ಅವಳ ಕಣ್ಣುಗಳು

ಅವಳ ಕಣ್ಣುಗಳು

ಮೂಲ: ವಿ ಎಸ್ ಖಾಂಡೇಕರ

ಹುಡಿಗೆಯು ಮುಖವನ್ನು ಮೇಲಕ್ಕೆತ್ತಿ ನೋಡಿದಳು. ಕೈಯ್ಯನ್ನು ತೆಗೆದ ಕೂಡಲೆ ಹೊರಮುಚ್ಚಕದ ಗಿಡವು ಮತ್ತೆ ಮೊದಲಿನಂತೆ ಹಚ್ಚನೆ ನಿಲ್ಲುವದಿಲ್ಲವೆ? ನೋಡಲಿಕ್ಕೆ ಬಂದವರೆಲ್ಲರೂ ಚಹ ತೆಗೆದುಕೊಳ್ಳಲಿಕ್ಕೆ ಹತ್ತಿದರು. ಆಗ ಅವಳಿಗೆ ಎಷ್ಟೋ ಬಿಡುಗಡೆ ಎನಿಸಿತು. ಕೋರ್ಟಿ ನಲ್ಲಿ “ಉಲಟ ತಪಾಸಣಿ” ಮುಗಿದನಂತರ ಮನುಷ್ಯನಿಗೆ ಹೀಗೇ ಅನಿಸುತ್ತಿರಬಹುದೆಂಬ ಮಸುಕು ವಿಚಾರವೂ ಅವಳ ಮನಸ್ಸಿನಲ್ಲಿ ಬಂದುಹೋಯಿತು. ಇಡೀ ಆಯುಷ್ಯದ ಪ್ರವಾಸವನ್ನು ಯಾವ ವ್ಯಕ್ತಿಯ ಜೊತೆಯಲ್ಲಿ ಒಂದುವೇಳೆ ಮಾಡಬೇಕಾಗಬಹುದೋ ಅವನನ್ನು ಒಮ್ಮೆ ಯಾದರೂ ಚೆನ್ನಾಗಿ ನೋಡಬೇಕೆಂಬ ಇಚ್ಛೆಯು ಅವಳಲ್ಲಿ ಸ್ವಾಭಾವಿಕ ವಾಗಿ ಉತ್ಪನ್ನ ವಾಯಿತು. ಸಂಸಾರಸಾಗರದಲ್ಲಿ ತೇಲಿಹೋಗುತ್ತಿರುವಾಗ ಉಂಟಾಗಬಹುದಾದ ಕಷ್ಟ-ನಿಷ್ಟುರಗಳನ್ನು ಕೇವಲ ಒಂದು ಸ್ಮಿತಮಾತ್ರ ದಿಂದ ಕಳೆಯುವ ಮಾಯ ಆತನಲ್ಲಿರಬಹುದೇ?

ತನ್ನ ಕಡೆಗೆ ಯಾರೂ ನೋಡುತ್ತಿರಲಿಕ್ಕಿಲ್ಲೆಂಬ ಮನವರಿಕೆಯಿಂದಲೇ ಅವಳು ಮುಖವನ್ನು ಮೇಲಕ್ಕೆತ್ತುವ ಧೈರ್ಯ ಮಾಡಿದ್ದಳು. ಆದರೆ ಅವಳದೂ ಅನಂತನ ನೋಟ ಕೂಡಿದೊಡನೆಯೇ ಅವಳಿಗೆ ನಾಚಿಕೆ ಯಿಂದ ಚೂರು ಚೂರಾದಂತಾಯಿತು. ಉಳಿದ ಜನರೆಲ್ಲರೂ ಫಲಾಹಾರಗಳಲ್ಲಿ ಮಗ್ನರಾಗಿದ್ದರು. ಆದರೆ ಅನಂತನಿಗೆ ಮಾತ್ರ ತಾನು ಬಸಿಯಲ್ಲಿ ಸುರುವಿಕೊಂಡ ಚಹದ ಅರಿವು ಸಹ ಇರಲಿಲ್ಲ. ಆತನ ಮನಸ್ಸು ಯಾವದೋ ಒಂದು ಯಕ್ಷಸೃಷ್ಟಿಯಲ್ಲಿ ಭ್ರಮಣ ಮಾಡುತ್ತಿರಬೇಕು ಆ ಯಕ್ಷಸೃಷ್ಟಿಯಲ್ಲಿ ಭ್ರಮಣಮಾಡುತ್ತಿರುವಾಗಲೇ ಆಶೆಯ ಸುಂದರವಾದ ಕಂಣುಗಳು ಅವನ ದೃಷ್ಟಿಗೆ ಬಿದ್ದವು. ಇಷ್ಟೊತ್ತಿನವರೆಗೆ ನಡೆದ ಎಲ್ಲ ಕಾರ್ಯಕ್ರಮದ ವಿಷಯದಲ್ಲಿ ಅವನಿಗೆ ಮನಸ್ವಿಯಾಗಿ ಸಿಟ್ಟು ಬಂದಿತು. ಹೆಸರು ಕೇಳುವದು, ಓದಿಸಿಕೊಳ್ಳುವದು, ಹಾಡಿಸಿ ನೋಡುವದು ಇತ್ಯಾದಿಗಳಿಗಿಂತ “ನನ್ನ ಹುಡಿಗೆಯ ಕಂಣುಗಳನ್ನು ನೋಡಿರಿ ಎಂದು ಇವಳ ತಂದೆ ತನಗೆ ಹೇಳಬಾರದಾಗಿತ್ತೇ?

