‘ತಲೆದಂಡ’ದ ನಾಯಕ

‘ತಲೆದಂಡ’ದ ನಾಯಕ

ತಾನು ನಿರ್ದೇಶಿಸಿದ ನಾಟಕವೊಂದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿತವಾಗಬೇಕೆಂದು ರಂಗ ನಿರ್ದೇಶಕ ಜಯತೀರ್ಥ ಜೋಶಿ ಅವರ ಅದಮ್ಯ ಬಯಕೆ ಆಗಿತ್ತು. ಕರ್ನಾಟಕ ನಾಟಕ ಅಕಾಡಮಿಯ ಸಹಯೋಗದೊಂದಿಗೆ ಬೆಂಗಳೂರಿನಲ್ಲಿ ನವೆಂಬರ್ ದಿನಾಂಕ ೧೫ ರಂದು ನಡೆದ ತಿಂಗಳ ನಾಟಕೋತ್ಸವದಲ್ಲಿ ಜಯತೀರ್ಥ ಜೋಶಿ ನಿರ್ದೇಶಿಸಿದ ಚಂದ್ರಶೇಖರ ಕಂಬಾರರ “ಜಿ.ಕೆ. ಮಾಸ್ತರನ ಪ್ರಣಯ ಪ್ರಸಂಗ” ನಾಟಕವು ಆಯ್ಕೆ ಆಗಿದ್ದಿತು. ಜಯತೀರ್ಥ ಜೋಶಿ ಅವರ ಅದಮ್ಯ ಬಯಕೆಯಂತೆ ಈ ನಾಟಕ ದಿನಾಂಕ ೧೫ ನವೆಂಬರರಂದು ರವೀಂದ್ರ ಕಲಾ ಕ್ಷೇತ್ರದಲ್ಲಿ ಪ್ರದರ್ಶಿತವಾಗ ಬೇಕಾಗಿತ್ತು. ಬಹು ದಿನಗಳ ತಮ್ಮ ಆಶೆ ಪೂರ್ತಿಯಾಗುತ್ತಿರುವುದರಿಂದ ಜಯತೀರ್ಥ ಜೋಶಿಯವರಿಗೆ ಸಹಜವಾಗಿಯೇ ಸಂತೋಷವಾಗಿತ್ತು. ದಿನಾಂಕ ೧೫ರ ಸಂಜೆ ಅವರು ಬೆಳಗಾವಿ ತಂಡ ‘ರಂಗ ಸಂಪದ’ವನ್ನು ಬೀಳ್ಕೊಟ್ಟರು. ದಿನಾಂಕ ೧೬ರಂದು ಸಂಜೆ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ.

ಆದರೆ ವಿಧಿ ಇನ್ನೊಂದು ಬಗೆದಿತ್ತು. ನಾಟಕ ದಿನವೇ ಜಯತೀರ್ಥ ನಮ್ಮೆಲ್ಲರಿಂದ ಅಗಲಿದರು. ರಾತ್ರಿಯೇ ಅವರ ಅಸ್ವಸ್ಥದ ಕಾರಣ ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಸೇರಿಸಾಗಿತ್ತು. ನಸುಕಿನ ೩ ಗಂಟೆಗೆ ಜಯತೀರ್ಥ ಈ ಜಗತ್ತಿಗೆ ವಿದಾಯ ಹೇಳಿದರು. ಯಾವ ದಿನ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತಮ್ಮ ನಾಟಕದ ಪ್ರದರ್ಶನದ ಬಗೆಗೆ ಕಂಡ ಕನಸು ನನಸಾದ ದಿನವೇ ಜಯತೀರ್ಥ ಜೋಶಿ ಅವರ ಜೀವನಕ್ಕೆ ಕೊನೆಯ ಪರದೆ ಬಿತ್ತು.

ಕರ್ನಾಟಕ ಕಂಡ ಅತ್ಯಂತ ಪ್ರತಿಭಾವಂತ ನಾಟಕ ನಿರ್ದೇಶಕರಲ್ಲಿ ಜಯತೀರ್ಥ ಜೋಶಿ ಅವರು ಒಬ್ಬರು. ಹಾಗೆ ನೋಡಿದರೆ ಅವರ ಮನೆತನವೇ ಅಸಾದಾರಣ ಪ್ರತಿಭೆಯ ಮನೆತನ. ಗದುಗಿನ ಈ ಜೋಶಿ ಮನೆತನ ರಾಷ್ಟ್ರಮಟ್ಟದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ ಮನೆತನ. ಜಯತೀರ್ಥರ ಅಣ್ಣ ಭೀಮಸೇನ ಜೋಶಿ ಸಂಗೀತ ದಿಗ್ಗಜ, ಮತ್ತೊಬ್ಬ ಸಹೋದರ ಸುನೀಲ ಜೋಶಿ ಕ್ರಿಕೆಟ್ ಕ್ಷೇತ್ರದ ನಕ್ಷತ್ರ. ಇನ್ನೊಬ್ಬ ಸಹೋದರ ಸುಶೀಲೇಂದ್ರ ಜೋಶಿ ಸಿನೆಮಾ-ನಾಟಕ, ಹೀಗೆ ತಮ್ಮನ್ನು ತಾವು ತೊಡಗಿಸಿಕೊಂಡವರು. ಈಗ ನಮ್ಮಿಂದ ಅಗಲಿದ ಜಯತೀರ್ಥ ಜೋಶಿಯವರು ತಮ್ಮ ಪ್ರತಿಭೆಯಿಂದ ನಾಟಕ ಕ್ಷೇತ್ರವನ್ನು ಬೆಳಗಿದವರು. ನಾಟಕಗಳಿಗೆ ಹೊಸ ಆಯಾಮವನ್ನು ನೀಡಿದವರು.

