ದಾನಿ

ಲೋಕದ ಲಕ್ಷೋಪಲಕ್ಷ ಕೋಟಿ ಜನಸಂಖ್ಯೆಯಲ್ಲಿ ಕೆಲವರ ಮುಖಗಳು ಒಂದೇ ತರ ಇರಬಹುದು. ಒಬ್ಬರ ಮುಖ ಒಬ್ಬರದನ್ನು ಹೋಲುವ ಹಲವಾರು ಜನರಿದ್ದಾರೆ. ಒಬ್ಬರ ಮುಖ ಇನ್ನೊಬ್ಬರ ಮುಖದ ಅಚ್ಚು ಮುದ್ದೆಯಂತೆ ಕಾಣುವ ಜೋಡಿಗಳು ಹಲವು. ಅವರಲ್ಲಿ ಯಾರು ಯಾರೆಂಬುವುದು ಗುರುತಿಸುವುದು ಕಷ್ಟ.

ಆದರೆ ಇಷ್ಟು ಜನ ಈ ಭೂಮಂಡಲದಲ್ಲಿ ತುಂಬಿದ್ದರೂ ಒಬ್ಬರ ಸ್ವಭಾವ ಮತ್ತೊಬ್ಬರ ಸ್ವಭಾವವನ್ನು ಹೋಲುವುದಿಲ್ಲ. ಇದೇ ವಿಚಿತ್ರ. ಓಡ್ ಹೌಸ್ ಹೇಳಿದಂತೆ ಈ ವಿಚಿತ್ರವೇ ಜೀವನವನ್ನು, ಬದುಕನ್ನು ಸುಂದರ ಮಾಡುತ್ತದೆ.

ನಿಸಾರ ಬಹಳ ಕರುಣಾಳು, ಯಾರ ಕಷ್ಟವನ್ನೂ ಅವನಿಂದ ನೋಡುವುದಾಗುವುದಿಲ್ಲ. ತನ್ನ ಆಪ್ತರು ಹಿತೈಷಿಯರು ಕಷ್ಟದಲ್ಲಿದ್ದಾಗ ತನ್ನ ಬಳಿ ಹಣವಿದ್ದರೆ ಹಿಂದುಮುಂದು ಆಲೋಚಿಸದೆ ಕೊಟ್ಟು ಬಿಡುತ್ತಾನೆ. ಒಂದು ರೀತಿಯಲ್ಲಿ ನೋಡಿದರೆ ಇಂತಹ ಅವನ ಸ್ವಭಾವದಿಂದ ಅವನೇ ಅಲ್ಲ ಅವನ ಸಂಸಾರದವರೂ ಇಲ್ಲದ ಕಷ್ಟಗಳನ್ನು ಅನುಭವಿಸಿದ್ದರು. ಈಗಲೂ ಅನುಭವಿಸುತ್ತಿದ್ದಾರೆ. ಅವನ ಈ ಅತಿರೇಕದ ಬಗ್ಗೆ ಯಾರಾದರೂ ನೀಷ್ಠೂರವಾಗಿ ಪ್ರಶ್ನಿಸಿದಾಗ ತನ್ನ ನೋವು ತೊರಗೊಡದೇ ಎಲ್ಲಾ ಅಲ್ಲಾನ ಮರ್‍ಜಿ ಎನ್ನುತ್ತಾನೆ ನಿಸಾರ.

ನಿಸಾರ ಬಹಳ ಕಷ್ಟ ಜೀವಿ. ಈಗವನು ಬಿಲ್ಡಿಂಗ್ ಕಾಂಟ್ರಾಕ್ಟರ್. ಹಲವು ವರ್‍ಷಗಳ ಮೊದಲು ಅವನು ಮತ್ತು ಅವನ ಒಬ್ಬ ಸ್ನೇಹಿತ ಸಲೀಮ್ ಸೌದಿ ಅರೆಬಿಯಾಗೆ ಕಲೆತೇ ಹೋಗಿದ್ದರು. ಎಲ್ಲರಂತೆ ಹಣ ಸಂಪಾದಿಸುವ ಧನವಂತರಾಗುವ ಆಸೆ ಅವರದು. ಅಲ್ಲಿ ಅವರು ಸುಮಾರು ಎಂಟು ವರ್‍ಷಗಳ ಕಾಲ ದುಡಿದ್ದಿದ್ದರು. ಸಾಕಷ್ಟು ಹಣವನ್ನೂ ಸಂಪಾದಿಸಿದ್ದರು. ಸಲೀಮನಿಗೆ ಹಣ್ಣಕ್ಕೆ ಮರ್‍ಯಾದೆ ಕೊಡುವದು ಗೊತ್ತು. ಅದಕ್ಕೇ ಅವನು ಸೌದಿ ಇಂದ ಮರಲಿದಾಗ ಶ್ರೀಮಂತನಾಗಿದ್ದ. ನಿಸಾರನೂ ಅವನಿಗಿಂತ ಹೆಚ್ಚು ಶ್ರೀಮಂತನಾಗ ಬಹುದಾಗಿತ್ತು. ಆದರೆ ಆಗಿರಲಿಲ್ಲ. ಅದಕ್ಕೆ ಕಾರಣ ಅವನು ಸಂಪಾದಿಸಿದ್ದೆಲ್ಲವನೂ ನೀರಿನಂತೆ ವೆಚ್ಚ ಮಾಡಿದ್ದ. ಅದರಲ್ಲಿನ ಹೆಚ್ಚಿನ ಪಾಲು ದಾನಧರ್‍ಮಗಳಿಗೆ ಹೋಗಿತ್ತು. ಆ ಹಣದಿಂದ ಅವನು ಮಾಡಿದ್ದ ಒಳ್ಳೆಯ ಕೆಲಸವೆಂದರೆ, ಸರಕಾರ ಬಿಟ್ಟಿಗೆ ಕೊಟ್ಟ ಭೂಮಿಯಲ್ಲಿ ಬಾಳಲು ಯೋಗ್ಯವಾದಂತಹ ಮನೆಯನ್ನು ಕಟ್ಟಿಸಿಕೊಂಡಿದ್ದ. ಅದಕ್ಕೆ ಕೂಲರ್, ರೆಫ್ರಿಜೀಟರ್, ಕಲರ್ ಟಿ.ವಿ. ಇಂತಹವೇ ಇನಿತ್ತರ ವಸ್ತುಗಳನ್ನು ಕೊಂಡಿದ್ದ. ಇಪ್ಪತ್ತನ್ನು ಸಮೀಪಿಸುತ್ತಿದ್ದ ಮಗನಿಗಾಗಿ ಒಂದು ಸ್ಕೂಟರ್ ಕೊಂಡಿದ್ದ.

ಈಗ ನಿಸಾರನ ವಯಸ್ಸು ಅರವತ್ತನ್ನು ಸಮೀಪಿಸುತ್ತಿತ್ತು. ಆದರೂ ನವಯುವಕನ ಲವಲವಿಕೆ, ಕಷ್ಟಪಡಲು ಹಿಂಜರಿಯದ ದೇಹ. ಅಲ್ಲಿ, ಇಲ್ಲಿ ಬಿಲ್ಡರ್‌ಗಳ ಬಳಿ ತಿರುಗಿ ಸಣ್ಣ ಪುಟ್ಟ ಕೆಲಸಗಳನ್ನು ಗುತ್ತಿಗೆಗೆ ಹಿಡಿಯುತ್ತಿದ್ದ. ಇದ್ದನ್ನೂ ಅವನು ಬಹು ನಿಯತ್ತಿನಿಂದ ಮಾಡುತ್ತಿದ್ದ. ಅವನ ಸೌಮ್ಯ, ದಯಾಳು ಸ್ವಭಾವವನ್ನು ಬಹುಬೇಗ ಗುರುತಿಸುತ್ತಿದ್ದರು ಚಾಣಾಕ್ಷ ಬಿಲ್ಡರ್‌ರರು. ನಿಸಾರನಿಗೆ ಸಿಗಬೇಕಾದ ಹಣ ಸಮಯಕ್ಕೆ ಸಿಗುತ್ತಿರಲಿಲ್ಲ. ಈಗವನು ಕಾಂಟ್ರಾಕ್ಟರ್‌ ಆದ ಕಾರಣ ಮನೆ ಫೋನ್ ಹಾಕಿಸಿಕೊಂಡಿದ್ದ. ಹೀಗೆ ಏಳುತ್ತಾ ಬೀಳುತ್ತಾ ಸಾಗಿ ಹೋಗಿತ್ತವನ ಸಂಸಾರ.