ಸಣ್ಣವನಿರುವಾಗಿನಿಂದಲೇ ಅನಂತನಿಗೆ ಎಲ್ಲ ತರದ ಸೌಂದರ್ಯದ ಲೋಭ, ಐದುವರ್ಷದವನಿರುವಾಗಲೇ, ತನ್ನ ಕೊಂಕಣದಲ್ಲಿಯ ಮುತ್ತಜ್ಜನ ಮುನೆಗೆ ಹೋದಾಗ ಸಾವಿರಾರು ತರದ ಸಿಂಪುಗಳನ್ನು ಕೂಡು ಹಾಕಿದ್ದ. ಆ ಸುಂದರವಾದ ಸಿಂಪುಗಳನ್ನು ನೋಡಿದರೆ ಯಾವ ಹುಡಿಗೆ ಗಾದರೂ ತನ್ನ ಗೊಂಬೆಯ ಲಗ್ನ ಸಮಯದಲ್ಲಿ ಅವುಗಳನ್ನು ತಾಟುಗಳಾಗಿ ಉಪಯೋಗಿಸಬೇಕೆಂಬ ಮೋಹ ಉಂಟಾಗದೆ ಇರುವದು ಶಕ್ಯವಿರಲಿಲ್ಲ! ಆತನ ಪ್ರತಿಯೊಂದು ಪುಸ್ತಕದಲ್ಲಿಯೂ ನವಿಲುಗರಿ ಇದ್ದೆ ಇರುತ್ತಿತ್ತು. ಅವನ ಮನೆಯಿಂದ ಎಷ್ಟೋ ದೂರದಲ್ಲಿದ್ದ ಪಾರಿಜಾತದ ಹೂವುಗಳನ್ನು ಚಿಕ್ಕಂದಿನಿಂದ ಪ್ರತಿನಿತ್ಯವೂ ತರುತ್ತಿದ್ದ. ಆತನ ಅಜ್ಜಿಗೆ ತನ್ನ ಮೊಮ್ಮಗ ದೊಡ್ಡ ದೇವಭಕ್ತನಾಗುವನೆಂದು ಅನಿಸುತ್ತಿತ್ತು. ಆದರೆ ನಸುಗೆಂಪು ದೇಟಿನ ಆ ಶುಭ್ರವಾದ ಸುಕುಮಾರ ಹೂವುಗಳ ಥಳಿಯನ್ನು ನೋಡಿದ ಕೂಡಲೆ ಆಕಾಶದಲ್ಲಿಯ ಚಿಕ್ಕೆಗಳೇ ಆರಿಸಿಕೊಂಡು ಹೋಗಲಿಕ್ಕೆ ಸಿಕ್ಕಂತೆ ಅನಂತನಿಗೆ ಆಗುವ ಆನಂದದ ಕಲ್ಪನೆಯೇ ಆತನ ಮುತ್ತಜ್ಜಿಗೆ ಇರಲಿಲ್ಲ. ಕಾಲೇಜಿನಲ್ಲಿರುವಾಗ ಒಂದು ಸ್ವಲ್ಪ ಬೆಲೆಯ ಸಾಧಾರಣವಾಗಿ ಕಟ್ಟಲ್ಪಟ್ಟ ಪುಸ್ತಕವನ್ನು ಬಿಟ್ಟು, ಹೆಚ್ಚಿನ ಬೆಲೆಯ ಮುದ್ದಾಗಿ ಕಟ್ಟಲ್ಪಟ್ಟ ಪುಸ್ತಕವನ್ನು ಕೊಳ್ಳುವದರ ಸಲುವಾಗಿ ಅವನು ಒಮ್ಮೆ ಉಪವಾಸ ಮಾಡಿದ್ದ. ಅ ದಿವಸವೇ ತನ್ನ ಏಕಾದಶಿ ಬಂದಿದೆ ಎಂದು ಹೇಳಿದ್ದಕ್ಕೆ ಎಲ್ಲರೂ ಅವನನ್ನು “ಪುಂಡಲೀಕ ವರದ ಹರಿ ವಿಠಲ” ಎಂದು ಸ್ವಾಗತಿಸುತ್ತಿದ್ದರು.

ಈ ಮೂಲಕವಾಗಿಯೇ ಆಶೆಯ ಕಣ್ಣುಗಳನ್ನು ನೋಡಿದಕೂಡಲೆ ತಾನು ತಿರುಗಾಡುತ್ತಿರುವ ಯಕ್ಷಸೃಷ್ಟಿಯಲ್ಲಿಯ ಅಧಿದೇವತೆಯಾಗಿದ್ದ ಅಪ್ಸರೆಯನ್ನು ಕಂಡಂತೆ ಆತನಿಗೆ ಅನಿಸಿತು. ಅವಳ ಒಂದು ಕಣ್ಣಲ್ಲಿ ಆಕಾಶದಲ್ಲಿಯ ನೀಲವರ್ಣವು ತಾರೆಗಳ ತೇಜವನ್ನು ತಕ್ಕೊಂಡು ನರ್ತಿಸುವಂತೆ ತೋರುತ್ತಿತ್ತಾದರೆ ಎರಡನೆಯ ಕಣ್ಣಲ್ಲಿ ಸಾಗರದ ನೀಲವರ್ಣವು ರತ್ನಗಳ ತೇಜಸ್ಸಿನಿಂದ ಹೊಳೆಯುತ್ತಿತ್ತು. ಆ ರಮಣೀಯ ಸೌಂದರ್‍ಯದ ಆನಂದವು ಅವನ ಮುಖಮುದ್ರೆಯ ಮೇಲೆ ಮೂಡದೆ ಇರಲಿಲ್ಲ.

ಆಶೆಯು ಎದ್ದು ಒಳಕ್ಕೆ ಹೋದಳು. ಆಕೆಯ ತಂದೆ ಪ್ರಶ್ನಾರ್‍ಥಕದೃಷ್ಟಿಯಿಂದ ಅನಂತನ ಕಡೆಗೆ ನೋಡಿದ. ಅನಂತನ ಮುಖ ಮುದ್ರೆಯನ್ನು ನೋಡಿದರೆ ಅವನೇನು ನಕಾರಾರ್ಥವಾದ ಉತ್ತರವನ್ನು ಕೊಡುವಂತೆ ತೋರಲಿಲ್ಲ. ಆದರೂ “ವಿಚಾರಮಾಡಿ ತಿಳಿಸುವೆ” ಎಂಬ ಶಬ್ದಗಳು ಅವನ ಬಾಯಿಂದ ಹೊರಬಿದ್ದವು. ಪಾಪ! ವರಾನ್ವೇಷಿಯಾದ ತಂದೆ! ಆಯುಷ್ಯದ ವರ್ತಮಾನಪತ್ರದಲ್ಲಿ ಇಂಥ ಮಜಕೂರನ್ನು ಓದಿ ಓದಿ ಇಂಥ ಉತ್ತರವೇನೂ ಅವನಿಗೆ ಹೊಸದಾಗಿರಲಿಲ್ಲ!

ಆ ದಿವಸ ರಾತ್ರಿ ಅನಂತನಿಗೆ ಮಾತ್ರ ಏನೂ ಮಾಡಿದರೂ ನಿದ್ರೆ ಬರಲೊಲ್ಲದು. ಮಳೆಗಾಲ ಬರುವ ಸಮಯದಲ್ಲಿ ದೊಡ್ಡ ದೊಡ್ಡ ತೋಪುಗಳಲ್ಲಿ ಗೋಡಂಬೆಯ ಗೊಂಚಲಗಳು ಹೊಳೆಯುವಂತೆ, ಆತನ ಬೇರೆ ಬೇರೆ ವಿಚಾರಗಳಲ್ಲಿಯೂ ಆಶೆಯ ಕಣ್ಣುಗಳು ಒಂದೇ ಸವನೆ, ನಕ್ಕು ನಲಿದು ನರ್ತಿಸುತ್ತಿದ್ದವು. ಒಮ್ಮೆಲೆ, ಅವರಿಗೆ ಲಗ್ನ ಮಾಡಿಕೊಳ್ಳುವೆನೆಂದು ತಾನು ಯಾಕೆ ಹೇಳಿಬರಬಾರದಾಗಿತ್ತು ಎಂದು ಅವನಿಗೆ ಅನಿಸಿತು. ಸುಂದರವಾದ ಕಣ್ಣುಗಳನ್ನು ಕೇವಲ ನೋಡಲಿಕ್ಕೆ ಏನು ಬೇಕಾದ್ದನ್ನು ಮಾಡಬಹುದಾದ ತಾನು, ಆ ಕಣ್ಣುಗಳು ತನ್ನವೇ ಆಗಲಿಕ್ಕೆ ಬಂದ ಸುಸಂಧಿಯನ್ನು –

