ಒಬ್ಬ ನಿಷ್ಠಾವಂತ ಸಾಧಕ ಶ್ರಾವಣದ ಭೋರ್ಗರೆವ ಮಳೆಯಲ್ಲಿ ಒಂಟಿ ಕಾಲ ಮೇಲೆ ನಿಂತು ತಪಗೈಯುತ್ತಿದ್ದ. ಧಾರಕಾರ ಮಳೆ ಹುಯ್ಯುತ್ತಿತ್ತು. ಮಳೆಯ ತೀವ್ರತೆ ಚಾವಟಿಯಂತೆ ಥಳಥಳಿಸುತ್ತಿತ್ತು. ಮೇಲೆ ಆಲಿಕಲ್ಲುಗಳು ಉದುರುತ್ತಿದ್ದವು. ಕಾರ್ಮೊಡಗಳು ಒಂದನ್ನೊಂದು ಘರ್ಷಿಸಿ ಘರ್ಜನೆ ಮಾಡುತಿತ್ತು. ಗುಡುಗು ಸಿಡಿಲು ಧ್ವನಿ ಎದೆ ನಡುಗಿಸುತಿತ್ತು. ಮಿಂಚು ಕಣ್ಣು ಕೋರೈಸುತ್ತಿತ್ತು. ಕಾಡಿನಲ್ಲಿ ಕಟ್ಟಿಗೆ ಶೇಖರಿಸಲು ಬಂದ. ಒಬ್ಬ ಬಡವ ಈ ಸಾಧಕನ ತಪಸ್ಸು ನೋಡಿ ಬೆರಗಾಗಿ ಕೇಳಿದ.
“ಏ! ಸಾಧಕ, ನಿನ್ನ ಈ ತಪಸ್ಸಿನಿಂದ ಏನು ಪಡೆಯುತ್ತಿರುವೆ?” ಎಂದ.
ಸಾಧಕ ಹೇಳಿದ- “ಗುಡುಗಿನಲ್ಲಿ ಗುರುವಿನ ಧ್ವನಿ ಕೇಳುತ್ತಿದೆ. ಸಿಡಿಲು ಬಡಿದು ನನ್ನ ಅಜ್ಞಾನ ತೊಲಗುತ್ತಿದೆ. ಮಿಂಚಿನಲ್ಲಿ, ಜ್ಞಾನೋದಯವಾಗುತ್ತಿದೆ. ನನ್ನ ಬರಡಾದ ಹೃದಯ ಮಳೆಯಲ್ಲಿ ಫಲವತ್ತಾಗುತ್ತಿದೆ. ಕಾರ್ಮೊಡಗಳು ಕರಗಿ ನನ್ನ ಬಾಳು ಶುಭ್ರ ನೀಲ ಆಗಸದಂತಾಗುತ್ತಿದೆ.” ಎಂದಾಗ ಕಟ್ಟಿಗೆ ಶೇಖರಿಸುವ ಬಡವನಿಗೆ ಏನೂ ಅರ್ಥವಾಗಲಿಲ್ಲ.
ಅವನಿಗೆ ಊಟಕ್ಕೆ ಬೇಕಾದ ಕಟ್ಟಿಗೆಯ ಉರಿಯಲ್ಲಿ ಅವನಿಗೆ ಬಾಳ ದೀಪ್ತಿಯ ಪೂರ್ಣತೆ ಸಿಕ್ಕಿತ್ತು.
“ಪೂರ್ಣತೆಗೆ ಅದೆಷ್ಟು ಕಠಿನ ಮಾರ್ಗ, ಅದೆಷ್ಟು ಸುಲಭ ಮಾರ್ಗ” ಎಂದು ಮನವು ಯೋಚಿಸಿತು.
*****


















