ಮಂಥನ – ೫

swirling-light-1209350_960_720Unsplashಚುಮು ಚುಮು ಬೆಳಗು, ಅರೆ ಕತ್ತಲೆ ಅರೆ ಬೆಳಕು. ಹಕ್ಕಿಗಳ ಚಿಲಿಪಿಲಿ ಸ್ವರ. ಇಂತಹ ಮುಂಜಾವುಗಳೆಂದರೆ ಅತ್ಯಂತ ಪ್ರಿಯವಾದದ್ದು ನೀಲಾಗೆ. ಎಲ್ಲರೂ ಮಲಗಿದ್ದರೂ ತಾನೊಬ್ಬಳೇ ಎದ್ದು ಮನೆಯ ಮುಂದೆ ದಿನಕ್ಕೊಂದು ರಂಗೋಲಿ ಇರಿಸಿ, ಅದನ್ನೊಮ್ಮೆ ಕಣ್ತುಂಬಿಕೊಂಡು, ಹೂ ಬುಟ್ಟಿ ಕೈಲಿಟ್ಟುಕೊಂಡು ತೋಟಕ್ಕೆ ಹೊರಟಳೆಂದರೆ ಹೂ ಬುಟ್ಟಿ ತುಂಬಾ ಹೂ ತುಂಬಿದರೂ ಮನೆಗೆ ಮರಳಲು ಇಷ್ಟವಾಗುತ್ತಿರಲಿಲ್ಲ.

ಬಣ್ಣ ಬಣ್ಣದ ಹೂ ಒಂದೇ ಎರಡೇ, ತಾನೇ ಆಸೆಪಟ್ಬು ಎಲ್ಲೆಲ್ಲಿಂದಲೋ ತರಿಸಿದ ನೂರೆಂಟು ತರಹದ ಗುಲಾಬಿ, ದಾಸವಾಳ, ಸೇವಂತಿಗೆ ಅಬ್ಬಾ ಇಡೀ ತೋಟವೇ ಹೂವಿನ ಮಯವಾಗಿತ್ತು. ಒಂದೊಂದು ಹೂವಿನ ಬಳಿಗೂ ಹೋಗಿ ಅವುಗಳೊಂದಿಗೆ ಪಿಸುಪಿಸು ಮಾತನಾಡುತ್ತ ಬೊಗಸೆಯಲ್ಲಿ ಇರಿಸಿ ಹೂಮುತ್ತನಿಡುತ್ತ ಮಕ್ಕಳಂತೆ ಆಟವಾಡುತ್ತಿದ್ದರೆ ಹೊತ್ತು ಹೋಗಿದ್ದೇ ತಿಳಿಯುತ್ತಿರಲಿಲ್ಲ. ಮೆಲ್ಲನೆ ಮೇಲೇಳುತ್ತಿದ್ದ ಕೆಂಬಣ್ಣದ ರವಿ ತನ್ನ ಬಣ್ಣ ಕಳೆದುಕೊಳ್ಳುವ ತನಕವೂ ತೋಟದಲ್ಲೆಲ್ಲ ಅವಳದೇ ಅಧಿಪತ್ಯ. ಇಡೀ ತೋಟ ಸುತ್ತಿ ರಂಗು ರಂಗಿನ ಹೂ ಕೊಯ್ದು ಕಾಲೇಜಿನ ನೆನಪಾಗಿ ಮನೆಯತ್ತ ಹೊರಡುತ್ತಿದ್ದಳು.

ಹೀಗೊಂದು ದಿನ ತೋಟದಿಂದ ಮರಳುತ್ತಿರುವಾಗಲೇ ಮನೆಯ ಮುಂದೆ ಜಾಗಿಂಗ್ ಹೊರಟ ಅವನು ನಿಂತಿದ್ದು, ಚಿತ್ತ ಚಿತ್ತಾರದ ರಂಗವಲ್ಲಿಯತ್ತಲೇ ಕಣ್ಣು ನೆಟ್ಟು ತನ್ನ ಜಾಗಿಂಗ್‌ನ್ನು ಮರೆತು ಇಹಲೋಕದ ಅರಿವೇ ಇಲ್ಲದ ನಿಂತಿದ್ದವನನ್ನು ಎಚ್ಚರಿಸಲು ತಾನು ಕೆಮ್ಮಿದ್ದು. ತಟ್ಟನೆ ಇತ್ತ ತಿರುಗಿದ ಆತ “ಹೌ ಮಾರ್ವಲೆಸ್” ಎಂದಾಗ ರಂಗವಲ್ಲಿಗೋ, ತನಗೋ ತಿಳಿಯದೆ ಗಲಿಬಿಲಿಗೊಂಡಾಗ, ತಟ್ಟನೆ ಆತ ‘ಈ ರಂಗೊಲಿ ತುಂಬಾ ಚೆನ್ನಾಗಿದೆ ನೀವು ಬಿಡಿಸಿದೆ’ ಎಂದಿದ್ದ . ಹೌದೆನ್ನುವಂತೆ ತಲೆಯಾಡಿಸಿದ್ದಳು.

“ವೆರಿ ನೈಸ್ ಹಾಬಿ. ಕೀಪ್ ಇಟ್ ಅಪ್” ಎಂದವನೇ ಹೊರಡಲು ಅನುವಾದೊಡನೆ ತನಗೆ ಏನನಿಸಿತೋ ತಕ್ಷಣವೇ ಕೈಯಲ್ಲಿದ್ದ ಗುಲಾಬಿಯನ್ನು ತಗೊಳ್ಳಿ ಎಂದು ಕೊಟ್ಬುಬಿಟ್ಟಿದ್ದೆ. ಕಣ್ಣರಳಿಸಿ ಗುಲಾಬಿ ತಗೆದುಕೊಂಡು “ಥ್ಯಾಂಕ್ಯೂ, ಥ್ಯಾಂಕ್ಯೂ ವೆರಿಮಚ್” ತುಂಟನಗೆ ಚೆಲ್ಲಿ ಆತ ಬೆನ್ನು ತಿರುಗಿಸಿದ್ದರೆ, ನೀಲಾ ಎಲ್ಲೋ ತೇಲಿಹೋಗಿದ್ದಳು.

ಅಂದಿನಿಂದ ಪ್ರಾರಂಭವಾಗಿತ್ತು ಅವರ ರಂಗೋಲಿ, ಗುಲಾಬಿ ಸ್ನೇಹ. ಮೊದಲೇ ರಂಗೋಲಿ ಬಿಡಿಸುವುದೆಂದರೆ ಅತ್ಯಂತ ಆಸಕ್ತಿ. ಈಗ ಅದನ್ನೂ ಮೆಚ್ಚುವವರಿದ್ದಾರೆ ಅಂದರೆ ಕೇಳಬೇಕೆ. ವಿಶೇಷ ಆಸಕ್ತಿಯಿಂದ ದಿನಕ್ಕೊಂದು ರೀತಿಯ ರಂಗೋಲಿ ಬಿಡಿಸಿ ಬಣ್ಣ ಬಣ್ಣದ ಪುಡಿ ಹಾಕಿ ವಿಶೇಷ ಮೆರುಗು ನೀಡುತ್ತಿದ್ದಳು.

ತೋಟಕ್ಹೋದೊಡನೆ ಅತ್ಯಂತ ಸುಂದರವಾದ ಗುಲಾಬಿ ಆರಿಸಿಕೊಳ್ಳುತ್ತಿದ್ದಳು. ಮೊದಲಿನಂತೆ ಹೆಚ್ಚು ಹೊತ್ತು ತೋಟದಲ್ಲಿರಲು ಅವಳಿಂದ ಈಗ ಸಾಧ್ಯವಾಗುತ್ತಿರಲಿಲ್ಲ. ಬೇಗ ಬೇಗ ಬುಟ್ಟಿ ತುಂಬಿಸಿ ಧಾವಿಸುವಷ್ಪರಲ್ಲಿ ಆತ ರಂಗೋಲಿ ನೋಡುತ್ತ ತನ್ಮಯನಾಗಿರುತ್ತಿದ್ದ. ಆ ತನ್ಮಯತೆಯನ್ನೇ ನೀಲ ಬಹುವಾಗಿ ಮೆಚ್ಚುತ್ತಿದ್ದುದು. ಅದೇನು ಹುಚ್ಚು ಆಸಕ್ತಿ. ಗಂಡಸರಿಗೂ ಈ ರಂಗೋಲಿ ಹುಚ್ಚಿರುತ್ತದೆಯೇ ಎಂದು ಅಚ್ಚರಿ ಪಡುತ್ತಿದ್ದಳು. ತಾನು ಬಂದು ನಿಂತಿರುವುದು ಕೂಡ ಅರಿವಿಲ್ಲದಂತೆ ಆ ರಂಗೋಲಿಯಲ್ಲಿ ಮುಳುಗಿ ಹೋಗಿರುತ್ತಿದ್ದ. ನೀಲ ಎಚ್ಚರಿಸದಿದ್ದರೆ ಇಡೀ ದಿನ ಹೀಗೆಯೇ ನಿಂತು ಬಿಡುತ್ತಾನೇನೋ ಎಂದು ಗಾಬರಿಯಾಗುತ್ತಿತ್ತು.

ಪ್ರತಿದಿನವೂ ತಾನು ಹುಸಿ ಕೆಮ್ಮಿಯೇ ಆತನನ್ನು ಎಚ್ಚರಿಸಬೇಕಾಗುತ್ತಿತ್ತು. ಯಾವುದೋ ಆನಂದ ಲಹರಿಯಿಂದ ಈಚೆ ಬಂದವನಂತೆ ಇಹಕ್ಕೆ ಬರುತ್ತಿದ್ದ. ಅವಳನ್ನು ಕಂಡೊಡನೆ ಆಕರ್ಷಕ ನಗೆ ಚೆಲ್ಲಿ “ಮಾರ್ವಲೆಸ್” ಎನ್ನುತ್ತಿದ್ದ. ಪ್ರತಿದಿನವೂ ಮಾರ್ವಲೆಸ್ ಎಂದು ಕೇಳಿ ಕೇಳಿ ಈತನಿಗೆ ಈ ಪದ ಬಿಟ್ಟರೆ ಬೇರೆ ಪದ ಗೊತ್ತಿಲ್ಲವೇ ಎಂದುಕೊಳ್ಳುತ್ತಿದ್ದಳು ನೀಲ. ಅವಳು ಕೊಡುವ ಮುನ್ನವೇ ಹೂವಿಗಾಗಿ ಕೈ ಚಾಚುತ್ತಿದ್ದ. ಆತನಿಗೆಂದೇ ಇಡೀ ತೋಟ ಹುಡುಕಿ ತೋಟದಲ್ಲಿಯೇ ಅತ್ಯಂತ ಸುಂದರವಾದ ಹೂ ಹುಡುಕಿ ಕೈಯಲ್ಲಿರಿಸಿಕೊಂಡಿರುತ್ತಿದ್ದಳು. ಆತ ಕೈ ಚಾಚಿದೊಡನೆ ಮಂತ್ರಮುಗ್ದಳಾಗಿ ಕೈ ನೀಡಿ ಹೂ ಕೊಡುತ್ತಿದ್ದಳು. ಅಪ್ರತಿಮವಾದುದ್ದೇನೋ ಪಡೆಯುವಂತೆ ಅದನ್ನು ಪಡೆದು ಅದೇ ಪದ ‘ಥ್ಯಾಂಕ್ಯೂ, ಥ್ಯಾಂಕ್ಯೂ ವೆರಿಮಚ್’ ಎಂದು ನುಡಿದು ನಗೆ ಚೆಲ್ಲಿ ಅಲ್ಲಿಂದ ಧಾವಿಸಿಬಿಡುತ್ತಿದ್ದ. ಅವನು ಓಡುವುದನ್ನು ನೋಡುತ್ತ ನಿಂತುಬಿಡುತ್ತಿದ್ದಳು ನೀಲ.

ಅವನಾರು, ಅವನ ಹೆಸರೇನು. ಎಲ್ಲಿದ್ದಾನೆ, ಏನು ಮಾಡುತ್ತಿದ್ದಾನೆ, ಇವ್ಯಾವುದೂ ನೀಲಳಿಗೆ ಗೊತ್ತಿರಲಿಲ್ಲ. ಪ್ರತಿದಿನ ರಂಗೋಲಿ ಬಿಡಿಸುವುದು, ಆತ ಅದನ್ನು ಮೆಚ್ಚುವುದು, ಅವನಿಗಾಗಿ ಸುಂದರ ಹೂವೊಂದನ್ನು ನೀಡುವುದು ಇದಿಷ್ಟೇ. ಅಲ್ಲಿಂದ ಮುಂದಕ್ಕೆ ಆ ಸ್ನೇಹ ದಾಟಲೇ ಇಲ್ಲ.

ಆತನ ಹೆಸರಾದರೂ ಏನೆಂದು ತಿಳಿದುಕೊಳ್ಳಬೇಕೆಂದು ಪ್ರತಿ ದಿನ ಯೋಚಿಸುತ್ತಿದ್ದಳು. ಆದರೆ ಆತ ಎದುರಿಗಿದ್ದಾಗ ಅದು ಮರೆತೇ ಹೋಗುತ್ತಿತ್ತು. ಅಂತೂ ಒಂದು ದಿನವೂ ತಪ್ಟಿಸಿಕೊಳ್ಳದಂತೆ ಆತ ಬರುತ್ತಿದ್ದ. ಇವಳೂ ಕೂಡ ಎಪ್ಟೇ ಕಷ್ಟವಾದರೂ ರಂಗೋಲಿ ಇಡುವುದನ್ನು ಮರೆಯುತ್ತಿರಲಿಲ್ಲ. ಸುಮಾರು ನಾಲ್ಕೈದು ತಿಂಗಳು ಹೀಗೇ ನಡೆದಿತ್ತು ಅಂತ ಕಾಣಿಸುತ್ತೆ.

ಅಂದು ನೀಲಳಿಗೆ ಪರೀಕ್ಷೆ. ರಂಗೋಲಿ, ತೋಟ ಅಂತಾ ಟೈಂ ವೇಸ್ಟ್ ಮಾಡಬೇಡ. ಸುಮ್ನೆ ಓದ್ಕೊ ಅಂತಾ ಅವರಪ್ಪ ತಾಕೀತು ಮಾಡಿದ್ದರಿಂದ, ಅವಳಿಗೂ ಪರೀಕ್ಷೆಯ ಟೆನ್ಷನ್. ಹಾಗಾಗಿ ಆತನನ್ನು ಮರೆತೇಬಿಟ್ಟಳು. ಆದೇಕೋ ನೆನಪಾಗಿ ಗಡಬಡನೆ ರೂಮಿನಿಂದ ಹೊರಬಂದು ಕಿಟಕಿಯ ತರೆ ಸರಿಸಿ ಹೊರ ದೃಷ್ಟಿ ಹರಿಸಿದರೆ, ಆತ ಅಲ್ಲಿಯೇ ನಿಂತಿದ್ದಾನೆ. ಪ್ರತಿ ದಿನದ ಆನಂದ ಆ ಮೊಗದಲ್ಲಿಲ್ಲ. ಏನೋ ಕಳೆದುಕೊಂಡಂತ ವಿಷಾದ ಭಾವ. ಅದೆಷ್ಟು ಹೊತ್ತಿನಿಂದ ಅಲ್ಲಿ ನಿಂತಿದ್ದನೋ, ನಿರಾಶೆಯಿಂದ ಬಾಗಿಲ ಕಡೆಗೊಮ್ಮೆ ದೀರ್ಘ ನೋಟ ಹರಿಸಿ, ಭಾರವಾದ ಹೆಜ್ಜೆ ಇರಿಸುತ್ತ ಆತ ಹೋಗುತ್ತಿದ್ದರೆ, ನೀಲಳ ಹೃದಯದಲ್ಲಿ ಕೋಲಾಹಲ. ಒಂದೆಡೆ ತಳಮಳ, ಮತ್ತೊಂದೆಡೆ ಪುಳಕ. ತಟ್ಟನೆ ರೋಮಾಂಚಿತಳಾದಳು. ಅವನು ತನ್ನನ್ನು ಮಿಸ್ ಮಾಡಿಕೊಳ್ಳುತ್ತಿದ್ದಾನೆ. ಇಂದು ತಾನು ಕಾಣಲಿಲ್ಲವೆಂದು ಆತನಿಗೆ ನಿರಾಶೆಯಾಗಿದೆ. ಅಂದರೆ ಆತ ‘ಓಹ್’ ಮೊಗ ಮುಚ್ಚಿಕೊಂಡಳು. ನನ್ನದೆಯ ಕೋಲಾಹಲಕ್ಕೆ ಆತನ ಇಂದಿನ ವರ್ತನೆಯೇ ಕಾರಣ. ಈ ಪುಳಕ ತಳಮಳ, ರೋಮಾಂಚನ ಅವನಿಂದಲೇ. ಇದು ಹೇಗೆ ಸಾಧ್ಯವಾಯಿತು. ಈ ಪುಳಕ, ತಳಮಳ ಅದೇನಾ, ಓಹ್ ಇದಿಷ್ಟು ಸುಖ ತರುತ್ತದೆಯೇ, ಇಷ್ಟೊಂದು ಹಿತ ನೀಡುತ್ತದಯೇ, ಪರೀಕ್ಷೆ ಎನ್ನುವುದೇ ಆ ಗಳಿಗೆಗೆ ಮರೆತು ಹೋಯಿತು.

ಅಂದಿನ ಬೆಳಗು ಹೊಸ ಬೆಳಕಾಗಿತ್ತು. ರಂಗೋಲಿ ಇಡುವ ಕೈ ಕಂಪಿಸುತ್ತಿದ್ದವು. ತುಟಿಗಳು ಮೆಲ್ಲನೆ ಅದುರುತ್ತಿದ್ದವು. ಹೃದಯ ಡವಡವ ಹೊಡೆದುಕೊಳ್ಳುತ್ತಿತ್ತು. ಅಂತೂ ಕಷ್ಟಪಟ್ಟು ರಂಗೋಲಿ ಮುಗಿಸಿದಳು. ತೋಟಕ್ಹೋದರೆ ಹೂ ಕೊಯ್ಯಲು ಕೈಯೇ ಏಳುತ್ತಿರಲಿಲ್ಲ. ಬಲವಂತವಾಗಿ ಹೂ ಬಿಡಿಸಿ, ಕೆಂಪು ಗುಲಾಬಿಯೊಂದನ್ನು ಕೈಯಲ್ಲಿರಿಸಿಕೊಂಡರೆ ಇಡೀ ಕೈ ಬೆವರಿ ಹಣೆಯ ಮೇಲೆ ಬೆವರಿನ ಸಾಲು ಮುತ್ತುಗಳಂತೆ ನಿಂತವು.

ನಿಧಾನವಾಗಿ ಹೆಜ್ಜೆ ಹಾಕಿ ಬಂದರೆ ಆತ ನಿಂತಿದ್ದಾನೆ. ಅದೇ ಸಂತೋಷದ ಲಹರಿ, ಅದೇ ತಾದ್ಯಾತ್ಮತೆ, ಆದೇ ಇಹದ ಪರಿವೇ ಇಲ್ಲದ ನೋಟ. ಅಲ್ಲೊಂದು ಬದಲಾವಣೆ ಅವಳ ಸೂಕ್ಷ್ಮ ಕಣ್ಣಿಗೆ ಗೋಚರಿಸಿಬಿಟ್ಟಿತು. ತಣ್ಣನೆ ಗಾಳಿ ಬೀಸಿದಾಗ ಅವಳಿಗರಿವೇ ಇಲ್ಲದೇ “ಅಹಾಹಾ” ಎಂದು ನಡುಗಿ ಬಿಟ್ಟಳು.

