ಥಡ್ರ್‌ಸೆಕ್ಸ್ ಮೊನೊಲಾಗು

ಥಡ್ರ್‌ಸೆಕ್ಸ್ ಮೊನೊಲಾಗು

Thirdsex-2ನಿಮ್ಮೊಡನೆ ಇಂದು ಹೃದಯ ಬಿಚ್ಚಿ ಮಾತಾಡುತ್ತಿದ್ದೇನೆ. ಈಗ ಹಾಗೆ ಯಾರೂ ಮಾತಾಡುವವರಿಲ್ಲ. ಸ್ವಭಾವ, ನಡೆ, ನುಡಿ ಎಲ್ಲದರಲ್ಲೂ ಒಳಗೊಂದು ಹೊರಗೊಂದು. ನೀವೂ ಹಾಗೇ ಅಲ್ವಾ? ಹೇಳಿ, ನೀವು ಗಂಡಸರಾ, ಹೆಂಗಸರಾ?

ನನ್ನನ್ನು ನೀವು ಹೇಗೆ ಬೇಕಾದರೂ ಕರೆಯಿರಿ, ನನ್ನದೇನಡ್ಡಿಯಿಲ್ಲ. ಅದು-ಇದು, ಅವನು-ಅವಳು, ಇವನು-ಇವಳು, ಹೇಗಾದರೂ. ದೈಹಿಕ ನ್ಯೂನ್ಯತೆಯನ್ನು ಪರಿಹಾಸ್ಯ ಮಾಡುವುದು ಸುಸಂಸ್ಕೃತರ ಲಕ್ಷಣ ಅಲ್ಲವಂತೆ. ಆದರೂ ಚಿಂತಿಲ್ಲ ಬಿಡಿ. ಹಾಸ್ಯ ಪ್ರಜ್ಞೆ ಇಲ್ಲದಿದ್ದರೆ ಬದುಕಿಗೆ ಅರ್ಥವೇ ಇರುವುದಿಲ್ಲ. ಅದಕ್ಕೇ ಮಿಸೆ ಇರುವವರನ್ನು ಗಂಡಸರೆಂದು ಸ್ತನಕಟ್ಟು ಇರುವವರನ್ನು ಹೆಂಗಸರೆಂದು ನಾನು ಕರೆಯುವುದು.

ನನ್ನನ್ನು ನಾನು ಗಂಡೆನ್ನುವಂತಿಲ್ಲ. ಗಂಡಿಗೆ ಪ್ರಧಾನವಾಗಿ ಏನಿರಬೇಕೋ ಅದೇ ನನ್ನಲ್ಲಿಲ್ಲ. ಹೆಣ್ಣು ಎಂದು ಕೊಳ್ಳಲು ನನ್ನಿಂದಾಗುತ್ತಿಲ್ಲ. ಹೆಣ್ಣಿಗಿರಬೇಕಾದದ್ದೂ ನನ್ನಲ್ಲಿಲ್ಲ. ಹುಟ್ಟುವಾಗ ಏನೋ ಸಣ್ಣ ಮೆಣಸಿನಕಾಯಿಯಷ್ಟಕ್ಕಿದ್ದದನ್ನು ನೋಡಿ ಅಪ್ಪ ನನಗೆ ಚೇತನ್‌ ಎಂದು ಹೆಸರಿಟ್ಟಿದ್ದರು. ಬೆಳವಣಿಗೆಯ ಹಂತದಲ್ಲಿ ಮೆಣಸಿಕಾಯಿ ಉದುರಿಹೋಗಿ ಪ್ರಕೃತಿ ಕರೆಗೊಂದು ಚಿಕ್ಕ ರಂಧ್ರ ಮಾತ್ರ ಉಳಕೊಂಡಿತು. ಎಲಿಮೆಂಟರಿ ಶಾಲೆಯಲ್ಲಿ ಅಂಗಿ ಚಡ್ಡಿ ಹಾಕಿಕೊಳ್ಳುತ್ತಿದ್ದೆ. ಹೈಸ್ಕೂಲಿಗೆ ಸೇರಿದ ಮೇಲೆ ಅಂಗಿ ಚಡ್ಡಿ ಹಾಕಿಕೊಳ್ಳಲು ಮನಸ್ಸಾಗಲಿಲ್ಲ. ಅಪ್ಪನಿಗೆ ಹೇಳಿ ಚೂಡಿದಾರ ತರಿಸಿದೆ. ಆಗ ಹೈಸ್ಕೂಲಲ್ಲಿ ಓದುತ್ತಿದ್ದೆ. ಸಹಪಾಠಿಗಳು ವಿಸ್ಮಯ ದಿಂದ ನನ್ನನ್ನು ನೋಡತೊಡಗಿದರು. ಅಧ್ಯಾಪಕರು ಹೆಣ್ಣುಗಳ ಸಾಲಲ್ಲಿ ಕೂರಿಸಿದರು. “ಲಿಂಗ ಪರಿವರ್ತನೆಯ ವಿಸ್ಮಯ: ಚೇತನಾ ಆದ ಚೇತನ್‌” ಎಂದು ಪತ್ರಿಕೆಗಳು ಬರೆದವು. ಅದೇ ಹೆಸರು ಉಳಕೊಂಡಿತು. ಹೆಸರಿನ ಕೊನೆಯ ಹೃಸ್ವದೀರ್ಘವಾಗಿ ಬದುಕು ಸುದೀರ್ಘ ಆಯಾಮಗಳನ್ನು ಪಡಕೊಂಡಿತು.

ಹುಡುಗಿಯರ ಜತೆಯಲ್ಲಿ ಕೂತರೂ ನನಗೆ ಮನೋವಿಕಾರವಾಗುತ್ತಿರಲಿಲ್ಲ. ಚೂಡಿದಾರ ಹಾಕಿದರೂ ಹುಡುಗರನ್ನು ನೋಡಿದಾಗ ಮೈ ಮನ ಪುಳಕಗೊಳ್ಳುತ್ತಿರಲಿಲ್ಲ. ಬಿಸಿಲಾದರೇನು, ಮಳೆಯಾದರೇನು? ಆದರೆ ಚೇತನ್‌ ಹೋಗಿ ಚೇತನಾ ಆದ ಮೇಲೆ ಹುಡುಗಿಯರ ಮಧ್ಯೆ ನುಸುಳುವುದು ಸುಲಭವಾಯಿತು. ಚೆಂದೊಳ್ಳಿ ಚೆಲುವೆಯರನ್ನು ಕಂಡಾಗ ಹಿಡಿದು ಆಲಂಗಿಸಿ, ಕೆನ್ನೆಗೊಂದು ಲೊಚಕ್ಕನೆ ಮುತ್ತು ಕೊಟ್ಟು ಬಿಡುತ್ತಿದ್ದೆ. ಚೂಡಿದಾರ ಹಾಕಿಕೊಂಡಿರುತ್ತಿದ್ದುದರಿಂದ ಯಾರೂ ಆಕೇಪಿಸುವಂತಿರಲಿಲ್ಲ. ವೇಷ ಭೂಷಣ ಹೇಗಿದ್ದರೂ ನನ್ನ ಕೈಗಳಲ್ಲಿ ಗಂಡಿನ ಬಲವಿತ್ತು. ನಾನು ಮುಟ್ಟಿ ಆಲಂಗಿಸಿದಾಗ ಹೆಣ್ಣುಗಳು ಕೆಂಪಡರಿ ಮೈ ಮರೆಯುತ್ತಿದ್ದರು. ಅಪೂರ್ವ ಸುಖದ ನಿರೀಕೆಯಲ್ಲಿ ಅವರ ತುಟಿಗಳು ಬಿರಿದು ಕಣ್ಣುಗಳು ಮುಚ್ಚಿಕೊಳ್ಳುತ್ತಿದ್ದವು. ಅಪ್ಪಿ ಮುತ್ತು ಕೊಡುವುದನ್ನು ಬಿಟ್ಟರೆ ನನ್ನಿಂದ ಬೇರೇನನ್ನು ಮಾಡಲು ಸಾಧ್ಯವಿತ್ತು? ಆ ಕ್ಷಣ ದೇವರೇ ನೀನೆಂಥಾ ಪಾಪಿ? ನನಗೆ ಅದೊಂದನ್ನು ಕೊಡಲಾರದೆ ಹೋದೆಯಾ ಎಂದು ಕೇಳಿಕೊಳ್ಳುತ್ತಿದ್ದೆ. ನಾವು ಯಾವಾಗಲೂ ಪಾಸಿಟಿವ್‌ ಆಗಿಯೇ ಯೋಚಿಸಬೇಕಂತೆ. ಅದಕ್ಕೇ, ನಾನು ತೀರಾ ನಿರುಪಯೋಗಿಯಲ್ಲ. ನನ್ನ ಸ್ಪರ್ಶದಿಂದಲೂ ಸಂತೋಷ ಪಡುವವರಿದ್ದಾರೆ ಅನ್ನುವುದನ್ನು ಪದೇ ಪದೇ ನೆನಪಿಸಿ ಕೊಂಡು ಜೀವನಕ್ಕೊಂದು ಅರ್ಥ ಹುಡುಕಲು ಯತ್ನಿಸಿದೆ.

