ಭ್ರಮಣ – ೧೭

ಭ್ರಮಣ – ೧೭

ತೇಜಾನಿಗೆ ಸಿದ್ಧಾನಾಯಕ್ ಕೊಲೆಯಾದ ವಿಷಯ ಮಾತ್ರ ಗೊತ್ತಾಗಿತ್ತು. ಅದು ಕಲ್ಯಾಣಿಯ ಕೆಲಸವೇ ಎಂದು ಯಾರೂ ಬಿಡಿಸಿ ಹೇಳಬೇಕಾಗಿರಲಿಲ್ಲ. ಮೊದಲೇ ಆದೇಶ ಕೊಟ್ಟು ಬಂದಿರಬಹುದೇ ಎಂದವನು ಯೋಚಿಸುತ್ತಾ ಆ ವಿಷಯವನ್ನವಳಿಗೆ ಹೇಳಿದ್ದ “ಗೊತ್ತು” ಎಂದಿದ್ದಳು ಕಲ್ಯಾಣಿ. ಅವಳ ದನಿ ನಿರ್ವಿಕಾರವಾಗಿತ್ತು.

“ನೀನಿಲ್ಲೇ ಮಲಗಿದ್ದಿ ನಿನಗೆ ಹೇಗೆ ಗೊತ್ತು!” ಅಚ್ಚರಿಯ ದನಿಯಲ್ಲಿ ಕೇಳಿದ್ದ ತೇಜಾ

“ನಾನೆಲ್ಲೇ ಇರಲಿ ನನಗೆಲ್ಲಾ ಗೊತ್ತಾಗುತ್ತದೆ ಮತ್ತೆ ಅಂತಹದೇ ದನಿಯಲ್ಲಿ ಮಾತಾಡಿದ್ದಳು. ತಮ್ಮ ಆಳು ಭೀಮಾನೇ ಹೇಳಿರಬೇಕು. ಅವನೂ ಇವರ ಸಹಾನುಭೂತಿ ಪರನೇ ಎಂದವನು ಯೋಚಿಸುತ್ತಿದ್ದಾಗ ಹೇಳಿದ್ದಳು ಕಲ್ಯಾಣಿ.

“ನಿನ್ನೊಡನೆ ಆ ಇನ್ಸ್‌ಪೆಕ್ಟರ್‌ ಅವಮಾನಕರವಾಗಿ ಮಾತಾಡಿದ ನಲ್ಲವೇ?”

ಅವಳ ಈ ಪ್ರಶ್ನೆಗೆ ಅವನನ್ನು ಆಶ್ಚರ್ಯದ ಪರಮಾವಧಿಗೆ ಮುಟ್ಟಿಸಿತು. ಅವನಿಗೆ ಏನು ಹೇಳಬೇಕೋ ತೋಚಲಿಲ್ಲ. ಕೆಲಕ್ಷಣಗಳು ಬಿಟ್ಟು ಮತ್ತೆ ಕಲ್ಯಾಣಿಯೇ ಮಾತಾಡಿದಳು.

“ಒಳ್ಳೆಯ ಕೆಲಸಗಳನ್ನು ಮಾಡು, ಜನರ ಪ್ರೀತಿ ವಿಶ್ವಾಸ ಸಂಪಾದಿಸು ನಿನಗೂ ಎಲ್ಲಾ ಗೊತ್ತಾಗುತ್ತದೆ. ಸುಮ್ಮನೆ ತಲೆ ಕೆಡಿಸಿಕೊಳ್ಳಬೇಡ, ನಡಿ ಊಟಮಾಡುವ” ಎನ್ನುತ್ತಾ ಮಂಚದಿಂದ ಎದ್ದಳು ಕಲ್ಯಾಣಿ. ಅವಳ ಮುಖದಲ್ಲಿ ನೋವನ್ನು ಗುರುತಿಸಿದ ತೇಜಾ ಎಲ್ಲವನ್ನೂ ಮರೆತು ಕೇಳಿದ.

“ಅಂದರೆ ನಾ ಒಳ್ಳೆಯವನಲ್ಲವೇ?”

“ಬಹಳ ಒಳ್ಳೆಯವನು ಇಲ್ಲದಿದ್ದರೆ ನೀ ನನ್ನ ಪತಿಯಾಗುತ್ತಿರಲಿಲ್ಲ… ನಡಿ” ಎಂದವಳು ಎದ್ದಾಗ ಊಟಕ್ಕೆ ಕರೆದೊಯ್ಯಲು ಬಂದಿದ್ದಳು ಅಮ್ಮಾ.

ಮನೆಯಲ್ಲಿನ ನಾಲ್ವರೂ ಕಲೆತು ಊಟ ಮಾಡಿಯಾಗಿತ್ತು. ಅಮ್ಮ ಅವಳೊಡನೆ ಮಾತಾಡುತ್ತಾ ಕುಳಿತಿದ್ದರು, ತಂದೆ ಮಗ ಮುಂದಿನ ಕೋಣೆಯಲ್ಲಿ ಕುಳಿತು ಯಾವುದೋ ವಿಷಯದ ಬಗ್ಗೆ ಚರ್ಚೆ ಚರ್ಚೆಯಲ್ಲಿ ತೊಡಗಿದ್ದರು. ಹೊರಗೆ ಬಹಳ ಗದ್ದಲ ಕೇಳಿಬರಲಾರಂಭಿಸಿದಾಗ ಬಾಗಿಲು ತೆಗೆದ ತೇಜಾ, ಅವನಿಗೆ ತನ್ನ ಕಣ್ಣನ್ನು ತಾನೇ ನಂಬಲಾಗಲಿಲ್ಲ. ತಮ್ಮ ಮನೆಯಿಂದ ಸ್ವಲ್ಪ ದೂರದಲ್ಲಿ ತಂಡೋಪ ಹಿಂಡು ಜನ ನರೆದಿದ್ದರು. ಹೊರ ಬಂದ ತೇಜಾ ತನ್ನ ಮನೆಯ ಒಂದು ಸುತ್ತು ಹಾಕಿದ. ನಾಲ್ಕೂ ಕಡೆಯಿಂದ ಮನೆಯನ್ನು ಸುತ್ತುವರೆದಿತ್ತು. ಜನಸಮೂಹ. ಒಮ್ಮೆಲೆ ಅವನಿಗೆ ಎಲ್ಲವೂ ಅರ್ಥವಾದಂತಾಯಿತು. ಮನೆಯೊಳ ಬಂದು ಅಮ್ಮ ಕುಳಿತಿರುವುದನ್ನು ಲೆಕ್ಕಿಸದೇ ಕೇಳಿದ

“ಹೊರಗೇನು ನಡೆಯುತ್ತಿದೆ ನಿನಗೆ ಗೊತ್ತೆ?”

“ಇಲ್ಲ, ಆದರೆ ಊಹಿಸಬಲ್ಲೆ. ಜಗದೀಶ ನಿನ್ನ ಅರೆಸ್ಟ್ ಮಾಡಲು ಬರುತ್ತಿರಬಹುದು. ನಾನಿಲ್ಲಿರುವೆನೆಂಬುದು ಅವರಿಗೆ ಗೊತ್ತಿಲ್ಲ. ಅದನ್ನು ಮಾತ್ರ ಖಚಿತವಾಗಿ ಹೇಳಬಲ್ಲೆ” ಸ್ವಲ್ಪ ಬಳಲಿದ ದನಿಯಲ್ಲಿ ಹೇಳಿದಳು ಕಲ್ಯಾಣಿ.

“ನೀನವಳನ್ನು ಗೋಳು ಹೊಯ್ದುಕೊಳ್ಳಬೇಡ ಹೋಗೋ! ಏನಾಗುವುದಿದ್ದರೆ ಅದಾಗುತ್ತದೆ ಹೋಗು” ಯಾವುದನ್ನು ಲೆಕ್ಕಿಸದವಳಂತೆ ಹೇಳಿದಳವನ ಅಮ್ಮ.