ತಟ್ಟನೆ ತಲೆ ಎತ್ತಿದ. ಸಾವಿರ ನಕ್ಷತ್ರಗಳ ಹೊಳಪು. ಆ ಪ್ರಖರತಗೆ ತಲೆ ತಗ್ಗಿಸಿಬಿಟ್ಟಳು. ಅರ್ಥವಾಗಿ ಹೋಯಿತು ಅವಳ ಹೃದಯಕ್ಕೆ. ಬಾಯಿ ಬಿಟ್ಟು ಏನೂ ಹೇಳಬೇಕಾಗಿರಲಿಲ್ಲ. ಮೆಲ್ಲನೆ ನಡುಗುತ್ತಿರುವ ಕೈಗಳೆತ್ತಿ ಹೂ ನೀಡಿದಳು. ನೋಟ ಬೆರೆಸುವ ಧೈರ್ಯ ಸಾಲಲಿಲ್ಲ. ತಗ್ಗಿಸಿದ ತಲೆ, ಮುತ್ತಿಟ್ಟ ಬೆವರಿನ ಸಾಲು ಹಣೆಯ ಮೇಲೆ, ಕಂಪಿಸುವ ಕೈಯಲ್ಲಿ ಕೆಂಪು ಗುಲಾಬಿ. ಎಷ್ಟು ಹೊತ್ತಾದರೂ ಹೂ ತೆಗೆದುಕೊಳ್ಳುವ ಕೈ ಮುಂದೆ ಬಾರದಿದ್ದಾಗ ತಟ್ಟನೆ ತಲೆ ಎತ್ತಿದರೆ, ಆರಾಧನಾ ನೋಟ. ಅದೆಷ್ಟು ಹೊತ್ತು ಹೀಗೆ ನಿಂತಿರುತ್ತಿದ್ದರೋ, ಅವಳೇ ಮೊದಲು ಎಚ್ಚೆತ್ತಳು. ಅವನ ಕೈಗೆ ಹೂ ತುರುಕಿ ಓಡುವ ನಡಿಗೆಯಲ್ಲಿ ಹಿಂತಿರುಗಿದಳು. ಆ ನಡಿಗೆಯ ಲಾಸ್ಯ, ನೀಳ ಜಡೆಯ ನಾಟ್ಯ, ಕೈಯಲ್ಲಿದ್ದ ಕೆಂಪು ಗುಲಾಬಿ ಹೊಸ ಲೋಕವನ್ನೇ ತೆರೆಸಿತು. ಮೆಲ್ಲನೆ ಹೂವಿಗೆ ಮುತ್ತಿಟ್ಟವನೇ ಸಂಭ್ರಮದಿಂದ ಓಡತೊಡಗಿದ. ಎಷ್ಟು ಓಡಿದರೂ ಇಂದವನಿಗೆ ದಣಿವೇ ಆಗಲಿಲ್ಲ. ಹೊಸತು ಎಲ್ಲವೂ ಹೊಸ ಹೊಸತು. ಹುಟ್ಟೋ ಸೂರ್ಯ ಹೊಸದಾಗಿ ಕಂಡ. ಸಾಲು ಮರಗಳೆಲ್ಲ ಹೊಸತಾಗಿ ಕಂಡವು. ಆಲ್ಲಿ ಓಡಾಡುತ್ತಿದ್ದ ಜನರೆಲ್ಲ ಹೊಸಬರಾಗಿ ಕಂಡರು. ಅಂದೆಲ್ಲ ಎಲ್ಲವೂ ಹೊಸ ಹೊಸತು.

ರಾತ್ರಿಯೆಲ್ಲ ಅಶಾಂತಿ, ತಳಮಳ, ಉದ್ವಿಗ್ನತೆ, ಕಣ್ರೆಪ್ಪೆ ಮುಚ್ಚಲಾಗಲಿಲ್ಲ. ಇಡೀ ಹಾಸಿಗೆ ಭರ್ತಿ ಹೊರಳಾಡಿ ಹೊರಳಾಡಿ ಸುಸ್ತಾದಳು ನೀಲಾ. ಛೀ, ಇಂಥ ತಳಮಳಕ್ಕೆ ತಾನು ಸಿಕ್ಕಿಕೊಳ್ಳಬಾರದೆಂದು ತಾನು ಮಾಡಿದ್ದ ನಿರ್ಧಾರವೆಲ್ಲ ಏನಾಗಿಹೋದವು? ಅಪ್ಪ ಏನೆಂದಿದ್ದ ಕಾಲೇಜು ಸೇರುವಾಗ? ತನ್ನ ಮಗಳ ಬಗ್ಗೆ ಏನಾದರೂ ಹೊಸ ವಿಷಯ ಕಿವಿಗೆ ಬಿದ್ದರೆ, ಶಿಕ್ಷೆ ನಿನಗಲ್ಲ, ನನ್ನನ್ನೇ ಶಿಕ್ಷಿಸಿಕೊಳ್ಳುತ್ತೇನೆ ಎಂದಿದ್ದನಲ್ಲವೇ? ಅಪ್ಪನಿಗಂತೂ, ಈ ಜಾತಿ ಅಂತಸ್ತುಗಳ ಕಾಳಜಿ ಬಹಳ. ತಮಗಿಂತ ಉತ್ತಮವಾಗಿರುವಾತನೇ, ತಮ್ಮ ಆಂತಸ್ತುಗಳಿಗಿಂತ ಮೇಲಿರುವಾತನೇ ತನ್ನ ಅಳಿಯನಾಗುವಾತ ಎಂದೆಲ್ಲ ಕನಸು ಕಟ್ಟಿರುವಾಗ, ನಿರೀಕ್ಷೆ ಇಟ್ಟಿರುವಾಗ ತಾನು ಇಂತಹ ಅಶಾಂತಿ, ತಳಮಳ, ಉದ್ವಿಗ್ನತೆಗಳಿಗೆ ಈಡಾಗುವುದು ತರವಲ್ಲ. ಮುಂದಿನ ಪರಿಣಾಮಗಳೇನಾಗಬಹುದು. ಇದನ್ನು ಮುಂದುವರೆಸುವುದು ಬೇಡ. ಆತನ್ಯಾರೋ ಹೇಗೋ ಏನೋ, ತಾನು ಮೂರ್ಖಳಾಗುವುದು ಬೇಡ. ಈ ಕ್ಷಣಿಕ ಆಕರ್ಷಣೆಗಳಿಂದ ತಾನು ವಿಮುಖಳಾಗುವುದು ಬುದ್ಧಿವಂತೆಯ ಲಕ್ಷಣ. ಅಪ್ಪನ ಭರವಸೆಯ ಮಗಳು ನಾನಾಗಬೇಕು, ಸಾಕು ಈ ತಳಮಳ, ಸಾಕು ಈ ಅಶಾಂತಿ, ಮನಸ್ಸಿನಿಂದ ಅವನನ್ನು ಕಿತ್ತೊಗೆಯಲು ಯತ್ನಿಸಿದಳು. ಆ ಪ್ರಯತ್ನದಲ್ಲಿ ಸಫಲಳಾದಳು ಎನ್ನುವಂತೆ ರೆಪ್ಪೆ ಭಾರವಾದವು.

ಬೆಳಿಗ್ಗೆ ಅವಳು ಏಳಲೇ ಇಲ್ಲ. ಅವಳಿಗೆ ಗೊತ್ತು, ಈ ವೇಳೆಗೆ ಅವನು ಬಾಗಿಲ ಬಳಿ ನಿಂತಿರುತ್ತಾನೆ. ರಂಗೋಲಿ ಕಾಣದ ನೆಲ ಅವನನ್ನು ಅಣಕಿಸುತ್ತದೆ. ಅಳಿಸಿಹೋದ ಅಸ್ಪಷ್ಟ ರಂಗೋಲಿ ನನ್ನ ಮನದ ಭಾವನೆಗಳನ್ನು ಅವನಿಗೆ ತಿಳಿಸಿಬಿಡುತ್ತವೆ. ಇಂದು, ನಾಳೆ, ನಾಳಿದ್ದು ನನ್ನ ರಂಗೋಲಿ ಕಾಣದಿದ್ದಾಗ ನನ್ನನ್ನು ಅರ್ಥ ಮಾಡಿಕೊಳ್ಳುತ್ತಾನೆ. ಒಂದೆರಡು ದಿನ ಆಷ್ಟೆ. ನನ್ನನ್ನು ಮರೆತುಬಿಡುತ್ತಾನೆ. ಅವಳು ಅಂದುಕೊಂಡಂತೆ ಆಯಿತು. ಒಂದು ವಾರ ನೀಲ ರಂಗೋಲಿ ಇಡಲಿಲ್ಲ. ಆತ ಅತ್ತ ಬರುವುದನ್ನೇ ಬಿಟ್ಟುಬಿಟ್ಟ. ನಿರಾಶೆಯಿಂದ ಮನ ಮುದುಡಿದರೂ, ಒಳಿತೇ ಆಯಿತೆಂದು ಸಂತೈಸಿಕೊಂಡಳು. ಯಾವುದೋ ಒಂದು ರಂಗೋಲಿ ಇಟ್ಟು ಒಳನಡೆದುಬಿಡುತ್ತಾಳೆ. ಮೊದಲಿನ ಆಸಕ್ತಿ, ಉತ್ಸಾಹಗಳಾವುವೂ ಅವಳಲ್ಲಿ ಈಗ ಉಳಿದಿರಲಿಲ್ಲ.

ಬೆಳಿಗ್ಗೆ ಕಾಲೇಜಿಗೆ ಹೋಗಿದ್ದಾಳೆ ನೀಲ. ಕಾಲೇಜಿಗೆ ಫೋನ್ ಬಂತು. ತಂದೆಗೆ ಸೀರಿಯಸ್ ಅಂತಾ. ಒಂದೇ ಉಸಿರಿಗೆ ಆಸ್ಪತ್ರೆಗೆ ಹಾರಿಬಂದರೆ ರಾಯರು ಹಾಸಿಗೆ ಮೇಲೆ ಮಲಗಿದ್ದಾರೆ. ಕಣ್ಮುಚ್ಚಿದ್ದಾರೆ. “ಏನಾಯ್ತು ಅಪ್ಪನಿಗೆ?” ನಡುಗುವ ಧ್ವನಿಯಲ್ಲಿ ಕೇಳಿದಳು. ಮನದ ತುಂಬ ಅಪಾಯದ ಭೀತಿ.

“ಹೆದರಿಕೋಬೇಡಮ್ಮ. ಈಗ ನಿಮ್ಮಪ್ಪ ಅಪಾಯದ ಅಂಚಿನಿಂದ ಪಾರಾಗಿದ್ದಾರೆ. ಬೆಳಿಗ್ಗೆ ತುಂಬಾ ಎದೆನೋವು ಅಂತಾ ನರಳಿಬಿಟ್ಟರು. ತಕ್ಪಣವೇ ಆಸ್ಪತ್ರೆಗೆ ಸೇರಿಸಿದ್ದೇವೆ. ಹಾರ್ಟ್‌ ಅಟ್ಯಾಕ್ ಅಂತೆ. ಈಗ ಹುಷಾರಾಗಿದ್ದಾರೆ. ನಾಲ್ಕು ದಿನ ಇಲ್ಲೇ ಇರಬೇಕಾಗುತ್ತದೆ. ಅಪ್ಪನ ಆಫೀಸಿನವರು ಹೇಳಿದಾಗ ನಿಧಾನವಾಗಿ ನಡೆದು ಬಂದು ರಾಯರ ಪಕ್ಕದಲ್ಲಿ ಕುಳಿತಳು.

“ಅಪ್ಪಾ, ನನ್ನ ಬಿಟ್ಟು ಹೋಗಬೇಡಪ್ಪ. ಇದನ್ನು ತಡೆಯೋ ಶಕ್ತಿ ನಂಗಿಲ್ಲ. ಅಮ್ಮನಂತೆ ಕ್ರೂರಿ ಆಗಬೇಡ. ನಿನ್ನ ಹೃದಯನಾ ಯಾಕೆ ದುರ್ಬಲಗೊಳಿಸಿಕೊಂಡು ಬಿಟ್ಟೆ. ಏನಂತ ಟೆನ್ಷನ್ ನಿಂಗಿತ್ತು” ಮನಸ್ಸಿನಲ್ಲಿಯೇ ಹೇಳಿಕೊಳ್ಳುತ್ತ ತಂದೆಯ ತಲೆ ಸವರುತ್ತ ಕಣ್ಣೀರು ಹಾಕುತ್ತಿದ್ದಾಳೆ.

“ಯಾಕಮ್ಮ ಆಳ್ತಾ ಇದ್ದೀಯಾ ನೀಲಾ. ನಿಮ್ಮ ಅಪ್ಪನಿಗೆ ಏನೂ ಆಗಲ್ಲ. ಆಫೀಸಿನ ಕೆಲಸದಲ್ಲಿ ಏನೋ ಟೆನ್ಷನ್. ಎಲ್ಲಾ ಒಬ್ಬರೇ ನಿಭಾಯಿಸಬೇಕಲ್ಲ. ನಿನಗೊಂದು ಮದ್ವೆ ಮಾಡುವತನಕ ನಿಮ್ಮಪ್ಪನಿಗೆ ಏನೂ ಆಗಲ್ಲ. ಧೈರ್ಯವಾಗಿರು. ನಾವೆಲ್ಲ ಇಲ್ವಾ ನೋಡಿಕೊಳ್ತೀವಿ. ಆಫೀಸಿನ ಬಗ್ಗೆ ತಲೆ ಕೆಡಿಸಿಕೊಳ್ಳಬೇಡ. ಒಂದು ತಿಂಗಳು ಅವರು ರೆಸ್ಟ್ ತಗೊಳ್ಳಿ ನೀನು ಹೀಗೆ ಅವರ ಮುಂದೆ ಕಣ್ಣೀರು ಹಾಕಿ ಧೈರ್ಯಗೆಡಿಸಬೇಡಾ” ಬುದ್ದಿ ಹೇಳಿ ಕರ್ತವ್ಯದ ಕರೆಗೆ ಓಗೊಟ್ಟು ಹಿಂತಿರುಗಿದರು.

ಆಸ್ಪತ್ರೆಯಿಂದ ರಾಯರು ಡಿಸ್ಚಾರ್ಜ್‌ ಆಗುವ ತನಕ ನೀಲಾ ಅಪ್ಪನ ಪಕ್ಕ ಬಿಟ್ಟು ಕದಲಲಿಲ್ಲ. ಪುಟ್ಟ ಮಗುವಿನಂತೆ ನೋಡಿಕೊಳ್ಳತೊಡಗಿದಳು. _

“ಯಾವ ಜನ್ಮದಲ್ಲಿ ತಾಯಿಯಾಗಿದ್ಯೆ ನೀಲ, ಈ ಜನ್ಮದಲ್ಲಿ ಅದನ್ನ ತೀರಿಸಿಕೊಳ್ಳುತ್ತಾ ಇದ್ದಿಯಾ. ನೀನು ನನ್ನ ಮಗಳಲ್ಲ ಕಣೆ, ತಾಯಿ” ಅವಳ ಕೈಗಳೆರಡನ್ನು ಕಣ್ಣಿಗೊತ್ತಿಕೊಳ್ಳುವರು.

“ಏನಪ್ಪ ಇದೆಲ್ಲ, ಮಗಳಾಗಿ ನಾನು ನನ್ನ ಕರ್ತವ್ಯ ಮಾತ್ರ ಮಾಡ್ತ ಇದ್ದೀನಿ. ನೀನು ಯಾಕೆ ಎಕ್ಸೈಟ್ ಆಗ್ತೀಯಾ. ಹೀಗೆ ಸಣ್ಣಪುಟ್ಪದ್ದಕ್ಕೆಲ್ಲ ಎಕ್ಸೈಟ್ ಆಗಿಯೇ ನಿನ್ನ ಹಾರ್ಟ್ ವೀಕ್ ಮಾಡಿಕೊಂಡಿದ್ದೀಯಾ. ಎಲ್ಲದಕ್ಕೂ ಯಾಕೆ ಅಷ್ಟೊಂದು ತಲೆ ಕೆಡಿಸಿಕೊಳ್ಳಬೇಕು. ಏನಾಗಬೇಕೋ ಅದು ಆಗೇ ಆಗುತ್ತೆ”. ಅಪ್ಪನ ಹಾರ್ಟ್‌- ಅಟ್ಯಾಕ್ ಗೆ ಕಾರಣವಾದ ಘಟನೆಯನ್ನು ಸೂಚ್ಯವಾಗಿ ಹೇಳುತ್ತಾ ಎಚ್ಚರಿಸಿದಳು.

“ಆದು ಹಾಗಲ್ಲ ನೀಲ. ಲಕ್ಷಾಂತರ ರೂಪಾಯಿಗಳ ವ್ಯವಹಾರ. ಏನಾದರೂ ಹೆಚ್ಚು ಕಡಿಮ ಆಗಿಬಿಟ್ಟರೆ ನಿನ್ನನ್ನು ಬೀದೀಲಿ ನಿಲ್ಲಿಸಿದಂತೆ ಆಗಿಬಿಡುತ್ತೆ. ನೀಲ ನಿಮ್ಮಮ್ಮನ ಅಸ್ತಿ ಇದು. ಅದನ್ನು ನಿನಗೆ ಸೇಫಾಗಿ ಸೇರಿಸಬೇಕು. ಆಸ್ತಿನಾ ಜಾಸ್ತಿ ಮಾಡ್ತಿನಿ ಅಂತಾ ಹೋಗಿ ಪೂರ್ತಿ” ಕಳೆದುಬಿಟ್ಪರೆ. ಅಬ್ಬಾ ನೆನೆಸಿಕೊಂಡರೆ ಎದೆಯನ್ನು” ಗಟ್ಟಿಯಾಗಿ ಒತ್ತಿಕೊಂಡರು.

“ಇದನ್ನೇ ನಾನು ಬೇಡಾ ಅನ್ನುವುದು. ಜಾಸ್ತಿ ಮಾಡ್ತಿನಿ ಅಂತ ಹೋಗುವುದೇಕೆ. ಆಗುತ್ತೋ ಇಲ್ವೋ ಅಂತ ಕೊರಗುವುದು ಏಕೆ. ಈಗ ಹೇಗಿದೆಯೋ ಹಾಗೇ ಇದ್ದು ಬಿಡಲಿ. ನೋಡಿ ಇನ್ಮೇಲೆ ನೀವು ಈ ಆಫೀಸ್ ವ್ಯವಹಾರ, ಆಸ್ತಿ ಅಂತಾ ತಲೆ ಕೆಡಿಸಿಕೊಳ್ಳಬಾರದು. ಅದನ್ನೆಲ್ಲ ನೋಡಿಕೊಳ್ಳೋಕೆ ಯಾರನ್ನಾದರೂ ಕೆಲಸಕ್ಕೆ ಇಟ್ಟುಕೊಳ್ಳಿ. ನಿಮ್ಮ ಜವಾಬ್ದಾರಿಯನ್ನೆಲ್ಲ ಅವನು ನಿರ್ವಹಿಸುವಂತಿರಬೇಕು. ನಿಮಗೆ ಹೆಚ್ಚಿನ ಶ್ರಮ ಕೊಡದಂತಿರಬೇಕು. ಅಂತಹ ನಂಬಿಕಸ್ಥ ಯೋಗ್ಯ ಹುಡುಗನ್ನ ಅಪಾಯಿಂಟ್ ಮಾಡಿಕೊಳ್ಳಿ. ಇನ್ನು ಮೇಲೆ ನೀವು ಯಾವ ಕಾರಣಕ್ಕೂ ಹೊರಗೆ ಹೋಗಬಾರದು. ಎಂದು ಪ್ರಾಮಿಸ್ ಮಾಡಿಸಿಕೊಂಡು ಬಿಟ್ಟಳು.

ಕಾಲೇಜಿಗೆ ಹೋಗುವಷ್ಟರಲ್ಲಿ ಅಪ್ಪನಿಗೆ ಎಲ್ಲವನ್ನು ಮಾಡಿಟ್ಟು ಹೊರಡುತ್ತಾಳೆ. ಮಧ್ಯಾಹ್ನ ಬಂದು ಊಟ ಬಿಸಿ ಮಾಡಿ ನೀಡಿ, ಮಾತ್ರೆ ತಿನ್ನಿಸುತ್ತಾಳೆ. ಮತ್ತೆ ಕಾಲೇಜಿಗೆ ಓಡುವುದು. ಆಫೀಸಿನಿಂದ ಪೋನ್ ಬಂದ್ರೆ ನೋಡಿ ಮುಖ್ಯವಾಗಿದ್ದರೆ ಮಾತ್ರ ಅಪ್ಪನಿಗೆ ಕೊಡುತ್ತಾಳೆ. ರಾತ್ರಿ ಎಲ್ಲಾ ಅಪ್ಪನ ಮೇಲೆ ನಿಗ ಇರಿಸುತ್ತಾಳೆ. ನೀಲಳಿಗೆ ಅಪ್ಪ ಈಗ ಪುಟ್ಟ ಮಗುವೇ ಆಗಿಬಿಟ್ಟಿದ್ದಾರೆ. ಈ ಎಲ್ಲಾ ಕೆಲಸ ಒತ್ತಡಗಳ ನಡುವೆ, ರಂಗೋಲಿಯ ನೆನಪೇ ಆಗುವುದಿಲ್ಲ. ತೋಟದ ಹೂಗಳು ಕುಯ್ಯುವವರಿಲ್ದೇ ಉದುರಿ ಹೋಗುತ್ತಿವೆ. ಆಗೊಮ್ಮೆ ಈಗೊಮ್ಮೆ ಆತ ನೆನಪಾದರೂ ಮುಂಚಿನಂತೆ ಕಾಡುವುದಿಲ್ಲ. ಈಗ ಅವಳ ಮನಸ್ಸಿನ ತುಂಬೆಲ್ಲ ಅಪ್ಪ. ಅಪ್ಪನ ಆರೋಗ್ಯ ಇಷ್ಟೆ. ಮನೆಯ ಸಮಸ್ತ ಜವಾಬ್ದಾರಿಯೂ ಅವಳದೇ. ಕೆಲಸದ ಭಾರದಿಂದ ಬಳಲಿ ಹೋಗಿಬಿಟ್ಟಳು. ಅದರ ರಿಲೀಫ್‌ಗಾಗಿ ಚಿತ್ರ ಪ್ರದರ್ಶನ ನಡೆಯುತ್ತಿದೆಯೆಂದು ತಿಳಿದು ಆರ್ಟ್‌ ಗ್ಯಾಲರಿಗೆ ಹೋಗಿ ಬರಲು ಬಿಡುವು ಮಾಡಿಕೊಂಡಳು ಕಷ್ಟಪಟ್ಟು.

