ಏನೋ ನರಸಿಂಹಣ್ಣ
ಏನೋ ಮರಿ ಭೀಮಣ್ಣ
ಯಾಕೆ ಹೀಗೆ ಅಳುತೀಯೋ
ಹೇಳೋ ನಮ್ಮನೆ ಕಾಮಣ್ಣ

ಅರಳೀ ಚಿಗುರಿನ ಎಳೆಮುಖವು
ಕೆರಳಿ ಕೆಂಪಾಗಿದೆಯಲ್ಲೋ
ಕುಲು ಕುಲು ಗುಲು ಗುಲು ನಗೆದನಿಯು
ಬಿರುಮಳೆ ಸಿಡಿಲಾಗಿದೆಯಲ್ಲೋ!

ಬಿಳಿಮೊಲದಂಥ ಎಳೆಕಂದ
ಹುಲಿಮರಿಯಂತೆ ಆಡ್ತೀಯ,
ಹಟ ಹಿಡಿದರೆ ನೀ ಮುಗಿದ್ಹೋಯ್ತು
ಉಸಿರೇ ಕಟ್ಟಿಸಿಬಿಡ್ತೀಯ!

ತೂಗೀ ತೂಗೀ ಸಾಕಾಯ್ತು
ಎರಡೂ ತೋಳು ಬಿದ್ಹೋಯ್ತು
ಮನೆಗೆಲಸಕ್ಕೆ ಇಡೀ ದಿನ
ರಜಾಚೀಟಿಯ ಬರೆದಾಯ್ತು

ಪ್ರಸನ್ನನಾಗೋ ಹುಲಿಯಣ್ಣ
ಗುಡುಗು ಸಿಡಿಲು ನಿಲಿಸಣ್ಣ,
ಹೂ ಬಿಸಿಲಂಥ ನಗೆಯೊಂದ
ಮುಖದಲಿ ಹರಡೋ ಸೂರ್ಯಣ್ಣ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)