Home / ಕಥೆ / ಕಾದಂಬರಿ / ಸಂಗಪ್ಪನ ಸಾಹಸಗಳು – ೮

ಸಂಗಪ್ಪನ ಸಾಹಸಗಳು – ೮

ಹೆಡ್‌ಮಾಸ್ಟರನ್ನೇನೋ ವರ್ಗ ಮಾಡಿಸಿದ್ದಾಯಿತು; ಆದರೆ ರಾಜೇಂದ್ರನ ಬಳಗವನ್ನು ಅವರಿಷ್ಟಪಟ್ಟರೆ ಎಲ್ಲಾದ್ರೂ ದೂರದೂರಲ್ಲಿ ಉದ್ಯೋಗ ಕೊಡ್ಸಿ ಸಾಗ್ ಹಾಕೋವರ್ಗೂ ತಯಾರು ಸಾವ್ಕಾರ್ ಸಂಗಪ್ಪ. ಆದ್ರೆ ಶಾನುಭೋಗರು ಎಚ್ಚರಿಕೆ ನೀಡಿದರು. “ಉದ್ಯೋಗ ಸಿಕ್ಕಿದರೆ ಇನ್ನೂ ಕೊಬ್ತಾರೆ. ಈಗ ಮಾಡೋ ಕೆಲ್ಸಾನ ಆಗ ರಜಾ ಹಾಕಿ ಬಂದು ಮಾಡ್ತಾರೆ; ಇಲ್ಲವೆ ಮಾಡುಸ್ತಾರೆ. ಇಷ್ಟಕ್ಕೂ ನಿಮ್ಮ ಹತ್ರ ಕೆಲ್ಸಕ್ಕೆ ಅಂತ ಅವ್ರೆಲ್ಲಿ ಬರ್ತಾರೆ?” ಸಂಗಪ್ಪನಿಗೆ ಸಮಾಧಾನವಾಗ್ಲಿಲ್ಲ. ಅವರ ಅಪ್ಪ ಅಮ್ಮಂದಿರಿಗೆ ಹೇಳಿ ಕಳಿಸಿದ. ಅವ್ರಲ್ಲಿ ಕೆಲವರ ಪ್ರಕಾರ ತಮ್ಮ ಮಕ್ಕಳು ಇರೋ ಚೂರುಪಾರು ಹೊಲ ನೋಡ್ಕಂಡು ಇರ್ತಾರಂತೆ ಅಂದರು; ಇನ್ನು ಕೆಲವರಿಗೆ ಕೆಲಸವೇನೋ ಬೇಕಾಗಿತ್ತು; ಆದ್ರೆ ಎಲ್ಲರೂ ಊರು ಬಿಡೋದಿಲ್ಲವಾದ್ರೆ ಕೆಲವರಿಗೆ ಕೆಲ್ಸ ಕೊಡ್ಸೋಕೆ ಸಂಗಪ್ಪ ಸಿದ್ಧನಿಲ್ಲ. ಯಾಕೇಂದ್ರೆ ಆಗ ತೊಂದರೆ ತಪ್ಪೋ ಸೂಚನೆ ಇಲ್ಲ. ಅದ್ರಿಂದ ಅವರು ಸಮಸ್ಯೆ ಆಗೋದು ನಿಲ್ಲಲಿಲ್ಲ.

ಈಗ ಮತ್ತೆ ಅವರು ಕಾಡ್ಸೋಕೆ ಶುರು ಮಾಡಿದರು; ಅವರು ಕಾಡಿಸಿದರು ಅನ್ನೋದು ಅಷ್ಟು ಸರಿಯಲ್ಲ; ಕಾಡುಸ್ತಿದಾರೆ ಅಂತ ಇವನೇ ತಿಳ್ಕೊಂಡ. ಅವರು ಅವರಿಗೆ ಸಹಜವಾದ ರೀತೀಲಿ ವರ್ತುಸ್ತಾ ಇದ್ರು. ಅವ್ರಿಗೆ ಇವನಂಥವನ ಮುಲಾಜು ಬೇಕಿರಲಿಲ್ಲ; ಇವನ ಲಕ್ಷ್ಮಣರೇಖೆ ಅವರಿಗೆ ಲೆಕ್ಕಕ್ಕಿಲ್ಲ. ಆದ್ದರಿಂದ ಕಾಡುಸ್ತಿದ್ದಾರೇಂತ ಇವನಿಗೆ ಅನ್ನಿಸ್ತು. ಅವರ ಒಂದೊಂದು ಕೆಲಸಕ್ಕೂ ಏನಾರ ಹರಕತ್ತು ತರ್ಬೇಕು ಅಂದ್ಕೊಂಡ. ಆದ್ರೇನು ಬಂತು, ಒಳಗೇ ದಿಗಿಲು ದೊಡ್ಡದಾಗ್ತ ಇತ್ತು. ಹೆದರಿಕೊಳ್ತಾರೆ ಅಂತ ಗೊತ್ತಿದ್ದಾಗ ಹೆದರಿಸೋದು ಸುಲಭ, ನೋಡಿ. ಏನ್ ಮಾಡಿದ್ರೂ ಹೆದರೋಲ್ಲ ಅಂದಾಗ ಸುಮ್ನೆ ಮೈಪರಚಿಕೊಳ್ಳಬೇಕಾಗುತ್ತೆ, ಸಂಗಪ್ಪನ ಸ್ಥಿತೀನೂ ಹೀಗೇ ಆಗ್ತಿತ್ತು. ಇಷ್ಟಾದ್ರೂ ಸುಮ್ಕಿದ್ದರೆ ತನ್ನದೇನು ಉಳೀತು!… ಅದ್ಸರಿ ಸ್ವಾಮಿ, ಅದು ಗೊತ್ತೇ ಇದೆ; ಈಗೇನಾಯ್ತು ಹೇಳಿ ಮೊದ್ಲು, ಹೀಗ್ಯಾಕೆ ಮಧ್ಯೆ ತಲೆ ಹಾಕ್ತೀರಿ ಅಂತೀರಾ? ಮಧ್ಯೆ ತಲೆ ಹಾಕೋದು ಬಾಯಿ ಹಾಕೋದು ಈ ಬರವಣಿಗೆ ಲಕ್ಷಣಾನೂ ಹೌದು ಓದುಗ ಮಹಾಶಯರೆ; ನಿಮ್ಮೊಂದಿಗೆ ಸಂವಾದ ಬೆಳುಸ್ತಾ ಈ ಬರವಣಿಗೆ ಜೊತೆ ಸಂಪರ್ಕ ಕಲ್ಪಿಸೋದು ನನ್ನ ‘ತಂತ್ರ’ ಅಂತ ಗೊತ್ತಾಗಿರಬೇಕಲ್ಲ? ಇಂಥ ವಿಷಯಗಳನ್ನು ಹೇಳುವಾಗ ನಿಮ್ಮ ಜೊತೆ ಸಂವಾದ ಬೆಳುಸದ್ದೆ, ನಿಮ್ಮನ್ನು ಆತ್ಮೀಯವಾಗಿ ಕಂಡುಕೊಳ್ದೆ ಇನ್ನು ಯಾರ ಬಳಿ ಹೋಗಲಿ?… ಎಲ್ಲಿಗೂ ಹೋಗೋದು ಬೇಡ, ಈಗ ಸಂಗಪ್ಪನ ಸಮಾಚಾರಕ್ಕೆ ಬರೋಣ.

