ಲೋಹದ ಪ್ರಮಿತಿ

ಲೋಹದ ಪ್ರಮಿತಿ

೨.೧ ಲೋಹದ ಪ್ರಮಿತಿ

ದೇಶವೊಂದರಲ್ಲಿ ಬಳಸುವ ಪ್ರಮಾಣಕ ಹಣಕ್ಕೆ (standard money) ವಿತ್ತೀಯ ಪ್ರಮಿತಿ ಎಂದು ಹೆಸರು. ಪ್ರಮಾಣಕ ಹಣವು ಸರಕಾರವೇ ಬಿಡುಗಡೆ ಮಾಡುವ ಕಾನೂನುಬದ್ಧ ಹಣವಾಗಿರುತ್ತದೆ. ಆದುದರಿಂದ ವಿತ್ತೀಯ ಪ್ರಮಿತಿಯನ್ನು ದೇಶದ ವಿತ್ತೀಯ ಪ್ರಾಧಿಕಾರವು (monetary authority) ಅನುಷ್ಠಾನಗೊಳಿಸುವ ಪ್ರಮಾಣಕ ಹಣವೆಂದು ವ್ಯಾಖ್ಯಾನಿಸಲಾಗುತ್ತದೆ. ಪ್ರಮಾಣಕ ಹಣವು ಲೋಹದಿಂದ ಮಾಡಲ್ಪಟ್ಟಿದ್ದರೆ ಲೋಹದ ಪ್ರಮಿತಿಯಂದೂ, ಚಿನ್ನದ್ದಾದರೆ ಅದನ್ನು ಸುವರ್ಣ ಪ್ರಮಿತಿ ಎಂದೂ (gold standard), ಕಾಗದದ್ದಾದರೆ ಕಾಗದ ಪ್ರಮಿತಿ (paper standard) ಎಂದೂ ಕರೆಯಲಾಗುತ್ತದೆ.

ವಿತ್ತೀಯ ಪ್ರಮಿತಿಯ ವಿಧಗಳನ್ನು ಈ ಕೆಳಗಿನಂತೆ ತೋರಿಸಬಹುದು :

ವಿತ್ತೀಯ ಪ್ರಮಿತಿಗಳು ವಿತ್ತೀಯ ಪ್ರಮಿತಿಯ ಮೂಲೋದ್ದೇಶಗಳು ಎರಡು :

i) ಹಣದ ಆಂತರಿಕ ಮೌಲ್ಯ ಅಥವಾ ಆಂತರಿಕ ಬೆಲೆ ಮಟ್ಟದಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು.
i) ಹಣದ ಬಾಹ್ಯ ಮೌಲ್ಯ ಅಥವಾ ವಿನಿಮಯ ದರದಲ್ಲಿ ಸ್ಥಿರತೆ ಕಾಯ್ದುಕೊಳ್ಳುವುದು

೧ ಏಕಲೋಹ ಪದ್ಧತಿ (Mono metallism)
ಲೋಹದ ಪ್ರಮಿತಿ ಎಂದರೆ ಲೋಹದಿಂದ ಮಾಡಿದ ನಾಣ್ಯಗಳು ಪ್ರಮಾಣಕ ಹಣವಾಗಿ ಚಲಾವಣೆಯಲ್ಲಿ ಇರುವುದು. ಲೋಹದ ಪ್ರಮಿತಿಯಲ್ಲಿ (i) ಏಕಲೋಹ ಪದ್ಧತಿ ಮತ್ತು (ii) ದ್ವಿಲೋಹ ಪದ್ಧತಿ ಎಂಬ ಎರಡು ವಿಧಗಳಿವೆ.

ಒಂದೇ ಲೋಹದಿಂದ ಮಾಡಿದ ನಾಣ್ಯಗಳು ಪ್ರಮಾಣಕ ಹಣವಾಗಿ ಕಾರ್ಯ ನಿರ್ವಹಿಸುವ ವ್ಯವಸ್ಥೆಗೆ ಏಕಲೋಹ ಪದ್ಧತಿ ಎಂದು ಹೆಸರು. ಏಕಲೋಹ ನಾಣ್ಯವು ಪೂರ್ಣ ಶರೀರಿಯಾದ ಮತ್ತು ಅಮಿತ ಶಾಸನ ಬದ್ಧವಾದ ಹಣವಾಗಿರುತ್ತದೆ. ಏಕಲೋಹ ಪದ್ಧತಿಯಲ್ಲಿ (i) ಬೆಳ್ಳಿಯ ಪ್ರಮಿತಿ ಮತ್ತು (ii) ಚಿನ್ನದ ಪ್ರಮಿತಿ ಎಂದು ಎರಡು ವಿಧ. ಭಾರತದಲ್ಲಿ ೧೮೯೩ ರವರೆಗೆ ಬೆಳ್ಳಿಯ ಪ್ರಮಿತಿ ಅಸ್ತಿತ್ವದಲ್ಲಿತ್ತು. ಬ್ರಿಟನ್ನಿನಲ್ಲಿ (೧೯೩೧) ರವರೆಗೆ ಚಿನ್ನದ ಪ್ರಮಿತಿ ಅನುಷ್ಠಾನದಲ್ಲಿತ್ತು.

ಒಳಿತುಗಳು : ಏಕಲೋಹ ಪದ್ಧತಿಯ ಒಳಿತುಗಳಿವು:

೧. ಸರಳತೆ : ಏಕಲೋಹ ಪದ್ಧತಿಯು ಅತ್ಯಂತ ಸರಳವಾದುದು. ಈ ಪದ್ಧತಿಯಲ್ಲಿ ಕೇವಲ ಒಂದು ಲೋಹವನ್ನು ಪ್ರಮಾಣಕ ಹಣವಾಗಿ ಬಳಸುವುದರಿಂದ ಮೌಲ್ಯಮಾಪನಕ್ಕೆ ಯಾವುದೇ ಸಮಸ್ಯೆಗಳಿರುವುದಿಲ್ಲ.

