ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು

ಎಚ್.ವಿ. ಸಾವಿತ್ರಮ್ಮ ಅವರ ಕತೆಗಳು

ಎಚ್.ವಿ.ಸಾವಿತ್ರಮ್ಮ ಹುಟ್ಟಿದ್ದು ೧೯೧೩ರಲ್ಲಿ. ಅಂದರೆ ಇಪ್ಪತ್ತನೆಯ ಶತಮಾನ ಆಗ ತಾನೇ ಉದಯಿಸುತ್ತಿದ್ದ ವರ್‍ಷಗಳಲ್ಲಿ. ಆದರೆ ಈ ಲೇಖಕಿ ಬರೆದದ್ದು ಆನಂತರದ ಅರ್‍ಧಶತಮಾನಕ್ಕೆ ಹೆಚ್ಚು ಸಲ್ಲುವಂತಾಯಿತು. ಕನ್ನಡದಲ್ಲಿ ಸ್ತ್ರೀವಾದ ಕಣ್ಣು ಬಿಡುತ್ತಿದ್ದ ಹೊತ್ತಿನಲ್ಲಿ ಸಾವಿತ್ರಮ್ಮ ಅವರ ಕಥನಗಳು ಹೊಸ ಸ್ಫೂರ್‍ತಿಯನ್ನು ತಂದುಕೊಟ್ಟವು. ಸ್ತ್ರೀವಾದ ಎನ್ನುವುದು ಕನ್ನಡದಲ್ಲಿ ತಾತ್ವಿಕವಾಗಿ ಪೂರ್‍ಣ ಸ್ವರೂಪದಲ್ಲಿ ಬಿಚ್ಚಿಕೊಂಡಿರಲಿಲ್ಲ. ಆ ಸಮಯದಲ್ಲಿ ಬಂದ ಅನುಪಮಾ ನಿರಂಜನ ಅವರ ‘ಮಾಧವಿ’ ಹಾಗು ಸಾವಿತ್ರಮ್ಮ ಅವರ ‘ಸೀತೆ ರಾಮ ರಾವಣ’ ಮತ್ತು ‘ವಿಮುಕ್ತ’ಯಂತಹ ಕಥನಗಳು ಸ್ತ್ರೀವಾದಕ್ಕೆ ಬೇಕಾದ ಚೌಕಟ್ಟನ್ನು ಹಾಕಿಕೊಟ್ಟವು. ಇದರಿಂದ ಸ್ತ್ರೀ ವಾದ ಗಟ್ಟಿಯಾಗಿ ನೆಲೆ ನಿಲ್ಲಲು ಸಹಾಯಕವಾಯಿತು. ಹೀಗೆ ಸ್ತ್ರೀವಾದವನ್ನು ಸಾರರೂಪದಲ್ಲಿ ಕೊಟ್ಟ ಲೇಖಕಿಗೆ ಕ್ರಾಂತಿಕಾರಿ ಎನ್ನುವ ಹೆಸರು ಸಿಕ್ಕಿತು. ಸಂಪ್ರದಾಯದ ಸಂಕೋಲೆಗಳನ್ನು ಹೆಣ್ಣು ಕಳಚಿಕೊಂಡು ಹೊಸ ಅವತಾರವನ್ನು ಎತ್ತುತ್ತಿದ್ದಾಳೆ ಎನ್ನುವ ಭಾವನೆ ಉಂಟಾಗಲು ಈ ಲೇಖಕಿ ಕಾರಣರಾದರು.