ಆದರೆ ಈ ಗಂಡಸರಿದ್ದಾರಲ್ಲಾ, ಅಬ್ಬಾ! ನನ್ನ ಚೂಡಿದಾರ್‌ ಮತ್ತು ಸ್ತನಕಟ್ಟು ನೋಡಿ ಕೈ ಸನ್ನೆ, ಕಣ್ಸನ್ನೆ ಮಾಡೋರು ಎಷ್ಟು ಮಂದಿ? ಅದರಲ್ಲೂ ಈ ವಿಶ್ವದ ಸಮಸ್ತ ಸಮಸ್ಯೆಗಳನ್ನು ತಾವೇ ಹೊತ್ತವರಂತೆ ಗಂಭೀರ ಮುಖ ಹೊತ್ತು ನಡೆಯುವರಿದ್ದಾರಲ್ಲಾ ಅವರನ್ನು ನಂಬಲೇಬಾರದು. ಏಕಪತ್ನೀವ್ರತಸ್ಥ ಮುಖ ಮುದ್ರೆಯಿಂದ ನೆಟ್ಟಗೆ ನಡಕೊಂಡು ಬರುವವರು ನಾನು ಸಮೀಪಿಸಿದಾಗ ತೀರಾ ಗಂಭೀರ ಸ್ವರದಲ್ಲಿ ‘ಎಷ್ಟಕ್ಕೆ ಬರ್ತಿಯಾ’ ಎಂದು ನೇರವಾಗಿ ಕೇಳೋರು. ಯಾವ ಮುಲಾಜೂ ಇಲ್ಲದೆ ನೇಂ ಕಾರ್ಡುಕೈಗೆ ತುರುಕಿ “ಇಲ್ಲಿಗೆ ಬಂದು ಬಿಡು; ಇಲ್ಲಾಂದ್ರೆ ಫೋನ್‌ ಮಾಡು. ಬಂದು ಪಿಕಪ್‌ ಮಾಡ್ತೇನೆ” ಎನ್ನೋರು. ನಾನು ಮತ್ತೊಮ್ಮೆ ಸಿಕ್ಕಾಗ “ನೀನು ಹೇಳಿದ ರೇಟು. ಈ ವಿಷಯದಲ್ಲಿ ಬಾರ್ಗೈನು ಮಾಡುವಷ್ಟು ಚೀಪು ವ್ಯಕ್ತಿ ನಾನಲ್ಲ” ಎಂದು ಉದಾರತೆ ಪ್ರದರ್ಶಿಸೋರು.
Thirdsex-1
ರಾತ್ರೆ ಒಬ್ಬಂಟಿಯಾಗಿ ರಸ್ತೆಯಲ್ಲಿ ನಡಕೊಂಡು ಹೋಗುವುದು ನನ್ನದೊಂದು ಅಭ್ಯಾಸವಾಗಿತ್ತು. ಒಂದು ರಾತ್ರೆ ಐವರು ಗಂಡಸರು ಕಾರೊಂದರಲ್ಲಿ ತುರುಕಿ ನನ್ನನ್ನು ಹೊತ್ತೊಯ್ದರಲ್ಲಾ? ಏನು ಮಾಡಿಯಾರು ಇವರು ಎಂದು ನಾನು ಮನಸ್ಸಿನಲ್ಲೇ ನಗುತ್ತಿದ್ದೆ. ಗಂಡಸರಾ ಅವರು, ಹಸಿದ ಬೀದಿ ನಾಯಿಗಳು. ನನ್ನ ಚೂಡಿದಾರ ಕಿತ್ತೊಗೆದರು. ಸ್ತನಕಟ್ಟು ಬಿಚ್ಚಿ ಮೈದಾನದಂತಹ ಎದೆಯನ್ನು ನೋಡಿ “ಮೋಸ ಹೋದಿವಲ್ಲಾ ಶಿವ್ನೇ” ಎಂದು ಗೋಳಾಡಿದರು. ಆದರೂ ಅವರು ನನ್ನನ್ನು ಬಿಡಲಿಲ್ಲ. ಒಬ್ಬರಾದ ಮೇಲೆ ಒಬ್ಬರಂತೆ ಐವರೂ ಈ ದೇಹದ ಮೇಲೆ ಮುಗಿಬಿದ್ದು….. ಥೂ, ಅಸಹ್ಯ! ಏರಿದ್ದ ಉದ್ರೇಕವನ್ನು ಹೇಗೋ ಇಳಿಸಿಕೊಂಡರು. ಆ ಮೇಲೆ ನನ್ನನ್ನು ಅಲ್ಲೇ ಕಾರಿನಿಂದ ಕೆಳಕ್ಕೆ ತಳ್ಳಿ ಸಮಾಜದಲ್ಲಿ ಮರ್ಯಾದೆ ಉಳಿಸಿಕೊಂಡರು.

ಅಂದಿನಿಂದ ನನಗೆ ಗಂಡಸರಿಗಿಂತ ಹೆಂಗಸರೇ ಮೇಲು ಅನ್ನಿಸುತ್ತಿತ್ತು. ಈಗಲೂ ಅದೇ ಅನ್ನಿಸಿಕೆಯಿದೆ. ಹೆಂಗಸರು ನಿರೀಕೆಯಲ್ಲೇ ಸುಖ ಪಡುತ್ತಾರೆ. ಗಂಡಸರಿಗೆ ಉದ್ರೇಕ ಇಳಿಸೋದೇ ಮುಖ್ಯ. ಪುರಾಣದಲ್ಲಿ ಬರೋ ರಕ್ಕಸರೆಂದರೆ ಗಂಡಸರೇನಾ ಅಂತ ಆ ಕ್ಷಣಕ್ಕೆ ನಾನೆಂದುಕೊಂಡಿದ್ದೆ. ಈಗ ಗಂಡಸ್ರು ಗಂಡಸ್ರನ್ನೇ ಮತ್ತು ಹೆಂಗಸ್ರು ಹೆಂಗಸ್ರನ್ನೇ ಮದ್ವೆಯಾಗೋ ಸಿಸ್ಟಮ್ಮು ಇದೆಯಂತಲ್ಲಾ? ಹಾಗೆ ಮದ್ವೆಯಾಗೋದು ಯಾಕೆಂದು ನನಗಿನ್ನೂ ಅರ್ಥವಾಗಿಲ್ಲ. ಒಂದಂತೂ ನಿಜ, ನಿಮ್ಮೆಲ್ಲರ ದಕ್ಕಿಂತ ನನ್ನ ಬಾಳೇ ಉತ್ತಮ. ನಾನು ಹೆಂಗಸರಲ್ಲಿ ಸುಖದ ನಿರೀಕ್ಷೆ ಹುಟ್ಟಿಸಬಲ್ಲೆ. ಗಂಡು ಜಾತಿಯ ಉದ್ರೇಕಕ್ಕೆ ಅಭಿವ್ಯಕ್ತಿಯಾಗಬಲ್ಲೆ. ನೀನ್ಯಾರಿಗಾದೆಯೋ…….. ?

ಎಲಿಮೆಂಟರಿ ಶಾಲೆಗೆ ಸೇರಿಸುವಾಗ ಅಪ್ಪ ಹೊಸ ಚಡ್ಡಿ ಅಂಗಿ ತೊಡಿಸಿದ್ದರು. ಸೆಕ್ಸು ಕಾಲಮ್ಮಿನಲ್ಲಿ ಗಂಡು ಎಂದು ತುಂಬಿದ್ದರು. ಪುಣ್ಯಕ್ಕೆ ಶಾಲೆಯಲ್ಲಿ ಲಿಂಗ ಪರೀಕ್ಷೆ ಮಾಡಲ್ವಲ್ಲಾ? ಆದರೂ ಅಪ್ಪ ಹೆಡ್ಮಾಸ್ತರರಲ್ಲಿ ನಿಜವನ್ನೇ ಹೇಳಿದ್ದರು. ಅಪ್ಪನ ಕಣ್ಣುಗಳು ಕೊಳಗಳಾಗಿದ್ದವು. ಹೆಡ್ಮಾಸ್ತರರು ಅಪ್ಪನ ಕೈಯದುಮಿ “ನೋಡಿ, ನಾವು ಯಾರು ಅನ್ನೋದಕ್ಕಿಂತ ಏನು ಅನ್ನೋದು ಮುಖ್ಯ. ಹೇಳೋದಿಕ್ಕೆ ನಾವಿಬ್ರೂ ಗಂಡಸ್ರು. ಆದ್ರೆ ಏನನ್ನು ಸಾಧಿಸಿದ್ದೀವಿ? ಹಾಗೆ ನೋಡಿದ್ರೆ ಅದಿದ್ರೂ ಬಹುತೇಕರದ್ದು ಅದಿಲ್ಲದ ಬದುಕೇ ಅಲ್ವಾ?” ಎಂದಿದ್ರು. ಜಾತಿ ಮತ್ತು ಧರ್ಮ ಕಾಲಂಗಳಲ್ಲಿ ‘ಇಲ್ಲ’ ಎಂದು ಅಪ್ಪ ಬರೆದಿದ್ದರು. “ಇದೇಕೆ ಹೀಗೆ” ಎಂದು ಹೆಡ್ಮಾಸ್ತರರು ಕೇಳಿದ್ದಕ್ಕೆ “ಹುಟ್ಟು ನಮ್ಮ ಸಾಧನೆಯಲ್ಲ. ಹುಟ್ಟಿನ ನೆಪವೊಡ್ಡಿ ಗೌರವವನ್ನೋ, ಉದ್ಯೋಗವನ್ನೋ ನನ್ನ ಮಗು ಪಡೆಯಬೇಕಾಗಿಲ್ಲ” ಎಂದಿದ್ದರು. “ಹಾಗಾದರೆ ಲಿಂಗ ಕಾಲಮ್ಮಿನಲ್ಲಿ ಗಂಡು ಎಂದೇಕೆ ತುಂಬಿದ್ದೀರಿ?” ಎಂದುದಕ್ಕೆ “ಮನುಷ್ಯರು ಧೈರ್ಯವಂತರಾಗಿ ಬದುಕು ಸಾಗಿಸಬೇಕು ಎಂಬುದಕ್ಕದು ಸಂಕೇತ” ಎಂದು ಉತ್ತರಿಸಿದ್ದರು.