ಆರ್ಟ್‌ ಗ್ಯಾಲರಿಯಲ್ಲಿ ಒಂದೊಂದೇ ಚಿತ್ರವನ್ನು ವೀಕ್ಷಿಸುತ್ತಿದ್ದಾಳೆ. ಸ್ವತಃ ಚಿತ್ರಕಾರಳಾದ ನೀಲ ಆರ್ಟ್‌ ಗ್ಯಾಲರಿಯ ಯಾವ ಆರ್ಟ್‌ ಎಗ್ಸಿಬಿಷನ್‌ನ್ನು ತಪ್ಟಿಸಿಕೊಂಡವಳಲ್ಲ. ಆ ಲ್ಯಾಂಡ್‌ಸ್ಕೇಪ್‌ಗಳು, ಬಣ್ಣಗಳ ಆಯ್ಕೆ ಹೊಸಬರದೆಂದು ಅವಳಿಗೆ ಅನ್ನಿಸಲೇ ಇಲ್ಲಾ. ಪಳಗಿದ ಕೈ ಎನಿಸಿತು. ಮುಂದೆ ಬಂದವಳೇ ಸುಮ್ಮನೇ ನಿಂತುಬಿಟ್ಪಳು. ರಂಗೋಲಿ ಇಡುತ್ತಿರುವ ಅರ್ಧಪಾರ್ಶ್ವ ಕಾಣುವಂತಿರುವ ಲಂಗದಾವಣಿಯ ಹುಡುಗಿ. ಮುಂಜಾನೆಯ ಸೂರ್ಯನ ಕೆಂಬೆಳಕು ಆಕೆಯ ಮೇಲೆ ಬಿದ್ದಿದೆ. ಅರೆಬರೆ ಕಾಣುತ್ತಿರುವ ಆ ಕೆನ್ನೆಯಲ್ಲಿ ಅದು ಪ್ರತಿಫಲಿಸುತ್ತಿದೆ. ತಲೆ ಬಾಗಿ ತನ್ಮಯತೆಯಿಂದ ರಂಗೋಲಿ ಇಡುತ್ತಿದ್ದಾಳೆ. ಹಿಂಭಾಗದ ನೀಳ ಜಡೆ ನೆಲ ತಾಗುತ್ತಿದೆ. ಬಳಕುವ ರೀತಿ ಕುಳಿತಿದ್ದಾಳೆ. ರಂಗೋಲಿಯ ಪಕ್ಕ ಒಂದು ಗುಲಾಬಿ ಆಗಷ್ಟೆ ಅರಳಿ ನಗುತ್ತಿದೆ. ಕಂಪಿಸುತ್ತ ಶೀರ್ಷಿಕೆ ಓದಿದಳು. ‘ಸ್ಪೂರ್ತಿ’ “ವಾಹ್” ಅರೆಕ್ಷಣ ಏನೂ ಕಾಣಿಸದಂತಾಯಿತು. ತಕ್ಷಣವೇ ಎಚ್ಚೆತ್ತು ಬಾಗಿಲ ಬಳಿ ಓಡಿದಳು. ಅಲ್ಲಿ ಅಂಟಿಸಿದ್ದ ಚಿತ್ರಕಾರನ ಹೆಸರು, ಪರಿಚಯ, ರಿವ್ಯೂಗಳನ್ನು ಓದಿ, ಅಲ್ಲಿದ್ದ ಪೋಟೋ ಕಂಡು ಬವಳಿ ಬರುವಂತಾಯಿತು.

ಅಷ್ಟರಲ್ಲಿ ಆತ ಇತ್ತಲೇ ನಡೆದು ಬರುತ್ತಿದ್ದ . ಮೊಗದಲ್ಲಿ ತಿಂಗಳ ಕಳೆ ಇತ್ತು. ಚಿಗುರು ಗಡ್ಡ ಏನೋ ಹೊಸ ರೀತಿಯ ಶೋಭೆ ಇತ್ತಿತ್ತು. ಕಣ್ಣರಳಿಸಿ ಆತ ಬರುತ್ತಿದ್ದರೆ, ನಯವಾಗಿ ಕಂಪಿಸಿದಳು. ‘ನೀವೂ’ ತೊದಲಿದಳು. ಆತನ ಕಣ್ಣುಗಳಲ್ಲಿ ಸಂಭ್ರಮ, ಉದ್ವೇಗ, ಅಚ್ಚರಿ ‘ನಾನೇ, ವಿಕಾಸ್’ ತನ್ನನ್ನೇ ಸಂಬಾಳಿಸಿಕೊಂಡು ನುಡಿದ.

‘ನೀವು ಆರ್ಟಿಸ್ಟ್‌ ಏನು’ ಮತ್ತೆ ಪ್ರಶ್ನಿಸಿದಳು. ಹೌದೆನ್ನುತ್ತ ಗೋಣಾಡಿಸಿ

“ನೀವು…” ಸ್ಫೂರ್ತಿ ಮನಸ್ಸಿನಲ್ಲಿಯೇ ನುಡಿದುಕೊಂಡ.

ಚಿತ್ರ ಬರೆಯುತ್ತೀರಾ ಮಿಸ್ …. ಹೆಸರು ತಿಳಿಯದೆ ನಿಲ್ಲಿಸಿದ.

“ನೀಲಾ, ಆಸಕ್ತಿ ಇದೆ, ಆದರೆ ಪರಿಶ್ರಮ ಇಲ್ಲಾ. ಯಾವ ಎಗ್ಸಿಬಿಷನ್ ಬಂದರೂ ಮಿಸ್ ಮಾಡಲ್ಲ. “ವೆರಿಗುಡ್, ಹೇಗಿದೆ ಚಿತ್ರಗಳು” ಹುಬ್ಬೇರಿಸಿ ಪ್ರಶ್ನಿಸಿದ. ಹುಬ್ಬು ಏರಿಸುವ ಶೈಲಿ ಇಷ್ಟವಾಯಿತವಳಿಗೆ.

“ತುಂಬಾ ತುಂಬಾ ಚೆನ್ನಾಗಿದೆ. ನೀವೀಂತ ಕಲೆಗಾರರು ಅಂತ ನಂಗೆ ಗೊತ್ತಾಗಲೇ ಇಲ್ಲಾ”

“ಅಂದ್ರೆ ನಾನು ಚಿತ್ರಗಾರ ಅಂತ ಹಣೆ ಮೇಲೆ ಬರ್ಕೋಬೇಕಿತ್ತಾ” ಗಹಗಹಿಸಿ ನಕ್ಕನು.

“ವಿಕಾಸ್, ಯಾಕೆ ನಗ್ತಿರಿ” ಮುಖ ಸಣ್ಣಗೆ ಮಾಡಿಕೊಂಡಳು.

“ವಿಕಾಸ್, ಎಷ್ಟು ಚೆನ್ನಾಗಿದೆ. ನನ್ನ ಹೆಸರು, ಇಷ್ಟು ಚೆನ್ನಾಗಿದೆ ಅಂತಾ ಈಗ್ಲೆ ನಂಗೆ ಗೊತ್ತಾಗಿದ್ದು. ಸಾರಿ ನಕ್ಕಿದ್ದಕ್ಕೆ. ನಾನು ಚಿತ್ರಕಾರ ಅಂತ ಗೊತ್ತಾಗಿದ್ದಿದ್ದರೆ, ರಂಗೋಲೆ ಬರೆಯೋದು ನಿಲ್ಲಿಸ್ತ ಇರಲಿಲ್ಲವೇ” ಕೆಣಕಿದ ಕಣ್ಣುಗಳಲ್ಲಿ ತೀವ್ರ ಆಕ್ಷೇಪ.

ತಪ್ಟಿತಸ್ಥಳಂತೆ ತಲೆ ತಗ್ಗಿಸಿ ನಿಂತುಬಿಟ್ಟಳು.

“ನೀಲಾ, ಬನ್ನಿ ಇಲ್ಲಿ” ಕೈ ಹಿಡಿದೇ ದರ ದರ ಎಳೆದುಕೊಂಡು ಸ್ಫೂರ್ತಿಯ ಮುಂದೆ ನಿಲ್ಲಿಸಿದ.

“ನನ್ನ ಸ್ಫೂರ್ತಿನಾ ನೋಡಿದ್ರಾ, ಈ ಸ್ಫೂರ್ತಿ ಇಲ್ಲದೆ ಈ ಚಿತ್ರಕಾರ ಕಳೆದು ಹೋಗ್ತಾನೆ ನೀಲಾ. ಆ ರಂಗೋಲಿ, ಆ ಗುಲಾಬಿ ಹೇಗೆ ಮರೆಯಲಿ. ಈ ಸ್ಫೂರ್ತಿ ತಾವಾಗೇ ನನಗೆ ಒಲಿದಿದ್ದು ನೀಲಾ. ಅದನ್ನ ಕಿತ್ಕೊಂಡು ನನ್ನ ಅಂತ್ಯ ಮಾಡಬೇಡಿ ಪ್ಲೀಸ್.” ನೀಲಾಳ ಕೈಗಳೆರಡನ್ನೂ ತನ್ನ ಕೈಗಳಲ್ಲಿ ಹಿಡಿದು ಕಣ್ತುಂಬಿ ಬೇಡಿಕೊಳ್ಳುತ್ತಿದ್ದರೆ ನೀಲಾ ಕರಗಿಹೋದಳು. ಸಪ್ತಸ್ವರದ ರಾಗಗಳು ಹಾಡಿದವು. ಅವಳಿಗರಿವೇ ಇಲ್ಲದೇ ಅವನ ತೋಳು ಸೇರಿದಳು.

“ಇಲ್ಲ, ನಿಮ್ಮ ಸ್ಫೂರ್ತಿನಾ ನಿಮ್ಮಿಂದ ಕಿತ್ಕೊಳಲ್ಲ, ದೂರ ಮಾಡಲ್ಲ, ನನ್ನಾಣೆ ಇದೆ” ಬಿಕ್ಕಳಿಸಿದಳು. ಆ ಕ್ಷಣದಲ್ಲಿ ಅಪ್ಪ. ಅಪ್ಪನ ಖಾಯಿಲೆ ಮರೆತೇಹೋಯಿತು. ಈ ಅವಿಸ್ಮರಣೀಯ ದೃಶ್ಯವನ್ನು ಕಲಾ ರಸಿಕರೆಲ್ಲಾ ನೋಡಿಯೇ ನೋಡಿದರು. ಅವರಿಗಾರಿಗೂ ಇದು ಅಸಹಜ ಎನಿಸಲಿಲ್ಲ. ಅವರ ಸುತ್ತ ನೆರೆದು ಜೋರಾಗಿ ಚಪ್ಪಾಳೆ ತಟ್ಟಿದರು. ಆ ಸದ್ದಿಗೆ ಎಚ್ಚೆತ್ತ ನೀಲಾ, ವಿಕಾಸ್ ನಸು ನಾಚಿ ದೂರಾದರು. ಕಲಾಗಾರ ಸ್ಫೂರ್ತಿಯ ಜೊತೆ ಸೇರಿದ, ಸ್ಫೂರ್ತಿ ಕಲಾಗಾರನ ವಶವಾದಳು. ಇವರಿಬ್ಬರ ಸಮ್ಮಿಲನದಿಂದ ಅದೆಂತಹ ಕಲೆ ಹೊರಹೊಮ್ಮುವುದೋ. ಧನ್ಶವಾಯಿತು ಕಣ್ಣು, ಧನ್ಯವಾಯಿತು ಮನಸ್ಸು, ಧನ್ಯವಾಯಿತು ಕಲೆ. ಮತ್ತೆ ಚಿತ್ರಗಳನ್ನು ನೋಡಿದಳು ನೀಲಾ. ಒಂದಕ್ಕಿಂತ ಒಂದು ಚೆನ್ನು ಎನ್ನಿಸುತ್ತಿತ್ತು. ಪ್ರತಿದಿನ ಬಂದರೂ ಹೊಸದೆನಿಸುವ ಕಲಾಕೃತಿಗಳು.

“ವಿಕಾಸ್, ನಿಮ್ಮಲ್ಲಿ ಎಂತಹ ಅದ್ಭುತ ಕಲೆಗಾರ ನೆಲೆಸಿದ್ದಾನೆ. ನಿಮಗೆ ಹ್ಯಾಗೆ ಬಂತು ಇಂತಹ ಅದ್ಭುತ ಕಲ್ಪನೆ” ಭಾವಪರವಶಳಾಗಿ ನುಡಿದಳು ಅದ್ಭುತ ಕಲಾಕೃತಿ ನೋಡುತ್ತಾ.

“ಗಾಡ್ ಗಿಫ್ಟ್ ನೀಲಾ. ಚಿಕ್ಕ ವಯಸ್ಸಿನಿಂದಲೂ ನನಗೆ ಚಿತ್ರ ಬರೆಯೋದು ಅಂದ್ರೆ ತುಂಬಾ ಆಸಕ್ತಿ. ಅದಕ್ಕೆ ನೀರೆರೆದು ಬೆಳೆಸಿದವರು ನನ್ನ ಟೀಚರ್. ನನ್ನ ಅಭಿರುಚಿನ ಗುರ್ತಿಸಿ ನನ್ನನ್ನ ಕಲಾಶಾಲೆಗೆ ಸೇರಿಸಿದರು. ಆ ಮಹಾತಾಯಿ ಈಗಿದ್ದಿದ್ದರೆ ಅದೆಷ್ಟು ಸಂತೋಷ ಪಡ್ತ ಇದ್ದರೋ. ನನ್ನ ಬದುಕೇ ಒಂಥರಾ ದುರಂತ ನೀಲಾ. ನನ್ನವರು ಅನ್ನಿಸಿಕೊಂಡವರೆಲ್ಲ ನನ್ನಿಂದ ಶಾಶ್ವತವಾಗಿ ದೂರಾಗಿ ಬಿಡ್ತಾರೆ. ಅದೇ ವ್ಯಥೆ ನನ್ನನ್ನು ಕಾಡಿ ಹಿಂಸಿಸಿ ನನ್ನ ನೋವನ್ನೆಲ್ಲ ಈ ಚಿತ್ರಗಳ ಮೂಲಕ ಹೊರ ಹಾಕಿಬಿಡುತ್ತೇನೆ.”

ಒಂದು ವಿಷಯ ಗೊತ್ತಾ ನೀಲ. ಯಾರು ಮಾನಸಿಕ ಅಸ್ವಸ್ಥತೆ ಅನುಭವಿಸುತ್ತಾ ಇರ್ತಾರೋ ಅಂತಹವರು ಒಳ್ಳೆ ಕಲಾವಿದರು ಆಗೋಕೆ ಸಾಧ್ಯ ಅಂತೆ. ಅಂತಹ ಮಾನಸಿಕ ವೇದನೆ ಒಳ್ಳೊಳ್ಳೆ ಕೃತಿ ನಿರ್ಮಾಣವಾಗೋಕೆ ಅವಕಾಶ ನೀಡುತ್ತಂತೆ. ಹಾಗೆ ನನಗೂ ಇರಬೇಕು. ತುಂಬಾ ಒಳ್ಳೆ ಕೃತಿ ನನ್ನಿಂದ ರಚಿಸೋಕೆ ಸಾಧ್ಯ ಇಲ್ಲವೇನೋ. ಆದರೆ ಈ ಚಿತ್ರ ಬರೆಯೋದರಲ್ಲಿ, ಸುಂದರವಾದ ವಸ್ತುಗಳನ್ನು ನೋಡೋದ್ರಲ್ಲಿ ನನ್ನೆಲ್ಲ ನೋವನ್ನು ಮರೆತುಬಿಡ್ತಿನಿ ನೀಲಾ.” ಎಷ್ಟೋ ವರ್ಷಗಳ ಪರಿಚಿತೆಗೆ ಒಪ್ಟಿಸುವಂತೆ ತನ್ನ ಮನದಾಳದ ಭಾವಗಳನ್ನೆಲ್ಲ ಪದರ ಪದರವಾಗಿ ಬಿಡಿಸುತ್ತಾ ಹೋಗುತ್ತಿದ್ದಾನೆ. ತನ್ಮಯಳಾಗಿ ಕೇಳುತ್ತಾ ಇದ್ದಾಳೆ. ಇದೇ ಅಸಕ್ತಿ ಅಲ್ಲದೇ ತನ್ನ ರಂಗೋಲಿ ವಿಕಾಸನನ್ನು ಸೆಳದಿದ್ದು . ಇದೇ ಕಲಾಕಾರ ಮನಸ್ಸಲ್ಲವೇ ರಂಗೋಲಿಯನ್ನು ನೋಡುತ್ತ ಮೈಮರೆಯುತ್ತಿದ್ದದ್ದು. ನನ್ನದೆಂತಹ ಅದೃಷ್ಟ. ಇಂತ ಅದೃಷ್ಟವನ್ನು ಕಾಲಿನಿಂದ ಒದ್ದು ಬಿಟ್ಟಿದ್ದೆನಲ್ಲ. ನಾನು ಮೂರ್ಖಳೇ ಸರಿ. ಇನ್ನು ಆ ಮೂರ್ಖತನ ಮಾಡಬಾರದು. ಈ ಬಾಂಧವ್ಯ ಸ್ಥಿರವಾಗಬೇಕು. ಮನ ಹಾರೈಸಿತು.

ಕೊನೆ ಪಿರಿಯಡ್ಸ್ ಇದೆ ಎನ್ನುವಾಗಲೇ ನೀಲಾ ಹೊರಗೆದ್ದು ಬಂದು ಬಿಡುತ್ತಾಳೆ. ಕಂಬಕ್ಕೊರಗಿ ಅವಳಿಗಾಗಿ ಕಾಯುತ್ತಿರುತ್ತಾನೆ ವಿಕಾಸ್. ಆಕೆ ಹೊರಬಂದ ಕೂಡಲೇ ಅಕೆಯ ಹೆಜ್ಜೆಗೆ ಹೆಜ್ಜೆ ಇರಿಸುತ್ತ ಜೊತೆಯಾಗಿ ನಡೆಯುತ್ತಾನೆ ವಿಕಾಸ್.

ಸ್ವಲ್ಪ ದೂರ ಮೌನವಾಗಿಯೇ ನಡಯುತ್ತಾರೆ. ರೈಲು ಕಂಬಿಗಳತ್ತ ನಡೆದು ಎದಿರುಬದಿರಾಗಿ ಕೂರುತ್ತಾರೆ.

“ನೀಲಾ” ಮೆಲ್ಲನೆ ಉಸುರುತ್ತಾನೆ.

“ಹೂಂ” ಎನುತ್ತಾಳೆ.

“ನನ್ನ ಸ್ಫೂರ್ತಿ ನನ್ನವಳಾಗುವುದು ಯಾವಾಗ ನೀಲಾ. ಈಗಾಗ್ಲೆ ನಮ್ಮಪರಿಚಯವಾಗಿ ವರ್ಷವಾಗುತ್ತ ಬಂತು.”

“ನಿಮ್ಮ ಸ್ಫೂರ್ತಿ ಯಾವತ್ತೂ ನಿಮ್ಮವಳೇ ತಾನೆ. ನಿಧಾನವಾಗಿ ಈ ವಿಷಯ ಮನೆಯಲ್ಲಿ ತಿಳಿಸಬೇಕು. ಅಪ್ಪನ್ನ ಒಪ್ಟಿಸಬೇಕು.”

“ಅವರು ಒಪ್ಪದಿದ್ದರೆ” ಹಾಗೆನ್ನಬೇಡಿ ವಿಕಾಸ್. ಅವರು ಒಪ್ಪಲೇ ಬೇಕು. ನಾನವರ ಒಬ್ಬಳೇ ಮಗಳು. ಅವರ ಆಸೆ, ಗುರಿ ಭವಿಷ್ಯ ಎಲ್ಲ ನಾನೇ ಆಗಿದ್ದೀನಿ. ಅವರನ್ನ ಎದುರಿಸೋ ಧೈರ್ಯ ನನಗಿಲ್ಲ. ಅವರು ಒಪ್ಪದಿದ್ದರೆ ಅನ್ನೋದನ್ನೇ ಊಹಿಸಿಕೊಳ್ಳೋಕೂ ನನ್ನಿಂದಾ ಸಾಧ್ಯ ಇಲ್ಲಾ ವಿಕಾಸ್. ಅವರ ಮುಂದೆ ಈ ವಿಷಯ ಹೇಳೋ ಧೈರ್ಯನೂ ನನಗಿಲ್ಲ. ಅವರ ವಿಷಯ ನಿಮ್ಗೆ ಗೊತ್ತಿಲ್ಲ ವಿಕಾಸ್. ಅವರ ಮನಸ್ಸು ಬಹಳ ಸೂಕ್ಷ್ಮ. ಆ ಮನಸ್ಸಿಗೇನಾದರೂ ಹರ್ಟ್‌ ಆದರೆ ಅವರಿಗೇನಾದ್ರೂ ಆಗಿಬಿಡುತ್ತದೆ. ಅದನ್ನು ಸಹಿಸೋ ಶಕ್ತಿ ನಂಗಿಲ್ಲ” ತನ್ನ ಬೆರಳುಗಳನ್ನು ನೋಡಿಕೊಳ್ಳುತ್ತ ನುಡಿದಳು.

