ಅಡ್ವಾಣಿ ಎಂಬ ಓಲ್ಡ್ ಮಾಡಲ್ ರಾಜಕಾರಣೀಯ ನಲವತ್ತು ವರ್ಷಗಳ ಸುಧೀರ್ಘ ಸೇವೆ ಅಂಬೋದು ಹಾಳು ತೋಟಕ್ಕೆ ನೀರು ಹೊತ್ತು ಬೀಳ್ ರೆಟ್ಟೆ ಕೆಡವಿಕ್ಯಂಡ್ರು ಅಂಬಗಾತೇ ನೋಡ್ರೀ. ಬಿಜೆಪಿ ರಜತಮಹೋತ್ಸವದ ಕೊಡುಗೆಯಾಗಿ ಹಿರಿಯ ತೆಲಿಗಳ ನಿವೃತ್ತಿ ಘೋಷಣೆಯೇ ಪ್ರಮುಖ ಅಟ್ರಾಕ್ಶನ್ ಆಗಿದ್ದು ಬಿಜೆಪಿ ಫರ್‌ದರ್‍ ಡೆವಲಪ್‌ಮೆಂಟ್ಸ್‌ಗೇ ಆಗ್ದಿ ಶಾಪವಾಗೇತಿ. ತಾನೇ ಸಾಯೋವರ್ಗೂ ಅಧ್ಯಕ್ಷನಾಗಿರಬೇಕು. ಇನ್ನೇನು ವಾಜಪೇಯಿ ಕಾಲ ಮುಗಿದು ಕಾಲನ ವಶವಾಗತ್ಲು ತಾನೇ ಪಕ್ಷದ ಏಕಮೇವಾದ್ವಿತೀಯ ಹಾಗೂ ಖಾಯಂ ಶ್ರೀರಾಮನ ಪಾಲ್ಟು ತಂದೇ ಎಂದು ಕನಸು ಕಂಡಿದ್ದ ಅಡ್ವಾಣಿ ಕನಸು ಭಗ್ನವಾಗೇತ್ರಿ. ತಾನೇ ಪಕ್ಷದಾಗೆ ನಂಬರ್‍ ಒನ್ ಅಂಬೋ ಕಾಲವೂ ಆಗ ಬಂದಿತ್ತು. ಪಾಕ್ ಟೂರ್‍ ಮಾಡಿ ಜಿನ್ನಾ ನಾಮಸ್ಮರಣೆ ಮಾಡಿದ್ದೇ ಶಾಪವಾಗಿ ಆರ್‌ಎಸ್‌ಎಸ್ಸೇ ಮೈಮಾಲೆ ಕೆಡವಿಕೊಂಡು ಅದ್ವಾನೋಗೊತು ಅಡ್ವಾಣಿ. ಕೈಗೆ ಬಂದು ತುತ್ತು ಬಾಯಿಗೆ ಬರದಂತಾದಾಗ ರಾಂಗ್ ಆದ ಆವಜ್ಜ ಬಿಜೆಪಿಯನ್ನೇ ಆರ್‌ಎಸ್‌ಎಸ್‌ ಹಿಡಿತದಿಂದ ಪಾರು ಮಾಡಲು ಸ್ಕೆಚ್ ಹಾಕ್ತು. ಆರ್‌ಎಸ್‌ಎಸ್‌ ಜಾಲ ಆವಜ್ಜನೇ ಪಕ್ಷದಿಂದ ಗಡಿಪಾರು ಮಾಡ್ತು. ಆದ್ರೂ ಸಮಾಧಾನದ ಸಂಗತಿ ಏನಪ್ಪಾ ಅಂದ್ರೆ ವಿರೋಧ ಪಕ್ಷದ ಲೀಡರ್‍ ಶಿಪ್‌ನ ಕಿತ್ಕೊಣ್ದಂಗೆ ಬಿಟ್ಟಿದ್ದು.