೨. ವಿಶ್ವಾಸಾರ್ಹತೆ: ಏಕಲೋಹ ಪದ್ಧತಿಯಲ್ಲಿ ಹಣ ಟಂಕಿಸಲು ಚಿನ್ನ ಅಥವಾ ಬೆಳ್ಳಿಯ ಲೋಹವನ್ನು ಬಳಸಲಾಗುತ್ತದೆ. ಅವು ಜನರ ಸಂಪೂರ್ಣ ವಿಶ್ವಾಸಕ್ಕೆ ಪಾತ್ರವಾಗಿರುತ್ತವೆ.

೩. ಬಾಹ್ಯ ವ್ಯಾಪಾರ ವೃದ್ಧಿ : ಅಂತಾರಾಷ್ಟ್ರೀಯ ವ್ಯಾಪಾರದ ವೃದ್ಧಿಗೆ ಏಕಲೋಹ ಪದ್ಧತಿ ಸಹಾಯಕವಾಗಿದೆ. ಏಕೆಂದರೆ ಏಕಲೋಹ ಪದ್ಧತಿಯು ಅಂತಾರಾಷ್ಟ್ರೀಯ ಪಾವತಿಯನ್ನು ಸುಲಭ ಮತ್ತು ಸರಳಗೊಳಿಸುತ್ತದೆ.

೪. ಹಣದ ಚಲಾವಣೆ: ದ್ವಿಲೋಹ ಪದ್ಧತಿ ಅಸ್ತಿತ್ವದಲ್ಲಿದ್ದರೆ ನಿಕೃಷ್ಟ ಹಣವು ಉತ್ಕೃಷ್ಟ ಹಣವನ್ನು ಚಲಾವಣೆಯಿಂದ ಓಡಿಸಿಬಿಡುತ್ತದೆ. ಏಕಲೋಹ ಪದ್ಧತಿಯಲ್ಲಿ ಹಾಗಾಗಲು ಸಾಧ್ಯವಿಲ್ಲ.

ಕೆಡಕುಗಳು : ಏಕಲೋಹ ಪದ್ಧತಿಯ ಕಡಕುಗಳಿವು :

೧. ಅನುಷ್ಠಾನ ಸಮಸ್ಯೆ: ಏಕಲೋಹ ಪದ್ಧತಿಯನ್ನು ಅನುಷ್ಠಾನಕ್ಕೆ ತರುವುದು ಸುಲಭದ ವಿಷಯವಲ್ಲ. ಏಕೆಂದರೆ ಎಲ್ಲಾ ರಾಷ್ಟ್ರಗಳು ಚಿನ್ನ ಅಥವಾ ಬೆಳ್ಳಿಯ ಸಾಕಷ್ಟು ಸಂಗ್ರಹ ಹೊಂದಿರುವುದಿಲ್ಲ.

೨. ಸ್ಥಿತಿಸ್ಥಾಪಕತೆಯ ಕೊರತೆ : ಹಣದ ಬೇಡಿಕೆ ಅಧಿಕವಾದಾಗ ಪೂರೈಕ ಹೆಚ್ಚಿಸಲು ಸಾಧ್ಯವಾದರೆ ಹಣಕ್ಕೆ ಸ್ಥಿತಿಸ್ಥಾಪಕತೆಯಿದೆ ಎಂದರ್ಥ. ಏಕಲೋಹ ಪದ್ಧತಿಗೆ ಈ ರೀತಿಯ ಸ್ಥಿತಿಸ್ಥಾಪಕತೆ ಇರುವುದಿಲ್ಲ.

೩. ಆರ್ಥಿಕ ಬೆಳವಣಿಗೆಗೆ ಅಡಚಣೆ: ಹಣಕ್ಕೆ ಸ್ಥಿತಿಸ್ಥಾಪಕತೆ ಇದ್ದರೆ ಆರ್ಥಿಕ ಬೆಳೆವಣಿಗೆ ಸುಲಭ ಸಾಧ್ಯವಾಗುತ್ತದೆ. ಏಕಲೋಹ ಪದ್ಧತಿಗೆ ಸ್ಥಿತಿಸ್ಥಾಪಕತೆ ಇಲ್ಲದ ಕಾರಣ ಅದು ಆರ್ಥಿಕ ಬೆಳೆವಣಿಗೆಗೆ ಅಡಚಣೆ ಉಂಟು ಮಾಡುತ್ತದೆ.

೪. ಬೆಲೆಯ ಅಸ್ಥಿರತೆ: ಏಕಲೋಹ ಪದ್ಧತಿಯಲ್ಲಿ ಬೆಲೆಯ ಅಸ್ಥಿರತೆ ಉಂಟಾಗುತ್ತಿರುತ್ತದೆ. ಲೋಹದ ಬೆಲೆಯಲ್ಲಿ ಅಸ್ಥಿರತೆ ಉಂಟಾಗುವುದು ಇದಕ್ಕೆ ಕಾರಣ. ಬೇಡಿಕೆ ಮತ್ತು ಪೂರೈಕೆಗಳ ಅಸಮತೋಲನದಿಂದಾಗಿ ಲೋಹದ ಬೆಲೆಯಲ್ಲಿ ಅಸ್ಥಿರತೆ ಉಂಟಾಗುತ್ತಿರುತ್ತದೆ.

೨. ದ್ವಿಲೋಹ ಪದ್ಧತಿ (Bimetalism)

ಎರಡು ಲೋಹಗಳು (ಚಿನ್ನ ಮತ್ತು ಬೆಳ್ಳಿ) ಏಕಕಾಲದಲ್ಲಿ ಮೌಲ್ಯ ಪ್ರಮಾಣಕಗಳಾಗಿ ಬಳಸಲ್ಪಡುವುದಕ್ಕೆ ದ್ವಿಲೋಹ ಪದ್ಧತಿ ಎಂದು ಹೆಸರು. ದ್ವಿಲೋಹ ಪದ್ಧತಿಯಲ್ಲಿ ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳು ಒಟ್ಟಿಗೇ ಚಲಾವಣೆಯಲ್ಲಿರುತ್ತವೆ.