ಬಹಳ ಗಾಬರಿ ಹೊಂದಿದ್ದ ತೇಜಾ ಕೆಳಗೆ ಬಂದು ಕುಶಾಲನಿಗೆ ಫೋನ್ ಮಾಡಿ ವಿಷಯ ತಿಳಿಸಿದ. ತಾನು ಇನ್ನೇನು ಮಾಡಲು ಸಾಧ್ಯವೆಂದು ಯೋಚಿಸುತ್ತಾ ಅಪ್ಪನ ಬದಿಗೆ ಬಂದು ಕುಳಿತ. ಅವರು ಅಲ್ಲಿ ನೆರೆಯುತ್ತಿರುವ ಜನಜಂಗುಳಿಯ ಗದ್ದಲದ ಸದ್ದು ಕೇಳಿ ಬರಲಾರಂಭಿಸಿದಾಗಿನಿಂದ ಕುಳಿತ ಸ್ಥಳದಿಂದ ಕದಲಿರಲಿಲ್ಲ. ಮುಖ ಗಂಟಿಕ್ಕಿ ಯಾವುದೋ ಗಂಭೀರ ಯೋಚನೆಯಲ್ಲಿ ಲೀನರಾಗಿರುವಂತೆ ಕಂಡುಬಂದರು. ಅವನು ಅವರ ಕಡೆಯೇ ನೋಡುತ್ತಾ ಏನೋ ಹೇಳಬೇಕೆಂದುಕೊಂಡಾಗ ಹೇಳಿದರವರು

“ನೀ ಹೋಗು ಜನರೊಡನೆ ಮಾತಾಡು, ಪೋಲಿಸಿನವರು ಬಂದರೆ ಅವರಿಗೇನು ಬೇಕೆಂದು ಕೇಳು”

ಮೊದಲಿದ್ದ ಕಡೆಯೇ ಇತ್ತು ನೋಟ. ಮುಖಭಾವ ಬದಲಾಗಿರಲಿಲ್ಲ. ನಿರ್ವಿಕಾರ ದನಿಯಲ್ಲಿ ಬಂದಿತ್ತವರ ಮಾತು. ಒಮ್ಮೆಲೇ ಅವರು ಬದಲಾಗಿಬಿಟ್ಟಂತೆ ಕಂಡರು ತೇಜಾನಿಗೆ ಇನ್ನೊಂದು ಕ್ಷಣ ಅವರ ಕಡೆ ನೋಡಿ ಲಗುಬಗೆಯಿಂದ ಹೊರಗೋಡಿದ.
* * *

ಸೊಣಕಲು ವ್ಯಕ್ತಿ ಬಂದು ತನಗಾದ ಗತಿಯ ಮಾಹಿತಿ ಕೊಡುತ್ತಲೇ ಕೋಪಾ ತಾಳಲಾರದೇ ಅವನನ್ನು ಬಲವಾಗಿ ಒದ್ದ. ಅದರ ರಭಸಕ್ಕೆ ಅವನು ಸ್ವಲ್ಪ ದೂರ ಹೋಗಿ ಗೊಡೆಗೊರಗಿ ನಿಂತ. ತಕ್ಷಣ ನಿರ್ಣಯಕ್ಕೆ ಬಂದು ಎಸ್.ಐ. ಎಚ್.ಸಿ. ಮತ್ತಿಬ್ಬರು ಪೇದೆಯರನ್ನು ಜೀಪಿನಲ್ಲಿ ಕೂಡಿಸಿಕೊಂಡು ವೇಗವಾಗಿ ದೇವನಹಳ್ಳಿಯ ಕಡೆ ಸಾಗಿದ. ಅರ್ಧ ದಾರಿ ಕ್ರಮಿಸುವುದರಲ್ಲಿ ಅತ್ತ ಕಡೆ ಲಾರಿಯಲ್ಲಿ ತುಂಬಿಹೋಗುತ್ತಿದ್ದ ಜನ ಕಾಣಿಸಿದರು. ಒಂದು ಲಾರಿಯಲ್ಲ, ಲಾರಿಯ ಹಿಂದೆ ಲಾರಿ, ಯಾವುದೋ ಮಹಾನಾಯಕನ ಭಾಷಣ ಕೇಳಲು ಹೋಗುತ್ತಿದ್ದಂತೆ ಅವರಲ್ಲಿ ತುಂಬಿದ್ದ ಜನ. ಅದನ್ನು ನೋಡುತ್ತಾ ಜೀಪಿನ ವೇಗ ಇನ್ನೂ ನಿಧಾನಗೊಳಿಸಿದ.

“ಅಲ್ಲಿ ಏನೋ ಗದ್ದಲವಾಗುತ್ತಿದ್ದ ಹಾಗಿದೆ ಸರ್!” ಸ್ವಲ್ಪ ಭಯದ ದನಿಯಲ್ಲಿಯೇ ಹೇಳಿದ ಎಸ್.ಪಿ. ಜೀಪಿಗೇ ಅಂಟಿದ ವೈರ್‌ಲೆಸ್ ಏನೇನೋ ಹೇಳುತ್ತಿತ್ತು. ಅದನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ ಅವರು. ಆ ಗದ್ದಲ ನೋಡಿದ ಮೇಲೆ ಅವರ ನೆನಪಾಗಿ ಪಕ್ಕದಲ್ಲಿ ಕುಳಿತಿರುವವನಿಗೆ ಎಸ್.ಐ.ನಿಗೆ ಇದೇ ಮೆಸೇಜನ್ನು ರಾಮನಗರಕ್ಕೆ ಕಳುಹಿಸುವಂತೆ ಹೇಳಿದ. ಬಂಡೇರಹಳ್ಳಿಯ ಇನ್ಸ್‌ಪೆಕ್ಟರ್‌ ಜಗದೀಶ.
* * *

ರಾಮನಗರದ ಪೋಲೀಸ್ ಮುಖ್ಯಾಲಯದಲ್ಲಿ ಎರಡು ಬಾಂಬು ಸ್ಫೋಟಗಳಾದವು. ಭಯಾತಿರೇಕದಿಂದ ಅಲ್ಲಿದ್ದ ಪೋಲಿಸಿನವರೆಲ್ಲಾ ದಿಕ್ಕಾಪಾಲಾಗಿ ಓಡಿದರು. ತಮ್ಮ ವಾಹನದ ಕಡೆ ಓಡುತ್ತಿದ್ದ ಎಸ್.ಪಿ. ಸಾಹೇಬರ ಮೇಲೆ ಗುಂಡಿನ ಸುರಿಮಳೆಯಾಯಿತು. ಅವರು ತಮ್ಮ ವಾಹನದ ಮೇಲೆ ಕೈಹಾಕಿ ಪ್ರಾಣ ನೀಗಿದರು. ಕಲ್ಲಕ್ಕನನ್ನು ಕೊಲ್ಲಲು ಪೋಲೀಸ್‌ದಳ ಸುತ್ತುವರಿದಿದೆ ಎಂಬ ಸುದ್ದಿ ಹರಡುತ್ತಿದ್ದಂತೆ. ಅಲ್ಲಿ ಎಲ್ಲ ಅಂಗಡಿ ಕಾರ್ಯಾಲಯಗಳು ತಮಷ್ಟಕ್ಕೇ ತಾವೇ ಮುಚ್ಚಿಕೊಂಡವು. ಎಸ್.ಪಿ.ಯವರಿಗಾದ ಗತಿಯ ವಿಷಯ ತಿಳಿದ ಕಲೆಕ್ಟರ್ ಸಾಹೇಬರು ತಮ್ಮ ಕಾರ್ಯಾಲಯ ಬಿಟ್ಟು ಮಿತ್ರನೊಬ್ಬನ ಮನೆಯಲ್ಲಿ ಹೋಗಿ ಅಡಗಿಕೊಂಡು ಅಲ್ಲಿಂದಲೇ ಪಟ್ಟಣಕ್ಕೆ ಫೋನ್ ಮಾಡಿ ವಿಷಯ ತಿಳಿಸಿದರು. ಬರಿದಾದ ಕಲೆಕ್ಟರ್‌ ಕಾರ್ಯಾಲಯದ ಕಟ್ಟಡದಲ್ಲಿ ಎರಡು ಭಯಂಕರ ಸ್ಫೋಟಗಳಾದವು. ಆ ಕಟ್ಟಡ ಅವಶೇಷವಿಲ್ಲದಂತೆ ನೆಲಕ್ಕೆ ಕುಸಿಯಿತು.

ಪಟ್ಟಣದಲ್ಲೂ ಕಲ್ಲಕ್ಕನನ್ನು ಪೋಲಿಸಿನವರು ಸುತ್ತುವರೆದ ವಿಷಯ ಎಲ್ಲಾ ಕಡೆ ಬಿರುಗಾಳಿಯಂತೆ ಹರಡಿತು. ಅಲ್ಲಿನ ಅಂಗಡಿಗಳು ಯಾರ ಬಲವಂತವೂ ಇಲ್ಲದೇ ಮುಚ್ಚಿಕೊಂಡರೆ. ಮಿಕ್ಕವನ್ನು ಕಲ್ಯಾಣಿಯ ವಿಚಾರಧಾರ ಯುಳ್ಳವರು, ಅವಳ ಪ್ರೀತಿಯ ಸಹಾನುಭೂತಿ ಹೊಂದಿದ್ದವರು ಮುಚ್ಚಿಸಿದರು. ಕಲ್ಲಕ್ಕನಿಗೆ ಏನೂ ಆಗಬಾರದ್ದು ಏನಾದರೂ ಆದರೆ ಇಡೀ ರಾಜ್ಯವೇ ಬೆಂಕಿಯ ಜ್ವಾಲೆಯಾಗುವುದೆಂಬ ನಿನಾದಗಳನ್ನು ಕೂಗುತ್ತಾ ದೊಡ್ಡ ಮೆರವಣಿಗೆಯೊಂದು ಮುಖ್ಯಮಂತ್ರಿಯವರ ನಿವಾಸದ ಕಡೆ ಹೊರಟಿತು. ಇದಕ್ಕಿಂತ ಒಳ್ಳೆಯ ಅವಕಾಶ ಸಿಗುವುದಿಲ್ಲವೆಂಬಂತ ಟಿ.ವಿ.ಯವರು ನಡೆಯುತ್ತಿರುವದನ್ನೆಲ್ಲಾ ಆಗಿಂದಾಗ ಪ್ರಸಾರ ಮಾಡಲಾರಂಭಿಸಿದರು. ಹಲವು ಚಾನಲ್‌ನವರು ಈ ಸುವರ್ಣಾವಕಾಶ ಬಿಡಬಾರದೆಂಬಂತೆ ಬಂಡೇರಹಳ್ಳಿಯ ಕಡೆ ತಮ್ಮ ಎಲ್ಲಾ ಉಪಕರಣಗಳೊಂದಿಗೆ ಓಡಿದರು.