ಎಚ್.ವಿ.ಸಾವಿತ್ರಮ್ಮ ಅವರು ಕತೆಗಾರ್‍ತಿ. ಅವರು ಆರು ಕಥಾ ಸಂಕಲನಗಳನ್ನು ಹೊರತಂದಿದ್ದಾರೆ. ಅವುಗಳೆಂದರೆ ನಿರಾಶ್ರಿತೆ, ಸರಿದ ನೆರಳು, ಲಕ್ಷ್ಮೀ, ಪ್ರತೀಕ್ಷೆ, ಮರುಮದುವೆ ಮತ್ತು ಹೊಸ ಜಗತ್ತು, ಸಾವಿತ್ರಮ್ಮ ಅವರ ಕಥಾ ಜಗತ್ತಿನಲ್ಲಿ ಇರುವುದು ಹೆಣ್ಣಿನ ಕಥೆಗಳು. ಅನೇಕ ಹೆಣ್ಣುಗಳ ಒಂದು ಕಥನ ಎಂದು ಹೇಳಬಹುದೇನೊ. ಅಂದರೆ ಹೆಣ್ಣುಜಗತ್ತು ಜೈವಿಕವಾಗಿ ಒಂದು ಬಿಂದುವಿನಲ್ಲಿ ಸಂಧಿಸುತ್ತದೆ. ಸಾಮಾಜಿಕವಾಗಿ ಹೆಣ್ಣು ಶೋಷಣೆಯನ್ನು ಅನುಭವಿಸಿದರೂ ಅದರಲ್ಲಿ ಅನೇಕ ಸ್ತರಗಳಿವೆ. ವರ್‍ಗ, ಜಾತಿ ಸಂವೇದನೆಗಳಿಗನುಗುಣವಾಗಿ ಶೋಷಣೆಗಳ ಸ್ವರೂಪ ಬದಲಾಗುತ್ತದೆ. ಸಾವಿತ್ರಮ್ಮ ನೋಡಿದ್ದು ಹೆಣ್ಣಿನ ಸೋದರಿತ್ವದ ನೆಲೆಯನ್ನು. ಹೀಗಾಗಿ ಅವರಿಗೆ ಹೆಣ್ಣಿನ ಕಷ್ಟ ಕಾರ್‍ಪಣ್ಯಗಳು ಅವು ಯಾವುದೇ ಸ್ತರದಲ್ಲಿರಲಿ ಅವುಗಳ ಸ್ಪಂದನ ತುಂಬ ಮುಖ್ಯವಾಗುತ್ತದೆ. ಅದಕ್ಕೆ ದನಿಯಾಗುವುದು ಲೇಖಕಿಯಾದವಳ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ. ಹೀಗಾಗಿ ಅವರ ಕಥೆಗಳ ತುಂಬಾ ಅನೇಕ ಹೆಣ್ಣುಗಳ ನೋವುಗಳಿದ್ದರೂ ಅದು ಹೆಣ್ಣಿನ ನೋವಾಗಿ ಕಾಣುತ್ತದೆ.

ಸಾವಿತ್ರಮ್ಮ ಅವರ ಕಥೆಗಳು ಒಂದು ಶತಮಾನದ ಕಾಲದ ಹಿಂದಿನವು. ಹೀಗಾಗಿ ಅವುಗಳಲ್ಲಿ ಹಳೆಯ ಕಾಲದ ಜೀವನ ಗತಿಯನ್ನು ನೋಡಬಹುದು. ಹತ್ತು ಹದಿನೈದು ವರ್‍ಷಗಳಿಗೆ ಮದುವೆಯಾಗುವ ಹುಡುಗಿಯರು, ವಿಧವೆಯರು, ಹಳ್ಳಿ ಸಂಸ್ಕೃತಿಯನ್ನು ಇನ್ನೂ ಬಿಟ್ಟುಕೊಡದ ಕುಟುಂಬಗಳು, ಆಗಿನ್ನೂ ಆಧುನಿಕ ಸಮಾಜಕ್ಕೆ ತೆರೆದುಕೊಳ್ಳುತ್ತಿರುವ ವಿದ್ಯಾವಂತ ಮೇಲ್ವರ್‍ಗದ ಸ್ತ್ರೀಯರು-ಇವರೆಲ್ಲರೂ ಸಾವಿತ್ರಮ್ಮ ಅವರ ಕಥೆಗಳಲ್ಲಿ ಬರುತ್ತಾರೆ. ಸಾವಿತ್ರಮ್ಮ ಇರ್‍ಬಾಯ ಖಡ್ಗದಂತಿರುವ ಹಳ್ಳಿ ಮತ್ತು ನಗರ ಸಂಸ್ಕೃತಿಗಳಲ್ಲಿ ಹೆಣ್ಣಿನ ಬದುಕನ್ನು ಪರಿಶೀಲಿಸುತ್ತಾರೆ. ಹೆಣ್ಣು ಆಧುನಿಕಗೊಳ್ಳುವುದೆಂದರೆ ಸಂಸ್ಕೃತಿಗೆ ಎರವಾದಂತೆ ಎಂದು ಭಾವಿಸುತ್ತಿದ್ದ ಸಮಾಜದಲ್ಲಿ ಆಧುನಿಕಗೊಳ್ಳುವುದು ಒಂದು ಮನೋಭಾವವಾಗಿ ಸ್ವೀಕಾರವಾಗಬೇಕಿದೆ ಎನ್ನುವ ಸತ್ಯವನ್ನು ಅವರು ಕಂಡುಕೊಳ್ಳುತ್ತಾರೆ.

