ಇರುವಿಗರಿವೇ ಮರೆವು, ಮರೆವಿಗೆ
ಅರಿವೆ ಇರುವಿನ ಪರಿಯು, ಈ ಪರಿ
ಹರಿವ ಇರುವಿನ ಅರಿವೆ ಹಿಗ್ಗಿನ
ಸಮರಸದ ಬಾಳು!
ಈ ಘನದ ನೆಲೆ ಪಿಂಡಗೊಂಡಿಹ
ಆ ಮಹತ್ತಿನ ಉಂಡೆ ಗರ್ಭೀ-
ಕರಿಸಿ ಮೊಗ್ಗಾಗಿಹುದು ಮನದುನ್ಮನದ ಬಯಲಿನಲಿ ॥೧॥
ಮನದ ಶೂನ್ಯ ಸ್ಥಿತಿಯು ಪೂರ್ಣದ
ವರ್ಣಗಳನಳವಡಿಸಿ ಪ್ರಾಣಕೆ
ಮಂತ್ರಮಾಲೆಯ ತೊಡಿಸಿ ದೇಹಕೆ ರೂಪು-
ಗೊಡುತಿಹುದು|
ಇದು ವಿರಾಟದ ಆಟ ಉತ್ತರ
ವೀರನಾ ಬಯಲಾಟವಲ್ಲವು
ಪ್ರಾಜ್ಞನಿಪ್ಪತ್ತಾರು ಪಕಳೆಯ ಕಮಲದರಳುವಿಕೆ ॥೨॥
ಒಂದರಲಿ ಎಂಟುಂಟು ಇಪ್ಪ-
-ತೇಳನೆಯ ಭೌತಿಕದ ಗಂಟಿನ
ಬಂಧಗಳೆ ಮನದಾಚೆ ಆ ಸಂಬಂಧ
ಪತಿಕರಿಸಿ|
ಮಹದ ಪದದಲಿ ಮನೆಯ ಹೂಡಲು
ಅತ್ತ ಘನವೋ ಇತ್ತ ಘನ ಎ-
-ತ್ತೆತ್ತು ಘನವೆನೆ ನರನ ನಾರಾಯಣತೆ ಮೆರೆಯುವವು ॥೩॥
ಮಾತು ಮಾತಿನ ಹೂತ ಬಯಲಲಿ
ಈ ಪದಾರ್ಥವೆ ಬದುಕು ಮಾಡಿದೆ
ಅದರ ರುಚಿಯನೆ ಹದವಗೊಳಿಸಲು
ಪಾಕ ಮಾಡುತಿವೆ |
ಡಂಭಕದ ಮಾತೇಕೆ ಆಡಂ-
ಬರದ ನಟನೆಯೆ ಬೇಕೆ, ಸಾಕೋ
ಆ ದಿಗಂಬರ ಭಾವ ಶಂಬರನಗರ ಸಂಹರಿಸೆ ॥೪॥
ಮಾತು ಭಾವದ ಕೀಲ, ರೂಪವು
ಸ್ಫುರಣ ಸ್ಫುರಣದ ಶೀಲ, ಛಂದವೊ
ಅಚ್ಚ ಸ್ವಚ್ಛಂದಕ್ಕೆ ಹೊದಿಸಿದ ಮೇಲುದದ
ತಾಲ |
ಮೌನ ಬ್ರಹ್ಮದ ಭಾಲ ಷಟ್ಪದಿ
ಬ್ರಹ್ಮಲಿಪಿ ಬರೆದಿಹುದು, ಅದ ನಿ-
-ರ್ವಚಿಸಲೆಂದೇ ಧ್ವನಿಸುತಿದೆ ಭಾರತಿಯ ಟೇಂಕಾರ ॥೫॥
ಇಳೆಗೆ ಭಾರತ ಮಹಿಮೆ ಅವತರಿ-
-ಸುತ್ತಿರಲು, ಕನ್ನಡದ ಹೊಕ್ಕರ-
-ಣೆಯಲಿ ಘನಸೋಪಾನ ರಚನೆಗೆ ಇಂಬು
ದೊರೆಕೊಳಿಸಿ |
ಸಾವಿರದ ಕೊರಳಿಂದ ಹೊರಟಿದೆ
ತಾನ ತಾನ ವಿತಾನ ಸುಭಗತೆ
ಕವಿಗೆ ಕಿವಿಗೊಡದಿಹರೆ ಎದೆಯುಳ್ಳವರು ಅರುಳಿನಲಿ ॥೬॥
*****

















