ಮೂಲ: ಸ್ಯಾಫೋ
(ಗ್ರೀಕ್ ಕವಯಿತ್ರಿ, ಕ್ರಿ.ಪೂ. ೬-೭ನೆಯ ಶತಮಾನ)
ದೇವಿ ಆಪ್ರೋದಿತೆಯೆ
ಸಕಲ ವೈಭವದ ಸಿಂಹಾಸನವ ಏರಿರುವ ರೂಪವಿಖ್ಯಾತಯೆ!
ಎಲ್ಲರಿಗು ಮಿಗಿಲು
ಸಾವಿಗೂ ದಿಗಿಲು
ಎನ್ನಿಸುವ ಸ್ಯೂದೇವ ಪಡೆದಂಥ ಮಗುವೆ
ಅಂಗಲಾಚುವೆ ದೇವಿ ಬಳಿಸಾರಿ ಅಡಿಯ
ದುಃಖ ಕೊರಗುಗಳಿಂದ ಸೀಳದಿರು ಎದೆಯ
ಹಿಂದೆ ನೀ ಬಂದಂತೆ ಎಷ್ಟೊ ಸಲ ಬಳಿಗೆ
ಬಾರೆ ಆಪ್ರೋದಿತೆ, ಬಾ ನನ್ನ ಕಡೆಗೆ
ದೂರದಲಿ ಕೇಳುತಿರುವಂತೆಯೇ ನನ್ನ ದನಿ
ತಂದೆ ಸ್ಯೂಸನ ದಿವ್ಯ ಮಂದಿರವನಿಳಿದು
ಮುಗಿಲಿರದ ನೀಲಿಯಲ್ಲಿ ರೆಕ್ಕೆಗಳ ಪಟಪಟಿಸಿ ಗುಬ್ಬಚ್ಚಿ ಹಿಂಡು
ಸಿಂಗಾರದಲಿ ಎಳೆವ ಬಂಗಾರ ರಥವೇರಿ ಬರುತಿದ್ದೆ ಬಳಿಗೆ
ಬಂದು ಬದಿನಿಂತು ಆ ಮಧುರ ಅಧರದಲ್ಲಿ
ಸೂಸುತಿರೆ ಸವಿನಗೆ
ನನ್ನ ಕೇಳಿದೆ ನೀನು
“ಏನು ಹೇಳೇ ಹೆಣ್ಣ, ಏನು ನಿನ್ನರಕೆ
ಎದೆಗೆ ಕಿಚ್ಚಿಟ್ಟಂಥ ಹುಚ್ಚು ಬಯಕೆ?
ನನ್ನ ಮಾಯೆಯ ನೆರವು ಬೇಕೆ ಅದಕೆ?
ನಿನ್ನ ತೋಳಲಿ ಯಾರ ತಂದು ಕೆಡವಲಿ ಹೇಳೆ
ಯಾರಿಂದ ನಿನಗಿಂಥ ಗೋಳೆ?”
ಕಂಡ ಕ್ಷಣ ದೂರ ಓಡಿದರು ಬಲು ಬೇಗನೇ
ಹತ್ತುವಳು ಬೆನ್ನು
ಕೊಟ್ಟ ಕಾಣಿಕೆಯ ಕಿತ್ತೆಸೆಯುವಳು ಆದರೂ
ಕೊಡುಗೈಯ ಹೆಣ್ಣು
ಪ್ರೀತಿಸಳು ಯಾರನೂ, ಆದರೂ ನೀನೊಲಿಯೆ
ಮಾಗುವುದು ಹಣ್ಣು
ಬಾ ಬೇಗ ಈ ಎಲ್ಲ ದುಖ ಯಾತನೆಯಿಂದ
ಎತ್ತಿ ಕಾಪಾಡು
ತೊಡಕೆಲ್ಲ ಪರಿಹರಿಸಿ ಎದೆ ಬಯಸಿದಂಥ
ಇಷ್ಟಾರ್ಥಗಳ ನೀಡು
ಉತ್ತರಿಸು ಬಾ ರಾಣಿ
ಬದಿನಿಂತು ಕೈಗೆ ಕೈ ಹೆಣೆದು ಮುದ ನೀಡು
*****
















