ರೆಕ್ಕೆಯ ಕುದುರೆಯನೇರಿ,
ಹಕ್ಕಿಯ ಹಾದಿಯ ಹಿಡಿದು,
ದಿಕ್ಕಿನ ತುದಿಗಿದ್ದ ಚಿಕ್ಕೆಗಳ ನಾಡಿನಲ್ಲಿ –
ಮಾತಿನ ಗಿಳಿಯ ದೂತಿಯ ಮಾಡಿ,
ಪ್ರೀತಿಯ ರಸದ ಗೀತಿಯ ಹಾಡಿ,
ವೇತಾಳರಾಯನಾ ಕೋಟೆಯ ನೋಡಿ –
ರಕ್ಕಸರನ್ನು ಕಾದಿ ಕೊಂದು,
ಬೊಕ್ಕಸವನ್ನು ಸೂರೆಗೊಂಡು,
ಬೆಕ್ಕಸ ಎನೆ ಮೆರೆದು ಬಂದು-
ಮೂಮಲ್ಲಿಗೆಯ ತೂಕದ ಹೆಣ್ಣು
ವಾಲಿಯ ಭಾಂಡಾರದ ಆ ಹೊನ್ನು
ಏಳು ಕಡಲು ಸುತ್ತಿದ ನೆಲವನ್ನು
ಆಳುವನವ್ವಾ ನನ್ನ ಕುಮಾರ!
ನರಲೋಕ ವೀರ! ದೇಶಕೋಶರಕ್ಷಕ ಶೂರ!
ಧರ್ಮದ ಅರಸನಾಗಿ-ದೇವರ ಊಳಿಗದವನಾಗಿ-
ಕಂಟಕರಿಗೆ ಕಾಳನಾಗಿ
ಆಳುವನವ್ವಾ! ಆಳುವನು!!
*****


