೨೪.೧೧.೧೯೫೬ ರಲ್ಲಿ ಗದುಗಿನ ಸಮೀಪ ಶಿರಹಟ್ಟಿಯಲ್ಲಿ ಹುಟ್ಟಿದ ಜಯತೀರ್ಥ ಜೋಶಿ ವೃತ್ತಿಯಿಂದ ಕರ್ನಾಟಕ ಸರ್ಕಾರದ ವಾರ್ತಾ ಇಲಾಖೆಯಲ್ಲಿ, ಬೆಳಗಾವಿ ವಿಭಾಗದ ಉಪ ನಿರ್ದೇಶಕರು. ಪ್ರವೃತ್ತಿಯಿಂದ ನಾಟಕ ನಿರ್ದೇಶಕರು. ರಂಗ ನಾಟಕಗಳನ್ನು ಸಾದರಪಡಿಸುವ ಅವರ ಪ್ರತಿಭೆಯೇ ಅನನ್ಯವಾಗಿತ್ತು. ತಾವು ನಿರ್ದೆಶಿಸಲಿರುವ ನಾಟಕಗಳನ್ನು ಆಳವಾಗಿ ಅಭ್ಯಸಿಸಿ ನಾಟಕಕಾರನು ಸೃಷ್ಟಿಸಿದ ಲೋಕದಲ್ಲಿ ತಮ್ಮನ್ನು ತಾವು ಪೂರ್ತಿಯಾಗಿ ತೊಡಗಿಸಿಕೊಂಡು ಬಿಡುತ್ತಿದರು. ತಾವು ನಿರ್ದೇಶಿಸುವ ನಾಟಕಗಳನ್ನು ಬೇರೆ ರೀತಿಯಲ್ಲಿ ಅರ್ಥೈಸಿಕೊಂಡು ಅವುಗಳಿಗೆ ಒಂದು ಮಾಂತ್ರಿಕ ಸ್ಪರ್ಶವನ್ನು ನೀಡಿ, ನಾಟಕವನ್ನು ಜೀವಂತವಾಗಿ ರಂಗದ ಮೇಲೆ ತರುತ್ತಿದರು. ನಾಟಕ ನೋಡುವ ಪ್ರೇಕ್ಷಕನ ಮನಸ್ಥಿತಿಯನ್ನು ಅರ್ಥೈಸಿಕೊಂಡು ಆ ನಾಟಕದಲ್ಲಿ ಆತ ತಾನು ಸಹಭಾಗಿಯಾಗುವಂತೆ ವಾತಾವರಣವನ್ನು ಸೃಷ್ಟಿಸುವದು ಜಯತೀರ್ಥರ ಹೆಗ್ಗಳಿಕೆಯಾಗಿತ್ತು.

ಎರಡೂವರೆ ವರ್ಷ ಕಾಲ ಇಂಗ್ಲೆಂಡಿನ ಲಾಂಚೇಷ್ಟರ್‌ ವಿಶ್ವವಿದ್ಯಾಲಯದಲ್ಲಿ ನಾಟಕಗಳ ಬಗ್ಗೆಯೇ ಸ್ನಾತಕೋತ್ತರ ಪದವಿ ಅಭ್ಯಾಸಕ್ಕಾಗಿ ಅವರಿಗೆ ಫೆಲೋಶಿಪ್ ದೊರಕಿತ್ತು. ಲಾಂಚೆಸ್ಟರ್‌ ವಿಶ್ವವಿದ್ಯಾಲಯ ನಾಟಕಗಳ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿದೆ. ಇಂಗ್ಲೆಂಡಿಗೆ ಹೋಗುವ ಕಾಲಕ್ಕೆ ಜಯತೀರ್ಥ ಜೋಶಿ ವಾರ್ತಾ ಮತ್ತು ಪ್ರಚಾರ ಇಲಾಖೆಯಲ್ಲಿ ಅಧಿಕಾರಿಯಾಗಿ ಸೇರ್ಪಡೆಯಾಗಿದ್ದರು. ಇಂಗ್ಲೆಂಡಿನಿಂದ ಬಂದ ನಂತರ ಮೈಸೂರಿನ ಕರ್ನಾಟಕ ನಾಟಕ ‘ರಂಗಾಯಣ’ ಇವರ ಹಾದಿಯನ್ನೇ ಕಾಯುತ್ತಿತ್ತು. ಅಲ್ಲಿಂದ ಬಂದವರೇ ರಂಗಾಯಣದಲ್ಲಿ ಉಪ ನಿರ್ದೆಶಕರಾಗಿ ಕಾರ್ಯನಿರ್ವಹಿಸಿದರು.