ನಿಸಾರನಿಗೆ ಎಂಟು ಜನಮಕ್ಕಳು. ಅವರಲ್ಲಿ ಇಬ್ಬರು ಮಾತ್ರ ಗಂಡು, ವಯಸ್ಸಾದ ಮೇಲೆ ಮದುವೆಯಾದ ಕಾರಣ ಹಿರಿಯ ಮಗನಿಗೆ ಇಪ್ಪತ್ತು ವರ್‍ಷ. ಕೊನೆಯ ಮಗಳಿಗೆ ಐದು ವರ್‍ಷ. ಇಬ್ಬರು ಹೆಣ್ಣು ಮಕ್ಕಳ ಮದುವೆಯನ್ನು ಮಾಡಿದ್ದ. ಒಬ್ಬಳ ಗಂಡ ಯಾವ ಯಾವ ಕೆಲಸವೂ ಇಲ್ಲದೇ ಮಗಳನ್ನು, ಅವಳಿಗೆ ಹುಟ್ಟಿದ ಮಕ್ಕಳನ್ನು ಉಪವಾಸ ಹಾಕುವ ಸ್ಥಿತಿ ತಲುಪಿದಾಗ ಅಳಿಯ ಮಗಳನ್ನು ತನ್ನ ಮನೆಯಲ್ಲೇ ತಂದು ಇರಿಸಿಕೊಂಡಿದ್ದ. ಸಮಯ ಕಳೆದಂತೆ ಪ್ರಕೃತಿ ನಿಯಮದಂತೆ ಅವಳಿಗೆ ಇನ್ನಿಬ್ಬರು ಮಕ್ಕಳು ಹುಟ್ಟಿದ್ದರು. ಇಂತಹ ಭಯ ಹುಟ್ಟಿಸುವ ಸಂಸಾರದ ಭಾರ ಮೈಮೇಲೆ ಬಿದ್ದಿದರೂ ನಿಸಾರನ ಸ್ವಭಾವ ಬದಲಾಗಿರಲಿಲ್ಲ. ಮನೆಯ ಯೋಚನೆ ಇಲ್ಲದೇ ಈಗಲೂ ಅವನು ಇತರರಿಗೆ ಸಹಾಯ ಮಾಡುವಲ್ಲಿ ಮುಂದಾಗುತ್ತಿದ್ದ.

ಇಂತಹ ಅವನ ವರ್‍ತನೆಯ ಬಗ್ಗೆ ಸಾಕಷ್ಟು ಮಾತಾಡಿಕೊಂಡಿದ ಅವನ ಆಪ್ತರು, ಹಿತೈಶಿಯರು ಅವನನ್ನು ಬದಲಾಯಿಸುವುದು ಆ ಆಲ್ಲಾನಿಂದಲೂ ಸಾಧ್ಯವಿಲ್ಲವೆಂದುಕೊಂಡು ಆ ವಿಷಯ ಅವನೆದುರು ಎತ್ತುವದನೇ ಬಿಟ್ಟುಟ್ಟಿದ್ದರು.

ಈಗ ನಿಸಾರನಿಗೆ ಒಂದು ದೊಡ್ಡ ಸಮಸ್ಯೆ ಎದುರಾಯಿತ್ತು. ಓದು ಮುಂದುವರೆಸಲಾಗದ ಅವನ ಹಿರಿಯ ಮಗ ಅವನೊಡನೆ ಕೆಲಸಕ್ಕೆ ಹೋಗುತ್ತಿದ್ದ. ಎರಡನೇಯ ಮಗನಿಗೆ ಸೌದಿ ಅರೆಬಿಯಾಗೆ ಹೋಗುವ ಹುಚ್ಚು ಹಿಡಿದ್ದಿತ್ತು. ಅವನ ಇಬ್ಬರು ಸ್ನೇಹಿತರು ಆಗಲೇ ಹೋಗಿದ್ದೇ ಅದಕ್ಕೆ ಕಾರಣ. ಅವರು ಬುದ್ಧಿವಂತರು, ಚೆನ್ನಾಗಿ ಓದಿ ಕೊಂಡವರೆಂಬುದು ಆ ಮಗನಿಗೆ ಮುಖ್ಯವಾಗಿರಲಿಲ್ಲ. ಹೇಗಾದರೂ ಮಾಡಿ ತನ್ನ ಮಗನನೂ ಸೌದಿಗೆ ಕಳುಹಿಸಿದರೆ ತನ್ನ ಸ್ಥಿತಿ ಕೂಡ ಸುಧಾರಿಸಬಹುದೆಂದು ಯೋಚಿಸಿದ ನಿಸಾರ, ಆ ಯೋಚನೆ ಧೃಢ ಸಂಕಲ್ಪದ ರೂಪತಾಳಿ ಆ ಕಡೆ ಗಮನ ಹರಿಸಿದ.

ಪೆಥಾಲಜಿಕಲ್ ಲ್ಯಾಬ್ ಒಂದರಲ್ಲಿ ಅವನನ್ನು ತರಬೇತಿಗೆ ಕಳುಹಿಸಿದ. ಬಹು ಕಷ್ಟಪಟ್ಟು ಎಸ್.ಎಸ್.ಎಲ್.ಸಿ ಪಾಸಾದ ಅವನು ತಿಂಗಳಲ್ಲಿ ರಕ್ತ, ಮೂತ್ರಗಳ ಪರೀಕ್ಷಣೆ ಮಾಡಿ ರೋಗವನ್ನು ಗುರುತಿಸುವ ವಿವಿಧ ವಿಧಾನದ ಅಲ್ಪಸ್ವಲ್ಪ ಜ್ಞಾನ ಸಂಪಾದಿಸಿದ. ಸೌದಿಗೆ ಹೋಗಲು ಅಷ್ಟೇ ಸಾಕಾಗಿರಲಿಲ್ಲ. ಅವನ ಜ್ಞಾನವನ್ನು ಪುಷ್ಟಿಕರಿಸುವ ಪ್ರಭುತ್ವ ಆಸ್ಪತ್ರೆಯ ಸರ್‍ಟಿಫಿಕೇಟ್ ಕೂಡಬೇಕಾಗಿತ್ತು. ಹಣ ವೆಚ್ಚ ಮಾಡಲು ಸಿದ್ಧವಿದ್ದರೆ ಯಾವ ಕೆಲಸವೂ ಕಷ್ಟದ್ದಲ್ಲ. ನಿಸಾರ ಕೈ ಬಿಚ್ಚಿ ಖರ್‍ಚು ಮಾಡಿ ಅದನ್ನು ಸಂಪಾದಿಸಿದ್ದ. ಅವನ ಎರಡನೇಯ ಮಗ ಜಾಣ. ಅವನಿಗೆ ಹಣದ ಮಹತ್ವ ಗೊತ್ತೆಂಬುವದು ನಿಸಾರನ ಹೆಮ್ಮೆ.

ಇದೆಲ್ಲಕ್ಕೂ ಸಂಧಿ ಒದಗಿ ಬಂದಂತೆ ಸೌದಿ ಇಂದ ರಜೆಯ ಮೇಲೆ ಬಂದ ನಿಸಾರನ ಮಗನ ಸ್ನೇಹಿತರು ಅವನನ್ನು ಒಬ್ಬ ಎಜೆಂಟ್‌ನಿಗೆ ಪರಿಚಯಿಸಿದ್ದರು. ಆಗ ಅಲ್ಲಿ ಪೆಥಾಲಾಜಿಕಲ್ ಅಸಿಸ್‌ಟೆಂಟರ ಬಹಳ ಬೇಡಿಕೆ ಇದೆ ಎಂದು ಸಾವಿರ ರಿಯಾಲ್ ಸಂಬಳ ಸುಲುಭವಾಗಿ ಸಿಗುವದೆಂದು, ತಾನವನಿಗೆ ಆ ಕೆಲಸ ಕೊಡಿಸುವ ಆಶ್ವಾಸನೆ ನೀಡಿದ ಆ ಎಜೆಂಟ್. ನಿಸಾರ ಆತನನ್ನು ಭೇಟಿಯಾಗಿ ಅದಕ್ಕೆ ಎಷ್ಟು ವೆಚ್ಚವಾಗಬಹುದೆಂದು ಬಹುವಿನಯವಾಗಿ ಕೇಳಿದ. ಐವತ್ತು ಸಾವಿರದ ವ್ಯವಸ್ಥೆ ಮಾಡಿದರೆ ತಾನೆಲ್ಲಾ ನೋಡಿಕೊಳ್ಳುವುದಾಗಿ, ಹದಿನೈದು ದಿನದಲ್ಲಿ ಅವನ ಮಗನನ್ನು ಸೌದಿಗೆ ಕಳುಹಿಸುವ ಆಶ್ವಾಸನೆಯನ್ನು ನೀಡಿದನಾತ. ಮಗನನ್ನು ಹೊರದೇಶಕ್ಕೆ ಕಳುಹಿಸುವ ಯೋಚನೆ ಬಂದಾಗಲೇ ಅವನ ಪಾಸ್‌ಪೋರ್‍ಟನ್ನು ಸಿದ್ಧ ಪಡಿಸಿಬಿಟ್ಟಿದ್ದ ನಿಸಾರ.