ದ್ವಿಲೋಹ ಪದ್ಧತಿಯ ಲಕ್ಷಣಗಳಿವು :

೧. ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಏಕಕಾಲದಲ್ಲಿ ಪ್ರಮಾಣಕ ಹಣವಾಗಿ ಕಾರ್ಯವೆಸಗುತ್ತವೆ.
೨. ಎರಡು ಲೋಹದ ನಾಣ್ಯಗಳ ವಿನಿಮಯ ದರವನ್ನು ಸರಕಾರ ನಿಗದಿಪಡಿಸುತ್ತದೆ.
೩. ಎರಡು ಲೋಹಗಳ ನಾಣ್ಯಗಳು ಪೂರ್ಣ ಶರೀರಿ ಮತ್ತು ಅಮಿತ ಶಾಸನ
ಬದ್ಧವಾಗಿರುತ್ತವೆ.
೪. ಎರಡು ಲೋಹಗಳನ್ನು ಯಾವಾಗ ಬೇಕಾದರೂ, ಅಮಿತ ಪ್ರಮಾಣದಲ್ಲಿ ನಾಣ್ಯಗಳಾಗಿ ಪರಿವರ್ತಿಸಬಹುದು. ೫. ಇವರಡು ಲೋಹಗಳ ಆಯಾತ ಮತ್ತು ನಿರ್ಯಾತಗಳ ಮೇಲೆ ಯಾವುದೇ ನಿರ್ಬಂಧವಿರುವುದಿಲ್ಲ.

ಒಳಿತುಗಳು: ದ್ವಿಲೋಹ ಪದ್ಧತಿಯ ಒಳಿತುಗಳಿವು :

೧. ಸಾಕಷ್ಟು ಪೂರೈಕೆ: ದ್ವಿಲೋಹ ಪದ್ಧತಿಯಲ್ಲಿ ಸಾಕಷ್ಟು ಹಣ ಪೂರೈಕೆಯಾಗುತ್ತದೆ. ಎರಡು ಲೋಹಗಳು ನಾಣ್ಯ ಟಂಕಣೆಗೆ ಬಳಕೆಯಾಗುವುದು ಇದಕ್ಕೆ ಕಾರಣವಾಗಿರುತ್ತದೆ.

೨. ಬೆಲೆ ಸ್ಥಿರತೆ: ದ್ವಿಲೋಹ ಪದ್ಧತಿಯಲ್ಲಿ ಅಂತರಿಕ ಬೆಲೆ ಸ್ಥಿರತೆಯಿರುವುದು. ಎರಡು ಲೋಹಗಳ ಪೈಕಿ ಯಾವುದಾದರೊಂದರ ಕೊರತೆಯುಂಟಾದಾಗ ಇನ್ನೊಂದು ಲೋಹವು ಆ ಕೊರತೆಯನ್ನು ನೀಗುವುದು ಇದಕ್ಕೆ ಕಾರಣವಾಗಿರುತ್ತದೆ.

೩. ಅಂತಾರಾಷ್ಟ್ರೀಯ ವ್ಯಾಪಾರ ವೃದ್ಧಿ : ದ್ವಿಲೋಹ ಪದ್ಧತಿಯು ಅಂತಾರಾಷ್ಟ್ರೀಯ ವ್ಯಾಪಾರ ವೃದ್ಧಿಗೆ ಎರಡು ರೀತಿಗಳಲ್ಲಿ ಪೂರಕವಾಗಿರುತ್ತದೆ. ಮೊದಲನೆಯದಾಗಿ, ದ್ವಿಲೋಹ ಪದ್ಧತಿ ಹೊಂದಿರುವ ದೇಶವೊಂದು ಚಿನ್ನ ಮತ್ತು ಬೆಳ್ಳಿ ಲೋಹ ಪ್ರಮಿತಿ ಹೊಂದಿರುವ ಯಾವುದೇ ದೇಶದೊಡನೆ ಸುಲಭವಾಗಿ ವ್ಯಾಪಾರ ಸಂಬಂಧ ಹೊಂದಬಹುದಾಗಿದೆ. ಎರಡನೆಯಾದಾಗಿ ದ್ವಿಲೋಹ ಪದ್ಧತಿಯಲ್ಲಿ ಆಯಾತ ಮತ್ತು ನಿರ್ಯಾತಗಳ ಮೇಲೆ ಯಾವುದೇ ನಿರ್ಬಂಧಗಳಿರುವುದಿಲ್ಲ. ಹಾಗಾಗಿ ದ್ವಿಲೋಹ ಪದ್ಧತಿಯು ಅಂತಾರಾಷ್ಟ್ರೀಯ ವ್ಯಾಪಾರವನ್ನು ವೃದ್ಧಿಸುತ್ತದೆ.

೪. ಬ್ಯಾಂಕುಗಳಿಗೆ ಅಧಿಕ ಸ್ವಾತಂತ್ರ್ಯ: ದ್ವಿಲೋಹ ಪದ್ಧತಿಯಲ್ಲಿ ಬ್ಯಾಂಕುಗಳು ಮೀಸಲು ನಿಧಿಗಳನ್ನು ಸುಲಭವಾಗಿ ಇರಿಸಿಕೊಳ್ಳಬಹುದು. ಈ ಪದ್ಧತಿಯಲ್ಲಿ ಎರಡು ಲೋಹಗಳ ನಾಣ್ಯಗಳು ಚಲಾವಣೆಯಲ್ಲಿರುತ್ತವೆ. ಬ್ಯಾಂಕುಗಳು ತಮ್ಮ ಮೀಸಲು ಹಣವನ್ನು ಯಾವುದೇ ಲೋಹದ ನಾಣ್ಯದ ರೂಪದಲ್ಲಿ ಸುಲಭವಾಗಿ ಇಟ್ಟುಕೊಳ್ಳಬಹುದು. ಎರಡು ನಾಣ್ಯಗಳು ಪ್ರಮಾಣಕ ಹಣವಾಗಿದ್ದು ಅಮಿತ ಶಾಸನ ಬದ್ಧತೆಯನ್ನು ಹೊಂದಿರುವುದರಿಂದ ಬ್ಯಾಂಕುಗಳಿಗೆ ಹೆಚ್ಚಿನ ಸ್ವಾತಂತ್ರ್ಯ ಲಭ್ಯವಾಗುತ್ತದೆ.