ಈ ಹಿಂದೆ ನಾಟಕಗಳ ಬಗ್ಗೆ ಕಂಡ ಕನಸಿಗೆ ರಂಗಾಯಣ ಆಗಸದಷ್ಟು ವಿಸ್ತಾರವಾದ ಕ್ಷೇತ್ರವಾಗಿತ್ತು. ಗದುಗಿನ ಆರಂಭದ ದಿನಗಳಲ್ಲಿ ಜಯತೀರ್ಥ ಉದ್ವಸ್ತ ಧರ್ಮಶಾಲೆ ಮತ್ತು ಕೇಳು ಜನಮೇಜಯ ನಾಟಕಗಳನ್ನು ನಿರ್ದೇಶಿಸಿದ್ದರು. ಈ ನಾಟಕಗಳಿಗೆ ಅವರು ನೀಡಿದ ತಿರುವುಗಳನ್ನು ಆಗಿನ ಪ್ರೇಕ್ಷಕರು ಒಪ್ಪಿಕೊಂಡಿದ್ದರು. ಮತ್ತು ಸಂತೋಷವನ್ನು ವ್ಯಕ್ತಪಡಿಸಿದ್ದರು. ಅಸಂಗತ ರೀತಿಯ ಈ ನಾಟಕಗಳನ್ನು ಜನರವರೆಗೆ ತೆಗೆದುಕೊಂಡು ಹೋಗಲು ಜಯತೀರ್ಥರ ಪ್ರತಿಭೆಯೇ ಕಾರಣವಾಗಿತ್ತು. ಇಂಗ್ಲೆಂಡಿನಲ್ಲಿಯ ರಂಗ ಶಿಕ್ಷಣ ನಾಟಕಗಳನ್ನು ಇತರರಿಗಿಂತ ಹೇಗೆ ಬೇರೆಯಾಗಿ ನೋಡಬೇಕೆಂಬ ಪಾಠಗಳನ್ನು ಕಲಿಸಿದ್ದಿತ್ತು. ಜಯತೀರ್ಥ ಜೋಶಿಯವರ ಮುಂಬರುವ ನಾಟಕಗಳಿಗೆ ಇಂಗ್ಲೆಂಡಿನ ಆಧುನಿಕ ರಂಗಭೂಮಿಯ ಸ್ಪರ್ಶ ಸಿಕ್ಕಿದ್ದಿತ್ತು.

ಈ ಹಿಂದೆ ಬಿ.ವಿ. ಕಾರಂತರು ರಂಗಾಯಣದ ನಿರ್ದೇಶಕರಾಗಿದ್ದರು. ಅವರ ಹೆಜ್ಜೆಯಲ್ಲಿ ಹೆಜ್ಜೆ ಹಾಕಿದ ಜಯತೀರ್ಥ ಜೋಶಿ, ಕಾರಂತರು ಕಂಡ ಕನಸುಗಳನ್ನು ನನಸಾಗಿಸಲು ಯಶಸ್ವಿಯಾದರು. ಕಾರಂತರ ಪ್ರೇರಣೆಯಂತೆಯೇ ಜೋಶಿ ರಾಷ್ಟ್ರೀಯ ರಂಗ ಶಾಲೆಗೆ ಸೇರ್ಪಡೆಯಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಜಗತ್ ಪ್ರಸಿದ್ಧ ನಾಟಕ ಪ್ರತಿಭೆಗಳಾದ ಅಲಕಾಜಿ, ಹಬೀಬ ತನವೀರ ಮುಂತಾದವರ ಸಂಪರ್ಕ ಬಂದಿತು. ಪರಿಸರಗಳನ್ನು ತುಂಬಾ ಸೂಕ್ಷ್ಮವಾಗಿ ಗುರುತಿಸುವ ಜಯತೀರ್ಥ ಜೋಶಿ ತಮ್ಮ ಸಂಪರ್ಕಕ್ಕೆ ಬಂದ ಪ್ರತಿಭೆಗಳಿಂದ ಅವರು ಸಾಧಿಸಿದ ಯಶಸ್ಸನ್ನು ನಾಟಕಗಳ ಮೂಲಕ ಕನ್ನಡದಲ್ಲಿ ತರಲು ಯತ್ನಿಸಿ, ಅದರಲ್ಲಿ ಯಶಸ್ವಿಯಾದರು.