ತಾನು ಸೌದಿಯಲ್ಲಿ ಲಕ್ಷಾಂತರ ಸಂಪಾದಿಸಿದಾಗ ತನ್ನ ಮನೆಯವರದೇ ಅಲ್ಲ, ಬಹು ಜನರ ಬೇಕುಬೇಡಗಳನ್ನು ನೋಡಿಕೊಂಡಿದ್ದ. ಅದಕ್ಕಾಗಿ ನಿಸಾರನಿಗೆ ಈಗ ಈ ಐವತ್ತು ಸಾವಿರ ದೊಡ್ಡ ಮೊತ್ತವಾಗಿ ಕಂಡಿರಲಿಲ್ಲ. ಯಾರಾದರೂ ತನಗೆ ಸಹಾಯ ಮಾಡೇ ಮಾಡುವರೆಂದು ಅವನ ನಂಬಿಕೆ. ಎಜೆಂಟ್‌ನನ್ನು ಭೇಟಿಯಾದಗಿನಿಂದ ಮಗನನ್ನು ಸೌದಿಗೆ ಕಳುಹಿಸುವ ಛಲ ಹೆಚ್ಚಾಗಿತ್ತು. ಮೊದಲಿನಿಂದಲೂ ತಂದೆಯನ್ನು ಪೀಡಿಸುತ್ತಿದ್ದ ಮಗ ಈಗ ಎದ್ದರೆ ಕುಳಿತರೆ ಅದೇ ಮಾತಾಡ ತೊಡಗಿದ್ದ.

ಅಲ್ಲಿ ಇಲ್ಲಿ ಆ ಎಜೆಂಟ್‌ನ ಪೂರ್‍ವಾಪರಗಳನ್ನು ವಿಚಾರಿಸಿದ ನಿಸಾರ. ಆತನೀಗಾಗಲೇ ನೂರಾರು ಜನರನ್ನು ಸೌದಿ, ದುಬಾಯಿಗಳಿಗೆ ಕಳುಹಿಸಿದ್ದಾನೆಂದು ಗೊತ್ತಾಯಿತು. ಅಷ್ಟೇಯಾಕೆ ತಾನಿರುವ ಬಡಾವಣೆಯಿಂದಲೇ ಹಲವಾರು ಯುವಕರು ಹೊರದೇಶಕ್ಕೆ ಹೋಗಿದ್ದರು. ನಿಸಾರ ಅವರ ಮನೆಗಳಿಗೂ ಹೋಗಿ ವಿಚಾರಿಸಿದ. ತಮ್ಮ ಮಕ್ಕಳು ಸುಖವಾಗಿದ್ದಾರೆಂದು, ಕೈ ತುಂಬಾ ಹಣ ಸಂಪಾದಿಸಿ ಕಳುಹಿಸುತ್ತಿದ್ದಾರೆಂದು ಹೇಳಿದ್ದರವರ ತಂದೆ, ತಾಯಿಯಂದಿರು. ಅಂತಹ ಮಾತುಗಳನ್ನು ಕೇಳಿ ಅವನಿಗೆ ಆ ಎಜೆಂಟ್‌ನ ಮೇಲೆ ಎಲ್ಲಿಲ್ಲದ ನಂಬಿಕೆ ಹುಟ್ಟಿಬಂದಿತ್ತು. ಐವತ್ತು ಸಾವಿರ ಎಲ್ಲಿಂದ ಜೋಡಿಸಬೇಕೆಂಬ ಯೋಚನೆಯಲ್ಲೇ ಮನೆಗೆ ಬಂದಿದ್ದ.

ಅಂದೇ ವಿಷಯ ಯೋಚಿಸುತ್ತಾ ಕುಳಿತಾಗ ಮಗ ಬಂದು ಆ ಎಜೆಂಟ್‌ಗೆ ಹದಿನೈದು ಜನರನ್ನು ಕಳುಹಿಸುತ್ತಿರುವುದಾಗಿ ಅದರಲ್ಲಿ ತನ್ನ ಹೆಸರು ಸೇರಿಸಬೇಕಾದರೆ ಹತ್ತುಸಾವಿರ ಕೂಡಲೇ ಕೊಡಬೇಕೆಂದು ಹೇಳಿದ. ಹಣವನ್ನು ಜೋಡಿಸುವ ಯೋಚನೆಯಲ್ಲಿ ಇದ್ದ ನಿಸಾರ ತನ್ನ ಆಪ್ತ ಗೆಳೆಯ ಈಗ ಕೊಟ್ಯಾಧಿಶವಾಗಿರುವ ಸಲೀಮನಿಗೆ ಫೋನ್ ಮಾಡಿದ. ಬಹು ಹಾರ್‍ದಿಕವಾಗಿ ಮಾತನಾಡಿ ಮಿತ್ರ’ ಈಗ ತನ್ನ ಬಳಿ ಅಷ್ಟು ಹಣವಿಲ್ಲವೆಂದು ಇದ್ದಿದ್ದರೆ ಖಂಡಿತ ಕೊಡುತ್ತಿದ್ದನೆಂದು ಹೇಳಿದ್ದಲ್ಲದೇ ಬೇರೆಲ್ಲಾದರೂ ಹೊಂದಿಸಿ ಕೊಳ್ಳಬೇಕೆಂಬ ಸಲಹೆಯನ್ನು ಕೂಡಕೊಟ್ಟ. ನಿಸಾರನಿಗೆ ತನ್ನ ಕಿವಿಗಳನ್ನು ತನಗೆ ನಂಬಲಾಗಲಿಲ್ಲ. ಇಂತಹ ಅಪಘಾತವನ್ನು ಅವನು ನಿರೀಕ್ಷಿಸಿರಲಿಲ್ಲ. ಎಲ್ಲಾ ಅಲ್ಲಾನ ಮರ್‍ಜಿ ಎಂದುಕೊಳ್ಳುತ್ತಾ ತಾ ಮೊದಲು ಸಹಾಯ ಮಾಡಿದ ಇನ್ನೂ ಕೆಲ ಆಪ್ತರನ್ನು ಕೇಳಿ ನೋಡಿದ. ಅದರಿಂದಲೂ ಅಂತಹದೇ ಸಮಾಧಾನ ತಂದೆಯ ಮುಖವನ್ನ ನೋಡುತ್ತಿದ್ದ ಮಗನ ಮುಖದಲ್ಲಿ ಸಿಟ್ಟು, ಅಸಹನೆಗಳು ತುಂಬಿಬರುತ್ತಿದ್ದವು. ಈಗಿನ ಮಟ್ಟಿಗಾಗಿ ತಾನು ಹತ್ತು ಸಾವಿರವನ್ನು ಎಲ್ಲಿಂದಲಾದರೂ ಹೊಂದಿಸಿ ತಂದೇ ತರುತ್ತೇನೆಂದು ಮಗನಿಗೆ ಅಭಯ ನೀಡಿ ಮನೆಯಿಂದ ಹೊರಬಿದ್ದ ನಿಸಾರ.

