ಚಿತ್ರ: ರೂಬೆನ್ ಲಗಾಡಾನ್

ಎಲ್.ಐ.ಸಿ. ಹಣ ಆರು ಲಕ್ಷ ಬರಬಹುದೆಂದು ಅಂದಾಜು ಸಿಕ್ಕಿತು. ಬ್ಯಾಂಕ್ ಮ್ಯಾನೇಜರ್ ಇನ್ನೂ ರಜೆಯಲ್ಲಿಯೇ ಇದ್ದರೂ, ಇನ್‌ಚಾರ್ಜ್ ಸಿಬ್ಬಂದಿಯಿಂದ ತೋಟದ ಮೇಲಿರುವ ಸಾಲ ೨೪ ಲಕ್ಷ, ಬಡ್ಡಿಯೇ ಕಟ್ಟಿಲ್ಲವಾದ್ದರಿಂದ ಅಸಲು ಬಡ್ಡಿ ಸೇರಿ ಅಷ್ಟು ಹಣ ಬೆಳೆದಿದೆ ಎಂದು ತಿಳಿದುಬಂತು.

ಎಲ್.ಐ.ಸಿ.ಯ ಆರು ಲಕ್ಷ ಸಾಲಕ್ಕೆ ಕಟ್ಟಿದರೂ ಇನ್ನೂ ೧೮ ಲಕ್ಷ ಉಳಿಯುತ್ತದೆ. ವರ್ಷಾ ವರ್ಷಾ ಬಡ್ಡಿಯೇ ಸಾಕಷ್ಟು ಕಟ್ಟಬೇಕಾಗುತ್ತದೆ. ಸಾಲ ತೀರಿಸುವ ಹಾದಿ ಯಾವುದು ಅಂತ ಅಮ್ಮ ಮಗಳು ಕುಳಿತು ಚರ್ಚೆ ನಡೆಸಿದರು.

ಆಗ ಇಳಾ ಮೆಲ್ಲಗೆ ವಿನಾಯಕ ಹೇಳಿದ್ದನ್ನು ಬಾಯಿಬಿಟ್ಟಳು. ಒಳ್ಳೆ ರೇಟು ಬಂದ್ರೆ ರೆಸಾರ್ಟ್ಗೆ ಖಾಲಿ ಪ್ಲಾಟನ್ನು ಕೊಟ್ಟುಬಿಟ್ಟರೆ ನಮ್ಮ ಸಾಲ ತೀರುತ್ತದೆ. ಅಲ್ಪ ಸ್ವಲ್ಪ ಉಳಿದರೂ ಮುಂದೆ ಬೆಳೆ ಮಾರಿ ತೀರಿಸಬಹುದು ಅಂತ ಸಲಹೆ ನೀಡಿದಳು. ನೀಲಾ ಬಿಲ್ಕುಲ್ ಒಪ್ಪಲಿಲ್ಲ. ಮೋಹನ ಇರುವಾಗಲೇ ಈ ಪ್ರಸ್ತಾಪ ಬಂದಿತ್ತು. ಇಲ್ಲಿ ರೆಸಾರ್ಟ್ ಮಾಡಿ ಕುಲಕರ್ಮ ಏಳಿಸುವುದು ಬೇಡಾ ಅಂತ ವಿರೋಧಿಸಿದ್ದರು. ಈಗ ಅವರಿಲ್ಲ ಅಂತ ಮಾರಿದರೆ ಅವರ ಆತ್ಮ ನೊಂದುಕೊಳ್ಳುವುದಿಲ್ಲವೆ? ಮೋಹನ ಆದರ್ಶವಾಗಿಯೇ ಬದುಕಿದ್ದೋರು. ಈಗ ಅವರು ಸತ್ತ ಮೇಲೆ ಮಗಳೇ ಅಪ್ಪನ ಆದರ್ಶದ ವಿರುದ್ಧ ನಡಿತಾ ಇದ್ದಾಳೆ ಅಂತ ಅಪವಾದ ಹೊರೋದು ಬೇಡಾ, ಸಾಲ ತೀರಿಸೋಕೆ ಅರ್ಧ ತೋಟಾನಾ ಮಾರಿಬಿಡೋಣ. ನಾವು ತಾನೇ ಅಷ್ಟೆಲ್ಲ ಮಾಡೋಕೆ ಕಷ್ಟವಾಗುತ್ತದೆ. ಮುಂದೆ ನಿನ್ನ ಮದ್ವೆ ಆಗೋನಿಗೆ ಈ ಆಸ್ತಿಲೀ ಆಸಕ್ತಿ ಇರುತ್ತೊ ಬಿಡುತ್ತೊ ಆಮೇಲಾದ್ರೂ ಮಾರಲೇಬೇಕಲ್ಲ ನೀಲಾ ಹೇಳಿದ್ದನ್ನು ಇಳಾ ಸುತಾರಂ ಒಪ್ಪಲಿಲ್ಲ. ಫಸಲು ಕೊಡುತ್ತಿರುವ ಅಪ್ಪನ ಶ್ರಮದ ಪ್ರತಿಫಲವಾಗಿ ನಿಂತಿರೋ ತೋಟದ ಯಾವ ಭಾಗವೂ ಮಾರೋದು ಬೇಡ. ಒಂದೊಂದು ಗಿಡದಲ್ಲಿಯೂ ಅಪ್ಪನ ಶ್ರಮ ಇದೆ. ನೆನಪು ಇದೆ, ಕನಸು ಇದೆ, ಆ ಕನಸುಗಳನ್ನು ಮಾರುವುದು ಬೇಡವೇ ಬೇಡ ಅಂತ ಪಟ್ಟು ಹಿಡಿದಳು.

‘ಅಮ್ಮ ರೆಸಾರ್ಟ್ ಅಂದ್ರೆ ತಪ್ಪು ತಿಳಿಯೋದು ಬೇಡ ಕಣಮ್ಮ. ಎಲ್ಲಾ ರೆಸಾರ್ಟುಗಳಲ್ಲಿ ಕೆಟ್ಟ ಕೆಲಸ ನಡೀತಾವೆ ಅಂತ ಯಾಕೆ ಅಪಾರ್ಥ ಮಾಡಿಕೊಂಡಿದ್ದೀಯಾ. ರೆಸಾರ್ಟ್‌ಗಳು ಪ್ಯಾಮಿಲಿಗಳು ವೀಕ್ ಎಂಡ್‌ಗೆ ಬಂದು ರಿಲ್ಯಾಕ್ಸ್ ಆಗೋ ಸ್ಥಳಗಳಾಗಿವೆ. ರೆಸಾರ್ಟ್‌ನಲ್ಲಿ ಕಾಟೇಜುಗಳಿರುತ್ತವೆ, ಸಂಪ್ರದಾಯದ ಊಟ ತಿಂಡಿಗಳಿರುತ್ತವೆ. ಕೃತಕ ತೊರೆ, ಜಲಪಾತ ಮಾಡಿ ಪ್ರಕೃತಿ ಸವಿಯಲು ಅನುವು ಮಾಡಿಕೊಡುತ್ತಾರೆ. ಸಂಸಾರ, ಮಕ್ಕಳು ಸಮೇತ ಬಂದು ಮಲೆನಾಡಿನ ಪ್ರಕೃತಿಯಲ್ಲಿ ನಲಿದು ಕುಣಿದು ಹೋಗುವ ಅವಕಾಶವಿರುತ್ತದೆ. ಎಲ್ಲಾ ವಿಚಾರಿಸಿಯೇ ಕೊಡೋಣ. ಮೊದಲು ವಿನಾಯಕ ಫ್ರೆಂಡ್‌ನ ಕರ್ಕೊಂಡು ಬರಲಿ, ಮಾತಾಡೋಣ, ಇಷ್ಟ ಆಗದೆ ಇದ್ರೆ ಬೇಡ ಅನ್ನೋಣ, ಒಂದು ಒಳ್ಳೆ ಅವಕಾಶಾನ ಯಾಕೆ ಸುಮ್ನೆ ಬಿಟ್ಟುಕೊಡೋದು’ ಮಗಳು ಅಮ್ಮನ ಮನ ಒಲಿಸಲು ಪ್ರಯತ್ನಿಸಿದಳು.