ಕಬ್ಬಿಣವನ್ನು ಮುಟ್ಟಿಸಿದ ಕೂಡಲೇ ಚಿನ್ನವಾಗುವಂಥ ಕಲ್ಲು ಜಗತ್ತಿನಲ್ಲಿದ್ದರೆ ಚಿನ್ನವನ್ನು ಮುಟ್ಟಿಸಿದರೆ ಕಬ್ಬಿಣವಾಗಬಹುದಾದಂಥ ಕಲ್ಲಾದರೂ ಜಗತ್ತಿನಲ್ಲಿ ಇದ್ದೇ ಇರಬೇಕಲ್ಲವೇ? ಎಲ್ಲಿಯೂ ಇರದಿದ್ದರೆ ಅನಂತನ ಮನಸ್ಸಿನಲ್ಲಿಯಾದರೂ ಇತ್ತು. ಸುಂದರವಾದ ವಸ್ತುಗಳ ವಿಷಯದಲ್ಲಿ ಅವನಲ್ಲಿದ್ದ ವಿಲಕ್ಷಣ ಪ್ರೀತಿಯಂತೆ, ಆ ಸೌಂದರ್ಯ ನಾಶದ ವಿಚಾರದಿಂದಲೂ ಅವನು ವಿವ್ಹಲನಾಗುತ್ತಿದ್ದ, ಚಿಕ್ಕಂದಿನಲ್ಲಿ ತಾನು ತನ್ನ ಮುತ್ತಜ್ಜಿಯ ಸಲುವಾಗಿ ತಂದ ಪಾರಿಜಾತದ ಹೂವುಗಳನ್ನು ವಾಸನೆಯ ಸಲುವಾಗಿ ಕೈಯಲ್ಲಿ ತೆಗೆದುಕೊಂಡು, ಮುಂದೆ ಮಾತಿನ ಭರದಲ್ಲಿ ಹಾಗೆಯೇ ಅವುಗಳನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದು ಮರೆತು ಬಿಟ್ಟು ಮುಂದೆ ಒಮ್ಮೆಲೆ ನೆನಪಾಗಿ ಮುಷ್ಟಿ ಬಿಚ್ಚಿ ನೋಡಿದರೆ ಅಲ್ಲೇನು ಇರಬೇಕು? ಹೂವುಗಳು ಬಾಡಿ ಕಪ್ಪಿಟ್ಟು ಹೋಗಿದ್ದವು. ಅದನ್ನು ಕಂಡು ತನ್ನ ಕಣ್ಣಲ್ಲಿ ತುಂಬಿದ ನೀರು ಇನ್ನೂವರೆಗೆ ಅವನಿಗೆ ನೆನಪಾಗುತ್ತಿತ್ತು.

ಆ ಪಾರಿಜಾತದ ಹೂವುಗಳಂತೆಯೇ ಅವನು ಇನ್ನೊಂದು ಸಂಗತಿಯನ್ನು ಮರೆತಿರಲಿಲ್ಲ. ಆತನ ಲಂಗೋಟಿಯ ಗೆಳೆಯನೊಬ್ಬ ಒಂದು ದೊಡ ಮೋಜು ತೋರಿಸುವೆನೆಂದು ಆತನನ್ನು ತನ್ನ ಮನೆಗೆ ಕರೆದು ಕೊಂಡು ಹೋದ. ಒಳಗಿನಿಂದ ೨೫-೩ಂ ಕಡ್ಡಿಯ ಪೆಟ್ಟಿಗೆಗಳನ್ನು ತೆಗೆದು ಕೊಂಡು ಬಂದ. ಅವನು ಬಹುತರವಾಗಿ ಒಂದು ಬಹಳ ಉದ್ದವಾದ ಮಾಲುಗಾಡಿಯನ್ನು ಮಾಡಿ ತೋರಿಸುವನೆಂದು ಅನಂತ ತಿಳಿದುಕೊಂಡ. ಆದರೆ, ಅವನ ಮಿತ್ರನಿಗೆ ಮಾಲುಗಾಡಿಯ ವಿಸ್ತಾರವನ್ನು ತೋರಿಸುವದಕ್ಕಿಂತಲೂ ಪೆಟ್ಟಿಗೆಯೊಳಗಿನ ಮಾಲಿನ ಪ್ರದರ್ಶನ ಮಾಡುವದಕ್ಕಾಗಿ ಹೆಚ್ಚು ಉತ್ಸುಕತೆಯಾಗಿತ್ತು. ಅವನು ಒಂದೊಂದೇ ಪೆಟ್ಟಿಗೆಯನ್ನು ತೆಗೆಯಲಾರಂಭಿಸಿದ ಮಾತ್ರ! ಅನಂತನ ಮೈ ಜುಮ್ಮೆಂದಿತು. ಮೊದಲನೆಯ ಪೆಟ್ಟಿಗೆಯಲ್ಲಿ ಒಂದು ಕರ್ರಗಿನ ಸುಂದರವಾದ ಪಾತರಗಿತ್ತಿ ಅನಂತ ಅದಕ್ಕೆ ಗಣಪತಿ ಎಂದು ಹೆಸರು ಕೊಟ್ಟಿದ್ದು – ದಾರದಿಂದ ಕಟ್ಟಲ್ಪಟ್ಟಿದ್ದರಿಂದ ಸೂಮ್ಮನೆ ಬಿದ್ದು ಕೊಂಡಿತ್ತು. ಎರಡನೇ ಪೆಟ್ಟಿಗೆ ಯಲ್ಲಿ ಒಂದು ಹಳದೀ ಬಣ್ಣದ ಪಾತರಗಿತ್ತಿ – ಅದರ ಮೈಮೇಲಿನ ಸಣ್ಣ ಸಣ್ಣ ಚಿಕ್ಕೆಗಳು ಎಷ್ಟೊಂದು ಮೋಹಕವಾಗಿದ್ದವು-ಅದಾದರೂ ಹೆಸರಿಗೆ ಮಾತ್ರ ಜೀವಂತವಾಗಿದ್ದಿತು. ಆ ಎಲ್ಲ ಪೆಟ್ಟಿಗೆಗಳ ಪರೀಕ್ಷಣ ಮುಗಿಯುವದರಲ್ಲಿಯೇ ಅನಂತನು ಒಂದು ಪಾತರಗಿತ್ತಿಯನ್ನು ಬಂಧ ಮುಕ್ತವನ್ನಾಗಿ ಮಾಡಿಬಿಟ್ಟ. ಆ ಮೂಲಕ ಇಬ್ಬರು ಮಿತ್ರರಲ್ಲಿ ಜಗಳವಾಗಿ ಮುಂದೆ ಆರು ತಿಂಗಳ ವರೆಗೆ ಒಂದೇ ಬೀದಿಯಲ್ಲಿ ಇಬ್ಬರೂ ಹಾಯಿದುಹೋದರೂ ಒಬ್ಬರನ್ನೊಬ್ಬರು ನೋಡುತ್ತಿರಲಿಲ್ಲ.