….ಆಮೇಲೆ ಏನಾಯ್ತೂಂತೀರಿ, ರಾಜೇಂದ್ರನ ಬಳಗ ಊರಲ್ಲಿ ಒಂದು ನಾಟಕ ಆಡ್ಬೇಕೂಂತ ನಿರ್ಧಾರ ಮಾಡು; ಅದು ಸಾಮಾಜಿಕ ನಾಟಕ; ಹಳ್ಳಿಗೆ ಅಪರೂಪದ ನಾಟಕ. ಇಲ್ಲಿ ಏನಿದ್ರೂ ಸಿಂಹಾಸನ, ಗದೆ, ಕಿರೀಟಗಳೇ ಸ್ಟೇಜ್ ತುಂಬಾ ಇರ್ತಾ ಇದ್ದುವು. ನಾಟಕ ಅಂದ್ರೆ ಅದೇನೇ ಬೇರೆ ಇಲ್ಲ ಅನ್ನೋವಷ್ಟು ಪ್ರಭಾವ ಬೀರಿದ್ದುವು ದೇಶದ ಸಮಸ್ಯೆ ಅಥವಾ ಪ್ರಚಾರದಲ್ಲಿದ್ದವು. ಈಗ ಒಂದು ಸಾಮಾಜಿಕ ನಾಟಕ – ದೇಶದ ಸಮಸ್ಯೆ ಇರೊ ನಾಟಕ ಆಡ್ಬೇಕೂಂತ ತಯಾರಿ ನಡೆಸಿದರು.

ನಾಟಕದ ಪ್ರಾಕ್ಟಿಸು ಪ್ರಾರಂಭವಾಯ್ತು. ಹತ್ತಾರು ಹಾಡುಗಳೂ ಇದ್ದದ್ದರಿಂದ ಹಾರ್ಮೋನಿಯಂ ಮೇಷ್ಟರನ್ನೂ ಕರೆತರಲಾಗಿತ್ತು. ಪೂರ್ತಿ ಬೆಂಗಳೂರಿನ ಹವ್ಯಾಸಿ ತಂಡದ ಥರಾ ಇಲ್ಲಿ ನಾಟಕ ಆಡೋಕಾಗಲ್ಲ ಅಂತ ಇವರಿಗೂ ಗೊತ್ತಿತ್ತು. ಆದ್ದರಿಂದ ಹಳ್ಳಿಗರಿಗೆ ಹಿಡಿಸಬಹುದಾದ ಸಾಮಾಜಿಕ ನಾಟಕ ಆರಿಸಿದ್ದರು; ಅದರಲ್ಲಿ ಹಾಡುಗಳೂ ದಂಡಿಯಾಗಿದ್ದವು. ಇಲ್ಲದಿದ್ರೆ ಹಳ್ಳಿ ಜನ ಇದೆಂಥ ನಾಟಕ ಅಂತ ಒಂದೇ ಸಾರಿ ಮೂಗು ಮುರೀತಾರೆ; ಹುರಕೊಂಡು ತಂದ ಕಡ್ಲೆಕಾಯೇ ತಿಂದು ಮುಗುಸ್ಲಿಲ್ಲ. ಆಗ್ಲೆ ನಾಟಕ ಮುಗೀತು ಅಂತ ನಗಸಾರ ಮಾಡ್ತಾರೆ. ಹಾಗೇನಾದ್ರೂ ಆದ್ರೆ ಮುಂದೆಂದೂ ನಾಟಕ ಆಡದಂತೆ ಆದರೆ? ಮೊದಲೇ ಹಳ್ಳಿ ನಾಟಕ ಅಂದ್ರೆ ಹತ್ತು ಹನ್ನೊಂದು ಗಂಟೆಯೊಳಗೆ ಶುರುವಾಗಿ ಹೊತ್ತು ಹುಟ್ಟೋವರೆಗೂ ನಡೀಬೇಕು. ಇವರ ನಾಟಕ ಅಷ್ಟು ಹೊತ್ತಲ್ಲೇ ಇದ್ರೂ ಮೊದಲ್ನೆ ಕೋಳಿ ಕೂಗೋವರೆಗಾದ್ರೂ ಆಡಬೇಕಿತ್ತು. ಹಳ್ಳಿ ಜನಕ್ಕೆ ನಿಧಾನವಾಗಿ ಹೊಸದಕ್ಕೆ ಒಗ್ಗಿಸ್ಬೇಕೂಂತ ರಾಮು ಬಳಗಕ್ಕೆ ಗೊತ್ತಿತ್ತು. ಅದ್ರಿಂದ ಅವರು ಹಾಡು ಗೀಡು ಸಾಕಷ್ಟು ಸೇರಿಸಿದ್ದರು; ಸಿನಿಮಾ ಹಾಡುಗಳು ಮತ್ತು ಅವುಗಳ ದಾಟೀಲಿ ಬರೆದ ಹಾಡುಗಳೂ ಇದ್ದವು. ಈ ಊರಿನ ಮಟ್ಟಿಗೆ ಇದೊಂದು ಹೊಸ ಪ್ರಯೋಗವೇ.

ಹೊಸ ಪ್ರಯೋಗ ಅನ್ನೋದು ಇನ್ನೊಂದು ದೃಷ್ಟಿಯಿಂದಲೂ ನಿಜವಾಗಿತ್ತು. ಈ ಊರಲ್ಲಿ ಏನೇ ಕೆಲಸ ನಡೆದರೂ – ಈಗಾಗ್ಲೆ ಗೊತ್ತಿರೊ ಹಾಗೆ ಸ್ವಾತಂತ್ರ್ಯ ದಿನಾಚರಣೆ ಆಗ್ಬೇಕಾದ್ರೂ – ಸಂಗಪ್ಪನ ಅಪ್ಪಣೆ ಬೇಕು. ಈಗ ನಾಟಕ ಆಡೋದಿಕ್ಕೆ ಇವನ ಅನುಮತಿ ಕೇಳಬೇಕಾಗಿತ್ತು. ಈ ಊರಿನ ಸಂಪ್ರದಾಯದ ಪ್ರಕಾರ ನಾಟಕ ಪ್ರಾಕ್ಟಿಸು ಪ್ರಾರಂಭದ ದಿನ ರಾತ್ರಿ ಮನೆಯಲ್ಲೇ ಕಾದು ಕೂತ. ಅನುಮತಿ ಕೇಳಿಲ್ಲವಾದ್ರೂ ಈಗ ಕರ್ಯೋಕಾದ್ರೂ ಬರಬಹುದು ಅಂಡ್ಕೊಂಡ, ಎಷ್ಟು ಹೊತ್ತು ಕಾದ್ರೂ ಬರಲಿಲ್ಲ; ಸಿಟ್ಟೂ ಅಸಹಾಯಕತೆನೋ ಕೊತಕೊತ ಕುದಿತವೊ ಅಂತೂ ಉಸಿರು ಬಿಡದಂಗೆ ಕೂತಿದ್ದ ಸಂಗಪ್ಪ. ಹೆಂಡತಿ ಅಡಿಕೆಲೆ ತಂದಿಟ್ರೂ ಮುಟ್ಟಿರಲಿಲ್ಲ. ಮತ್ತೆ ಮತ್ತೆ ಬಂದು ನೋಡಿ ಆಕೆ ಸೀದಾ ಮಲಗೊ ಮನೆಗೆ ಹೋದಳು; ಮಂಚದ ಮೇಲೆ ಅಡ್ಡಾದಳು; ಕಾದಳು; ನಿಂತಳು; ಈತ ಬರ್ಲಿಲ್ಲ. ಇವತ್ತೇನು ಬರ್ತಾನೊ ಅಥವಾ ಹಂಗೇ ಯಾರ ಮನ್ಗೇನಾದ್ರೂ ಹೊರಟಿರಬಹುದಾ ಅಂತ ಅನ್ಮಾನ ಬಂತು. ಹೀಗನ್ನಿಸಿದ ಕೂಡ್ಲೆ ಕೂಗಿದಳು-ಸಹಜವಾಗಿ : “ಬರ್ರೀ ಒಳಗೆ; ಕಾಯ್ತಾ ನಿಂತಿದ್ದೀನಿ ಆವಾಗ್ನಿಂದ” ಮೌನಾವತಾರಿಯಾಗಿದ್ದ ಸಂಗಪ್ಪನಿಗೆ ಸಿಟ್ಟು ಮೂಗಿನ ಮೇಲಕ್ಕೆ ಬಂತು.