ಧಾರವಾಡದ ಕರ್ನಾಟಕ ಕಲೋದ್ಧಾರಕ ಸಂಘದಿಂದ ನಿರ್ದೇಶಿಸಿದ ‘ಮೃಚ್ಛಕಟಿಕ’ ನಾಟಕ ಧಾರವಾಡದಲ್ಲಿ ಪ್ರಯೋಗವಾದಾಗ ಜಯತೀರ್ಥ ಜೋಶಿಯವರ ಅಗಾಧ ಪ್ರತಿಭೆ ಯಾತ್ರೆ ಆರಂಭವಾಯಿತು. ಈ ಹಿಂದೆ ಅನೇಕರು ನಾಟಕವನ್ನು ನಿರ್ದೇಶಿಸಿದ್ದರು. ಅವರಿಗಿಂತ ಭಿನ್ನವಾಗಿ ಜಯತೀರ್ಥ ಜೋಶಿ ಈ ನಾಟಕವನ್ನು ರಂಗದ ಮೇಲೆ ಸಾದರಪಡಿಸಿದರು. ಕಿತ್ತೂರಿನಲ್ಲಿ ಅವರು “ಧರ್ಮಪುರಿಯ ಶ್ವೇತ ವೃತ” ಅಭಿನಯಿಸಿದಾಗ ಅವರಲ್ಲಿಯ ಅಸಾಧಾರಣ ಪ್ರತಿಭೆಯ ನಿರ್ದೇಶಕ ಸಾಕಾರಗೊಳ್ಳುತ್ತಲಿದ್ದ. “ತಾಮ್ರ ಪತ್ರ” “ಸತ್ತವರ ನೆರಳು”ಗಳು ಕೂಡ ಯಶಸ್ವಿಯಾದವು. “ಸತ್ತವರ ನೆರಳ”ನ್ನು ಈ ಹಿಂದೆ ಬಿ.ವಿ. ಕಾರಂತ ನಿರ್ದೇಶಿಸಿ ಅದಕ್ಕೆ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಗುರುಗಳ ಈ ಛಾಪನ್ನು ಮೀರಿ ಶಿಷ್ಯ ಹೊರಬರಬೇಕಾಗಿದ್ದಿತು. “ಸತ್ತವರ ನೆರಳು” – ಎಂದರೆ ಬಿ.ವಿ. ಕಾರಂತ, ಬಿ.ವಿ. ಕಾರಂತರೆಂದರೆ ಸತ್ತವರ ನೆರಳು ಎನ್ನುವಷ್ಟರ ಮಟ್ಟಿಗೆ ಆ ಕಾಲದಲ್ಲಿ ಸಮೀಕರಣದ ಮಾತಾಗಿತ್ತು. ಇದನ್ನು ಕಾರಂತರಿಗಿಂತ ಭಿನ್ನವಾಗಿ ನಿರ್ದೆಶಿಸಿ, ಕಾರಂತರಿಂದಲೇ ಸೈ ಎನಿಸಿಕೊಂಡವರು ಜಯತೀರ್ಥ ಜೋಶಿ. “ಅದೊಂದು ಪರೀಕ್ಷೆಯ ಕಾಲವಾಗಿತ್ತು. ಅದರಲ್ಲಿ ಪಾಸಾಗಲೇಬೇಕೆಂದು ನಿರ್ಧರಿಸಿ ನನ್ನದೇ ರೀತಿಯಲ್ಲಿ ಅದನ್ನು ಸರಳವಾಗಿ ನಿರ್ದೆಶಿಸಿದೆ. ಗುರುಗಳು ಅದನ್ನು ಮೆಚ್ಚಿಕೊಂಡರು” ಎಂದು ಜಯತೀರ್ಥ ಜೋಶಿ ಆಗಿನ ಸಂದಿಗ್ಧ ಸಮಯದ ಬಗ್ಗೆ ತನ್ನ ಗೆಳೆಯರಲ್ಲಿ ಹೇಳಿಕೊಳ್ಳುತ್ತಿದ್ದರು.

