಿಂಡಿ ತೀರ್ಥಳಗಳೊಂದಿಗೆ ಲಗ್ಗೆ ಹಾಕಿರುತ್ತಾರೆ. ಹುಡುಗರು ಕಣ್ಣುಮುಚ್ಚಾಲೆಯ ಸ್ಥಳವಾಗಿ ಆರಿಸಿಕೊಂಡು ಖುಷಿಪಟ್ಟರೆ ಸಣ್ಣ ಸಣ್ಣ ಹುಡುಗಿಯರು ಬುರ್ಕಾ ಹಾಕಿಕೊಂಡು ಕುಂಟೆಬಿಲ್ಲೆಯಲ್ಲಿ ಓಡಾಡುತ್ತಿರುತ್ತವೆ. ಹೆಂಗಸರು ಡಬ್ಬಿ ಹರವುದರಲ್ಲಿ – ತಿನ್ನುವದರಲ್ಲಿ ಇದ್ದರೆ ಗಂಡ ಎನಿಸಿಕೊಂಡ ಒಂದೇ ಪ್ರಾಣಿ ಅತೀ ಧಿಮಾಕಿನಿಂದ ಹುಕ್ಕಾ ಎಳೆಯುತ್ತ ಒಗ್ಗಾಲಿಯಂತೆ ಬಿದ್ದಿರುತ್ತಾನೆ. ಟಿ.ವಿ.ಗಳು ಹಚ್ಚಿಕೊಂಡು ಅರಾಮವಾಗಿ ರಾತ್ರಿ 10-11ರ ವರೆಗೆ ಮಜಮಾಡಿ ಮನೆಗೆ ಹತ್ತುವರು. ನಾವು ಗಾರ್ಡನ್‌ಕ್ಕೆ ಹೋಗಿ ಖುಷಿಪಟ್ಟಂತೆ ಅವರು ಊರ ಹೊರಗಿನ ಮರುಭೂಮಿಯಲ್ಲಿ ಇಂತಹ ಏನಾದರೂ ಹೊಸ ಕಟ್ಟಡ ಅಥವಾ ಕಲಾವಿನ್ಯಾಸ ಗಳಾಗುತ್ತಿದ್ದರೆ ಬಂದು ಅಡ್ಡಾಡಿ ಹೋಗವರು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ದೂರಾ ದೇಶಕೆ ಹೋದಾ ಸಮಯದಿ
Next post ಭಯ ಪುರಾಣ

ಸಣ್ಣ ಕತೆ

  • ದೋಂಟಿ ತ್ಯಾಂಪಣ್ಣನ ಯಾತ್ರಾ ಪುರಾಣವು

    ಸುಮಾರು ಆರೂವರೆ ಅಡಿಗಿಂತಲೂ ಎತ್ತರಕ್ಕೆ ಗಳದ ಹಾಗೆ ಬೆಳೆದಿರುವ ದೋಂಟಿ ತ್ಯಾಂಪಣ್ಣನು ತನ್ನ ದಣಿ ಕಪಿಲಳ್ಳಿ ಕೃಷ್ಣ ಮದ್ಲೆಗಾರರ ಮನೆ ಜಗಲಿಯಲ್ಲಿ ಮೂಡು ಸಂಪೂರ್ಣ ಆಫಾಗಿ ಕೂತಿದ್ದನು.… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ನಿಂಗನ ನಂಬಿಗೆ

    ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…