“ನಿಂಗ್ ಯಾವಾಗ್ಲೂ ಸ್ವಿಚ್ಚಿಂದೇ ಚಿಂತೆ. ಮಲೀಕಳೇ ಅಲ್ಲಿ; ಬರ್ತೀನಿ ಆಮ್ಯಾಲೆ’
ಎಂದು ಗದರಿದ.

ಹಾರ್ಮೋನಿಯಂ ಶಬ್ದ ಕೇಳಿಸೋದಿಕ್ಕೆ ಪ್ರಾರಂಭವಾಯ್ತು. ಬರಬರ್ತಾ ಜಾಸ್ತಿಯಾಯ್ತು; ಎದ್ದು ಒಳಹೋಗಿ ಬಿದ್ದುಕೊಂಡ. “ಯಾಕ್ರೀ ಹಿಂಗಿದ್ದೀರಾ?” ಎಂದ ಹೆಂಡತಿಗೆ ಒಂದೇಟು ಕೊಟ್ಟ “ಎಲ್ಲಾದ್ಕೂ ಬಾಯ್ ಹಾಕ್ತಾಳೆ ಬೋಳಿಮುಂಡೆ” ಎಂದ. ಆ ಹೆಂಡತಿ ಏನು ಸಾಮಾನ್ಯಳೆ? ಎಷ್ಟಾದ್ರೂ ಸಂಗಪ್ಪನ ಹೆಂಡತಿ! ಗೃಹಪತ್ನಿ! “ಯಾಕ್ರೀ ಹಂಗಂತೀರಾ? ನೀವಿನ್ನೂ ಬದ್ಕೇ ಇದ್ದಾಗ ನಾನ್ ಯಂಗ್ ಮುಂಡೆ ಆಗ್ತಿನಿ. ಸತ್ತಾನ ಸತ್ತರೆ ಮುಂಡೆ ಆಗ್ಬವ್ದು” ಅನ್ನೋದೆ? “ಮುಚ್ಕೊಂಡ್ ಬಿದ್ಕೊ ಕಂಡಿದ್ದೀನಿ ನಿಂದೆಲ್ಲ” ಎಂದು ಸಂಗಪ್ಪ ಮಲಗಿದಲ್ಲೇ ಬುಡುಮೆ ಕಾಯಂತೆ ಅತ್ತಿತ್ತ ಹೊರಳಾಡಿದಾಗ “ಅದು ನಂಗೊತ್ತಿಲ್ವ?” ಎಂದು ರಗ್ಗು ಹೊದ್ದುಕೊಂಡಳು.

ಬೆಳಗ್ಗೆ ಹಾರ್ಮೋನಿಯಂ ಮೇಷ್ಟ್ರಿಗೆ ಬುಲಾವ್ ಹೋಯಿತು. ಆತನೊಂದಿಗೆ ರಾಜೇಂದ್ರನ ಬಳಗವೆಲ್ಲ ಬಂತು. ಈ ಗುಂಪು ನೋಡಿ ಸಂಗಪ್ಪನಿಗೆ ಮೈಯೆಲ್ಲ ಉರೀತು. ಹಾರ್ಮೋನಿಯಂ ಮೇಷ್ಟ್ರು ಈ ಊರಿಗೆ ಹೊಸಬ. ಅವ್ನಿಗೆ ಚನ್ನಾಗ್ ರೋಫ್ ಹಾಕಿದ್ರೆ ಹೇಳದೆ ಕೇಳದೆ ಜಾಗ ಬಿಡ್ತಾನೆ ಅಂತ ಭಾವಿಸಿದ್ದ ಸಂಗಪ್ಪನ ಎದುರಿಗೆ ಇಡೀ ಗುಂಪೇ ನಿಂತಿದೆ. ಏನೂ ತೋಚದೆ ಗದರಿದ.

“ನಿಮ್ಮನ್ನೆಲ್ಲ ಯಾರ್ರಯ್ಯ ಕರುದ್ರು?”

“ಕೆಲವು ಕಡೆ ಕರೀದೇ ಇದ್ರೂ ಬರ್ತೇವೆ ನಾವು” – ರಾಜೇಂದ್ರ ಉತ್ತರಿಸಿದ.

“ನಮ್ಮ ಫ್ರೆಂಡ್‌ನ ಕರ್ದಿದ್ದೀರಿ. ಇನ್ನು ನಾವ್ ಬರದೇ ಇರಾಕಾಗುತ್ತ? ಊರಿಗೆ ಹೊಸಬ ಆತ; ತಿಂಡಿಗಿಂಡಿ ಕೊಡಾಣ ಅಂತಿದ್ರೇನೊ, ನಮಗೂ ಕೊಡಿ ಪರ್ವಾಗಿಲ್ಲ” – ಎಂದ ಭೀಮು.

ಫ್ರೆಂಡು ಅನ್ನೋದನ್ನ ಕೇಳಿ ಸಂಗಪ್ಪ ಸಂದಿಗ್ಧಕ್ಕೆ ಬಿದ್ದ. ಅದನ್ನು ಗಮನಿಸಿದ ಸೋಮು ಹೇಳಿದ: “ಈ ಹಾರ್ಮೋನಿಯಂ ಮೇಷ್ಟ್ರು ಬೇರೆ ಯಾರೂ ಅಲ್ಲ. ನಮ್ಮ ಜೊತ ಓದ್ತಾ ಇದ್ದೋನು. ನಮ್ಮ ಸ್ನೇಹಿತ. ಏನಾದ್ರೂ ರೋಫ್ ಹಾಕ್‌ಬೇಕೂಂತ ಇದ್ರೆ ಮರ್‌ತ್ಬಿಟ್ಟು ಮರ್ಯಾದೆ ಉಳಿಸಿಕೊಳ್ಳಿ.”

ಸಂಗಪ್ಪ ಕೂತ ಕುರ್ಚಿಯಲ್ಲೇ ಸಿಡಿಸಿಡಿಯಾದ. ಅವಮಾನ, ಅಸಹಾಯಕತೆ, ಆಕ್ರೋಶಗಳ ಸಂಗಮಮೂರ್ತಿ ಸಂಗಪ್ಪನ ಚರ್ಯೆಯನ್ನು ರಾಮ ನಸುನಗ್ತಾ ಗಮನಿಸಿದ; ಒಂದು ಮಾತು ಆಡ್ತಿಲ್ಲ. ಕಡೆಗೆ ಸಂಗಪ್ಪನೇ ಕೇಳಿದ:

“ಈಗೇನ್ರಯ್ಯ ಆಗ್ಬೇಕು ನನ್ನಿಂದ?”

“ಆದುನ್ನ ನೀವ್ ಹೇಳ್ಬೇಕು. ನಮ್ಮ ಹಾರ್ಮೋನಿಯಂ ಮೇಷ್ಟ್ರಿಂದ ನಿಮ್ಗೇನಾಗ್ಬೇಕು” – ರಾಜೇಂದ್ರ ಕೇಳಿದ.

“ನಿಮ್ಮಿಂದ ಊರೇನ್ ಉಳ್ಯಂಗಿಲ್ಲ. ದೊಡ್ಡೋರ್ನ ಕಂಡ್ರೆ ಭಯ ಭಕ್ತಿ ಒಂಚೂರೂ ಇಲ್ಲ. ಎಲ್ಲಾ ಹಾಳಾಯ್ತು ಈ ಊರ್ ದೊಡ್ಡಸ್ತಿಕೆ” – ಸಂಗಪ್ಪ ರೇಗಿದ.

“ಊರು ಅನ್ನೋದು ನಿಮ್ಮ ಮನೆಯಿಂದ ಹೊರಗಡೆ ಇದ್ಯೊ ಅಥವಾ ಇಲ್ಲಿ ಮಾತ್ರ ಇದ್ಯೊ ?” – ರಾಜೇಂದ್ರ ಕೇಳಿದ.