೫. ಬಡ್ಡಿಯ ಇಳಿತ : ದ್ವಿಲೋಹ ಪದ್ಧತಿಯಲ್ಲಿ ಎರಡು ಲೋಹಗಳ ನಾಣ್ಯಗಳು ಚಲಾವಣೆಯಲ್ಲಿರುವುದರಿಂದ ಬಡ್ಡಿಯ ದರ ಕಡಿಮೆಯಾಗುತ್ತದೆ. ಬೇಡಿಕೆಗಿಂತಲೂ ಹಣದ ಪೂರೈಕೆ ಹೆಚ್ಚಾಗುವುದು ಇದಕ್ಕೆ ಕಾರಣವಾಗಿದೆ.

೬. ಉತ್ಪಾದನೆಯ ಹೆಚ್ಚಳ: ದ್ವಿಲೋಹ ಪದ್ಧತಿಯಲ್ಲಿ ಹಣದ ಪೂರೈಕೆ ಅಧಿಕವಾಗಿರುತ್ತದೆ. ಇದರಿಂದಾಗಿ ಉತ್ಪಾದನೆಯಲ್ಲಿ ಹೆಚ್ಚಳವಾಗುತ್ತದೆ.

೭. ವಿನಿಮಯ ದರ ಸ್ಥಿರತೆ : ದ್ವಿಲೋಹ ಪದ್ಧತಿಯಲ್ಲಿ ಚಿನ್ನ ಮತ್ತು ಬೆಳ್ಳಿಗಳ ಬೆಲೆಗಳಲ್ಲಿ ಸ್ಥಿರತೆ ಸಾಧಿಸಲ್ಪಡುತ್ತದೆ. ಪರಿಣಾಮವಾಗಿ ವಿನಿಮಯ ದರದಲ್ಲಿ ಸ್ಥಿರತೆ ಉಂಟಾಗುತ್ತದೆ.

ದೋಷಗಳು: ದ್ವಿಲೋಹ ಪದ್ಧತಿಯು ಕೆಳಗಿನ ದೋಷಗಳಿಂದ ಬಳಲುತ್ತದೆ :

೧. ಚಿನ್ನದ ಹಣದ ಪಲಾಯನ : ಚಿನ್ನ ಮತ್ತು ಬೆಳ್ಳಿಯ ನಾಣ್ಯಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದರೆ ಗ್ರೇಷಮನ ನಿಯಮ ಅನ್ವಯವಾಗುತ್ತದೆ. ಗ್ರೇಷಮನ ನಿಯಮದ ಪ್ರಕಾರ ಎರಡು ರೀತಿಯ ಹಣವು ಚಲಾವಣೆಯಲ್ಲಿರುವಾಗ ನಿಕೃಷ್ಟ ಹಣವು ಉತ್ಕೃಷ್ಟ ಹಣವನ್ನು ಚಲಾವಣೆಯಿಂದ ಓಡಿಸಿ ಬಿಡುತ್ತದೆ. ದ್ವಿಲೋಹ ಪದ್ಧತಿಯಲ್ಲಿ ಬೆಳ್ಳಿಯ ಹಣವು ಚಿನ್ನದ ಹಣವನ್ನು ಚಲಾವಣೆಯಿಂದ ಓಡಿಸುವ ಎಲ್ಲಾ ಸಾಧ್ಯತೆಗಳಿವೆ. ಹಾಗಾಗುವುದರಿಂದ ದ್ವಿಲೋಹ ಪದ್ಧತಿಯು ಒಂದು ತಾತ್ಕಾಲಿಕ ವ್ಯವಸ್ಥೆ ಎನಿಸಿದೆ.

೨ ಟಂಕದರ ಮತ್ತು ಮಾರುಕಟ್ಟೆ ದರಗಳ ಅಸಮಾನತೆ : ದ್ವಿಲೋಹ ಪದ್ಧತಿಯು ಅಸ್ತಿತ್ವದಲ್ಲಿರಬೇಕಾದರೆ ಆಂತರಿಕ ವಿನಿಮಯ ದರವು ಮಾರುಕಟ್ಟೆ ದರಕ್ಕೆ ಸಮನಾಗಿರಬೇಕು. ಆಂತರಿಕ ವಿನಿಮಯ ದರವನ್ನು ಟಂಕದರ (mint rate) ಎಂದು ಕರೆಯಲಾಗುತ್ತದೆ. ಮಾರುಕಟ್ಟೆ ದರವು ಟಂಕ ದರಕ್ಕಿಂತ ಅಧಿಕವಾದಾಗ ಬೆಳ್ಳಿಯ ನಾಣ್ಯಗಳು ಚಿನ್ನದ ನಾಣ್ಯಗಳನ್ನು ಚಲಾವಣೆಯಿಂದ ಅಟ್ಟಿ ಬಿಡುತ್ತವೆ.