ಸಾವಿತ್ರಮ್ಮ ಅವರ ‘ನಿರಾಶ್ರಿತೆ’ ಕಥಾ ಸಂಕಲನದ ಕಥೆಗಳ ಬಗ್ಗೆ ಹೆಚ್ಚು ಚರ್‍ಚೆಯೇ ನಡೆದಿಲ್ಲವೆನ್ನಬೇಕು. ದೇಶವಿಭಜನೆಯ ಸಂಕಟಗಳನ್ನು ಉತ್ತರಭಾರತೀಯ ಕತೆಗಾರರು ತಮ್ಮ ಕತೆಗಳಲ್ಲಿ ತಂದಿದ್ದಾರೆ. ಅವರಿಗೆ ದೇಶವಿಭಜನೆಯ ಗಲಭೆಗಳು, ಹಿಂಸಾಕಾಂಡಗಳು ವಾಸ್ತವವಾಗಿದ್ದರಿಂದ ಅದರ ಚಿತ್ರಣ ಅವರಲ್ಲಿ ಸಹಜವಾಗಿಯೇ ಪ್ರಾಮುಖ್ಯತೆ ಪಡೆಯಿತು. ಸಾವಿತ್ರಮ್ಮ ಅವರಂಥ ಲೇಖಕಿ ಆ ಸಂಕಷ್ಟಗಳನ್ನು ತಮ್ಮ ಕತೆಗಳಲ್ಲಿ ಮನಮಿಡಿಯುವಂತೆ ತಂದಿದ್ದಾರೆ. ಮುಖ್ಯವಾಗಿ ಹೆಣ್ಣಿನ ದೃಷ್ಟಿಯಿಂದ ಯುದ್ಧ ಮತ್ತು ಸಾಮೂಹಿಕ ಗಲಭೆಗಳನ್ನು ನೋಡುವಾಗ ಅವುಗಳ ಹಾನಿಯ ಪ್ರಮಾಣವನ್ನು ಅಂದಾಜು ಮಾಡಲು ಅಸಾಧ್ಯವೆನಿಸುತ್ತದೆ. ಏಕೆಂದರೆ ಪ್ರಾಣಹಾನಿ, ಮಾನಹಾನಿಗಳು ಸಂಭವಿಸುವುದು ಹೆಣ್ಣುಕುಲಕ್ಕೆ. ಈ ಸತ್ಯವನ್ನು ಅರಿತವರಂತೆ ಸಾವಿತ್ರಮ್ಮ ಎಂಬ ಕತೆಗಾರ್‍ತಿ ತಮ್ಮ ನಿರಾಶ್ರಿತೆ ಕಥಾಸಂಕಲನದಲ್ಲಿ ಈ ರೀತಿಯ ಕತೆಗಳನ್ನು ಹೇಳುತ್ತಾ ಹೋಗಿದ್ದಾರೆ. ‘ನಿರಾಶ್ರಿತೆ’ ಕತೆಯಲ್ಲಿ ಬರುವ ತುಳಸಿ ಎಂಬ ಹೆಣ್ಣು ರಾವಲ್ಪಿಂಡಿಯಲ್ಲಿ ನಡೆದ ಗಲಭೆಯಲ್ಲಿ ಸಿಕ್ಕು ಕಣ್ಮರೆಯಾಗುತ್ತಾಳೆ. ಅವಳು ಪುನಃ ದೊರೆತಾಗ ಅವಳ ಗಂಡನಿಗೆ ಅವಳನ್ನು ಸ್ವೀಕರಿಸುವ ಮನಃಸ್ಥಿತಿ ಇರುವುದಿಲ್ಲ. ಏಕೆಂದರೆ ತುಳಸಿಗೆ ಇನ್ನೊಂದು ಮಗುವಾಗಿರುತ್ತದೆ. ಅವಳು ಇಷ್ಟು ದಿನ ಎಲ್ಲಿದ್ದಳು? ಏನು ಮಾಡಿದಳು? ಎಂಬ ಪ್ರಶ್ನೆಗಳನ್ನು ಗಂಡ ಹಾಕಿಕೊಳ್ಳದೆ ಇರಲಾರ. ಅವುಗಳಿಗೆ ಉತ್ತರ ಕೇಳಿಕೊಂಡರೆ ಆ ಉತ್ತರವನ್ನು ಅರಗಿಸಿಕೊಳ್ಳುವುದು ಕಷ್ಟ. ಇದೇ ಸಮಯದಲ್ಲಿ ಗಂಡ ಚಂದ್ರುವಿಗೆ ಮಹಾತ್ಮರು ಸಿಗುತ್ತಾರೆ. ಅವಳನ್ನು ಸ್ವೀಕರಿಸುವ ಉದಾರ ಮನಸ್ಸನ್ನು ಹೊಂದಬೇಕಾಗಿ ಅವರು ಉಪದೇಶಿಸುತ್ತಾರೆ. ಆ ಸಂದರ್‍ಭದಲ್ಲಿ ಚಂದ್ರುವೂ ತಾನು ತನ್ನ ಹೆಂಡತಿಯನ್ನು ಮಾತ್ರ ಬಯಸುವುದಾಗಿ ಹೇಳುತ್ತಾನೆ. ಕೊನೆಗೂ ಅವನು ಗಂಡಸಾಗಿಯೇ ಉಳಿಯುತ್ತಾನೆ ಹೊರತು ಗಂಡನಾಗಿ ಅಲ್ಲ. ಈ ಸಂದರ್‍ಭದಲ್ಲಿ ಗಂಡಸಿನ ಮನಸ್ಸನ್ನು ತೆರೆದಿಡುವ ಯತ್ನವನ್ನೂ ಸಾವಿತ್ರಮ್ಮ ಮಾಡಿದ್ದಾರೆ. ರಾಜೇಂದ್ರ ಬೇಡಿ ಅವರ ‘ಲಾಜವಂತಿ’ ಕತೆಯನ್ನು ನೆನಪಿಸುವ ಈ ಕತೆ ಕನ್ನಡದಲ್ಲಿ ಬಂದ ಮನೋಜ್ಞಕತೆಯಾಗಿದೆ. ಮತ್ತೆ ಈ ವಸ್ತುವನ್ನು ಮತ್ತೆ ಪ್ರಯತ್ನಿಸುವುದು ವೈದೇಹಿ. ಅವರ ‘ಕ್ರೌಂಚಪಕ್ಷಿಗಳು’ ಕತೆಯು ದೇಶವಿಭಜನೆಯಲ್ಲಿ ಹೆಣ್ಣು ಅನುಭವಿಸಬಹುದಾದ ಕಷ್ಟಗಳನ್ನು ಪುನಾ ಎತ್ತಿಕೊಂಡಿದ್ದಾರೆ. ಅಲ್ಲಿಗೆ ಈ ಕಥನವು ಸಾರ್‍ವಕಾಲಿಕತೆಯನ್ನು ಪಡೆದುಕೊಂಡಿದೆ.