“ಕಲಾವಿದರ ಮನಸ್ಸು ಕೂಡ ಸೂಕ್ಷ್ಮ ನೀಲಾ. ಒಂದು ವೇಳೆ ಸ್ಫೂರ್ತಿ ಸಿಗದೇ ಹೋದ್ರೆ ಆ ಆಘಾತ ತಡೆಯೋ ಶಕ್ತಿ ಈ ಹೃದಯಕ್ಕಿಲ್ಲ ನೀಲಾ.”

“ಎಕ್ಸೈಟ್ ಅಗಬೇಡಿ ವಿಕಾಸ್. ನಮ್ಮ ಪ್ರೇಮ ಪವಿತ್ರವಾಗಿದ್ರೆ, ನಮ್ಮನ್ನು ಬೇರೆ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ. ನಿಮ್ಮ ಸ್ಫೂರ್ತಿ ನಿಮ್ಮ ಕೈಬಿಟ್ಟು ಹೋಗುವುದಿಲ್ಲ. ನನ್ನನ್ನು ನಂಬಿ ಪ್ಲೀಸ್ ” ಬೇಡಿಕೊಂಡಳು.

ತನ್ನ ಪ್ರೇಮದ ವಿಷಯವನ್ನು ಅಪ್ಪನಿಗೆ ನೇರವಾಗಿ ಹೇಳದಾದಳು. ತಾನು ಹೇಳುವಾಗ ಅಪ್ಪ ಅದನ್ನು ಹೇಗೆ ತೆಗೆದುಕೊಳ್ಳುತ್ತಾರೋ, ಅವರ ಹೃದಯ ಮೊದಲೇ ಸೂಕ್ಷ್ಮವಾಗಿದೆ. ಅಮ್ಮನನ್ನು ಕಳೆದುಕೊಂಡರೂ, ಮತ್ತೊಂದು ಮದುವೆಯಾಗದೆ, ಅಪ್ಪ ಅಮ್ಮ ಎಲ್ಲವೂ ತಾವೇ ಆಗಿ ತನ್ನನ್ನು ಬೆಳೆಸಿದ್ದಾರೆ. ತನ್ನ ಬಗ್ಗೆ ಅಪಾರವಾದ ನಂಬಿಕೆ, ವಿಶ್ವಾಸ. ಈ ವಿಶ್ವಾಸ ತಾನು ಕಳೆದುಕೊಂಡಿದ್ದೇನೆ ಎಂದು ತಿಳಿದುಬಿಟ್ಟರೆ, ಮೆಲ್ಲನೆ ನಡುಗಿದಳು.

ತನ್ನ ಜೀವನದ ಸರ್ವಸ್ವವೂ ಅಪ್ಪನೇ. ನಾನು ಆಪ್ಪನಿಗಾಗಿ ಅಪ್ಪ ನನಗಾಗಿ ಎನ್ನುವಷ್ಟು ಬಾಂಧವ್ಯ. ಈ ಬಾಂಧವ್ಯ ಕಳಚಿಕೊಳ್ಳಲು ಸಾಧ್ಯವೇ. ಅಪ್ಪ ಒಪ್ಟಿ ವಿಕಾಸನನ್ನು ಸಂತೋಷವಾಗಿ ಅಳಿಯನನ್ನಾಗಿ ಮಾಡಿಕೊಂಡರೆ ಅದೆಷ್ಟು ಚೆನ್ನ. ಇಂದಾದರೂ ತಾನು ಅಪ್ಪನಲ್ಲಿ ವಿಕಾಸನ ವಿಷಯ ತಿಳಿಸಲೇಬೇಕು ಎಂದು ನಿಶ್ಚಯಿಸಿಕೊಂಡಳು. ವಿಕಾಸನನ್ನು ಭಾನುವಾರ ಮನೆಗೆ ಬರಲು ತಿಳಿಸಿದಳು.

ಭಾನುವಾರದ ಹಿಂದಿನ ದಿನದಿಂದಲೂ ನೀಲಾಳಿಗೆ ಚಡಪಡಿಕೆ. ನಿಂತಲ್ಲಿ ನಿಲ್ಲದಾದಳು. ವಿಕಾಸನ ಪರಿಚಯವನ್ನು ಅಪ್ಪ ಹೇಗೆ ತೆಗೆದುಕೊಳ್ಳುವರೋ, ಆ ಸಮಯದಲ್ಲಿ ನನಗೆ ಧೈರ್ಯ ಕೊಡಪ್ಪ ಎಂದು ದೇವರಲ್ಲಿ ಬೇಡಿಕೊಂಡಳು. ಇಡೀ ರಾತ್ರಿ ನಿದ್ರೆ ಇಲ್ಲ. ತಳಮಳ, ಅಶಾಂತಿ, ಎಲ್ಲೋ ಆಗೊಮ್ಮೆ ಈಗೊಮ್ಮೆ ಮಂಪರು. ಆ ಮಂಪರಿನಲ್ಲಿ ಕನಸುಗಳು. ಅದು ಚಿತ್ರ ವಿಚಿತ್ರ ಕನಸುಗಳು. ಒಮ್ಮೆ ಅಪ್ಪ ತಾನೇ ನಿಂತು ತನ್ನ ವಿಕಾಸನ ಮದುವೆ ಮಾಡುತ್ತಿದ್ದಂತೆ, ಮಗದೊಮ್ಮೆ ವಿಕಾಸನನ್ನು ಬಾಯಿಗೆ ಬಂದ ಹಾಗೆ ಬೈಯ್ದು ಹೊರಗಟ್ಟಿದಂತೆ. ತಾನು ಬೇರೊಬ್ಜನಿಂದ ತಾಳಿ ಕಟ್ಟೆಸಿಕೊಳ್ಳುತ್ತಿರುವಂತೆ. ಎದ್ದು ಕುಳಿತುಬಿಟ್ಟಳು. ಮತ್ತೆ ನಿದ್ರೆ ಮಾಡುವ ಸಾಹಸ ಮಾಡಲಿಲ್ಲ. ಕುಳಿತೇ ಬೆಳಗು ಹರಿಸಿದಳು. ರಾತ್ರಿ ಎಲ್ಲಾ ನಿದ್ರೆ ಇಲ್ಲದ್ದಕ್ಕೋ, ಅಶಾಂತಿಯಿಂದಲೋ ಇಂದವಳಿಗೆ ಉತ್ಸಾಹವೇ ಇಲ್ಲವಾಗಿತ್ತು. ಅಧೈರ್ಯದಿಂದ ಚಡಪಡಿಕೆ ಹೆಚ್ಚಾಗಿತ್ತು.

ಅಂತೂ ವಿಕಾಸ್ ಬಂದಾಗ ಎದೆ ಗಟ್ಟಿ ಮಾಡಿಕೊಂಡೇ ಬರಮಾಡಿಕೊಂಡಳು.

“ಅಪ್ಪಾ ನನ್ನ ಫ್ರೆಂಡ್ ಬಂದಿದ್ದಾರೆ, ಬನ್ನಿ ಅಪ್ಪಾ” ಎನ್ನುತ್ತ ರೂಮಿನಲ್ಲಿದ್ದ ಅಪ್ಪನನ್ನು ಹೊರ ಕರೆದೊಯ್ದಳು.

ಅವರನ್ನು ಕಾಣುತ್ತಿದ್ದಂತೆ ವಿಕಾಸ್ ಎದ್ದು ನಿಂತ.

“ಅಪ್ಪಾ ಇವರು ವಿಕಾಸ್ ಅಂತಾ, ಬೆಂಗಳೂರಿನವರು. ದೊಡ್ದ ಆರ್ಟಿಸ್ಟ್. ತುಂಬಾ ಚೆನ್ನಾಗಿ ಚಿತ್ರ ಬರೆಯುತ್ತಾರೆ” ಪರಿಚಯಿಸಿದಳು.

“ಕೂತ್ಕೊಳ್ಳಿ ವಿಕಾಸ್, ನಮ್ಮ ನೀಲಾಗೆ ಕಲಾವಿದರು ಅಂದ್ರೆ ತುಂಬಾ ಗೌರವ. ವಿಶ್ವಾಸ. ನಿಮ್ಮಂತ ಕಲಾವಿದರ ಪರಿಚಯವಾದದ್ದು ತುಂಬಾ ಸಂತೋಷ. ಅವಳಿಗೂ ಬರೆಯುವ ಹುಚ್ಚು. ನಿಮ್ಮ ಮಾರ್ಗದರ್ಶನ ಸಿಗಲಿ ಅವಳಿಗೆ” ಬಾಯ್ತುಂಬ ಮಾತನಾಡಿಸಿದರು.

ಅಪ್ಪನ ಈ ಪ್ರತಿಕ್ರಿಯೆ ನೋಡಿ ನೀಲಾ ಹರ್ಷಿತಳಾದಳು.

“ಏನು ಉದ್ಯೋಗ ಮಾಡ್ತ ಇದ್ದಿರಿ” ಪ್ರಶ್ನಿಸಿದರು.

“ಉದ್ಯೋಗ ಅಂತಾ ಏನೂ ಇಲ್ಲ. ಚಿತ್ರ ಬರೆಯುವುದೇ ಉದ್ಯೋಗ” ಎಂದು ನಕ್ಕ ವಿಕಾಸ್.

“ಅಲ್ಲ ವಿಕಾಸ್, ಈಗೇನೋ ಒಬ್ರೆ ಇದ್ದಿರಿ ಸರಿ. ಮುಂದೆ ಮಕ್ಕಳು, ಸಂಸಾರ ಅಂತ ಆದ ಮೇಲೆ ಹೇಗ್ರಿ.” ಯಾವುದಾದರೂ ಆಡ್ ಏಜೆನ್ಸಿ ಶುರು ಮಾಡಬೇಕು ಅಂತಾ ಇದ್ದೀನಿ. ಬೆಂಗಳೂರಿನಲ್ಲಿ ಆಡ್ಗೆ ತುಂಬಾ ಡಿಮ್ಯಾಂಡ್ ಇದೆ. ಸ್ವಲ್ಪ ಹೆಸರು ಬಂದ್ರೆ ಸಾಕು, ಕೈ ತುಂಬಾ ಸಂಪಾದನೆ ಮಾಡಬಹುದು. ಈಗಂತೂ ಜಾಹಿರಾತುಗಳ ಯುಗ. ಜೀವನ ನಡೆಸೋಕೇನು ಮೋಸ ಇಲ್ಲ ಬಿಡಿ. ಕೈ ಹಿಡಿದ ಹೆಂಡತಿನಾ ಅದ್ದೂರಿಯಾಗಿ ಅಲ್ಲದಿದ್ದರೂ ಸುಖವಾಗಿ ನೋಡ್ಕೋಬಲ್ಲೆ. ಆ ವಿಶ್ವಾಸ ನಂಗಿದೆ.” ಓರೆನೋಟದಿಂದ ನೀಲಳನ್ನೇ ನೋಡಿದ. ವೆರಿಗುಡ್, ಹೀಗಿರಬೇಕು ಗಂಡು ಹುಡುಗರು ಅಂದ್ರೆ. ಆತ್ಮ ವಿಶ್ವಾಸ ಇರೋ ಮನಸ್ಸು ಜೀವನದಲ್ಲಿ ಯಾವತ್ತೂ ಸೋಲಲ್ಲ.”

“ಥ್ಯಾಂಕ್ಯೂ ಸರ್, ಥ್ಯಾಂಕ್ಯೂ ವೆರಿಮಚ್ ” ವಿಕಾಸ್ ಗೆ ನಿಜಕ್ಕೂ ಸಂತೋಷವಾಗಿತ್ತು. ನೀಲಳ ತಂದೆ ಇಷ್ಟೊಂದು ಸಹೃದಯಿ ಎಂದು ತಿಳಿದಿರಲೇ ಇಲ್ಲ. ಇಂತಹ ಸಹೃದಯ ಹೊಂದಿರುವ ಮನುಷ್ಯ ಖಂಡಿತಾ ತಮ್ಮಿಬ್ಬರ ಮದುವೆಗೆ ಅಡ್ಡಿ ಬರಲಾರರು ಎನಿಸಿತು. ಅಂದಿನ ಭೇಟಿ ಉಲ್ಲಾಸದಾಯಕವಾಗಿತ್ತು. ಹರ್ಷಚಿತ್ತನಾಗಿಯೇ ಹಿಂತಿರುಗಿದ.

ನೀಲಾಳಿಗೂ ಸಂತೋಷವಾಗಿತ್ತು. ಅಪ್ಪ ನಿಜಕ್ಕೂ ಒಬ್ಬ ಜಂಟ್ಲ್‌ಮನ್.

ಎಷ್ಟೊಂದು ಅತ್ಮೀಯತೆಯಿಂದ ವರ್ತಿಸಿದರು. ವಿಕಾಸ್ ಬಗ್ಗೆ ಅಪ್ಪನಿಗೆ ಒಳ್ಳೆಯ ಭಾವನೆ ಬಂದಿದೆ. ಇನ್ನು ತಾನು ಧೈರ್ಯವಾಗಿ ಮದುವೆಯ ಮಾತೆತ್ತಬಹುದು ಎಂದುಕೊಂಡಳು. ಅಷ್ಟರೊಳಗೆ ವಿಕಾಸ್‌ಗೆ ಕಲ್ಕತ್ತೆಯ ಆರ್ಟ್‌ ಶಾಲೆಯಲ್ಲಿ ಒಂದು ವರುಷದ ಡಿಪ್ಲೋಮೋಗೆ ಸ್ಕಾಲರ್ಷಿಪ್ ಸಿಕ್ಕಿತ್ತು. ಅದೊಂದು ಜೀವನದಲ್ಲಿ ದೊಡ್ಡ ತಿರುವು. ರವೀಂದ್ರನಾಥ ಠಾಗೂರರ ಕನಸಿನ ಚಿತ್ರಶಾಲೆ. ಶಾಂತಿವನದಲ್ಲಿ ಅಧ್ಯಯನ ನಡೆಸುವ ಸುವರ್ಣಾವಕಾಶ ತಾನಾಗಿಯೇ ವಿಕಾಸನಿಗೊದಗಿತ್ತು. ಅಪರೂಪದ ಅವಕಾಶ. ಅಲ್ಲಿಂದ ಬಂದ ಮೇಲೆ ಬದುಕಿನಲ್ಲಿ ಭಾಗ್ಯದ ಬಾಗಿಲು ತೆರೆಯುವುದರಲ್ಲಿತ್ತು. ಹಿಂದೆ ಮುಂದೆ ಯೋಚಿಸದೆ ಹೊರಡಲು ನಿರ್ಧರಿಸಿಬಿಟ್ಟ.

ತಮ್ಮ ಮದುವೆಯನ್ನು ಒಂದು ವರ್ಷ ಮುಂದೆ ಹಾಕಲು ನೀಲಳೊಂದಿಗೆ ಚರ್ಚಿಸಿದ.

ನೀಲಾಳಿಗೂ ಅದು ಸರಿ ಕಂಡಿತು. ಒಂದು ವರ್ಷ ತಾನೇ, ಅಷ್ಟರೊಳಗೆ ತನ್ನದು ಡಿಗ್ರಿ ಮುಗಿಯುತ್ತದೆ. ಬದುಕಿನಲ್ಲಿ ಸಿಕ್ಕಿರುವ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದು ಜಾಣತನವಲ್ಲವೇ. ಭವಿಷ್ಯದ ದೃಷ್ಟಿಯಿಂದಲೂ ಅದು ಯೋಗ್ಯವೇ ಹೀಗೆಂದು ತೀರ್ಮಾಸಿಕೊಂಡರು.

ವಿಕಾಸ್ ಹೋಗುವ ದಿನಗಳು ಹತ್ತಿರವಾದಂತೆಲ್ಲ ನೀಲಾಳಿಗೆ ಏನೋ ಅಸ್ವಸ್ಥತೆ. ಒಂದೇ ವರುಷವಲ್ಲವೇ ಎಂದು ಎಷ್ಟೇ ಸಮಾಧಾನಿಸಿಕೊಂಡರೂ ಏನೋ ದಿಗಿಲು, ಏನೋ ಆತಂಕ. ವಿಪರೀತ ನಿರುತ್ಸಾಹಿಯಾಗಿಬಿಟ್ಟಳು.

“ನೀಲಾ, ನೀನೇ ಒಪ್ಪಿ ಕಳಿಸ್ತಾ ಇದ್ದೀಯಾ. ಈಗ ಹೀಗೆ ನೀನು ಕಳಗುಂದಿದ ಚಂದ್ರನಂತಾಗಿಬಿಟ್ಟರೆ, ನನಗೆ ಹೋಗೋ ಉತ್ಸಾಹ ಇರುತ್ತಾ, ಈಗಲೂ ನೀನು ಬೇಡ ಅಂದ್ರೆ ನಾನು ಹೋಗೋದೇ ಇಲ್ಲ. ಈ ಬದುಕಿನಲ್ಲಿ ನನ್ನೋಳು ಅಂತಾ ಇರೋಳು ನೀನೊಬ್ಳೆ. ಅಪ್ಪಾ ಅಮ್ಮ ಎಲ್ಲರನ್ನು ಕಳ್ಕೊಂಡಿರೋ ಅನಾಥ ನಾನು. ನೀನಿದ್ದೀಯಾ ಆನ್ನೋದೇ ನಂಗೆ ದೊಡ್ಡ ಭರವಸೆ. ಈ ಭರವಸೆನಾ ನಾನು ಯಾವತ್ತೂ ಕಳ್ಕೊಳ್ಳೋಕೆ ಇಷ್ಟಪಡಲ್ಲ. “ಇಲ್ಲಾ ವಿಕಾಸ್. ನೀವು ಹೋಗ್ಲೇಬೇಕು. ಏನೋ ಮನಸ್ಸಿಗೆ ಒಂದು ಥರ ಶೂನ್ಯ ಆವರಿಸಿಬಿಡುತ್ತೆ. ನೀವಿಲ್ಲ ಅನ್ನೋ ಕಲ್ಪನೆ ನೆನೆದೇ ತಳಮಳ ಶುರುವಾಗುತ್ತೆ. ಮನಸ್ಸಿಗೆ ಎಷ್ಟೇ ಸಮಾಧಾನ ಮಾಡಿಕೊಂಡರೂ ಯಾಕೋ ನೆಮ್ಮದಿ ಸಿಕ್ತಾ ಇಲ್ಲ. ನನ್ನ ಮನಸ್ಸು ತುಂಬಾ ಬಲಹೀನವಾಗಿಬಿಟ್ಪದೆ ವಿಕಾಸ್.”ಹಾಗಾಗೋದು ಸಹಜ ನೀಲಾ. ನನ್ನ ಮನಸ್ಸಿನ ತುಂಬಾ ನೀನು. ನಿನ್ನ ಮನಸ್ಸಿನ ತುಂಬಾ ನಾನು ತುಂಬಿಕೊಂಡಿದೀವಿ. ಅಗಲಿಕೆನೇ ಇಲ್ಲಾ ಅನ್ನೋ ಭಾವನೆಗಳು ಬೆಳೆದಿರುವಾಗ, ದಿಢೀರನೆ ಹೀಗೆ ದೂರ ಇರಬೇಕು ಅಂದಾಗ ಇಂತಹ ಶೂನ್ಯ, ತಳಮಳ ಸಹಜನೇ. ಅದನ್ನೆಲ್ಲ ನಾವು ದೂರ ಮಾಡಿಕೊಂಡಾಗ ಮಾತ್ರವೇ ನಮ್ಮ ಗುರಿ ತಲುಪುವುದಕ್ಕೆ ಸಾಧ್ಯ ನೀಲಾ. ಒಂದೇ ವರ್ಷ, ಓಡೋಡಿ ಬಂದುಬಿಡುತ್ತೆ. ಅದು ಮುಗಿದ ಕೂಡಲೇ ನನ್ನ ಸ್ಫೂರ್ತಿ ದೇವತೆನಾ ನೋಡೋಕೆ ಓಡೋಡಿ ಬರ್ತಿನಿ. ಆಮೇಲೆ ನಿನ್ನನ್ನು ದೂರ ಮಾಡೋಕೆ ಯಾರಿಂದಲೂ ಸಾಧ್ಯವಿಲ್ಲ.”

ವಿಕಾಸನ ಭರವಸೆಯ ನುಡಿಗಳು ಕೊಂಚ. ಸಮಾಧಾನವನ್ನೇನೋ ತಂದವು. ಆದರೂ ಈ, ತಳಮಳ ಮಾತ್ರ ನಿಲ್ಲದಾಯಿತು. ಅವನ ಕೈಗಳನ್ನೇ ಹಿಡಿದು ಸುಮ್ಮನೆ ಕುಳಿತುಬಿಟ್ಟಳು. ಅದೆಷ್ಟು ಹೊತ್ತು ಹಾಗೆ ಕುಳಿತಿದ್ದಳೋ.

“ನೀಲಾ, ಹೊತ್ತಾಯಿತು. ನಿಮ್ಮ ತಂದೆ ಕಾಯ್ತ ಇರ್ತಾರೆ, ಸುಮ್ನೆ ಗಾಬರಿ ಆಗ್ತಾರೆ. ಏಳು ಹೋಗೋಣ” ಅವಳ ಭುಜ ಬಳಸಿ ನಿಧಾನವಾಗಿ ನಡೆಸುತ್ತಾ ತಾನೂ ಹೆಜ್ಜೆ ಹಾಕಿದ.