“ಇಲ್ಲೇ ಇದೆ ಅನ್ಸುತ್ತೆ ಈ ಹೊಟೇಲಿ” – ಭೀಮು ಗೇಲಿ ಮಾಡಿದ. ಇದೆಲ್ಲವನ್ನೂ ಕೇಳಿಸಿಕೊಳ್ಳುತ್ತಿದ್ದ ಸಂಗಪ್ಪನ ಹೆಂಡ್ತಿ ತಡೀಲಾರದೆ ಹೊರಬಂದು “ಅಲ್ರಪ್ಪ, ಇನ್ನು ಏನಾರ ಅಂದ್ಕಳ್ಳಿ, ನಮ್ಮ ಯಜಮಾನ್ರ ಮೈ ವಿಷಯ ಮಾತ್ರ ಅನ್‌ಬ್ಯಾಡಿ, ನಿಮ್ಮ ಧರ್ಮ” ಅಂತ ಕೋರಿಕೆ ಮಂಡಿಸೋದೆ? ಸಂಗಪ್ಪನ ಸ್ಥಿತಿ ಏನಾಗಬೇಕು ಯೋಚಿಸಿ, ಸಿಟ್ಟಿನ ಕಟ್ಟೆ ಒಡೀತು; ಅಬ್ಬರಿಸಿದ; “ಹೋಗೇ ಕತ್ತೆ ಮುಂಡೆ ಒಳೀಕೆ.” ಹೆಂಡತಿ ಅಷ್ಟಕ್ಕೆ ಹೋದರೆ ಏನು ಮರ್ಯಾದೆ ಉಳಿಯುತ್ತೆ ಕೇಳೇಬಿಟ್ಟಳು: “ಅದೇನ್ ಯಾವಾಗ್ಲೂ ಮುಂಡೆ ಅನ್ತೀರ? ನೀವಿನ್ನೂ ಸತ್ತೇ ಇಲ್ಲ. ಸತ್ತಮ್ಯಾಗಂದ್ರೆ ಏನೋ ಕೇಳೀರು ಕೇಳ್ಬವ್ದು. ಇದು ಯಾತ್ರುದು ಚಲ್ಲಾಟ ಅಗ್ಲಲ್ಲ ಅನ್ನಾದು? ಯಾವಾಗ್ನಿಂದ ನಾನ್ ಮುಂಡೆ, ಅದುನಾರ ಹೇಳ್ರಿ.

ಸಂಗಪ್ಪನಿಗೆ ಸಕತ್ ಬೇಜಾರಾಯ್ತು. ಹಲ್ಲಲ್ ಕಡಿದ. “ಲೇ, ಹೋಗ್ತಿಯೋ ಇಲ್ಲ ಕತ್ತು ಹಿಡಿದು…” ಎಂದು ಮುಂದುವರಿಸುತ್ತಿರುವಾಗಲೇ ಆಕೆ “ಕತ್ತು ಹಿಡ್ಯಾಕೆ ಸಿಗ್ಬೇಕಲ್ಲ ನಿಮ್ಮ ಕೈಗೆ. ಹಂಗೇನಾರ ಬಂದ್ರೆ ಮೇನ್ ಸ್ವಿಚ್ ಆಫ್ ಮಾಡ್ಬಿಡ್ತೀನಿ. ಓ… ಕೇಳಾಕಿಲ್ಲ” ಎಂದು ಮೂತಿ ತಿರುವಿ ಒಳಹೋದಳು. ಸಂಗಪ್ಪ ಸಡನ್ನಾಗಿ ಎದ್ದು “ಹಾಳೋಗೋಗ್ರಯ್ಯ ಎಲ್ಲ. ಅದೇನಾರ ಮಾಡ್ಕಳ್ಳಿ, ಅದೇನಾರ ಅರೆ ಹೊಡ್ಕಳ್ರಿ, ಹೋಗ್ರಿ ಇಲ್ಲಿಂದ” ಎಂದು ಅಬ್ಬರಿಸಿ ಒಳ ಹೋದ. ಇವರೆಲ್ಲ ಹೊರ ಹೋದರು. ಒಳಗೇ ನಗ್ತಾ.

ನಿಮಗೀಗ ಕುತೂಹಲ; ಒಳಗೆ ಹೋದ ಸಂಗಪ್ಪ ಏನ್ ಮಾಡಿರಬೇಕು? ಹೆಂಡತಿಗೆ ಎರಡು ಬಾರಿಸಿರಬಹುದೆ? ಸುಮ್ಮನೆ ಸಿಡಿಗುಟ್ತಾ ಬಿದ್ಕೊಂಡಿರಬಹುದೆ? ಬಯ್ದು ಸುಮ್ಮನಾಗಿರಬಹುದೆ ?… ಇತ್ಯಾದಿ ಪ್ರಶ್ನೆಗಳು ಎದ್ದಿರಬಹುದು. ಹೌದಲ್ಲ, ಏನ್ ಮಾಡಿದ ಸಂಗಪ್ಪ? ಏನ್ ಮಾಡೋಕೆ ಸಾಧ್ಯ ನಮ್ಮೀ ಸಂಗಪ್ಪನಿಗೆ?

ಒಳ ಬಂದವನೇ “ಬೇವರ್ಸಿ ಮುಂಡೆ…” ಅಂತ ಬಯ್ಯೋಕೆ ಹೊರಟಿದ್ದೇ ತಡ ಹೆಂಡತಿ ಮತ್ತೆ ಅದೇ ಮಾತು ಅಂದಳು. “ನೀವು ಸಾಯದೆ ಹಿಂಗೆಲ್ಲ ಹೆಂಗ್ ಅನ್ನಿಸ್ಕಳಾದು?” ಎಂದಳು. “ಎರಡು ಕೊಟ್ಟರೆ ನೋಡು” ಅಂತ ಎಗರಿಬಿಡೋಕೆ ಹೋದ; ಕೆನ್ನೆ ಸಿಗದೇ ಎದೇಗೆ ಬಿಗಿದ. ಹೆಂಡತಿ ಹಾಯ್ ಎಂದಳು. ನೋವಾದ್ರೂ ನಕ್ಕಳು. “ನಿಂಗೇನಾದ್ರೂ ಇಷ್ಟೆ; ಏನ್ಮಾಡಿದ್ರೂ ಇಷ್ಟೆ” ಎಂದು ಹೊರಬಂದು ಕುರ್ಚಿ ಮೇಲೆ ಕುಕ್ಕರಿಸಿದ.
* * *

ನಾಟಕದ ದಿನ ಹತ್ತಿರಕ್ಕೆ ಬರ್ತಾ ಇದ್ದಂತೆ ಸಂಗಪ್ಪನಿಗೆ ಮನಸ್ಸು ಅಲ್ಲೋಲ ಕಲ್ಲೋಲವಾಯ್ತು. ತನ್ನನ್ನು ಸಂಪೂರ್ಣವಾಗಿ ಧಿಕ್ಕರಿಸಿ ನಡೀತಿರೊ ಮೊಟ್ಟ ಮೊದಲ ಕಾರ್ಯಕ್ರಮ ಇದು. ಕಡೆಗೆ ಹೇಗಾದರೂ ಇದರಲ್ಲಿ ತಾನಿದ್ದೇನೆ ಅನ್ನಿಸಿಕೊಳ್ಳಬೇಕೆಂಬ ಮನಸ್ಸಾಯ್ತು. ಹಳೇ ಶಾನುಭೋಗರ ತಲೆಗೆ ಕೆಲ್ಸ ಸಿಕ್ತು.

“ಒಂದ್ ಕೆಲ್ಸ ಮಾಡಿ; ಯಾವಾದ್ರು ಒಂದು ಸಣ್ಣ ಪಾತ್ರ ಕೊಡ್ರಯ್ಯ, ಸಿನಿಮಾದಾಗೆ ಗೆಸ್ಟ್ ಆಕ್ಟರ್ ಇದ್ದ ಹಾಗೆ ಅಂತ ಅವನ್ನ ಒಲಿಸ್ಕೋತೀನಿ. ನೀವು ಮಾಡ್ಬಿಡ್ರಿ ಸುಮ್ಕೆ”
ಅಂದರು.