ಹೈಸ್ಕೂಲಲ್ಲಿ ಕನ್ನಡ ಪಂಡಿತರು ನನ್ನ ಆತ್ಮ ವಿಶ್ವಾಸವನ್ನು ಎತ್ತರಿಸಿ ಬಿಟ್ಟರು. “ಉದ್ಯೋಗಂ ಪುರುಷ ಲಕ್ಷಣಂ ಎಂದಿರುವಲ್ಲಿ ಪುರುಷ ಅನ್ನುವುದು ನಪುಂಸಕ ಲಿಂಗ. ಉಭಯ ಲಿಂಗಕ್ಕೂ ಹೊಂದುವ ಪದ. ಪುರುಷನಲ್ಲಿ ಸ್ತ್ರೀ ಇರುತ್ತಾಳೆ. ಸ್ತ್ರೀಯಲ್ಲಿ ಪುರುಷ ಇರುತ್ತಾನೆ. ಅದನ್ನೇ ಅರ್ಧ ನಾರೀಶ್ವರ ಪರಿಕಲ್ಪನೆ ಸಂಕೇತಿಸುವುದು. ಪರಿಪೂರ್ಣ ಪುರುಷ ನಾಗಲೀ, ಪರಿಪೂರ್ಣ ಸ್ತ್ರೀಯಾಗಲೀ ಎಲ್ಲೂ ಇರಲು ಸಾಧ್ಯವಿಲ್ಲ. ನಮ್ಮೆಲ್ಲರಲೂ
ಷಂಡತ್ವವಿದೆ. ಅದಕ್ಕೇ ಬದುಕನ್ನು ಯಥಾವತ್ತಾಗಿ ಸ್ವೀಕರಿಸಿ ಹಣೆ ಬರಹ, ಕರ್ಮಫಲ ಎನ್ನುತ್ತೇವೆ” ಎಂದಿದ್ದರು. ಅಂದಿನಿಂದ ನಾನು ಜೀವನವನ್ನು ನೋಡುವ ದೃಷ್ಟಿಕೋನವೇ ಬದಲಾಯಿತು.

ಕಾಲೇಜಿನಲ್ಲಿ ನಾನು ಹೆಣ್ಣಾಗಿಯೇ ಚಲಾವಣೆಯಾದೆ. ನನಗೆ ಇಪ್ಪತ್ತು ತುಂಬುವಾಗ ಅಪ್ಪ ಸತ್ತುಹೋದ. ಕ್ಯಾನ್ಸರ್‌ ಪೀಡಿತೆ ಅಮ್ಮ ಮತ್ತೆ ಹೆಚ್ಚು ದಿನ ಬದುಕಲಿಲ್ಲ. ಇರುವೊಂದು ಮನೆಯನ್ನು ನನಗೆ ಬಿಟ್ಟುಕೊಟ್ಟು ಅಣ್ಣ ರಾಜಧಾನಿ ಸೇರಿಕೊಂಡ. ಮನೆಯಲ್ಲಿ ಒಂದು ನಾಯಿ, ಎರಡು ಬೆಕ್ಕು ಬಿಟ್ಟರೆ ಅನ್ಯಜೀವಿಗಳಿರಲಿಲ್ಲ. ಅಪ್ಪ ನನಗೆಂದು ಏನನ್ನೂ ಮಾಡಿಟ್ಟಿರಲಿಲ್ಲ. ನನ್ನ ಓದು ಡಿಗ್ರಿಗೆ ನಿಂತುಹೋಯಿತು. ನಾನೀಗ ಏನು ಅನ್ನುವುದು ಖಾತ್ರಿಯಾದ ಮೇಲೆ ‘ತೃತೀಯ ಲಿಂಗಿಗಳ ಸಂಘ’ದಲ್ಲಿ ಹೆಸರು ನೋಂದಾಯಿಸಿಕೊಂಡೆ.

ಚೇತನ್‌ ಅಲಿಯಾಸ್‌ ಚೇತನಾ ಬಿ.ಎ. ಅಲ್ಲಿ ಲಿಂಗ ಕಾಲಮ್ಮು ಇರಲಿಲ್ಲ. ಜಾತಿಧರ್ಮಗಳ ಕಾಲಮ್ಮೂ ಇರಲಿಲ್ಲ. ಅಲ್ಲಿದ್ದದ್ದು ಹುಟ್ಟಿನ ಕಾರಣದಿಂದ ನಿರ್ಧಾರ ವಾಗುವ ಜ್ಯೇಷ್ಠತ್ವ ಮತ್ತು ಕನಿಷ್ಠತ್ವಗಳು ಬಾಧಿಸದ ಮನುಷ್ಯತ್ವ ಮಾತ್ರ.

ಡಿಗ್ರಿ ಇರೋದ್ರಿಂದ ಬದುಕಿಗೊಂದು ಉದ್ಯೋಗ ಸಿಕ್ಕೇ ಸಿಗುತ್ತೆ ಎಂದುಕೊಂಡು ಪತ್ರಿಕೆಗಳ ವಾಂಟೆಡ್ಡು ಕಾಲಂ ನೋಡುತ್ತಿದ್ದೆ. ದೊಡ್ಡ ಕಂಪೆನಿಯೊಂದಕ್ಕೆ ವಾಕಿನ್‌ ಇಂಟರ್ವ್ಯೂಗೆ ಹೋಗಿದ್ದೆ. ನನ್ನನ್ನು ನೋಡಿದಾಗ ಸೆಲೆಕನ್‌ ಕಮಿಟಿಯವರ ಕಣ್ಣುಗಳು ಅರಳಿದ್ದವು. ನಾನೇನೆಂಬುದು ಗೊತ್ತಾದಾಗ ಮುಖ ಸಿಂಡರಿಸಿ “ವಿ ರಿಗ್ರೆಟ್” ಎಂದು ಇಂಗ್ಲೀಷಲ್ಲಿ ವಿಷಾದಿಸಿದ್ದರು. “ನನ್ನ ಎಲ್ಲಾ ಅಂಗಗಳೂ ಸರಿಯಿವೆ. ನನಗೆ ನನ್ನದೆನ್ನುವ ಸಂಸಾರ ಇಲ್ಲದ ಕಾರಣ ಕೊನೆತನಕ ಪ್ರಾಮಾಣಿಕವಾಗಿ ದುಡಿಯುತ್ತೇನೆ. ನಿಮಗೆ ನನ್ನ ಕೆಲಸ ಮುಖ್ಯವೋ, ನಾನು ಏನೆಂಬುದು ಮುಖ್ಯವೊ?” ಎಂದಾಗ “ಎರಡೂ ಮುಖ್ಯ. ಅಲ್ಲದೆ ನಮ್ಮ ದಾಖಲೆಗಳಲ್ಲಿ ಮೇಲು ಮತ್ತು ಫೀಮೇಲು ಎಂದು ಎರಡೇ ಕಾಲಮ್ಮು ಇರೋದು. ನಿನಗೆ ಅಪಾಯಿಂಟುಮೆಂಟು ಕೊಟ್ಟರೆ ಟೆಕ್ನಿಕಲ್ಲು ಪ್ರಾಬ್ಲಮ್ಮು ಹುಟ್ಟಿಕೊಳ್ಳುತ್ತೆ. ಅದರಲ್ಲಿ ಪಾರದರ್ಶಕತೆ ಇರೋದಿಲ್ಲ. ನಿನಗೆ ಕೆಲ್ಸಾ ಕೊಡೋದಿಕ್ಕಾಗೋದಿಲ್ಲ” ಎಂದು ನನ್ನನ್ನು ಸಾಗಹಾಕಲು ಯತ್ನಿಸಿದ್ದರು. “ನನಗೆ ಅದೊಂದು ಅಂಗ ಇಲ್ಲದ ಮಾತ್ರಕ್ಕೆ ಬದುಕುವ ಹಕ್ಕಿಲ್ವಾ? ಮಿದುಳೇ ಇಲ್ಲದೆ ಬದುಕುವ ಮಂದಿಗಳೆಷ್ಟಿಲ್ಲ? ಅದು ಇದ್ದು ನೀವು ಕಡಿದು ಕಟ್ಟೆ ಹಾಕಿದ್ದೇನು? ಹುಟ್ಸಿ ಹಾಕೋದೇ ಗಂಡುತನಾನಾ? ನಾನು ಹೆಣ್ಣಾಗಿದ್ರೆ ಕೆಲ್ಸ ಕೊಡ್ತಿದ್ದಿರಲ್ಲಾ ಸೂಳೇ ಮಕ್ಳ. ನೀವು ನಾಲಾಯಕ್‌ ನಾಮರ್ದಗಳು ಥೂ” ಎಂದು ಉಗುಳಿದ್ದೆ. ಅವರು ಮುಖ ಒರೆಸಿಕೊಂಡು ಅಟೆಂಡರನನ್ನು ಕರೆದು ನನ್ನನ್ನು ಸಾಗಹಾಕಿದ್ದರು.