ಚಿಕ್ಕಂದಿನಲ್ಲಿಯೇ ಬಿದ್ದ ದೈವದ ಆಘಾತದ ಮೂಲಕ ಅನಂತನ ಅಳ್ಮನದ ಸ್ವಭಾವವು ಪರಾಕಾಷ್ಟೆಗೆ ಹೋಗಿ ಮುಟ್ಟಿತ್ತು. ಆತನಿಗೆ ತಂದೆಯ ಮೇಲೆ ಅತ್ಯಂತ ಪ್ರೇಮ ಆದರೆ ಅವರು ಬಂಡಿಯಿಂದ ಬಿದ ನಿಮಿತ್ತದಿಂದ ಹಾಸಿಗೆ ಹಿಡಿದವರು ತಿರುಗಿ ಏಳಲಿಲ್ಲ! ಆತನ ಪ್ರೀತಿಯ ತಂಗಿ ಚಳಿಗಾಲದಲ್ಲಿ ಒಂದು ದಿನ ಒಲೆಯ ಮುಂದೆ ಕೂತಾಗ ಸೀರೆಗೆ ಉರಿ ತಗಲಿ ಹತ್ತಿದ ಬೆಂಕಿಯು ಅವಳಿಗೆ ಚಿತೆಯಾಗಿಯೇ ಪರಿಣಮಿಸಿತು. ಅನಂತನಿಗೆ ಅವಳ ಭಾವಚಿತ್ರ (ಫೋಟೋ)ದ ಕಡೆಗಾದರೂ ನೋಡುವದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. ಭಾವಚಿತ್ರ (ಫೋಟೋ) ವನ್ನು ನೋಡಿದ ಕೂಡಲೆ ಅವಳು ಸುಟ್ಟುಕೊಂಡಾಗಿನ ನರಳುವಿಕೆ ಅವನ ಕಿವಿಯಲ್ಲಿ ದುಮುಕಿದಂತಾಗುತ್ತಿತ್ತು.

ಜೀವನದಲ್ಲಿಯ ಕೆಡಕೇ ಯಾವಾಗಲೂ ಅವನಿಗೆ ಎದ್ದು ತೋರುವದು. ಈ ಆಳ್ಮನದ ಪರಿಣಾಮವು ಆತನ ಆಯುಷ್ಯದ ಮೇಲೆ ಆಗದೆ ಇರಲಿಲ್ಲ. ಆತನ ಕಾಲೇಜಿಗೆ ಖರ್ಚು ಪೂರೈಸುವ ಸೋದರಮಾವ, ಅನಂತ ಡಾಕ್ಟರನಾಗಲೀ ಇಂಜಿನಿಯರನಾಗಲೀ, ಕಡೆಗೆ ಒಬ್ಬ ವಕೀಲ ನಾಗಲೀ, ಆಗಬೇಕೆಂದು ಬಯಸುತ್ತಿದ್ದ. ಆದರೆ, ಡಾಕ್ಟರನಾದರೆ ಅಜ್ಞಾ ನದ ಮೂಲಕ ತನ್ನ ಕೈಯಿಂದ ಯಾವನಾದರೊಬ್ಬನ ಪ್ರಾಣಘಾತ ವಾಗಬಹುದು, ಇಂಜಿನಿಯರನಾದರೆ ಕೆಲಸ ಮಾಡುವಾಗ ಹೆದರಿಕೆಯ ಸ್ಥಳಗಳಲ್ಲಿ ಕೂಲಿಕಾರರನ್ನು ಏರಿಸುವದೂ ಇಳಿಸುವದೂ ಮಾಡಬೇಕಾಗಬಹುದು. ವಕೀಲನಾದರೆ, ಖೂನಿಯನ್ನು ಮಾಡಿದ್ದರೂ ಮಾಡಿಲ್ಲವೆಂದು ಸುಳ್ಳು ಪ್ರತಿಪಾದನೆ ಮಾಡಬೇಕಾಗಬಹುದೆಂಬ ಕಲ್ಪನೆಗಳಿಂದ ವ್ಯಾಕುಲನಾಗಿ ಆ ಎಲ್ಲ ಮಾರ್ಗಗಳನ್ನು ಬಿಟ್ಟು ಕೊಟ್ಟು, ಎಂ. ಏ. ಪರೀಕ್ಷೆಯಾದ ಕೂಡಲೇ, ಶಿಕ್ಷಕನಾಗಿಬಿಟ್ಟ. ಬುದ್ದ ನಂತೆ ಅವನದೂ ಇದೊಂದು ಪ್ರಕಾರದ ಸನ್ಯಾಸವೇ ಆಗಿತ್ತು.

ಈ ತೆರದ ಅಳ್ಮನವು (Sensitiveness) ಒಳ್ಳೆಯದಲ್ಲವೆಂದೂ ಅವನಿಗೆ ನಡುನಡುವೆ ಅನಿಸುತ್ತಿತ್ತು. ಆದರೆ ಏನು ಮಾಡಿದರೂ ಅವನಿಗೆ ಅದನ್ನು ಹೋಗಲಾಡಿಸುವ ಉಪಾಯ ತೋಚಲಿಲ್ಲ. ಬುದ್ಧಿವಾದವೆಂದರೆ ಸ್ಪಷ್ಟವಾದ ಮಾರ್ಗವನ್ನು ತೋರಿಸುವ ಮಿಂಚುದೀಪವೇನೋ ನಿಜ! ಆದರೆ ಕುರುಡ ಭಾವನೆಗಳಿಗೆ ಅದರಿಂದೇನು ಪ್ರಯೋಜನ?

