ಬರುವುದಿಲ್ಲವಿನ್ನೆಂದರೆ ಬರುತಿದ್ದರು
ದೂರ ದೇಶದ ವ್ಯಾಪಾರಿಗಳು
ವಿಧ ವಿಧ ಸರಕನು ತುಂಬಿದ ಹೇರು
ಎಳೆಯಲು ಅರಬೀ ಕುದುರೆಗಳು

ಊರಿನ ಮುಂದೆಯೆ ಡೇರೆಯ ಹಾಕಿ
ಹೂಡುವರಿವರು ಬಿಡಾರ
ಗಲ್ಲಿ ಗಲ್ಲಿಗೂ ಬರುವರು ಹುಡುಕಿ
ಮಾತೇ ಮಾಯಾ ಬಜಾರ

ಉಂಗುರ ಮಣಿಸರ ಕಾಡಿಗೆ ಚೌರಿ
ಕನ್ನಡಿಯೊಳಗಿನ ಮುಖವು
ವರ್ಷದ ದುಃಖದ ಗಂಟನು ಮಾರಿ
ಕೊಂಡರೆ ಬಯಸಿದ ಸುಖವು

ಅವರೂ ಜಾಣರೆ! ತಮ್ಮ ಖರೀದಿಗೆ
ಹಾಕುವರಂತೆ ಗಿಲೀಟು
ಬಿಚ್ಚಲು ಹೀಗೆ ಮುಂದಿನ ಬೇಸಿಗೆ
ಥಳ ಥಳ ಹೊಳೆಯುವುದೊಗಟು

ಆದರು ನಾವು ಕಾದಿರುತಿದ್ದೆವು
ಇವರು ಬರುವ ಸಮಯ
ತುಂಬಿದಂತೆ ಮನದೊಳಗಿನ ನೋವು
ಪ್ರತಿಯೊಂದೂ ಮನೆಯ!

ಮಳೆ ಮುಗಿಯಿತು ಬೇಸಿಗೆಯೂ ಕಳೆಯಿತು
ಆದರು ಯಾರದು ಸುಳಿವಿಲ್ಲ
ಒಳಗಿನ ನೋವು ಒಳಗೇ ಉಳಿಯಿತು
ಅಳಿವುದೆಂದರೆ ಅಳಿದಿಲ್ಲ
*****

ತಿರುಮಲೇಶ್ ಕೆ ವಿ
Latest posts by ತಿರುಮಲೇಶ್ ಕೆ ವಿ (see all)