ನಿರಾಶ್ರಿತೆ ಸಂಕಲನದ ‘ಜಾತಿಯ ಬಲಿ’, ’ಕಲ್ಯಾಣಿ’, ಮುಂತಾದ ಕತೆಗಳು ಗಲಭೆಗಳಲ್ಲಿ ಸಿಕ್ಕು ಆತಂಕದಿಂದ ಒದ್ದಾಡುವ ಅಮಾಯಕರನ್ನು ಚಿತ್ರಿಸುತ್ತದೆ. ಜಾತಿಭೇದಗಳನ್ನು ಅಳಿಸಿ ಹಾಕಿ ಮುನ್ನಡೆಯುವ ಬದುಕಿನ ಗತಿಯನ್ನು ವಿವರಿಸುತ್ತವೆ. ಈ ರೀತಿ ಪ್ರಗತಿಪರವಾಗಿ ಯೋಚಿಸುವುದು ಸಾವಿತ್ರಮ್ಮ ಅವರಿಗೆ ತುಂಬ ಸಹಜವೆನ್ನುವಂತೆ ಬಂದಿದೆ. ಇದರಂತೆಯೇ ಇತರ ಸಂಕಲನಗಳ ಕತೆಗಳಲ್ಲಿಯೂ ಪ್ರಗತಿಪರತೆಯ ಶ್ರುತಿ ಅಡಗಿದೆ.