‘ನಾನೇನೋ ನಿನ್ನ ಬಲವಂತಕ್ಕೆ ಒಪ್ಪಬಹುದು, ಆದ್ರೆ ನಿಮ್ಮ ದೊಡ್ಡಪ್ಪ ಸುಮ್ನೆ ಇರ್ತಾರಾ, ಅವರು ಒಪ್ಪಲ್ಲ ಬಿಡು’ ಅನುಮಾನಿಸಿದಳು.

‘ದೊಡ್ಡಪ್ಪ ಒಪ್ಪಿದ್ರೆ ಸಂತೋಷ, ಇಲ್ಲದೆ ಇದ್ರೆ ನಮ್ಮ ಬದುಕು ನಮ್ಮದು, ನಮ್ಮ ಸಾಲ ತೀರಿಸೋಕೆ ಯಾರು ಬರಲ್ಲ. ಹಾಗೆ ಬರೋರಿದ್ರೆ ಅಪ್ಪ ಸಾಯ್ತ ಇರಲಿಲ್ಲ, ಇದನ್ನ ನೆನಪಿಟ್ಟುಕೋ’ ನಿಷ್ಟುರವಾಗಿ ಹೇಳಿದಾಗ ನೀಲಾ ಅವಕ್ಕಾದಳು. ಇವಳು ಇಳಾನೇನಾ, ನಾನು ಬೆಳೆಸಿದ ಇಳಾನಾ, ಈ ಧೈರ್ಯ, ಈ ಮಾತು, ಈ ಜವಾಬ್ದಾರಿ ಅದೆಲ್ಲಿಂದ ಬಂತು? ಈ ಸಣ್ಣ ವಯಸ್ಸಿನಲ್ಲಿ ನಿರ್ಧಾರ ಕೈಗೊಳ್ಳುವ ಶಕ್ತಿ ಇವಳಿಗಿದೆಯಾ? ಜಿಜ್ಞಾಸೆಗೊಳಗಾದಳು. ಮಗಳ ಮಾತನ್ನು ಒಪ್ಪದೇ ಇರದಾದಳು. ಆದರೆ ತಮ್ಮೆಲ್ಲ ಕಷ್ಟ-ಸುಖಗಳಲ್ಲಿ ಭಾಗಿಯಾಗುವ, ಮನೆಯ ಆಗುಹೋಗುಗಳ ಬಗ್ಗೆ ಕಾಳಜಿ ಇರುವ ಭಾವನನ್ನು ಎದುರು ಹಾಕಿಕೊಂಡು ಪ್ಲಾಟ್ ಮಾರುವ ಧೈರ್ಯ ತೋರದಾದಳು ನೀಲಾ. ನೋಡೋಣ ಇರು ಅಂತ ಸಧ್ಯಕ್ಕೆ ಆ ಪ್ರಸ್ತಾಪವನ್ನು ಮುಂದೆ ಹಾಕಿದಳು.

ಆದರೆ ಅದು ಮುಂದೆ ಹೋಗದೆ, ಮಾರನೇ ದಿನವೇ ವಿನಾಯಕನ ರೂಪದಲ್ಲಿ ಪ್ರತ್ಯಕ್ಷವಾಗಿತ್ತು. ತನ್ನ ಗೆಳೆಯನನ್ನು ಜೊತೆಯಲ್ಲಿಯೇ ಕರೆದುಕೊಂಡು ಇಳಾಳ ಮನೆಗೆ ಬಂದುಬಿಟ್ಟ. ಯಾರಪ್ಪ ಇಷ್ಟು ಬೆಳ ಬೆಳಗ್ಗೆಯೇ ಕಾರಿನಲ್ಲಿ ಬಂದೋರು ಅಂತ ಇಳಾ ಹೊರ ಬಂದು ನೋಡಿದರೆ ವಿನಾಯಕ ಕಾರಿನಿಂದಿಳಿಯುತ್ತಿದ್ದ. ಕ್ಷಣ ಮುಖ ಸಿಂಡರಿಸಿದರೂ, ನಗು ತಂದುಕೊಳ್ಳುತ್ತ ‘ಬನ್ನಿ ಒಳಗೆ’ ಅಂತ ಸ್ವಾಗತಿಸಿ ‘ಅಮ್ಮಾ ನೋಡು ಯಾರು ಬಂದಿದ್ದಾರೆ’ ಅಂತ ಕೂಗು ಹಾಕಿದಳು.

ನೀಲಾ ಹೊರ ಬರುವಷ್ಟರಲ್ಲಿ ವಿನಾಯಕ ಗೆಳಯನೊಟ್ಟಿಗೆ ಒಳಬಂದು ಸೋಫಾದ ಮೇಲೆ ಕೂತಾಗಿತ್ತು.

‘ನಮಸ್ಕಾರ ಅಕ್ಕ, ಅಣ್ಣ ಇದ್ದಾಗಲೇ ಒಂದು ಸಲ ಬಂದಿದ್ದೆ, ಆಗ ಅಣ್ಣ ಬೇಡಾ ಅಂದಿದ್ರು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಇಳಾ ಹತ್ರ ಮಾತಾಡಿದ್ದೆ. ಆದಕ್ಕೆ ನನ್ನ ಫ್ರೆಂಡ್ನ ಕರ್ಕೊಂಡು ಬಂದಿದೀನಿ ಇವ್ರು ನನ್ನ ಫ್ರೆಂಡ್ ವಿಸ್ಮಯ್ ಅಂತ ಬೆಂಗಳೂರಿನವರು. ಅಲ್ಲಿ ಇವರಿಗೆ ಹೋಟೆಲ್ ಬಿಸಿನೆಸ್ ಇದೆ, ಪ್ರಕೃತಿ ಕಂಡ್ರೆ ತುಂಬಾ ಇಷ್ಟ. ಬೆಂಗಳೂರಿನಂತ ಬಿಸಿ ಪ್ಲೇಸ್‌ನಲ್ಲಿರೋದು ಕಷ್ಟ. ಅದಕ್ಕೆ ತಂಪಾದ ಈ ಮಲೆನಾಡಿನಲ್ಲಿರೋಣ ಅಂತ ಬಯಸ್ತ ಇದ್ದಾರೆ.’ ವಿಸ್ಮಯನ ಪರಿಚಯಿಸಿ ಬಂದ ಉದ್ದೇಶ ತಿಳಿಸಿದ ವಿನಾಯಕ.