ನಿವೃತ್ತರಾದ ಸ್ಕ್ವಾಡಿನ ಮುಖ್ಯಸ್ಥ ಶ್ರೀವಾಸ್ತವರನ್ನು ಕೂಡಲೇ ಕರೆಸಿಕೊಂಡರು ಸಿ.ಎಂ. ಸಾಹೇಬರು. ಆಗಲೇ ಅಲ್ಲಿಗೆ ಬಂದಿದ್ದ ಕಮೀಶನರರು ಅವರನ್ನು ಸೇರಿಕೊಂಡರು. ಕೇವಲ ಹದಿನೈದು ನಿಮಿಷದ ಮಾತುಕತೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ಸ್ಥಿತಿಯನ್ನು ಹದ್ದುಬಸ್ತಿಗೆ ತರುವ ಎಲ್ಲಾ ಜವಾಬ್ದಾರಿಯನ್ನು ನಿವೃತ್ತ ಪೋಲಿಸ್ ಅಧಿಕಾರಿಗೆ ವಹಿಸಿದರು ಸಿ.ಎಂ. ಸಾಹೇಬರು. ಅವರು ಹೇಳಿದಂತೆ ನಡೆದುಕೊಳ್ಳಬೇಕೆಂದು ಕಮೀಷನರರಿಗೆ ಅಜ್ಞಾಪಿಸಿದರು.

ವಿಷಯ ತಿಳಿದ ಕೂಡಲೇ ಕುಶಾಲನ ಜೀಪು ದೇವನಹಳ್ಳಿಯ ಕಡೆ ಓಡತೊಡಗಿತು.
* * *

ಇನ್ಸ್‌ಪೆಕ್ಟರ್‌ ಜಗದೀಶನ ಕರೆಗೆ ರಾಮನಗರ ಪೋಲಿಸ್ ಮುಖ್ಯಾಲಯದಿಂದ ಯಾವ ಉತ್ತರವೂ ಬರಲಿಲ್ಲ. ಅಲ್ಲೀಗ ಯಾರೂ ಇಲ್ಲ ಎಂಬುವುದು ಅವನು ಊಹಿಸುವುದೂ ಕಷ್ಟವಾಯಿತು. ಸುಮಾರು ಹದಿನೈದು ನಿಮಿಷದ ನಂತರ ಪೋಲಿಸಿನವರಿಂದ ತುಂಬಿದ ಎರಡು ವ್ಯಾನುಗಳು ಬಂಡೇರಹಳ್ಳಿ ಕಡೆ ಹೋಗುತ್ತಿದ್ದಾಗ ಅದನ್ನವನು ಅನುಸರಿಸಿದ
* * *

ಹೊರಗೆ ಬಂದ ತೇಜ ಕ್ಷಣಕ್ಷಣಕ್ಕೂ ಬೆಳೆಯುತ್ತಿರುವ ಜನಸಮೂಹವನ್ನು ನೋಡಿ ದಂಗಾದ. ಅವರೊಡನೆ ಮಾತಾಡಲು ಹತ್ತಿರ ಬಂದಾಗ

“ನೀವು ಮನೆಯಲ್ಲೇ ಇರಿ” ಎಂದು ಕೂಗಿದ ಒಬ್ಬ.

ಅದಕ್ಕೆ ಅಲ್ಲಿದ್ದ ಎಲ್ಲರ ಕಂಠಗಳೂ ತಮ್ಮ ದನಿಯನ್ನು ಸೇರಿಸಿದವು. ಬಾಗಿಲಿಗೆ ಬಂದಿದ್ದ ಪಟವಾರಿಯವರು ಇದನ್ನು ನೋಡಿದರು. ಹಿಂದೆ ಅವರು ಕೈ ಮಾಡುತ್ತಿದ್ದಂತೆ ಒಂದು ಮೈಕನ್ನು ತಂದು ಅವರ ಕೈಗೆ ಕೊಟ್ಟ ಒಬ್ಬ. ಅವರ ಮೂಲಕ ಅವರು ಹೇಳಿದರು.

“ನಾನು ಸ್ವಾತಂತ್ರ ಚಳುವಳಿಯಲ್ಲಿ ಭಾಗವಹಿಸಿದ ರಾಮಚಂದರ್ ಪಟವಾರಿ ದಯವಿಟ್ಟು ಎಲ್ಲರೂ ಶಾಂತರಾಗಿ ನನ್ನ ಮಾತು ಕೇಳಿ”

ಅದನ್ನು ನೋಡಿ ತೇಜಾನಿಗೆ ಎಲ್ಲಿಲ್ಲದ ಆಶ್ಚರ್ಯ. ಅಪ್ಪ ಇಂತಹದನ್ನು ಮೊದಲೇ ನಿರೀಕ್ಷಿಸಿದ್ದರೆ, ಅವನ ಯೋಚನೆ ಮುಂದುವರೆಯದಂತೆ ಧ್ವನಿವರ್ಧಕದ ಮೂಲಕ ತಮ್ಮ ಪ್ರಭಾವಯುಕ್ತ ಮಾತನ್ನು ಮುಂದುವರೆಸಿದರು.

“ಯಾರೂ ಎಂತಹ ಗದ್ದಲವೂ ಮಾಡಬಾರದು. ಪೋಲಿಸಿನವರ ಮೇಲೆ ಕೈ ಎತ್ತಬಾರದು ಯಾವ ಪೋಲಿಸ್ ಅಧಿಕಾರಿಯಾಗಲಿ, ಇನ್ನಾರೇ ಆಗಲಿ ನನ್ನೊಡನೆ ಮಾತಾಡುವುದಿದ್ದರೆ ಮೊದಲು ಧ್ವನಿವರ್ಧಕ ಮೂಲಕ ಮಾತಾಡಲು ಹೇಳಿ.”

“ಕಲ್ಲಕ್ಕ ಹೇಗಿದ್ದಾರೆ” ಜನಸಂದಣಿಯಲ್ಲಿ ಒಬ್ಬ ಕೂಗಿ ಕೇಳಿದ.

“ನಿಮ್ಮ ಕಲ್ಲಕ್ಕ ಚೆನ್ನಾಗಿದ್ದಾಳೆ. ಅವಳೀಗ ತುಂಬು ಗರ್ಭಿಣಿ ಅದೆಲ್ಲಾ ನಿಮಗೆ ಗೊತ್ತು ತಾಳ್ಮೆ ಇಂದಿರಿ ಅವಳೂ ನಿಮ್ಮೊಡನೆ ಮಾತಾಡುತ್ತಾಳೆ”

“ಕಲ್ಲಕ್ಕನಿಗೆ ಜಯವಾಗಲಿ” ಎಂಬ ಆ ಜನಸಮೂಹದ ಏಕಕಂಠ ಕೂಗುಗಳು, ನಿನಾದಗಳು ದೇವನಹಳ್ಳಿಯನ್ನು ದಾಟಿ ದೇಶದ ಮೂಲೆ ಮೂಲೆಗೆ ತಲುಪುವ ಯತ್ನ ನಡೆಸಿದಂತೆ ಕಂಡವು. ಮುಂಬಾಗಿಲು ದಾಟಿ ಮುಂದೆ ಬಂದಿದ್ದ ಪಟವಾರಿಯವರು ಧ್ವನಿವರ್ಧಕದ ಮೂಲಕ ಇನ್ನೊಮ್ಮೆ ಜನಸಮೂಹಕ್ಕೆ ವಿನಂತಿಸಿಕೊಂಡರು.

