ವಿನಿ, ವಿಡಿ, ವಿಸಿ

ತುಲೋಸಿನ ಹೋಟೆಲ್‌ ಕಂಫರ್ಟ್ ಇನ್ನ್‌ನಿಂದ ಕಾರಲ್ಲಿ ಮಿಷೇಲ್‌ನ ಮನೆಗೆ ಹೋಗುತ್ತಿದ್ದಾಗ ಆತನ ಬಗ್ಗೆ ಕೇಳಿದೆ. ಮಿಷೇಲ್‌ ಒಬ್ಬ ಕಂಪ್ಯುಟರ್‌ ಎಂಜಿನಿಯರ್‌.  ಮನೆಯಲ್ಲಿ ಮಡದಿ ಮಿಷಿಲ್‌ ಮತ್ತು ಎಂಟು ತಿಂಗಳ ಮಗು ಲೋರಾ  ಇಷ್ಟೇ ಆತನ ಸಂಸಾರ. ಇಂದು ತನ್ನ ಮನೆಯಲ್ಲಿ ಸ್ವೀಡಿಶ್‌ ಕುಟುಂಬವೊಂದಿದೆ. ನಾಳೆ ಅದು ಸ್ವೀಡನ್ನಿಗೆ ವಾಪಸಾಗುತ್ತದೆ ಎಂದ. ‘ನಿನ್ನ ಮನೆಯಲ್ಲಿ ಅತಿಥಿಗಳಿದ್ದೂ ನನ್ನನ್ನು ಬರಮಾಡಿಕೊಳ್ಳುತ್ತಿದ್ದೀಯಲ್ಲಾ? ನಿನಗೆ ಕಷ್ಟವಾಗುವುದಿಲ್ಲವೆ?’ ಎಂದು ಕೇಳಿದೆ.  ‘ಕಷ್ಟವೇನು ಬಂತು? ಮನೆಗೆ ಜನ ಬಂದಷ್ಟೂ ಖುಷಿಪಡುವವನು ನಾನು. ನನಗೆ ಕಲಾವಿದರೆಂದರೆ ಇಷ್ಟ. ಹಾಗಾಗಿ ನಾನಾಗಿಯೇ ನಿನ್ನನ್ನು ಇಷ್ಟಪಟ್ಟು ಅತಿಥಿಯಾಗಿ ಆರಿಸಿಕೊಂಡದ್ದು. ನಾನೊಬ್ಬ ರಾಕ್‌ ಎನ್‌ ರೋಲ್‌ ಡ್ಯಾನ್ಸರ್‌ ಮತ್ತು ಟ್ಯೂಟರ್‌. ನನ್ನದೇ ಒಂದು ಸ್ವಂತ ನೃತ್ಯ ಕಲಾಶಾಲೆ ಇದೆ. ನಿನಗದನ್ನು ತೋರಿಸಲಿದ್ದೇನೆ’ ಎಂದ.  ನಗುಮುಖದ, ನನ್ನಷ್ಟೇ ಎತ್ತರದ, ಚುರುಕಿನ ವ್ಯಕ್ಷ್ತಿ ಮಿಷೇಲ್‌ ಸಾಧಾರಣ ವ್ಯಕ್ಷ್ತಿ ಅಲ್ಲ ಎಂದು ನನಗೆ ಅರಿವಾದದ್ದು ಆಗ.

ಮಿಷೇಲನ ಮನೆಯಲ್ಲಿ
ಕಂಫರ್ಟ್‌ ಇನ್ನ್‌ನಿಂದ ಮಿಷೇಲನ ಮನೆಗೆ ಸುಮಾರು ಎಂಟು ಕಿಲೋಮೀಟರ್‌ ದೂರ.  ತುಲೋಸಿನ ಹೊರ ಸೀಮೆಯಲ್ಲಿರುವ ಪ್ರದೇಶ ಅದು. ಮನೆಯಿಂದ ಸಾಕಷ್ಟು ದೂರದಲ್ಲಿರುವಾಗಲೇ ಮೊಬೈಲ್‌ ಫೋನಿನಲ್ಲಿ ‘ಭಾರತದ ಗಣ್ಯ ಅತಿಥಿ’ ಬರುತ್ತಿರುವ ಸಮಾಚಾರವನ್ನು ಆತ ಮನೆಗೆ ರವಾನಿಸಿದ. ಅಟೋಮ್ಯಾಟಿಕ್‌ ಗೇಟನ್ನು ರಿಮೋಟ್‌ ಕಂಟ್ರೋಲರ್‌ನಲ್ಲಿ ಓಪನ್‌ ಮಾಡಿ ಮನೆಯೆದುರು ತಂದು ಕಾರನ್ನು ನಿಲ್ಲಿಸಿ ‘ಇದು ನನ್ನ ಗುಡಿಸಲು’ ಎಂದು ತೋರಿಸಿದ.