೩. ಸಾರ್ವತ್ರಿಕತೆಯ ಸಮಸ್ಯೆ : ದ್ವಿಲೋಹ ಪದ್ಧತಿ ಯಶಸ್ವಿಯಾಗಬೇಕಾದರೆ ವಿಶ್ವದ ಎಲ್ಲಾ ರಾಷ್ಟ್ರಗಳು ಈ ಪದ್ಧತಿಯನ್ನು ಒಪ್ಪಿಕೊಳ್ಳಬೇಕು. ದೇಶೀಯ ದ್ವಿಲೋಹ ಪದ್ಧತಿ ಎಲ್ಲೂ ಯಶಸ್ವಿಯಾಗಿಲ್ಲ. ಅಂತಾರಾಷ್ಟ್ರೀಯ ದ್ವಿಲೋಹ ಪದ್ಧತಿ ಅಸ್ತಿತ್ವಕ್ಕೆ ಬರಲು ಸಾಧ್ಯವಿಲ್ಲ. ಹಾಗಾಗಿ ದ್ವಿಲೋಹ ಪದ್ಧತಿ ಇತಿಹಾಸದ ಪುಟಗಳಲ್ಲಿ ಸ್ಥಾನ ಕಂಡುಕೊಂಡು ಬಿಟ್ಟಿದೆ.

೪. ಸಟ್ಟಾ ವ್ಯವಹಾರಕ್ಕೆ ಅವಕಾಶ : ದ್ವಿಲೋಹ ಪದ್ಧತಿಯಲ್ಲಿ ಎರಡು ಲೋಹಗಳ ಬೆಲೆಗಳಲ್ಲಿ ಸ್ಥಿತ್ಯಂತರಗಳಾಗುತ್ತಿರುತ್ತವೆ. ಇದು ಸಟ್ಟಾ ವ್ಯವಹಾರಕ್ಕೆ (speculation) ಆಸ್ಪದ ಮಾಡಿಕೊಡುತ್ತದೆ.

ಗ್ರೇಷಮನ ನಿಯಮ
ಪ್ರಥಮ ಕ್ಲೀನ್ ಎಲಿಜಾಬೆತ್ತಳ ಆಡಳಿತಾವಧಿಯಲ್ಲಿ ನಿಕೃಷ್ಟ ಹಣವು ಚಲಾವಣೆಯಲ್ಲಿ ಉಳಿದುಕೊಂಡು ಉತ್ಕೃಷ್ಟ ಹಣವು ಕಣ್ಮರೆಯಾಗುವ ವಿಶಿಷ್ಟ ವಿದ್ಯಮಾನವೊಂದು ಸಂಭವಿಸಿತು. ತನ್ನ ಹಣಕಾಸು ಸಲಹಾಗಾರ ಸರ್ ಥಾಮಸ್ ಗ್ರೇಷಮ್ಮನನ್ನು ಈ ಬಗ್ಗೆ ಅಧ್ಯಯನ ನಡೆಸುವಂತೆ ರಾಣಿಯು ವಿನಂತಿಸಿದಳು. ನಿಕೃಷ್ಟ ಮತ್ತು ಉತ್ಕೃಷ್ಟ ನಾಣ್ಯಗಳು ಕಾನೂನು ಬದ್ಧ ಹಣವೆನಿಸಿರುವಾಗ ಜನರು ನಿಕೃಷ್ಟ ಹಣವನ್ನು ಚಲಾವಣೆಗೆ ಬಳಸುವುದನ್ನು ಮತ್ತು ಉತ್ಕೃಷ್ಟ ಹಣವನ್ನು ಸಂಗ್ರಹಿಸಿ ಕರಗಿಸಿ ಬೇರೆ ಉಪಯೋಗಗಳಿಗೆ ಬಳಸುವುದು ಗ್ರೇಷಮನ ಗಮನಕ್ಕೆ ಬಂದಿತು. ಹಾಗಾಗಿ ಆತ “ಎರಡು ರೀತಿ ನಾಣ್ಯಗಳು ಕಾನೂನುಬದ್ಧ ಹಣವಾಗಿರುವಾಗ ನಿಕೃಷ್ಟ ಹಣವು ಉತ್ಕೃಷ್ಟ ಹಣವನ್ನು ಚಲಾವಣೆಯಿಂದ ಹೊಡೆದಟ್ಟಿ ಓಡಿಸುತ್ತದೆ” ಎಂಬ ತೀರ್ಮಾನಕ್ಕೆ ಬಂದ. ಈ ತೀರ್ಮಾನವು ಮುಂದೆ ಗ್ರೇಷಮನ ನಿಯಮ ಎಂದು ಖ್ಯಾತಿ ಪಡೆಯಿತು.

ಕ್ರಿ.ಪೂ. ಐದನೆಯ ಶತಮಾನದಲ್ಲೇ ಅರಿಸ್ಕೋಪೇನ್ ಎಂಬ ತತ್ತ್ವಶಾಸ್ತ್ರಜ್ಞ ಈ ಬಗೆಯ ವಿದ್ಯಮಾನವನ್ನು ಪ್ರಸ್ತುತಪಡಿಸಿದ್ದ. ೧೩೬೪ರಲ್ಲಿ ಒರೆಸ್ಮೆ ಇಂತಹದ್ದೇ ಅಭಿಪ್ರಾಯವನ್ನು ನೀಡಿದ್ದ. ೧೫೫೮ರಲ್ಲಿ ಥಾಮಸ್ ಗ್ರೇಷಂ ಅದನ್ನು ನಿಯಮದ ರೂಪದಲ್ಲಿ ಪ್ರಸ್ತುತಪಡಿಸಿದ. ಆದುದರಿಂದ ಅದಕ್ಕೆ ಗ್ರೇಷಮನ ನಿಯಮ ಎಂಬ ಹೆಸರು ಬಂದಿದೆ. ಅವನ ನಿಯಮವನ್ನು ಅತ್ಯಂತ ಸರಳವಾಗಿ ಹೀಗೆ ಪ್ರಸ್ತುತಪಡಿಸಬಹುದು:

“ಕೆಟ್ಟ ಹಣವು ಒಳ್ಳೆಯ ಹಣವನ್ನು ಚಲಾವಣೆಯಿಂದ ಓಡಿಸುತ್ತದೆ”.