“ಪತ್ರಿಕಾಕರ್ತರು, ಟಿ.ವಿ.ಯವರು ಯಾರಾದರೂ ಬರಬಯಸಿದರೆ ಅವರ ಬಳಿ ಯಾವ ಬಗೆಯ ಆಯುಧಗಳೂ ಇಲ್ಲವೆಂಬುವುದು ಖಚಿತಪಡಿಸಿ ಕೊಂಡು ಬರಗೊಡಿ. ಅದನ್ನೆಲ್ಲಾ ನೋಡಲು ನಿಮ್ಮಲ್ಲೇ ಒಬ್ಬನನ್ನು ಆರಿಸಿಕೊಳ್ಳಿ”

ಜನಸಮೂಹದ ನೂಕುನುಗ್ಗಲು ಗದ್ದಲ ಮುಖ್ಯರಸ್ತೆಯವರೆಗೆ ಹರಡಿತ್ತು. ಎರಡೂ ಕಡೆಯಿಂದ ವಾಹನ ಸಂಚಾರ ನಿಂತುಹೋಗಿತ್ತು. ಪಟ್ಟಣದಿಂದ ಮತ್ತು ರಾಮನಗರದಿಂದ ಹರಿದಾಡುವ ವಾಹನಗಳು ಬೇರೆ ದಾರಿ ಹುಡುಕಿಕೊಳ್ಳಬೇಕಾಯಿತು.

ಅಲ್ಲಿಗೆ ಮೊದಲು ಬಂದವರು ಟಿ.ವಿ.ಯವರು. ಅವರ ವಾಹನವನ್ನು ಸರಿಯಾಗಿ ಪರೀಕ್ಷಿಸಿ. ಅವರಲ್ಲಿ ಯಾವ ಆಯುಧವೂ ಇಲ್ಲವೆಂಬುವುದನ್ನು ಖಚಿತಪಡಿಸಿಕೊಂಡಮೇಲೆ ವಾಹನಕ್ಕೆ ಮುಂದೆ ಹೋಗಲು ದಾರಿ ಮಾಡಿಕೊಟ್ಟರವರು. ಆಗಲೇ ವ್ಯಾನಿನ ಮೇಲೆ ಏರಿದ ಒಬ್ಬ ಜನಸಮೂಹದ ಚಿತ್ರೀಕರಣ ಆರಂಭಿಸಿದ್ದ. ಹಾಗೆ ಮೂರು ವಾಹನಗಳು ತೇಜಾನ ಮನೆಯ ಬಳಿ ಬಂದವು. ಜನಸಮೂಹದ ಚಿತ್ರೀಕರಣದೊಡನೆ ಅಲ್ಲಿ ಸೇರಿದವರ ಅಭಿಪ್ರಾಯಗಳ ಶೇಖರಣೆಯನ್ನು ಆರಂಭಿಸಿದರು. ಹೆಚ್ಚ ಕಡಿಮೆ ಎಲ್ಲರೂ ಹೇಳಿದ್ದು ಒಂದೇ ಮಾತು. “ಕಲ್ಲಕ್ಕ ದೇವತೆ. ಬಡಬಗ್ಗರ ಗೋಳನ್ನು ನಿವಾರಿಸುವ ದೇವತೆ, ಚಂಡಾಲರನ್ನು ಚಂಡಾಡುವ ಕಾಳಿ ಅವಳಿಗಾಗಿ ತಾವೆಲ್ಲಾ ಪ್ರಾಣವನ್ನು ಅರ್ಪಿಸಲು ಸಿದ್ದ” ಅವರಲ್ಲಿ ಕರೆತಂದವರು ಯಾರೆಂದಾಗ ತಮ್ಮ ಇಷ್ಟದಿಂದ ಬಂದಿರುವುದಾಗಿ ಕಲ್ಲಕ್ಕನಿಗೇನಾದರೂ ಆದರೆ ಸಹಿಸುವುದಿಲ್ಲವೆಂದು ಅವಕ್ಕೆ ಕೆಲಕಡ ಹಣ ಧನವಂತರೇ ಒದಗಿಸಿದರೆ, ಇನ್ನೊಂದು ಕಡೆ ತಾವು ಚಂದಾಹಣ ಜಮಾಯಿಸಿಕೊಂಡು ಬಂದಿರುವುದಾಗಿ ಹೇಳಿದರು. ತೇಜಾನ, ಪಟವಾರಿಯವರ ಚಿತ್ರೀಕರಣ ನಡೆದ ಮೇಲೆ ತಾವು ಕಲ್ಲಕ್ಕನ ಚಿತ್ರೀಕರಣ ಮಾಡಬೇಕೆಂದು ಗೋಗರೆದು ಕೇಳಿದರವರು. ಒಬ್ಬೊಬ್ಬರೇ ತಮ್ಮ ಪಾದರಕ್ಷೆಗಳನ್ನು ಬಿಚ್ಚಿ ಮೇಲೆ ಹೋಗಬೇಕಾಗಿ ಹೇಳಿದರು ಪಟವಾರಿ. ಮನೆಯಲ್ಲಿ ಜಗಜಗಿಸುವ ಬೆಳಕು ಬೆಳಗಲಾರಂಭಿಸಿತು. ಮನೆಯ ಒಳಭಾಗದಲ್ಲೆಲ್ಲಾ ಚಿತ್ರೀಕರಣ ಮಾಡುತ್ತಾ ಮೇಲೆ ಹೋದರು. ಗರ್ಭಿಣಿ ಕಲ್ಯಾಣಿಯ, ಲಕ್ಷ್ಮೀದೇವಿಯವರ ಆ ಪುರಾತನ ಮನೆಯ ಕೋಣೆ ಚಿತ್ರೀಕರಣವಾದ ಮೇಲೆ ಕಲ್ಯಾಣಿಯ ಬಾಯಿ ಬಳಿ ಮೈಕನ್ನು ಹಿಡಿದು ಕೇಳಿದ ಒಬ್ಬ

“ನೀವು ಕ್ರಾಂತಿಕಾರಿಯೋ?”

“ಏನು ಬೇಕಾದರೂ ಅಂದುಕೊಳ್ಳಿ! ನಾನು ದೇಶವನ್ನು ಭ್ರಷ್ಟರಿಂದ ದೇಶದ್ರೋಹಿಗಳಿಂದ ಮುಕ್ತಮಾಡಬಯಸಿದ್ದೇನೆ. ಕಡುಬಡವನೂ ಆತ್ಮಗೌರವವನ್ನು ಕಳೆದುಕೊಳ್ಳದೇ ಬದುಕ ಬೇಕೆಂಬುವುದೇ ನನ್ನ ಆಸೆ.”

“ನೀವು ತೇಜಾ ಅವರನ್ನು ಮದುವೆಯಾಗಿ ಪ್ರೀತಿಸುತ್ತಿರುವಿರಾ, ಪ್ರೀತಿಸಿ ಮದುವೆಯಾಗಿದ್ದೀರಾ”

“ಪ್ರೀತಿಸಿ ಮದುವೆಯಾದೆ. ನಮ್ಮ ಮದುವೆ ಬಹುಜನರಿಗೆ ಅರ್ಥವಾಗುವುದು ಕಷ್ಟ”

“ಜನರಿಗೆ ನಿಮ್ಮ ಸಂದೇಶವೇನು?”

“ಬಡಬಗ್ಗರನ್ನು ಗೌರವದಿಂದ ನೋಡಿ. ಅವರನ್ನು ಪ್ರೀತಿಸಿ, ದೇಶವನ್ನು ಪ್ರೀತಿಸಿ. ಬಡಬಗ್ಗರೇ ಈ ದೇಶ ಎಂಬುವುದನ್ನು ಮರೆಯಬೇಡಿ.”

ಅವಳು ಅಷ್ಟು ಮಾತಾಡುವಾಗಲೆ ಬಹಳ ದಣಿದಿದ್ದಳು. ಇನ್ನು ಸಾಕೆಂದು ಅವರನ್ನೂ ಹೊರಗೆ ಕಳುಹಿಸಿದ ತೇಜಾ ಅವಳ ಬಳಿ ಕುಳಿತು ಅಕ್ಕರೆಯಿಂದ ತಲೆಯ ಮೇಲೆ ಕೈ ಆಡುತ್ತಾ ಕೇಳಿದ

“ನೋವು ಆರಂಭವಾಗಿದ್ದೆಯೋ”

“ಇಲ್ಲ” ಎಂಬಂತೆ ತಲೆ ಆಡಿಸಿದಳು ಕಲ್ಯಾಣಿ

“ನೀ ಹೊರಗೆ ಹೋಗೊ ನಾನದೆಲ್ಲಾ ನೋಡಿಕೊಳ್ಳುತ್ತೇನೆ ದಯಾಳಿಗೆ ಬರುವಂತೆ “ಹೇಳಿ ಕಳಿಸು” ಗದರಿದರವನ ಅಮ್ಮ.