ಸಾವಿತ್ರಮ್ಮನವರ ಕತೆಗಳಲ್ಲಿ ಮನೋದೈಹಿಕ ವಸ್ತು ತುಸು ಹೆಚ್ಚಾಗಿಯೇ ಇದೆ. ತ್ರಿವೇಣಿಯವರ ಕತೆ ಕಾದಂಬರಿಗಳಲ್ಲಿ ವಿಶೇಷ ತಂತ್ರವೆನ್ನುವಂತೆ ಈ ವಸ್ತು ಬಂದಿರುವುದನ್ನು ಗಮನಿಸಬಹುದು. ಸಾವಿತ್ರಮ್ಮನವರ ಕತೆಗಳಲ್ಲಿ ಮನೋದೈಹಿಕ ರೋಗಗಳು ಹೆಣ್ಣಿಗೆ ಬಾಧಿಸುವುದಕ್ಕೆ ಸಾಮಾಜಿಕ ಆಯಾಮಗಳಿವೆ. ಈ ದೃಷ್ಟಿಯಿಂದ ಅವರ ಕತೆಗಳು ವಿಭಿನ್ನವಾಗಿವೆ. ಓದಬೇಕೆಂದು ಆಸೆಯಿರುವ ಹುಡುಗಿಗೆ ಮದುವೆ ಮಾಡುವುದು, ಹೆಣ್ಣು ಮಗುವೆಂದು ಮನೆಯಲ್ಲಿಟ್ಟುಕೊಳ್ಳುವುದು, ಗಂಡ ತನ್ನ ಆಸೆಯನ್ನು ಪೂರೈಸದೇ ಇರುವುದು ಹೀಗೆ ಅನೇಕ ಮನಸ್ಸಿಗೆ ಘಾಸಿಯಾಗುವ ಅನೇಕ ಸಂಗತಿಗಳು ಅವರ ಖಾಯಿಲೆಗಳಿಗೆ ಕಾರಣವಾಗುತ್ತವೆ. ಅದರಲ್ಲಿಯೂ ಹತ್ತುವರ್‍ಷಕ್ಕೆ ಮದುವೆಯಾಗಿ ಹದಿಮೂರರಲ್ಲಿ ವಿಧವೆಯರಾಗುವ ಕತೆಗಳು ಅವರಲ್ಲಿ ಬಹಳಷ್ಟು ಸಾರಿ ಮನಾರಾವರ್‍ತಿತವಾಗುತ್ತವೆ. ಅವರ ಮನಸ್ಸುಗಳನ್ನು ಅರ್‍ಥ ಮಾಡಿಕೊಳ್ಳುವ ಯತ್ನವನ್ನು ಅವರ ಕತೆಗಳು ಮಾಡುತ್ತವೆ. ಅವರ ಮನೋದೈಹಿಕ ವಾಂಛೆಗಳು ಕೆಲವೊಮ್ಮೆ ಮೇಲ್ನೋಟಕ್ಕೆ ಕಾಣಿಸಿಕೊಳ್ಳುತ್ತವೆ; ಇನ್ನು ಕೆಲವು ಸಾರಿ ತೆರೆಯ ಮರೆಗೆ ಸರಿದು ಬಿಡುತ್ತವೆ.