ಒಂದು ಅಂತಸ್ತಿನ ವಿಶಾಲವಾದ ಮನೆಯದು. ಮನೆಯೆದುರು ಸುಂದರವಾದ ಪುಟ್ಟ ಹೂದೋಟ. ‘ಮನೆಯ ಹಿಂದೆ ದೊಡ್ಡ ಉದ್ಯಾನವನವಿದೆ.’ ಎಂದು ಗಿಡಗಳನ್ನು ನೋಡುತ್ತಿದ್ದ ನನ್ನ ಭುಜತಟ್ಟಿ ಮಿಷೇಲ್‌ ಹೇಳಿದ. ಮನೆಯ ಬಾಗಿಲು ತೆರೆದುಕೊಂಡಾಗ ಮೊದಲು ಬಂದದ್ದು ದೈತ್ಯಾಕಾರದ ಎರಡು ಕಪ್ಪು ನಾಯಿಗಳು. ಮಿಷೇಲನನ್ನು ಸುತ್ತುವರಿದು ಅವು ಬಾಲ ಅಲ್ಲಾಡಿಸಿದಾಗ ಅವನೇನೋ ಹೇಳಿದ. ಈಗ ನಾಯಿಗಳು ನನ್ನ ಬಳಿಗೆ ಬಂದವು.  ನಾನು ಅರೆಧೈರ್ಯದಿಂದ ಅವುಗಳ ತಲೆ ನೇವರಿಸಿದೆ. ಅವು ಆ ಕ್ಷಣದಿಂದ ನನ್ನ ಸ್ನೇಹಿತರಾಗಿ ಬಿಟ್ಟವು !

ಬಾಗಿಲು ತೆರೆದವಳು ಇಪ್ಪತ್ತರ ತುಂಬು ತಾರುಣ್ಯದ ಚೆಲುವೆ. ‘ಇವಳೇ ಅನಾಲಿನಾ.  ಸ್ವೀಡನ್ನಿನ ಹುಡುಗಿ ಇವಳು. ನಮ್ಮ ಮನೆಯಲ್ಲಿದ್ದು ಯೂನಿವರ್ಸಿಟಿಯಲ್ಲಿ ಫ್ರೆಂಚ್‌ ಓದುತ್ತಿದ್ದಾಳೆ. ನಮ್ಮ ಮನೆಯಲ್ಲಿರುವ ಗೆಸ್ಟ್‌ಗಳು ಇವಳ ತಂದೆ, ತಾಯಿ ಮತ್ತು ತಮ್ಮಂದಿರು’ ಎಂದು ಮಿಷೇಲ್‌ ಪರಿಚಯಿಸಿದಾಗ ಆಕೆ ನಿರ್ಭಿಡೆಯಿಂದ ‘ಹಲೋ’ ಎಂದದ್ದಲ್ಲದೆ ಆ ನಿಲುವಿನಲ್ಲೇ ನನ್ನ ಪರಿಚಯವನ್ನು ಮಾಡಿಕೊಂಡಳು. ಗಟ್ಟಿ ಸ್ವರದಲ್ಲಿ ಅರಳು ಹುರಿದಂತೆ ಮಾತಾಡಬಲ್ಲ ಆಕೆ ತುಂಬಾ ಚುರುಕಿನ ಹುಡುಗಿ. ನನ್ನನ್ನು ನೇರವಾಗಿ ಅಪ್ಪಅಮ್ಮ ಕೂತ ಸೋಫಾದಲ್ಲಿಗೆ ಕರೆದೊಯ್ದು ಸ್ವೀಡಿಶ್‌ ಭಾಷೆಯಲ್ಲಿ ನನ್ನ ಪ್ರವರವನ್ನೆಲ್ಲಾ ಹೇಳಿದಳು.

