ಎಲ್ಲಿ ಬಡತನ ಉಂಟು ಹಸಿದ ಕ೦ಬನಿಯುಂಟು
ಅಲ್ಲಿ ಇರುವನು ನೋಡು ಗುರುರೇಣುಕಾ
ಮುರುಕು ಗುಡಿಸಲ ಬಳಿಗೆ ಹರಕು ಬಟ್ಟೆಯ ಒಳಗೆ
ಮಾರುವೇಷದಿ ಬರುವ ವರರೇಣುಕಾ ॥
ಎಲ್ಲಿ ದಲಿತರ ನೋವು ಬಿದ್ದ ಬಡವರ ಕೂಗು
ಓಯೆಂದು ಬಂದಾನು ಗುರು ರೇಣುಕಾ
ಮಲ್ಲಯುದ್ಧವು ಬೇಡ ಘರ್ಷಣೆಯ ಉರಿಬೇಡ
ಅಲ್ಲಿ ನಿಲ್ಲೆನು ಅಂದ ಸುರರೇಣುಕಾ ॥
ಪ್ರೀತಿಯೊಂದೆ ನನ್ನ ಮುಡಿಗಂಟು ಇಡುಗಂಟು
ಹೊನ್ನು ಹೆಣ್ಣಿನ ತ೦ಟೆ ಹೆ೦ಟೆಯೆ೦ದಾ
ಜನಬದುಕಬೇಕೆ೦ದು ಲಿಂಗತತ್ವವು ಬ೦ತು
ಜಂಗಮವೆ ಜನಮನದ ಸೇವೆಯೆಂದಾ ॥
ಭುವನದಾ ತುಂಬೆಲ್ಲ ತುಂಬಿರುವ ಜೀವಗಳು
ನನ್ನ ಮಕ್ಕಳು ಎ೦ದು ವಚನಕೊಟ್ಟಾ
ಕಡೆಯ ಆತ್ಮಕು ಕೂಡ ಅರುಹು ಅನ್ನವು ಬೇಕು
ಲಿಂಗತತ್ವದ ಮುಕುಟ ಮಂತ್ರ ಕೊಟ್ಟಾ ॥
*****


