ಗಿರೀಶ ಕಾರ್ನಾಡರ ತಲೆದಂಡ ನಾಟಕವನ್ನು ಒಂದು ಛಾಲೆಂಜಿನಂತೆ ಸ್ವೀಕರಿಸಿದರು ಜಯತೀರ್ಥ ಜೋಶಿ. ಸಂದಿಗ್ಧ ಮತ್ತು ಸಂಕೀರ್ಣವಾದ ಈ ನಾಟಕವನ್ನು ಪ್ರೇಕ್ಷಕರೆದುರು ಇಡುವಾಗ ತುಂಬಾ ಎಚ್ಚರಿಕೆಯನ್ನು ವಹಿಸಬೇಕಾಗಿತ್ತು. ಒಂದು ಹೆಜ್ಜೆ ತಪ್ಪಿದರೂ ದೊಡ್ಡ ಅನಾಹುತವೇ ಸಂಭವಿಸುವ ಸಾಧ್ಯತೆ ಇತ್ತು. ಈ ನಾಟಕದಲ್ಲಿ ಜೋಶಿ ತಮ್ಮ ಪ್ರತಿಭೆಯನ್ನೆಲ್ಲಾ ಸುರಿದರು. “ತಲೆದಂಡ”ವನ್ನು ಜನರು ಸ್ವೀಕರಿಸಿದರು. ಜೋಶಿ ಗೆದ್ದರು. ಇದೇ ನಾಟಕ ಗದುಗಿನಲ್ಲಿ ಪ್ರದರ್ಶಿಸುವಾಗ ಜೋಶಿ ಬೇರೊಂದು ತಂತ್ರವನ್ನು ಉಪಯೋಗಿಸಿದರು. ಗ್ರೀಕ್ ರಂಗ ಮಂದಿರದ ಕಲ್ಪನೆಯಂತೆ ಅಲ್ಲಿಂದ ಕೊನೇರಿ ಹೊಂಡವನ್ನೇ ರಂಗಸ್ಥಳವನ್ನಾಗಿ ಪರಿವರ್ತಿಸಿಕೊಂಡರು. ಈ ರೀತಿಯ ಕಲ್ಪನೆ ಜನರಿಗೆ ಹೊಸದಾಗಿತ್ತು. ‘ಹಾಳು ಬಿದ್ದ ಹೊಂಡದಲ್ಲಿ ನಾಟಕ’ ವೆಂಬ ವ್ಯಾಪಕ ಪ್ರಚಾರವನ್ನು ನಾಟಕ ಪಡೆಯಿತು. ಹೊಂಡದ ಮಧ್ಯಭಾಗವನ್ನು ರಂಗ ಸ್ಥಳವನ್ನಾಗಿ ನಿರ್ಮಿಸಿ ಸುತ್ತಲೂ ಜನರು ಕೂಡ್ರುವ ಈ ತಂತ್ರ ಜನರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ತಂತ್ರವನ್ನು ಉಪಯೋಗಿಸಿ ಜಯತೀರ್ಥ ಜೋಶಿ ಸವದತ್ತಿಯಲ್ಲಿ ‘ಗುಲಾಮನ ಸ್ವಾತಂತ್ರ್‍ಯ ಯಾತ್ರೆ’ ನಾಟಕವನ್ನು ಸಾದರಪಡಿಸಿದರು. ಸವದತ್ತಿಯ ಐತಿಹಾಸಿಕ ಕೋಟೆಯನ್ನೇ ರಂಗಸ್ಥಳವನ್ನಾಗಿ ಪರಿವರ್ತಿಸಿ ಈ ನಾಟಕವನ್ನು ಆಡಲಾಯಿತು. ಇಲ್ಲಿಯವರೆಗೆ ಹಾಳುಬಿದ್ದ ಕೋಟೆ ಈಗ ಒಮ್ಮಿಂದ ಒಮ್ಮೆಲೇ ಪ್ರಸಿದ್ದಿಗೆ ಬಂತು. ಈ ನಾಟಕವು ಜಯತೀರ್ಥ ಜೋಶಿಯವರ ಪ್ರತಿಭೆಯನ್ನು ಸಾಕಾರಗೊಳಿಸಿದ ನಾಟಕ.

ಜಯತೀರ್ಥ ಜೋಶಿಯವರು ನಿರ್ದೇಶಿಸಿದ ‘ತಲೆದಂಡ’ ನಾಟಕಕ್ಕೆ ವಿದೇಶದ ಯೋಗವು ಪ್ರಾಪ್ತವಾಯಿತು. ವಿದೇಶದಲ್ಲಿಯೂ ಈ ನಾಟಕ ಜಯಭೇರಿ ಭಾರಿಸಿದುದು ಜೋಶಿಯವರ ಹೆಗ್ಗಳಿಕೆ. “ವಾಂಸಾಸಿ ಜೀರ್ಣಾಣಿ”, “ಜಿ.ಕೆ. ಮಾಸ್ತರನ ಪ್ರಣಯ ಪ್ರಸಂಗ”, “ಪೇಯಿಂಗ್ ಗೆಸ್ಟ್”, ಮುಂತಾದ ನಾಟಕಗಳನ್ನು ನಿರ್ದೇಶಿಸಿದ ಜಯತೀರ್ಥ ಜೋಶಿ ಈ ನಾಟಕಗಳ ಮುಖಾಂತರವಾಗಿಯೂ ತಮ್ಮ ಪ್ರತಿಭೆಯನ್ನು ಮೆರೆದರು. ‘ಸಪ್ತಮಂಡಲ’ ನಾಟಕೋತ್ಸವವನ್ನು ಧಾರವಾಡ, ಹುಬ್ಬಳ್ಳಿ, ಕಿತ್ತೂರುಗಳಲ್ಲಿ ಆಯೋಜಿಸಿ ರಂಗಭೂಮಿಗೆ ಚಾಲನೆ ನೀಡಿದರು.