ಅವಳ ತಂದೆಯ ಹೆಸರು ಹ್ಯಾನ್ಸ್‌ ವೆಸ್ತ್‌ಬೆರ್ಗ್‌. ಸಂಕೋಚ ಸ್ವಭಾವದ ಆತ ಇಂಗ್ಲೀಷ್‌ ಬಾರದೆ, ನನ್ನಲ್ಲಿ ಸರಿಯಾಗಿ ಸಂವಹನ ಸಾಧಿಸಲಾಗದೆ ಮಿಸುಕಾಡಿದ. ಹ್ಯಾನ್ಸ್‌ ಸ್ವೀಡನ್ನಿನಲ್ಲಿ ಪಶುಸಂಗೋಪನೆ ಮಾಡುತ್ತಿದ್ದಾನೆ. ಅನಾಲಿನಾಳ ತಾಯಿ ಮೋನಿಕಾ ಕಂಪ್ಯುಟರ್‌ ಸಂಸ್ಥೆಯೊಂದರ ಮ್ಯಾನೇಜಿಂಗ್‌ ಡೈರೆಕ್ಟರ್‌. ಅನಾಲಿನಾಳ ದೊಡ್ಡ ತಮ್ಮ ಹೈಸ್ಕೂಲು ಕೊನೆಯ ವರ್ಷದಲ್ಲಿದ್ದಾನೆ. ಸಣ್ಣ ತಮ್ಮ ಸದಾ ವಿಮಾನಗಳ ಆಟ ಆಡುತ್ತಿರುತ್ತಾನೆ. ಹತ್ತು ವರ್ಷದ ಆತನಿಗೆ ಈಗಾಗಲೇ ಕಣ್ಣಿಗೆ ಸೋಡಾಗ್ಲಾಸ್‌ ಬಂದು ಬಿಟ್ಟಿದೆ.  ಮುಂದೊಂದು ದಿನ ಈತ ನೋಬೆಲ್‌ ಪಡೆದಾನು ಎಂದುಕೊಂಡೆ ನಾನು.

ಹಣ್ಣಿನ ರಸ ಹೀರುತ್ತಾ ನಾವು ಮಾತಾಡುತ್ತಿದ್ದಂತೆ ಮಿಷಿಲ್‌ ಲೋರಾನನ್ನು ಎತ್ತಿಕೊಂಡು, ಪಾವಟಿಗೆಗಳನ್ನು ಇಳಿದು ನನ್ನಲ್ಲಿಗೆ ಬಂದಳು. ತಕ್ಷಣ ಮಿಷೇಲ್‌ ‘ಇವಳು ನನ್ನ ಏಕೈಕ ಪತ್ನಿ. ಇವನು ನಮ್ಮಿಬ್ಬರ ಪ್ರೇಮದ ಫಲ’ ಎಂದು ಲೋರಾನನ್ನು ಪರಿಚಯಿಸಿದ. ನಾನು ಎದ್ದು ನಿಂತು ‘ಕೊಮತಲೆವು ಮದಾಂಲು
‘ ಎಂದು ಅಪ್ಪಟ ಫ್ರೆಂಚನಂತೆ ಅವಳ ಯೋಗಕ್ಷೇಮ ವಿಚಾರಿಸಿ ಲೋರಾನನ್ನು ಎತ್ತಿಕೊಂಡೆ. ಅವನು ಯಾವುದೇ ಹಿಂಜರಿಕೆಯಿಲ್ಲದೆ ನನ್ನೊಡನೆ ಬಂದ. ಅವನ ಎಂಟು ತಿಂಗಳ ಪುಟಾಣಿ ಕೈಗಳಿಂದ ನನ್ನ ಗಡ್ಡವನ್ನು ಸವರಿ ‘ಇದು ಭಾರತದ ಗಡ್ಡ’ ಎಂದೆ. ಕಚಗುಳಿಯಿಂದಾಗಿ ಲೋರಾ ಕಿಲಕಿಲನೆ ನಕ್ಕ.