ವಸ್ತುವು ಎಷ್ಟು ಸಣ್ಣದಾಗಿದ್ದರೂ ಪೃಥ್ವಿಯ ಆಕರ್ಷಣವನ್ನು ತಪ್ಪಿಸಲಾರದು. ಆಶೆಯ ಸುಂದರವಾದ ಕಂಣುಗಳ ಭವಿತವ್ಯದ ಭೀತಿಯಿಂದ ವಿಚಾರ ಮಾಡುವ ಆತನ ಭಾವನಾಮಯ ಹೃದಯವಾದರೂ ಕಟ್ಟ ಕಡೆಗೆ ಕಟಾಕ್ಷಜಾಲದಲ್ಲಿ ಸಿಲುಕಿಯೇ ಬಿಟ್ಟಿತು!
* * *

ಎಷ್ಟೋ ಸಾರೆ ತನ್ನ ಕಣ್ಣುಗಳ ಕಡೆಗೆ ನೋಡುತ್ತಿರುವಾಗ ಅನಂತ ಅವಳ ಕೈಗೆ ಸಿಕ್ಕಿದ್ದ. ಆಗ ಅವಳು ನಸುನಗುತ್ತ ಕೇಳುತ್ತಿದ್ದಳು.

“ಇತ್ತೀಚೆಗೆ ಹುಚ್ಚು ಹಿಡಿದದೆ ಕಾಣುತ್ತದೆ?”

“ಇಲ್ಲವೆಂದು ಯಾರು ಹೇಳುವರು?”

“ಯಾತರದು ಅದು ಹುಚ್ಚು? ನನ್ನದೆ?”

“ನಿನ್ನದಲ್ಲ”

“ಹೀಗೇನು? ಎರಡನೇಯವಳ ಕೂಡ ನನ್ನನ್ನು ಹೋಲಿಸಿ ನೋಡುವ ಸಲುವಾಗಿಯೇ ಇಷ್ಟು ದಿಟ್ಟಿಸಿ ನೋಡುವಿರಿ ಅಲ್ಲವೆ? ಹೌದಲ್ಲಽ?”

“ಹಾಗಲ್ಲಽ!”

“ಹಾಗಾದರ ಹ್ಯಾಗರೀ”

ಆಶೆಯ ಈ ತಾಲಬದ್ದ ಪ್ರಶ್ನೆಯಾದ ನಂತರ ಇಬ್ಬರೂ ಮನ ಸೋಕ್ತವಾಗಿ ನಗುತ್ತಿದ್ದರು. ಅನಂತ ಹೇಳುತ್ತಿದ್ದ.

“ನನಗೆ ಹುಚ್ಚು ಹಿಡಿದದ್ದು ನಿನ್ನ ಕಣ್ಣುಗಳದು!”

“ಅಂಥಾದ್ದೇನು ತುಂಬಿಕೊಂಡಿದೆ ಅದರಲ್ಲಿ? ಬಹಳವಾದರೆ ಒಂದಿಷ್ಟು ನೀರು ಇದ್ದಿರಬಹುದು. ಅಷ್ಟೆ!?”

“ಬರೆ, ನೀರು ತುಂಬಿದ್ದಾದರೆ ಮನುಷ್ಯನಿಗೆ ಅಷ್ಟೇನೂ ಹುಚ್ಚು ಹಿಡಿಯುತ್ತಿರಲಿಲ್ಲ!”

ಆಶೆಗೆ ಇನ್ನು ಮುಂದೆ ನಗುತಡೆಯಲಿಕ್ಕಾಗುತ್ತಿದ್ದಿಲ್ಲ. ಅನಂತನು ಗಂಭೀರವಾಗಿ ಹೇಳುತ್ತಿದ್ದ “ಆಶೆ, ನೀನೊಂದು ಹೂವು, ನಿನ್ನ ಈ ಕಣ್ಣುಗಳೆಂದರೆ ಆ ಹೂವಿನ ಸುವಾಸ.”

ಮಧ್ಯರಾತ್ರಿಯ ಸಮಯದಲ್ಲಿ ಆಶೆಗೆ ನಿದ್ರೆಹತ್ತಿದಾಗ, ಅವಳ ಮುಚ್ಚಿಕೊಂಡ ಕಂಣುಗಳನ್ನು ನೋಡಿ ಅನಂತನ ಮನಸ್ಸಿನಲ್ಲಿ ಇಲ್ಲದ ವಿಚಾರಗಳು ಬರುತ್ತಿದ್ದವು. ಸಂಧ್ಯಾ ಸಮಯದಲ್ಲಿ ಮುಚ್ಚಿಕೊಂಡ ಹೂವು ಗಳೆಲ್ಲವೂ ಪ್ರಭಾತದಲ್ಲಿ ಮತ್ತೆ ಅರಳುವವಷ್ಟೇ! ನಿಸರ್ಗದಲ್ಲಿ ಈ ನಿಯಮಕ್ಕೆ ಏನಾದರೂ ಅಪವಾದಗಳಿರಬಹುದೋ? ಆತನ ಇಂಥ ವಿಚಿತ್ರ. ವಿಕೃತ ವಿಚಾರಗಳು ಒಂದು ದಿನ ಅವನು ಶಾಲೆಯಲ್ಲಿ ಪಾಠ ಹೇಳುತ್ತಿರುವಾಗಲೇ ತಲೆದೋರಿದವು. ಇಂಗ್ರೇಜಿಯಲ್ಲಿ ನಿಬಂಧದ ಸಲುವಾಗಿ ಅವನು ಹುಡುಗರಿಗೆ ಬುದ್ಧನ ಚರಿತ್ರೆ ಹೇಳುತ್ತಿದ್ದ. ರೋಗಿಯನ್ನೂ ಹೆಣವನ್ನೂ ನೋಡಿ ಬುದ್ಧನಿಗೆ ಬಂದ ವೈರಾಗ್ಯ- ಮಾಸ್ತರರು ಒಮ್ಮೆಲೆ ಸ್ತಬ್ಬರಾಗಿ ಶೂನ್ಯದೃಷ್ಟಿಯಿಂದ ಏನು ನೋಡುತ್ತಿರಬಹುದೆಂಬದು ವರ್ಗದಲ್ಲಿಯ ಹುಡುಗರಿಗೆ ಎಂದೂ ತಿಳಿಯಲಿಲ್ಲ. ಆದರೆ ಬುದ್ಧನ ವೈರಾಗ್ಯದ ಜೊತೆಯಲ್ಲಿ ಅನಂತನಿಗೆ ಆಶೆಯ ಕಣ್ಣುಗಳ ನೆನಪಾಗಿತ್ತು!