ಕಲ್ಪನೆಗಳು ಮತ್ತು ಅನ್ವಯಿಕೆ

ಗ್ರೇಷಮನ ನಿಯಮವು ಮೂರು ಕಲ್ಪನೆಗಳನ್ನು ಆಧರಿಸಿದೆ :
(i) ಚಲಾವಣೆಯಲ್ಲಿರುವ ಹಣದ ವಿಧಗಳ ಬಗ್ಗೆ ಜನರಿಗೆ ಸಂಪೂರ್ಣ ಪರಿಜ್ಞಾನವಿರುತ್ತದೆ. ಯಾವುದು ಒಳ್ಳೆಯ ಹಣ ಮತ್ತು ಯಾವುದು ಕೆಟ್ಟ ಹಣ ಎನ್ನುವುದು ಅವರಿಗೆ ತಿಳಿದಿರುತ್ತದೆ.
(ii) ಹಣದ ಒಟ್ಟು ಪೂರೈಕೆಯು ಒಟ್ಟು ಬೇಡಿಕೆಗಿಂತ ಅಧಿಕವಾಗಿರುತ್ತದೆ. ಅಂದರೆ ಅಗತ್ಯಕ್ಕಿಂತಲೂ ಅಧಿಕ ಹಣ ಚಲಾವಣೆಯಲ್ಲಿರುತ್ತದೆ ಎಂದರ್ಥ.
(iii) ಕೆಟ್ಟ ಹಣವೂ ಕೂಡಾ ಸಾಕಷ್ಟು ಪ್ರಮಾಣದಲ್ಲಿ ಲಭ್ಯವಾಗುತ್ತದೆ. ಹಾಗಾಗಿ ಹಣ ಚಲಾವಣೆಯ ಕೊರತೆಯ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

ಗ್ರೇಷಮನ ನಿಯಮವು ವಿವಿಧ ಪದ್ಧತಿಗಳಲ್ಲಿ ಹೇಗೆ ಅನ್ವಯವಾಗುತ್ತದೆ?
೧. ಏಕಲೋಹ ಪದ್ಧತಿಯಲ್ಲಿ : ಏಕಲೋಹ ಪದ್ಧತಿಯಲ್ಲಿ ಹಳೆಯ ಮತ್ತು ಚಿಂದಿಯಾದ ಹಣವು ಹೊಸ ಮತ್ತು ಪೂರ್ಣ ತೂಕದ ಹಣವನ್ನು ಚಲಾವಣೆಯಿಂದ ಹೊರಗಟ್ಟುತ್ತದೆ. ಜನರು ಹೊಸ ಹಣವನ್ನು ಸಂಗ್ರಹಿಸಿಡುತ್ತಾರೆ, ಕರಗಿಸುತ್ತಾರೆ ಅಥವಾ ಹೊರ ದೇಶಗಳಿಗೆ ನಿರ್ಯಾತ ಮಾಡುತ್ತಾರೆ.

೨. ದ್ವಿಲೋಹ ಪದ್ಧತಿಯಲ್ಲಿ : ದ್ವಿಲೋಹ ಪದ್ಧತಿಯಲ್ಲಿ ಕಡಿಮೆ ಕ್ರಯದ ಲೋಹದ ಹಣವು ಹೆಚ್ಚು ಕ್ರಯದ ಲೋಹದ ಹಣವನ್ನು ಚಲಾವಣೆಯಿಂದ ಹೊರದಬ್ಬುತ್ತದೆ. ಚಿನ್ನದ ಮತ್ತು ಬೆಳ್ಳಿಯ ನಾಣ್ಯಗಳು ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದರೆ ಬೆಳ್ಳಿಯ ನಾಣ್ಯಗಳು ಚಿನ್ನದ ನಾಣ್ಯಗಳನ್ನು ಚಲಾವಣೆಯಿಂದ ಹೊರಗಟ್ಟಿಬಿಡುತ್ತವೆ.

೩. ಲೋಹದ ಮತ್ತು ಕಾಗದದ ಪ್ರಮಿತಿಗಳಲ್ಲಿ : ಲೋಹದ ಮತ್ತು ಕಾಗದದ ಹಣ ಏಕಕಾಲದಲ್ಲಿ ಚಲಾವಣೆಯಲ್ಲಿದ್ದರೆ ಕಾಗದದ ಹಣವು ಲೋಹದ ಹಣವನ್ನು ಚಲಾವಣೆಯಿಂದ ಹೊರಗಟ್ಟುತ್ತದೆ. ಲೋಹದ ಹಣಕ್ಕೆ ಸ್ವಲ್ಪ ಆಂತರಿಕ ಮೌಲ್ಯವಿರುವುದು ಮತ್ತು ಕಾಗದದ ಹಣಕ್ಕೆ ಯಾವುದೇ ಆಂತರಿಕ ಮೌಲ್ಯವಿಲ್ಲದಿರುವುದು ಇದಕ್ಕೆ ಕಾರಣವಾಗಿರುತ್ತದೆ.

೪. ಕಾಗದದ ಹಣದಪದ್ದತಿಯಲ್ಲಿ: ಕಾಗದದ ಹಣ ಮಾತ್ರವೇ ಚಲಾವಣೆಯಲ್ಲಿದ್ದಾಗ ಹಳೆಯ ನೋಟುಗಳು ಹೊಸನೋಟುಗಳನ್ನು ಚಲಾವಣೆಯಿಂದ ಹೊರಗಟ್ಟುತ್ತವೆ. ಹೊಸ ನೋಟುಗಳನ್ನು ಜನರು ಸಂಗ್ರಹಿಸಿಡುವುದರಿಂದ ಗ್ರೇಷಮನ ನಿಯಮವು ಕಾಗದದ ಹಣದ ಪದ್ಧತಿಯಲ್ಲಿಯೂ ಅನ್ವಯಕ್ಕೆ ಬರುತ್ತದೆ.

