ಬಾನ್ ಬಯಲಲಿ ಚಿಕ್ಕೆಯರಳು
ಮನೆಯ ಎದುರು ದೀಪದರಳು
ಆದರಿನ್ನು ಮನದಿ ಇರುಳು
ದುಃಖವಿದ್ಧವೆನ್ನ ಕರುಳು!
ಬಂದೆಯಾ ದೀಪಾವಳಿ!
ತಿರೆಯೊಡಲಲಿ ಪ್ರಳಯ ಭ್ರಾಂತಿ
ಜನದೆದೆಯಲಿ ನಿತ್ಯ ಭೀತಿ
ಬತ್ತಿರುವುದು ಹೃದಯ ಪ್ರೀತಿ
ವ್ಯರ್ಥವಹದು ನಿನ್ನ ದೀಪ್ತಿ
ಬಂದೆಯಾ ದೀಪಾವಳಿ!
ಬೇನೆಗಳೆನಿತೊ ಕೀಸರಿಡಲು
ಬಡತನದಾ ಬೇಗೆ ಸುಡಲು
ಒಡೆತನವಿರೆ ಛಲದ ಒಡಲು
ನಿನ್ನ ಸೊಡರು ಸುಡುವ ಸರಳು
ಅಲ್ಲವೇ ದೀಪಾವಳಿ!
ಪ್ರೀತಿಯ ಸಂಗಮದ ಸೊಗಸು
ನಿನ್ನೆದೆಯಲಿ ಬೆಳೆದ ಕನಸು
ಜಗದೆದೆಯಲಿ ಬಿತ್ತಿ ಬೆಳೆಸು
ಅದನೆ ಸುಚಿರ ನವ್ಯವೆನಿಸು
ಬೆಳಗು ಬಾ ದೀಪಾವಳಿ!
ಮಡದಿಯರ ಕೂರ್ಮೆಯಾಗಿ
ಸೋದರಿಯರ ಸ್ನೇಹವಾಗಿ
ಎದೆಯೆದೆಯಲಿ ಒಲವ ಬೆಳಗಿ
ಜಗದ ಶಾಂತಿ ಕಾಂತಿಯಾಗಿ
ಬೆಳಗು ಬಾ ದೀಪಾವಳಿ!
ನಸುಕಿನ ನನೆ ಕೊನರುವೊಲು
ಮನಸಿನ ಅರೆ ಕಳೆಯುವೊಲು
ಒಳಗರುಳಲಿ ಬೆಳಕಿನರಳು
ಕೊನರುವಂತೆ ತಿಳಿವ ತಿರುಳು
ಬೆಳಗು ಬಾ ದೀಪಾವಳಿ!
ಕೂಡಿಯೆ ಜನ ಬಾಳುವೊಲು
ಹಿರಿಯರಾಗಿ ಬೆಳೆಯವೊಲು
ದೇವರಾಗಿ ತೊಳಗುವೊಲು
ಶಾಂತಿಯನ್ನೆ ಜಪಿಸುವೊಲು
ಬೆಳಗು ಒಳಗು ಹೊರಗು!
*****


