ಅಮ್ಮ ಮಗಳಿಬ್ಬರೂ ಮುಖ ಮುಖ ನೋಡಿಕೊಂಡರು. ನಗುವ ಪ್ರಯತ್ನ ಮಾಡುತ್ತ ‘ನಮಸ್ಕಾರ, ನಾವಿನ್ನು ಆ ಬಗ್ಗೆ ಮಾತಾಡಿಕೊಂಡಿಲ್ಲ. ನಾವು ನಾವು ತೀರ್ಮಾನ ತಗೊಳ್ಳೋಕೆ ಆಗಲ್ಲ, ಹಿರಿಯರಿದ್ದಾರೆ ಅವರನ್ನು ಒಂದು ಮಾತು ಕೇಳಬೇಕು, ಸ್ವಲ್ಪ ದಿನ ಟೈಂ ಕೊಡಿ’ ನೀಲಾ ಉತ್ತರಿಸಿದಳು.

‘ನಿಧಾನಕ್ಕೆ ಯೋಚ್ನೆ ಮಾಡ್ತ ಇರೋಕೆ ಇವರಿಗೆ ಟೈಂ ಇಲ್ಲ ಅಕ್ಕ, ಇಲ್ಲಿ ಸಿಗದೆ ಇದ್ರೆ ಇವರು ಬೇರೆ ಕಡೆ ಕೊಂಡುಕೊಳ್ಳುತ್ತಾರೆ. ನಿಮ್ಮ ಜಾಗದ ಪಕ್ಕದೋರು ಮಾರೋಕೆ ರೆಡಿ ಇದ್ದಾರೆ, ನೀವು ಒಪ್ಪಿಕೊಂಡ್ರೆ ಬೇಗ ನಿರ್ಧಾರಕ್ಕೆ ಬರಬಹುದು, ನಿಮ್ಗೂ ಕಷ್ಟ ಇದೆ, ಈ ಅವಕಾಶ ಬಿಟ್ರೆ ಮತ್ತೆ ಈ ಅವಕಾಶ ಸಿಗಲ್ಲ. ಅಷ್ಟೊಂದು ರೇಟು ಕೊಟ್ಟು ಯಾರೂ ಈ ಕೊಂಪೆಗೆ ಬಂದು ಕೊಳ್ಳಲ್ಲ. ಈ ಅವಕಾಶನ ನಿಧಾನ ಮಾಡಿ ಕಳ್ಕೊಬೇಡಿ’ ವಿನಾಯಕ ಮನಸ್ಸಿಗೆ ನಾಟುವಂತೆ ತಿಳಿಸಿದ.

‘ನೀವ್ಯಾಕೆ ಹಿಂದೆ ಮುಂದೆ ನೋಡ್ತಾ ಇದ್ದೀರಾ ಅಂತ ನಂಗೆ ಅರ್ಥವಾಗುತ್ತೆ ಮೇಡಂ, ನಾವು ಮಾಡೋ ರೆಸಾರ್ಟ್ನಲ್ಲಿ ಯಾವುದೇ ಕಾನೂನು ಬಾಹಿರ ಚಟುವಟಿಕೆ ನಡೆಸೊಲ್ಲ ಅಂತ ಬಾಂಡ್ ಪೇಪರ್ ಮೇಲೆ ಬರೆದುಕೊಡ್ತೀನಿ. ನಾನ್ಯಾಕೆ ಇಷ್ಟೊಂದು ಒತ್ತಾಯ ಮಾಡ್ತ ಇದ್ದೀನಿ ಅಂದ್ರೆ. ಇಲ್ಲಿ ಹಳ್ಳ ಹರೀತಾ ಇದೆ, ಸಿಟಿಗೂ ದೂರ ಆಗಲ್ಲ. ಒಂದೇ ಕಡೆ ದೊಡ್ಡ ಪ್ಲಾಟ್ ಸಿಗ್ತಾ ಇದೆ, ಜೊತೆಗೆ ನನಗೆ ಎಲ್ಲಾ ಸಹಕಾರ ಕೊಡೋಕೆ ವಿನಾಯಕ ಇಲ್ಲೇ ಇರ್ತಾರೆ. ಅದಕ್ಕೆ ಇದೇ ಜಾಗನ ನಾನು ಇಷ್ಟಪಡ್ತ ಇದ್ದೀನಿ. ನೀವು ಒಪ್ಪಿಕೊಂಡರೆ ಅಡ್ವಾನ್ಸ್ ಕೊಟ್ಟು ಹೋಗುತ್ತೇನೆ, ಇಲ್ಲಿ ನಡಿತಾಯಿರೋ ರೇಟ್‌ಗಿಂತ ಹೆಚ್ಚು ಕೊಡ್ತೀವಿ, ಎಕರೆಗೆ ೨ ಲಕ್ಷ ಇದೆ, ನಾನು ೩ ಲಕ್ಷ ಕೊಡ್ತೀನಿ. ೪ ಎಕರೆಗೆ ೧೨ ಲಕ್ಷ ಕೊಡ್ತೀವಿ’ ವಿಸ್ಮಯ್ ಹೇಳಿದಾಗ ತಮ್ಮ ಖಾಲಿಜಾಗ ಅಷ್ಟೊಂದು ಬೆಲೆ ಬಾಳುತ್ತದೆಯೇ ಅಂತ ಆಶ್ಚರ್ಯವಾಯ್ತು ನೀಲಾಗೆ. ಯಾವುದಕ್ಕೂ ಇನ್ನೆರಡು ದಿನ ಬಿಟ್ಟು ನಮ್ಮ ನಿರ್ಧಾರ ತಿಳಿಸುತ್ತೇವೆ ಅಂತ ಹೇಳಿ ಅವರನ್ನು ಕಳುಹಿಸಿಕೊಟ್ಟಳು. ಇಳಾ ಮೌನವಾಗಿಯೇ ಇದ್ದಳು. ಮಗಳಿಗೆ ಅಸಮಾಧಾನವಾಗಿದೆ ಅಂತ ಗೊತ್ತಾದರೂ ಅದನ್ನು ಕೆದಕಲು ಹೋಗದೆ ಸುಮ್ಮನಿದ್ದುಬಿಟ್ಟಳು.

ಇಳಾಳ ತಾಯಿ ನೀಲಾ ಇಡೀ ರಾತ್ರಿ ಯೋಚಿಸಿದಳು. ಆದರ್ಶದ ಬೆನ್ನು ಹತ್ತಿದ ಗಂಡನಿಗೆ ಸಿಕ್ಕಿದ್ದೇನು? ಅವನನ್ನೇ ನಂಬಿದ ನಮಗೆ ಈಗ ಸಿಗುತ್ತಿರುವುದೇನು, ಆದರ್ಶ ಹೊಟ್ಟೆ ತುಂಬಿಸಿ ಬದುಕು ನೀಡಲಾರದು. ಅಷ್ಟಕ್ಕೂ ಅವರೇನು ಅಲ್ಲಿ ಮಾಡಬಾರದ್ದೇನು ಮಾಡಲಾರರು. ನಾವು ಮನಸ್ಸು ಮಾಡಿ ಜಾಗ ಕೊಟ್ಟರೆ ಅಲ್ಲೊಂದು ಪ್ರೇಕ್ಷಣಿಯ ಸ್ಥಳವಾಗುತ್ತದೆ. ಟಿ.ವಿ.ಗಳಲ್ಲಿ ನಾನು ನೋಡಿಲ್ಲವೇ… ರೆಸಾರ್ಟ್‌ಗಳು ಹೇಗಿರುತ್ತವೆ ಎಂದು. ನಾವು ಕೊಟ್ಟ ಮೇಲೆ ಏನಾದರೂ ಮಾಡಿಕೊಳ್ಳಲಿ, ಸಧ್ಯಕ್ಕೆ ನಮ್ಮ ಸಮಸ್ಯೆ ಪರಿಹಾರವಾಗುತ್ತದೆ. ತೋಟದ ಮೇಲಿನ ಸಾಲ ಅರ್ಧದಷ್ಟು ತೀರುತ್ತದೆ, ಮುಂದೆಯಾದರೂ ನೆಮ್ಮದಿಯಿಂದ ಬದುಕಬಹುದು. ಮಗಳ ಇಚ್ಛೆಯೂ ಅದೇ ಆಗಿರುವಾಗ ಅವಳಿಗ್ಯಾಕೆ ಬೇಸರವುಂಟು ಮಾಡಬೇಕು- ಜಮೀನು ಮಾರಲು ನಿರ್ಧರಿಸಿದ್ದಳು ನೀಲಾ.