ಸೂಕ್ಷ್ಮ ಸಂವೇದನೆಯ ನಾಟಕಗಳ ಪ್ರಯೋಗಕ್ಕೆ ಭೂಮಿಕೆ ಸಿದ್ದಪಡಿಸುವುದರಲ್ಲಿ ಜಯತೀರ್ಥ ಜೋಶಿಯವರರು ಎತ್ತಿದ ಕೈ. ತಮ್ಮ ನಾಟಕಗಳು ಯಾವಾಗಲೂ ಚಲನಶೀಲವಾಗಬೇಕು, ಅದು ಪ್ರೇಕ್ಷಕರನ್ನು ತಲುಪಿದಾಗ ಮಾತ್ರ ಅದು ಸಾಧ್ಯ ಎಂದು ಜೋಶಿ ದೃಢವಾಗಿ ನಂಬಿದ್ದರು. ನಟರನ್ನು, ಕಲಾವಿದರನ್ನು ಹಾಗೂ ಪ್ರೇಕ್ಷಕರನ್ನು ಯಾವಾಗಲೂ ಕಣ್ಣು ಮುಂದೆ ಇಟ್ಟುಕೊಂಡೇ ಅವರು ನಾಟಕಗಳನ್ನು ನಿರ್ದೇಶಿಸುತ್ತಿದ್ದರು. ಅಭಿನಯಕ್ಕೆ ಪ್ರಾಧಾನ್ಯತೆ ನೀಡಿ ನಟನಿಂದ ಗರಿಷ್ಠ ಪ್ರಮಾಣದಲ್ಲಿ ಪ್ರತಿಭೆಯನ್ನು ಹೊರತೆಗೆಯುವುದರಲ್ಲಿ ಅವರು ಎತ್ತಿದ ಕೈ. ರಂಗಪರಿಕರಗಳ ಬಳಕೆಯಲ್ಲಿ ಸದಾ ಹೊಸತನವನ್ನು ಆಲೋಚಿಸುತ್ತಿದ್ದ ಜಯತೀರ್ಥ ಜೋಶಿ ಕನ್ನಡ ರಂಗಭೂಮಿಗೆ ರಚನಾತ್ಮಕ ರೀತಿಯಲ್ಲಿ ಆಯಾಮ ನೀಡಲು ತಮ್ಮ ಗುರುಗಳಾದ ಬಿ.ವಿ. ಕಾರಂತರಂತೆಯೇ ಯತ್ನಿಸಿ ಯಶಸ್ವಿಯಾದವರು.

ರಿಹರ್ಸಲ್ ಸಂದರ್ಭದಲ್ಲಿ ಅವರು ಯಾವುದಕ್ಕೂ ರಾಜೀ ಆಗುತ್ತಿರಲಿಲ್ಲ. ಧ್ವನಿ ಪರೀಕ್ಷೆಗೆ ಹೆಚ್ಚು ಮಹತ್ವ ನೀಡುತ್ತಿದ್ದರು. ದೇಹದ ಚಲನಶೀಲತೆಗೆ ನಟರಿಂದ ವ್ಯಾಯಾಮಗಳನ್ನು ನಡೆಸಿ, ಅವರು ನಾಟಕಗಳಲ್ಲಿ ಸಕ್ರಿಯವಾಗುವಂತೆ ನೋಡಿಕೊಳ್ಳುತ್ತಿದ್ದರು. ರಿಹರ್ಸಲ್ ಸಂದರ್ಭಗಳಲ್ಲಿ ಅವರು ಕಠೋರರಾಗುತ್ತಿದ್ದುದು ಉಂಟು. ತನ್ನ ಕಲ್ಪನೆಯಲ್ಲಿ ಕೂಡದ ನಟನನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷಿಸಿದ ಅನೇಕ ಉದಾಹರಣೆಗಳು ಇವೆ.