ಆ ದಿವಸ ಆತನಿಗೆ ಮನೆಗೆ ಬರಲಿಕ್ಕೆ ಕೂಡ ಸ್ವಲ್ಪ ಭಯವೆನಿಸಹತ್ತಿತು! ಆಶೆಯ ಮೋಹಕವಾದ ಕಣ್ಣುಗಳು, ಮತ್ತು ಬುದ್ಧನ ವೈರಾಗ್ಯದ ಕಥೆ! ಶಾಲೆ ಬಿಟ್ಟ ಕೂಡಲೆ ಮನೆಗೆ ಬರದೆಯೇ ತಿರುಗಾಡಲಿಕ್ಕೆ ಹೋದ. ತಿರುಗಿ ಬರುವಾಗ ದಾರಿಯಮೇಲಿನ ದೇವಾಲಯವನ್ನು ಸಹಜವಾಗಿಯೇ ಸೇರಿದ! ದೇವಾಲಯದ ಸಭಾಮಂಟಪದ ಮುಂದಿನ ಕಟ್ಟೆಯಮೇಲೆ ನಲಿಯುವ ಪಾರಿವಾಳಗಳನ್ನು ನೋಡಿ ಅವನು ಯಾವಾಗಲೂ ಆನಂದಬಡುತ್ತಿದ್ದ. ತರತರದ ಬಣ್ಣಗಳ “ಕುಹು ಕುಹು” ಸಪ್ಪಳ ಮಾಡುತ್ತಿದ್ದ ಆ ಪಾರಿವಾಳಗಳನ್ನು ಅವನು ನೋಡುತ್ತಿರುವಾಗಲೇ ಒಬ್ಬ ಹುಡುಗ ಮೆಲ್ಲನೆ ಬಂದು ಒಂದು ಪಾರಿವಾಳವನ್ನು ಹಿಡಿದುಕೊಂಡು ಕೆಳಗೆ ಇಳಿದು ಬಂದ. ಅನಂತನು ತಿರುಗಿ ನೋಡಿದ. ಆಚೆಯ ಕಡೆಗೆ ನಿಂತಿರುವ ಮುದುಕಿಯೊಬ್ಬಳು ಅದನ್ನು ಗಟ್ಟಿಯಾಗಿ ಹಿಡಿದುಕೊಂಡಳು. ಆ ಪಾರಿವಾಳದ ಮಂದವಾದ ಆಕ್ರಂದನವೂ ರೆಕ್ಕೆಗಳ ಫಡಫಡಾಟವೂ ಅವನಿಂದ ಕೇಳಲಾಗದಾಯಿತು. ಅವನು ಸ್ವಲ್ಪ ಸಿಟ್ಟಿನಿಂದಲೇ ಅಂದ-

“ಬಿಡಬಾರದೇ, ತಾಯಿ, ಆ ಬಡ ಹಕ್ಕಿನ್ನಽ”

ದುರದುರನೆ ಆತನನ್ನು ನೋಡುತ್ತ ಮುದುಕಿ ಅಂದಳು “ಹಾಂಗಾರ ನನ್ನ ಹುಡುಗನ್ನೇನ ನೀ, ಬದಕಸತೀದ್ಯಾ?” ಆ ಮುದುಕಿಯ ಒಬ್ಬನೇ ಮಗ, ಗಳಿಸಿ ಹೊಟ್ಟೆಗೆ ಹಾಕುವವ, ಸಂಧಿವಾತದಿಂದ ಹಾಸಿಗೆ ಹಿಡಿದ್ದರಿಂದ ಈ ಪಾರಿವಾಳವನ್ನು ಮುದುಕಿ ಒಯ್ಯುತ್ತಿದ್ದಳೆಂದು ಅನಂತನಿಗೆ ತಿಳಿದುಬಂದಿತು. ಆ ಪಾರಿವಾಳದ ಧಡಪಡಿಕೆಯು, ತನ್ನ ಹೃದಯದ ಪ್ರತಿಧ್ವನಿಯೇ ಎಂದು ಅವನಿಗೆ ಕ್ಷಣಮಾತ್ರ ಭಾಸವಾಯಿತು. ಆದರೆ ಮರುಕ್ಷಣವೇ ಆತನ ಔದಾಸ್ಯಮಯವಾದ ಮನಸ್ಸಿಗೆ ಆನಂದವಾಯಿತು. ಆಯುಷ್ಯದಲ್ಲಿ ಪ್ರತಿಯೊಬ್ಬನಿಗೂ ಕಠಿಣವಾದ ಪ್ರಶ್ನೆಗಳನ್ನು ಬಿಡಿಸಬೇಕಾಗುತ್ತದೆ. ಪ್ರಶ್ನೆ ಬಿಡಿಸುವವ ರಾಜಪುತ್ರ ಸಿದ್ಧಾರ್ಥನೂ ಇರಬಹುದು ಅಥವಾ ಕೂಲಿಕುಂಬಳಿಗಳಿಂದ ಹೊಟ್ಟೆ ಹೊರೆಯುವ ಮುದುಕಿಯೂ ಇರಬಹುದು. ಮುದುಕಿಯ ಉತ್ತರವು ಬುದ್ದನದಕ್ಕಿಂತ ತೀರ ಬೇರೆಯಾಗಿತ್ತು. ಅವಳದೇ ನಿಜವಾಗಿರಬಹುದು. ಇದನ್ನು ಹೇಳುವವರು ಯಾರು?
* * *

ತನ್ನ ಇಂಥ ವಿಚಿತ್ರ ಭಾವನೆಗಳೆಲ್ಲ ಪುಟಿದು ಮೇಲಕ್ಕೆ ಬಂದಾಗೆಲ್ಲ ಅವನು ಆ ಮುದುಕಿಯ ವಿಷಯದಲ್ಲಿ ಮನಸ್ಸಿನಲ್ಲಿಯೇ ವಿಚಾರ ಮಾಡುವ. ಕೆಲ ದಿನ ಈ ಉಪಾಯವು ಒಳ್ಳೆಯದಾಗಿ ನಡೆದರೂ ಕಡೆಗೆ ಮಂತ್ರದಕ್ಕಿಂತಲೂ ಭೂತವೇ ಬಲವತ್ತರವಾಗಿದೆ ಎಂದು ಅನಂತನಿಗೆ ಕಂಡು ಬಂದಿತು. ಆಶೆಯು ಗರ್ಭವತಿಯಾಗಿದ್ದಾಳೆಂದು ತಿಳಿದ ಕೂಡಲೆ ಆತನಿಗೆ ಆನಂದವಾಗಿತ್ತೆಂಬುದರಲ್ಲಿ ಸಂಶಯವಿಲ್ಲ. ಆದರೆ ಮುಂದೆ ಅವಳಿಗೆ ವಾಂತಿಯಾಗುವದು ಅವನಿಗೆ ನೋಡಲಸಹ್ಯವಾಯಿತು. ಅವಳಿಗೆ ಅನ್ನದ ರುಚಿಯಿಲ್ಲದ ವೇಳೆಯಲ್ಲಿ ತಾನು ಮಾತ್ರ ಮೊದಲಿನಂತೆ ಯಥೇಚ್ಛವಾಗಿ ಊಟ ಹೊಡೆಯಹತ್ತಿರಬೇಕೆಂಬ ವಿಚಾರವು ಬಂದ ಕೂಡಲೆ ಅವನಿಗೆ ಹೇಗೋ ಎನಿಸಿಬಿಡುತ್ತಿತ್ತು. ನಡುನಡುವೆ ಆಕೆಗೆ ಮೈಯ್ಯಲ್ಲಿ ಸ್ವಾಸ್ಥ್ಯವಿಲ್ಲದಂತಾದ ಕೂಡಲೇಯಂತೂ ಅನಂತನ ಮುಖ ಮುದ್ರೆಯು ಏನೋ ಒಂದು ದೊಡ್ಡ ದೋಷನಾವರಿಸಿದಂತೆ ದೀನವಾಗಿ ಕಾಣುತ್ತಿತ್ತು.