ರಸ್ತೆಯ ಎರಡೂ ಕಡೆಯಿಂದ ಬಂದ ಪೊಲೀಸ್ ವ್ಯಾನುಗಳು ಎಲ್ಲಿ ಹೋಗಬೇಕು ತೋಚದಂತೆ ನಿಂತುಬಿಟ್ಟಿದ್ದವು. ಮೊದಲು ಬಂದ ಕುಶಾಲ ಜನಸಮೂಹವನ್ನು ನೋಡಿ ದಂಗಾದ ಅದನ್ನು ನೋಡಿ ಅವನ ಬಾಯಿ ಕಟ್ಟಿಹೋಗಿತ್ತು. ಜನರ ನಡುವೆ ನಗುತ್ತಾ ನಾನು ತೇಜಾನ ಸ್ನೇಹಿತ ಹೋಗಗೊಡಿ ಎಂದು ಜನರಿಗೆ ಎರಡರಡು ಸಲ ಕೂಗಿ ಹೇಳಿದ. ಬಾಯಿಂದ ಬಾಯಿಗೆ ಸಾಗುತ್ತಾ ಆ ಮಾತು ತೇಜಾನ ಮನೆಯನ್ನು ತಲುಪಿತು. ಅವರನ್ನು ಬರಗೊಡಿ ಎಂದು ಧ್ವನಿವರ್ಧಕದ ಮೂಲಕ ಹೇಳಿದರು ಪಟವಾರಿಯವರು. ಜನಸಮೂಹ ಅವನಿಗೆ ದಾರಿ ಮಾಡಿಕೊಟ್ಟಿತು.

ತೇಜಾ ಹತ್ತಿರ ಬಂದ ಮೇಲೆ ಅವನು ಮತ್ತೆ ಜನಸಮೂಹದ ಕಡೆ ತಿರುಗಿ ಹೇಳಿದ.

ಇದು ನಂಬಲಸಾಧ್ಯ. ಇಷ್ಟು ಜನ ಇವಳ ಬೆಂಬಲಿಗರಿದ್ದಾರೆಂದು ನಾನು ಊಹಿಸಿರಲಿಲ್ಲ… ಇನ್ನೂ ಎಷ್ಟು ಜನರಿಗೆ ಬರಲಾಗಲಿಲ್ಲವೋ ಆ ದೇವರೇ ಬಲ್ಲ

“ನನಗೂ ಇದನ್ನು ನಂಬಲಾಗುತ್ತಿಲ್ಲ” ತೇಜಾ ತನ್ನ ದಿಗ್ಭ್ರಮೆಯನ್ನೂ ವ್ಯಕ್ತಪಡಿಸುತ್ತಿದ್ದಂತೆ ಒಬ್ಬ ಗೈನಕಾಲಜಿಸ್ಟ್ ಬರಬಯಸಿದ್ದಾನೆಂಬ ಮಾತು ಬಾಯಿಯಿಂದ ಬಾಯಿಗೆ ಹರಿದು ಅವರವರೆಗೆ ತಲುಪಿತು. ಅವರನ್ನು ಬರಗೊಡಿ ಎಂಬ ಆದೇಶವನ್ನು ಪಟುವಾರಿಯವರು ಹೊರಡಿಸುತ್ತಿದ್ದಂತೆ ನಡುವಯಸ್ಸಿನಲ್ಲಿದ್ದ ವ್ಯಕ್ತಿ ತನ್ನ ಸಲಕರಣೆಗಳ ಪೆಟ್ಟಿಗೆಯನ್ನು ಹಿಡಿದು ಜನಸಮೂಹದಿಂದ ಮುಕ್ತನಾಗಿ ಬರತೊಡಗಿದ. ಕಲ್ಯಾಣಿಯ ಭಕ್ತರು ಮೊದಲೇ ಅವನೆದುರಿಗೆ ಪೆಟ್ಟಿಗೆ ಒಳಗಿರುವ ವಸ್ತುಗಳನ್ನು ಪರೀಕ್ಷಿಸಿ ಅದರಲ್ಲಿ ಯಾವ ಆಯುಧ ಇಲ್ಲವೆಂದು ಖಚಿತಪಡಿಸಿಕೊಂಡಿದ್ದರು. ಅವನ ಮೇಲೆ ಕುಶಾಲನ ನೋಟ ಬೀಳುತ್ತಲೆ ದಿಗ್ಭ್ರಾಂತಿಯ ದನಿಯಲ್ಲಿ ಉಸರಿದ.

“ಇವರು ಪಟ್ಟಣದ ಪ್ರಮುಖ ಗೈನಾಕಾಲಜಿಸ್ಟ್”

ಹತ್ತಿರ ಬಂದ ಅವರು ಪಟವಾರಿಯವರನ್ನು ಕೇಳಿದಳು

“ನಾನು ಅವರನ್ನು ಚೆಕ್ ಮಾಡಬಹುದೇ! ನಾನೂ ಅವರ ಅಭಿಮಾನಿ” ಡಾಕ್ಟರರಿಗೆ ಕಲ್ಯಾಣಿ ಮಲಗಿದ್ದ ಕೋಣೆಯನ್ನು ತೋರಿಸಲು ಹೋದ ತೇಜ. ಧ್ವನಿವರ್ಧಕದ ಮೂಲಕ ಮಾತು ಕೇಳಿ ಬರಲಾರಂಭಿಸಿತು

“ರಾಮಚಂದ್ರ ಪಟವಾರಿಯವರೆ ನಿಮ್ಮೊಡನೆ ಮಾತಾಡುವ, ಒಂದು ಸಂಧಾನಕ್ಕೆ ಬರುವ ಅಧಿಕಾರವನ್ನು ನನಗೆ ಸಿ.ಎಂ. ಸಾಹೇಬರು ಒಪ್ಪಿಸಿ ಕೊಟ್ಟಿದ್ದಾರೆ ನನ್ನೊಡನೆ ಕಮೀಶನರ್ ಸಾಹೇಬರೂ ಇದ್ದಾರೆ ನಾವು ಬರಬಹುದೆ”

“ನೀವ್ಯಾರು? ನಿಮ್ಮ ಹೆಸರೇನು?” ಧ್ವನಿವರ್ಧಕದ ಮೂಲಕವೇ ಕೇಳಿದರು ಪಟವಾರಿಯವರು.

“ನಾನು ಶ್ರೀವಾಸ್ತವ. ಸ್ಕ್ವಾಡಿನ ಮುಖ್ಯಸ್ಥ”

ಅವರ ದನಿಯನ್ನು ಆಗಲೇ ಗುರುತಿಸಿದ್ದರು ತೇಜಾ ಮತ್ತು ಕುಶಾಲ.

“ಬರುವ ಮುನ್ನ ಮೊದಲು ನನ್ನ ಕೆಲ ಮಾತುಗಳನ್ನು ಕೇಳಿ, ಕಲ್ಯಾಣಿ, ಕಲ್ಲಕ್ಕ, ಕಾಳಿ ಅವಳನ್ನು ಇನ್ನೇನೂ ಹೆಸರಿನಿಂದ ಕರೆಯುತ್ತಾರೋ ಅದು ಈ ಜನ ಸಮೂಹಕ್ಕೆ ಗೊತ್ತು ಅವಳು ದೇಶದ್ರೋಹಿ ದೇಶವನ್ನು ನಾಶನ ಮಾಡುವ ಕ್ರಾಂತಿಕಾರಿಯಲ್ಲ. ನನ್ನಂತೆಯೇ ದೇಶಭಕ್ತಳು. ನಾನು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದೆ. ಅವಳು ನಮ್ಮ ಸ್ವತಂತ್ರ ಭಾರತ ಭ್ರಷ್ಟಾಚಾರ, ದಬ್ಬಾಳಿಕೆ ವಿರುದ್ಧ ಹೋರಾಡುತ್ತಿದ್ದಾಳೆ. ಈಗ ಜೈಲಿನಲ್ಲಿರಬೇಕಾದವರು, ನೇಣುಕಂಬವನ್ನು ಹತ್ತಬೇಕಾದವರು ರಾಜ್ಯಗಳನ್ನಾಳುತ್ತಿದ್ದಾರೆ. ಅವರುಗಳ ವಿರುದ್ಧ ಕೇಸುಗಳು ನಡೆಯುತ್ತಲೇ ಇರತ್ತವೆ. ಅವರುಗಳು ಸಾಯುವವರೆಗೂ ನಡೆಯುತ್ತಿರುತ್ತದೆ. ಇನ್ನೂ ನಿಮಗೆ ವೀರಪ್ಪನ್‌ನನ್ನು ಹಿಡಿಯಲಾಗಿಲ್ಲ, ದೇಶದ್ರೋಹಿ ದಾವುದ್ ಇಬ್ರಾಹಿಂನನ್ನು ತಂದು ಶಿಕ್ಷಿಸಲಾಗಿಲ್ಲ, ಕೈತೊಳೆದುಕೊಂಡು ಕಲ್ಯಾಣಿಯ ಹಿಂದೆ ಬಿದ್ದಿದ್ದಿರಿ ಇಂತಹ ಅನ್ಯಾಯಗಳು ನಿಲ್ಲದಿದ್ದರೆ ಮತ್ತೆ ನಾನು ಕ್ರಾಂತಿಕಾರಿ ಹೋರಾಟಗಾರನಾಗಬೇಕಾಗುತ್ತದೆ. ಈ ದೇಶವನ್ನು ನಮ್ಮವರೆ ಆದ ಭ್ರಷ್ಟರಿಂದ ಕಾಪಾಡಲು!