ಜಯತೀರ್ಥ ಜೋಶಿ ಸ್ನೇಹ ಜೀವಿಗಳಾಗಿದ್ದರು. ಅವರ ಸ್ನೇಹ ಬಳಗ ದೊಡ್ಡದು. ಅದರಲ್ಲಿ ನಾಟಕಕಾರರು, ನಟರೂ, ಲೇಖಕರು, ಕವಿಗಳು, ಕಲಾವಿದರು ಸಮವಿಷ್ಠರಾಗುತ್ತಿದ್ದರು. ನಾಟಕದ ಬಗ್ಗೆ ಮಾತು ಬಂದಾಗ ತುಂಬಾ ಚುರುಕಾಗುತ್ತಿದ್ದ ಜೋಶಿ, ಅವರು ದೇಶ ವಿದೇಶದ ನಾಟಕದ ಸಾಧ್ಯತೆಗಳನ್ನು ಹೇಳಿ ಸಂವಾದವನ್ನು ಗೆಲ್ಲುತ್ತಿದ್ದರು. ಉತ್ತರ ಕರ್ನಾಟಕದ ಭಾಷೆಯನ್ನು ನಾಟಕಗಳಲ್ಲಿ ಹೆಚ್ಚು ಹೆಚ್ಚು ಅಳವಡಿಸಬೇಕೆಂದು ಅವರು ಬಯಸುತ್ತಿದ್ದರು. ಹೊಸದಾಗಿ ಬರೆಯುವವರಿಗೆ ಅವರು ಯಾವಾಗಲೂ ಸ್ಫೂರ್ತಿಯ ಸೆಲೆ ಆಗಿದರು.

ಧಾರವಾಡದ ‘ಕಲೋದ್ಧಾರಕ’ ಸಂಘ ಹಾಗೂ ಅದರ ಸಂಚಾಲಕ ಎಸ್.ಎನ್. ದೇಶಪಾಂಡೆ, ವಿರುಪಾಕ್ಷ ನಾಯಕ ಬೆಳಗಾವಿಯಲ್ಲಿ ಪತ್ರಕರ್ತ ಡಾ. ಸರಜೂ ಕಾಟ್ಕರ್, ಡಾ. ರಾಮಕೃಷ್ಣ ಮರಾಠೆ, ಚಂದ್ರಕಾಂತ ಕುಸನೂರ, ರಾಕ ನಾಯಕ ಶ್ರೀಪತಿ ಮಂಜನ ಬೈಲ ನಾಟಕ ಅಕಾಡೆಮಿ ಅಧ್ಯಕ್ಷರಾಗಿದ್ದ ಆರ್. ನಾಗೇಶ ಅವರೊಂದಿಗೆ ಸದಾ ನಾಟಕದ ನಿರ್ದೆಶನ, ರಂಗಭೂಮಿ ಕುರಿತು ಚಿಂತನೆ- ‘ಸಂಬಂಧ’ಗಳ ಮೂಲಕ ರಂಗಚಿಂತನೆ ಜೀವಂತಗೊಳಿಸಲು ಸದಾ ಪ್ರಯತ್ನಿಸುತ್ತಿದ್ದರು.

ರಾವಬಹಾದೂರರ ‘ಗಾಮಾಯಣ’ವನ್ನು ನಾಟಕವನ್ನಾಗಿಸುವ ಬಯಕೆ ಅವರಿಗೆ ಇತ್ತು. ಆ ಮೂಲಕವಾಗಿ ಈ ಗ್ರಾಮದ ಕತೆಯನ್ನು ಜನರೆದುರು ಹೇಳುವ ಆಸೆ ಅವರದಾಗಿತ್ತು. ಈ ಬಗ್ಗೆ ಅನೇಕ ಸ್ಕೆಚ್ಚುಗಳನ್ನು ಅವರು ಸಿದ್ದಪಡಿಸಿಕೊಂಡಿದ್ದರು. ಆದರೆ ಅವರ ಆಸೆ ಕಾರ್ಯರೂಪಕ್ಕೆ ಬರದೇ ಹೋಯಿತು.

ರಂಗಭೂಮಿಯ ಸೃಜನಶೀಲತೆಯ ಬಗ್ಗೆ ಸದಾ ಆಶಾಜೀವಿಯಾಗಿದ್ದ ಜಯತೀರ್ಥ ಜೋಶಿ ದಿನದ ೨೪ ಗಂಟೆಗಳು ನಾಟಕಗಳ ಬಗ್ಗೆಯೇ ಕನವರಿಸುತ್ತಿದ್ದರು. ಈ ಹಿಂದೆ ತಾವು ನಿರ್ದೇಶಿಸಿದ ನಾಟಕಗಳನ್ನು ಮತ್ತೆ ಮುರಿದು ಹೊಸದಾಗಿ ನಿರ್ದೇಶಿಸಬೇಕೆಂಬ ಹಂಬಲ ಅವರಿಗಿತ್ತು. ಇತ್ತೀಚೆಗೆ ರಂಗ ಚಟುವಟಿಕೆಗಳು ಕುಂಠಿತಗೊಳ್ಳುತ್ತಿರುವ ಬಗ್ಗೆ ಅವರಿಗೆ ವ್ಯಸನವು ಇತ್ತು. ರಂಗಪ್ರಯೋಗಗಳು ಹೆಚ್ಚು ಹೆಚ್ಚು ಕ್ರಿಯಾಶೀಲವಾಗುವಂತೆ ರಂಗ ಶಿಬಿರಗಳನ್ನು ಆಯೋಜಿಸುವ ಸಾಹಸಕ್ಕೂ ಕೈ ಹಾಕಿದ್ದರು. ಆದರೆ, ದುರ್ದೈವದಿಂದ ಅವರ ಅನಾರೋಗ್ಯದ ಕಾರಣ ಇವಾವುಗಳು ಸಾಧ್ಯವಾಗಲಿಲ್ಲ.