ಮನಸ್ಸಿನ ಸುಪ್ತ ಆಸೆಗಳೆಲ್ಲ ತೀರದೇ ಇರುವ ಸಂದರ್‍ಭಗಳಲ್ಲಿ ಹೆಣ್ಣು ತನ್ನ ಒಳಮನಸ್ಸಿನಲ್ಲಿ ಒಂದು ಭ್ರಮೆಯನ್ನು ತೊರೆಯುತ್ತಾಳೆ. ಇಂಥ ಭ್ರಮೆಗಳು ಕೆಲವು ನಿರಸನವಾಗಬಹುದು; ಕೆಲವು ಪೂರೈಸಲೂ ಬಹುದು. ಸಾವಿತ್ರಮ್ಮ ಇಂತಹ ಹಲವು ಸಂಗತಿಗಳನ್ನು ಜನಪ್ರಿಯವಾಗಿ ನಿರೂಪಿಸುತ್ತಾರೆ. ಮದುವೆ, ಸಂಸಾರಗಳೆಂಬ ಹೊರೆಯಲ್ಲಿ ನಲುಗುವ ಇಪ್ಪತ್ತನೆ ಶತಮಾನದ ಮಧ್ಯಭಾಗದ ಹೆಣ್ಣುಮಕ್ಕಳ ಬದುಕುಗಳೇ ಅವರ ಬಹುಪಾಲು ಕತೆಗಳಿಗೆ ಆಧಾರವಾಗಿದೆ. ಮದುವೆ ಎಂಬ ಸಂಸ್ಥೆಯಲ್ಲಿ ಹೆಣ್ಣಿನ ಜೀವನ ಹಲವು ತರದ ಬದಲಾವಣೆಗಳಿಗೆ ಈಡಾಗುತ್ತದೆ. ಗಂಡನ ಮನೆ, ಮಕ್ಕಳು, ವೈಧವ್ಯ ಹೀಗೆ ಹಲವು ತರದ ಬದಲಾವಣೆಗಳಿಗೆ ಅವಳ ಜೀವನ ಎದುರಾಗುತ್ತದೆ.

