ನಾಸಿಯಾ

ಕೆಫೇಟೇರಿಯಾದಲ್ಲಿ ಒಬ್ಬಳೇ ಇದ್ದಳು ಲಿಜಾ ಟೇಬಲ್ ಮುಂದೆ
ಕಾಫಿಗೆ ಹೇಳಿ ಸಿಗರೇಟು ಸೇದುತ್ತ
ಬಿಳಿಚಿದ ಕೈಬೆರಳುಗಳಿಂದ ಸನ್ನೆ ಮಾಡಿದಳು
ಹೋಗಿ ಅವಳ ಬಳಿ ಕುಳಿತೆ ನಕ್ಕಳು ಮೆಲ್ಲನೆ
ಸುಮ್ಮನೆ ಏನೇನೋ ಹೇಳಿದಳು ಈಗೀಗ
ಏಕೆ ದೂರಾ ಎಂದು ಕೇಳಿದ್ದಕ್ಕೆ ಕೆಲಸಾ ಅ೦ದೆ ಜೋಲುಮುಖ ಮಾಡಿ

ಮೂರು ತಿಂಗಳು ಎಂದಳು ಸಿಗರೇಟು ಹಚ್ಚಿ
ಹೂಂ ಎಂದೆ ತುಟಿಗಳೆಡೆಯಿಂದ
ಜಾಕಿಯ ಕೆಲಸ ಎಂದಳು ಹೊಗೆರಿಂಗು ಬಿಟ್ಟೆ
ಜಾಕಿಗೆ ಒಂದು ಬೇಬಿ ಬೇಕಂತೆ ಇಷ್ಟು ವರ್ಷದ ಮೇಲೆ
ಎಂದಳು ಮಜಾ ಅಂದೆ ಆಶ್ಚರ್ಯದಿಂದ ನೋಡಿದಳು
ಬೇರೇನೊ ನೆನಪಾಯ್ತು ಲಿಜಾ ಅಂದೆ

ಹೊರಗೆ ಮಳೆ ಬೀಳುತ್ತಿತ್ತು ಚಳಿಗಾಳಿ ಲಿಜಾಳ
ಸಣ್ಣಕೊಡೆಯಡಿಯಲ್ಲಿ ನಡೆದೆವು ಓಣಿದೀಪಗಳ ಕೆಳಗೆ
ಅವಳ ಸೊ೦ಟ ಬಳಸಿದೆ ಚಳಿ ಅಲ್ಲ ಎಂದಳು
ಅವಳ ಮೂರು ತಿಂಗಳ ಹೊಟ್ಟೆ ಮುಟ್ಟಿ ನೋಡಿದೆ
ಜಾಕಿಗೆ ಸೆನ್ಸ್‌ ಇಲ್ಲ ಎಂದಳು

ಲಿಜಾ ಬಾಗಿಲು ತೆರೆದು ಬಾತ್ ರೂಮಿಗೆ ಹೋಗಿ
ಸ್ಕರ್ಟ್‌ ಕಳಚಿ ನೈಟ್ ಗೌನು ಹಾಕಿ ಬಂದಳು
ಮಂಚದ ಮೇಲೆ ಕುಸಿದೆ ಪರಿಚಿತ ಹೆಣ್ಣ
ಪರಿಚಿತ ಹಾಸಿಗೆಯ ಪರಿಚಿತ ಬೆವರ ವಾಸನೆ ಈಗ
ಹೊಟ್ಟೆಯೊಳಗೆ ಕಪ್ಪೆಯ ಹಾಗೆ ನುಸುಳಿತು
ಆಕಳಿಸಿ ಮೈಮುರಿದು ಇದೀಗ ಎಲ್ಲಾ ಕಷ್ಟ
ಈ ಬೇಬಿಯ ಸಮಸ್ಯೆ ಎಂದಳು ಅಂಗಾತ ಮಲಗಿ
ಅಗ್ಗ ಪೌಡರಿನ ನಾಥ ಬುರುಗಿನ ನಾಧ ಡುಬ್ಬದ ಹಾಗೆ
ಬೆಳೆದಿತ್ತು ಈ ಬೇಸರ ಬೇರೆ ಗೊಣಗಿದೆ
ಹೂಂ ಎಂದು ಕೇಳಿದಳು ಕರಗಿಸು ಅಂದೆ
ಇಷ್ಟರ ಮೇಲೆ ಸ್ವಲ್ಪ ಕಷ್ಟ ಮೈಗೆ ತೊಂದರೆ ಎಂದಳು
ಈ ಚಕ್ರಬಿಂಬದ ಸುತ್ತ ಸುಳಿಯಲಾರೆ
ಇದನ್ನು ಭೇದಿಸಲಾರೆ
ನಿರ್ವೀರ್ಯ ನಾನು ಇದೆಲ್ಲಾ ಕೆಟ್ಟ ವಾಕರಿಕೆ
ಬೇಸರ ಬರಿಸುತ್ತದೆ ನನಗೆ-ಪ್ಲೀಸ್ ಗೌನು ಕೆಳಕ್ಕೆ ಸರಿಸು
ಇಲ್ಲಾ ಲೈಟು ಆರಿಸು ಲಿಜಾ ಅಂದೆ
ಏನೇನೊ ಕನವರಿಸುತ್ತೀರಿ ನಿದ್ದೆಯ ಮತ್ತು
ಸ್ವಲ್ಪ ಮಜಾ ಇರಲಿ ಎಂದು ನೆನೆದೆ ಸುಮ್ಮನೆ ಮಲಗಿ
ಈ ಚಳಿಗೆ ಎಂದು ನನ್ನ ಒಳಕ್ಕೆ ಸೆಳೆದು
ತಲೆತಡವಿ ಮಲಗಿದಳು-ಚಡಪಡಿಸಲಾರದೆ
ಬಿದ್ದೆ ಬೆಳಗಾಗುವುದನ್ನೆ ಕಾದು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಪತ್ರ – ೯
Next post ಬಸವನೆಂದರೆ ಒಂದು ವ್ಯಕ್ತಿಯಲ್ಲ