ನೀಲಾ ಬೆಳಿಗ್ಗೆಯೇ ಭಾವ ಸುಂದರೇಶ್‌ಗೆ ಫೋನ್ ಮಾಡಿ ಬರಲು ಹೇಳಿದಳು. ಮಗಳಿಗೂ ತಾನು ರಾತ್ರಿ ನಿರ್ಧಾರ ಮಾಡಿದ್ದನ್ನು ತಿಳಿಸಿದಳು. ಇಳಾಳಿಗಂತೂ ತುಂಬಾ ಸಂತೋಷವಾಗಿತ್ತು. ತಮ್ಮ ಸಮಸ್ಯೆಗಳನ್ನು ಬಗೆಹರಿಸಿ ತಾವೊಂದು ಬದುಕು ಕಂಡುಕೊಳ್ಳುವಂತಾಗುವ ಸಮಯ ಹತ್ತಿರವಾಗಿದೆ. ಹೇಗೋ ಬದುಕಿನ ಬಂಡಿ ಮುಂದೆ ಉರುಳುವಂತಾಗಲಿ ಎಂದು ಆಶಿಸಿದಳು. ಆದರೂ ಒಂದು ಸಂದೇಹ ಕಾಡುತ್ತಿತ್ತು. ಅಮ್ಮ ಏನೋ ಕಷ್ಟದಲ್ಲಿ ಒಪ್ಪಿದ್ದಾಳೆ, ಆದರೆ ದೊಡ್ಡಪ್ಪ ಎಲ್ಲಿ ಬೇಡವೆಂದು ತಮ್ಮನ್ನು ಮತ್ತೆ ಸಮಸ್ಯೆಗಳ ಸುಳಿಯಲ್ಲಿ ಸಿಕ್ಕಿಸಿಬಿಡುತ್ತಾರೊ ಅನ್ನೋ ಆತಂಕ ಕಾಡುತ್ತಲೇ ಇತ್ತು.

ಸುಂದರೇಶ್ ಬಂದಾಗ ಈ ವಿಚಾರವನ್ನು ಹೇಗೆ ಹೇಳುವುದು ಎಂದು ನೀಲಾ ತಳಮಳಿಸಿದಳು. ತಾವು ರೆಸಾರ್ಟ್ಗೆ ಜಮೀನು ಮಾರುವ ವಿಚಾರ ಹೇಳಲು ಬಾಯಿ ಬರದೆ ನೀಲಾ ಸುಮ್ಮನೆ ಕುಳಿತುಬಿಟ್ಟಳು. ಅಮ್ಮನ ಕಷ್ಟ ನೋಡಲಾರದೆ ಇಳಾ ಪರಿಸ್ಥಿತಿ ನಿಭಾಯಿಸುವ ಜವಾಬ್ದಾರಿ ಕೈಗೆತ್ತಿಕೊಂಡು ದೊಡ್ಡಪ್ಪನ ಮುಂದೆ ಜಾಣ್ಮೆಯಿಂದ ವಿಷಯ ಇಟ್ಟಳು.

‘ದೊಡ್ಡಪ್ಪ ಬ್ಯಾಂಕಿನಲ್ಲಿ ಲೋನ್ ಬಗ್ಗೆ ವಿಚಾರಿಸಿದೆ, ಬಡ್ಡಿ-ಅಸಲು ಎಲ್ಲಾ ಸೇರಿ ಇಪ್ಪತ್ತನಾಲ್ಕು ಲಕ್ಷ ಇದೆಯಂತೆ, ಬಡ್ಡಿ ಕಟ್ಟದೆ ಅಷ್ಟಾಗಿದೆ ಅಂತ ಹೇಳಿದ್ರು ಬ್ಯಾಂಕಿನವರು.’

‘ಬರೀ ಬ್ಯಾಂಕಿನದ್ದೆ ಇಪ್ಪತ್ತನಾಲ್ಕು ಲಕ್ಷ ಇದೆ, ಫೈನಾನ್ಸ್‌‌ನಲ್ಲಿ ಬೇರೆ ತಗೊಂಡಿದ್ದಾನೆ ಕಣಮ್ಮ. ನಾನೇ ಜಾಮೀನು ಹಾಕಿದ್ದೀನಿ, ಅದೊಂದು ಐದು ಲಕ್ಷ ಆಗಿರಬೇಕು. ಅಷ್ಟೊಂದು ಹಣವನ್ನ ಯಾಕೆ ಸಾಲ ಮಾಡಿದ್ನೋ ಗೊತ್ತಿಲ್ಲ’. ಸುಂದರೇಶ್ ಮೊದಲ ಬಾರಿಗೆ ಹಣದ ವಿಚಾರ ಎತ್ತಿದರು.

ಫೈನಾನ್ಸ್‌ನಲ್ಲಿ ಸಾಲ ಮಾಡಿದ್ದು ನೀಲಾಗೆ ಗೊತ್ತೆ ಇರಲಿಲ್ಲ. ‘ಅಲ್ಲೂ ಮಾಡಿದ್ದರಾ ಭಾವ’ ಗಾಬರಿಯಾದಳು.

‘ಅಲ್ಲಿ ಬಡ್ಡಿ ಕಟ್ಟೋಕೆ ಅಂತಾನೇ ನಿನ್ನ ಲಾಕರ್‌ನಲ್ಲಿದ್ದ ಒಡವೆನಾ ಮಾರಿರೋದು. ಅದು ಸಾಲದು ಅಂತ ಕಾರನ್ನು ಮಾರಿ ಕಟ್ಟಿದ್ದಾನೆ. ಫೈನಾನ್ಸ್‍ನಲ್ಲಿ ಮನೆಹಾಳು ಬಡ್ಡೀ ವಸೂಲ್ಮಾಡ್ತಾರೆ, ಮನೆ ಮಠ ಮುಳುಗಿ ಹೋಗುತ್ತೆ ಅಂತ ಎಷ್ಟು ಹೇಳಿದ್ರೂ ಕೇಳದೆ, ಶುಂಠೀ ದುಡ್ಡು ಬಂದುಬಿಡುತ್ತೆ ಎರಡೇ ತಿಂಗಳು ತೀರಿಸಿಬಿಡ್ತೀನಿ ಅಂತ ನನ್ನ ಜಾಮೀನು ಹಾಕಿಸಿ ಸಾಲ ತಗೊಂಡ, ಶುಂಠಿ ಯಕ್ಕುಟ್ಟೋತ್ತಲ್ಲ. ಇವನೆಲ್ಲಿ ಸಾಲ ತೀರಿಸ್ತಾನೆ? ಬೇಡಾ ಅಂತ ಬಡ್ಕೊಂಡರೂ ಎರಡು ಎಕರೆಗೆ ಶುಂಠಿ ಹಾಕಿಸಿ ಹಾಳಾಗಿಬಿಟ್ಟ.’