ನಿಯಮದ ಅನ್ವಯಿಕೆಗೆ ಕಾರಣಗಳು

ಗ್ರೇಷಮನ ನಿಯಮದ ಅನ್ವಯಿಕೆಗೆ ಮೂರು ಕಾರಣಗಳನ್ನು ನೀಡಬಹುದು :

೧. ಸಂಗ್ರಹಿಸಿಡುವುದು: ಕೆಟ್ಟ ಮತ್ತು ಒಳ್ಳೆಯ ಹಣ ಏಕಕಾಲದಲ್ಲಿ ಚಲಾವಣೆಯಲ್ಲಿದ್ದರೆ ಜನರು ಒಳ್ಳೆಯ ಹಣವನ್ನು ಸಂಗ್ರಹಿಸಿಡುತ್ತಾರೆ. ಕೆಟ್ಟ ಹಣವು ಸಾಕಷ್ಟು ಪ್ರಮಾಣದಲ್ಲಿ ಚಲಾವಣೆಯಲ್ಲಿರುವುದರಿಂದ ಒಳ್ಳೆಯ ಹಣದ ಬಚ್ಚಿಡುವಿಕೆಯಿಂದ ಹಣ ಚಲಾವಣೆಯ ಮೇಲೆ ಪ್ರತಿಕೂಲಕರ ಪರಿಣಾಮ ಉಂಟಾಗುವುದಿಲ್ಲ.

೨. ಕರಗಿಸುವುದು : ಒಳ್ಳೆಯ ಹಣವನ್ನು ಕರಗಿಸಿ ಬೇರೆ ಉಪಯೋಗಗಳಿಗೆ ಬಳಸಲು ಸಾಧ್ಯವಿದೆ. ಕೆಟ್ಟ ಹಣವನ್ನು ಹಾಗೆ ಮಾಡಲು ಸಾಧ್ಯವಾಗದ ಕಾರಣ ಅದು ಚಲಾವಣೆಯಲ್ಲುಳಿದು ಒಳ್ಳೆಯ ಹಣ ಕಣ್ಮರೆಯಾಗುತ್ತದೆ.

೩. ನಿರ್ಯಾತ ಮಾಡುವುದು: ಒಳ್ಳೆಯ ಹಣದಲ್ಲಿ ಅಧಿಕ ಲೋಹ ಮೌಲ್ಯವಿರುವುದರಿಂದ ಅದಕ್ಕೆ ಅಧಿಕ ಅಂತಾರಾಷ್ಟ್ರೀಯ ಬೇಡಿಕೆಯಿರುತ್ತದೆ. ಹಾಗಾಗಿ ಒಳ್ಳೆಯ ಹಣವನ್ನು ನಿರ್ಯಾತ ಮಾಡಲಾಗುತ್ತದೆ. ಪರಿಣಾಮವಾಗಿ ಕೆಟ್ಟ ಹಣವು ಚಲಾವಣೆಯಲ್ಲಿ ಉಳಿದುಕೊಳ್ಳುತ್ತದೆ.

ಗ್ರೇಷಮನ ನಿಯಮದ ಮಿತಿಗಳು
ಗ್ರೇಷಮನ ನಿಯಮದ ಮಿತಿಗಳು ಇವು :

೧. ಹಣದ ಪ್ರಮಾಣ : ಹಣದ ಪ್ರಮಾಣ ಕಡಿಮೆಯಿರುವಾಗ ಈ ನಿಯಮ ಅನ್ವಯವಾಗುವುದಿಲ್ಲ. ಹಣದ ಬೇಡಿಕೆಗಿಂತ ಪೂರೈಕ ಅಧಿಕವಿದ್ದಾಗ ಮಾತ್ರ ಗ್ರೇಷಮನ ನಿಯಮ ಅನ್ವಯವಾಗುವುದು. ಹಣದ ಕೊರತೆಯಿರುವಾಗ ಯಾರೂ ಒಳ್ಳೆಯ ಹಣವನ್ನು ಬಚ್ಚಿಡುವ, ಕರಗಿಸುವ ಅಥವಾ ನಿರ್ಯಾತದ ಕಾರ್ಯವೆಸಗುವುದಿಲ್ಲ.

೨. ಪ್ರಮಾಣಕ ಹಣ : ಗ್ರೇಷಮನ ನಿಯಮವು ಪ್ರಮಾಣಕ (standard) ಅಥವಾ ಪ್ರಧಾನ ಹಣಕ್ಕೆ ಮಾತ್ರವೇ ಅನ್ವಯಿಸುತ್ತದೆ. ಅದು ಪ್ರಮಾಣಕ ಮತ್ತು ಸಾಂಕೇತಿಕ (token) ಹಣಗಳ ನಡುವೆ ಅನ್ವಯವಾಗುವುದಿಲ್ಲ. ಪ್ರಮಾಣಕ ಮತ್ತು ಸಾಂಕೇತಿಕ ಹಣದ ಉಪಯೋಗ ಬೇರೆ ಬೇರೆಯಾಗಿರುವುದು ಇದಕ್ಕೆ ಕಾರಣವಾಗಿರುತ್ತದೆ.

೩. ಅಸ್ವೀಕಾರಾರ್ಹತೆ : ಹಣವು ತೀರಾ ಕೆಟ್ಟದಾಗಿ ಜನರು ಅದನ್ನು ಸ್ವೀಕರಿಸಲು ನಿರಾಕರಿಸಿದಾಗ ಅದು ಚಲಾವಣೆಯನ್ನು ಕಳೆದುಕೊಳ್ಳುತ್ತದೆ. ಅಂತಹ ಅಸ್ವೀಕಾರಾರ್ಹ ಹಣಕ್ಕೆ ಒಳ್ಳೆಯ ಹಣವನ್ನು ಚಲಾವಣೆಯಿಂದ ಹೊಡೆದಟ್ಟುವ ಶಕ್ತಿಯಿರುವುದಿಲ್ಲ.