ಮೊದಲು ಹತ್ತು ಸಾವಿರ ಮುಂಗಡ ಹೊಂದಿಸಲು ದಯನೀಯ ಮುಖಭಾವ ಹೊತ್ತು ತನ್ನ ಪರಿಚಯಸ್ಥರ ಬಳಿ, ತಾನು ಕಷ್ಟಕಾಲದಲ್ಲಿ ಸಹಾಯ ಮಾಡಿದವರ ಬಳಿ ಓಡಾಡಿದ. ಅವರಿಗೆಲ್ಲಾ ತನ್ನ ಮಗ ಸೌದಿಗೆ ಹೋದರೆ ತನ್ನ ಬವಣೆಗಳೆಲ್ಲಾ ಹೇಗೆ ಸುಧಾರಿಸಬಹುದೆಂಬ ವಿವರ ಕೊಟ್ಟ. ಅವನಲ್ಲಿ ಹೋಗಿ ಮೊದಲ ಸಂಬಳ ತೆಗೆದುಕೊಂಡು ಕಳುಹಿಸಿದ ಕೂಡಲೇ ಅವರ ಹತ್ತು ಸಾವಿರ ಹಿಂತಿರುಗಿಸುವುದಾಗಿ ಹೇಳಿದ. ಅವರೆಲ್ಲಾ ಅವನ ಮಾತನ್ನು ಬಹಳ ಅನುಕಂಪದಿಂದ ಕೇಳಿದರು. ಮನೆಗೆ ಬಂದ ಅವನಿಗೆ ಚಹಾ ಕೂಡಾ ಕುಡಿಸಿದರು. ಆದರೆ ಎಲ್ಲರೂ ತಮ್ಮ ನಿಸ್ಸಾಯತೆಯನ್ನು ಬಣ್ಣ ಕಟ್ಟಿ ಹೇಳಿದರು. ಯಾರಲ್ಲೂ ಅಷ್ಟು ಹಣವಿಲ್ಲ.

ತಾ ಕೇಳಿದ ಪ್ರತಿಯೊಬ್ಬರಿಗೂ ಹತ್ತು ಸಾವಿರ ದೊಡ್ಡ ಮೊತ್ತವಲ್ಲ ಎಂಬುವುದು ಅವನಿಗೆ ಗೊತ್ತಿತ್ತು. ಆದರೂ ನಿಸಾರ ಆ ಬಗ್ಗೆ ಒಂದು ಮಾತನ್ನು ಆಡಲಿಲ್ಲ. ತಾ ಬಂದು ಅವರ ಸಮಯ ಹಾಳು ಮಾಡಿದ್ದಕ್ಕೆ ಅವರ ಕ್ಷಮೆ ಯಾಚಿಸಿ ಅವರುಗಳ ಮನೆಯಿಂದ ಹೊರಬಿದ್ದಿದ್ದ. ನಿಸಾರನಿಗೆ ಬಹಳ ನಿರಾಶೆಯಾಗಿತ್ತು. ಅದರೊಡನೆಯೇ ಮಗನನ್ನು ಸೌದಿಗೆ ಕಳುಹಿಸಲೇಬೇಕೆಂಬ ಹಟ ಹೆಚ್ಚಾಗಿತ್ತು. ಅದೇ ಯೋಚನೆಯಲ್ಲಿ ಮನೆಗೆ ಬರುತ್ತಿದ್ದಾಗ ದಾರಿಯಲ್ಲಿ ಎದುರಾದರು ಅಲ್ಲಿಯ ಮೌಲ್ವಿ ಸಾಹೇಬರು. ಅವನ ಚಿಂತಾಕ್ರಾಂತ ಸ್ಥಿತಿ ನೋಡಿ ಏನು ವಿಶೇಷವೆಂದು ವಿಚಾರಿಸಿದರು. ತನ್ನ ಮನವನ್ನು ಹಗುರಗೊಳಿಸಿಕೊಳ್ಳಲೆಂಬಂತೆ ತನ್ನ ಶೋಚನೀಯ ಸ್ಥಿತಿಯನ್ನು ಅವರಿಗೆ ವಿವರಿಸಿದ ನಿಸಾರ. ಅವರಿಂದ ಯಾವ ತರಹದ ಸಹಾಯದ ಅಪೇಕ್ಷೆಯೂ ಅವನಿಗಿರಲಿಲ್ಲ. ಅವನ ಹೇಳಿಕೆ ಮುಗಿದ ಮೇಲೆ ತಮ್ಮಲ್ಲಿ ಮಡದಿಯ ಮೂರು ತೊಲೆ ಬಂಗಾರವಿದೆಯೆಂದು ಸಧ್ಯಕ್ಕೆ ಅದನ್ನು ಉಪಯೋಗಿಸಿಕೊಂಡು ಅವನ ಮಗ ಸೌದಿಯಿಂದ ಹಣ ಕಳುಹಿಸಿದಾಗ ಅದನ್ನು ಮರಳಿಸಬೇಕೆಂದು ಹೇಳಿದರು. ಆ ಮಾತನ್ನು ಕೇಳುತ್ತಿದ್ದ ನಿಸಾರನಿಗೆ ತನ್ನ ಕಿವಿಯನ್ನು ತನಗೇ ನಂಬಲಾಗಲಿಲ್ಲ. ಸಾತ್ವಿಕರಾದ ಅವರು ಮನಸಾರ ಹೇಳುತ್ತಿದ್ದಾರೆಂಬ ಅರಿವಾದಾಗ ಸಂತೋಷಾತಿರೇಕದಲ್ಲಿ ಅವರೆರಡೂ ಕೈಗಳನ್ನು ಹಿಡಿದು ಮತ್ತೆ ಮತ್ತೆ ಅಲ್ಲಾಡಿಸುತ್ತಾ ತನ್ನ ಆಭಾರವನ್ನು ವ್ಯಕ್ತಪಡಿಸಿದ.

ಬಂಗಾರ ಅಡುವಿಟ್ಟರೂ ನಾಲ್ಕು ಪ್ರತಿಶತ್ ಬಡ್ಡಿ, ಅದೂ ಒಂದು ತಿಂಗಳಿಗೆ. ಬಹಳ ಯೋಚನೆ, ವಾದ ವಿವಾದಗಳನಂತರ ಮೂರು ಪ್ರತಿಶತ ಬಡ್ಡಿಗೆ ಆ ಮೌಲ್ವಿಯವರ ಬಂಗಾರ ಇರಿಸಿಕೊಂಡು ನಿಸಾರನಿಗೆ ಹತ್ತು ಸಾವಿರ ಕೊಟ್ಟ ಮಾರ್‍ವಾಡಿ, ಅದನ್ನವನು ಕೂಡಲೇ ತೆಗೆದುಕೊಂಡು ಹೋಗಿ ಆ ಏಜೆಂಟ್‌ನ ಕೈಯಲ್ಲಿ ಹಾಕಿದ. ಅದರೊಡನೆಯೇ ತನ್ನ ಮಗನ ಪಾಸ್‌ಪೋರ್‍ಟ್ ಇನ್ನಿತರ ದಾಖಲೆ ಪತ್ರಗಳನ್ನು ಕೂಡ ಅವನ ವಶಕೊಪ್ಪಿಸಿದ. ಆ ಕಾಗದಪತ್ರಗಳನ್ನು ಪರೀಕ್ಷಿಸಿದಂತೆ ಮಾಡಿದ ಏಜೆಂಟ್ ಬೇಗ ಮಿಕ್ಕ ಹಣವನ್ನು ತಂದು ಕೊಡಬೇಕಾಗಿ, ಹದಿನೈದು ದಿನದಲ್ಲಿ ಅವನ ಮಗ ಸೌದಿಯಲ್ಲಿ ಇರುತ್ತಾನೆಂದು ಹೇಳಿದ. ತಾನು ತನ್ನ ಬಗ್ಗೆ ಕೇಳಿದ ಮಾತುಗಳಿಂದ, ಆತನ ಮಾತುಗಳ ಧೋರಣೆಯಿಂದ ನಿಸಾರನಿಗೆ ಆ ಏಜೆಂಟ್‌ನ ಮೇಲೆ ಎಲ್ಲಿಲ್ಲದ ವಿಶ್ವಾಸ ಹುಟ್ಟಿಬಂದಿತ್ತು.