ಅಷ್ಟರಲ್ಲಿ ಇಳಾ ಈ ಹೊಸ ಶಾಕಿನಿಂದ ಚೇತರಿಸಿಕೊಂಡು ‘ದೊಡ್ಡಪ್ಪ, ಇಷ್ಟೊಂದು ಸಾಲ ತೀರಿಸುವುದು ಹೇಗೆ? ಬ್ಯಾಂಕಿನದಿರಲಿ, ಫೈನಾನ್ಸ್‌ನವರು ಸುಮ್ನೆ ಬಿಡ್ತರಾ…’ ಆತಂಕಿಸಿದಳು.

‘ಅದೇ ಯೋಚ್ನೆ ಮಾಡ್ತ ಇದ್ದೆ ಕಣಮ್ಮ, ಏನು ಮಾಡುವುದು ಅಂತಾ, ಇಡೀ ಆಸ್ತಿ ಮಾರಬೇಕೆನೂ ಅವನ ಸಾಲ ತೀರಿಸೋಕೆ. ದಡ್ಡ ಕೆಲಸ ಮಾಡಿ ಹೋಗಿಬಿಟ್ಟ ಅವನು. ಈಗ ನೋಡು ಇರೋರು ಅನುಭವಿಸಬೇಕು. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕಿತ್ತು. ಸಾಲ ಸೋಲ ಮಾಡಿ ಶುಂಠಿ ಬೆಳೆಯೋಕೆ ಯಾಕೆ ಹೋಗಬೇಕಿತ್ತು. ನೀಲಾನಾದ್ರು ತಡೀಬಹುದಿತ್ತು.’

ನನ್ನ ಮಾತನ್ನು ಎಲ್ಲಿ ಕೇಳ್ತ ಇದ್ದರು ಭಾವ, ಅವರಿಗೆ ಹೇಗೆ ಮನಸ್ಸಿಗೆ ಬರುತ್ತೂ ಹಾಗೆ ಮಾಡ್ತ ಇದ್ದರು. ಶುಂಠಿ ಹಾಕಿದ ಮೇಲೆ ಅವರು ಮಾಡ್ತ ಇದ್ದ ಖರ್ಚು ನೋಡಿ ನಂಗೇ ಭಯ ಆಗ್ತ ಇತ್ತು. ಬೇರೆ ಊರುಗಳಿಂದ ಎರಡರಷ್ಟು, ಕೂಲಿ ಕೊಟ್ಟು ಆಳುಗಳನ್ನು ಕರೆಸೋದೇನು… ಅವರಿಗೆ ಹೆಂಡ-ಮಾಂಸ ಅಂತ ಕೊಟ್ಟಿದ್ದೇನು… ಅಂತು ದುಡ್ಡನ್ನ ನೀರಿನ ಹಾಗೆ ಹುಡಿ ಮಾಡಿಬಿಟ್ಟು, ನೀವೇನಾದತ್ತಿ ಮಾಡಿಕೊಳ್ಳಿ ಅಂತ ಹೋಗಿಬಿಟ್ಟರು.’ ನೀಲಾ ಹೇಳುತ್ತಿದ್ದರೆ ಇಳಾಗೆ ಅಪ್ಪನ ಮೇಲೆ ಕೋಪವುಕ್ಕಿ ಬರುತ್ತಿತ್ತು.

‘ಆಗಿದ್ದು ಆಗಿ ಹೋಯಿತು. ಈಗ ಎಷ್ಟು ಮಾತಾಡಿದ್ರೂ ಮೋಹನ ಎದ್ದು ಬರಲ್ಲ, ಸಾಲ ಇರೋದು ಹಾಗೂ ಅದನ್ನ ತೀರಿಸಬೇಕು ಅನ್ನುವುದಂತು ಸತ್ಯ, ಮುಂದೆ ಏನು ಅಂತ ಯೋಚ್ನೆ ಮಾಡಿದಿರಾ…’ ವ್ಯಥಿತರಾಗಿಯೇ ಹೇಳಿದರು ಸುಂದರೇಶ್.

‘ಹ್ಹೂ, ದೊಡ್ಡಪ್ಪ, ಸಾಲ ತೀರಿಸಬೇಕು ಅಂದ್ರೆ ಏನನ್ನಾದರೂ ಮಾರಲೇಬೇಕು. ಅಪ್ಪ ಕಷ್ಟಪಟ್ಟು ಬೆಳೆಸಿರೋ ತೋಟ ಮಾರೋಕೆ ನಂಗೆ ಇಷ್ಟ ಇಲ್ಲ. ಅದಕ್ಕೆ ನಮಗೆ ಬೇಡವಾಗಿರೊ, ಖಾಲಿ ಬಿದ್ದೀರೋ ಆ ಜಾಗನ ಮಾರೋಣ ಅಂತ ಅಂದ್ಕೊಂದ್ದೀವಿ. ಯಾರೊ ಬೆಂಗಳೂರಿನವರಂತೆ ತಗೊಳ್ತಿವಿ ಅಂತ ಬಂದಿದ್ದಾರೆ. ನಿಮ್ಮನ್ನ ಕೇಳಿ ಹೇಳ್ತಿವಿ ಅಂದಿದ್ದೀವಿ’ ನಿಧಾನವಾಗಿ ಹೇಳಿದಳು.

‘ಸರಿ ಮಾರಿಬಿಡಿ. ಮೊದ್ಲು ಫೈನಾನ್ಸ್‌ದು ತೀರಿಸಿಬಿಡಿ, ಮೋಹನ ಇದೇ ಕೆಲ್ಸ ಅವತ್ತು ಮಾಡಿದ್ರೆ ಅವನು ಉಳ್ಕಬಹುದಿತ್ತು. ಏನೇನು ಆಗಬೇಕು ಅದು ಆಗಿ ಹೋಗಲಿ, ತಪ್ಪಿಸೋಕೆ ನಾವು ಯಾರು’ ವೇದಾಂತಿಯಾದರು.

‘ದೊಡ್ಡಪ್ಪ ಫೋನ್ ಮಾಡಿ ಅವರಿಗೆ ಬರೋಕೆ ಹೇಳಲಾ? ನೀವೇ ಮಾತಾಡಿ ಬಿಡಿ’ ಎಂದಳು ಇಳಾ. ಇಷ್ಟು ಸುಲಭವಾಗಿ ದೊಡ್ಡಪ್ಪ ಒಪ್ಪಿದ್ದು ಆಶ್ಚರ್ಯವಾಗಿತ್ತು. ಅದರಲ್ಲೊಂದು ಸತ್ಯವೂ ಅವಳ ಮನಸ್ಸಿಗೆ ಗೋಚರಿಸಿತ್ತು. ಫೈನಾನ್ಸ್ ಹಣಕ್ಕೆ ಅಪ್ಪನಿಗೆ ದೊಡ್ಡಪ್ಪ ಜಾಮೀನು ಹಾಕಿರದಿದ್ದರೆ ಇಷ್ಟೊಂದು ಸಲೀಸಾಗಿ ಖಾಲಿ ಜಾಗವನ್ನು ರೆಸಾರ್ಟ್‌ಗೆ ಮಾರಲು ಒಪ್ಪುತ್ತಿರಲಿಲ್ಲ ಎಂಬುದು ಅವಳಿಗೆ ಅರಿವಾಗಿತ್ತು. ಹೇಗೊ ಕೆಲಸಕ್ಕೆ ಅಡ್ಡಿ ಬರಲಿಲ್ಲವೆಂದು ಖುಷಿಪಟ್ಟಳು.