೪. ಅಂತಾರಾಷ್ಟ್ರೀಯ ದ್ವಿಲೋಹ ಪದ್ದತಿ: ಅಂತಾರಾಷ್ಟ್ರೀಯ ದ್ವಿಲೋಹ ಪದ್ಧತಿಯಲ್ಲಿ ಟಂಕ ದರವು (mint ratio) ಮಾರುಕಟ್ಟೆ ದರಕ್ಕೆ ಸಮವಾಗಿರುತ್ತದೆ. ಮುಕ್ತ ಕರಗಿಸುವಿಕೆಯ (free melting) ವ್ಯವಸ್ಥೆಯಿರುವುದರಿಂದ ಹಣವು ಲೋಹದ ರೂಪವನ್ನು ಮತ್ತು ಲೋಹವು ಹಣದ ರೂಪವನ್ನು ತಾಳುತ್ತಿರುತ್ತದೆ. ಚಿನ್ನ ಮತ್ತು ಬೆಳ್ಳಿ ಮುಕ್ತ ಆಯಾತ ಮತ್ತು ನಿರ್ಯಾತಕ್ಕೆ ಅವಕಾಶವಿರುವಾಗ ವಿದೇಶೀ ವಿನಿಮಯ ದರ ಸಮಾನತೆ ಇರುತ್ತದೆ. ಹಾಗಾಗಿ ಅಂತಾರಾಷ್ಟ್ರೀಯ ಲೋಹ ಪದ್ಧತಿಯಲ್ಲಿ ಗ್ರೇಷಮನ ನಿಯಮ ಅನ್ವಯವಾಗುವುದಿಲ್ಲ.

೫. ಬ್ಯಾಂಕಿಂಗು ಸವಲತ್ತುಗಳು : ಬ್ಯಾಂಕಿಂಗು ಸವಲತ್ತುಗಳಿರುವಲ್ಲಿ ಈ ನಿಯಮ ಅನ್ವಯವಾಗುವುದಿಲ್ಲ. ಕೆಟ್ಟ, ವಿರೂಪಗೊಂಡ ಮತ್ತು ಹಾಳಾದ ಹಣವನ್ನು ವಾಣಿಜ್ಯ ಬ್ಯಾಂಕುಗಳು ಕೊಳ್ಳುತ್ತವೆ. ಹಾಗಾಗಿ ಒಳ್ಳೆಯ ಹಣ ಮಾತ್ರ ಚಲಾವಣೆಯಲ್ಲಿರುತ್ತದೆ.

೬. ಹೂಡಿಕೆಯ ಸವಲತ್ತುಗಳು : ಹೂಡಿಕೆಗೆ ಅವಕಾಶಗಳಿರುವಾಗ ಜನರು ಒಳ್ಳೆಯ ಹಣವನ್ನು ಬಚ್ಚಿಡಲು ಅಥವಾ ಕರಗಿಸಲು ಹೋಗುವುದಿಲ್ಲ. ಹಾಗಾಗಿ ಗ್ರೇಷಮನ ನಿಯಮ ಅನ್ವಯವಾಗುವುದಿಲ್ಲ.

೭. ಸರಕಾರದ ನಿರ್ಬಂಧಗಳು: ಕೆಟ್ಟ ಮತ್ತು ಒಳ್ಳೆಯ ಹಣ ಏಕಕಾಲದಲ್ಲಿ ಅಸ್ತಿತ್ವದಲ್ಲಿದ್ದರೆ ಸರಕಾರವು ಕೆಟ್ಟ ಹಣವನ್ನು ಬದಲಾಯಿಸಲು ಅನುವು ಮಾಡಿಕೊಡುತ್ತದೆ. ಸರಕಾರವೇ ಕೆಟ್ಟ ಹಣವನ್ನು ಮರಳಿ ಪಡೆಯುತ್ತದೆ ಅಥವಾ ಚಲಾವಣೆಯಿಂದ ಹಿಂದೆಗೆಯುತ್ತದೆ. ಆಗ ಗ್ರೇಷಮನ ನಿಯಮ ಅನ್ವಯವಾಗುವುದಿಲ್ಲ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸುದ್ದಿ
Next post ಭಾವಪೂರ್‍ಣ ಶ್ರದ್ಧಾಂಜಲಿ

ಸಣ್ಣ ಕತೆ

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…

 • ಉಪ್ಪು

  ಸಂಜೆ ಮೆಸ್ಸಿನಲ್ಲಿ ಚಹಾ ಕುಡಿಯುತ್ತಿದ್ದಾಗ ಎದುರು ಕುಳಿತ ಪ್ರೊಫ಼ೆಸರ್ ಬಾನಲಗಿಯವರು ಕೇಳಿದರು : "ಸ್ಟೈಲಿಸ್ಟಿಕ್ಸ್ ಬಗ್ಗೆ ನಿನ್ನ ಅಭಿಪ್ರಾಯ ಏನು?" ಅವರು ಬಿಸಿಯಾದ ಚಹಾದ ನೀರನ್ನು ಜಾಡಿಯಿಂದ… Read more…

 • ಅಂತರಂಗ ಶುದ್ಧಿ ಬಹಿರಂಗ ಶುದ್ಧಿ

  ಸ್ವಾಮೀಜಿಗಳಿಗೆ ಈವತ್ತಂತೂ ಮೈ ತುರಿಸಿಕೊಳ್ಳಲೂ ಪುರುಸೊತ್ತಿಲ್ಲ. ಹಲವು ಕಾರ್ಯಕ್ರಮಗಳ ಒತ್ತಡ, ರಾಜಕಾರಣಿಗಳ ಭೇಟಿ ಜೊತೆಗೆ ತಂಡೋಪತಂಡವಾಗಿ ಆಶೀರ್ವಾದ ಬೇಡಿ ಬರುವ ಭಕ್ತರ ಕಿರಿಕಿರಿ. ಇದರ ಮದ್ಯೆ ಜಪತಪ,… Read more…

 • ದುರಾಶಾ ದುರ್ವಿಪಾಕ

  "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

 • ನಂಬಿಕೆ

  ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…