ಕುಡಿಯೋ ನೀರಲ್ಲಿ ಕಾಲು ಅಲ್ಲಾಡಿಸಿದಂಗೆ ಸರಸಂಘ ಸಂಚಾಲಕ ಸುದರ್ಶನ ಯುವಕರಿಗೆ ಸೀಟು ಬಿಟ್ಟು ಕೊಟ್ಟು ಮನೀಗ್ಹೋಗಿ ಇಲ್ಲವೆ ನನ್ನ ಸುದರ್ಶನ ಚಕ್ರಕ್ಕೆ ಬಲಿಯಾಗಿ ಎಂದು ಸೆಡ್ಡು ಹೊಡೆದಾಗ ಢಿಂ ಹೊಡೆದ ವಾಜಪೇಯಿ, ಅಡ್ವಾಣಿ ತಮ್ಮ ಪದವಿ ಪಟ್ಟಗಳಿಗೆ ತರ್ಪಣ ಕೊಡಲೇಬೇಕಾಯಿತು. ಜೊತೆಗೆ ಲೈಂಗಿಕ ಸಿಡಿ ಸ್ಪೆಷಲಿಸ್ಟ್ ಸಂಜಯ ಜೋಷಿಗೆ ಕಾರ್ಯದರ್ಶಿ ಸ್ಥಾನದಿಂದ ನಿವೃತ್ತಿ ಯೋಗ ಪ್ರಾಪ್ತಿ. ತಾನಿನ್ನು ಚುನಾವಣೆಗೆ ಕಂಟೆಸ್ಟ್ ಮಾಡಲ್ಲವೆಂದು ಮನೆದಾರಿ ಹಿಡಿದ ವಾಜಪೇಯಿ ಸುಮ್ಮನಿರಲಾರದೆ ಅದೆಲ್ಲೋ ಏನೋ ಬಿಟ್ಕಂಡ್ರು ಅಂಬಂಗೆ “ರಾಮಾಯಣದ ಕಥಾ ಕಾಲಕ್ಷೇಪ” ಮಾಡಿ, ಅಡ್ವಾಣಿ ರಾಮ, ಮಹಾಜನ್ ಲಕ್ಷಣ ಅಂತ ಪಾಲ್ಟು ಹಂಚೋದ! ತನ್ನ ಸೀಟಿಗೆ ಆಂಧ್ರವಾಲ ವೆಂಕಯ್ಯನನ್ನು ತರಬೇಕಂತಿದ್ದ ಅಡ್ವಾಣಿಯ ಎರಡನೇ ಕನಸು ಭಗ್ನ ಮಾಡಿದ್ದು ಸ್ವತಹ ಆಪ್ತಮಿತ್ರ ವಾಜಪೇಯಿ! ಎ ಚೌ ಆಲ್ ಲಂಚಾವತಾರಿ. ಬಿಜೆಪಿ ಸಂಸದರ ಶಾಸಕರ ಸಂಖ್ಯೆಯೇ ಲಂಚಾಕೋರರ ಪೇರೇಡ್‌ನಲ್ಲಿ ಮೆಜಾರ್‍ಟಿ ಪಡೆದಾಗ ಪಕ್ಷಕ್ಕೆ ಪಕ್ಷಪಾತ ಬಡೆದಂಗಾತು. ಸಾಲದಕ್ಕೆ ಲಿಪ್‌ಸ್ಟಿಕ್ ಸನ್ಯಾಸಿ ಉಮಾಭಾರ್‍ತಿ ಟಂಗ್ ಲಾಂಗ್ ಆಗಿದ್ದರಿಂದ ಪಕ್ಷ ಆಕೆಯ ಟಂಗ್ ಕಟ್ ಮಾಡಿ ರಾಮರೋಟಿ ವನವಾಸಕ್ಕೆ ಸಾಗು ಹಾಕೆತ್ರಿ. ಕಾಂಗ್ರೆಸ್ಸಿನ ಡೂಪ್ಲಿಕೇಟ್ ನಂತಾದ ಬಿಜೆಪಿ ಪ್ರಪಾತಕ್ಕೆ ಅಂಜಿದ ಹಿರಿತಲೆಗಳು ರಿಟೈರ್‍ಡ್ ಹಾದಿ ಹಿಡಿದಾಗ ಹಿರಿಯಪಟ್ಟಕ್ಕೆ ಗಾಳ ಹಾಕಿದ್ದ ವೆಂಕಯ್ಯನಿಗೆ ವಾಜಪೇಯಿ ಟಾಂಗ್ ಕೊಡಲಾಗಿ, ಒಳಗೇ ರಾಂಗ್ ಆದ ವೆಂಕಿ, `ನೇನು ಲಕ್ಷ್ಮಣನೂ ಕಾದು ಭರತನೂ ಕಾದಂಡಿ. ನಾಕು ಹನುಮಂತ ನ ಪಾಲ್ಟೇ ಇಷ್ಟ’ ಎಂದು ಬಾಲ ಅಂಟಿಸಿಕೊಳ್ಳಬೇಕೆ. ಇದನ್ನೆಲ್ಲಾ ನೋಡುತ್ತಲೇ ಪಕ್ಷದ ಅಧ್ಯಕ್ಷನಾದ ರಾಜನಾಥಸಿಂಗ್ ಪಕ್ಷದಲ್ಲುಂಟಾದ ಗಬ್ಬುನಾತ ತಾಳಲಾರದೆ ಅನಾಥನಂಗಾಗೇತ್ರಿ. ಆವಯ್ಯನೀಗ ಸೀತೆ ಪಾಲ್ಟು ಯಾರ್‍ದು? ಅಂಬೋದೇ ಚಿಂತೆಗಿಟ್ಕಂಡೈತಿ. ಸದ್ಯಕ್ಕೆ ವನವಾಸದಲ್ಲಿರೋ ಉಮಾಭಾರ್‍ತಿಯೇ ಸೀತಿ ಅಂದ್ರೆ ಗೋವಿಂದಾಚಾರಿ ಎಂಬ ಓಲ್ಡ್ ಮ್ಯಾನ್ ಕೆಂಡಾಮಂಡಲ ವಾಗ್ತೇತಿ. ಉಮಕ್ಕನ ಸೆಕಂಡ್ ಬಾಯ್ ಫ್ರೆಂಡ್ ಮಾಡರನ್ ಮುನಿ ಪೇಜಾವರ ಮನವೂ ಹುಳ್ಳಗಾಗ್ತೇತಿ. ರಜತ ಮಹೋತ್ಸವವೆಂಬ ಸಮಾರಂಭ ಅಂಬೋದು ನಿವೃತ್ತಿ ಸಮಾರಂಭವಾಗಿ ಕಳೆಗೆಟ್ಟಾಗ ರಾಜನಾಥಸಿಂಗ್‌ನಂತ ಪಬ್ಲಿಸಿಟಿ ಗ್ರಾಮರ್‍ ಗ್ಲಾಮರ್‍ ಗೊತ್ತಿಲ್ಲದ ಈ ಸಿಂಗ ಮತ್ತೊಬ್ಬ ಮನಮೋಹನ ಸಿಂಗ್ ಧರ್ಮಸಿಂಗನ ಟೈಪಾಗಿ ಪಕ್ಷನಾ ಸ್ಲೋಮೋಷನ್ನಾಗೆ ಥಿಂಕ್ ಮಾಡಹತ್ತಿದೋರ ಲೀಸ್ಟ್‌ನಾಗೆ ಹಿಂದಿ ತಾರೆಯರಷ್ಟೇ ಭಾರತಾದ್ಯಂತ ಮಿರಮಿರನೆ ಮಿಂಚುತ್ತಿದ್ದೇವೆಂದು ಭ್ರಮಿಸಿರುವ ಸುಸ್ಮಾ ಸ್ವರಾಜು, ಜೇಟ್ಲಿ, ಮಹಾಜನ್, ಮುರ್‍ಳಿ ಮನೋಹರ ಜೋಷಿಯಂತ ಓಲ್ಡ್ ತಳಿಗಳಿಗೀಗ ಒಳಗೇ ತಳಮಳ ಸುರುವಾಗೇತಿ. ಇವರಿಗೆಲ್ಲಾ ಒಂದೇ ಸಮಾಧಾನದ ಮ್ಯಾಟರ್‍ ಅಂದ್ರೆ ಅಬ್ಬಬ್ಬಾ ಅಂದ್ರೆ ಈ ಸಿಂಗ ಒನ್ ಇಯರ್‍ ಸಿಂಗಿಂಗ್ ಮಾಡಬಲ್ಲ. ೨೦೦೭ಕ್ಕೆ ಮತ್ತೆ ತಮಗೇ ಅವಕಾಶ ಕಾದೇತೆ. ಬಿಜೆಪಿ ಸಂವಿಧಾನದ ಪ್ರಕಾರ ಎಲ್ಡನೇ ದಪ ಅಧ್ಯಕ್ಷನಾಗಂಗಿಲ್ಲ. ಅದಕ್ಕೆ ಇವರೆಲ್ಲಾ ಈಗ್ಲೆ ಮುಂದಿನ ಪಟ್ಟವನ್ನಲಂಕರಿಸಾಕೆ ಕತ್ತಿ ಗುರಾಣಿ ಈಟಿ ಭರ್ಜಿ ಬಿಲ್ಲ ಬಾಣ ಸಾಣೆ ಹಿಡಿದಿಟ್ಟುಕೊಳ್ಳಾಕತ್ತಾರೆ. ೭೯ರ ಅಡ್ವಾಣಿ ೮೨ರ ವಾಜಪೇಯಿಗಳಿಲ್ಲದ ೨೫ರ ಹರೇದ ಬಿಜೆಪಿ ಈಗ ಆಕ್ಸಿಡೆಂಟ್‌ನಾಗ ಕಾಲು ಕಳ್ಕೊಂಡು ಕ್ಲಚಸ್ ಹಿಡಿದ ಹ್ಯಾಂಡಿಕ್ಯಾಪ್ಡ್‌ ನಂಗಾಗೇತ್ರಿ. ಇಂತದ್ರಾಗೆ ಕರ್ನಾಟಕದ ಕಡೆ ಮೂತಿ ಹೊಳ್ಳಿಸಿದ್ರೆ ಜಿ.ಪಂ., ತಾ.ಪಂ. ಯಲಕ್ಷನ್ದಾಗ ಸೋತು ಸುಣ್ಣವಾಗಿರೋ ಯಡೂರಿ ತನಗೆ ಈ ಜನ್ಮದಾಗೆ ಸಿಎಂ ಆಗೋ ಯೋಗ್ತೆ ಇರ್‍ಲಿ ತತ್ರಾಪಿ ಮಿನೀಟ್ರೂ ಆಗದಂತ ಕಾಲ ಬಂತಲ್ಲೋ ಯಪ್ಪಾ ಅಂತ ಅಳ್ಳಿಕತ್ತೇತಿ. ಅನಂತಕುಮಾರನೆಂಬ ಹಲ್ಲುಬ್ಬಿಯಂತೂ ಅಬ್‌ಸ್ಕಾಂಡ್ ಆಗೋಗೇತಿ. ಯಾಕೋ ೨೦೦೫ ಬಿಜೆಪಿ ಪಾಲಿಗೆ ಶಾಪವಾಗಿ ಕಾಡಿದ್ದು ೨೦೦೬ಕ್ಕೂ ಕಂಟಿನ್ಯೂ ಆಗೋ ಚಾನ್ಸ್ ಭಾಳ ಐತ್ರಿ ಅಂತ ಖಾದಿ ತೊಡದ ರಾಜಕಾರಣಿ ಪೇಜಾವರರ ಅಂಬೋಣ. ಸಾಕ್ಷಾತ್ ಶ್ರೀರಾಮಚಂದ್ರನೇ ಭೂಮಿಗಿಳಿದು ಬಂದು ಪಕ್ಷವನ್ನು ಕಾಪಾಡಿದರೆ ಮಾತ್ರ ಪಕ್ಷ ಉಳಿತದೆ ಮಾರಾಯ್ರೆ. ಸಾಧ್ವಿ ಉಮಕ್ಕನ ನಿಟ್ಟುಸಿರು ಪಕ್ಷನವನ್ನು ಸುಡ್ಲಿಕ್ಕುಂಟು ಎಂದು ತನ್ನ ಅಂತರಾತ್ಮ ನುಡಿಯುತ್ತದೆ ಎಂದು ಪಂಚಾಂಗವ ನೋಡಿ ಭವಿಷ್ಯ ಹೇಳಿರುವ ಮುನಿ ಪೇಜಾವರ ಶ್ರೀರಾಮನನ್ನು ಒಲಿಸಿಕೊಳ್ಳಲು ಅಖಂಡ ತಪಸ್ಸಿಗೆ ಕೂರುತ್ತಾರೆಂಬ ಸುದ್ದಿ ನಂಬನರ್ಹ ಕಡೆಯಿಂದ ಹಬ್ಬೇತ್ರಿ. ನಂಬಿದರೆ ನಂಬಿ ಬಿಟ್ಟರೆ ಬಿಡ್ರಿ ಜೈ ಸಿಹಿ ರಾಂ.
*****
( ದಿ. ೦೧-೦೧-೨೦೦೬)