ಮಿಕ್ಕ ನಲವತ್ತು ಸಾವಿರ ಜೋಡಿಸಲು ನಿಸಾರನಿಗೆ ಕೇವಲ ನಾಲ್ಕು ದಿನಗಳ ಸಮಯ ಮಾತ್ರವಿತ್ತು. ಅದು ಎಲ್ಲಿಂದ ತರಬೇಕೆಂಬುದರ ಬಗ್ಗೆ ಅವನ ಮನ ಮೌಲ್ವಿ ಸಾಹೇಬರು ಬಂಗಾರ ಕೊಟ್ಟಾಗಿನಿಂದಲೇ ಆರಂಭವಾಗಿತ್ತು. ಒಂದು ಕಾಲದಲ್ಲಿ ಸರಕಾರ ಬಿಟ್ಟಿಗೆ ಕೊಟ್ಟ ಭೂಮಿ ಧಾರಣೆ ಈಗ ಐದು ಲಕ್ಷ, ಅದರ ಮೇಲೆ ಮನೆಯನ್ನು ಬೇರೆ ಕಟ್ಟಿಸಿದ್ದ. ಆ ಕಾಗದ ಪತ್ರಗಳನ್ನು ಅಡವಿಟ್ಟು, ಬಾಕಿ ಹಣತರುವುದೆಂದು ನಿರ್‍ಣಯಿಸಿದ. ತನ್ನ ಕೆಲ ಬುದ್ಧಿವಂತ ಸ್ನೇಹಿತರೆದುರು ಆ ಮಾತು ತೆಗೆದಾಗ ಸರಕಾರ ಕೊಟ್ಟ ಜಮೀನು ಮಾರುವ ಹಾಗಿಲ್ಲ ಆದ್ದರಿಂದ ಅದಕ್ಕೆ ಬೇರೆಯದೆ ವಿಧಾನಗಳಿವೆ. ಆದರೆ ಕಾಗದಪತ್ರಗಳನ್ನು ಯಾರೂ ಅಡವಿಟ್ಟು ಕೊಡುವದಿಲ್ಲವೆಂಬುವುದು ತಿಳಿಯಿತು. ಅವರ ಮಾತುಗಳನ್ನು ಕೇಳಿಸಿಕೊಂಡ ಒಬ್ಬ ಚಾಣಾಕ್ಷ ಮನೆಗೆ ನಾಲ್ಕುವರೇ ಲಕ್ಷ ಕೊಡಲೆ ಎಂದು ಕೇಳಿದ. ಅದನ್ನು ಮಾರಿದರೆ ನಿಸಾರ ಮತ್ತವನ ದೊಡ್ಡ ಸಂಸಾರ ಬೀದಿಯ ಪಾಲಾಗುವ ಸಂಭವವೇ ಹೆಚ್ಚಿತ್ತು. ಅದಕ್ಕವನು ಒಪ್ಪಲಿಲ್ಲ. ಹೇಗಾದರೂ ಮಾಡಿ ಮನೆಯ ಕಾಗದಪತ್ರಗಳನ್ನು ಅಡವಿಟ್ಟು ಬಡ್ಡಿಯ ಮೇಲೆ ಹಣ ತರಲು ಹೊರಟ.

ಅವನ ಬಾಲ್ಯ ಸ್ನೇಹಿತನಲ್ಲಿ ಇನ್ನಿಬ್ಬರು ಮಿಕ್ಕಿದ್ದರು. ಒಬ್ಬ ಬ್ಯಾಂಕ್ ಅಧಿಕಾರಿ ಅಗಿದ್ದ ಅವನು ಅಶೋಕ. ಅವನ ಮಡದಿಯೂ ಕೆಲಸ ಮಾಡುತಿದ್ದಳು. ಜಾಗರೂಕತೆಯಿಂದ ಹಣ ಜೋಡಿಸುತ್ತಾ ಅವರು ತಮ್ಮ ಸ್ವಂತ ಮನೆಯನ್ನು ಕಟ್ಟಿಕೊಂಡಿದ್ದರು. ಅದೂ ಅಲ್ಲದೇ ಸಾಕಷ್ಟು ಹಣವನ್ನು ಕೂಡ ಹಿಂದೆ ಹಾಕಿದ್ದರು. ಇನ್ನೊಬ್ಬ ಅನಿಲ ಕಾರಕೂನನ ಇದ್ದದರಲ್ಲೇ ಸಂಸಾರ ತೂಗಿಸುತ್ತಾ ಬಂದವ. ಅವನ ನಾಲುಗೆಗೆ ಸಾಕಷ್ಟು ಬೆಲೆ ಇತ್ತು. ಅವನು ಮನಸ್ಸು ಮಾಡಿದರೆ ಎಲ್ಲಿಂದಲಾದರೂ ಹಣ ಕೊಡಿಸಬಹುದಾಗಿತ್ತು. ಇವರಿಬ್ಬರ ಮೂಲಕ ಪರಿಚಿತವಾದ ಬಟ್ಟೆ ವ್ಯಾಪಾರಿ ರಾಜನ್, ಯಾವ ತರಹದ ಹಣದ ಆಸೆ ಇಲ್ಲದೇ ತಾನೇ ಮುಂದೆ ನಿಂತು ಅವನ ಹೊಸ ಮನೆಯನ್ನು ಕಟ್ಟಿಸುವುದರಲ್ಲಿ ಸಹಾಯಕನಾಗಿದ್ದ ನಿಸಾರ. ಮೊದಲಿನವನನ್ನು ಕೇಳುವುದೇ ಸರಿ ಎನಿಸಿ ತನ್ನ ಕಾಗದಪತ್ರಗಳ ಫೈಲ್ ಹಿಡಿದು ಅವನ ಮನೆಗೆ ಹೋದ.

ನಿಸಾರನ ಗೋಳನ್ನು ರಾಜನ್ ಬಹು ಕಾಳಜಿಯಿಂದ ಕೇಳಿದ. ಅಲ್ಲಿ ಅವನಿಗೆ ಚಹಾ, ಫಲಹಾರಗಳ ಸೇವೆಯಾಯಿತು. ಬಡ್ಡಿಗೆ ಸಾಲ ಕೊಡುವವರ ಪರಿಚಯ ತನಗಿದೆ ಎಂದು ನಿಸಾರನನ್ನು ಅವನ ಫೈಲಿನೊಡನೆ ಕರೆದುಕೊಂಡು ಒಬ್ಬ ಸೇಠಿನ ಬಳಿ ಹೋಗಿ ಎಲ್ಲವನ್ನೂ ವಿವರಿಸಿದ ರಾಜನ್. ಬಹು ಸೂಕ್ಷ್ಮವಾಗಿ ಮನೆಯ ಕಾಗದ ಪತ್ರಗಳನ್ನು ಪರೀಕ್ಷಿಸಿದ ಆತ ಅದರ ಆಧಾರದ ಮೇಲೆ ಹಣ ಕೊಡುವುದು ಸಾಧ್ಯವಿಲ್ಲ ಎಂದು ನಿಷ್ಠುರವಾಗಿ ಹೇಳಿದ. ಅದೇ ರೀತಿ ಇನ್ನೂ ಮೂವರು ಸಾಹುಕಾರರ ಭೇಟಿಯಾದ್ದದ್ದೂ ಆಯಿತು. ಅವರಿಂದಲೂ ಅದೇ ತರಹದ ಮಾತು. ರಾಜನ್ ತಾನೇ ಮನಸ್ಸು ಮಾಡಿದ್ದರೆ ಹಣ ಕೊಡಬಹುದಾಗಿತಂಬುವುದು ನಿಸಾರನಿಗೆ ಗೊತ್ತಿತ್ತು. ಅದೂ ಅಲ್ಲದೆ ಹಣದ ಆಸೆ ಇಲ್ಲದೇ ತಾನವನ ಮನೆಯ ಕೆಲಸ ಮಾಡಿಸಿದ್ದ. ಸಾಧುವಾದ ನಿಸಾರ ಯಾವ ಮನಸ್ತಾಪದ ಮಾತುಗಳನ್ನೂ ಆಡದೇ ಮುಂದಿನ ಯೋಜನೆ ಮಾಡತೊಡಗಿದೆ.

ಅಶೋಕನ ಮಡದಿ ಅವನನ್ನು ಮನೆ ಎದುರು ಕಾಣುತ್ತಲೆ ಸಿಡುಕು ಮುಖದಿಂದ ನೋಡಿದಳು. ನಿಸಾರನ ನಿಟ್ಗತಿಕತನ ಎಲ್ಲರಿಗೂ ಗೊತ್ತಿದ್ದ ವಿಷಯವಾಗಿತ್ತು. ಹೆಂಡತಿ ಕುಣಿಸಿದಂತೆ ಕುಣಿಯುತ್ತಿದ್ದ ಅಶೋಕ್ ಕೂಡ, ತನ್ನಿಂದೇನೂ ಆಗಲಾರದು ಅದೂ ಅಲ್ಲದ ಬಡ್ಡಿಗೆ ಹಣ ಕೊಡುವವರ ವಿಷಯ ತನಗೇನೂ ಗೊತ್ತಿಲ್ಲವೆಂದು ಹೇಳಿ ಕಳುಹಿಸಿಬಿಟ್ಟ.

