ವೀರಭದ್ರನೆ ಏಳು ವೀರ ರುದ್ರವ ಹೇಳು
ಬಾಳೆಹೊನ್ನೂರಿನಲಿ ಕೂಗಿ ಹಾಡು
ಜ್ಞಾನ ಖಡ್ಗವ ಬೀಸು ಶಿವನ ಢಮರುಗ ಢಮಿಸು
ಕಡಲ ಅಲೆಗಳ ರುದ್ರ ನಾಟ್ಯವಾಡು
ನೋಡು ದುಷ್ಟರ ಕೂಟ ರುಂಡಮುಂಡರ ಕಾಟ
ತಾರಕನ ದ೦ಡುಗಳ ಹಿಂಡು ಮೆಟ್ಟು
ಸತ್ಯವಂತರ ಉಳಿಸು ಹಗಲುಗಳ್ಳರ ಅಳಿಸು
ಅಗ್ನಿರಥಗಳ ಕುದುರೆ ಕಟ್ಟು ಬಿಚ್ಚು
ಭೂತಬೆಂತರ ಕೊಚ್ಚು ಮೋಹಮಚ್ಚರ ಹೆಚ್ಚು
ಕಾಮಕ್ರೋಧದ ಹುಚ್ಚು ಬಿಚ್ಚಿ ಬಿಡಿಸು
ನೀನು ಬ೦ದರೆ ಸ್ವರ್ಗ ಬಾರದಿದ್ದರೆ ನರಕ
ಶಿವಯೋಗ ಸಿದ್ಧಾಂತ ಕಿಡಿಯತೊಡಿಸು
ತೋಪು ಟ್ಯಾಂಕಿನ ಮೇಲೆ ಗನ್ನು ಬಾಂಬಿನ ಮೇಲೆ
ಹೀರಿ ಪಡುವಲ ಬಳ್ಳಿ ಬೆಳೆಸು ತಂದೆ
ರಕ್ತಕೊಳ್ಳದ ಮೇಲೆ ಲಿಂಗಬಳ್ಳಿಯ ಮಾಲೆ
ಪ್ರೇಮರಾಜ್ಯದ ಲೀಲೆ ತೋರು ಮುಂದೆ
*****


