ತಂದೆ, ತಾಯಿ ಎಲ್ಲರನ್ನೂ ಕಳೆದುಕೊಂಡು ಅನಾಥಾಶ್ರಮದಲ್ಲಿ ಬೆಳೆದ ವಿಕಾಸನಿಗೆ ನೀಲಾ ಅಮೂಲ್ಯ ನಿಧಿಯಾಗಿದ್ದಳು. ಮದುವೆ ಮಾಡಿಕೊಂಡೇ ಹೊರಟರೆ ಎಂದು ಒಮ್ಮೊಮ್ಮೆ ಆಲೋಚಿಸಿದ. ಆದರೆ ಅತುರಾತುರವಾಗಿ ಮದುವೆಯಾಗಿ ಒಂದೆರಡು ದಿನ ಜೊತೆಯಲ್ಲಿದ್ದು, ಇಲ್ಲಿಯದೇ ಸೆಳೆತದಿಂದ ತಾನು ಅಧ್ಯಯನದಲ್ಲಿ ನಿರುತ್ಸಾಹಿಯಾದರೆ, ಬೇಡಾ. ಅಧ್ಯಯನ ಮುಗಿಸಿ ಬಂದ ಮೇಲೆಯೇ ಲಗ್ನವಾಗಲಿ ಎಂದು ದೃಢ ನಿರ್ಧಾರ ಮಾಡಿಕೊಂಡ.

ಪತ್ರ ಬರೆಯುತ್ತಿರು, ನಾನು ಬರೆಯುತ್ತೇನೆ ಎಂದು ಆಶ್ವಾಸನೆ ನೀಡಿ ನೀಲಾಳಿಂದ ಬೀಳ್ಕೊಟ್ಟ. ಆ ಕ್ಷಣ ಅವನಿಗೂ ಖೇದವೆನಿಸಿತು. ಪೆಚ್ಚಾದ ಮುಖ, ಕಂಬನಿ ತುಂಬಿದ ಕಣ್ಗಳು ಇವು ಅವನಿಂದ ಮರೆಯದಂತಾಯಿತು. ಇಳಿದು ನೀಲಳ ಬಳಿ ಸೇರಿಬಿಡಲೇ ಎನ್ನಿಸಿಬಿಟ್ಟಿತ್ತು. ಟ್ರೈನ್ ಮುಂದೋಡುತ್ತಿದ್ದಂತೆ ಆಲೋಚನೆಗಳು ತಡೆ ಆದವು. ಕಲ್ಕತ್ತೆಯ ಪರಿಸರವನ್ನು ನೆನೆಸಿಕೊಂಡು ರೋಮಾಂಚಿತನಾಗತೊಡಗಿದ. ವಾರಕ್ಕೊಂದು ಪತ್ರ ಬರುತ್ತಿತ್ತು. ಪತ್ರ ಬಂದಾಗ ಒಂದಿಷ್ಟು ಸಂತೋಷ. ಮತ್ತೆ ಅದೇ ವೇದನೆ. ವಿರಹ ವೇದನೆ. ಯಾವುದರಲ್ಲೂ ಮನಸ್ಸಿಲ್ಲ. ಆಸಕ್ತಿ ಇಲ್ಲ. ಓದಲು ಮನಸ್ಸು ಬರುವುದಿಲ್ಲ. ಅಪ್ಪನಿಗೆ ಇದ್ಯಾವುದೂ ತಿಳಿಯದಂತಿರಲು ಹರಸಾಹಸ ಪಡುತ್ತಿದ್ದಳು. ಪ್ರತಿಕ್ಷಣ ವಿಕಾಸನ ನೆನಪು. ದಿನಗಳನ್ನು ಎಣಿಸುವುದೇ ಅಗುತ್ತಿತ್ತು. ವಿಕಾಸನ ನೆನಪು ಭದ್ರವಾಗಿ ಕಾಡುತ್ತಿರುವಾಗಲೇ ಜಗದೀಶ ಈ ಮನೆ ಪ್ರವೇಶಿಸಿದ್ದ.

ದೂರದ ಸಂಬಂಧಿ ಜಗದೀಶನನ್ನು ತಮ್ಮ ಸಹಾಯಕ್ಕೆಂದು ಕರೆಸಿಕೊಂಡಿದ್ದರು. ತೋಟ, ವ್ಯಾಪಾರ ಇವುಗಳಲ್ಲಿ ಮೊದಲಿನಂತೆ ತೊಡಗಿಸಿಕೊಂಡಿರಲು ಸಾಧ್ಯವಾಗುತ್ತಿರಲಿಲ್ಲ. ದೂರದ ಆಸೆಯೂ ಬಂದಿತ್ತು. ಈತ ಯೋಗ್ಯನೆನಿಸಿದರೆ ಮನೆ ಅಳಿಯನನ್ನಾಗಿ ಮಾಡಿಕೊಳ್ಳಬೇಕೆಂದು ಅಲೋಚನೆಯೂ ಇತ್ತು. ಇದ್ಯಾವುದರ ಅರಿವಿಲ್ಲದ ನೀಲಾ ತನ್ನ ಪ್ರೇಮ ಸಾಮ್ರಾಜ್ಯದಲ್ಲಿ ವಿಕಾಸನ ನೆನಪಿನಲ್ಲಿ ಅವನ ಸಂದೇಶ ಹೊತ್ತು ತರುತ್ತಿದ್ದ ಪತ್ರಗಳಲ್ಲಿ ಮುಳುಗಿ ಹೋಗಿಬಿಟ್ಟಿದ್ದಳು. ಹೊರಗಿನ ವಿಚಾರಗಳಾವುವು ಅವಳ ಹೃದಯವನ್ನು ಪ್ರವೇಶಿಸಿರಲಿಲ್ಲ.

ಸೂಕ್ಷ್ಮ ಹೃದಯದ ಅಪ್ಪನಿಗೆ ಮತ್ತೊಮ್ಮೆ ಹೃದಯ ತೊಂದರೆ ಕಾಣಿಸಿಕೊಂಡಾಗ ನೀಲಾ ಅಲ್ಲಾಡಿಹೋದಳು. ಬದುಕುವ ದಿನಗಳು ಹೆಚ್ಚಿಲ್ಲ ಎಂಬ ಅಂಶವನ್ನು ಡಾಕ್ಟರ್ ಮನದಟ್ಟು ಮಾಡಿದಾಗ ಆಕಾಶವೇ ಕಳಚಿ ಬಿದ್ದಂತಾಯಿತು. ಈ ಆಘಾತವನ್ನು ಸಹಿಸದಾದಳು. ಸೊರಗಿ- ಸೊಪ್ಪಾಗಿ ಹಾಸಿಗೆಯಲ್ಲಿ ಮೈಚೆಲ್ಲಿರುವ ಅಪ್ಪನನ್ನೇ ದೀನಳಾಗಿ ನೋಡುತ್ತಾ ಕಣ್ಣೀರು ಕರೆದಳು. ಹೆತ್ತ ತಾಯಿಯ ನೆನಪೇ ಇಲ್ಲ.

ಈಗ ಏಕೈಕ ಕರುಳಿನ ಬಂಧುವಾಗಿರುವ ಅಪ್ಪ ಕೂಡ ನನ್ನ ಕೈಬಿಟ್ಟರೆ ನನಗಾರು ಗತಿ. ಈ ವಯಸ್ಸಿಗೆ ಎಲ್ಲರನ್ನೂ ಕಳೆದುಕೊಂಡು ಅನಾಥೆಯಾಗಬೇಕೆ. ಅಪ್ಪಾ ಅಪ್ಪಾ ನನ್ನ ಬಿಟ್ಟು ಹೋಗಬೇಡಿ ಅಪ್ಪ. ನಿಮ್ಮ ಅಗಲಿಕೆ ಸಹಿಸೋ ಶಕ್ತಿ ನನಗಿಲ್ಲ ಅಪ್ಪ. ಮೂಕವಾಗಿ ರೋಧಿಸುವಳು. ಅವಳ ಕಣ್ಣೀರಿಗೆ ಕಲ್ಲು ಕೂಡ ಕರಗುವಂತಿತ್ತು. ಆದರೆ ದೇವರು ನಿರ್ದಯನಾಗಿದ್ದ, ನಿಷ್ಕರುಣಿಯಾಗಿದ್ದ.

ಅಪ್ಪನ ಮುಂದೆ ತನ್ನ ಕಣ್ಣೀರು ಕಾಣಿಸಬಾರದೆಂದು ಶತಪ್ರಯತ್ನ ನಡೆಸಿ ವೇದನೆ ಹತ್ತಿಕ್ಕಿ ನೀಲಾ ಅಪ್ಪನ ಮುಂದೆ ಕುಳಿತಿದ್ದಾಳೆ. ಕಷ್ಟಪಟ್ಟು ಉಸಿರಾಡುತ್ತಿದ್ದ ಅಪ್ಪ ನೀಲಾಳಿಗೆ ಏನೋ ಹೇಳುತ್ತಿರುವಂತೆ ಅನಿಸಿ “ಹೇಳಪ್ಪ ಅದೇನು” ಕೇಳಿದಳು.

ಮೆಲ್ಲನೆ “ನೀಲಾ ನಿನ್ನ ಮದ್ವೆ ನೋಡಬೇಕು. ನಾನೇ ಕೈಯಾರೆ ಎಲ್ಲ ಏರ್ಪಾಡು ಮಾಡಿ ನೀನು ಹೊಸ ಬಾಳಿಗೆ ಅಡಿಯಿಡುವುದನ್ನು ಕಾಣಲು ಕಾಯುತ್ತಿದ್ದೆ. ಆದರೆ ಆ ವಿಧಿ ಅದಕ್ಕೆಲ್ಲ ಅವಕಾಶ ಕೊಡ್ತಾ ಇಲ್ಲ. ನೀನೇ ನಿನ್ನ ಮದ್ವೆ ಏರ್ಪಾಡು ಮಾಡಮ್ಮ. ಕಣ್ತುಂಬ ನೋಡಿ ಕಣ್ಮುಚ್ಚಿಕೊಳ್ತಿನಿ” ಗದ್ಗದಿತವಾಗಿ ನುಡಿದರು.

ಅಳುವಿನ ಕಟ್ಟೆ ಒಡೆದು ಅಪ್ಪಾ ಅಪ್ಪಾ ಜೋರಾಗಿ ಆತ್ತಳು. “ಆಯ್ತಪ್ಪ ನಿನ್ನಾಸೆ ನೆರವೇರಿಸುತ್ತೇನೆ” ಮಾತು ಕೊಟ್ಟಳು.

ಅಲ್ಲಿಂದ ಹೊರಬಂದ ನೀಲಾ “ಜಗದೀಶ ನಂಗೊಂದು ಸಹಾಯ ಮಾಡ್ತಿರಾ. ವಿಕಾಸ್ ಅಂತಾ ನನಗೆ ಬೇಕಾದವರು ಒಬ್ಬರು ಕಲ್ಕತ್ತದಲ್ಲಿದ್ದಾರೆ. ಅವರ್‍ನ ಬೇಗ ಬನ್ನಿ ಅಂತ ಟೆಲಿಗ್ರಾಂ ಕೊಡಿ.

“ವಿಕಾಸ್ ಯಾರು ನೀಲಾ” ಪ್ರಶ್ನಿಸಿದ.

“ನನ್ನ ಮದ್ವೆ ಆಗೋರು” ಜಗದೀಶನ ಆಸೆಗಳ ಪರ್ವತ ಉರುಳುರುಳಿ ಬಿದ್ದವು.

“ನೀಲಾ ಏನ್ ಹೇಳ್ತಾ ಇದ್ದೀಯಾ.” ಹೌದು ಜಗದೀಶ್. ನಾನು ವಿಕಾಸ್ ತುಂಬಾ ಇಷ್ಟ ಪಟ್ಟಿದ್ದೀವಿ. ಮದ್ವೆ ಮಾಡ್ಕೋಬೇಕು ಅಂತನೂ ಇದ್ವಿ. ಅಷ್ಟರೊಳಗೆ ವಿಕಾಸ್ ಒಂದು ವರ್ಷ ಕಲ್ಕತ್ತೆಗೆ ಹೋಗಬೇಕಾಯ್ತು. ಅಲ್ಲಿಂದ ಬಂದ ಮೇಲೆ ಮದ್ವೆ ಅಂತ ತೀರ್ಮಾನ ಮಾಡಿದ್ವಿ. ಆದರೆ ಅಪ್ಪ ನನ್ನ ಮದ್ವೆ ನೋಡ್ಲೇಬೇಕು ಅಂತಾ ಇದ್ದಾರೆ. ಪರಿಸ್ಥಿತಿ ಹೀಗಿದೆ ಅಂತಾ ಅವರಿಗೆ ತಿಳಿಸಿ ಅರ್ಜೆಂಟ್ ಬರೋ ಹಾಗೆ ಮಾಡಿ ಪ್ಲೀಸ್.”

ಜಗದೀಶ್ ನೀಲಾಳನ್ಗು ಮದುವೆಯಾಗುವ ಮನಸ್ಸು ಇತ್ತು. ಆದರೆ ನೀಲಾ ಈಗಾಗಲೇ ಬೇರೆಯವರಿಗೆ ತನ್ನ ಪ್ರೀತಿ, ಹೃದಯ ಕೊಟ್ವಿದ್ದಾಳೆ ಅಂತಾ ಗೊತ್ತಿರಲಿಲ್ಲ. ನೀಲಾಳ ಏನೇನೋ ಕನಸು ಕಟ್ಟಿದ್ದ. ಆ ಕನಸುಗಳೆಲ್ಲವೂ ಅವನ ಕಣ್ಮುಂದೆಯೇ ಛಿದ್ರವಾದವು. ಭಾರವಾದ ಹೆಜ್ಜೆ ಇರಿಸಿ ಹೊರಡಲನುವಾದ. ಅಷ್ಟರಲ್ಲಿ ರಾಯರ ಕರೆ ಬಂತು. ಬೇಸರ ನಿರಾಶೆ ಅಚ್ಚೊತ್ತಿತ್ತು. ಆದರೆ ಅದೃಷ್ಟ ಅವನ ಪಾಲಿಗಿತ್ತು.

“ಜಗದೀಶ್, ನನ್ನ ಮಗಳನ್ನ ಮದ್ವೆ ಮಾಡ್ಕೋತೀಯಾ. ನಾನು ಬದುಕಿರುವಾಗಲೇ ನನ್ನ ಮಗಳನ್ನು ಯೋಗ್ಯವಾದವನೊಬ್ಬನ ಕೈಯಲ್ಲಿಟ್ಟು ಬಿಡ್ತೀನಿ. ಆ ಯೋಗ್ಯತೆ ನಿಂಗಿದೆ. ದಯವಿಟ್ಟು ನನ್ನ ಮಗಳ ಕೈ ಹಿಡಿದು ಅವಳಿಗೊಂದು ಸುಂದರ ಬದುಕು ಕೊಡು, ಪ್ಲೀಸ್ ಜಗದೀಶ್.”

“ಆಯ್ತು ಮಾವ, ಆಯಾಸ ಮಾಡ್ಕೋಬೇಡಿ. ನಿಮ್ಮ ಮಗಳು ಯೋಗ್ಯವಾದವನನ್ನೇ ಕೈ ಹಿಡಿಯುತ್ತಾಳೆ. ಯೋಚ್ನೆ ಮಾಡಬೇಡಿ” ಭರವಸೆ ನೀಡಿದ. ಕೈ ತಪ್ಟಿತು ಎಂದುಕೊಂಡಿದ್ದು ಮತ್ತೆ ಕೈ ಸೇರುವಂತಾಯ್ತು.

ಅದೃಷ್ಟದ ಬಾಗಿಲು ಅವನ ಪಾಲಿಗೆ ತಾನಾಗಿಯೇ ತೆರೆಯಿತು. ಈಗ ತಾನು ಮೂರ್ಖನಾಗಬಾರದು. ಯಾವ ಕಾರಣಕ್ಕೂ ವಿಕಾಸ್ ಇಲ್ಲಿಗೆ ಬರಬಾರದು ಅಂತಾ ನಿಶ್ಚಯ ಮಾಡಿಕೊಂಡವನೇ ನೀಲಳಿಗೆ ವಿಕಾಸ್ ಗೆ ಟೆಲಿಗ್ರಾಂ ಕೊಟ್ಬಾಯಿತೆಂದು ಸುಳ್ಳು ಹೇಳಿದ.

ಮನೆಯಲ್ಲಿಯೇ ಸರಳವಾಗಿ ಮದುವೆಯನ್ನು ನಡೆಸಲು ಎಲ್ಲಾ ಸಿದ್ಧತೆ ನಡೆದವು. ನಾಳೆ ಮದುವೆ ಎಂದರೂ ವಿಕಾಸನ ಸುಳಿವಿಲ್ಲ.

“ಜಗದೀಶ್, ಅವರಿಗೆ ಟೆಲಿಗ್ರಾಂ ತಲುಪಿದೆಯಾ, ವಿಕಾಸ್ ಯಾವಾಗ ಬರ್ತಾರೆ” ಆತಂಕದಿಂದಲೇ ಕೇಳಿದಳು.

“ಬಂದು ಬಿಡ್ತಾರೆ. ರಾತ್ರಿ ಬರಬಹುದು. ರಾತ್ರಿ ಆಗದೆ ಇದ್ರೆ ಬೆಳಿಗ್ಗೆ ಹೊತ್ತಿಗಾದ್ರೂ ಬಂದು ಬಿಡುತ್ತಾರೆ” ಸುಳ್ಳು ಹೇಳಿ ಜಾರಿಕೊಂಡ.

ರಾತ್ರಿ ಕಳೆಯಿತು. ಬೆಳಿಗ್ಗೆಯೂ ಆಯಿತು. ಮುಹೂರ್ತದ ಸಮಯವಾದರೂ ವಿಕಾಸನ ಸುಳಿವಿಲ್ಲ. ವಿಕಾಸನ ಬದಲು ಅವನು ಕೊಟ್ಟ ಟೆಲಿಗ್ರಾಂ ಬಂದಿತು. ಜಗದೀಶ ತನ್ನ ತಪ್ಪು ಸಿಗಬಾರದೆಂದು, ಯಾವ ವಿಷಯವನ್ನು ತಿಳಿಸದೆ ಅರ್ಜೆಂಟ್ ಬನ್ನಿ ಎಂದಷ್ಟೇ ಟೆಲಿಗ್ರಾಂ ನೀಡಿದ್ದ. ಹಿಂದಿನ ದಿನ ಅದು ನಿಧಾನವಾಗಿ ತಲುಪಿ ಸಮಯಕ್ಕೆ ಸರಿಯಾಗಿ ಬಾರದಂತಿರಲಿ ಎಂದಾಶಿಸಿದ್ದ. ಮುಂದಿನ ವಾರ ಬರುವುದಾಗಿ ವಿಕಾಸ್ ಟೆಲಿಗ್ರಾಂ ಕಳುಹಿಸಿದ್ದ. ಪರಿಸ್ಥಿತಿಯ ಅರಿವು ಅವನಿಗಾಗಿರಲಿಲ್ಲ. ಜಗದೀಶನ ಉಪಾಯ ಫಲಿಸಿತ್ತು.

ಮುಹೂರ್ತ ಮೀರುತ್ತಿದೆ ಹೆಣ್ಣನ್ನು ಕರೆದು ತನ್ನಿ ಎಂದು ಪುರೋಹಿತರು ಅವಸರಿಸುತ್ತಿದ್ದಾರೆ. ರಾಯರೇ ಸ್ವತಃ ಮಗಳನ್ನು ಕರೆತರಲು ಬಂದಿದ್ದಾರೆ. ದಿಕ್ಕು ತೋಚದೆ ಅಲೆಗೆ ಸಿಕ್ಕ ಹಕ್ಕಿಯಂತೆ ತೂಗಾಡುತ್ತಿದ್ದಾಳೆ. ಆ ಕ್ಷಣ ಯಾವ ನಿರ್ಧಾರವನ್ನು ತೆಗೆದುಕೊಳ್ಳಲು ಅವಳಿಂದಾಗುತ್ತಿಲ್ಲ. ಮದುವೆಯನ್ನು ಇನ್ನೊಂದು ವಾರ ಮುಂದೆ ಹಾಕಲು ಸಾಧ್ಯವೇ ಎಂದು ಯೋಚಿಸುತ್ತಿದ್ದಾಳೆ. ವರನೇ ಇಲ್ಲದ ಮೇಲೆ ಮದುವೆ ಸಾಧ್ಯವೇ? ವಿಷಾದಭರಿತಳಾಗಿ ನಿಂತುಬಿಟ್ಟಿದ್ದಾಳೆ. “ನೀಲಾ ಬಾಮ್ಮ ತಡವಾಗುತ್ತೆ” ಮೆಲ್ಲನೆ ಕೈಹಿಡಿದು ಮಂಟಪದ ಬಳಿ ಕರೆತಂದರು. ಏನೋ ಹೇಳಲೋದವಳು ವರನಾಗಿ ಸಿದ್ಧನಾಗಿ ನಿಂತಿರುವ ಜಗದೀಶನನ್ನು ಕಂಡು ದಿಗ್ಭ್ರಾಂತಳಾದಳು. ಮೂರ್ಛೆ ಬರುವಂತಾಗಿ, ಮಂಟಪದ ಕಂಬವನ್ನು ಆಧರಿಸಿ ನಿಂತಳು.