ಈಗ ನಿಸಾರನಿಗೆ ತಾನು ಮುಂಗಡ ಕೊಟ್ಟ ಹತ್ತು ಸಾವಿರ ಹಣ ಕೂಡ ಹೋಗುವುದೇ ಎಂಬ ಭಯ ಹುಟ್ಟಿಕೊಂಡಿತ್ತು. ಲಕ್ಷಾಂತರ ವೆಚ್ಚ ಮಾಡಿದ ತನಗೆ ಕೇವಲ ನಲವತ್ತು ಸಾವಿರ ಹುಟ್ಟುತ್ತಿಲ್ಲ ಎನಿಸಿದರೂ ಅದಕ್ಕವನು ಯಾರನೂ ದೋಷಿಯಾಗಿ ನಿಲ್ಲಿಸಲಿಲ್ಲ. ಯಾರನ್ನು ಶಪಿಸಲಿಲ್ಲ. ಭಾರವಾದ ಮನಸ್ಸಿನಿಂದ ಅವನು ಅನಿಲನ ಮನೆಯಕಡೆ ಹೆಜ್ಜೆ ಹಾಕತೊಡಗಿದ.

ಸಲೀಮ್, ಅಶೋಕ, ಅನಿಲ್ ಮತ್ತು ರಾಜನ್‌ರಿಗೆ ತಿಳಿದಂತೆ ನಿಸಾರ ಬಹಳ ಒಳ್ಳೆಯ ವ್ಯಕ್ತಿ. ವರಟು ಸ್ವಭಾವದ ಅನಿಲ್‌ನಿಗೆ ನಿಸಾರನ ಭೋಳೆತನದ ಮೇಲೆ, ದಾನಿತ್ವ ಭಾವದ ಬಗ್ಗೆ ಎಲ್ಲಿಲ್ಲದ ಕೋಪ. ಅದನ್ನವನು ನಿಸಾರನ ಮುಂದೆಯೂ ಎಷ್ಟೋ ಸಲ ಕಾರಿಕೊಂಡಿದ್ದ. ಯಾವುದು ಏನೇ ಆಗಲಿ ನಿಸಾರನ ಸ್ವಭಾವವನ್ನು ಬದಲಿಸಲು ಯಾರಿಂದಲೂ ಸಾಧ್ಯ ವಾಗಿರಲಿಲ್ಲ. ಮಿತ್ರನನ್ನು ಹಾರ್ದಿಕವಾಗಿ ಬರಮಾಡಿಕೊಂಡು ದರ್ಶನಕ್ಕೆ ಕಾರಣವೇನೆಂದು ಕೇಳಿದ ಅನಿಲ್, ಅದಕ್ಕಾಗೇ ಕಾದವನಂತೆ ಕಾಗದದ ಫೈಲನ್ನು ಅವನಿಗೆ ಕೊಟ್ಟು ತನ್ನ ಮಗನ ಭವಿಷ್ಯದ ಕಾಳಜಿ ವ್ಯಕ್ತಪಡಿಸಿದ ನಿಸಾರ. ಫೈಲನ್ನು ಬಿಚ್ಚದೇ ಸೌದಿಗೆ ಕರೆದೊಯ್ಯುತ್ತಿರುವ ಏಜೆಂಟನ ಬಗ್ಗೆ, ಅಲ್ಲಿ ಹೋದರೆ ಅವನ ಮಗನಿಗೆ ಸಿಗಬಹುದಾದ ಸಂಬಳದ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದ ಅನಿಲ್. ನಿಸಾರನಲ್ಲಿ ಆಶೆ ಚಿಗುರಿತು. ಪ್ರತಿ ವಿಷಯವನ್ನು ಕೂಲಂಕುಷವಾಗಿ ವಿವರಿಸಿದ. ಅವನ ಹೇಳಿಕೆ ಮುಗಿದ ಮೇಲೆ ಇಬ್ಬರೂ ಹೊರಹೋದರು. ಟೆಲಿಫೋನ್ ಬೂತ್‌ನಿಂದ ಯಾರೊಡನೆಯೋ ಬಹಳ ಹೊತ್ತು ಮಾತಾಡಿದ ಅನಿಲ್.

ಮಿತ್ರನೊಡನೆ ತಿರುಗಿ ಮನೆಗೆ ಬರುತ್ತಾ ಒಬ್ಬ ನಾಲ್ಕು ಪರ್‍ಸೆಂಟ್ ಬಡ್ಡಿಯ ಮೇಲೆ ನಲವತ್ತು ಸಾವಿರ ಕೊಡಲು ಒಪ್ಪಿಕೊಂಡಿದ್ದಾನೆಂದು ನಾಳೆ ಎಲ್ಲಾ ಕಾಗದಪತ್ರಗಳು ಸಿದ್ಧಮಾಡಿಕೊಂಡು ಬಂದು ಹಣ ತೆಗೆದುಕೊಂಡು ಹೋಗಬೇಕೆಂದು ಹೇಳಿದ. ಅದನ್ನು ಕೇಳಿದ ನಿಸಾರನ ಸಂತಸಕ್ಕೆ ಪಾರವೇ ಇರಲಿಲ್ಲ. ಅದನ್ನು ಗಮನಿಸದೇ ಆ ಸಾಲ ಆದಷ್ಟು ಬೇಗ ತೀರಿಸಬೇಕೆಂದು, ತಿಂಗಳಿಗೆ ಹದಿನಾರು ನೂರು ಬರೀ ಬಡ್ಡಿ ಕಟ್ಟುತ್ತಾ ಹೋಗಬಾರದೆಂದು, ತನ್ನ ಪ್ರತಿಷ್ಠೆ ಅಡವಾಗಿಟ್ಟು ಹಣ’ ಕೂಡಿಸುತ್ತಿರುವದಾಗಿ ಹೇಳಿದ ಅನಿಲ್, ಅವನ ಪ್ರತಿ ಮಾತನ್ನು ಆಣೆ ಪ್ರಮಾಣಗಳನ್ನು ಮಾಡಿ ಒಪ್ಪಿಕೊಂಡ ನಿಸಾರ.

ಅನಿಲ್ ಆಡಿದ ಮಾತು ತಪ್ಪುವವನಲ್ಲ. ಮರುದಿನ ನಿಸಾರನಿಗೆ ನಲವತ್ತು ಸಾವಿರ ಕೊಡಿಸಿದ. ಅವನಿಗೆ ತನ್ನ ಆ ಭಾರ ಸೂಚಿಸಿದ ನಿಸಾರ ಇನ್ನೂ ಮೂರು, ನಾಲ್ಕು ದಿನದಲ್ಲಿ ತನ್ನ ಮಗ ಸೌದಿಗೆ ಹೋಗುವುದು ಖಂಡಿತವೆಂದು ಹೇಳಿ ಹೋದ.

ಎಲ್ಲರಿಗೂ ಸಂತಸ, ದುಃಖಗಳನ್ನು ಹಂಚುತ್ತಾ ದಿನಗಳು ಹೊರಳುತ್ತಿದ್ದವು. ನಿಗದಿತ ದಿನ ನಿಸಾರನ ಮಗ ಸೌದಿಗೆ ಹೋಗಲಿಲ್ಲವೆಂಬುವುದು ಅನಿಲ್‌ನಿಗೆ ಗೊತ್ತಾಯಿತು. ಯಾವುದೋ ಕಾರಣಗಳನ್ನು ಹೇಳಿ ಹೋಗುವ ದಿನವನ್ನು ಒಂದು ವಾರ ಮುಂದೂಡ್ಡಿದ್ದ ಏಜೆಂಟ್. ಅದು ಅನಿಲ್‌ನಲ್ಲಿ ಕಳವಳವನ್ನು ಮಾಡಿತ್ತು. ನಿಸಾರ ಒಳ್ಳೆಯವನೆಂಬುವುದರಲ್ಲಿ ಸಂದೇಹವಿಲ್ಲ. ಆದರೆ ನಲವತ್ತು ಸಾವಿರದ ಸಾಲ ಹೇಗೆ ತೀರಿಸುತ್ತಾನೆ? ಅದು ತನ್ನ ತಲೆಯ ಮೇಲೆಯೇ ಬರುವುದೇ ಎಂಬ ಆತಂಕ. ಆ ವಿಷಯ ಅವರ ಇನ್ನಿತರ ಮಿತ್ರರಿಗೂ ತಿಳಿದಿತ್ತು. ತಾವು ಬುದ್ಧಿವಂತಿಕೆ ಇಂದ ಹಣ ಕೊಡದಿದ್ದದು ಒಳ್ಳೇಯದಾಯಿತು. ಅನಿಲ್‌ ಔದಾರ್‍ಯ ತೋರಿ ಮುಳುಗಿದ ಎಂದವರು ತಮ್ಮ ತಮ್ಮಲೇ ಮಾತನಾಡಿ ನಗೆ ಆಡಿಕೊಂಡಿದ್ದರು. ಆ ವಿಷಯವೂ ಅನಿಲ್‌ನ ಕಿವಿಯವರೆಗೆ ಬಂದು ತಲುಪಿತ್ತು. ನಿಸಾಹಯನಾದ ಅವನಲ್ಲಿ ಎಲ್ಲಿಲ್ಲದ ಸಿಟ್ಟು, ತುಂಬಿ ಬರುತ್ತಿತ್ತು.