ದೇಶದ ಸ್ವಾತಂತ್ರ್ಯಕ್ಕಾಗಿ ಕ್ರಾಂತಿಕಾರಿ ಚಳವಳಿ ನಡೆಸಿದ ನನಗೆ ಕಾಲ್ಯಾಣಿ ನನ್ನ ಸೊಸೆ ಎಂದು ಹೇಳಿಕೊಳ್ಳಲು ಗರ್ವವಾಗುತ್ತದೆ. ನಿಮ್ಮಲ್ಲಿಂದಲೇ ಬಂದ ನಿಷ್ಟಾವಂತ ತೇಜಾ ನನ್ನ ಮಗನಾಗಿದ್ದಕ್ಕೆ ಗರ್ವವಾಗುತ್ತದೆ. ಅವನನ್ನು ನೀವು ಕಲ್ಯಾಣಿಯನ್ನು ಕೊಲೆ ಮಾಡಲು ಅವಳ ತಂಡವನ್ನು ಮುಗಿಸಲು ಕಳಿಸಿದ್ದೀರಿ. ಅದೇ ಕೆಲಸವನ್ನು ಶಾಂತಿಯಿಂದ, ಪ್ರೇಮವಿಶ್ವಾಸದಿಂದ ಮಾಡಲು ಯತ್ನಿಸಿದ ಅವರೆ ಅದಕ್ಕೂ ನೀವು ಸಮಯ ಕೊಡಲಿಲ್ಲ.

ಈ ಜನಸಮೂಹದ ಮುಂದೇ ನನ್ನ ಶರತ್ತುಗಳನ್ನು ಹೇಳುತ್ತೇನೆ. ಮೊದಲನೆಯದಾಗಿ ಕಲ್ಯಾಣಿಯನ್ನು ವಿನಾಶಕಾರಿ ಕ್ರಾಂತಿಕಾರಿ ಎಂದು ಪರಿಗಣಿಸಬಾರದು. ಅವಳು ನಿಜವಾದ ದೇಶಭಕ್ತಳೆಂದು ಒಪ್ಪಿಕೊಳ್ಳಬೇಕು. ಅವಳಿಗೆ, ಅವಳ ತಂಡದವರಿಗೆ ಯಾವ ಶಿಕ್ಷೆಯು ಆಗಬಾರದು. ಅವರು ಇಲ್ಲೇ ಇದ್ದು ಶಾಂತಿಯ ಪ್ರೇಮದ ಮಾರ್ಗದಲ್ಲಿ ತಮ್ಮ ನಾಡಿನ ದೇಶದ ಸೇವೆ ಮಾಡುವ ಅನುಮತಿ ಕೊಡಬೇಕು. ಅವರು ಮತ್ತೆ ಹಿಂಸೆಯ ಮಾರ್ಗಕ್ಕೆ ಇಳಿಯುವುದಿಲ್ಲವೆಂಬ ಆಶ್ವಾಸನೆ ಕೊಡುತ್ತೇನೆ. ಹಾಗೇ ತೇಜಾ ಅವಳನ್ನು ಮದುವೆಯಾದುದಕ್ಕಾಗಿ ಅವನ ಮೇಲೆ ಯಾವ ಕ್ರಮವನ್ನೂ ತೆಗೆದುಕೊಳ್ಳಬಾರದು. ಒಬ್ಬ ಒಳ್ಳೆಯ ಯುವಕನ ಕೊಲೆಗೆ ಕಾರಣವಾದ ಬಂಡೇರಹಳ್ಳಿಯ ಹೊಸ ಇನ್ಸ್ ಪೆಕ್ಟರನ ಮೇಲೆ ಕಠಿಣಕ್ರಮ ತೆಗೆದುಕೊಳ್ಳಬೇಕು. ನೀವು ಇದೆಲ್ಲದಕ್ಕೆ ಒಪ್ಪಿ, ಸಿ.ಎಂ. ಸಾಹೇಬರೂ ಒಪ್ಪುವದಾದರೆ ಬನ್ನಿ”

ಅವರ ಭಾಷಣ ಮುಗಿಯುವವರೆಗೂ ನಿಶ್ಯಬ್ದವಾಗಿತ್ತು. ಜನಸಮೂಹ ಅದು ಮುಗಿದ ಕೂಡಲೇ ಚಪ್ಪಾಳೆ ಸದ್ದು ನಿರ್ವಿರಾಮವಾಗಿ ಎರಡು ನಿಮಿಷ ಇಡೀ ದೇವನಹಳ್ಳಿಯಲ್ಲಿ ಪ್ರತಿಧ್ವನಿಸಿತು.

“ನಾನಾಗಲೇ ಸಿ.ಎಂ. ಸಾಹೇಬರಿಗೆ ಸಂದೇಶ ಕಳಿಸಿರುವೆ ಅವರು ಬರುತ್ತಿದ್ದಾರೆ. ನಾ ಬರಲೇ”

“ಬನ್ನಿ” ಎಂದ ಪಟ್‌ವಾರಿಯವರು ಮೈಕನ್ನು ಭೀಮನ ಕೈಗೆ ಕೊಟ್ಟರು. ಜನಸಮೂಹದಲ್ಲಿ ಕಲ್ಯಾಣಿಯ ಜಯಜಯಕಾರ ತುಂಬಿತು. ಸಿ.ಎಂ. ಸಾಹೇಬರು ಬರಲು ಸಾಕಷ್ಟು ಸಮಯವಿದ್ದುದರಿಂದ ಪಟ್ವಾರಿಯವರ ಮನೆಯೆದುರು ಜನರು ಹಾಡು ಕುಣಿತಗಳನ್ನೂ ಆರಂಭಿಸಿದರು.

ಕುಶಾಲ ಮತ್ತು ತೇಜಾ ವಂದನೆಗಳನ್ನು ಸ್ವೀಕರಿಸಿದ ಇಬ್ಬರು ಪೋಲೀಸ್ ಅಧಿಕಾರಿಯರು ಮುಂದೆ ನಿಂತಿದ್ದ ಪಟ್ವಾರಿಯವರಿಗೆ ಕೈಜೋಡಿಸಿ ನಮಸ್ಕರಿಸಿದರು ಕಮೀಶನರ್ ಸಾಹೇಬರು. ಸ್ಕ್ವಾಡಿನ ಮುಖ್ಯಸ್ಥರಾದ ಶ್ರೀವಾಸ್ತವ ಅವರ ಕಾಲು ಮುಟ್ಟಲು ಹೋದಾಗ ಅದನ್ನು ತಡೆದು ಅವರನ್ನು ಎಬ್ಬಿಸಿ ತಬ್ಬಿಕೊಂಡರು. ಅದರ ನಂತರ ಮೂವರೂ ಒಳಹೋದರು. ಎಲ್ಲಾ ಘಟನೆಗಳನ್ನು ನಿರ್ವಿರಾಮವಾಗಿ ಚಿತ್ರೀಕರಿಸುತ್ತಿದ್ದವು ಟಿ.ವಿ. ಕ್ಯಾಮರಾಗಳು.

ಗೈನಾಕಾಲಜಿಸ್ಟ್, ಹಳ್ಳಿಯ ವೈದ್ಯ ಕಲ್ಯಾಣಿಯ ಪರೀಕ್ಷಣೆಯನ್ನು ಮುಗಿಸಿ ಹೊರಬಂದಿದ್ದರು. ಆ ಮೂವರೂ ಕಲ್ಯಾಣಿಯ ಕೋಣೆಯಲ್ಲಿ ಒಳಹೋದಾಗ ಅಮ್ಮ ಮತ್ತು ಆಯಾ ಪಕ್ಕಕ್ಕೆ ಸರಿದುಕೊಂಡರು. ಅವರ ಕಡೆ ನೋಡಿದ ಕಲ್ಯಾಣಿ ಬಹು ಕಷ್ಟದಿಂದ ಮುಗುಳ್ನಕ್ಕು ಎರಡೂ ಕೈಗಳನ್ನೂ ಜೋಡಿಸಿ ನಮಸ್ಕಾರ ಮಾಡಿದಳು. ಆ ಎರಡೂ ಕೈಗಳನ್ನು ಹಿಡಿದುಕೊಂಡ ಶ್ರೀವಾಸ್ತವ ಅವಳ ಹಣೆಗೆ ಮುದ್ದಿಸಿದರು. ಅವಳ ಭುಜ ತಟ್ಟುತಾ

“ಬ್ರೇವ್ ಗರ್ಲ್” ಎಂದರು ಕಮೀಷನರ್

ಕಲ್ಯಾಣಿಗೆ ಆಗಲೇ ಪ್ರಸವದ ನೋವು ಆರಂಭವಾದ ಕಾರಣ ಅವರು ಅಲ್ಲಿ ಹೆಚ್ಚು ಹೊತ್ತು ಇರುವ ಹಾಗಿರಲಿಲ್ಲ. ಮುಂದಿನ ಕೋಣೆಯಲ್ಲಿ ಬಂದು ಕುಳಿತರು. ಅವರ ಉಪಾಚಾರದ ವ್ಯವಸ್ಥೆಯಲ್ಲಿ ತೊಡಗಿದ ಭೀಮಾ.