“ಇದ್ರಿಂದ ಏನ್ರಿ ಸಾಧನೆ ಆಗ್ತೈತೆ?”

“ಅಲ್ಲೇ ಇರೋದು ಗುಟ್ಟು, ಹುಡುಗರು ವಿರೋಧಿಸಿದ್ರೂ ಅವರ ನಾಟಕದಲ್ಲಿ ಪಾತ್ರ ಮಾಡಿದ್ರಪ್ಪ ನಮ್ಮ ಸಾವ್ಕಾರ್ರು ಅಂತ ಊರೂರೇ ಹೊಗಳುತ್ತೆ. ನೀವು ದೂರ ಇದ್ದಷ್ಟೂ ಈ ಹುಡುಗರ ವಿರೋಧಾನು ಹೆಚ್ಚುತ್ತೆ. ಹತ್ತಿರ ಇದ್ದೆ ಕೆಲ್ಸ ಸಾಧಿಸ್ಬೇಕು ಈಗಿನ ಕಾಲ್ದಾಗೆ. ಹಿಂದಿನ ದರ್ಪ ಅಷ್ಟು ನಡ್ಯೋಲ್ಲ ಸಾವ್ಕಾರ್ರೆ; ಕಾಲಕ್ಕೆ ಸರ್ಯಾಗಿ ಕಾಲ್ ಹಾಕ್ತ ಬುಡ ಮಾತ್ರ ಭದ್ರ ಮಾಡ್ಕೋಬೇಕು. ಇನ್ಮೇಲೆ ನೀವು ಹೀಗೇ ಇರ್ಬೇಕು ಈಗ್ನಿಂದಲೇ ಪ್ರಾರಂಭ ಆಗಿಬಿಡ್ಲಿ. ಹೇಗಿದ್ರೂ ನಿಮಗೆ ನಾಟಕದಲ್ಲಿ ಪಾತ್ರ ಮಾಡಿ ಅಭ್ಯಾಸ ಇದೆಯಲ್ಲ?”

ಸಂಗಪ್ಪನಿಗೆ ಶಾನುಭೋಗರ ತರ್ಕ ಸರಿ ಅನ್ನಿಸಿತು. “ಸರಿ ಸ್ವಾಮಿ, ನೀವೇ ಏನಾರ ಮಾಡಿ” ಎಂದು ಅವರಿಗೊಪ್ಪಿಸಿ ಹಿಂದೊಮ್ಮೆ ತಾನು ಮಾಡಿದ್ದ ಏಕೈಕ ಪಾತ್ರದ ಅದೂ ಸ್ತ್ರೀ ಪಾತ್ರದ ಹಾಡನ್ನು ಮೆಲುದನಿಯಲ್ಲಿ ಹೇಳತೊಡಗಿದ.

ಇದು ಯಾವಾಗ ಈತ ಪಾತ್ರ ಮಾಡಿದ್ದ? ಮಾಡಿದ್ದರೆ ಅದು ಇನ್ನು ಹೇಗೆ ಮಾಡಿರಬೇಕು? ಸ್ತ್ರೀ ಪಾತ್ರ ಅಂದ್ಮೇಲೆ ಅದಿನ್ನೆಷ್ಟು ಭವ್ಯವಾಗಿ ಬಂದಿರಬೇಕು! ಮುಂತಾಗಿ ಸಹೃದಯರಲ್ಲಿ ಪ್ರಶ್ನೆ, ಆಶ್ಚರ್ಯಗಳು ಉದ್ಭವವಾಗಿರಬೇಕು. ಹೀಗೇನಾದರೂ ಆದಾಗ ಅಲ್ಲಲ್ಲೇ ತಣಿಸಿದರೆ ನಿಮಗೂ ಬೇಜಾರಿಲ್ಲ, ನಮಗೂ ಭಾರವಿಲ್ಲ, ಹೇಳೇಬಿಡೋಣ. ಹೀಗೆಂದಾಕ್ಷಣ ಬರವಣಿಗೇಲಿ ಯಾವಾಗ್ಲೂ ಹೀಗೇ ಇರಬೇಕು, ಇರುತ್ತೆ ಅಂತೇನೂ ಅಲ್ಲ. ನಿಮ್ಮನ್ನೂ ಕುತೂಹಲಿಗಳನ್ನಾಗಿ ಮಾಡಿ ಕಾಯೋದೆ ನಮ್ಮ ‘ತಂತ್ರ’ವಾದಾಗ ಬೇರೇನೂ ಮಾಡೋಹಾಗಿಲ್ಲ; ಅದು ಅನಿವಾರ್ಯ. `ತಂತ್ರ’ ಚನ್ನಾಗೇ ರೂಪುಗೊಂಡಿದ್ದರೆ ನೀವೂ ಕಾಯ್ತಿರಿ; ಅನುಮಾನವಿಲ್ಲ. ಆದರೆ ಈಗ ಸಂಗಪ್ಪನ ಸ್ತ್ರೀ ಪಾತ್ರಕ್ಕೆ ಕಾಯ್ಸೊ ಅಗತ್ಯ ಏನೂ ಇಲ್ಲ.

ಸಂಗಪ್ಪನಿಗೆ ಆಗಿನ್ನೂ ಮದುವೆಯಾಗಿರಲಿಲ್ಲ: ಮಕ್ಕಳು ಆಗಿದ್ದವು ಅನ್ಸುತ್ತೆ. ಯಾಕೇಂದ್ರೆ ಈತ ಸ್ವಲ್ಪ ವೀರಾಗ್ರಣಿ; ಇತಿಹಾಸ ಸೃಷ್ಟಿಕರ್ತ. ಅವೆಲ್ಲಾ ಮಗುಮ್ಮಾಗಿ ಇದ್ದ ವಿಚಾರಗಳು – ಎಲ್ಲರಿಗೂ ಗೊತ್ತಿದ್ದರೂ, ಈಗ ಆ ಖಾಸಗಿ ಸಾಹಸಗಳು ಒತ್ತಟ್ಟಿಗಿಲ್ಲ. ಒಟ್ಟಿನಲ್ಲಿ ಅವನಿಗೆ ಮದುವೆ ಆಗಿರಲಿಲ್ಲ. ಆಗ ನಾಟಕದಲ್ಲಿ ಒಂದು ಪಾತ್ರ ಮಾಡಿದ. ಇವನು ಕುಳ್ಳ ಅಂತ, ಆಮೇಲೆ ಸ್ವಲ್ಪ `ಸಂಗ’ನ ಥರಾನೆ ಮಾತಾಡ್ತಾನೆ ಅಂತ ಹೆಣ್ಣು ಪಾತ್ರ ಕೊಡೋದು ಅನ್ನೋ ತೀರ್ಮಾನವಾಯ್ತು. ಆ ನಾಟಕ ಇವರಪ್ಪನ ಮೇಲುಸ್ತುವಾರಿಯಲ್ಲಿ ನಡೀತು; ತನ್ನ ಮಗನಿಗೆ ದೊಡ್ಡ ಪಾತ್ರ ಸಿಗಬೇಕು. ವಿಶಿಷ್ಟವಾಗಿರ್ಬೇಕು ಅಂತ ಅವರಿಗೂ ಆಸೆ. ಆದ್ರಿಂದ ನಾಯಕಿ ಪಾತ್ರವೇ ಸಿಗ್ತು, ಹೆಣ್ಣು ಪಾತ್ರ ಮಾಡಿ ಸೈ ಅನ್ನಿಸ್ಕೊಳ್ಳೋದು ಕಷ್ಟವಾದ್ರಿಂದ ಅದರಲ್ಲಿ ತಮ್ಮ ಹೆಸರು ಪಡೀಲಿ ಅನ್ನೂ ಆಸೇನೂ ಅವರಿಗಿತ್ತು; ಇವನು ಅದಕ್ಕೆ ಆ ವಯಸ್ಸಿನಲ್ಲಿ ಚೆನ್ನಾಗಿ ಸೆಟ್ ಆಗ್ತಿದ್ದ ಬೇರೆ.