ಇನ್ನೊಂದು ಕಂಪೆನಿಯಲ್ಲಿ ಕೆಲಸಕ್ಕೆ ಅರ್ಜಿ ಹಾಕುವಾಗ ಹೆಣ್ಣು ಎಂದು ನಮೂದಿಸಿದ್ದೆ. ಇಂಟರ್‌ವ್ಯೂ ಕಮಿಟಿಯಲ್ಲಿ ಎಂ.ಡಿ.ನೂ ಇದ್ದ. ಅವನು ಏನನ್ನೂ ಕೇಳಲಿಲ್ಲ. ನನ್ನನ್ನು ನೋಡಿ “ನಾಳೆನೇ ಕೆಲ್ಸಕ್ಕೆ ಸೇರ್ಕೊ” ಎಂದು ಅಪಾಯಿಂಟುಮೆಂಟು ಆರ್ಡರು ಕೊಟ್ಟ. ಮರುದಿನ ಕೆಲಸಕ್ಕೆ ಹಾಜರಾದೆ. ಛೇಂಬರಿಗೆ ಕರೆಸಿದ ಎಂಡಿ “ಸಂಜೆ ಏಳಕ್ಕೆ ಗೆಸ್ಟ್‌ ಹೌಸ್‌ಗೆ ಬಾ” ಎಂದ. ಹಿಂದೆ ರಾತ್ರಿ ಕಾರಲ್ಲಿ ನನ್ನನ್ನು ಹಾಕ್ಕೊಂಡು ಹೋದ ಮರ್ಯಾದಸ್ಥರ ನೆನಪಾಯ್ತು. ಇವನು ಒಬ್ನೆ ತಾನೇ ಎಂದುಕೊಂಡು ನಿರ್ಭಿಡೆಯಿಂದ ಹೋದೆ. ಅವನು ನನ್ನನ್ನು ಆಲಂಗಿಸಿ ಬಟ್ಟೆ ಕಳಚಿ ತಾನು ಕಾಂಡೋಮು ತೊಟ್ಟುಕೊಂಡ. ನಾನು ಎಲ್ಲಾ ತೆಗೆದು “ನೋಡು. ಇದೇ ನನ್ನ ಗುಪ್ತ ಸಂಪತ್ತು. ಸರ್ವಸ್ವವೂ ನಿನಗೇ” ಎಂದೆ. ಅವನು ಕೆಂಪು ಕೆಂಪಾಗಿ “ಥೂ! ತೊಟ್ಟುಕೋ ನಿನ್ನ ಬಟ್ಟೆ” ಎಂದು ಚೂಡಿದಾರ್‌ ಮೇಲೆಸೆದು ಯಕ್ಕಾ ಮಕ್ಕಾ ಬಯ್ದ. “ನಿನ್ನ ಉದ್ರೇಕ ಇಳ್ಸೋದಕ್ಕೆ ಯಾವುದಾದರೇನು? ಎಂದದ್ದಕ್ಕೆ “ಥೂ ಬಾಸ್ಟರ್ಡ್‌” ಎಂದು ಉಗಿದ. “ನಾ ಹೆಣ್ಣಾಗಿದ್ರೆ ನಿನ್ನಿಂದ ನನ್ನ ಹೊಟ್ಟೇಲಿ ಅದೇ ಹುಟ್ತಿತ್ತಲ್ವಾ” ಎಂದು ಕೇಳಿದೆ. ಅವನು ಸಿಟ್ಟಿನಿಂದ ಕುದಿದು “ನಾಳೆನೇ ನಿನ್ನನ್ನು ಡಿಸ್‌ಮಿಸ್‌ ಮಾಡ್ತೀನಿ” ಅಂದ. “ಡಿಸ್‌ಮಸ್‌ ಮಾಡಿದ್ರೆ ಕೋರ್ಟಿಗೆ ಹೋಗಿ ನಿನ್ನ ಮಾನ ಹರಾಜು ಹಾಕ್ತೀನಿ. ನೀ ಮಾತಾಡಿದ್ದೆಲ್ಲಾ ನನ್ನ ಮೊಬೈಲಲ್ಲಿ ರೆಕಾರ್ಡ್ ಆಗಿದೆ” ಎಂದೆ. ಅವನು ಇಳಿದು ಹೋದ. “ಏನು ಬ್ಲಾಕ್‌ಮೇಲ್‌ ಮಾಡ್ತಿದ್ದೀಯಾ” ಎಂದದ್ದಕ್ಕೆ “ಹುಡುಗಿಯರಿಗೆ ಕೆಲ್ಸ ಕೊಟ್ಟು ನೀನು ಮಾಡ್ತಿದ್ದಿದ್ದು ಅದನ್ನೇ ತಾನೆ? ಉಪ್ಪು ತಿಂದದಕ್ಕೆ ನೀರು ಕುಡಿ. ನಿನ್ನೆ ನೀ ಕೊಟ್ಟ ಅಪಾಯಿಂಟುಮೆಂಟು ಆರ್ಡರ್‌ ನನ್ನ ಕೈಯಲ್ಲಿದೆ. ನಾಳೆ ಕೊಡೋ ಡಿಸ್ಮಿಸ್ಸು ಆರ್ಡರ್‌ ಜತೆ ಅದೂ ಕೋರ್ಟಿಗೋಗುತ್ತೆ. ನಿನ್‌ ಹಣೇಬರಹ ಢಾಣಾ ಡಂಗುರವಾಗುತ್ತೆ” ಎಂದೆ. ಅವನು ತಲೆಗೆ ಕೈ ಹೊತ್ತು ಕೂತ. “ಎಷ್ಟು ಕೊಡ್ಬೇಕು?” ಎಂದು ಕೇಳಿದ. “ಐದು ಲಕ್ಷ” ಎಂದೆ. ಬ್ರೀಫ್‌ಕೇಸಿನಿಂದ ಚೆಕ್ಕು ಬರೆದು ಕೊಟ್ಟು “ಇನ್ನು ತಂಟೆಗೆ ಬರ್ಬೇಡ” ಅಂದ. ಅಲ್ಲಿಗೆ ಕಂಪೆನಿ ಋಣ ತೀರಿತು. ಅನಾಯಾಸವಾಗಿ ಬಂದ ಹಣದಿಂದ ಹೊಸ ಅವಕಾಶಗಳು ತೆರಕೊಂಡವು.

ಆದರೂ ಮನುಷ್ಯನಿಗೆ ಅದೇ ಯಾಕೆ ಮುಖ್ಯವಾಗುತ್ತೆ ಅನ್ನೋದು ಈಗಲೂ ಅರ್ಥ ಮಾಡೋದಿಕ್ಕೆ ನಂಗಾಗಿಲ್ಲ. ನಮ್ಮ ಪಕ್ಕದ ಮನೆಯಲ್ಲಿ ಒಬ್ಬರು ಅಂಕಲ್ಲು ಇದ್ದರು. ತುಂಬಾ ಸಜ್ಜನಿಕೆಯ ಸಾತ್ವಿಕ ಸ್ವಭಾವದವರು. ಹಣೆಗೆ ಯಾವಾಗಲೂ ಚಂದನದ ನಾಮ ಮತ್ತು ಮೇಲೊಂದು ಕುಂಕುಮದ ಬೊಟ್ಟು! ಬೆಳಗ್ಗೊಮ್ಮೆ, ಸಂಜೆ ಒಮ್ಮೆ ಅಶ್ವತ್ಥಕ್ಕೆ ಪ್ರದಕ್ಷಿಣೆ ಬರೋರು. ಮಾತಿಗೊಮ್ಮೆ ಗೀತೆಯ ಸಾಲುಗಳು. ಬೆಳಿಗ್ಗೆ ಲಲಿತಾ ಸಹಸ್ರನಾಮವಾದರೆ ಸಂಜೆ ಅಷ್ಟೋತ್ತರ ಶತನಾಮಾವಳಿ. ಮಗ ಅಮೇರಿಕಾದಲ್ಲಿ ಸಾಫ್ಟ್‌ವೇರು ಎಂಜಿನಿಯರು. ಅಂಕಲ್ಲಿಗೆ ಹಣಕ್ಕೇನೂ ತೊಂದರೆ ಇರಲಿಲ್ಲ. ನನ್ನನ್ನು ಎಳವೆಯಿಂದಲೇ ಬಲ್ಲೋರು. ನಾನು ಅವರನ್ನು ಅಪ್ಪನಷ್ಟೇ ಗೌರವಿಸುತ್ತಿದ್ದೆ.

