ಕಿನ್ನರ ಕಿಂಪುರುಷರ ನೌಕೆಗಳಂತೆ
ತೇಲುತಿಹುದು ಬುರುಗಿನ ಬೆಳ್ಳಿ ಶರಧಿಯ ಮೇಲೆ,-
ನೂರೊಂದು ಕಡೆಗೆ ತೇಲುತಿಹುದು ನೋಡಾ!
ಬೆಣ್ಣೆ ಕಡಿದ ಮಜ್ಜಿಗೆಯಂತೆ
ಹುಟ್ಟು ಕಡಿದ ನೀರು ಅಟ್ಟಿಸುತಿಹುದು ನೋಡಾ!
ತಪತಪನೆ ಕಾಯ್ದು ಕೋಟಿ ಸೂರ್ಯರಂತೆ
ಕಣ್ಣು ಕುಕ್ಕಿ ಸುವದು ನೋಡಾ ಸಾಗರವು!
ಹೆಡೆಯಲ್ಲಿ ಪ್ರಷ್ಟರಾಗವಿಹ ಕಾಳಸರ್ಪಗಳಂತೆ
ಸಾಗಿಹುದು ನೋಡಾ ಸಾವಿರ ತೆರೆಗಳ ವೈಭವವು!
ಹಚ್ಚಹಸಿರಿತ್ತು, ಹಿಂದೀ ಮಹಾಸಾಗರದ ಬಣ್ಣ,
ಕಪ್ಪುಹಸಿರಿತ್ತು ಮತ್ತೆ!
ಅರಬ್ಬಿಯ ಮುನ್ನೀರಿಗೆ ಕರಿನೀಲಿ ಬಣ್ಣವುಂಟು;
ಮುಂದೆ ಬಂದಿಹುದು ಕೆಂಪು ಸಮುದ್ರವೊಂದು.
ನಿನ್ನ ಬಣ್ಣವಾವುದು, ಸಮುದ್ರರಾಜ?
ಸಪ್ತವರ್ಣದ ಇಂದ್ರಧನುಸ್ಸನ್ನು ಹಿಡಿದು
ಆಕಾಶರಾಜನ ಸರಿಗಟ್ಟಿದೆ ನೀನು.
ಚಣಕೊಮ್ಮೆ ಬಣ್ಣವ ಬದಲಿಸಿ ಚೆಲುವಿಕೆಯನಾಂತು
ಭೂದೇವಿಯನು ಪಾತಾಳಕೆ ಮೆಟ್ಟಿದೆ ನೀನು!
ಮುಗಿಲಿಗಿಂತ ಮಿಗಿಲು ಸಾಗರದ ನೀಲಿ!
ಸಾಗರದ ತುದಿ ತಟ್ಟಿ ಮುಗಿಲೆಲ್ಲ ನೀಲಿಯಾಗಿಹುದು.
ಮುಗಿಲನಂತತೆಯೆಲ್ಲ ಮುನ್ನೀರ ಗರ್ಭಪಿಂಡ!
ಮೋಡಗಳೆಂಬ ಓಡಗಳು ಬಾಂದಳದಿ ತೇಲುವಲ್ಲಿ
ಹಕ್ಕಿಯೆಂಬ ಚಿಕ್ಕಿ ಮಿನುಗಿದವು ಕಡಲಿನೊಡಲ ಮೇಲ್ಗಡೆಗೆ!
ಗಾಳಿಯಲಿ ರೆಕ್ಕೆ ಬೀಸುತಿದೆ ಪಕ್ಷಿಗಣವು,-
ಈಸುತಿದೆ ಗಾಳಿ, ನೀರಿನಲಿ ರೆಕ್ಕೆ ಬಡೆದು!
ನೆಲ ಗಾಳೆಯುರಿ, ಮುಗಿಲು,-
ಪೆಡಂಭೂತಗಳಿವು ನಾಲ್ಕು.
ಈ ಮಹಾಭೂತಗಳ ನುಂಗಿ ನೀರ್ಕುಡಿಯುತ್ತ
ಮತ್ತಮದಗಜದಂತೆ ಕ್ರೀಡಿಸುತ ನಿಂತ ಪಂಚಾನನ!
ನಿನ್ನೆದುರು ನರನೆಂಬ ಪಿಳ್ಳೆ, ಬರಿ ನೀರ್ಗುಳ್ಳಿ;
ಕೆರಳದಿರು! ಕರುಣಿಸು! ಶರಣು! ಶರಣು!!
*****



