ನಾಟಕದ ನಾಯಕಿ ಬಡವಿ; ಕಡು ಬಡವಿ ಎಂದರೂ ಸರಿ. ಇಡೀ ನಾಟಕದಲ್ಲಿ ಎಲ್ಲರೂ ಸರಿಸರಿಯಾದ ಡ್ರೆಸ್ ಮಾಡಿದ್ದಾರೆ. ಸಂಗಪ್ಪ ಮಾತ್ರ ಹರಿದ ಹಳೇಬಟ್ಟೆ ಹಾಕ್ಬೇಕು. ನಾಟಕದ ದಿನ ಪಟ್ಟು ಹಿಡಿದ ತಾನು ರೇಷ್ಮೆ ಸೀರೇನೇ ಉಡೋದು ಅಂತ. ಇದು ನಾಟಕದ ಮೇಷ್ಟ್ರಿಗೆ (ಅಂದರೆ ಹಾರ್ಮೋನಿಯಂ ಮೇಷ್ಟ್ರಿಗೆ) ಪೀಕಲಾಟಕ್ಕಿಟ್ಟುಕೊಂಡಿತು. ಎಷ್ಟೆಷ್ಟೋ ಹೇಳಿದರು; ಈತ ಕೇಳಲಿಲ್ಲ. “ಅವೆಲ್ಲ ಸಾಧ್ಯವಿಲ್ಲ; ನಾನೇನು ಉಳಿದೋರಿಗೆ ಕಡೇನ? ನಾನು ಹಳೇ ಬಟ್ಟೆ ಹಾಕ್ಕೋಬೇಕು ಅನ್ನಂಗಿದ್ರೆ ಉಳಿದೋರಿಗೆ ಕಡೇಪಕ್ಷ ನನ್ ಲವ್ ಮಾಡೋನ್ಗೆ ಹಂಗೇ ಮಾಡ್ರಿ” ಎಂದುಬಿಟ್ಟ. “ಅಲ್ಲಪ್ಪ ಅವ್ನು ನಾಟಕದ ನಾಯಕ; ನಿನ್ನ ಲವ್ ಮಾಡ್ತಾನೆ; ಅವನು ಸಾಹುಕಾರರ ಹುಡುಗ…” ನಾಟಕದ ಮೇಷ್ಟ್ರು ಹೇಳುತ್ತಿದ್ದರು. ಈತ “ನಾನೂ ಸಾವ್ಕಾರ್ರ ಹುಡುಗ್ನೇ” ಎಂದುಬಿಟ್ಟ. “ಅದಲ್ಲ ಮಾರಾಯ ನಾಟಕದಲ್ಲಿ ಅವ್ನು ಸಾವ್ಯಾರ್ರ ಹುಡುಗ; ಆದ್ರೂ ಬಡವರ ಹುಡ್ಗೀನ ಪ್ರೇಮಿಸ್ತಾನೆ” ಎಂದು ವಿವರಿಸಿದರು ಅವರು. ಇವನು ಪಟ್ಟುಬಿಡಲಿಲ್ಲ. “ಅವನು ನಿಜವಾಗ್ಲೂ ಪ್ರೇಮಿಸೋದಾದ್ರೆ ಹುಡುಗಿ ಥರಾ ಹಳೆಬಟ್ಟನೆ ಹಾಕ್ಕೊಳ್ಳಲಿ. ಏನ್ ತಪ್ಪು?” ಎಂದು ಕೇಳಿದ.

ಸರಿ, ಸಮಸ್ಯೆ ಸಂಗಪ್ಪನ ಅಪ್ಪನ ಹತ್ತಿರ ಬಂತು. ಅವರು ಹೇಳಿ ನೋಡಿದರು; ಏನೇ ಹೇಳಿದ್ರೂ ಹೇಗೆ ಹೇಳಿದ್ರೂ ಇವನು ಕೇಳಲಿಲ್ಲ. ಅದಕ್ಕೆ ಒಂದು ಕಾರಣವೂ ಇತ್ತು. ನಾಯಕನ ಪಾತ್ರ ಮಾಡಿದ ಹುಡುಗ ವಾಸ್ತವವಾಗಿ ಬಡವರವನು. ಅವನು ಸಂಗಪ್ಪನನ್ನು ಅಣಕಿಸಿದ್ದನಂತೆ; “ನಾಟಕದಾಗೆ ನಿನ್ನ ಸಾವ್ಕಾರ್ಕೆ ಏನೂ ನಡ್ಯೊಲ್ಲ ನೋಡ್ತಿರು. ಅವತ್ತು ನಾನು ಸೂಟು ಬೂಟು ಹಾಕ್ಕಂಬ್ತಿನಿ. ನೀನು ಹರಿದ ಹಳೇ ಸೀರೆ ಹಾಕ್ಕಂಬ್ತೀಯ” – ಹೀಗೆ ಗೇಲಿ ಮಾಡಿ ನಕ್ಕಿದ್ದನಂತೆ. ಆಗ ಇವನು ಪ್ರತಿಜ್ಞೆ ಮಾಡಿದ; “ಎಲೈ ಬಡಹುಡುಗನೇ ಕೇಳು; ನಾಟಕದಲ್ಲಿ ನಾನು ರೇಷ್ಮೆ ಸೀರೆ ಉಡ್ತೇನೆ; ಉಟ್ಟೇ ಉಡ್ತೇನೆ ಇಲ್ಲವಾದ್ರೆ ನಿನಗೆ ಹಳೇ ಹರಿದ ಬಟ್ಟೆ ಉಡಿಸೊ ಹಾಗೆ ಮಾಡ್ತೇನೆ. ಇದು ನನ್ನ ಪ್ರತಿಜ್ಞೆ”

ಇದರ ಫಲ ಈಗಿನ ಹಟ. ಅಪ್ಪ ಹೇಳಿದರೂ ಕೇಳಲಿಲ್ಲ; ಯಾರು ಹೇಳಿದರೂ ಕೇಳಲಿಲ್ಲ. ಅಪ್ಪನ ಹತ್ತಿರ ತನ್ನ ಪ್ರತಿಜ್ಞೆಯ ಸಂಗತಿಯನ್ನು ಬಿತ್ತರಿಸಿ – ನಿನ್ನ ಮಗನ ಮರ್ಯಾದೆ ಹೋಗಬೇಕು ಅಂತ ಇಷ್ಟವೇ ನಿನಗೆ? ನನ್ನ ಮರ್ಯಾದೆ ಅಂದ್ರೆ ನಿನ್ನ ಮರ್ಯಾದೆ; ನಿನ್ನ ಮಯ್ಯಾದೆ ಅಂದ್ರೆ ಊರಿನ ಮರ್ಯಾದೆ. ಊರಿನ ಮಯ್ಯಾದೆ ಅಂದ್ರೆ..” ಹೀಗೆ ಹೇಳುತ್ತಿರುವಾಗ ಅಪ್ಪ ಹೇಳಿದ; “ಸಾಕು ಮಾಡು ಮಗನೆ ಸಾಕು ಮಾಡು. ನನಗೂ ಮರ್ಯಾದೆ ಮುಖ್ಯ.”

ತಕ್ಷಣ ನಾಟಕದ ಮೇಷ್ಟ್ರಿಗೆ ಅಪ್ಪ ಆಜ್ಞೆ ಮಾಡಿದ; “ನನ್ನ ಮಗ ರೇಷ್ಮೆ ಸೀರೆಯನ್ನು ಉಟ್ಟುಕೋಬೇಕು. ಅದನ್ನು ಕಂಡರೂ ಕಾಣದಂಗೆ ಒಂದೆರಡು ಕಡೆ ಚಿಕ್ಕದಾಗಿ ತೇಪೆ ಹಾಕಬೇಕು. ಇದಿಷ್ಟು ಸಾಕು. ಇದು ನನ್ನ ತೀರ್ಮಾನ.”