ಒಂದು ವಾರವೂ ಆಯಿತು ನಿಸಾರನ ಮಗ ಸೌದಿಗೆ ಹೋಗಲಿಲ್ಲ ಮತ್ತೆ ಇಲ್ಲದ ಕಾರಣಗಳನ್ನು ಹುಟ್ಟಿಸಿ ಹೇಳಿದ್ದ ಏಜೆಂಟ್, ಯಾವುದು ಎಷ್ಟು ನಿಜ, ಯಾವುದು ಎಷ್ಟು ಸುಳ್ಳು ಎಂಬುವುದು ಪರೀಕ್ಷಿಸಿನೋಡುವ ಸ್ಥಿತಿಯಲ್ಲಿಯೂ ಇರಲಿಲ್ಲ ಅನಿಲ್. ನಿಸಾರ ಒಳ್ಳೆಯ ವ್ಯಕ್ತಿ, ನಂಬಬೇಕು, ಕಾದು ನೋಡಬೇಕು ಎಂದು ತನಗೆ ತಾನೇ ಸಮಾಧಾನ ಹೇಳಿಕೊಳ್ಳುತ್ತಿದ್ದ.

ಹಾಗೇ ಒಂದು ತಿಂಗಳು ಉರುಳಿಹೋಯಿತು. ನಿಸಾರನ ಮಗ ಎಜೆಂಟ್‌ನೊಡನೆ ಮುಂಬಯಿಯಲ್ಲಿದ್ದ. ಅವನು ಅಲ್ಲಿಂದ ಸೌದಿಗೆ ಹೋಗುತ್ತಾನೆ ಮತ್ತೆ ಮನೆಗೆ ಬರುತ್ತಾನೋ ಹೇಳುವಂತಿಲ್ಲ. ಅಂದರೆ ಸರಿಯಾಗಿ ತಿಂಗಳಾಗುತ್ತಿದ್ದಂತೆ ನಿಸಾರ ಬಡ್ಡಿಯ ಹದಿನಾರು ನೂರು ತಂದುಕೊಟ್ಟು ಅವನು ಯಾವ ಚಿಂತೆಯೂ ಮಾಡಬಾರದೆಂದು ತನ್ನ ಮಗ ಖಚಿತವಾಗಿ ಸೌದಿಗೆ ಹೋಗುವುದಾಗಿ, ಹೋಗದಿದ್ದರೂ ಅವನು ಕೊಡಿಸಿದ ಹಣ ತಾನೇ ಏನಾದರೂ ಮಾಡಿ ಹಿಂತಿರುಗಿಸುವದಾಗಿ ಅನಿಲ್‌ನಿಗೆ ಹೇಳಿಹೋದ ನಿಸಾರ.

ಆದರೂ ಅನಿಲ್‌ನ ಚಿಂತೆ ದೂರವಾಗಲಿಲ್ಲ. ನಾಲ್ಕು ತಿಂಗಳು ಬಡ್ಡಿ ಕಟ್ಟಿದ ಮೇಲೆ ನಿಸಾರ ಕೈಮೇಲೆತ್ತಬಹುದು ಆಗ ತಾನೇನೂ ಮಾಡುವಂತಿಲ್ಲ. ತಾನೇ ಆ ನಲವತ್ತು ಸಾವಿರ ಸಾವುಕಾರನಿಗೆ ಕಟ್ಟಬೇಕು. ಆ ನಲವತ್ತು ಸಾವಿರದಿಂದ ತಾನೇನೇನು ಮಾಡಬಹುದಾಗಿತ್ತೆಂಬ ಯೋಚನೆ ಬಂದಾಗ ಹೊಟ್ಟೆಯಲ್ಲಿ ಯಾರೊ ಕೈ ಹಾಕಿ ಕದಡಿದಂತಾಗುತ್ತಿತ್ತು.

ನಿಸಾರನಿಗೆ ಸಾಲ ಕೊಡದ ಇನ್ನಿತರ ಮಿತ್ರರ ಎಣಿಕೆ ತಪ್ಪಾಗಿರಲಿಲ್ಲ. ಆರು ತಿಂಗಳಾದರೂ ನಿಸಾರನ ಮಗ ಹೊರದೇಶಕ್ಕೆ ಹೋಗಲಿಲ್ಲ. ಮುಂಬಯಿಯಲ್ಲಿಯೇ ಇದ್ದ. ಇಷ್ಟಾದರೂ ನಿಸಾರನಿಗೆ ಆ ಏಜೆಂಟ್‌ನ ಮೇಲೆ ಎಲ್ಲಿಲ್ಲದ ಆಸೆ, ಅವನು ಬಡ್ಡಿಯ ಹಣವನ್ನು ಸರಿಯಾದ ಸಮಯಕ್ಕೆ ಕೊಡುತ್ತಿದ್ದ. ಆಗ ಬಂದಾಗಲೆಲ್ಲಾ ತನ್ನ ಮಗ ಸೌದಿಗೆ ಹೋಗುವುದು ಖಚಿತವೆಂದು ಅಷ್ಟೇ ವಿಶ್ವಾಸದ ದನಿಯಲ್ಲಿ ಹೇಳುತ್ತಿದ್ದ. ಅನಿಲ್‌ನ ಮುಖಾಂತರ ಹಣಕೊಟ್ಟ, ಸಾಹುಕಾರ ಅಸಲನ್ನು ಕೇಳಲು ಆರಂಭಿಸಿದ್ದ. ಮುಂದೇನು ಮಾಡಬೇಕೆಂಬ ಅಯೋಮಯ ಸ್ಥಿತಿಯಲ್ಲಿ ಸಿಲುಕಿಕೊಂಡಿದ್ದ ಅನಿಲ್, ಅವನ ಮಿಕ್ಕ ಮಿತ್ರರಿಗೆ ಅದೊಂದು ತಮಾಷೆಯ ಸಂಗತಿಯಾಗಿತ್ತು.

ಇಂತಹದೇ ಯೋಚನೆಯಲ್ಲಿ ಅನಿಲ್ ಒಂದು ದಿನ ಕುಳಿತಾಗ ಮನೆ ಎದುರು ಸ್ಕೂಟರಿನ ಸದ್ದಾಯಿತು. ಯಾರಿರಬಹುದು ಎಂದುಕೊಳ್ಳುತ್ತಾ ಬಾಗಿಲಿಗೆ ಬಂದಾಗ ಗಾಡಿಯನ್ನು ಸ್ಟಾಂಡಿಗೆ ಎಳೆಯುತ್ತಿದ್ದ ನಿಸ್ಸಾರನ ಮಗ. ಅವನ ಮುಖದಲ್ಲಿ ಸಂತಸ ಎದ್ದು ಕಾಣುತ್ತಿತ್ತು. ಕೈ ಚಾಚಿ ಮುಂದೆ ಬಂದು ಹೇಳಿದ.