ವಿನಾಯಕನಿಗೆ ಫೊನ್ ಮಾಡಿ ತಾವು ಜಾಗ ಮಾರಲು ಒಪ್ಪಿರುವುದಾಗಿ, ಈಗಲೇ ವಿಸ್ಮಯನನ್ನು ಕರೆದುಕೊಂಡು ಬಂದರೆ ದೊಡ್ಡಪ್ಪನೊಂದಿಗೆ ಮಾತಾಡಬಹುದು ಎಂದು ಹೇಳಿದಳು.

ಹತ್ತಿರದಲ್ಲಿಯೇ ಇದ್ದರು ಅಂತ ಕಾಣಿಸುತ್ತೆ. ಫೊನ್ ಮಾಡಿ ಕಾಲು ಗಂಟೆಯೊಳಗೆ ಮನೆಯ ಮುಂದೆ ಬಂದೇಬಿಟ್ಟರು. ಒಳಬರುತ್ತ ವಿನಾಯಕ. ‘ನಮಸ್ಕಾರ ಅಣ್ಣಾ, ಇವರು ನಮ್ಮ ಸ್ನೇಹಿತರು ಗೊತ್ತಿರಬೇಕಲ್ಲ’ ಎಂದ. ‘ಗೊತ್ತು ಗೊತ್ತು, ಹಿಂದೆ ಒಂದು ಸಲ ನಮ್ಮನೆಗೂ ಬಂದಿದ್ರಲ್ಲ, ಮೋಹನನ ಜೊತೆ ಮಾತಾಡೋಕೆ. ಅವತ್ತಿನ ಪರಿಸ್ಥಿತಿಗೂ ಇವತ್ತಿನ ಪರಿಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ನೋಡು, ಅವತ್ತು ನೀವಾಗಿಯೇ ಬಂದಿದ್ದರೂ ಒಪ್ಪಿರಲಿಲ್ಲ. ಈವತ್ತು ನಾವಾಗಿಯೇ ನಿಮ್ಮನ್ನ ಕರೆಸಿಕೊಳ್ಳುತ್ತ ಇದ್ದೇವೆ.’

‘ನಮ್ಮ ಕೈಲಿ ಏನಿರುತ್ತೆ ಸಾರ್, ಎಲ್ಲಾ ಹಣೆಯಲ್ಲಿ ಬರೆದಂತೆ ನಡಿಬೇಕು. ಅವತ್ತು ಬೇಡ ಅನ್ನಿಸಿದ್ದು ಇವತ್ತು ಬೇಕು ಅನ್ನೋ ಹಾಗೆ ಮಾಡಿಸುತ್ತೆ. ಇದನ್ನ ಅಲ್ಲವೇ ವಿಧಿ ಅನ್ನೋದು’ ಎಂದು ವಿಸ್ಮಯ ಕೂಡ ಸುಂದರೇಶರ ಧಾಟಿಯಲ್ಲಿಯೇ ಮಾತನಾಡಿದ. ‘ನೀವು ಹೇಳೋದು ಸರಿ, ವಿಧಿ ಬರಹ ಸರಿ ಇದ್ದಿದ್ರೆ ನಾವು ಹೀಗೆ ಕೂತು ಮಾತಾಡೋ ಪ್ರಸಂಗವೇ ಬರ್ತ ಇರ್ಲಿಲ್ಲ. ಸರಿ… ವ್ಯವಹಾರಕ್ಕೆ ಬರೋಣ, ಎಷ್ಟು ಹೇಳಿರಿ ನಿಮ್ಮ ರೇಟು?’ ‘ಮೇಡಂ ಹತ್ರ ಎಲ್ಲಾ ಮಾತಾಡಿದ್ದೀನಿ ಸಾರ್, ಇಲ್ಲಿ ಎರಡು ಲಕ್ಷ ಎಕರೆಗೆ ನಡಿತಾ ಇದೆ, ನಾನು ಮೂರು ಲಕ್ಷ ಕೊಡ್ತೀನಿ ಅಂತ ಹೇಳಿದ್ದೀನಿ’ ವಿನಯದಿಂದ ನುಡಿದ ವಿಸ್ಮಯ. ‘ಎರಡು ಲಕ್ಷ ನಡಿತಾ ಇದೆಯಾ? ಯಾವ ಕಾಲದಲ್ಲಿ ಇದ್ದೀರಾ ಆ ರೇಟು ಹೋಗಿ ಐದು ವರ್ಷವಾಯ್ತು. ಈಗ ಅರು ಲಕ್ಷ ನಡೀತಾ ಇದೆ ಎಕರೆಗೆ’ ರೇಟು ಹೆಚ್ಚಿಸಿದರು.

‘ಆರು ಲಕ್ಷನೇ, ಇಲ್ಲಾ ಬಿಡಿ, ಅಷ್ಟೆಲ್ಲಿದೆ ಈ ಜಾಗದಲ್ಲಿ, ರೋಡಿನಿಂದ ಎರಡು ಕಿ.ಲೋ. ಮೀಟರ್ ದೂರವೇ ಇದೆ, ಯಾರು ಕೊಡ್ತಾರೆ ಹೇಳಿ ಆರು ಲಕ್ಷ’ ಒಮ್ಮೆಲೇ ನಿರಾಕರಿಸಿದ.

‘ಹೌದು ಅಣ್ಣಾ, ಇವರ ಪಕ್ಕದ ಜಮೀನು ಮಾತಾಗಿದೆ ಅವರಿಗೂ ಅಷ್ಟೆ ಕೊಡೋದು’ ವಿನಾಯಕ ಮಧ್ಯೆ ಬಾಯಿ ಹಾಕಿದ.

‘ಯಾರು ಎಷ್ಟಕ್ಕಾದರೂ ಮಾತಾಡಿಕೊಂಡಿರಲಿ, ಅದೆಲ್ಲ ನಮ್ಗೆ ಬೇಡ. ಒಳ್ಳೆ ಜಾಗ, ಸಮತಟ್ಟಾಗಿದೆ, ಕಾಡು ಕಡಿದು ಹದ ಮಾಡಬೇಕಾಗಿಲ್ಲ. ಒಂದೇ ಕಡೇ ನಾಲ್ಕು ಎಕರೆ ಇದೆ, ನಿನ್ನು ಇಷ್ಟ ಇದ್ರೆತಗೊಳ್ಳಿ, ಇಲ್ಲದೆ ಇದ್ರೆ ಬಿಡಿ’ ಕಡ್ಡಿ ತುಂಡಾದಂತೆ ದೊಡ್ಡಪ್ಪ ಹೇಳಿದ್ದನ್ನು ಕೇಳಿ ಎಲ್ಲಿ ಜಮೀನು ಮಾರಾಟವಾಗದೆ ಉಳಿದುಬಿಡುತ್ತೇನೋ ಅಂತ ಇಳಾ ಆತಂಕಪಟ್ಟಳು.