ಅವರ ತೀರ್ಮಾನ ಮೀರೊಹಾಗಿಲ್ಲ ಅಂತ ಎಲ್ಲರಿಗೂ ಗೊತ್ತು. ಅಂತೂ ಸಂಗಪ್ಪ ಬಡಸ್ತ್ರೀ ಪಾತ್ರದಲ್ಲಿ ಶ್ರೀಮಂತ ಸೀರೆ ಧರಿಸಿ ವಿಜೃಂಭಿಸಿದ.
* * *

ಅದು ಹಳೇ ಸಮಾಚಾರ, ಈಗ, ಈ ಕ್ಷಣದ ತುರ್ತಿನ ಸಮಾಚಾರಕ್ಕೆ ಬರೋಣ. ಶಾನುಭೋಗರು ವಿಷಯ ಎತ್ತಿದಾಗ ಸಂಗಪ್ಪ ಇಳೀತಾ ಇದಾನೆ ಅನ್ನಿಸಿದರೂ ರಾಜೇಂದ್ರನ ಬಳಗ ತಕ್ಷಣ ಒಪ್ಪಲಿಲ್ಲ. ಯಾವುದೂ ಆಮೇಲೆ ಹೇಳ್ತೇವೆ ಎಂದರು. ಎಲ್ಲರೂ ಕೂತು ಯೋಚಿಸಿದರು. ಪಾತ್ರ ಮಾಡೋದಾದರೆ ಮಾಡಲಿ ನಮ್ಮ ಗಂಟೇನು ಹೋಗೋದು ಅನ್ನೊ ಅಭಿಪ್ರಾಯ ರೂಪುಗೊಂಡ್ತು. ಆದರೆ ಈಗ ನಮ್ಮ ಯಾವ ಪಾತ್ರಾನೂ ಖಾಲಿ ಇಲ್ಲವಲ್ಲ? ಒಂದು ಉಪಾಯ ಹೊಳೀತು. ನಾಟಕದಲ್ಲಿ ಹೇಗಿದ್ರೂ ಬಡತನದ ವಿಷಯ ಬರುತ್ತೆ. ಶ್ರೀಮಂತ ಯಮನ ರೀತೀಲಿ ಬಡ ರೈತನನ್ನು ಕಾಡಿಸಿದ ಅನ್ನೋ ಹಾಗೆ ಯಮನ ಪಾತ್ರ ಸಂಗಪ್ಪನಿಗೆ ಕೊಡೋದು; ಅವನಿಂದ ಹೆಚ್ಚು ಹಣ ವಸೂಲಿ ಮಾಡೋದು; ಹಣ ಕೊಡೋಕೆ ಆಗ್ದೇ ಇರೋ ಪಾತ್ರಧಾರಿಗಳಿಗೆ ಹಣ ಏನ್ ಕೊಡ್ಬೇಡಿ ಅನ್ನೋದು; ಸಂಗಪ್ಪನ ಹಣ ಅಡ್ಜಸ್ಟ್ ಮಾಡೋದು – ಇದಿಷ್ಟು ತೀರ್ಮಾನವಾಯ್ತ. ಶಾನುಭೋಗರಿಗೆ ಸುದ್ದಿ ಹೋಯ್ತು. “ಚಿಕ್ಕಪಾತ್ರ – ಆದರೆ ಯಮರಾಯನ ಪಾತ್ರ ಚನ್ನಾಗಿದೆ; ಚನ್ನಾಗಿ ಒಪ್ಪುತ್ತೆ. ಅದನ್ನ ಅವರ್ ಮಾಡ್ಲಿ, ಮೂರ್ನಾಲ್ಕು ದಿನ ಪ್ರಾಕ್ಟಿಸಿಗೆ ಬಂದರೂ ಸಾಕು. ನಾಟಕದ ಖರ್ಚಿಗೆ ಕಡೇಪಕ್ಷ ಇನ್ನೂರೈವತ್ತು ರೂಪಾಯಿ ಕೊಡ್ಬೇಕು.”

ಸಂಗಪ್ಪನೂ ಸರಿ ಎಂದ. ಪಾತ್ರ ಚೆನ್ನಾಗಿ ಮಾಡಿ ಜನರ ಮೆಚ್ಚುಗೆ ಗಳಿಸೋದು ಹುಡುಗರ ವಿರೋಧ ಇದ್ದರೂ ಅನುಸರಿಸಿಕೊಂಡ ಅಂತ ದೊಡ್ಡಸ್ತಿಕೆ ಸಂಪಾದಿಸೋದು; ಆ ಮುಖಾಂತರ ಭದ್ರ ಆಗೋದು…

ನಾಟಕದ ದಿನ; ನಾಟಕ ಶುರುವಾಯ್ತು. ರಾಮು ಮೊದಲೇ ನಿವೇದಿಸಿಕೊಂಡಿದ್ದ: “ಯಾರೂ ನಾಟಕ ನಡೀವಾಗ ಬಂದು ಹಾರ ಹಾಕಬಾರದು; ಒನ್ಸ್ ಮೋರ್ ಅಂತ ಕೂಗಬಾರು. ಕೂಗಿದ್ರೂ ಇನ್ನೊಂದ್ಸಾರಿ ಹೇಳೊಲ್ಲ.. ನಾಟಕದ ಓಟಕ್ಕೆ ಭಂಗಬರುತ್ತೆ. ತಪ್ಪು ತಿಳ್ಕೊಬಾರು. ಅಂತೂ ಸ್ಟೇಜ್ ಮೇಲೆ ಒಂದು ನಾಟಕ ನಡೀವಾಗ್ಲೆ ಹಾರ ಹಾಕೋದು. ಮೆಡಲ್ ಹಾಕೋದು, ಮೈಕ್‌ನಲ್ಲಿ ಹೇಳೋದು ಮಾಡಕೂಡದು, ಮಧ್ಯದಲ್ಲಿ ಸ್ವಲ್ಪ ಬಿಡುವು ಕೊಡ್ತೀವಿ. ಆಗ ಯಾರು ಬೇಕಾದ್ರೂ ಬಂದು ಬೇಕಾದವರಿಗೆ ಬೇಕಾದ್ದು ಕೊಡಬಹುದು….”

ನಡುನಡುವೆ ಒನ್ಸ್ ಮೋರ್ ಅನ್ನೋದು ಎರಡು ಮೂರ್ ಸಾರಿ ಬಂತಾದ್ರೂ ಮತ್ತೆ ಹೇಳೊಲ್ಲ ಅಂತ ಗೊತ್ತಾದ ಮೇಲೆ ಜನವೂ ಸುಮ್ಮನಾದರು; ನಾಟಕ ಮಧ್ಯಭಾಗಕ್ಕೆ ಬಂದಾಗ ಸಂಗಪ್ಪ ಯಮನಾಗಿ ಬಂದ; ಬಡವ ಮಲಗಿದ್ದಾನೆ; ಸಾಹುಕಾರನೇ ಯಮನಾಗಿ ಬಂದಿದ್ದಾನೆ.

