ಸಾಧಕನೊಬ್ಬ ಯಾವಾಗಲು ಪ್ರಶ್ನೆ ಉತ್ತರಗಳಲ್ಲಿ ಮಾತಾಡಿಕೊಳ್ಳುತ್ತಿದ್ದ. ಅವನಲ್ಲಿ ಗುರು ಶಿಷ್ಯನ ಎರಡು ಧ್ವನಿ ಮನೆಮಾಡಿತ್ತು. ಇವನಿಗೆ ಎರಡು ಕೊರಲು ಇರಬೇಕು ಎಂದು ಕೆಲವರು, ಇಲ್ಲ ಇವನಿಗೆ ಎರಡು ಹೃದಯ ಎಂದು ಕೆಲವರು, ಇಲ್ಲ ಇವನಿಗೆ ಎರಡು ಮಿದುಳು ಎಂದು ವಾದಿಸುತ್ತಿದ್ದರು.
ಇನ್ನೂ ಕೆಲವರು ಇವನು ಹುಚ್ಚ, ಬೆಪ್ಪಾ, ಮೂರ್ಖ ಎನ್ನುತ್ತಿದ್ದರು.
ಕೊನೆಗೆ ಇವನ ಆಪ್ತ ಗೆಳೆಯ ಧೈರ್ಯ ಮಾಡಿ “ಏಕೆ ನೀನು ಹೀಗೆ ಪ್ರಶ್ನೆ, ಉತ್ತರದ ಎರಡು ಧ್ವನಿ ಇಟ್ಟುಕೊಂಡಿರುವೆ? ನಿನ್ನಲ್ಲಿ ಇರುವ ಇನ್ನೊಬ್ಬ ಯಾರು? ಅದು ನಿನ್ನ ತಾಯಿಯಾ? ಗುರುವಾ? ದೈವವಾ?” ಎಂದ.
“ಅಯ್ಯೋ! ಇಷ್ಟೂ ತಿಳಿಯಲಿಲ್ಲವೆ? ಅದು ನನ್ನ ಪ್ರಜ್ಞೆ” ಎಂದ.
*****