ಆತನ ಈ ದುಃಖಕ್ಕೆ ಆಕೆಯ ಕಣ್ಣುಗಳು ಕಳಸವನ್ನೇರಿಸಿಬಿಟ್ಟವು. ಸ್ವಚ್ಛವಾದ ಸೆಲೆಯ ನೀರು ಕಲುಕಿ ಹೋದಂತೆ ಅವು ಅವನಿಗೆ ಕಾಣಿಸತೊಡಗಿದವು. ಅವಳ ಕಂಣುಗಳ ಸುತ್ತಲೂ ಕರಗಿನ ವರ್ತುಲಗಳು ಕಾಣಿಸಹತ್ತಿದ ಕೂಡಲೆ ತನ್ನ ಪ್ರೀತಿಯ ಸೌಂದರ್ಯದ ನಾಶವು ಸಮೀಪಿಸಿತೆಂದೇ ಅವನು ಮನವರಿಕೆ ಮಾಡಿಕೊಂಡು ಬಿಟ್ಟ.

ಆಶೆಯು ಸುಖರೂಪವಾಗಿ ಪಾರಾದಳು. ಅನಂತನು ಹುಡಿಗೆಯನ್ನು ಕೈಯಲ್ಲಿ ಎತ್ತಿಕೊಂಡಾಗ, ಅನಪೇಕ್ಷಿತವಾಗಿ ಆಟಿಗೆ ಸಿಕ್ಕ ಕೂಡಲೆ, ಚಿಕ್ಕ ಮಕ್ಕಳ ಮುಖದ ಮೇಲೆ ಮಿಂಚುವ ಆನಂದ, ಅತನ ಮುಖದ ಮೇಲೆ ಕುಣಿಯುತ್ತಿತ್ತು. ಆದರೆ ಕೂಸನ್ನು ತಿರುಗಿ ಆಶೆಯ ಕೈಯ್ಯಲ್ಲಿ ಕೊಡುವಾಗ ಅವಳ ಕಣ್ಣುಗಳನ್ನು ನೋಡಿದ. ಅವು ನಿಸ್ತೇಜವಾಗಿದ್ದವು. ಯಾಕೋ, ಯಾರು ಹೇಳಬೇಕು, ಆತನಿಗೆ ಒಮ್ಮೆಲೆ ತನ್ನ ಮಗನ ಸಲುವಾಗಿ ಆ ಮುದುಕಿಯು ಒಯ್ದ ಪಾರಿವಾಳದ ನೆನಪಾಯಿತು. ಹತ್ತು ದಿವಸ ಪ್ರತಿನಿತ್ಯವೂ ಅವನು ಆಕೆಯ ಬಳಿಯಲ್ಲಿ ಹೋಗುತ್ತಿದ್ದ, ಕೂಸು ಎತ್ತಿ ಕೊಳ್ಳುತ್ತಿದ್ದ, ಅಲ್ಲಿಯ ಇಲ್ಲಿಯ ಹರಟೆ ಹೊಡೆಯುತ್ತಿದ್ದ, ಆದರೆ ಇದೆಲ್ಲವೂ, ಕಾಲಲ್ಲಿ ಮುಳ್ಳು ಮುರಿದಿದ್ದರೂ, ಕವಾಯತಿಯ ಕಾಲದಲ್ಲಿ ಶಿಪಾಯಿಯ ವ್ಯವಸ್ಥಿತವಾದ ಓಡುವಿಕೆಯಂತೆಯೇ ಇತ್ತು.

ಆಶೆಯು ಮನೆಗೆ ಬಂದಳು ಹನ್ನೆರಡನೆಯ ದಿನ ತೊಟ್ಟಿಲಲ್ಲಿ ಹಾಕಿ ಹೆಸರಿಡುವ ಸಿದ್ಧತೆಯೂ ಆಯಿತು. ಗಂಡಹೆಂಡರಿಬ್ಬರೂ ಹುಡಿಗೆಗೆ ಇಡಬೇಕಾದ ಹೆಸರಿಗಾಗಿ ಅಧುನಿಕ ನಾಟಕ ಕಾದಂಬರಿಗಳಲ್ಲಿಯ- ನಾಯಿಕೆಯರ ಹೆಸರುಗಳನ್ನೆಲ್ಲ ಶೋಧಿಸಿನೋಡಿದರು. ಏನು ಮಾಡಿದರೂ ಇಬ್ಬರದೂ ಏಕಮತವಾಗಲೊಲ್ಲದು. ಕಡೆಗೆ ಇಬ್ಬರೂ ತಮ್ಮ ತಮ್ಮ ಹೆಸರಿನ ಚೀಟಿಹಾಕಿ, ಅದರಲ್ಲಿ ಬಂದದ್ದನ್ನು ಇಡಬೇಕೆಂದು ಗೊತ್ತಾಯಿತು. ಆಶೆಯು ಚೀಟ ಬರೆಯಹತ್ತಿದಳು. ಅನಂತ ಹುಡಿಗೆಯನ್ನು ಎತ್ತಿಕೊಂಡ. ಆ ಮಗುವಿನ ಕಣ್ಣುಗಳ ಕಡೆಗೆ ದಿಟ್ಟಿಸಿ ನೋಡಿದ ಮಾತ್ರ! ಪ್ರತಿ ಕ್ಷಣವೂ ಆತನ ಆಶ್ಚರ್ಯ ಹೆಚ್ಚಾಗಹತ್ತಿತು. ಅವನು ಆಶೆಯ ಹತ್ತಿರ ಬಂದು ಕೇಳಿದ “ನೀನು ಹನ್ನೆರಡು ದಿವಸದವಳಿರುವಾಗ ಹೇಗೆ ಕಾಣುತ್ತಿರಬಹುದು?”

“ಹೋಗಿರೀ; ಏನಾದರೊಂದು ನಿಮ್ಮದು!”