ಗ್ಲೌಸುಗಳನ್ನೂ ಕೈಗೆ ಏರಿಸಿದ ಗೈನಕಾಲಜಿಸ್ಟ್ ಅವಳ ಹೊಟ್ಟೆಯನ್ನೊಮ್ಮೆ ಪರೀಕ್ಷಿಸಿ ನೋಡಿ, ಇಂಜೆಕ್ಷನ್ ಒಂದನ್ನು ಅವಳ ಕೈಗೆ ಚುಚ್ಚಿದರು. ಕಲ್ಯಾಣಿಗೆ ಪ್ರಸವದ ನೋವು ಆರಂಭವಾಗಿತ್ತು. ಬಾಗಿಲು ಹಾಕಿದರೂ ಹೊರಗಿನವರಿಗೆ ಹರಿದು ಬರುತ್ತಿದ್ದವು ಅವಳ ನೋವಿನ ಕೂಗುಗಳು. ತೇಜಾನನ್ನು ಅಪ್ಪನನ್ನು ಅಮ್ಮನನ್ನ ನೆನೆಸುತ್ತಾ ಕೂಗುತ್ತಾ ನೋವನ್ನು ಅನುಭವಿಸುತ್ತಿದ್ದಳು ಕಲ್ಯಾಣಿ. ಅವಳಿಗೆ ತಲೆಯ ಬಳಿ ನಿಂತ ಅಮ್ಮ ಸಮಾಧಾನ ಹೇಳುತ್ತಿದ್ದಳು. ಅದನ್ನು ಕೇಳುತಿದ್ದ ಪಟ್‌ವಾರಿಯವರು ತಮಗೆ ತಾವೇ ಹೇಳಿಕೊಳ್ಳುವಂತೆ ಹೇಳಿದರು,

“ಈವರೆಗೂ ಕಾಡಿನ ನೋವಾಯಿತು! ಈಗ ಸಂಸಾರದ ನೋವು”

“ಕಷ್ಟ ಪಡದೆ, ನೋವನ್ನು ಅನುಭವಿಸದೇ ಏನನ್ನು ಸಾಧಿಸಲಾಗುವುದಿಲ್ಲ” ಎಂದರು ಶ್ರೀವಾಸ್ತವ.

ಸಿ.ಎಂ. ಸಾಹೇಬರು ಬಂದರು ಎಂಬ ಕೂಗು ಹೊರಗೆ ಕೇಳಿ ಬರುತ್ತಿದ್ದಂತೆ ಬಾಗಿಲ ಹೊರ ಬಂದ ಪಟ್‌ವಾರಿಯವರು ಮೈಕಿನಲ್ಲಿ ಅವರಿಗೆ ಜಾಗ ಮಾಡಿಕೊಡುವಂತೆ ಜನಸಮೂಹವನ್ನು ಕೋರಿದರು. ಜನರ ನಡುವಿನಿಂದ ಅವರ ಕಾರು ಹಾದು ಬರುತ್ತಿದ್ದಾಗ ನಿಶ್ಯಬ್ದ. ಯಾವ ಬಗೆಯ ಜಯಕಾರವೂ ಇಲ್ಲ. ಅವರ ಸೆಕ್ಯೂರಿಟಿಯವರು ಮೊದಲು ಒಳಬಂದು ಎಲ್ಲವನ್ನೂ ಪರೀಕ್ಷಿಸುವ ಕೆಲಸ ಮುಗಿಸಿದರು.

ಕಲ್ಯಾಣಿಯ ಪ್ರಸವದ ಕೂಗುಗಳು ಇನ್ನೂ ನಿಂತೂ ನಿಂತೂ ಕೇಳಿ ಬರುತ್ತಿದ್ದವು. ಕಾರಿನಿಂದ ಇಳಿದ ಯುವ ಸಿ.ಎಂ. ಪಟವಾರಿಯವರ ಕಾಲಿಗೆ ನಮಸ್ಕರಿಸಲು ಬಾಗಿದಾಗ ಅವರನ್ನೆತ್ತಿ ತಬ್ಬಿಕೊಂಡರವರು.

ಸಿ.ಎಂ. ಸಾಹೇಬರು ಮನೆಯೊಳಗೆ ಬರುತ್ತಿದ್ದಂತೆ ಕಲ್ಯಾಣಿಯ ನೋವಿನ ಕೂಗುಗಳು ನಿಂತವು. ಹಲವು ಕ್ಷಣಗಳು ಕಳೆದ ಮೇಲೆ ಹೊರಬಂದ ಲಕ್ಷ್ಮೀದೇವಿ ಹೊರಬಂದು ಸಂತಸದ ದನಿಯಲ್ಲಿ ಹೇಳಿದರು.

“ಭಗತ್‌ಸಿಂಗ್ ಮತ್ತೆ ಜನ್ಮ ತಾಳಿದ”

ತಂದೆ ಮಗ ಇಬ್ಬರಿಗೂ ಶುಭಾಷಯಗಳನ್ನು ಹೇಳಿದ ಸಿ.ಎಂ. ಸಾಹೇಬರು ತಾವು ಭಗತ್‌ಸಿಂಗ್‌ನ ದರ್ಶನ ಪಡೆದೇ ಹೋಗುವುದಾಗಿ ಹೇಳಿದರು. ಬಾಗಿಲಿಗೆ ಬಂದ ಪಟ್‌ವಾರಿಯವರು ಆ ಸಂತಸದ ಸುದ್ದಿಯನ್ನು ಜನಸಮೂಹಕ್ಕೆ ಹೇಳಿದರು. ಒಮ್ಮೆಲೆ ಅವರಲ್ಲೆಲ್ಲಾ ಸಂತಸ, ಸಂಭ್ರಮಗಳ ಅಲೆ ಹರಿಯಿತು. ಮತ್ತೆ ಹಾಡು ಕುಣಿದಾಟ ಆರಂಭವಾಯಿತು.

ಸಿ.ಎಂ.ರ, ಪೊಲೀಸ್ ಅಧಿಕಾರಿಯರ, ಪಟ್‌ವಾರಿಯವರ ಚರ್ಚೆ ವಿಚಾರ ವಿಮರ್ಶೆ ಮುಗಿಯುವುದರಲ್ಲಿ ಕಲ್ಯಾಣಿ ತನ್ನ ಮಗುವನ್ನು ಬದಿಯಲ್ಲಿ ಹಾಕಿಕೊಂಡು ಅವನ ತಲೆಯ ಮೇಲೆ ಕೈ‌ಆಡುತ್ತಾ ಅಕ್ಕರೆಯಿಂದ ನೋಡುತ್ತಿದ್ದಳು. ಮೊದಲು ಆ ಕೋಣೆಯಲ್ಲಿ ಬಂದ ತೇಜಾನ ಆನಂದಕ್ಕೆ ಪಾರವೇ ಇಲ್ಲ. ಇಬ್ಬರೂ ಸ್ವಸ್ಥರಾಗಿದ್ದಾರೆ ಅದು ಅವನಿಗೆ ಮುಖ್ಯವಾಗಿತ್ತು. ಆತ ಹಣೆಯನ್ನು ಮುದ್ದಿಸಿದಾಗ ಹೇಳಿದಳು ಕಲ್ಯಾಣಿ

“ಪೂರ್ತಿ ನಿಮ್ಮ ಹಾಗೇ ಇದ್ದಾನೆ”

“ಏನೇ ಆಗಲಿ, ಇವನು ಜನ್ಮಿಸಿ ನನ್ನ ಒಂದು ಹಿಂಸೆಯಿಂದ ಮುಕ್ತ ಮಾಡಿದ.”