ಜಯತೀರ್ಥರಿಗೆ ನಾಟಕಕಾರನ ಕೃತಿ ಒಂದು ಪರಿಕರವಾಗಿತ್ತು. ಅದಕ್ಕೆ ಅವರು ತಮ್ಮ ನಿರ್ದೇಶನ ಶಕ್ತಿಯಿಂದ ಒಂದು ಕಲಾಕೃತಿಯನ್ನಾಗಿ ಮಾರ್ಪಡಿಸುತ್ತಿದರು. ಇದರಿಂದ ಇವರ ನಿರ್ದೇಶನದ ನಾಟಕಗಳು-ನಾಟಕಕಾರರೂ ಕೀರ್ತಿಗೆ ಪಾತ್ರರಾದರು.

ನವೆಂಬರ್ ದಿನಾಂಕ ೧೫ರಂದು ತಾವು ನಿರ್ದೇಶಿಸಿದ ಜಿ.ಕೆ. ಮಾಸ್ತರರ ಪ್ರಣಯ ಪ್ರಸಂಗದ ರಂಗ ತಾಲೀಮನ್ನು ನಡೆಸಿದ ಜಯತೀರ್ಥ ಜೋಶಿ ಸಂಜೆ ತಂಡಕ್ಕೆ ವಿದಾಯ್ ಹೇಳಿ ಅವರಿಗೆ ಬೆಂಗಳೂರಿಗೆ ಗಾಡಿ ಹತ್ತಿಸಿದರು. ದಿನಾಂಕ ೧೬ರಂದೇ, ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶಿತಗೊಳ್ಳಬೇಕಾಗಿದ್ದಿತು. ಆದರೆ, ಅಂದೇ ನಸುಕಿನಲ್ಲಿ ಜೋಶಿ ಈ ಜಗತ್ತಿಗೆ ವಿದಾಯ ಹೇಳಿದರು.

ನಾಟಕ ರಂಗದ ಅಪ್ರತಿಮ ಪ್ರತಿಭೆ ಹೀಗೆ ಕಳಚಿಕೊಂಡಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕಳವು
Next post ಮೂವತಮೂರು

ಸಣ್ಣ ಕತೆ

 • ಧರ್ಮಸಂಸ್ಥಾಪನಾರ್ಥಾಯ

  ಕಪಿಲಳ್ಳಿಯ ಏಕೈಕ ಸಂರಕ್ಷಕ ಕಪಿಲೇಶ್ವರನ ವಾರ್ಷಿಕ ರಥೋತ್ಸವದ ಮುನ್ನಾದಿನ ಧಾರ್ಮಿಕ ಪ್ರವಚನವೊಂದನ್ನು ಏರ್ಪಡಿಸಲೇಬೇಕೆಂದೂ, ಇಲ್ಲದಿದ್ದರೆ ಜಾತ್ರಾ ಮಹೋತ್ಸವಕ್ಕೆ ತನ್ನ ಸಪೋರ್ಟು ಮತ್ತು ಕೋ-ಆಪರೇಶನ್ನು ಬಿಲ್ಲು ಕುಲ್ಲು ಸಿಗಲಾರದೆಂದೂ,… Read more…

 • ಇನ್ನೊಬ್ಬ

  ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

 • ಮೌನವು ಮುದ್ದಿಗಾಗಿ!

  ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…

 • ಡಿಪೋದೊಳಗಣ ಕಿಚ್ಚು…

  ಚಿತ್ರ: ವಾಲ್ಡೊಪೆಪರ್‍ ಬೆಳಿ… ಬೆಳಿಗ್ಗೆನೇ… ಡಿಪೋದಲ್ಲಿ, ಜನ್ರು ಜಮಾಯಿಸಿದ್ದು ಕಂಡು, ಡಿಪೋ ಮ್ಯಾನೇಜರ್ ಮನೋಜ್ ಪಾಟೀಲರ ಹೃದಯ ಬಾಯಿಗೆ ಬಂತು. ’ಮ್ಯಾನೇಜರ್ ಡಿಪೋದಲ್ಲಿ ಕ್ಷಣ ಇಲ್ಲೆಂದ್ರೆ ಸಾಕು…… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…