“ಚಾಚಾ! ನಾನು ನಾಳೆ ಹೋಗುತ್ತಿದ್ದೇನೆ. ನಿಮ್ಮ ಉಪಕಾರ ಮರೆಯುವ ಹಾಗಿಲ್ಲ. ಭೇಟಿಯಾಗಿ ಹೋಗಲು ಬಂದೆ”

ಅವನನ್ನು ಗಾಢವಾಗಿ ಅಪ್ಪಿದ ಅನಿಲ್, ಬಹುಶಃ ಅವನಿಗೆ ನಿಸಾರನಿಗಾದದ್ದಕ್ಕಿಂತ ಹೆಚ್ಚು ಸಂತಸವಾಗಿತ್ತು. ಹೊರದೇಶಕ್ಕೆ ಹೋಗುವವನಿಗೆ ಹಿರಿಯನಾದ ತಾನು ಏನಾದರೂ ಉಪದೇಶ ಕೊಡಬೇಕೆಂಬಂತೆ ಹೇಳಿದ

“ಹಣಕ್ಕೆ ಮರ್‍ಯಾದೆ ಕೊಡು! ಅದು ನಿನಗೆ ಮರ್‍ಯಾದೆ ತಂದುಕೊಡುತ್ತದೆ. ನಿನ್ನ ಅಪ್ಪನ ಹಾಗೆ ಹಣ ಪೋಲು ಮಾಡಬೇಡ”

“ಇಲ್ಲ ಚಾಚಾ! ನಾ ಖಂಡಿತ ಹಾಗೆ ಮಾಡುವುದಿಲ್ಲ… ನಮ್ಮ ದಾರಿದ್ರ್ಯಕ್ಕೆ ಮುಖ್ಯ ಕಾರಣ ನಮ್ಮ ದೊಡ್ಡ ಕುಟುಂಬ. ನಾನು ಹೆಚ್ಚು ಸಂತಾನವನ್ನು ಈ ಲೋಕದಲ್ಲಿ ತರುವುದಿಲ್ಲ. ನನಗೊಂದು ಮಗುವಾದರೆ ಸಾಕು”

ನಿಸಾರನ ಮಗ ಇಷ್ಟು ಬುದ್ಧಿವಂತನಿರಬಹುದೆಂದು ಕೊಂಡಿರಲಿಲ್ಲ ಅನಿಲ್.

“ಶಭಾಷ್” ಎಂದವನ ಬೆನ್ನು ತಟ್ಟಿದ. ಸ್ಕೂಟರ್ ದೂರವಾಗುತ್ತಿದ್ದಂತೆ ಈ ಯೋಚನೆ ನಿಸಾರನಿಗೇಕೆ ಬಂದಿರಲಿಕ್ಕಿಲ್ಲ ಎಂದು ಯೋಚಿಸುವಂತಾಯಿತು ಅನಿಲನಿಗೆ
*****

Tagged:

Leave a Reply

Your email address will not be published. Required fields are marked *

ಅವಳು ಅಡುಗೆ ಮನೆಯ ಕಪ್ಪಾದ ಡಬ್ಬಿಗಳನ್ನು, ಉಳಿದ ಸಾಮಾನುಗಳನ್ನು ತೆಗೆದು ತೊಳೆಯಲು ಆ ಮಣ್ಣಿನ ಮಾಡು ಹಂಚಿನ ಮನೆಯ ಮುಂದಿನ ತೆಂಗಿನಕಟ್ಟೆಯಲ್ಲಿ ಹಾಕಿದ ಅಗಲ ಹಾಸುಗಲ್ಲ ಮೇಲೆ ಕೈಲಿ ಹಿಡಿದಷ್ಟು ತಂದು ತಂದು ಇಡುತ್ತಿದ್ದಳು. ಏಳರ ಬಾಲೆ ಮಗಳು ಕೂಡ ತನ್ನ ಕೈಗೆ ಎತ್ತುವಂತಹ ಡಬ್ಬಿಗಳನ್ನು...

ಆಹಾ! ಏನು ಕಡಲು! ಅ೦ತವಿಲ್ಲದ ಕಡಲು!! ಅಪಾರವಾಗಿಹ ಕಡಲು! ದಿಟ್ಟಿ ತಾಗದ ಕಡಲು!! ಆ ಕಡಲ ಒಡಲಲ್ಲಿ ಏನು ತೆರೆ! ಏನು ನೊರೆ!! ಏನು ಅಂದ! ಎನಿತು ಚಂದ! ಬಿಚ್ಚಿ ಮುಚ್ಚುವ ಅದರ ನಯವಾದ ತುಟಿಗಳು ಹೊನ್ನರವಿ ಎಸೆದಿರುವ ಚಿನ್ನದಲುಗಳೇಸು! ಬಣ್ಣ ಬಣ್ಣಗಳುಗುವ ಅಚ್ಚು ಪಡಿಯಚ್ಚುಗಳ ಹೊಳಪಿನ ಏನ...

ಸರ್, ಗುಡ್ ಮಾರ್ನಿಂಗ್, ಮೇ ಐ ಕಮೀನ್ ಸರ್ – ನಿತ್ಯ ಆಫೀಸಿನ ಅವಧಿ ಪ್ರಾರಂಭವಾಗುತ್ತಲೇ ಹಿಂದಿನ ದಿನ ರೆಡಿ ಮಾಡಿದ ಹತ್ತಾರು ಕಾಗದ ಪತ್ರಗಳಿಗೆ ಸಹಿ ಪಡೆಯಲು, ಇಲ್ಲವೇ ಹಿಂದಿನ ದಿನದ ಎಲ್ಲ ಫೈಲುಗಳ ಚೆಕ್ ಮಾಡಿಸಲು, ಕೈಯಲ್ಲಿ ಫೈಲುಗಳ ಕಟ್ಟು ಹಿಡಿದು ಬಾಗಿಲ ಮರೆಯಲ್ಲಿ ನಿಂತು ...

ಕೋತಿಯಿಂದ ನಿಮಗಿನ್ನೆಂಥಾ ಭಾಗ್ಯ! ನೀವು ಹೇಳುವ ಮಾತು ಸರಿ! ಬಿಡಿ! ತುಂಗಮ್ಮನವರೆ. ಇದೇನೆಂತ ಹೇಳುವಿರಿ! ಯಾರಾದರೂ ನಂಬುವ ಮಾತೇನರೀ! ಕೊತೀಂತೀರಿ. ಬಹುಲಕ್ಷಣವಾಗಿತ್ತಿರಿ ಎಂತೀರಿ? ಅದು ಹೇಗೋ ಎನೋ, ನಾನಂತೂ ನಂಬಲಾರನರೀ!” “ಹೀಗೆಂತ ನೆರ ಮನೆ ಪುಟ್ಟಮ್ಮನವರು ಹೇಳಿದರು....

ಹೊರ ಕೋಣೆಯಲ್ಲಿ ಕಾಲೂರಿ ಕೂತು ಬೀಡಿ ಕಟ್ಟುತ್ತಿದ್ದ ಸುಮಯ್ಯಾಗೆ ಕಣ್ಣು ಮತ್ತು ಕಿವಿಯ ಸುತ್ತಲೇ ಆಗಾಗ ಗುಂಯ್.. ಎನ್ನುತ್ತಾ ನೊಣವೊಂದು ಸರಿಸುಮಾರು ಹದಿನೈದು ನಿಮಿಷಗಳಿಂದ ಹಾರಾಡುತ್ತಾ ಕಿರಿಕಿರಿ ಮಾಡುತ್ತಿತ್ತು. ಹಿಡಿದು ಹೊಸಕಿ ಹಾಕಬೇಕೆಂದರೆ ಕೈಗೆ ಸಿಗದೆ ಮೈ ಪರಚಿಕೊಳ್ಳಬೇಕೆನ್ನ...

ಮೂಲ: ಗಾಯ್ ಡಿ ಮೊಪಾಸಾ ಗಗನಚುಂಬಿತವಾದ ಬೀಚ್‌ ವೃಕ್ಷಗಳೊಳಗಿಂದ ತಪ್ಪಿಸಿಕೊಂಡು ಸೂರ್ಯ ಕಿರಣಗಳು ಹೊಲಗಳ ಮೇಲೆ ಬೆಳಕನ್ನು ಕೆಡುವುವುದು ಬಲು ಅಪರೂಪ. ಬೆಳೆದ ಹುಲ್ಲನ್ನು ಕೊಯ್ದುದರಿಂದಲೂ, ದನಗಳೂ ಕಚ್ಚಿ ಕಚ್ಚಿ ತಿಂದುದರಿಂದಲೂ ನೆಲವು ಅಲ್ಲಲ್ಲಿ ತಗ್ಗು ದಿನ್ನೆಯಾಗಿ ಒಡೆದು ಕಾಣುತ್ತಿ...