ಪಟ್‌ವಾರಿಯವರೊಡನೆ ಸಿ.ಎಂ. ಸಾಹೇಬರು ಬಂದು ಮಗುವನ್ನು ನೋಡಿದರು. ಇವನು ಸುಖ, ಶಾಂತಿಗಳ ಸಂಕೇತವೆಂದರು ಸಿ.ಎಂ. ಸಾಹೇಬರು. ತಮ್ಮ ಮೊಮ್ಮಗನನ್ನು ಮುದ್ದಿಸಿದ ಪಟ್‌ವಾರಿಯವರು ಮತ್ತೆ ಬರುವುದಾಗಿ ಕಲ್ಯಾಣಿಗೆ ಹೇಳಿದರು

ತಮ್ಮ ಅಂಗರಕ್ಷಕರೊಡನೆ ಸಿ.ಎಂ. ಸಾಹೇಬರು ಹೊರಬಂದಾಗ ಜನರಲ್ಲಿನ ಗದ್ದಲ ಅಡಗಿ ನಿಶ್ಯಬ್ದತೆ ಆವರಿಸಿತು. ಅವರೇನು ಹೇಳುತ್ತಾರೋ ಕೇಳುವ ಕೌತಕ ಎಲ್ಲರಿಗೂ

“ಕಲ್ಯಾಣಿ, ಕಲ್ಲಕ್ಕ ಒಬ್ಬ ದೇಶಭಕ್ತಳೆಂಬುವುದರಲ್ಲಿ ಸಂದೇಹವಿಲ್ಲ. ಏನೂ ಮಾಡಲಾಗದಂತಹ ಹತಾಶೆಯ ಸ್ಥಿತಿಯಲ್ಲಿ ಕೆಲವರು ಹಿಂಸೆಯ ಮಾರ್ಗವನ್ನು ಅನುಸರಿಸುತ್ತಾರೆ. ಎಲ್ಲದಕ್ಕೂ ಹಿಂಸೆಯೇ ಸರಿಯಾದ ಮಾರ್ಗವಲ್ಲ. ನಾನು ಪಟ್‌ವಾರಿಯವರ ಎಲ್ಲಾ ಶರತ್ತುಗಳನ್ನು ಒಪ್ಪಿಕೊಂಡಿದ್ದೇನೆ. ಈ ಕ್ಷಣದಿಂದಲೇ ಬಂಡೇರಹಳ್ಳಿಯ ಇನ್ಸ್‌ಪೆಕ್ಟರನ್ನು ಸಸ್ಪೆಂಡ್ ಮಾಡುತ್ತಾ ಆ ಸ್ಥಾನಕ್ಕೆ ಮತ್ತೆ ಇನ್ಸ್‌ಪೆಕ್ಟರ್‌ ತೇಜಾನನ್ನು ಹಾಕಬೇಕೆಂಬ ಆಜ್ಞೆ ಕೊಟ್ಟಿದ್ದೇನೆ. ನಾನು ನಿಮ್ಮಲ್ಲಿಂದು ಬಯಸುವುದಿಷ್ಟೆ, ಹಿಂಸೆಯ ಮಾರ್ಗವನ್ನು ಬಿಡಿ. ಈಗ ಕಲ್ಯಾಣಿಯ ನೇತೃತ್ವದಲ್ಲಿ ಸಮಾಜಕ್ಕೆ ಉಪಕಾರವಾಗುವಂತಹ ಕೆಲಸ ಮಾಡಿ. ಪ್ರತಿ ಒಳ್ಳೆಯ ಕೆಲಸಕ್ಕೆ ಸರಕಾರದ ಸಹಾಯವಿರುತ್ತದೆ. ಇದು ನಿಮ್ಮದೇ ಜಯ” ಎಂದವರು ಭಾಷಣ ಮುಗಿಸಿದಾಗ ಕರತಡಾನ ಶಬ್ದದೊಡನೆ ಅವರ ಜಯ ಜಯಕಾರದ ಕೂಗುಗಳು ನಿರಂತರವಾಗಿ ಹೊರಬರತೊಡಗಿದ್ದವು.

ಸಿ.ಎಂ. ಸಾಹೇಬರು ಹೊರಟು ಹೋಗುತ್ತಿದ್ದಂತೆ ಜನ ಸಂದಣಿಯ ನಡುವಿನಿಂದ ಹರಿ, ಶಂಕರ, ಮಲ್ಲಪ್ಪ, ಸಾಯಿ ಮತ್ತು ನಾಗೇಶ ಬಂದರು. ಅವರಿಗೆ ಆ ಉತ್ಸವದಲ್ಲೆಲ್ಲಾ ಆಸಕ್ತಿ ಇರಲಿಲ್ಲ. ಮೊದಲು ಕಲ್ಲಕ್ಕ ಮತ್ತು ಕೂಸನ್ನು ನೋಡುವ ಆಸೆ. ಸ್ಕ್ವಾಡಿನ ಮುಖ್ಯಸ್ಥರಿಗೆ ಅವರೇ ಕಲ್ಯಾಣಿಯ ದಳದವರೆಂದು ತಾಯಿಮಗುವನ್ನು ನೋಡಿದ ಮೇಲೆ ಎಲ್ಲರೂ ಅವರ ಕಾಡಿನಲ್ಲಿನ ವಾಸಸ್ಥಳಕ್ಕೆ ಹೋಗಿ ಅವರ ಬಳಿ ಇರುವ ಎಲ್ಲಾ ಮಾರಕ ಆಯುಧಗಳನ್ನು ವಶಪಡಿಸಿಕೊಳ್ಳೋಣವೆಂದು ಹೇಳಿದ.

ನಾಲೈದು ಜನ ಹೆಂಗಸರು ಒಳಬಂದು ಕಲ್ಯಾಣಿಯನ್ನು ಮಗುವನ್ನು ಕೊಡುವ ಕೋಣೆಗೇ ರವಾನಿಸುವ ಕೆಲಸ ನಿಷ್ಠೆಯಿಂದ ಮಾಡಿದರು. ಹೊರಗೆ ಜನ ಅವಳನ್ನು ಮಗುವನ್ನು ನೋಡಲು ಸಾಲುಗಟ್ಟಿ ನಿಂತರು.

ಮಗುವಿಗೆ ಹಗುರವಾಗಿ ಮುದ್ದಿಸಿದ ಹರಿ ಮೆಲ್ಲನೆ ಹೇಳಿದ

“ಭಗತಸಿಂಗ್ ಕೀ ಜೈ”

ಅವರನ್ನೆಲ್ಲಾ ನೋಡಿ, ಕಲ್ಯಾಣಿಯ ಕಡೆ ನೋಟ ತಿರುಗಿಸಿ ಹೇಳಿದ ತೇಜಾ.

“ನನಗೀಗ ಐವರು ಭಾವ ಮೈದಿನಂದಿರು”

ಹೆಮ್ಮೆಯಿಂದ ಮುಗುಳ್ನಕ್ಕಳು ಕಲ್ಯಾಣಿ
* * *

ಹೀಗೆ ಆಗುತ್ತದೆಯೇ?

ಆಗಬೇಕೇ?

ಕಲ್ಯಾಣಿಯಂತಹವರು ಹುಟ್ಟಬೇಕೆ?

ನನಗೆ ಗೊತ್ತಿಲ್ಲ.

ಏನೇ ಆಗಲಿ “ಭಾರತ್ ಮಾತಾ ಕೀ ಜೈ”
*****
ಮುಗಿಯಿತು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ವ್ಯತ್ಯಾಸ
Next post ಚೆಲುವಿನ ಗುಲಾಬಿ ಎಂದೂ ತೀರದಿರಲೆಂದೆ

ಸಣ್ಣ ಕತೆ

  • ಬಿರುಕು

    ಚಂಪಾ ಹಾಲು ತುಂಬಿದ ಲೋಟ ಕೈಯಲ್ಲಿ ಹಿಡಿದು ಒಳಗೆ ಬಂದಳು. ಎಂದಿನಂತೆ ಮೇಜಿನ ಮೇಲಿಟ್ಟು ಮಾತಿಲ್ಲದೆ ಹೊರಟು ಹೋಗುತ್ತಿದ್ದ ಅವಳು ಹೊರಡುವ ಸೂಚನೆಯನ್ನೇ ತೋರದಿದ್ದಾಗ ಮೂರ್‍ತಿ ಬೆಚ್ಚಿ… Read more…

  • ಯಿದು ನಿಜದಿ ಕತೀ…

    ಯೀ ಕತೀನ ನಾ... ಯೀಗಾಗ್ಲೇ, ಬರ್ಲೇಬೇಕಾಗಿತ್ತು! ಆದ್ರೆ ನಾ ಯೀತನ್ಕ...  ಯಾಕೆ ಬರ್ಲೀಲ್ಲ? ನನ್ಗೇ ಗೊತ್ತಿಲ್ಲ. ಯಿದು ನಡೆದಿದ್ದು... ೧೯೬೬ರಲ್ಲಿ. ‘ವುಗಾದಿ ಮುಂದೆ ತಗಾದಿ...’ ಅಂಬಂಗೆ,  ವುಗಾದಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಮೋಟರ ಮಹಮ್ಮದ

    ನಮ್ಮಂತಹ ಈಗಿನ ಜನಗಳಿಗೆ ಹೊಲ, ಮನೆ, ಪೂರ್ವಾರ್ಜಿತ ಆಸ್ತಿ ಪಾಸ್ತಿಗಳಲ್ಲಿ ಹೆಚ್ಚು ಆದರವಿಲ್ಲೆಂದು ನಮ್ಮ ಹಿರಿಯರು ಮೇಲಿಂದ ಮೇಲೆ ಏನನ್ನೋ ಒಟಗುಟ್ಟುತ್ತಿರುತ್ತಾರೆ. ನಾವಾದರೋ ಹಳ್ಳಿಯನ್ನು ಕಾಣದೆ ಎಷ್ಟೋ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…