ನಾನು ಚೂಡಿದಾರ ಹಾಕೋದಿಕ್ಕೆ ಶುರು ಮಾಡಿದ ಮೇಲೆ ಅಂಕಲ್ಲು ಕಣ್ಣರಳಿಸ ತೊಡಗಿದರು. ಪತ್ರಿಕೆಗಳಲ್ಲಿ ಲಿಂಗ ಪರಿವರ್ತನೆಯ ವಿಸ್ಮಯ: ಚೇತನಾ ಆದ ಚೇತನ್‌ ಎಂದು ನ್ಯೂಸು ಬಂದ ಮೇಲೆ ಅಂಕಲ್ಲು ಕಂಡಾಗೆಲ್ಲಾ ಹೆಚ್ಚು ಅಕ್ಕರೆಯಿಂದ ಮಾತಾಡಿಸ ತೊಡಗಿದರು. ಮನೆಗೆ ಬಂದರೆ ಮೈ ಕೈ ಮುಟ್ಟಿಯೇ ಮಾತಾಡಿಸೋರು. ಹುಡುಗಿಯರು ಅಷ್ಟೋತ್ತರ ಸಹಸ್ರನಾಮ ಕಲೀಬೇಕು. ಮನೆಗೆ ಬಂದ್ರೆ ಹೇಳ್ಕೋಡ್ತೀನಿ ಅನ್ನೋರು. ಒಂದು ದಿನ ಅವರು ಹೇಳಿದ ಸಮಯಕ್ಕೆ ಹೋದೆ. ಆಂಟಿ ದೇವಸ್ಥಾನಕ್ಕೆ ಹೋಗಿದ್ದರು. ಭಗವದ್ಗೀತೆ ಕೈಯಲ್ಲಿ ಹಿಡ್ಕೂಂಡಿದ್ದ ಅಂಕಲ್ಲು ಕಣ್ಣಲ್ಲಿ ಮಿಂಚು. ಬಾಗಿಲು ಹಾಕಿ ನನ್ನನ್ನು ಬಳಸಿ ಹಿಡ್ಕೂಂಡ್ರು. ಆಂಟಿಗೆ ಈಗ ಮೋನೋಫಾಸು ಏಜು. ಎಷ್ಟು ತಿಂಗ್ಳಾಯಿತು ಗೊತ್ತಾ ಉಪವಾಸ ಮಾಡೋದು. ನೀನು ಜಾಣೆ, ಅರ್ಥ ಮಾಡ್ಕೂಳ್ತಿಯಲ್ಲಾ ಎಂದಾಗ ಆಶ್ಚರ್ಯ ವ್ಯಕ್ತಪಡಿಸಿದ್ದಕ್ಕೆ “ಆಹಾರ, ನಿದ್ರಾ, ಭಯ, ಮೈಥುನ ಅನಿವಾರ್ಯ ಅವಸ್ಥೆಗಳು ಅಂತ ಶಾಸ್ತ್ರಗಳೇ ಹೇಳುತ್ತಿವೆ. ಮೊದಲಿನ ಮೂರಕ್ಕೆ ಯಾವ ತೊಂದರೆಯೂ ಇಲ್ಲ. ಕೊನೆಯದ್ದೇ ಇಲ್ಲದ್ದು. ನೀನು ಹೆದರ್ಕೋಬೇಡ. ನಿಂಗೇನೂ ಆಗದ ಹಾಗೆ ನಾ ನೋಡ್ಕೋತೀನಿ. ಇದು ತಪ್ಪಲ್ಲ. ಸರ್ವಜ್ಞನೇ ಹೇಳಿದ್ದಾನೆ ಅಚ್ಚುತನು ಬಿದ್ದ, ಅಜ್ಜಬಿದ್ದ, ದೇವೇಂದ್ರ ಎಚ್ಚತ್ತು ಬಿದ್ದ ಎಂದು. ಇನ್ನು ನಿನ್ನ ಅಂಕಲ್ಲು ಯಾವ ಲೆಕ್ಕ” ಎಂದು ಮುಂದಿನ ಹೆಜ್ಜೆ ಇಡಲು ಸಿದ್ಧರಾದಾಗ ಅವರನ್ನು ಬಲವಾಗಿ ದೂಡಿ, ಬಾಗಿಲು ತೆರೆದು ಓಡಿಕೊಂಡೇ ಮನೆಗೆ ಬಂದಿದ್ದೆ.

ಅಂದಿನಿಂದ ಅಂಕಲ್ಲು ಏನೇನೋ ಹೇಳಿ ಅಪ್ಪನ ಮನಸ್ಸು ಕೆಡಿಸೋದಿಕ್ಕೆ ಆರಂಭಿಸಿದರು. ಅಪ್ಪ ಒಮ್ಮೆ ಸ್ಥಿಮಿತ ಕಳಕೊಂಡು ನನ್ನನ್ನು ಏನೇನೋ ಅಂದು ಬಿಟ್ಟರು. ನೀನು ಯಾಕೆ ಹೀಗಾಡ್ತಿ ಅಪ್ಪಾ. ನಾನು ಅದೂ ಅಲ್ಲ, ಇದೂ ಅಲ್ಲ. ಅಂದ ಮೇಲೆ ಕಳ್ಕೊಳ್ಳೋದೇನಿದೆ? ಮಾನ ಅನ್ನೋದು ಸೆಕ್ಸಲ್ಲೇ ಇರೋದಾದ್ರೆ ನನ್ನ ಮಾನಭಂಗ ಮಾಡಲು ಯಾರಿಂದ ಸಾಧ್ಯ? ಅಂಕಲ್ಲು ಮಾತು ಕೇಳಿ ನೀನು ಹೀಗನ್ನೋದು ಸರೀನಾ? ಸದಾ ದೇವ್ರು, ದಿಂಡ್ರು, ಮದುವೆ, ಪೂಜೆ ಅಂತ ಓಡಾಡೋರನ್ನು ನಂಬ್ಲೇಬಾರ್ದು ಅಂತ ನಂಗೆ ಹೇಳ್ಕೂಟ್ಟೋನೇ ನೀನು. ಅದನ್ಯಾಕೆ ಮರೆತೆ? ಅಪ್ಪ ಮುಂದೆ ಮಾತಾಡಲಿಲ್ಲ. ಅಂಕಲ್ಲು ಮನೆಗೆ ಬರೋದನ್ನು ನಿಲ್ಲಿಸಿ ಬಿಟ್ರು.

ಅಂದಿನಿಂದ ಅಂಕಲ್ಲು ಮನೆಯನ್ನು ವಿಶೇಷವಾಗಿ ಗಮನಿಸತೊಡಗಿದೆ. ಅಂಕಲ್ಲು ತಿಂಡಿ ತಿಂದು ಮನೆ ಬಿಟ್ಟ ಮೇಲೆ ಒಮ್ಮೊಮ್ಮೆ ಸೂಟಿನವರು ಒಬ್ರು ಬರ್ತಿದ್ರು, ಆಂಟಿ ಒಬ್ಬರೇ ಇರುವಾಗ! ಬಂದವರು ಒಂದೆರಡು ಗಂಟೆ ಇದ್ದು ಹೋಗ್ತಿದ್ರು. ಆಂಟಿ ದೊಡ್ಡ ಸಂಪ್ರದಾಯಸ್ಥೆ. ಅವರ ಮನೆಯಲ್ಲಿ ಆಗಾಗ ಏನಾದರೂ ಹಬ್ಬಾನೋ, ಪೂಜೇನೋ ಇರ್ತಿತ್ತು.

ಭೀಮನಮವಾಸ್ಯೆ, ಮಂಗಳಗೌರಿ ಮತ್ತು ವರಮಹಾಕ್ಷ್ಮೀ ವ್ರತವನ್ನು ಅವರು ಬಹಳ ನಿಷ್ಠೆಯಿಂದ ಆಚರಿಸುತ್ತಿದ್ರು. ಹಣೆಯ ಕಾಸಗಲದ ಕುಂಕುಮ ಅವರ ಪಾತಿವ್ರತ್ಯಕ್ಕೆ ಸಾಕ್ಷಿ ಯಾಗಿತ್ತು. ಅಂತಹ ಸಾಧ್ವಿ ಬಗ್ಗೆ ಸಂಶಯ ಪಡಬಾರ್ದು. ಆದ್ರೂ ಅಂಕಲಿಲ್ಲದ ಹೊತ್ತು ಆ ಸೂಟಿನವರಿಗೆ ಅಲ್ಲೇನು ಕೆಲ್ಸ? ನಿಜವಾಗಿ ಸುಖ ಸಿಗದ್ದು ಅಂಕಲ್ಲಿಗೋ, ಆಂಟಿಗೊ? ವಾನ ಪ್ರಸ್ಥದ ಅಂಚಿನಲ್ಲಿ ಹೊಸಗಂಧಕ್ಕಾಗಿ ಜೀವ ಹಂಬಲಿಸುತ್ತದಾ?