ಗದೆ ಹೆಗಲಿಗಿಟ್ಟು, ಇನ್ನೊಂದು ಕೈಯಲ್ಲಿ ಹಗ್ಗ ಹಿಡಿದು ಬಂದು “ಎಲೈ ಬಡ ಬಡ್ಡಿಮಗನೆ; ನನ್ನ ಅಸಲು ಕೊಡದಿದ್ದರೆ ಹೋಗಲಿ, ಬಡ್ಡಿಯನ್ನಾದರೂ ಕೊಡಬಾರದೆ? ನಿನಗೆ ನಿಯತ್ತೆಂಬುದೇ ಇಲ್ಲವೆ? ಕೊಟ್ಟವರ ಒಡವೆ ಕೊಡದಿರುವ ನಿನ್ನ ಘೋರ ಪಾಪಕ್ಕೆ ನರಕದಲ್ಲಿ ಕೊತಕೊತ ಕುದಿಯುವ ಎಣ್ಣೆಯಲ್ಲಿ ಬೇಯಿಸುತ್ತೇನೆ… ನೀನು ವಿಲವಿಲ ಒದ್ದಾಡುವ ರಮ್ಯ ಮನೋಹರ ದೃಶ್ಯವನ್ನು ದಿಟ್ಟಿಸಿ ಅಮೃತಾನಂದ ಪಡುತ್ತೇನೆ. ಹ್ಹಹ್ಹಹ್ಹ…” ಎಂದು ದೀರ್ಘವಾಗಿ ನಕ್ಕ. ಗದೆಯನ್ನು ಇಳಿಸಿ ‘ಹೂಂ’ ಎಂದು ಮತ್ತೆ ಹೆಗಲಿಗೆಸೆದುಕೊಂಡು ಹಾಡು ಶುರು ಮಾಡಿದ; ಗಂಟಲಿದ್ದಷ್ಟೂ ಕಿರುಚಿದ. ಸಾವ್ಕಾರ, ಊರಿನ ದೊಡ್ಡ ಮನುಷ್ಯ ಹಾಡು ಹೇಳಿದರೆ ಪ್ರೇಕ್ಷಕರು ಸುಮ್ಮನಿರಲಾದೀತೆ? ಇವರು ಸುಮ್ಮನಿದ್ದರೆ ಮುಂದೆ ಅವನು ಸುಮ್ಮನಿರುತ್ತಾನೆಯೇ? ಸರಿ, ಯಾರೊ “ಒನ್ಸ್‌ಮೋ‌ರ್” ಎಂದು ಕೂಗಿದರು. ನಾಟಕದ ಮೇಷ್ಟ್ರು ಯಾವಾಗಿನಂತೆ ಸುಮ್ಮನೆ ಕುಳಿತ; ಹಾರ್ಮೋನಿಯಂ ಬಾರಿಸದೆ ಮುಂದೆ ಡೈಲಾಗ್ ಹೇಳಬೇಕಾಗಿದ್ದರಿಂದ ಅದಕ್ಕಾಗಿ ಎದುರು ನೋಡಿದ. ಆದರೆ ಸಂಗಪ್ಪ ಇದನ್ನು ಸಹಿಸಲಿಲ್ಲ. ಹಾರ್ಮೋನಿಯಂ ಬಾರಿಸುವಂತೆ ಸನ್ನೆ ಮಾಡಿದ. ಮೇಷ್ಟ್ರು ಸುಮ್ಮನೆ ಇದ್ದಾಗ ಇದನ್ನು ಸಹಿಸಲಿಲ್ಲ. ಹಾರ್ಮೋನಿಯಂ ಬಾರಿಸುವಂತೆ ಸನ್ನೆ ಮಾಡಿದ. ಮೇಷ್ಟ್ರು ಸುಮ್ಮನೆ ಇದ್ದಾಗ ಹಲ್ಲು ಕಡೀತಾ ಪಿಸುಗುಟ್ಟಿದ; “ಬಾರುಸ್ರೀ; ಒನ್ಸ್ ಮೋರನ್ನಲಿಲ್ವೇನ್ರಿ” ಎಂದ. ಹಾರ್ಮೋನಿಯಂ ಮೇಷ್ಟ್ರು ಮೆಲುದನಿಯಲ್ಲಿ “ಡೈಲಾಗ್ ಹೇಳಿ ಸಾರ್” ಎಂದ.

ಸಂಗಪ್ಪನಿಗೆ ಇನ್ನು ಸಹಿಸೋಕಾಗಲಿಲ್ಲ. ಮಹಾ ಜನತೆಯ ಒತ್ತಾಯಕ್ಕೆ ಬೆಲೆ ಇಲ್ಲವೆಂದರೆ ಹೇಗೆ? ಸ್ಟೇಜಿನ ಮೇಲಿಂದಲೇ ಕಿರುಚಿದ.

“ಏನ್ರಿ ನಿಮ್ಮಜ್ಜಿ ಪಿಂಡ ಡೈಲಾಗ್ ಹೇಳೋದು? ಹಾರ್ಮೋನಿ ಬಾರುಸ್ರಿ ಸುಮ್ಕೆ ಅಂದ್ರೆ ನಂಗೇ ಎದ್ರಾಡ್ತೀರೇನ್ರಿ ? ಎಷ್ಟ್ರೀ ನಿಮ್ಮ ಪೊಗರು? ಇನ್ನೂರೈವತ್ತ ಬಿಸಾಕಿಲ್ವೇನ್ರಿ? ಇನ್ನೊಂದ್ಸಾರಿ ಹಾಡೇಳಾಕಿಲ್ಲ ಅಂದ್ರೆ ಕೇಳೋಕೇನ್ ಬಿಟ್ಟಿ ಬಿದ್ದಿಲ್ಲ ನಾನು. ನಿಮ್ಮ ಹಾಡೂ ಬೇಡ. ಹಾರ್ಮೋನಿಯಂ ಬ್ಯಾಡ. ಅದ್ರಪ್ಪನಂತಾದ್ ಹಾಡ್ತೀನಿ ಬೇಕಾದ್ರೆ.”

ಇಷ್ಟು ಹೇಳಿದವನೆ ಗದೆಯನ್ನು ಎಸೆದು, ಕಿರೀಟ ಒಗೆದು, ಸ್ಟೇಜಿನಿಂದ ಧುಮುಕಿ ಜನಗಳ ಮಧ್ಯದಿಂದ ಹೊರಟೇಬಿಟ್ಟ. ಕೂತಿದ್ದವರೆಲ್ಲ ಎದ್ದು ನಿಂತರು; ಗುಜುಗುಜು; ಗೊಂದಲ; ದಿಕ್ಕೇ ತೋಚದ ಸ್ಥಿತಿ.

ಮನೆಗೆ ಹಾಗೇ ಬಂದ ಸಂಗಪ್ಪ ಮತ್ತೆ ಬಂದು ಕರೆದಾರು, ನಾಟಕ ಕೆಟ್ಟು ಹೋಗುತ್ತೆ ಅಂತ ಬಂದಾರು ಅಂತ ವೇಷದಲ್ಲೇ ಕಾಯ್ತಾ ಕೂತಿದ್ದ ಅದೇ ಸಮಯದಲ್ಲಿ ರಾಜೇಂದ್ರ ಸ್ಟೇಜಿನ ಮೇಲೆ ಬಂದು ಮೈಕಿನಲ್ಲಿ ಹೇಳ್ತಾ ಇದ್ದ: “ನೀವು ಗಾಬರಿಯಾಗಬೇಡಿ. ನಾಟಕದ ದೃಶ್ಯ ಇರೋದೇ ಹೀಗೆ. ಇದು ಕನಸಾದ್ದರಿಂದ ಏನು ಬೇಕಾದರೂ ನಡೆಯಬಹುದು. ಅಹಂಕಾರದಿಂದ ಸನ್ನಿವೇಶಾನ ಹೇಗೆ ಹಾಳುಮಾಡಬಹುದು. ಅನ್ನೋದನ್ನು ತೋರಿಸೋದಿಕ್ಕೆ ನಾವಾಗಿಯೇ ಈ ದೃಶ್ಯವನ್ನು ಹೀಗೆ ರೂಪಿಸಿದ್ದೆವು. ನಾಟಕ ಇರೋದೇ ಹೀಗೆ, ಆದ್ದರಿಂದ ಗೊಂದಲ ಬೇಡ; ಗಾಬರಿ ಬೇಡ, ಸಂಗಪ್ಪನವರು ಸಹಜಾಭಿನಯ ನೀಡಿದ್ದಾರೆ. ನಮ್ಮ ಹೊಸ ಪ್ರಯೋಗ ಯಶಸ್ವಿಯಾಗಿದೆ…”
*****
ಮುಂದುವರೆಯುವುದು

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...