ಜಯವು ಶಾಂತಿಯ ಶರಣ, ಭಾರತ-
ಪಾರತಂತ್ರ್ಯ ನಿವಾರಣಾ!
ಜಯ ಮಹಾತ್ಮಾ, ಜಯವು ಮೋಹನ,
ಪತಿತಜನ ಸಂಜೀವನಾ !


ಬೆಳಕು ಬಿದ್ದಿತು ಭರತಭುವಿಯಲಿ
ಜನ್ಮಿಸಲು ಗುರುಗಾಂಧಿಯು,
ಕಳಕಳನೆ ನಗೆಯೆದ್ದು ನಿಂತಿತು,
ಶಾಂತಿ-ಸೌಖ್ಯದ ನಾಂದಿಯು !


ಭರತಮಾತೆಯ ಪೂರ್ವಪುಣ್ಯವೆ
ಪುರುಷರೂಪವ ತಳೆಯಿತೋ,
ಕರಮಚಂದರ ಮನೆಯೊಳಾಡುತ
ಅರಿವನುಣ್ಣುತ ಬೆಳೆಯಿತೋ !


ಪುಣ್ಯ ಪುರುಷನ ತೆರೆದ ಕಂಗಳು
ಕಂಡವೈ ಜನದವನತಿ ;
ತನ್ನ ತಾಯ್‌ನೆಲ ಅನ್ನಿಗರ ವಶ-
ಅಣ್ಣ-ತಮ್ಮರ ದುರ್‍ಗತಿ !


ಪೊಡವಿ ತಮ್ಮದು, ದುಡಿಮೆ ತಮ್ಮದು,
ಕಡೆಯಿರದ ಸಿರಿ ತಮ್ಮದು….
ಒಡಲಿಗನ್ನವು ಉಡಲು ವಸನವು
ಇರದೆ ಜನ ಬಾಯ್‌ಬಿಡುವುದು !


ನೋಡಿದನು ಗುರುಗಾಂಧಿದೇವನು-
ನಾಡಿಗರ ಪರಿತಾಪವ ;
ಓಡಿಸುವೆ ಪರದಾಸ್ಯಭೂತವ-
ನೆಂದು ಹಿಡಿದನು ಚಾಪವ!


ಕತ್ತಿಯಿಲ್ಲದ ನೆತ್ತರಿಲ್ಲದ
ಸತ್ಯಸಮರದ ನೀತಿಯ-
ಒತ್ತಿಸಾರುತ ಕಿತ್ತಿಸಿದನಿವ
ಹಗೆಯ ಹಿಂಸೆಯ ಭೀತಿಯ!


ಭರತಧರಣಿಯೊಳೆಲ್ಲ ತಿರುಗುತ
ಮುರಲಿಯೂದಿದ ಮೋಹನ;
ಕುರಿಜನರು ನರಹರಿಗಳಾದರು,
ಅರಿತರೋ ತಮ್ಮಾಳ್‌ತನ !


ಹಗೆಯು ಸೋತನು, ಶರಣುಬಂದನು,
ಜಗದ ಗುರು ನೀನೆಂದನು ;
ನಗುತ ಗಾಂಧಿಯು ಹಗೆಯನುಪ್ಪುತ
ಗೆಳೆಯನಾಗಿಯೆ ನಿಂದನು.

೧೦
ಇಂದು ಗಾಂಧಿಯ ಗೆಯ್ಮೆಯಿಂದಲಿ
ಬಂಧಮುಕ್ತಳು ಭಾರತಿ,
ಎಂದೆ ಕಂದರು ಸೇರಿ ಗಾಂಧಿಗೆ
ಬೆಳಗುವೆವು ನಾವಾರತಿ!

೧೧
ಜಯವು ಶಾಂತಿಯ ಶರಣ ಭಾರತ-
ಪಾರತಂತ್ರ್ಯನಿವಾರಣಾ !
ಜಯ ಮಹಾತ್ಮಾ ಜಯವು ಮೋಹನ
ಪತಿತಜನ ಸಂವಾಹನಾ !
*****