ಅಮ್ಮನ ನೆನಪಾದಾಗಲೆಲ್ಲಾ ಮನಸ್ಸು ಕಸಿವಿಸಿಗೊಳ್ಳುತ್ತದೆ. ಅವಳು ಪಕ್ಕದ ಮನೆಯ ಆಂಟಿಯ ಹಾಗೆ ದೊಡ್ಡ ಬೊಟ್ಟು ಇಟ್ಟುಕೊಳ್ಳುತ್ತಿರಲಿಲ್ಲ. ಪೂಜೆ, ವ್ರತ ಮಾಡುತ್ತಿರಲಿಲ್ಲ. ಮನೆಯಲ್ಲಿ ಎಲ್ಲರಿಗಿಂತ ಮೊದಲು ಬೆಳಿಗ್ಗೆ ಏಳುತ್ತಿದ್ದೋಳು ಅವಳು. ಎಲ್ಲಾ ಕೆಲಸ ಮುಗಿಸಿ ರಾತ್ರೆ ಎಲ್ಲರಿಗಿಂತ ತಡವಾಗಿ ಹಾಸಿಗೆ ಸೇರುತ್ತಿದ್ದಳು. ಅವಳು ಅಪ್ಪನೊಡನೆ ಜಗಳವಾಡುವುದನ್ನು ನಾನು ಕಂಡಿರಲಿಲ್ಲ. ನಮ್ಮ ಆರ್ಥಿಕ ಸ್ಥಿತಿ ಅಷ್ಟೇನೂ ಚೆನ್ನಾಗಿರಲಿಲ್ಲ. ಅಮ್ಮನಲ್ಲಿ ಎರಡು ಬೆಂಡೋಲೆ, ಒಂದು ಮೂಗುತಿ, ಒಂದು ಉಂಗುರ, ಒಂದು ತಾಳಿ ಬಿಟ್ಟರೆ ಚಿನ್ನದ ಬೇರೆ ಒಡವೆಗಳಿರಲಿಲ್ಲ. ಸೀರೆಗಳ ಸಂಗ್ರಹವೂ ಇರಲಿಲ್ಲ. ಅವಳು ಚಿನ್ನಸೀರೆಗಳ ಬಗ್ಗೆ ಯಾರೊಡನೆಯೂ ಹೇಳಿಕೊಂಡವಳಲ್ಲ. ನಾನು ಚೇತನ್‌ ಹೋಗಿ ಚೇತನಾ ಆದ ಮೇಲೆ ಒಮ್ಮೊಮ್ಮೆ ನನ್ನನ್ನು ಬಿಗಿದಪ್ಪಿ ಕಣ್ಣೀರಾಗುತ್ತಿದ್ದಳು. “ನನ್ನ ಪೂರ್ವಾರ್ಜಿತ ಕರ್ಮಫಲದಿಂದ ಹೀಗಾಗಿರಬೇಕು. ಈ ಮಗು ಯಾವ ಸುಖವೂ ಇಲ್ಲದೆ ಬದುಕಬೇಕಲ್ಲಾ?” ಎಂದು ಒಂದು ಸಲ ಗಟ್ಟಿಯಾಗಿ ಹೇಳಿ ಅತ್ತುಬಿಟ್ಟಳು. ಎರಡು ಮಕ್ಕಳನ್ನು ಹೆತ್ತು ಅಮ್ಮ ಪಟ್ಟ ಸುಖವೇನು? ಆಕೆ ಎರಡು ಮಕ್ಕಳನ್ನು ಈ ದೇಶಕ್ಕೆ ಕಾಣಿಕೆಯಾಗಿ ನೀಡಲು ಕಾರಣನಾದ ನಮ್ಮಪ್ಪನಿಗೆ ಬಂದ ಭಾಗ್ಯವೇನು? ನನಗೆ ಗೊತ್ತಿಲ್ಲ. ಹಾಗಂತ ಅಮ್ಮನಲ್ಲಿ ಕೇಳಿ ಅವಳ ಕಣ್ಣೀರನ್ನೇಕೆ ಹೆಚ್ಚಿಸಬೇಕು ಎಂದು ಸುಮ್ಮನಾಗಿದ್ದೆ.

ಕಾಲೇಜಲ್ಲಿ ಚೂಡಿದಾರ ಹಾಕಿ ಹುಡುಗಿಯರ ಮಧ್ಯೆ ಕೂರುತ್ತಿದ್ದೇನಲ್ಲಾ ? ಆಗ ಹುಡುಗಿಯರ ಸ್ವಭಾವ ವ್ಯತ್ಯಾಸಗಳನ್ನು ಚೆನ್ನಾಗಿ ತಿಳಿದುಕೊಂಡಿದ್ದೆ. ಕಾಲೇಜು ಹುಡುಗಿಯರ ಮನಸ್ಸಲ್ಲಿ ಎಷ್ಟು ಆಸೆಗಳಿರುತ್ತವೆ? ಅವರು ಎಷ್ಟು ಕನಸು ಕಾಣುತ್ತಿರುತ್ತಾರೆ ? ಹರೆಯಕ್ಕೆ ಸಹಜವಾಗಿ, ಗಂಡೊಂದರ ಸೊಂಟ ಬಳಸಿ ಬೈಕಲ್ಲಿ ವಿಶ್ವ ಸುತ್ತುವ ಕನಸು ಕಾಣದವರೇ ಇಲ್ಲ. ತಮಗೆ ಇಷ್ಟ ಬಂದವನನ್ನು ಜಾತಿ, ಮತ, ಅಂತಸ್ತು ನೋಡದೆ ಮದುವೆ ಯಾಗುವ ಸನಾತನ ಸ್ವಯಂವರ ಪದ್ಧತಿ ಈಗಲೂ ಇರಬೇಕಿತ್ತು ಎಂದು ಪ್ರತಿದಿನ ಹಳಹಳಿಸುವವರು. ಕೊನೆಯಲ್ಲಿ ಏನಾದರೂ ತಾವು ದುರ್ಬಲವಾದ ಸಮಾಜದ ಸಮಸ್ತ ಸಂಪ್ರದಾಯಗಳನ್ನು ಪಾಲಿಸಿ, ಪತಿರಾಯರ ಇಚ್ಛೆಯಂತೆ ಜೀವನ ನಡೆಸುವುದು ತಮ್ಮ ಧರ್ಮ ಎಂಬ ತೀರ್ಮಾನಕ್ಕೆ ಬರುತ್ತಿದ್ದರು. ಪಕ್ಕದ ಮನೆಯ ಆಂಟಿ ಮತ್ತು ಅಂಕಲ್ಲುಗಳನ್ನು ಗಮನಿಸಿದ ಮೇಲೆ ಜಾತಿ ಮತ್ತು ಧರ್ಮಗಳು ಸ್ವರಕ್ಷಣೆಯ ಆಯುಧಗಳು ಎನ್ನುವುದು ನನಗೆ ಅರ್ಥವಾಗಿತ್ತು. ತನ್ನ ಬಾಳ ಸಂಗಾತಿಯನ್ನು ಆಯ್ಕೆ ಮಾಡುವ ಯಕಶ್ಚಿತ್‌ ಧೈರ್ಯವಿಲ್ಲದ ಮಂದಿಗಳು ಜಾತಿಧರ್ಮಗಳ ಹೆಸರಲ್ಲಿ ತಮ್ಮ ದೌರ್ಬಲ್ಯಗಳನ್ನು ಮರೆ ಮಾಡಿಬಿಡುತ್ತಾರೆ. ನಾನು ಎಷ್ಟೋ ಜಾತಿಗಳ, ಮತಗಳ ಸಮ್ಮೇಳನಗಳನ್ನು ನೋಡಿದ್ದೇನೆ. ಜಾತಿ ಜಗದ್ಗುರುಗಳ ಭಾಷಣ ಕೇಳಿದ್ದೇನೆ. ಒಂದೇ ಒಂದು ಜಾತಿ ಸಂಘಟನೆಯಾಗಲೀ, ಒಬ್ಬನೇ ಒಬ್ಬ ಜಗದ್ಗುರುವಾಗಲೀ “ಮಾನವರೆಲ್ಲರದ್ದೂ ಒಂದೇ ಜಾತಿ. ಯಾರು ಯಾರನ್ನೂ ಮದುವೆಯಾದರೂ ಆಗುವುದು ಮಕ್ಕಳೇ. ಜಾತಿ ದೇವರು ನಿರ್ಮಿಸಿದ್ದಲ್ಲದ ಅವಕಾಶವಾದಿ ಮನುಷ್ಯ ತನ್ನ ಸ್ವಾರ್ಥಕ್ಕಾಗಿ ನಿರ್ಮಿಸಿದ್ದು. ಜಾತಿಯ ಹೆಸರಲ್ಲಿ ದಡ್ಡರ, ಮೂರ್ಖರ ಸೃಷ್ಟಿಗೆ ಕಾರಣರಾಗಬೇಡಿ. ನಿಮ್ಮ ಜಾತಿಯಿಂದ ಹೊರಗೆ ಸಂಬಂಧ ಬೆಳೆಸಿ ಬುದ್ಧಿವಂತರ ಸೃಷ್ಟಿಗೆ ಕಾರಣರಾಗಿ. ನೋಬೆಲ್‌ ವಿಜೇತರ ಹೆಸರಲ್ಲಿ ಈ ದೇಶದವರು ವರ್ಷಕ್ಕೊಮ್ಮೆ ಕಾಣಿಸಿ ಕೊಳ್ಳಲಿ” ಎಂದು ಹೇಳಿದ್ದಿಲ್ಲ. ಶ್ರೀಮಂತರ ರಾಜಕೀಯ ತೀಟೆಗಳಿಗೆ ಸಾಧನವಾಗುತ್ತಿರುವ ಜಾತಿ ಸಂಘಟನೆಗಳು ಸಮಾನತೆಗಾಗಿ, ಸಾಮರಸ್ಯಕ್ಕಾಗಿ ಯಾಕೆ ದುಡಿಯುತ್ತಿಲ್ಲ ಎಂದು ನಾನು ವಿಷಾದಿಸುತ್ತಿರುತ್ತೇನೆ.

ಇದಕ್ಕೆ ಹೆಂಗಸರನ್ನು ಬಾಧ್ಯಸ್ಥರನ್ನಾಗಿ ಮಾಡುವಂತಿಲ್ಲ. ಜಾತಿ ಸಂಘಟನೆಗಳಲ್ಲಿ ಮಾತ್ರ ದುಡಿಯುವುದು ಸಮಾಜಕ್ಕಾಗಿ ಒಂದೇ ಒಂದು ಸಾರ್ಥಕ ಕೆಲಸವನ್ನು ಮಾಡಲಾಗದ ಪ್ರತ್ಯೇಕತಾವಾದಿಗಳೆನ್ನುವುದನ್ನು ನಾನು ಗಮನಿಸಿದ್ದೇನೆ. ನಮ್ಮ ಸಾಧನೆಯಲ್ಲದ ಹುಟ್ಟನ್ನು ಸಂಘಟನೆಗೆ ಕಾರಣವಾಗಿ ಬಳಸುವುದಕ್ಕೆ ಯಾವ ತಾತ್ತ್ವಿಕತೆಯೂ ಇಲ್ಲ; ತರ್ಕವೂ ಇಲ್ಲ. ಆದರೆ ಯಾಕೆ ಅವು ಬೆಳೆಯುತ್ತವೆ? ಹೆಣ್ಣುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದಕ್ಕೆ, ಬಡವರು ಶೋಷಣೆಯ ವಿರುದ್ಧ ತಿರುಗಿ ಬೀಳದಂತೆ ನೋಡಿಕೊಳ್ಳುವುದಕ್ಕೆ ಇರಬಹುದೆ?