ವಿಸ್ಮಯ, ವಿನಾಯಕ ಒಬ್ಬರ ಮುಖ ಒಬ್ಬರು ನೋಡಿಕೊಂಡರು. ಕ್ಷಣ ಅಲ್ಲಿ ಗಾಢ ಮೌನ, ಲಾಟೀನಿನ ಉರಿಯಂತೆ ಅತ್ತ ಇತ್ತ ಓಲಾಡಿತು. ಗಾಜಿನೊಳಗೆ ಉರಿಯುತ್ತಿದ್ದ ಜ್ವಾಲೆಯು ಬೀಸಿದ ಜೋರು ಗಾಳಿಯಿಂದ ರಕ್ಷಿಸಿಕೊಳ್ಳಲಾಗದ ಸಂಕಟದಿಂದ ಜೀವ ಬಿಗಿಹಿಡಿದು ಅತ್ತಿತ್ತ ಧಾವಿಸುವಂತೆ ಓಲಾಡಿದ ಉರಿ, ಗಾಜಿನ ರಕ್ಷಣೆಯೊಳಗೆ ಸುರಕ್ಷಿತ ಭಾವದಿಂದ ಹೆದರದೆ ಉರಿಯುತ್ತಿರುವಂತೆ ದೊಡ್ಡಪ್ಪನ ರೀತಿ ಇಳಾಗೆ ಅನ್ನಿಸತೊಡಗಿತು. ತಮ್ಮ ರೇಟಿಗೆ ಒಪ್ಪಲಾರರೇನೋ ಎಂಬ ಆತಂಕವಿದ್ದರೂ ತೋರಿಸಿಕೊಳ್ಳದೆ ಒಪ್ಪದೇ ಎಲ್ಲಿ ಹೋದಾರು ಎಂಬ ಭಾವದ ಸುರಕ್ಷತೆ ಅವರಲ್ಲಿ ಇದ್ದುದನ್ನು ಇಳಾ ಗಮನಿಸಿದಳು. ಆದರೂ ಅಂತಹ ಸುರಕ್ಷತಾ ಭಾವ ತನ್ನಲ್ಲಾಗಲಿ, ತಾಯಿಯಲ್ಲಾಗಲಿ ಕಾಣದೆ ಚಡಪಡಿಸಿದಳು. ಸಮಸ್ಯೆ ತಮ್ಮದಾಗಿರುವುದರಿಂದ ನಿಶ್ಚಿಂತೆ ತಮ್ಮಿಂದ ಅಸಾಧ್ಯ, ದೊಡ್ಡಪ್ಪನ ಸಮಸ್ಯೆಯಲ್ಲದ್ದರಿಂದ ಈ ನಿರ್ಭಾವ ಎನಿಸಿ ದೊಡ್ಡವರ ಮುಂದೆ ಮಾತನಾಡಲಾರದೆ ಅಸಹಾಯಕತೆಯಿಂದ ಸುಮ್ಮನೆ ಇರುವ ಪರಿಸ್ಥಿತಿಗೆ ಖೇದಗೊಂಡಳು.

‘ಸಾರ್, ಅಷ್ಟೊಂದು ಕೊಡೋಕೆ ಸಾಧ್ಯ ಇಲ್ಲ, ಸ್ವಲ್ಪ ಹೆಚ್ಚು ಕಡಿಮೆ ಮಾಡಿಕೊಳ್ಳಿ, ಇಷ್ಟೊಂದು ಕಠಿಣವಾದ್ರೆ ಕಷ್ಟವಾಗುತ್ತೆ’ ವಿನಯ ತುಂಬಿದ ದನಿಯಲ್ಲಿಯೇ ವಿಸ್ಮಯ ಕೇಳಿದ.

‘ಬರೀ ಜಾಗ ಮಾತ್ರ ಮಾರ್ತ ಇಲ್ಲಪ್ಪ, ನನ್ನ ತಮ್ಮನ ಕನಸುಗಳನ್ನು ಅದರ ಜೊತೆ ಮಾರ್ತಾ ಇದ್ದೇವೆ. ಅವನಿಗೊಂದು ಕನಸಿತ್ತು. ಮಗಳನ್ನ ಬೋರ್ಡಿಂಗ್‌ನಲ್ಲಿ ಇಟ್ಟು ಓದಿಸಲು ಕಳಿಸಿ, ಅವಳಿಂದ ದೂರ ಇದ್ದ ಮೋಹನನಿಗೆ, ನನ್ನಂತೆ ಇತರ ತಂದೆ- ತಾಯಿಯರು ಮಕ್ಕಳಿಂದ ದೂರವಾಗಿ ನೋಯಬಾರದು. ಇಲ್ಲೊಂದು ಅತ್ತುತ್ತಮವಾದ ಶಾಲೆ ಶುರು ಮಾಡಬೇಕು. ವೆಹಿಕಲ್ ಕಳಿಸಿ ಮಕ್ಕಳನ್ನು ಕರ್ಕೊಂಡು ಬಂದು ವಾಪಸ್ಸು ಕಳಿಸಬೇಕು ಅಂತ ಏನೇನೋ ಕನಸು ಕಂಡಿದ್ದ, ಆದ್ದರಿಂದಲೇ ಆ ಜಾಗ ಮಾರೋಕೆ ಅವನು ಒಪ್ಪಿರಲಿಲ್ಲ. ಈಗ ವಿಧಿ ಇಲ್ಲದೆ ಮಾರ್ತ ಇದ್ದೀವಿ, ಒಪ್ಕೊಂಡ್ರೆ ಒಪ್ಪಿಕೊಳ್ಳಿ, ಇಲ್ಲದೆ ಇದ್ರೆ ನಿಮ್ಮಿಷ್ಟ, ನಾನು ಹೊರಡ್ತಿನಿ’ ಅಂತ ಎದ್ದೇಬಿಟ್ಟಾಗ.

‘ಕುತ್ಕೊಳ್ಳಿ ಅಣ್ಣಾ, ಏನಾದ್ರೂ ತೀರ್ಮಾನ ಮಾಡೋಣ’ ವಿನಾಯಕ ಸುಂದರೇಶರನ್ನು ಕೈ ಹಿಡಿದು ಕೂರಿಸಿದ.