ಸಣ್ಣ ಕತೆ

  • ಕೇರೀಜಂ…

    ಮಂಜೇಲ್ಮುಂಜೇಲಿ ಯೆದ್ಬೇಗ್ನೇ ಕೇರ್ಮುಂದ್ಗಡೆ ಸಿವಪ್ಪ ಚೂರಿ, ಕತ್ತಿ, ಕುಡ್ಗೋಲು, ಯಿಳ್ಗೆಮಣೆ, ಕೊಡ್ಲಿನ... ಮಸ್ಗೆಲ್ಗೆ ಆಕಿ, ಗಸ್ಗಾಸಾ... ನುಣ್ಗೆ ತ್ವಟ್ವಟ್ಟೇ... ನೀರ್ಬಟ್ಗಾಂತಾ, ಜ್ವಲ್ಸುರ್ಗಿಗ್ಯಾಂತಾ, ಅವ್ಡುಗಚ್ಗೊಂಡೂ ಮಸೆಯತೊಡ್ಗಿದ್ವನ... ಕಟ್ದಿ ತುರ್ಬು,… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಶಾಕಿಂಗ್ ಪ್ರೇಮ ಪ್ರಕರಣ

    ಅವನು ಅವಳನ್ನು ದಿನವೂ ತಪ್ಪದೇ ನೋಡುತ್ತಿದ್ದ. ಅವಳು ಕಾಲೇಜಿಗೆ ಹೋಗುವ ಹೊತ್ತಿಗೆ ಅವಳನ್ನು ಹಿಂಬಾಲಿಸುತ್ತಿದ್ದ. ಕಾಲೇಜು ಬಿಡುವ ಹೊತ್ತಿಗೆ ಗೇಟಿನ ಎದುರು ಕಾದು ನಿಂತು ಮತ್ತೆ ಹಿಂಬಾಲಿಸುತ್ತಿದ್ದ.… Read more…

  • ಲೋಕೋಪಕಾರ!

    ಸಾಥಿ ಶಿವರಾವ ಅವರಿಗೆ ಬಹು ದೊಡ್ಡ ಚಿಂತೆ! ಅವರು ಅನೇಕ ಪ್ರಶ್ನೆಗಳನ್ನು ಬಹು-ಸರಳವಾಗಿ ಬಿಡಿಸುತ್ತಿದ್ದರು. ಪರೀಕ್ಷೆಯಲ್ಲಿ ಅನೇಕ ಪ್ರಶ್ನೆಗಳಿಗೆ ಉತ್ತರ ಬರೆದಿದ್ದಾರು. ಆದರೆ ಎಂತಹ ದೊಡ್ಡ ಪ್ರಶ್ನೆ… Read more…

  • ರಾಧೆಯ ಸ್ವಗತ

    ಈಗ ಸೃಷ್ಟಿಕರ್ತನ್ನು ದೂಷಿಸುತ್ತಾ ಕಾಲ ಕಳೆಯುತ್ತಿದ್ದೇನೆ ಕೃಷ್ಣಾ. ಹೆಂಗಸರಿಗ್ಯಾಕೆ ಅವರ ಪ್ರಿಯಕರರಿಗಿಂತ ಹೆಚ್ಚು ಆಯುಸ್ಸನ್ನು ಅವನು ಕೊಡುತ್ತಾನೋ? ನೀನು ಹೇಳುತ್ತಿದ್ದುದು ಮತ್ತೆ ಮತ್ತೆ ನೆನಪಾಗುತ್ತಿದೆ: "ರಾಧೆ, ಈ… Read more…