ನಮ್ಮ ಈಚೆ ಮನೆಯಲ್ಲೊಬ್ಬರು ಆಂಟಿ ಇದ್ದರು. ಆರು ಹೆಣ್ಣು ಮಕ್ಕಳನ್ನು ಹೆತ್ತರೂ ನಿಲ್ಲಿಸಿರಲಿಲ್ಲ. ಒಂದು ಗಂಡು ಮಗು ಬೇಕೆಂದು ದೇವರ ಮೇಲೆ ಭಾರ ಹಾಕಿ ಪ್ರಯತ್ನ ಮುಂದುವರಿಸಿದ್ದರು. ಗಂಡು ಮಗು ಯಾಕೆ ಬೇಕು? ಗಂಡಸರು ಯಾರು? ಮೀಸೆ ಹೆಣ್ಣು ಬೆಕ್ಕಿಗೂ ಇದೆ. ಜಿರಲೆಗೂ ಇದೆ. ಯಾವ ಊರಲ್ಲಿ ಶಾಲೆ, ರಸ್ತೆ, ಆಸ್ಪತ್ರೆ ಸರಿಯಾಗಿದೆ? ಯಾವ ಊರಲ್ಲಿ ಶುದ್ಧ ನೀರು, ಶುದ್ಧ ಗಾಳಿ ದೊರೆಯುತ್ತದೆ? ಯಾವ ಊರಲ್ಲಿ ಅಭಿವೃದ್ಧಿಯೊಂದನ್ನೇ ಪ್ರಧಾನವಾಗಿಟ್ಟುಕೊಂಡು ದುಡಿಯುವ ಎಮ್ಮೆಲ್ಯೇ, ಸಂಸದ, ಮಂತ್ರಿ ಇದ್ದಾನೆ? ಇದನ್ನೆಲ್ಲಾ ಸಹಿಸಿಕೊಂಡು ತೆಪ್ಪಗೆ ಕೂರುವವರು ಗಂಡಸರಾ? ಓಟು ಬಂದಾಗ ಜಾತಿ, ಹಣ, ಹೆಂಡಕ್ಕೆ ತಮ್ಮನ್ನು ಮಾರಿಕೊಳ್ಳದವರು ಎಷ್ಟು ಮಂದಿ ಸಿಗಬಹುದು? ಜಾತಿ, ಕೋಮು ಎಂಬ ಕಾರಣಕ್ಕೆ ಪರಮ ನೀಚರನ್ನು, ಭ್ರಷ್ಟರನ್ನು ಗೆಲ್ಲಿಸಿ ಅಧಿಕಾರವನ್ನಿತ್ತು
ಸನ್ಮಾನ ಮಾಡುವವರು ಗಂಡಸರಾ? ಹೇಗಾದರೂ ಹಣ ಮಾಡುವುದು, ಇದ್ದಬದ್ದ ಮದುವೆಗಳಿಗೆ, ಮುಂಜಿಗಳಿಗೆ, ಪೂಜೆಗಳಿಗೆ ಹೋಗಿ ತಿಂದು ಕುಡಿದು ಬರೋದು, ರಾಜಕೀಯಕ್ಕಾಗಿ ಜಾತಿ ಬಳಸೋದು, ಒಳ್ಳೆಯ ಕೆಲಸ ಮಾಡೋರ ಕಾಲೆಳೆಯೋದು, ಒಣಗಿ ಹೋದ ಗಾಯಗಳನ್ನು ನೆಕ್ಕೀ ನೆಕ್ಕೀ ಪ್ರತೀಕಾರಕ್ಕೆ ಹೊಂಚು ಹಾಕುವುದು, ರಾತ್ರಿಯಾಗುತ್ತಲೇ ಅದೊಂದು ದಿನನಿತ್ಯ ಮಾಡಲೇಬೇಕಾದ ಡ್ಯೂಟಿಯೆಂಬಂತೆ ಬಡಪಾಯಿಯ ಮೇಲೇರಿ ಏದುಸಿರು ಬಿಟ್ಟು ಉದ್ರೇಕ ಇಳಿಸಿಕೊಳ್ಳುವುದು ಗಂಡುತನವಾ? ನಾಲ್ಕು ಜನ ಎರಡೇ ಎರಡು ದಿನವಾದರೂ ನೆನಪಿಟ್ಟುಕೊಳ್ಳುವ ಒಂದೇ ಒಂದು ಒಳ್ಳೆಯ ಕೆಲಸ ಮಾಡಲಾಗದವರು ಗಂಡಸರಾಗುತ್ತಾರಾ?

ಕಂಪೆನಿಯ ಎಂಡಿಯಿಂದ ಐದು ಲಕ್ಷ ಸಿಗುವುದಕ್ಕೆ ಮೊದಲು ಕೆಲಸವಿಲ್ಲದೆ ಅಲೆಯುವಾಗ ನನಗೆ ರಾಜಪ್ರಭುತ್ವವೇ ಒಳ್ಳೆಯದಿತ್ತು ಎಂದು ಅನ್ನಿಸಿದ್ದಿದೆ. ಹೈಸ್ಕೂಲಲ್ಲಿ ಸಮಾಜದ ಮೇಸ್ಟ್ರು ಇತಿಹಾಸದ ಪಾಠ ಮಾಡಿದ್ದು ನೆನಪಾಗುತ್ತಿತ್ತು. ಹಿಂದೆ ರಾಜರುಗಳು ಹಿಂಡುಗಟ್ಟಲೆ ಪತ್ನಿಯರನ್ನು, ಉಪಪತ್ನಿಯನ್ನು ಹೊಂದಿದ್ದರು. ಎಲ್ಲರ ಬಳಿಗೆ ದಿನಾ ಹೋಗೋದಿಕ್ಕೆ ಒಬ್ಬ ರಾಜನಿಂದ ಸಾಧ್ಯಾನಾ? ಉಪ್ಪು, ಖಾರ, ಹುಳಿ ಉಂಡ ದೇಹ ಪಾತಿವ್ರತ್ಯ ಕಳಕೊಳ್ಳಬಾರದಲ್ಲಾ? ಅದಕ್ಕೆ ಸದೃಢಕಾಯದ ಯುವಕರ ಬೀಜ ಒಡೆದು ಅಂತಃಪುರದ ಕಾವಲು ಗಾರರನ್ನಾಗಿ ಮಾಡುತ್ತಿದ್ದರು. ಅಂತಹ ಕೆಲಸವಾದರೂ ಸಿಗಬಾರದಾ ಎಂದು ಹಂಬಲಿಸುತ್ತಿದ್ದೆ. ರಾಜಪ್ರಭುತ್ವದಲ್ಲಿ ಒಬ್ಬ ರಾಜನಿಗೆ ಅಡ್ಡಬಿದ್ದು ಕಷ್ಟ ಹೇಳಿಕೊಂಡರಾಯಿತು, ಏನಾದರೂ ಪರಿಹಾರ ಸಿಗುತ್ತಿತ್ತು. ಈಗ ಪ್ರಜಾಪ್ರಭುತ್ವದಲ್ಲಿ ಒಂದು ಕೆಲಸವಾಗಬೇಕಾದರೆ….?

