ಚಿತ್ರ: ಮ್ಯಾಗೀ ಮೋರಿಲ್

ತಿಂಡಿ, ಕಾಫಿ, ಊಟ, ಮುಂತಾದ ಬಿಸಿ ಪದಾರ್ಥಗಳನ್ನು ತಣ್ಣಗಾಗಿಸಲು ಬಾಯಿಂದ ಉಸಿರು ಊದುವ ಹವ್ಯಾಸ ಬಹಳ ಜನರಲ್ಲಿದೆ. ಹಾಗೆ ಉರುಬುವುದು ತೀರ ತಪ್ಪು. ಅನಾವಶ್ಯಕ ಕೂಡ; ಪ್ರತಿಯೊಬ್ಬರ ಬಾಯಲ್ಲಿನ ಗಾಳಿ ಒಂದೇ ತೆರನಾಗಿರುವುದಿಲ್ಲ. ವ್ಯಕ್ತಿಯ ಆರೋಗ್ಯ ಸ್ಥಿತಿಯನ್ನು ಅವಲಂಬಿಸಿರುತ್ತದೆ ಮತ್ತು ಜೊಲ್ಲಿನ ತುಂತುರಿನಿಂದೊಡಗೂಡಿ ತೇವವಾಗಿರುತ್ತದೆ. ಹೀಗೆ ಉರುಬಿದಾಗ ಬಾಯಿಯಿಂದ ಹೊರಟ ಗಾಳಿ ಆಹಾರ ಪಾನೀಯಗಳ ಮೇಲೆ ಜೊಲ್ಲಿನ ತುಂತುರು ಬೀಳುತ್ತದೆ. ತಮ್ಮದೇ ಆಹಾರವನ್ನು ತಾವು ಉರುಬಿಕೊಂಡರೆ ಪರವಾಗಿಲ್ಲ. ಆದರೆ ಎಷ್ಟೋ ವೇಳೆ ಇತರರು [ಮಕ್ಕಳಿಗೆ ತಿನ್ನಿಸುವಾಗ, ಕುಡಿಸುವಾಗ] ಉರುಬುವುದೇ ಹೆಚ್ಚು. ಹೊಟೇಲುಗಳಲ್ಲಿ ಹಾಲಿನ ಕೆನೆ ತೆಗೆಯಲು ಉರುಬಿ ತಮ್ಮ ಎಂಜಲನ್ನು ಎಷ್ಟೋ ಮಂದಿಗೆ ಹಂಚುತ್ತಾರೆ. ತಮಗೆ ಅರಿವಿಲ್ಲದೆ ಮನೆಯಲ್ಲೂ ಕೂಡ ಅಡಿಗೆ ಮಾಡುವ ಗೃಹಿಣಿಯರು ಅಥವಾ ಅಡಿಗೆಯವನು ಹೀಗೆ ಇತರರಿಗೆ ತನ್ನ ಎಂಜಲನ್ನು ಹಂಚುವುದುಂಟು.

ಹೀಗೆ ಮಾಡುವಾಗ ಉರುಲಿದವರ ಬಾಯಲ್ಲಿ ಇರಬಹುದಾದ ರೋಗ ಕ್ರಿಮಿಗಳು ಮತ್ತು ದುರ್ಗಂಧ ಇತರರಿಗೂ ಹಂಚಿಕೆಯಾಗುತ್ತದೆ. ಇದರಿಂದ ಹಲವು ರೋಗ ಹರಡಲು ಸಹಕಾರಿಯಾಗುತ್ತದೆ. ಶ್ವಾಸಕೋಶ [ತೊಳ್ಳೆ]ದಲ್ಲಿನ ಕ್ಷಯ ನಾಯಿಕೆಮ್ಮು ದಡಾರ ಸಿತಾಳ ಸಿಡುಬು ಮುಂತಾದ ಹಲವು ಬಗೆಯ ಕಾಯಿಲೆಗಳು ಹರಡುವ ಸಾಧ್ಯತೆಯಿದೆ. ಹೀಗಾಗಿ ಜನತೆಯ ಹಿತಕ್ಕೆ ಧಕ್ಕೆ ತರುವ ಈ ಅಭ್ಯಾಸ ಏಕೆ ಬೇಕು? ಬಿಸಿ ಆರಿಸಿಕೊಳ್ಳಬೇಕಾದಾಗ ರಟ್ಟು, ಮಂದವಾದ ಕಾಗದ ಅಥವಾ ಬೀಸಣಿಗೆಯನ್ನು ಬಳಸಬಹುದು.

ಅಪಾಯ:

ಬಸಿಯಲ್ಲಿ ಚಹ ಕುಡಿಯುವುದು ಅಸಭ್ಯ ಲಕ್ಷಣವೆಂದು ಭಾವಿಸುವ ಜನರೆಷ್ಟೋ ಉಂಟು. ಅಸಭ್ಯ ಲಕ್ಷಣವೆನಿಸಿದರೂ ಹೀಗೆ ಕುಡಿಯುವುದು ಆರೋಗ್ಯ ದೃಷ್ಠಿಯಿಂದ ಬಹಳ ಒಳ್ಳೆಯದು. ಇದರಿಂದ ಬಹಳ ಬಿಸಿಯಾದ ಚಹ ಹೊಟ್ಟೆಗೆ ಹೋಗುವುದಿಲ್ಲ. ಬಹಳ ಬಿಸಿಯಾದ ಚಹ ಉದರ ಕೋಶದ ಗೋಡೆಗಳಿಗೆ ಅಪಾಯವುಂಟುಮಾಡುವುದು. ಆದ್ದರಿಂದ ಚಹ, ಹಾಲು ಏನೇ ಕುಡಿಯುವಾಗ ಬಸಿಯಲ್ಲೇ ಕುಡಿಯಿರಿ.
*****