ತಾನು ಕಾಣುತ್ತಿರುವುದು ಸತ್ಯವೇ? ಜಗದೀಶ್ ಮೋಸ ಮಾಡಿಬಿಟ್ಟನೆ. ವಿಕಾಸ್‌ಗೆ ಈ ದಿನ ಮದುವೆ ಎಂದು ತಿಳಿಸಲಿಲ್ಲವೇ. ತಾನೇ ಮದುವೆಯಾಗುವ ಸ್ವಾರ್ಥದಿಂದ ಈ ಕೃತ್ಯಗೈದನೇ ಅಯ್ಯೋ ದೈವವೇ ಅವಳ ಹೃದಯ ಆರ್ತವಾಗಿ ಕೂಗಿಕೊಂಡಿತು. ಅಪ್ಪನೆಡೆ ದೈನ್ಯವಾಗಿ ನೋಡಿದಳು. ಅವರಾಗಲೇ ಮಗಳ ಮದುವೆಯ ಸಂಭ್ರಮದಲ್ಲಿದ್ದಾರೆ. ಆ ಕಂಗಳೇ ಹೇಳುತ್ತಿವೆ ಅವರೆಷ್ಟು ಸಂತೋಷ ಸವಿಯುತ್ತಿದ್ದಾರೆ ಎಂದು. ಈ ಸಂತೊಷ ಅಳಿಸಲು ತನಗೇನು ಹಕ್ಕಿದೆ. ಮಗಳಾಗಿ ನನ್ನ ಕರ್ತವ್ಯ ನಾನು ಮಾಡಲೇಬೇಕಾಗಿದೆ. ಅಪ್ಪನ ಆಶೆಯಂತೆ ತಾನು ಲಗ್ನವಾಗಲೇಬೇಕು. ವಿಕಾಸ್ ಮನ ಚೀರಿಡುತ್ತಿತ್ತು. ಜಗದೀಶ ಕಟ್ಟಿದ ತಾಳಿಗೆ ಮೌನವಾಗಿಯೇ ಕೊರಳೊಡ್ಡಿದಳು. ಈಗವಳು ಜಗದೀಶನ ಪತ್ನಿ. ತಾನು ಕಂಡ ಕನಸು, ಅಸೆ, ನಿರೀಕ್ಷೆಗಳಿಗೆಲ್ಲ ತಾನೇ ಕೈಯಾರೆ ಬೆಂಕಿ ಹಚ್ಚಿ ತನ್ನ ಪ್ರೇಮದ ಸೌಧವನ್ನು ಸುಟ್ಟುಬಿಟ್ಟಳು. ತನ್ನ ಕನಸಿನ ಸೌಧವನ್ನು ಉರುಳಿಸಿಬಿಟ್ಟಳು. ತಾನೇ ಕಟ್ಟಿದ ಪ್ರೇಮದ ಅರಮನೆಯನ್ನು ನುಚ್ಚು ನೂರಾಗಿಸಿದಳು. ಪ್ರೇತಕಳೆ ಹೊತ್ತ ನೀಲಾ ಮೌನವಾಗಿಯೇ ಮುಂದಿನ ಕಲಾಪದಲ್ಲಿ ಭಾಗಿಯಾದಳು. ಸಪ್ತಪದಿ ತುಳಿದಳು. ಸಂತೋಷ ಹೆಚ್ಚಾಯಿತೇನೋ ರಾಯರ ದುರ್ಬಲ ಹೃದಯ ಸಹಿಸದಾಯಿತು. ಮಗಳ ಮದುವೆಯೇ ತಮ್ಮ ಅಂತಿಮ ಆಸೆಯೆಂಬುದನ್ನು ಸಾಬೀತುಪಡಿಸಿ ಜಗದೀಶನ ಕೈಗೆ ಮಗಳನ್ನಿರಿಸಿ ಶಾಶ್ವತವಾಗಿ ಜಗತ್ತಿಗೆ ವಿದಾಯ ಹೇಳಿದರು ರಾಯರು.

ಅಪ್ಪ ಸತ್ತ ದುಃಖ ಒಂದೆಡೆ. ಮೋಸ ಮಾಡಿ ತನ್ನ ಬದುಕನ್ನು ಛಿದ್ರವಾಗಿಸಿದ ಜಗದೀಶ, ಒಂದು ಕಡೆ. ಇವೆರಡರ ನೋವಿನಲ್ಲಿ ಸಾಕಷ್ಟು ಬಳಲಿ ಹೋದಳು. ಯಾವುದರ ದುಃಖ ಹೆಚ್ಚು ಎಂದು ನಿರ್ಧರಿಸಲಾರದೆ ಹೋದಳು. ಜಗದೀಶನನ್ನು ಮಾತನಾಡಿಸಲು ಕೂಡ ಹೇಸಿಕೊಂಡಳು. ಅವಳ ತಿರಸ್ಕಾರ ಕಂಡ ಜಗದೀಶ ಅವಳನ್ನು ಮಾತನಾಡಿಸಲು ಅಂಜಿ ದೂರವೇ ಇರುತ್ತಿದ್ದ. ಮಾವನ ಕರ್ಮಗಳನ್ನೆಲ್ಲ ಸಾಂಗವಾಗಿ ನೆರವೇರಿಸಿದ.

ಅಷ್ಟರಲ್ಲಿ ವಿಕಾಸ್ ಬಂದಿಳಿದ. ನೀಲಾಳ ಕೊರಳಿನಲ್ಲಿದ್ದ ಮಾಂಗಲ್ಯ ಅವನನ್ನು ಅಣಕಿಸಿತು. ತಾನು ಬಂದದ್ದು ಬಹಳ ತಡವಾಯಿತೆಂದು. ಆ ಕ್ಷಣವೇ ಅವನಿಗರ್ಥವಾಗಿಬಿಟ್ಟಿತು. ಮನವೆಲ್ಲ ಶೂನ್ಯ ಆವರಿಸಿತು.

ದಿಗ್ಭ್ರಾಂತನಾಗಿ ಮಾತು ಹೊರಡದೆ ಮೌನವಾಗಿ ನಿಂತ ವಿಕಾಸನನ್ನು “ನೀವು ನನಗೆ ಮೋಸ ಮಾಡಿದ್ರೆ. ವಿಷಯ ಹೀಗಿದೆ ಅಂತ ಗೊತ್ತಾದ ಮೇಲೆ ಬೇಗ ಬರಬೇಕಿತ್ತು. ಯಾಕೆ ಬರಲಿಲ್ಲ” ಎದುರಿಗೆ ನಿಂತಾತನನ್ನು ಹತಾಶೆಯಿಂದ ಕೇಳಿದಳು.

“ವಿಷಯ ಇಷ್ಟೊಂದು ಗಂಭೀರ ಅಂತ ನನಗೆ ಗೊತ್ತಾಗಲಿಲ್ಲ ನೀಲಾ. ಗೊತ್ತಾಗಿದ್ರೆ ಹಾರಿ ಬರ್ತಾ ಇದ್ದೆ. ನಾನು ತಪ್ಪು ಮಾಡಿದೆ. ನೀನು ಹೇಳಿದಂತೆ ನಿನ್ನ ಮದ್ವೆ ಮಾಡೊಕೊಂಡೇ ನಾನು ಕಲ್ಕತ್ತಕ್ಕೆ ಹೋಗಬೇಕಾಗಿತ್ತು. ನಿಮ್ಮ ತಂದೆ ಇಷ್ಟು ಬೇಗ ಹೋಗಿಬಿಡ್ತಾರೆ ಅನ್ನೋ ಕಲ್ಪನೆ ನಂಗಿರಲಿಲ್ಲ. ನಾನು ನತದೃಷ್ಟ ನೀಲಾ. ನಿನ್ನಂತಹ ಅಮೂಲ್ಯವಾದ ರತ್ನನಾ ನಾನೇ ಕೈಯಾರೆ ದೂರ ಮಾಡಿಕೊಂಡುಬಿಟ್ಚೆ. ಹೇಗೆ ಸಹಿಸಲಿ ಇದನ್ನ. ನನ್ನಿಂದ ತಡ್ಕೊಳ್ಳೋದಿಕ್ಕೆ ಸಾಧ್ಯವಾಗ್ತ ಇಲ್ಲ. ನಿನ್ನನ್ನು ಮರೆಯೋದಕ್ಕೆ ನನ್ನಿಂದ ಸಾಧ್ಯವಾ. ಏನಾಗಿ ಹೋಯ್ತು ನೀಲಾ ನಮ್ಮ ಬಾಳಿನಲ್ಲಿ. ನಾವು ಕಂಡ ಕನಸುಗಳೆಲ್ಲ ಛಿದ್ರವಾಗಿ ಹೋದವಲ್ಲ. ದೇವರು ಎಂತಹ ಕ್ರೂರಿ” ಕಣ್ಣೀರಿಟ್ಪ.

ನೀಲಳೂ ಕಣ್ಣೀರಿಡುತ್ತಾಳೆ. ಯಾರು ಯಾರನ್ನೂ ಸಂತೈಸುವ ಸ್ಥಿತಿಯಲ್ಲಿಲ್ಲ. ಪರಸ್ಪರರಿಗಾದ ನಷ್ಟದ ಅರಿವೇ ಅವರನ್ನು ದುಃಖದ ನಿರಾಶೆಯ, ಹತಾಶೆಯ ಕೂಪಕ್ಕೆ ದೂಡುತ್ತದೆ. ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ಜಗದೀಶ ಒಂದೆಡೆ ಕಂಗೆಟ್ಟ. ತಪ್ಪಿತಸ್ಥನ ಭಾವ ಅವನನ್ನು ಕುಟುಕುತ್ತಿತ್ತು. ತನ್ನ ಕಣ್ಮುಂದೆಯೇ ಪ್ರೇಮಿಗಳಿಬ್ಬರೂ ಒಬ್ಬರನೊಬ್ಬರು ಕಳೆದುಕೊಂಡ ದುಃಖದಲ್ಲಿ ಗೋಳಾಡುತ್ತಿದ್ದರೆ ಸಹಿಸದಾದ. ತಾನು ಈ ಮನೆಯ ಅಳಿಯ ಎಂದು ನೆನಪಾಗಿ ಕೃದ್ದನಾದ. ಪರಿಸ್ಥಿತಿ ಕೈ ಮೀರುವ ಮುನ್ನ ತನ್ನ ಕೃಗೆತ್ತಿಕೊಳ್ಳಬೇಕೆಂದು.

“ನೀಲಾ, ಆಗಿದ್ದು ಆಗಿ ಹೋಯಿತು. ಈಗ ಅತ್ತೇನು ಪ್ರಯೋಜನ. ಏಳು ಮೇಲೆ. ವಿಕಾಸ್ ಅಷ್ಟು ದೂರದಿಂದ ಬಂದಿದ್ದಾರೆ. ಅವರು ಊಟಮಾಡಿ ವಿಶ್ರಾಂತಿ ತೆಗೆದುಕೊಳ್ಳಲಿ, ಏಳು” ಬಲವಂತವಾಗಿ ತಾನೇ ಕೈ ಹಿಡಿದು ಏಳಿಸಿದ. ಅವಳನ್ನು ಒಳ ಕಳುಹಿಸಿ ವಿಕಾಸ್ ಮುಂದೆ ನಿಂತು.

“ಏಳಿ ವಿಕಾಸ್. ಹಣೆ ಬರಹ ಅನ್ನುವುದು ಇದಕ್ಕೆ. ನನ್ನ ಹಣೆಯಲ್ಲಿ ನೀಲಾಳನ್ನು ಮದ್ವೆ ಆಗುವ ಯೋಗ ಬರೆದಿತ್ತು. ನಾನು ಅವಳ ಗಂಡನಾದೆ. ನೀವು ಸ್ನೇಹಿತನಾಗಿಯೇ ಉಳಿಯಬೇಕು ಅನ್ನೋದು ನಿಮ್ಮ ಹಣೇಲಿ ಬರೆದಿತ್ತು. ದೇವರ ನಿಯಮವನ್ನು ತಪ್ಟಿಸೋಕೆ ಯಾರಿಂದಲೂ ಸಾಧ್ಯ ಇಲ್ಲ. ಪರಿಸ್ಥಿತಿನಾ ಅರ್ಥಮಾಡಿಕೊಂಡು ಸಮಾಧಾನ ಮಾಡಿಕೊಳ್ಳಿ. ನೀಲಾ ಅಪ್ಪ ಸತ್ತಿರೋ ದುಃಖದಲ್ಲಿದ್ದಾಳೆ. ಆ ನೋವಿನ ಜೊತೆ ನೀವೂ ಕೂಡ ನೋವು ಕೊಡಬೇಡಿ. ನಾಳೆ ಬೆಳಿಗ್ಗೆಯೇ ಹೊರಟುಬಿಡಿ. ನೀವಿನ್ನೂ ಇಲ್ಲೇ ಇದ್ದರೆ ನೀಲಾ ಬದಲಾಗೋದು ಕಷ್ಟವಾಗುತ್ತೆ. ನನ್ನನ್ನ ಅವಳು ಗಂಡ ಅಂತಾ ಒಪ್ಟಿಕೊಳ್ಳೋದು ನಿಧಾನವಾಗುತ್ತೆ. ನಿಮ್ಮ ನೀಲಳ ಬಾಳು ಚೆನ್ನಾಗಿರಬೇಕು ಅಂದ್ರೆ ನೀವು ಆದಷ್ಟು ಬೇಗ ಅವಳಿಂದ ದೂರಾಗಬೇಕು” ದೃಢವಾಗಿ ಆಷ್ಟೇ ಕಟುವಾಗಿ ನುಡಿದ ಜಗದೀಶ.

ರಾತ್ರಿ ಅದೆಷ್ಟು ಹೊತ್ತಾಗಿತ್ತೋ, ಬಚ್ಚಲಿಗೆ ಹೋಗಲು ಹೊರ ಬಂದಾಗ ವಿಕಾಸನ ರೂಮಿನಲ್ಲಿ ಮಾತುಗಳು ಕೇಳಿ ಬಂದವು ಜಗದೀಶನಿಗೆ.

“ಎಲ್ಲಾ ನಮ್ಮ ಹಣೆ ಬರಹ ನೀಲಾ. ನಮ್ಮ ಪ್ರೇಮ ಈ ರೀತಿ ಕೊನೆಯಾಗುತ್ತೆ ಅಂತಾ ನಾನು ಕನಸಿನಲ್ಲೂ ತಿಳಿದಿರಲಿಲ್ಲ. ನನ್ನ ಸ್ಫೂರ್ತಿ ಶಾಶ್ವತವಾಗಿ ನನ್ನ ಕೈ ಬಿಟ್ಟು ಹೋಗ್ತಾಳೆ ಅನ್ನೋ ಕಲ್ಪನೆ ಕೂಡ ನಂಗಿರಲಿಲ್ಲ, ಇನ್ನೆಲ್ಲಿ ನನ್ನ ಸ್ಫೂರ್ತಿ.”

“ವಿಕಾಸ್, ನೀವೇ ಕೈಯಾರೆ ಹಾಳುಮಾಡಿದ್ರೆ. ಟೇಗ್ರಾಂ ತಲುಪಿದ ಕೂಡಲೇ ನೀವು ಬಂದುಬಿಟ್ಟದ್ದರೆ ಇಂತಹ ಪರಿಸ್ಥಿತಿ ಉಂಟಾಗ್ತಾ ಇತ್ತಾ. ಅಪ್ಪನ ಸ್ಥಿತಿ ಗಂಭೀರವಾಗಿದೆ ಅಂತಾ ನಾನು ಪತ್ರ ಕೂಡ ಬರೆದಿದ್ದೆ.”

“ತಪ್ಪು ಮಾಡಿಬಿಟ್ಟೆ ನೀಲಾ. ತಪ್ಪು ಮಾಡಿಬಿಟ್ಟೆ. ಪರಿಸ್ಥಿತಿ ಇಷ್ಟೊಂದು ಗಂಭೀರತೆ ಪಡೆದಿದೆ ಅಂತ ಅಂದುಕೊಳ್ಳಲೇ ಇಲ್ಲ. ಅಷ್ಟು ದೂರದಿಂದ ಬರಬೇಕಾದರೆ ಏನೆಲ್ಲ ವ್ಯವಸ್ಥೆ ಮಾಡ್ಕೋಬೇಕು. ಹಾಗಾಗಿ ಸ್ವಲ್ಪ ತಡಮಾಡಿಬಿಟ್ಟೆ. ಆದರೆ ಆ ತಡದಿಂದಾಗಿ ನಾನು ಏನು ಕಳ್ಕೊಂಡೆ. ನನ್ನ ಬದುಕಿಗಾದ ನಷ್ಟ ಏನು ಅಂತ ನಂಗರ್ಥವಾಗ್ತ ಇದೆ. ಏನು ಮಾಡಲಿ ನೀಲಾ, ನಾನು ಏನು ಮಾಡಲಿ. ಬದುಕಿನಲ್ಲಿ ನನಗೆ ಸಿಕ್ಕಿದ್ದ ಒಂದೇ ಒಂದು ಆಸರೆನೂ ನನ್ನಿಂದ ದೂರವಾಗ್ತ ಇದೆ. ನಾನು ಹೇಗೆ ಬದುಕಿರಲಿ. ನೀನಿಲ್ಲದೆ ಬದುಕನ್ನು ಊಹೆ ಮಾಡ್ಕೊಳ್ಳೋದಕ್ಕೂ ನನ್ನಿಂದ ಸಾಧ್ಯವಾಗ್ತ ಇಲ್ಲ. ಇನ್ನೆಲ್ಲಿಯ ಕಲೆಗಾರ, ಇನ್ನೆಲ್ಲಿಯ ಚಿತ್ರಗಾರ ಸ್ಫೂರ್ತಿ ದೇವತೆನೇ ಇಲ್ಲ ಅಂದ ಮೇಲೆ ನಾನೇನು ತಾನೆ ಬರೆಯಬಲ್ಲೆ. ಕಲ್ಕತ್ತ ನನ್ನ ಜೀವನದ ತಿರುವು ಆಗುತ್ತೆ. ನನ್ನನ್ನು ಮಹಾನ್ ಕಲಾವಿದನನ್ನಾಗಿ ಮಾಡುತ್ತೆ ಅಂದುಕೊಂಡಿದ್ದೆ. ಆದರೆ ಅದೇ ಕಲ್ಕತ್ತ ನನ್ನ ಬದುಕಿನಲ್ಲಿ ಕರಾಳ ಛಾಯೆ ಮೂಡುವ ಹಾಗೆ ಮಾಡ್ತಾ. ನಾನು ಕಲ್ಕತ್ತಕ್ಕೆ ಹೋಗದೆ ಇದ್ದಿದ್ದರೆ, ನಂಗೆ ಸ್ಕಾಲರ್ಷಿಪ್ ಸಿಗದೆ ಹೋಗಿದ್ದಿದ್ದರೆ. ಅಯ್ಯೋ ಕಲ್ಕತ್ತದಲ್ಲಿ ಸೀಟ್ ಸಿಕ್ಕಿದ್ದಕ್ಕೆ ಹೆಮ್ಮೆಯಿಂದ ಬೀಗಿದ್ದೆ. ರಾಷ್ಟ್ರಮಟ್ಟದಲ್ಲಿ ನನ್ನ ಪ್ರತಿಭೆ ಏನು ಅಂತ ತೋರಿಸೋ ಅವಕಾಶ ಸಿಕ್ಕಿದೆ ಅಂತ ಉಬ್ಬಿದ್ದೆ. ಅದೇ ಅವಕಾಶ ನನ್ನ ಬಾಳಿನ ಬೆಳಕನ್ನು ಆರಿಸುತ್ತಿದೆ ಅಂತ ನಂಗೆ ಗೊತ್ತಿತ್ತೆ? ನೀಲಾ ಹೇಳು, ಇದರಲ್ಲಿ ನನ್ನ ತಪ್ಪು ಏನಿದೆ? ಪ್ರತಿಭೆಗೆ ಪುರಸ್ಕಾರಕ್ಕೆ ಕೊಟ್ಟಿದ್ದು ತಪ್ಪೇ, ನನಗೆ ನಿಧಾನವಾಗಿ ಟೆಲಿಗ್ರಾಂ ತಲುಪಿದ್ದು ತಪ್ಪೇ, ವಿಷಯ ಹೀಗಿದೆ ಅಂತ ವಿವರ ಸಿಗದೇ ಇದ್ದದ್ದು ತಪ್ಪೇ? ಯಾವ ತಪ್ಪು ನನ್ನ ಸ್ಫೂರ್ತಿನ ದೂರ ಮಾಡ್ತು ಹೇಳು ನೀಲಾ ಹೇಳು. ಭಾವಪರವಶನಾಗಿ ಉತ್ಕಟತೆಯಿಂದ ಹನಿತುಂಬಿ ಹೇಳುತ್ತಿದ್ದರೆ ನೀಲಾ ಹರಿಯುತ್ತಿದ್ದ ಕಂಬನಿಯನ್ನು ಹಾಗೇ ಹರಿಯಲು ಬಿಟ್ಟು,

“ವಿಧಿ ವಿಕಾಸ್, ನಮ್ಮ ಕೆಟ್ಪ ವಿಧಿ. ಆ ವಿಧಿಯ ತಪ್ಟಿನಿಂದ. ಇದರಲ್ಲಿ ನನ್ನ ನಿನ್ನ ತಪ್ಟಿಗಿಂತ ಕೆಟ್ಟ ವಿಧಿಯ ಕೈಚಳಕ. ಇದು ಹೀಗಾಗುತ್ತದೆ, ವಿಧಿ ನಮ್ಮ ಬಾಳಿನ ಖಳನಾಯಕ ಆಗುತ್ತೆ ಅನ್ನೋ ಅರಿವಿಲ್ಲದೆ ಅದೆಷ್ಟು ದೃಢವಾಗಿ ಭವಿಷ್ಯವನ್ನು ಕಲ್ಪಿಸಿಕೊಂಡಿದ್ದೇವಲ್ಲ. ನಾವು ಮೂರ್ಖರಲ್ಲದೆ ಮತ್ತೇನು? ಅಪ್ಪಾ ಹಾಸಿಗೆ ಹಿಡಿದಾಗ ನಾನೆಂಥ ಪರಿಸ್ಥಿತಿಯಲ್ಲಿದ್ದೆ ಗೊತ್ತಾ ವಿಕಾಸ್? ಬದುಕಿನಲ್ಲಿ ಬಂಧುವೆಂದರೆ ಅಪ್ಪ ಒಬ್ಬರೇ. ನೀನೂ ನನ್ನ ಬಾಳಿನಲ್ಲಿ ಪ್ರವೇಶಿಸದೆ ಇದ್ದಿದ್ದರೆ ನಾನು ಈ ಜಗತ್ತಿನಿಂದಲೇ ದೂರ ಆಗ್ತಾ ಇದ್ದೆನೊ ಏನೋ. ಅಪ್ಪಾ ನನ್ನ ಮದ್ವೆಗಾಗಿಯೇ ಜೀವ ಹಿಡಿದುಕೊಂಡಿದ್ದರು. ಒಂದೊಂದು ಸಲ ಆನ್ನಿಸುತ್ತೆ, ನಾನು ಮದ್ವೇನೇ ಆಗಬಾರದಿತ್ತು ಅಂತಾ. ಅಪ್ಪನ ಆಸೆ ತೀರಿಸೋಕೆ ಈ ಮದ್ವೆ ಮಾಡಿಕೊಳ್ಳೋಕೆ ಆತುರ ಪಟ್ಟೆ. ಇತ್ತ ಅಪ್ಪಾನೂ ನನ್ನಿಂದ ದೂರ ಆದ್ರು. ನೀನೂ ದೂರಾದೆ. ನಾನು ಯಾರಿಗಾಗಿ ಬದುಕಬೇಕು ವಿಕಾಸ್. ನಿನ್ನ ಪ್ರೇಮದ ನಿರೀಕ್ಷೆಯೇ ನನ್ನಲ್ಲಿ ಬದುಕುವ ಆಸೆ ಹುಟ್ಚಿಸಿತ್ತು. ಈಗ ಈಗ…” ಮುಂದೆ ಹೇಳಲಾರದೆ ಬಿಕ್ಕಳಿಸಿದಳು.