ಎಲ್ಲದಕ್ಕಿಂತ ಮೇಲಿನದು ರಾಜಕೀಯ ಅಧಿಕಾರ; ಅದರೆದುರು ಎಲ್ಲರೂ ನಾಮರ್ದರು ಎನ್ನುವುದು ಖಚಿತವಾಗಿ ನಾನು ರಾಜಕೀಯ ಪ್ರವೇಶಿಸಿದೆ. ಮೇಸ್ಟ್ರಿಗೆ, ಸಾಹಿತಿಗೆ, ಕಲಾಕಾರನಿಗೆ ಸಿಗದ ಗೌರವ ಅಧೋಲೋಕದ ಸಂಪರ್ಕ ಇರುವ ರಾಜಕಾರಣಿಗೆ ಸಿಗುತ್ತದೆ. ರಾಜಕಾರಣಿಗಳು ಎಂದ್ರೆ ಸಾಕು ಪ್ಯಾಂಟಲ್ಲೇ ಉಚ್ಚೆ ಹೊಯ್ಕೊಳ್ಳೋ ಅಧಿಕಾರಿಗಳಿದ್ದಾರೆ. ಅದಕ್ಕೇ ಓಟಿಗೂ ನಿಂತು ಬಿಟ್ಟೆ. ಲಿಂಗ ಕಾಲಮ್ಮಿನಲ್ಲಿ ಹೆಣ್ಣು ಎಂದು ತುಂಬಿ ಗೆದ್ದು ಬಂದೆ. ರಾಜಕಾರಣಕ್ಕೆ ಬೇಕಾದ್ದೇ ನನ್ನಂಥೋರು ಎನ್ನುವುದು ನಿಧಾನವಾಗಿ ನನಗೆ ಅರ್ಥವಾಯಿತು. ಮಹಿಳಾ ಮೀಸಲಾತಿಯಲ್ಲಿ ಪುರಸಭೆಯ ಅಧ್ಯಕ್ಷೆಯಾದೆ. ಗೆದ್ದ ಆರಂಭದಲ್ಲಿ ಪುರದ ಅಭಿವೃದ್ಧಿಗಾಗಿ ದುಡಿಯುವ ಕನಸು ಕಂಡೆ. ಒಂದು ದೊಡ್ಡ ಸುಂದರ ಉದ್ಯಾನ, ನದಿಗೆ ಕಿಂಡಿ ಅಣೆಕಟ್ಟು ನಿರ್ಮಿಸಿ ಜಲವಿಹಾರ, ದೊಡ್ಡ ಗ್ರಂಥಾಲಯ ನಿರ್ಮಿಸಿ ಓದುವ ಹವ್ಯಾಸ ನಿರ್ಮಾಣ, ವಿಶಾಲ ಕ್ರೀಡಾಂಗಣ ರಚನೆ ಒಂದೇ ಎರಡೇ. ಹಿಂದಿನ ಕಡತ ತೆಗೆಸಿ ನೋಡಿದರೆ ಆಹಾ ಹೆಗ್ಗಣಗಳು ಹೇಗೆ ಬಿಲ ತೋಡಿವೆ! ಬಿಲ್ಲು ವಿದ್ಯಾಪಾರಂಗತ ಸದಸ್ಯನೊಬ್ಬ ಹಿಂದಿನ ಬಾರಿಯ ಅಧ್ಯಕ್ಷೆಯ ದೌರ್ಬಲ್ಯ ಬಳಸಿಕೊಂಡು, ವಿರೋಧ ಪಕ್ಷದವರ ಬಾಯಿಗೂ ಸ್ವಲ್ಪ ತುರುಕಿ ಫೈಲುಗಳು ಟೆಕ್ನಿಕಲೀ ಪರ್ಫೆಕ್ಟು ಇರುವ ಹಾಗೆ ನೋಡಿಕೊಂಡಿದ್ದ. ಕುಡಿಯುವ ನೀರಿನ ಯೋಜನೆಯಲ್ಲಿ ಆದ ನ್ಯೂನತೆಗಳನ್ನು ಪುರಸಭಾ ನೌಕರನೊಬ್ಬ ನನ್ನ ಗಮನಕ್ಕೆ ತಂದ. ಹೆಗ್ಗಣಗಳಿಗೆ ಬೋನು ಸಿದ್ಧಪಡಿಸಲು ನಾನು ತಯಾರಿ ನಡೆಸಿದೆ. ಅದರ ವಾಸನೆ ಹಿಡಿದ ಬಿಲ್ಲು ನುಂಗಣ್ಣನು ಈಗಿನ ಅಧ್ಯಕ್ಷರು ಹೆಂಗಸಲ್ಲ. ಅವರನ್ನು ಅಧ್ಯಕ್ಷತೆಯಿಂದ ಕೆಳಗಿಳಿಸಿ ನಿಜವಾದ ಮಹಿಳೆಯನ್ನು ಆ ಸ್ಥಾನಕ್ಕೆ ನೇಮಿಸಿ ಎಂದು ಕೋರ್ಟಿಗೆ ಅರ್ಜಿ ಸಲ್ಲಿಸಿದ.

ಕೋರ್ಟು ವಿಚಾರಣೆ ನಡೆಸಿತು. ಜಿಲ್ಲಾ ಮುಖ್ಯ ವೈದ್ಯಾಧಿಕಾರಿಗಳ ಸಮ್ಮುಖದಲ್ಲಿ ಇಬ್ಬರು ಮಹಿಳಾ ವೈದ್ಯರು ನನ್ನ ಲಿಂಗಪರೀಕ್ಷೆ ನಡೆಸಿದರು. ಅರ್ಜಿದಾರನ ತಕರಾರರನ್ನು ಪುರಸ್ಕರಿಸಿದ ಕೋರ್ಟು ನನ್ನನ್ನು ಅಧ್ಯಕ್ಷಗಿರಿಯಿಂದ ಕೆಳಗಿಳಿಸಿತು. ವಿಚಾರಣೆ ಮುಂದುವರಿಸಿ ನಾನು ಸಾಮಾನ್ಯ ಮಹಿಳಾ ಕೋಟಾದಿಂದ ಸ್ಪರ್ಧಿಸಿ ಗೆದ್ದದ್ದು ಎನ್ನುವುದು ಗೊತ್ತಾಗಿ, ನನ್ನ ಸದಸ್ಯತ್ವವನ್ನು ಅನರ್ಹಗೊಳಿಸಿತು. ಪುರಸಭೆಯ ಬಿಲ್ಲು ನುಂಗಣ್ಣನ ಈ ಸಾಧನೆಯನ್ನು ಪತ್ರಿಕೆಗಳು ಮುಖಪುಟದಲ್ಲಿ ಪ್ರಕಟಿಸಿದವು. ಅವನ ಎಂಜಲು ನೆಕ್ಕಿದವರು ಪತ್ರಿಕೆಗಳಲ್ಲಿ ಅವನ ಫೋಟೋ ಹಾಕಿ ಇದು ಪ್ರಜಾಪ್ರಭುತ್ವದ ವಿಜಯ ಎಂದು ಅಭಿನಂದಿಸಿದರು. ಅಲ್ಲಿಗೆ ನನಗೆ ಖಚಿತವಾಯಿತು ಈ ವ್ಯವಸ್ಥೆಯಲ್ಲಿ ನನ್ನಂತಹ ದೈಹಿಕ ನಾಮರ್ದರಿಗೆ ಅವಕಾಶವಿಲ್ಲವೆನ್ನುವುದು.

ಈ ವಾರ್ತೆ ರಾಜಧಾನಿಯಲ್ಲಿ ಸಂಚಲನ ಉಂಟು ಮಾಡಿತು. ಸ್ವತಾಃ ಮುಖ್ಯಮಂತ್ರಿಗಳೇ ಆಸಕ್ತಿ ವಹಿಸಿ ನನ್ನನ್ನು ರಾಜಧಾನಿಗೆ ಕರೆಸಿಕೊಂಡು, ಅಂಗವಿಕಲರ ಕೋಟಾದಲ್ಲಿ ಒಂದು ಉದ್ಯೋಗವನ್ನು ನೀಡಿದರು. ಸರಕಾರೀ ಅನಾಥಾಶ್ರಮದಲ್ಲಿ ನಿಲ್ಲೋದಿಕ್ಕೆ ವ್ಯವಸ್ಥೆ ಮಾಡಿದರು. ಗುಪ್ತಚರ ವಿಭಾಗದಿಂದ ಸರ್ವೆ ನಡೆಸಿದಾಗ ರಾಜ್ಯದ ಕಾಲುಭಾಗದಷ್ಟು ಜನ ದೈಹಿಕ ನಾಮರ್ದರು ಎನ್ನುವುದು ಗೊತ್ತಾಗಿ ತಮ್ಮ ಪಕ್ಷದ ದೊಡ್ಡ ಸಭೆ ನಡೆಸಿದರು. ರಾಜ್ಯದ ಶೇಕಡಾ ಇಪ್ಪತ್ತೈದು ಭಾಗದಷ್ಟಿರುವ ಈ ಮಂದಿಗೆ ರಾಜಕೀಯ ಮೀಸಲಾತಿ ನೀಡಬೇಕು. ಅದಕ್ಕಾಗಿ ತಮ್ಮ ಪಕ್ಷ ಉಗ್ರ ಹೋರಾಟ ಮಾಡಲಿದೆಯೆಂದು ಪ್ರಕಟಿಸಿದರು.

ತೃತೀಯ ಲಿಂಗಿಗಳಿಗೆ ರಾಜಕೀಯ ಅವಕಾಶ ನಿರಾಕರಣೆ ತಪ್ಪು ಎಂದು ನನಗೆ ಹಿಂದೆಯೇ ಮನವರಿಕೆಯಾಗಿತ್ತಲ್ಲಾ? ಎಲ್ಲಾ ಕಡೆ ನಾಮರ್ದರೇ ತುಂಬಿಕೊಂಡಿದ್ದರೂ ದೈಹಿಕ ನಾಮರ್ದರಿಗೆ ಮಾತ್ರ ರಾಜಕೀಯ ಅವಕಾಶ ನಿರಾಕರಣೆ ತಪ್ಪು. ಅವರ ಸಂಖ್ಯೆಗೆ ಅನುಗುಣವಾಗಿ ಅವರಿಗೂ ಮೀಸಲಾತಿ ನೀಡಬೇಕು ಎಂಬ ಸೂಚನೆಯನ್ನು ಅಖಿಲ ಭಾರತ ತೃತೀಯ ಲಿಂಗೀ ಸಂಘಟನೆಗೆ ಕಳುಹಿಸಿಕೊಟ್ಟೆ. ಅದನ್ನು ಗಂಭೀರವಾಗಿ ಪರಿಗಣಿಸಿದ ಸಂಘಟನೆ ಅಂಕಿ‌ಅಂಶಗಳ ಆಧಾರ ಸಹಿತ ಮಾನವ ಹಕ್ಕು ಆಯೋಗಕ್ಕೆ ಪ್ರಸ್ತಾವನೆಯನ್ನು ಕಳುಹಿಸಿತು. ಅದು ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಸಿಬಿಟ್ಟಿತು.

ತೀರ್ಪು ಹೊರಬರಲು ಕಾದಿದ್ದೇನೆ. ನಿಮಗೆ ಯೋಗವಿದ್ದರೆ ಒಂದಲ್ಲಾ ಒಂದು ದಿನ ನಾನು ಮುಖ್ಯಮಂತ್ರಿಯಾಗಲಿದ್ದೇನೆ.
*****

ಕೀಲಿಕರಣ : ಎಂ ಎನ್ ಎಸ್ ರಾವ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಹಸಿರು
Next post ಮಿಂಚುಳ್ಳಿ ಬೆಳಕಿಂಡಿ – ೩೨

ಸಣ್ಣ ಕತೆ