“ಇದು ನೋಡು. ಹೀಗೆ! ನೋಡಿದಿಯಾ ಈ ಮುದ್ದಿನ ಕಣ್ಣುಗಳನ್ನಽ?” ಅನಂತನು ಆನಂದದಿಂದ ಉದ್ಗಾರ ತೆಗೆದ. ಆ ಕ್ಷಣಕ್ಕೆ ಬುದ್ಧನು ಜೀವಿಸಿದ್ದರೆ, ಆತನ ತತ್ವಜ್ಞಾನವನ್ನು ಖಂಡಿಸುವ ಆ ಎರಡು ಮಾಟಾದ ಮುದ್ದು ಕಣ್ಣುಗಳನ್ನು ನೋಡಲಿಕ್ಕೆ ತಾನು ಅವಶ್ಯವಾಗಿ ಆತನನ್ನು ಕರೆದುಕೊಂಡು ಬರಬಹುದಾಗಿತ್ತೆಂಬ ವಿಚಾರವು ಅವನ ಮನಸ್ಸಿನಲ್ಲಿ ಬರದೇ ಇರಲಿಲ್ಲ. ಅನಂತನು ಕೈಯ್ಯಲ್ಲಿಯ ಕೂಸಿಗೆ ಪಟ ಪಟನೆ ಮುದ್ದಿಟ್ಟ.

ಆತನ ಕೈಯೊಳಗಿಂದ ಮಗುವನ್ನು ಇಸಿದುಕೊಳ್ಳಲಿಕ್ಕೆ ಕೈ ಮುಂದಕ್ಕೆ ಮಾಡುತ್ತ ಆಶೆಯು ಕೇಳಿದಳು.

“ಈಗ ಇದು ಎರಡನೆ ಹುಚ್ಚು ಹಿಡಿಯಿತು ಕಾಣಸತದ”

“ಛ! ಇದು ಮೊದಲಿನದೆ! ಇವಳ ಕಣ್ಣುಗಳು ನಿಜವಾಗಿಯೂ ನಿನ್ನಂತೆಯೇ ಅವೆಯಲ್ಲ!”

“ನನ್ನಂತೆಯೇನೆ?”

ಹೌದೆನ್ನಬೇಕೆಂದು ಅನಂತನು ಆಕೆಯ ಕಡೆಗೆ ನೋಡಿದ. ಆದರೆ ಅವಳ ಕಣ್ಣುಗಳಲ್ಲಿ ಯಾವದೋ ಒಂದು ಬೇರೆ ತರದ ಮೋಹಕತೆ ಕಂಡುಬಂದಿತು. ಕೈಯಲ್ಲಿಯ ಕೂಸಿನ ಕಡೆಗೆ ಅವಳು ವಾತ್ಸಲ್ಯದಿಂದ ನೋಡುತ್ತಿದ್ದಳು. ಸಮುದ್ರದಲ್ಲಿಯ ರತ್ನಗಳೆಲ್ಲವೂ ಇಲ್ಲದಂತಾಗಿ ಅಲ್ಲಿ ಲಕ್ಷ್ಮಿಯನ್ನೇ ಕಂಡಂತೆ ಅಥವಾ ಆಕಾಶದಲ್ಲಿಯ ತಾರೆಗಳ ತೇಜವೆಲ್ಲವೂ ಲೋಪವಾಗಿ ಅಲ್ಲಿ ಬೆಳದಿಂಗಳೇ ಅರಳಿದಂತೆ ಅವನಿಗೆ ಭಾಸವಾಯಿತು.

ಆಕೆಯನ್ನು ಮೊದಲನೆಯ ಸಾರೆಯೇ ನೋಡುತ್ತಿರುವಂತೆ ಅನಂತ ಆನಂದದಲ್ಲಿ ಉದ್ಗಾರ ತೆಗೆದ.

“ಕಣ್ಣುಗಳಲ್ಲಿ ಅನಂತ ಪ್ರಕಾರಗಳಿವೆ ಎಂಬುದೇ ನಿಜ?”
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಡೆ ಮುಂದೆ
Next post ಮೈ

ಸಣ್ಣ ಕತೆ

  • ಪ್ರೇಮನಗರಿಯಲ್ಲಿ ಮದುವೆ

    ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

  • ಆಪ್ತಮಿತ್ರ

    ಧಾರಾಕಾರವಾಗಿ ಮಳೆ ಸುರಿಯುತ್ತಿತ್ತು. ದೊಡ್ಡದೊಡ್ಡ ಮರಗಳು ಭೋರ್ ಎಂದು ಬೀಸುವ ಗಾಳಿಯಲ್ಲಿ ತೂಗಾಡುತ್ತಿದ್ದವು. ಇಂಗ್ಲೆಂಡಿನ ಆ ಚಳಿ ಮಳೆಯಲ್ಲಿ ಎರಡು ಆಪ್ತಮಿತ್ರ ಜೀವಗಳು ಒಂದನ್ನು ಅನುಸರಿಸಿ ಇನ್ನೊಂದು… Read more…

  • ಎದಗೆ ಬಿದ್ದ ಕತೆ

    ೧೯೯೫. ನಾನಾಗ ಹುಬ್ಬಳ್ಳಿಯ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ವಿಭಾಗೀಯ ಸಾರಿಗೆ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದೆ. ಇಲ್ಲಿ ೧೯೯೭ರ ವರೆಗೆ ನರಕ ಅನುಭವಿಸಿದೆ. ಪಾಪದ ಕೂಪವಿದು ಸ್ವರ್ಗ ನರಕ… Read more…

  • ಹಳ್ಳಿ…

    ಬಂಗಾರ ಬಣ್ಣದ ಕಾರು, ವೇಗವಾಗಿ... ಅತಿವೇಗವಾಗಿ, ಓಡುತ್ತಿತ್ತು. ರೆವ್ರೊಲೆ ಆವಿಯೊಯು-ವಾ-ಹೊಚ್ಚ ಹೊಸ ಮಾದ್ರಿಯ ಹೊರ, ಒಳಗೆ, ಬಲು ವಿಶಿಷ್ಠ, ವಿನೂತನ, ವಿನ್ಯಾಸದ, ಎಬಿ‌ಎಸ್ ಸಿಸ್ಟಮ್ ಕಾರೆಂದರೆ ಕೇಳಬೇಕೆ?… Read more…

  • ದೇವರೇ ಪಾರುಮಾಡಿದಿ ಕಂಡಿಯಾ

    "Life is as tedious as a twice-told tale" ಧಾರವಾಡದ ಶಾಖೆಯೊಂದಕ್ಕೆ ಸಪ್ತಾಪುರವೆಂಬ ಹೆಸರು, ದೂರ ದೂರಾಗಿ ಕಟ್ಟಿರುವ ಆ ಗ್ರಾಮದ ಮನೆಗಳಲ್ಲಿ ಒಂದು ಮನೆಯು… Read more…