ಅಪ್ಪನ ಕನಸುಗಳಿಗೆ ರೆಕ್ಕೆಯಾಗಬೇಕಿದ್ದ ಇಳಾ ಇವತ್ತು ರೆಕ್ಕೆ ಕಳೆದುಕೊಂಡು ವಿಲಿ ವಿಲಿ ಒದ್ದಾಡುವ ಸ್ಥಿತಿಯಲ್ಲಿ ಹನಿಗಣ್ಣಾಗಿ ನಿಂತಿದ್ದಾಳೆ. ಆ ಹನಿಗಣ್ಣಿನ ನೋವು ನೇರವಾಗಿ ವಿಸ್ಮಯನ ಮನಸ್ಸನ್ನು ಕಟ್ಟಿತು. ಛೇ ಈ ಮುದ್ದು ಹುಡುಗಿಯ ಕಣ್ಣಲ್ಲಿ ನೀರೇ, ಕಾಲೇಜಿನಲ್ಲಿ ಗೆಳತಿಯರೊಟ್ಟಿಗೆ ನಲಿದಾಡಿಕೊಂಡಿರಬೇಕಾದ ವಯಸ್ಸು ಪಾಪ, ಕನಿಕರದಿಂದ ಅವಳೆಡೆ ನೋಡಿದ. ಆ ನೋಟ ಅವಳನ್ನು ತಟ್ಟನೆ ತಟ್ಟಿತು. ಸ್ವಾಭಿಮಾನ ಬುಸ್ಸೆಂದು ಹಾವಿನ ಹೆಡೆಯಂತೆ ತಲೆ ಎತ್ತಿ ನಿಂತು, ಕಣ್ತುಂಬುತ್ತಿದ್ದ ಹನಿಯನ್ನು ಪಟ ಪಟನೇ ಕಣ್ಣಾಡಿಸಿ ಇಂಗಿಸಿಕೊಂಡುಬಿಟ್ಟಳು. ನನ್ನ ನೋವು, ಕಣ್ಣೀರು ಎಂದಿಗೂ ಮತ್ತೊಬ್ಬರ ಕನಿಕರಕ್ಕೆ ಕಾರಣವಾಗಬಾರದು ಎಂದು ಆ ಕ್ಷಣವೇ ಎಚ್ಚೆತ್ತುಕೊಂಡು-

‘ಯಾರು ಹೇಳಿದ್ರೂ ಅಷ್ಟೆ, ದೊಡ್ಡಪ್ಪ ಅಂತಿಮ ತೀರ್ಮಾನ, ರೇಟಿನಲ್ಲಿ ಚೌಕಾಸಿ ಬೇಡ ವಿನಾಯಕಣ್ಣ. ಅವರಿಗೆ ಕಷ್ಟ ಆದ್ರೆ ಈ ವಿಷಯ ಇಲ್ಲಿಗೆ ಬಿಟ್ಟುಬಿಡೋಣ’ ಎಂದಳು.

ಅರೇ ಈ ಚೋಟುದ್ದ ಹುಡುಗಿಯ ಬಾಯಲ್ಲಿ ಅದೆಷ್ಟು ನಿರ್ಧಾರಿತ ಧ್ವನಿ, ಎಲ್ಲಿದೆ ಆ ಆತ್ಮಸ್ಥೈರ್ಯ, ಬಿಗಿದುಕೊಂಡಿರುವ ಹುಬ್ಬಿನಲ್ಲಿಯೇ, ತುಟಿಕಚ್ಚಿ ತಡೆಯುತ್ತಿರುವ ಆ ಉದಾತ್ತ ಭಾವದಲ್ಲಿಯೇ, ಸೆಟೆದು ನಿಂತಿರುವ ಆ ನಿಲುವಿನಲ್ಲಿಯೇ? ಅರ್ಥವಾಗದೆ ವಿನಾಯಕ.

‘ಇಳಾ ಹಾಗೆಲ್ಲ ಒಂದೇ ಸಲಕ್ಕೆ ವ್ಯವಹಾರ ಮುಗಿಸಬಾರದು, ನೀನಿನ್ನು ಸಣ್ಣ ಹುಡುಗಿ, ಸ್ವಲ್ಪ ಸುಮ್ಮನಿರು, ವಿಸ್ಮಯ ನಿಮ್ಮ ಕೊನೆ ರೇಟು, ನಿರ್ಧಾರ ಹೇಳಿಬಿಡಿ’ ಎಂದ ಅಸಮಾದಾನದಿಂದ. ‘ಸರಿ ಸಾರ್ ನಾನೂ ನನ್ನ ಪಟ್ಟು ಸಡಿಲಿಸುತ್ತೇನೆ. ನೀವು ನಿಮ್ಮ ಪಟ್ಟು ಸಡಿಲಿಸಿ. ಒಂದು ಒಪ್ಪಂದಕ್ಕೆ ಬರೋಣ’ ವಾತಾವರಣ ತಿಳಿಗೊಳಿಸಲು ಯತ್ನಿಸಿದ ವಿಸ್ಮಯ. ‘ಸರಿ ಹೇಳಿಬಿಡಪ್ಪ, ನಿನ್ನ ಮಾತನ್ನೂ ಕೇಳಿಬಿಡೋಣ’ ಎಂದು ಸಾವಧಾನವಾಗಿ ಸುಂದರೇಶ್ ಕುಳಿತುಬಿಟ್ಟರು.

‘ನಾಲ್ಕು ಲಕ್ಷಕ್ಕೆ ಒಪ್ಪಿಕೊಳ್ತಿನಿ.’

‘ಬೇಡಾ… ಐದು ಲಕ್ಷಕ್ಕೆ ಕಡಿಮೆ ಇಲ್ಲವೇ ಇಲ್ಲಾ’ ಎಂದು ಸುಂದರೇಶ್ ಪಟ್ಟು ಹಿಡಿದರು.

‘ನಿಮ್ಮ ರೇಟೂ ಬೇಡ, ಅವರ ರೇಟೂ ಬೇಡ, ನಾಲ್ಕುವರೆ ಲಕ್ಷಕ್ಕೆ ಒಪ್ಪಿಕೊಂಡು ಬಿಡಿ’- ಅಂತ ವಿನಾಯಕ ಅಂತಿಮ ರೇಟು ನಿರ್ಧರಿಸಿ ಒಪ್ಪಿಸಿದ. ಅಸಮಾಧಾನದಿಂದಲೇ ಸುಂದರೇರ್ ಒಪ್ಪಿದರು. ರಿಜಿಸ್ಟ್ರೇಷನ್‌ಗೆ ದಿನಾಂಕ ಗೊತ್ತುಪಡಿಸಿ ಅಡ್ವಾನ್ಸ್‌ಗೆಂದು ಚೆಕ್ ನೀಡಿದ ವಿನ್ಮಯ.

ಅಡ್ವಾನ್ಸ್ ನೀಡಿದ ಐದು ಲಕ್ಷವನ್ನು ದೊಡ್ಡಪ್ಪನ ಕೈಗಿಟ್ಟು ಫೈನಾನ್ಸ್‌ನ ಸಾಲ ತೀರಿಸುವಂತೆ ಕೇಳಿಕೊಂಡಳು. ಮೊದಲು ಫೈನಾನ್ಸ್‌ನ ಸಮಸ್ಯೆ ಬಗೆಹರಿದರೆ ಮುಂದಿನ ಸಮಸ್ಯೆಗಳ ಬಗ್ಗೆ ಯೋಚಿಸಬಹುದು ಅನ್ನುವುದು ಇಳಾಳ ಅಭಿಪ್ರಾಯವಾಗಿತ್ತು. ಹೇಗೆ ಲೆಕ್ಕ ಹಾಕಿದರೂ, ಎಲ್‌ಐಸಿ ಹಣ, ವಿಸ್ಮಯ ಕೊಡುವ ಹಣ ಎಲ್ಲಾ ಸೇರಿದರೂ ಸಾಲ ಮತ್ತೂ ಉಳಿಯುತ್ತದೆ. ಆ ಸಾಲದ ಹಣ ಹೊಂದಿಸುವುದು ಹೇಗೆಂದು ಚಿಂತಿತಳಾದಳು.
*****

ಶೈಲಜಾ ಹಾಸನ
Latest posts by ಶೈಲಜಾ ಹಾಸನ (see all)