ಕೊರಳಿನಲ್ಲಿದ್ದ ತಾಳಿ ಯಾವ ತೀರ್ಮಾಕ್ಕೂ ಬಾರದಂತೆ ಅಡ್ಡಿಪಡಿಸುತ್ತಿತ್ತು. ಒಲ್ಲದ ಜಗದೀಶನೊಂದಿಗೆ ಬಾಳುವೆ ಸಾಧ್ಯವೇ. ಇಷ್ಟೊಂದು ಹತ್ತಿರವಿರುವ ವಿಕಾಸ್ ಈಗ ಎಷ್ಟೊಂದು ದೂರ. ಕೈಗೆಟುಕುವಂತೆಯೇ ಕುಳಿತಿದ್ದಾನೆ. ಮನಸ್ಸಿನಲ್ಲಿಯೂ ನೆಲೆಸಿದ್ದಾನೆ. ಆದರೆ ಅದರೆ ಸಪ್ತಪದಿ ತುಳಿದ ನೆನಪು, ಮಂತ್ರಘೋಷಗಳೊಡನೆ ಜಗದೀಶನ ಅರ್ಧಾಂಗಿಯಾದ ನೆನಪು. ಓಹ್ ತಾನೀಗ ಏನು ಮಾಡಲಿ, ಯಾವ ನಿರ್ಧಾರ ತೆಗೆದುಕೊಳ್ಳಲಿ.

ವಿಕಾಸನು ಅದೇ ಪರಿಸ್ಥಿತಿಯಲ್ಲಿದ್ದ. ಮನಸ್ಸಿನೊಳಗಿನದನ್ನು ಹೇಳಲಾರದೆ ಒದ್ದಾಡಿದ. ನಿನ್ನ ಕತ್ತಿನಲ್ಲಿರುವ ತಾಳಿ ತೆಗೆದು ಜಗದೀಶನ ಕೈಗೆ ಕೊಟ್ಟು ನನ್ನ ಜೊತೆ ಬಂದುಬಿಡು. ಮನಸ್ಸು ಮನಸ್ಸುಗಳ ಮಿಲನವಾಗದೆ ಈ ಲಗ್ನ ಲಗ್ನವೆನಿಸದು. ಮನಸ್ಸಿನ ತುಂಬಾ ನನ್ನನ್ನ ತುಂಬಿಕೊಂಡು ಜಗದೀಶನ ತಾಳಿಗೆ ಕೊರಳೊಡ್ಡಿರುವ ನೀನು ಕಾಯಾ ವಾಚಾ ಮನಸಾ ಅವನ ಧರ್ಮಪತ್ನಿ ಎನಿಸಿಕೊಳ್ಳಲಾರೆ. ಯಾವುದೋ ಒತ್ತಡಕ್ಕೆ ಸಿಲುಕಿ ನಡೆದ ಈ ಧಾರ್ಮಿಕ ಕ್ರಿಯೆ ಸತಿಪತಿಗಳನ್ನಾಗಿಸದು. ಇದೊಂದು ವ್ಯರ್ಥ ಕ್ರಿಯೆ. ಆ ಕ್ರಿಯೆಯನ್ನು ಮರೆತು ಬಿಡು ನೀಲಾ. ನಾವು ಎಂದೋ ಸತಿಪತಿಗಳಾಗಿದ್ದೇವೆ. ನಮ್ಮ ಆತ್ಮಗಳ ಮಿಲನವಾಗಿವೆ. ಕನಸುಗಳೆಂಬ ಸಪ್ತಪದಿ ತುಳಿದಿದ್ದೇವೆ. ಒಲವೆಂಬ ಮಾಂಗಲ್ಯ ಧಾರಣೆ ಮಾಡಿದ್ದೇನೆ. ಹೃದಯವೆಂಬ ಅಗ್ನಿ ಮುಂದೆ ಕಾಯಾ ವಾಚಾ ಮನಸಾ ನೀನೇ ನನ್ನ ಸಂಗಾತಿ ಎಂದು ಪ್ರತಿಜ್ಞೆಗೈದಿದ್ದೇನೆ. ಈಗ ನಿನ್ನ ಕೊರಳಲ್ಲಿರುವುದು ಲೋಹದ ಚೂರಷ್ಟೆ. ಕಿತ್ತು ಬಿಸಾಕು. ಬಂದುಬಿಡು ನನ್ನ ಸ್ಫೂರ್ತಿ ದೇವತೆಯೇ, ನಮ್ಮಿಬ್ಬರನ್ನು ಅಗಲಿಸುವ ಶಕ್ತಿ ಆ ವಿಧಿಗೂ ಇಲ್ಲಾ ಎಂದು ತೋರಿಸೋಣ. ಇಲ್ಲಿಂದ ದೂರ ಹೋಗಿ ನವಜೀವನ ಪ್ರಾರಂಭಿಸೋಣ. ನಡೆದದೆಲ್ಲವನ್ನು ಕೆಟ್ಟ ಕನಸೆಂದು ಮರೆತುಬಿಡೋಣ. ಬಾ ನೀಲಾ ಈ ಕ್ಷಣವೇ ಹೊರಟು ಬಿಡೋಣ.”

ಮನಸ್ಸು ನುಡಿಯುತ್ತಿದ್ದ ಈ ಮಾತುಗಳಾವುವೂ ಸ್ವರವನ್ನು ಪಡೆಯಲಿಲ್ಲ. ಆ ಕ್ಷಣಗಳಲ್ಲಿ ನೀಲಾ ವಿಕಾಸನ ಕಣ್ಣಿನಲ್ಲಿ ಕಣ್ಣಿಟ್ಟು ನೋಡಿದ್ದರೆ ಈ ಅಂತರಾಳದ ಮಾತುಗಳೆಲ್ಲವೂ ಅವಳ ಹೃದಯವನ್ನು ತಲುಪಿ ಬಿಡುತ್ತಿದ್ದವು. ಆ ಘಳಿಗೆಯಲ್ಲಿ ತನ್ನದೇ ಧ್ಯಾನದಲ್ಲಿ ನೀಲಾ ಮುಳುಗಿ ಹೋಗಿದ್ದಳು.

ವಿಕಾಸ್, ಈಗ ನಡೆದಿರುವುದು ಮದುವೆಯೇ ಅಲ್ಲಾ. ನಾನು ಜಗದೀಶನ ಹೆಂಡತಿ ಎಂದು ಕಲ್ಪಿಸಿಕೊಳ್ಳಲೂ ನನ್ನಿಂದ ಸಾಧ್ಯವಾಗುತ್ತಾ ಇಲ್ಲಾ. ನೀನೇ ನನ್ನ ಮಾನಸಿಕ ಪತಿ. ನಿನ್ನ ಜೊತೆ ನಾನು ಎಲ್ಲಿಗಾದರೂ ಬರಲು ಸಿದ್ಧ . ನಿನ್ನೊಂದಿಗೆ ಬರಲು ನನಗೆ ಯಾವ ನೈತಿಕತೆಯ ಭಯವೂ ಇಲ್ಲಾ ನೀನು ನನ್ನವನು ವಿಕಾಸ. ನನ್ನವನ ಜೊತೆ ಬರಲು ನನಗೇಕೆ ಭಯ. ಈ ಸಮಾಜ ಈ ರೀತಿ ನೀತಿಗಳಿಗೆಲ್ಲ ದೊಡ್ದ ನಮಸ್ಕಾರ ಹಾಕಿ ಬೆನ್ನು ತಿರುಗಿಸಿಬಿಡುತ್ತೇನೆ. ನೀನೇ ನನ್ನ ಸರ್ವಸ್ವ. ನೀನೇ ನನ್ನ ಬದುಕು, ಚೇತನ. ಎಲ್ಲವೂ ನೀನೇ. ನಮ್ಮ ಮದುವೆ ಎಂದೋ ನಡೆದುಹೋಗಿದೆ. ನಾನು ನಿನ್ನ ಪತ್ನಿ. ಈ ಭಾವನೆಗಳಿಂದ ನಾನು ಹೊರ ಬರಲಾರೆ. ಪ್ಲೀಸ್ ವಿಕಾಸ್. ನನ್ನನ್ನು ನಿನ್ನೊಂದಿಗೆ ಕರೆದೊಯ್ಯಿ. ನಿನ್ನ ಹಿಂದೆ ಮಗು ತಾಯಿಯ ಹಿಂದೆ ಬರುವಂತಷ್ಟೇ ಸಹಜವಾಗಿ ಬಂದುಬಿಡುತ್ತೇನೆ. ನನಗೆ ಆಶ್ವಾಸನೆ ಕೊಡು, ವಿಕಾಸ್ ನನ್ನ ಜೊತೆ ಹೆಜ್ಜೆ ಹಾಕುತ್ತೇನೆ ಎಂದು ಭರವಸೆ ಕೊಡು. ನಿನ್ನ ಮೌನ ನನ್ನ ಕಿತ್ತು ತಿನ್ನುತ್ತಿದೆ. ತಾಳಿ ಕೊರಳಲ್ಲಿದೆ ಎಂದ ಮಾತ್ರಕ್ಕೆ ನಾನು ಬೇರೆಯವಳಾಗಿ ಹೋದನೇ. ಈ ಸ್ಫೂರ್ತಿ ಯಾವತ್ತೂ ನಿನ್ನವಳು. ಮಾತನಾಡು ವಿಕಾಸ್. ನೀ ಹೀಗೆ ಮೌನವಾಗಿದ್ದು ಬಿಟ್ಟರೆ ನನ್ನ ಬದುಕು ಕತ್ತಲೆಯಲ್ಲಿ ಮುಳುಗಿಬಿಡುತ್ತದೆ. ಭರವಸೆಯ ಹೊಸ ಬೆಳಕು ಈ ಬಾಳಿಗೀಗ ಅವಶ್ಯಕವಾಗಿದೆ. ಅಪ್ಪನನ್ನು ಕಳೆದುಕೊಂಡಿರುವ ಈ ಅನಾಥೆಗೆ ನಿನ್ನ ಬದುಕಿನಲ್ಲಿ ಹೃದಯದಲ್ಲಿ ಜಾಗ ಬೇಕಾಗಿದೆ. ಆ ಬಾಹುಗಳಿಂದ ನನ್ನನ್ನು ಅಪ್ಪಿ ಸಂತೈಸು ವಿಕಾಸ್. ನಾನಿದ್ದೇನೆ ಎಂದು ಒಮ್ಮೆ ಹೇಳು ವಿಕಾಸ್” ಮನದಾಳದ ಮಾತುಗಳು ಬಾಯಿಂದ ಈಚೆಗೆ ಬರಲೇ ಇಲ್ಲಾ.

ಯಾವುದೋ ಕಟ್ಟು ಅವರಿಬ್ಬರನ್ನು ಕಟ್ಟಿ ಹಾಕಿತ್ತು. ಹೇಳಬೇಕಾದುದ್ದೇನೂ ಹೇಳಲಾಗಲೇ ಇಲ್ಲ ಇಬ್ಬರಿಗೂ. ಯಾರಾದರೂ ಒಬ್ಬರು ಬಾಯಿ ಬಿಟ್ಪದ್ದರೂ ಆಗಿತ್ತು. ಮನಸ್ಸಿನ ಅನಿಸಿಕೆ ಭಾವನೆಗಳೆಲ್ಲ ಮನದಲ್ಲಿಯೇ ಮುಚ್ಚಿಟ್ಟುಕೊಂಡು ಬಿಟ್ಟರು. ಬಾಯಿ ಬಿಟ್ಟರೆ ಎಲ್ಲಿ ಅನುಚಿತವಾಗುವುದೋ ಎಂಬ ಸಂಕೋಚ ಕಾಡಿ ಹೊಸ ಅಧ್ಯಾಯವೊಂದು ಪ್ರಾರಂಭವಾಗುವ ಮುನ್ನವೇ ಮುಕ್ತಾಯ ಕಂಡಿತ್ತು. ಮರೆಯದ ಚರಿತ್ರೆಯಲ್ಲಿ ಸೇರಿಹೋದ ಎಷ್ಟೋ ವಿಫಲ ಪ್ರೇಮಿಗಳಂತೆ ಅವರೂ ಸೇರಿಹೋಗಿ ಇತಿಹಾಸವಾದರು. ಪರಸ್ಪರ ಹೃದಯಗಳಲ್ಲಿ ನೆಲೆಸಿ ಇಬ್ಬಗೆಯ ಬದುಕು ನಡೆಸಲು ಸನ್ನದ್ಧರಾದರು. ನೆನಪುಗಳ ಉಸಿರಿನಲ್ಲಿ ಬದುಕುತ್ತ ವರ್ತಮಾನಕ್ಕೂ ನ್ಯಾಯ ಸಲ್ಲಿಸದೆ ಹೇಗೊ ಬದುಕಿಹೋದರು.

ಬೆಳಿಗ್ಗೆ ವಿಕಾಸ್ ದುಗುಡದಿಂದಲೇ ನೀಲಾಳಿಗೆ ವಿದಾಯ ಹೇಳಿದ. ಹೃದಯವನ್ನು ಕಿತ್ತಿಟ್ಟ ನೋವು ಅವಳನ್ನು ಹಿಂಡಿ ಹಿಪ್ಪೆ ಮಾಡುತ್ತಿದ್ದರೂ ವಿಕಾಸ್‌ನನ್ನು ಬೀಳ್ಕೊಟ್ಟಳು. ಅಂದೇ ಕೊನೆ. ಮತ್ತವನನ್ನು ಇಂದಿಗೂ ಕಂಡಿಲ್ಲ. ಎಲ್ಲಿದ್ದಾನೋ ಹ್ಯಾಗಿದ್ದಾನೋ, ಮದುವೆಯಾದನೋ ಇಲ್ಲವೋ ಒಂದೂ ತಿಳಿಯಲಿಲ್ಲ.

ಇತ್ತ ಜಗದೀಶನೊಂದಿಗೂ ಬಾಳಲಾರದ ಮನಸ್ಥಿತಿಯ ನೀಲಾ ದಿನಗಳನ್ನು ನೂಕಲು ಕಂಗೆಡುತ್ತಿದ್ದಳು. ಒಂದೆರಡು ತಿಂಗಳು ಏನೂ ನಡೆಯದೆ ದಿನಗಳು ಉರುಳಿದವು. ಜಗದೀಶನೂ ನೀಲಳಿಂದ ದೂರವೇ ಇರುತ್ತಿದ್ದ. ಅವಳಾಗಿಯೇ ತನ್ನನ್ನು ಒಲಿಯುವಳೆಂಬ ಕನಸು ಕನಸಾಗಿಯೇ ಉಳಿದುಬಿಟ್ಪತೇನೋ ಎಂದು ಹೆದರುತ್ತಿದ್ದ. ಹತ್ತಿರ ಹೋಗುವ ಧೈರ್ಯವೂ ಸಾಲದಾಗಿತ್ತು. ಮೊದಲ ರಾತ್ರಿಯಂದೇ ಕಟುವಾಗಿ ನುಡಿದು ತನ್ನನ್ನು ಮುಟ್ಪಬಾರದೆಂದು ತಾಕೀತು ಮಾಡಿದ್ದಳು. ಆದರೆ ಆದಷ್ಟು ದಿನ ಹೀಗೆ ಮದುವೆಯಾಗಿದ್ದರೂ, ಅಪ್ಸರೆಯಂಥ ಹೆಂಡತಿ ಇದ್ದರೂ ಸಂಯಮ. ಜಗದೀಶನಂತಹ ಸಾಮಾನ್ಯ ಗಂಡಸಿನಿಂದ ಸಾಧ್ಯವೇ. ನಡೆಯಬೇಕಾದುದು ಒಂದು ದಿನ ನಡೆದೇಹೋಯಿತು.

ಗಂಡನ ಆಕ್ರಮಣಕ್ಕೆ ತುತ್ತಾದ ನೀಲಾ ವಿಧಿಯಿಲ್ಲದೆ ಪರಿಸ್ಥಿತಿಗೆ ಶರಣಾದಳು. ಎಂದಾದರೂ ಒಂದು ದಿನ ಹೀಗಾಗುತ್ತದೆ ಎಂಬ ನಿರೀಕ್ಷೆ ಅವಳಲ್ಲಿ ಇತ್ತು. ಇಲ್ಲಿ ಮನಸ್ಸಿನ ಒಪ್ಟಿಗೆ ಯಾರಿಗೆ ಬೇಕಾಗಿದೆ. ಸಮಾಜ ಗಂಡ ಹೆಂಡತಿ ಎಂದು ಗುರ್ತಿಸುವಾಗ ತಾನೊಲ್ಲೆ ಎಂದರೆ ಏನೂ ನಡೆಯದು. ಹೆಂಡತಿಯಾಗಿ ಆ ಗಂಡನ ಕಾಮನೆಗಳನ್ನು ಪೂರೈಸುವುದು ತನ್ನ ಧರ್ಮ ಕೂಡ. ಎಷ್ಟು ದಿನ ಹೋರಾಡಲು ಸಾಧ್ಯ. ಜಗದೀಶ ಸಾಮಾನ್ಯ ಗಂಡಸು ತಾನೇ. ತಾನು ವಿರೋಧಿಸಿದರೂ ಬಿಡುತ್ತಾರೆಯೇ. ಇಷ್ಟೆಲ್ಲಾ ಆಲೋಚಿಸಿಯೇ ಜಗದೀಶನ ಯಾವ ಕ್ರಿಯೆಗೂ ಅಡ್ಡಿ ಮಾಡಲಿಲ್ಲ. ಅಲ್ಲಿ ಸಂತೋಷವೂ ಇಲ್ಲ. ದುಃಖವೂ ಇಲ್ಲ. ಸರಸವೂ ಇಲ್ಲ. ವಿರಸವೂ ಇಲ್ಲ. ನಿರ್ಲಿಪ್ತತೆ. ಈ ನೀರ್ಲಿಪ್ತತೆಯೇ ಜಗದೀಶನನ್ನು ಕೆರಳಿಸುತ್ತಿತ್ತು.