ಮದುವೆ, ಹೆಣ್ಣಿನ ಕಷ್ಟಗಳನ್ನೇ ಬರೆದರೇ ಸಾವಿತ್ರಮ್ಮ? ಎಂದು ಕೇಳಿದರೆ ಖಂಡಿತಾ ಇಲ್ಲ. ಅವು ಪ್ರಧಾನವಾಗಿವೆಯಾದರೂ, ಅವುಗಳ ಹಿನ್ನೆಲೆಯಲ್ಲಿ ಅವರು ಚಿತ್ರಿಸಿದ್ದು ಇಡೀ ಸಮಾಜದ ಕಾಲಕಥನವನ್ನು, ತಾವು ಬದುಕಿದ ಸಮಾಜವನ್ನು ಕಣ್ಣು ತೆರೆದು ನೋಡುವ ಸಾವಿತ್ರಮ್ಮ ಅವರು ತಮ್ಮ ಕತೆಗಳಲ್ಲಿ ಅವುಗಳ ವಿಮರ್‍ಶೆಯನ್ನೂ ಮಾಡುತ್ತಾರೆ. ಆದರೆ ಅವರದು ಮೆಲುದನಿಯ ವಿಮರ್‍ಶೆ. ಅಬ್ಬರ ಅವರಲ್ಲಿ ಕಡಿಮೆ. ಅನೇಕ ಸಾರಿ ಅವರ ಜನಪ್ರಿಯತೆಯೇ ಅವರು ನೋಡುವ ಸಂಕಷ್ಟಗಳಿಗೆ ದಾರಿ ತೋರುವ ಸರಳ ಉಪಾಯಗಳನ್ನು ಕಂಡುಕೊಂಡು ಬಿಡುತ್ತದೆ. ಆದುದರಿಂದ ವಿಧವೆಯರ ಮರುವಿವಾಹ, ಬಂಡಾಯ ಎಲ್ಲವೂ ಸಾಧ್ಯವಾಗುತ್ತದೆ. ಆದರೆ ಸಾವಿತ್ರಮ್ಮ ಅವರ ಕತೆಗಳು ಸೂಕ್ಷ್ಮವಾಗಿ ತೋರುವ ಕೆಲವು ಅಂಶಗಳು ಅವರ ಕತೆಗಳಿಗೆ ಯಶಸ್ಸನ್ನು ತಂದುಕೊಡುತ್ತವೆ. ಮರೆತು ಹೋದಂತಿದ್ದ ಅನೇಕ ಸಂಗತಿಗಳನ್ನು ನೆನಪಿಸಿಕೊಡುವಂತೆ ಇರುವ ಸಾವಿತ್ರಮ್ಮ ಅವರ ಕಥೆಗಳನ್ನು ಇಂದು ಮತ್ತೊಮ್ಮೆ ಓದಬೇಕಿದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ರತ್ನನ್ ಯೋಚ್ನೆ
Next post ಹಗೆಯ ಗೆಳೆಯ

ಸಣ್ಣ ಕತೆ

  • ವಾಮನ ಮಾಸ್ತರರ ಏಳು ಬೀಳು

    "ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…

  • ತಿಥಿ

    "ಲೋ ಬೋಸುಡಿಕೆ ನನ್ಮಗನೇ, ಇದು ಕೊನೆಯ ಬಾರಿ ನಿನಗೆ ವಾರ್ನಿಂಗ್ ಕೊಡುತ್ತಾ ಇದ್ದೇನೆ. ಮೂರು ಸಾರಿ ಈ ಜೈಲಿನಿಂದ ನಿನಗೆ ವಿದಾಯ ಕೊಟ್ಟಾಯಿತು. ಇನ್ನು ಹೋಗಿ ನಿನ್ನ… Read more…

  • ಜೀವಂತವಾಗಿ…ಸ್ಮಶಾನದಲ್ಲಿ…

    ಎರಡು ಮೂರು ವರ್ಷದ ಅಂತರದಲ್ಲಿ ಒಂದಾದ ಮೇಲೊಂದು ಗಂಡು ಮಕ್ಕಳು ಜನನವಾದಾಗ ದೇಬಾನಂದಸಾಹುಗೆ ಅವನ ಪತ್ನಿ ನಿಲಾಂದ್ರಿಗೆ ಬಹಳ ಸಂತಸವಾಗಿತ್ತು. "ಮಕ್ಕಳು ದೊಡ್ಡವರಾಗಿ ವಿದ್ಯಾವಂತರಾಗಿ ಉದ್ಯೋಗ ಮಾಡಿದರೆ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…