ಅದೆಷ್ಟೇ ಮರೆಯಬೇಕೆಂದರೂ ವಿಕಾಸನಲ್ಲಿ ನೀಲಾ ತೋರಿಸುತ್ತಿದ್ದ ಪ್ರೀತಿ, ಉತ್ಸಾಹ ಅವನಿಂದ ಮರೆಯಲಾಗುತ್ತಿಲ್ಲ. ಅವಳ ಮನಸ್ಸಿನಲ್ಲಿ ಇಂದಿಗೂ ಅವನೇ ಇದ್ದಾನೆಂಬ ಕಲ್ಪನೆಯಲ್ಲಿಯೇ ಜಗದೀಶ ಕುದ್ದು ಹೋಗುತ್ತಿದ್ದ. ಪ್ರೀತಿಸಿದ್ದೇನೋ ಸರಿ, ಆದರೆ ಮದುವೆಯಾಗಿ ಗಂಡನೆಂಬುವವನು ಎದುರಿಗಿದ್ದರೂ, ಗಂಡನ ಜೊತೆಯಲಿ ಬಾಳುತ್ತಿದ್ದರೂ, ಇನ್ನು ಅವನ ನೆನಪಿನಲ್ಲಿಯೇ ಸಾಯಬೇಕೇ. ತನ್ನೊಂದಿಗೆ ಸಹಜವಾಗಿ ಎಲ್ಲಾ ಹೆಂಡತಿಯರು ಗಂಡಂದಿರ ಜೊತೆ ಇರುವಂತೆ ಇರಬಾರದೆ. ಸದಾ ಆಕಾಶ ತಲೆ ಮೇಲೆ ಬಿದ್ದಂತೆ ಆಗಬಾರದ್ದೇನೋ ಆಗಿ ಹೋದಂತೆ, ಬಲವಂತವಾಗಿ ಬದುಕುತ್ತಿರುವ ಹಾಗೆ ಇರುತ್ತಿದ್ದರೆ ಜಗದೀಶನಂತಹ ಸಾಮಾನ್ಯ ಗಂಡ ಸಹಿಸಿಯಾನೇ. ಹಾಗೆಂದೇ ಸದಾ ಈಗ ನೀಲಾಳನ್ನು ಕೆಣಕುತ್ತಿದ್ದು, ಅವನ ನಿರಾಶೆ, ಹತಾಶೆಗಳೆಲ್ಲವನ್ನೂ ನೀಲಾಳನ್ನು ಕಟುಮಾತುಗಳಿಂದ ಇರಿದು ನೋಯಿಸುತ್ತಾ ತೃಪ್ತಿ ಪಡುತ್ತಿದ್ದ. ತನ್ನ ಪಾಡಿಗೆ ತನ್ನನ್ನು ಬಿಡಬಾರದೆ ಎಂದು ಅದೆಷ್ಟೋ ಸಲ ಅಂದುಕೊಳ್ಳುತ್ತಿದ್ದಳು. ಆದರೆ ಜಗದೀಶ ಬಿಡಲು ಸಿದ್ಧನಿರಲಿಲ್ಲ.

ಮನಸ್ಸು ಸೇರಲಿ ಬಿಡಲಿ, ಪ್ರೀತಿ ಇರಲಿ ಬಿಡಲಿ ದೈಹಿಕ ಕಾಮನೆಗಳಿಗೇನು ಅಡ್ಡಿ ಇಲ್ಲವಲ್ಲ. ತನ್ನ ಹಕ್ಕು ಎಂಬಂತೆ ಜಗದೀಶ ಅವಳನ್ನು ಸೇರುತ್ತಿದ್ದ. ಪರಿಣಾಮ ನೀಲಾ ಗರ್ಭಿಣಿಯಾದಳು. ಮೊದ ಮೊದಲು ತನ್ನ ಮನಸ್ಥಿತಿ ಹೀಗಿರುವಾಗ ಇದೊಂದು ಬೇರೆ ಬೇಕಿತ್ತೇ. ಯಾವ ಪುರುಷಾರ್ಥ ಸಾಧಿಸಲು ಅದು ಭೂಮಿಗೆ ಬರಬೇಕಾಗಿದೆ ಎಂದು ಹಳಿದುಕೊಳ್ಳುತ್ತಿದ್ದಳು. ಆದರೆ ಮಾತೃತ್ವದ ಅನುಭವ ಅದೆಂತಹ ದಿವ್ಯ ಅನುಭವ. ತನ್ನ ಕರುಳಬಳ್ಳಿ, ತನ್ನ ರಕ್ತಮಾಂಸ ಹಂಚಿಕೊಂಡು ಹುಟ್ಟುವ ಆ ಸುಮಧುರ ಬಾಂಧವ್ಯ ಅವಳೂ ಹೆಣ್ಣೇ ತಾನೆ. ತಾಯ್ತನ ಎಂತಹವರನ್ನು ಬದಲಿಸಿಬಿಡುತ್ತದೆ.

ದಿನದಿನಕ್ಕೂ ದೊಡ್ದದಾಗುತ್ತಿದ್ದ ತನ್ನ ಉದರವನ್ನು ನೋಡಿಕೊಳ್ಳುತ್ತ ಮುಂಬರುವ ಕಂದನ ನೆನಪಿನಿಂದಲೇ ಸುಖಿಸುತ್ತಿದ್ದಳು. ಬೆಂಗಾಡಿನಂತಿರೊ ತನ್ನ ಬಾಳಿನ ಓಯಸಿಸ್ ಈ ಕಂದ. ತನ್ನ ಅಪ್ಪನೇ ಮಗುವಾಗಿ ತನ್ನ ಮಡಿಲನ್ನು ತುಂಬಲಿದ್ದಾರೆ ಅನ್ನೋ ಹರ್ಷ ಅವಳಲ್ಲಿ. ಜಗದೀಶನಿಗೂ ಖುಷಿಯಾಯ್ತು. ಹೀಗಾದರೂ ತನ್ನ ಒಲವನ್ನು ತನಗೆ ನೀಡಿಯಾಳೆ ಎಂದು ಬಯಸುತ್ತಿದ್ದ. ಅಪ್ಪನಾಗುತ್ತಿರುವುದು ಅವನಿಗೂ ಹೆಮ್ಮೆಯೇ. ಮಗು ಹುಟ್ಟಿ ತಮ್ಮಿಬ್ಬರ ನಡುವಿನ ಸೇತುವಾಗಬಹುದೆಂಬ ನಿರೀಕ್ಷೆಯಲ್ಲಿಯೇ ದಿನಗಳನ್ನು ಎಣಿಸುತ್ತಿದ್ದ.

ಅನುವಿಗೆ ಭೂಮಿಗೆ ಬರುವ ಆತುರ ಹೆಚ್ಚಾಗಿತ್ತೇನೋ ಏಳು ತಿಂಗಳಿಗೆ ಅಮ್ಮನ ಒಡಲಿನಿಂದ ಮಡಿಲಿಗಿಳಿದುಬಿಟ್ಟಳು. ಏಳು ತಿಂಗಳಿಗೆ ಹುಟ್ಟಿದರೂ ಆರೋಗ್ಯವಾಗಿದ್ದ ಮಗುವನ್ನು ನೋಡಿ ಜಗದೀಶನಿಗೆ ಏನೋ ಸಂಶಯ. ಈ ಕೂಸು ತನ್ನಂಶವಲ್ಲವೇ? ವಿಕಾಸ್ ಬಂದು ಹೋಗಿ ಸರಿಯಾಗಿ ಒಂಭತ್ತು ತಿಂಗಳು. ಅಂದು ರಾತ್ರಿ ಇಬ್ಬರೂ ಒಂದೇ ರೂಮಿನಲ್ಲಿದ್ದರು. ಆಗ ಏನಾದರೂ… ಸಂಶಯದ ಹುಳು ಅವನೆದೆಯನ್ನು ಬಲವಾಗಿ ಕೊರೆದವು. ಆಗಷ್ಟೇ ಹುಟ್ಟಿದ ಕೂಸು ವಿಕಾಸನ ರೂಪವನ್ನು ಹೋಲುತ್ತಿದೆ ಎನಿಸುತ್ತಿತ್ತು. ಈ ಭಾವನೆ ಗಟ್ಟಿಯಾಗತೊಡಗಿದ ಮೇಲೆ ಮಗುವಿನ ಮೇಲಿನ ಅಸೆಯನ್ನೇ ಬಿಟ್ಟ. ಅದನ್ನು ಕಂಡಾಗಲೆಲ್ಲಾ ನೀಲಾರ ಪ್ರೇಮ ಪ್ರಣಯ ಕಣ್ಣ ಮುಂದೆ ಕಾಡತೊಡಗುತ್ತಿತ್ತು. ಅದು ಅವನ ತಿರಸ್ಕಾರಕ್ಕೆ ಬಲಿಯಾದಳು. ಮಗಳೆಂದು ಎಂದೂ ಒಪ್ಟಿಕೊಳ್ಳಲು ಅವನಿಂದ ಸಾಧ್ಯವಾಗಲೇ ಇಲ್ಲ.

ಅಪ್ಪಾ ಎಂದು ಆಸೆಯಿಂದ ಕೈ ಚಾಚಿದರೆ ಕೈಗಳನ್ನು ಕತ್ತರಿಸುವಷ್ಟು ಕೋಪ ಬರುತ್ತಿತ್ತು. ಅವಳು ತನ್ನನ್ನು ಅಪ್ಪಾ ಎಂದು ಕರೆಯುತ್ತಿದ್ದರೆ ಮೈಮೇಲೆ ಮುಳ್ಳುಗಳೇಳುತ್ತಿದ್ದವು. ಜಗದೀಶ ಈಗ ನಿಜವಾಗಲೂ ರಕ್ಕಸನೇ ಆಗಿಬಿಟ್ಟ. ತಾನೇ ಕೈಯ್ಯಾರೆ ತನ್ನ ಸುಂದರ ಸಂಸಾರವನ್ನು ನರಕ ಮಾಡಿಕೊಂಡ. ಅನುವನ್ನು ಕಂಡಾಗಲೆಲ್ಲಾ ರೋಷತಪ್ತನಾಗುತ್ತಿದ್ದ.

ಅಪ್ಪನಿಗಾಗಿ, ಅಪ್ಪನ ಪ್ರೀತಿಗಾಗಿ ಬಯಸುತ್ತಿದ್ದ “ಅನು ಕೊನೆ ಕೊನೆಗೆ ಆತನ ತಿರಸ್ಕಾರ, ಕೋಪ, ಅಲಕ್ಷ್ಯಗಳನ್ನು ಅರ್ಥ ಮಾಡಿಕೊಂಡುಬಿಟ್ಟಳು. ಆ ಪುಟ್ಟ ಹೃದಯಕ್ಕೆ ತನಗೆ ತಂದೆಯ ಪ್ರೀತಿ ದಕ್ಕುವುದಿಲ್ಲ ಎಂದು ತಿಳಿದು ಬಿಟ್ಟಿತ್ತು. ತಾನಾಗಿಯೇ ದೂರ ಸರಿಯಲಾರಂಭಿಸಿದಳು. ಬುದ್ಧಿ ತಿಳಿದಾಗಿನಿಂದ ಒಂದೇ ಒಂದು ಸಲ ಕೂಡ ಅಪ್ಪಾ ಅಂತಾ ಕರೆದಿಲ್ಲ. ಮನೆಯಲ್ಲಿದ್ದರೂ, ತಂದೆಯ ಇರುವೇ ಇಲ್ಲದಂತಿರುತ್ತಾಳೆ. ಯಾವ ಕಾರಣಕ್ಕೂ ಅಪ್ಪನ ಸಾಮೀಪ್ಯ ಬಯಸದಾದಳು. ಜಗದೀಶ ಮನೆಯಲ್ಲಿದ್ದರೆ ತನ್ನ ರೂಮು ಬಿಟ್ಚೇ ಬರುವುದಿಲ್ಲ. ಏನು ಬೇಕಾದರೂ ಅಮ್ಮನಿಂದಲೇ ಪಡೆಯುತ್ತಾಳೆ.

ಆನು ಕಾಲೇಜಿಗೆ ಸೇರಿಕೊಂಡಾಗ “ಅಪ್ಪಾ ಯಾಕಮ್ಮ ಹೀಗೆ” ಪ್ರಶ್ನಿಸಿದ್ದಳು. ಮಗಳಿಗೆ ಎಲ್ಲವನ್ನು ಹೇಳಬೇಕು ಎಂದುಕೊಂಡಿದ್ದ ನೀಲಾ ತನ್ನ ಬಾಳಿನಲ್ಲಿ ನಡೆದುದೆಲ್ಲನ್ನು ಹೇಳಿಕೊಂಡು ಕಣ್ಣೀರಿಟ್ಟಳು. ಸ್ನೇಹಿತೆಯಂತೆ ಎಲ್ಲವನ್ನೂ ತನ್ಮಯಳಾಗಿ ಕೇಳಿಸಿಕೊಂಡ ಅನು,

“ಅಮ್ಮ, ವಿಕಾಸ್ ಆಗ ಬಂದಿದ್ರಲ್ಲ ಆಗಲೇ ನೀನು ಅವರ ಜೊತೆ ಹೋಗಿ ಬಿಡಬೇಕಾಗಿತ್ತು. ಆವತ್ತು ನೀನು ಆ ಧೈರ್ಯ ಮಾಡಿದ್ರೆ, ನಾನಿಲ್ಲಿ ಅಪ್ಪನ ಬೇಡದ ಕೂಸಾಗಿ ಬೆಳೆಯೋದು ತಪ್ಪುತ್ತಿತ್ತು. ನೀನು ಸದಾ ಅಪ್ಪನಿಂದ ನೋವು ಪಡೋದು ತಪ್ಪುತ್ತಿತ್ತು.”

“ನನ್ನ ಮನಸ್ಸಿನಲ್ಲಿ ಆ ಆಸೆ ಇತ್ತು ಅನು. ಆದರೆ ನನ್ನ ಕತ್ತಿನಲ್ಲಿದ್ದ ತಾಳಿ ನೋಡಿ, ವಿಕಾಸ್ ನನ್ನ ಸ್ವೀಕರಿಸೋ ಧೈರ್ಯ ಮಾಡಲಿಲ್ಲ. ಸಂದಿಗ್ಧತೆ ಇಬ್ಬರನ್ನು ಕಾಡುತ್ತಿತ್ತು. ಹೀಗೆ ಮಾಡಿ ಅನ್ನೋ ಮಾರ್ಗದರ್ಶನ ನೀಡೋ ಸ್ನೇಹಿತರಾಗಲೀ, ಬಂಧುಗಳಾಗಲೀ ನಮಗಿರಲಿಲ್ಲ. ಯಾವುದು ತಪ್ಪು ಯಾವುದು ಸರಿ ಅನ್ನೋ ವಯಸ್ಸು ಕೂಡ ನಮ್ಮದಾಗಿರಲಿಲ್ಲ. ಪರಿಸ್ಥಿತಿಯ ಗಂಭೀರತೆ ಬೇರೆ. ಇವೆಲ್ಲ ಸೇರಿ ನನ್ನ ಬದುಕನ್ನ ಈ ರೀತಿ ಮಾಡಿಬಿಟ್ಪತು. ಯೋಚಿಸೋಕೂ ಸಮಯಾವಕಾಶ ಇರಲಿಲ್ಲ. ವಿಕಾಸ್ ಒಂದೇ ದಿನಕ್ಕೆ ವಾಪಸ್ಸು ಹೊರಟುಬಿಟ್ಪರು.”

“ಈಗೆಲ್ಲಿದ್ದಾರೆ ಅಮ್ಮ.”

“ಗೊತ್ತಿಲ್ಲ. ಅಪ್ಪ ಸತ್ತ ಮೇಲೆ ಅಲ್ಲಿರೋ ಆಸ್ತಿನೆಲ್ಲ ಮಾರಿ ನಿಮ್ಮಪ್ಪ ಈ ಊರಿಗೆ ಬಂದು ಹೊಸದಾಗಿ ಬಿಸಿನೆಸ್ ಪ್ರಾರಂಭಿಸಿದರು. ನಮ್ಮ ಈ ವಿಳಾಸ ವಿಕಾಸ್ ಗೆ ಗೊತ್ತಾಗೋ ಹಾಗಿರಲಿಲ್ಲ. ಜಗದೀಶನ ಉದ್ದೇಶ ಕೂಡ ಇದೇ ಆಗಿತ್ತು. ಯಾವ ಕಾರಣಕ್ಕೂ ವಿಕಾಸ್ ಈ ಮನೆಗೆ ಬರಬಾರದೂ ಅನ್ನೋ ಯೋಚನೆ ಅವರಿಗಿತ್ತು. ವಿಕಾಸ್ ಕೂಡ ನಮ್ಮ ಸಂಸಾರದ ಮಧ್ಯೆ ಪ್ರವೇಶಿಸೋಕೆ ಇಷ್ಟ ಪಡಲಿಲ್ಲ. ಒಂದು ವೇಳೆ ಎಂದಾದರೊಮ್ಮೆ ನೋಡಬೇಕು ಅಂತ ಅನ್ನಿಸಿದರೂ ನಮ್ಮ ವಿಳಾಸ ಅವರಿಗೆ ಸಿಕ್ಕಿರಲಿಲ್ಲ. ಪ್ರಾಯಶಃ ಅವರು ತಮ್ಮೊಳಗಿನ ಕಲಾವಿದನನ್ನು ಕೊಂದುಬಿಟ್ಚಿದ್ದಾರೆ ಅನ್ನಿಸುತ್ತೆ. ಇಲ್ಲದೇ ಇದ್ದರೆ ಅವರ ಪ್ರತಿಭೆ ಅವರ ಇರುವಿಕೆಯನ್ನು ತಿಳಿಸ್ತಾ ಇತ್ತು. ಎಲ್ಲಿದ್ದಾರೋ, ಹ್ಯಾಗಿದ್ದಾರೋ, ಒಟ್ಟಿನಲ್ಲಿ ಚೆನ್ನಾಗಿರಲಿ” ಭಾರವಾಗಿ ನುಡಿದಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನೋ ನರಸಿಂಹಣ್ಣ
Next post ಸೂರ್ಯ

ಸಣ್ಣ ಕತೆ

  • ಮಿಂಚಿನ ದೀಪ

    ಸಂಜೆ ಮೊಗ್ಗೂಡೆದಿತ್ತು. ಆಕಾಶದ ತುಂಬೆಲ್ಲಾ ಬಣ್ಣದ ಬಾಟಲಿ ಉರುಳಿಸಿದ ಹಾಗೆ ಕೆಂಪು, ನೀಲಿ ಬಣ್ಣ ಚೆಲ್ಲಿ, ಚಳಿಗಾಲದ ಸಂಜೆಯ ಮಬ್ಬಿನ ತೆಳುಪರದೆಯ ‘ಓಡಿನಿ’ ಎಲ್ಲವನ್ನೂ ಸುತ್ತುವಂತೆ ಪಸರಿಸಿಕೊಂಡಿತ್ತು.… Read more…

  • ಸಾವಿಗೊಂದು ಸ್ಮಾರಕ

    ಶಾಲೆಯ ಮಾಸ್ತರ್ ಆಗಿ ಗಜರಾಜ ಸಿಂಗ್ ಅವರು ಪ್ರೈಮರಿ ಶಾಲೆಯ ಮಕ್ಕಳಿಗೆ ಹೇಳಿಕೊಡುತ್ತಿದ್ದ ಮೊದಲ ಪಾಠವೆಂದರೆ "ತಂದೆ ತಾಯಿಯನ್ನು ಗೌರವಿಸಿ, ಅವರೇ ನಿಮ್ಮ ಪಾಲಿನ ದೈವ" ಎಂದು.… Read more…

  • ಒಂದು ಹಿಡಿ ಪ್ರೀತಿ

    ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…

  • ಇರುವುದೆಲ್ಲವ ಬಿಟ್ಟು

    ಕುಮಾರನಿಗೆ ಪಕ್ಕದ ಮನೆಯ ರೆಡಿಯೋದಲ್ಲಿ ಬಸಪ್ಪ ಮಾದರ ಧ್ವನಿ ಕೇಳಿ ಎಚ್ಚರವಾಯ್ತು. ದೇಹಲಿ ಕೇಂದ್ರದಿಂದ ವಾರ್ತೆಗಳು ಬರುತ್ತಿದ್ದವು. ಹಾಸಿಗೆಯಿಂದ ಎದ್ದವನೆ ಕದ ತೆಗೆದ. ಬೆಳಗಿನ ಸೊಗಸು ಕೊರೆವ… Read more…

  • ಮನೆಮನೆಯ ಸಮಾಚಾರ

    ಪ್ರಮೋದನಗರದ ಸಮೀಪದಲ್ಲಿ ಹೂವಿನಹಳ್ಳಿಯೆಂಬದೊಂದು ಗ್ರಾಮವಿರುವದು. ಅಲ್ಲಿ ಪ್ರೌಢರಾಯನೆಂಬ ದೊಡ್ಡ ವೃತ್ತಿವಂತನಾದ ಗೃಹಸ್ಥನಿದ್ದನು. ಪ್ರೌಢರಾಯರಿಗೆ ಇಬ್ಬರು ಗಂಡುಮಕ್ಕಳೂ, ಒಬ್ಬ ಹೆಣ್ಣು ಮಗಳೂ ಇದ್ದರು. ರಾಯರ ಹಿರಿಯ ಮಗನಾದ ರಾಮಚಂದ್ರರಾಯನು… Read more…

cheap jordans|wholesale air max|wholesale jordans|wholesale jewelry|wholesale jerseys