ಇಲ್ಲೊಬ್ಬ ಲಕ್ಕೂಭಾಯಿ : ಮರುದಿನ ಬೆಳಿಗ್ಗೆ ಮಿಷೇಲ್‌ ನನ್ನನ್ನು ತನ್ನ ಫ್ಯಾಕ್ಟರಿಗೆ ಕರೆದುಕೊಂಡು ಹೋದ. ವಿಮಾನದ ಮತ್ತು ರಾಕೆಟ್ಟಿನ ಸೂಕ್ಷ್ಮ ಬಿಡಿಭಾಗಗಳನ್ನು ತಯಾರಿಸುವ ಫ್ಯಾಕ್ಟರಿ ಅದು. ಹನ್ನೆರಡು ವಿಭಾಗಗಳಲ್ಲಿ ಬೇರೆ ಬೇರೆ ಭಾಗಗಳ ಉತ್ಪಾದನೆ ಮತ್ತು ಜೋಡಣಾಕ್ರಮವನ್ನು ಮಿಷೇಲ್‌ ನನಗೆ ವಿವರಿಸುತ್ತಾ ತೋರಿಸಿದ. ವಿಮಾನದ ಬ್ಲಾಕ್‌ಬಾಕ್ಸ್‌ ತೋರಿಸಿ ‘ಇದು ಇಲ್ಲೇ ಉತ್ಪಾದನೆಯಾಗುತ್ತದೆ. ನೀನಿದನ್ನು ನೋಡಿದ್ದೀಯಾ’ ಎಂದು ಕೇಳಿದ. ಭಾರತದ ಕನಿಷ್ಕ ವಿಮಾನ ಅಯರ್ಲಂಡಿನ ಬಳಿ ಅಪಘಾತಕ್ಕೀಡಾಗಿ ಸಮುದ್ರಕ್ಕೆ ಬಿದ್ದಾಗ ಅದರ ಬ್ಲಾಕ್‌ಬಾಕ್ಸ್‌ ಹುಡುಕಾಟವೇ ದೊಡ್ಡ ಸುದ್ದಿ ಮಾಡಿದ್ದು, ನನ್ನ ನೆನಪಿನಾಳದಲ್ಲಿ ಉಳಿದುಕೊಂಡಿತ್ತು. ಹಾರಾಟದ ವಿವರಗಳನ್ನು ದಾಖಲು ಮಾಡಿಕೊಳ್ಳುವ ‘ಕರಿಪೆಟ್ಟಿಗೆ’ ವಿಮಾನದ ಬಹುಮುಖ್ಯ ಭಾಗ. ಹಾಗಂತ ನಾನು ಹೇಳಿದಾಗ ‘ಪರ್ವಾಗಿಲ್ವೇ, ನೀನು ಎಕನಾಮಿಕ್ಸ್‌ ಆದರೂ ಇದನ್ನೆಲ್ಲಾ ತಿಳ್ಕೊಂಡಿದ್ದೀಯಲ್ಲಾ’ ಎಂದು ಆತ ಮೆಚ್ಚುಗೆ ಸೂಚಿಸಿದ. ವಾಸ್ತವವಾಗಿ ಕರಿಪೆಟ್ಟಿಗೆ ಒಂದನ್ನು ಬಿಟ್ಟರೆ ಆತ ತೋರಿಸಿದ ಇತರ ಭಾಗಗಳ ಬಗ್ಗೆ ನನಗೆ ಎಳ್ಳಿನಿತೂ ತಿಳಿದಿರಲಿಲ್ಲ !
ಮಿಷೇಲನ ಕಂಪೆನಿಯಲ್ಲಿ ಎಲ್ಲವೂ ಯಂತ್ರಮಯ. ಆದರೂ ಇಲ್ಲಿ 70 ಮಂದಿ ಕೆಲಸಗಾರರಿದ್ದಾರೆ. ಅವರಲ್ಲಿ ಮೂವತ್ತು ಮಂದಿ ಎಂಜಿನಿಯರುಗಳು. ಉಳಿದವರು ಬೇರೆ ಬೇರೆ ಸೆಕ್ಷನ್‌ಗಳಲ್ಲಿ ಸಹಾಯಕರು. ಎಂಜಿನಿಯರುಗಳ ಪೈಕಿ ಮೂವರು ಸೈಂಟಿಸ್ಟ್‌ಗಳು.  ಎಲ್ಲಾ ಪ್ರೋಗ್ರಾಂಗಳನ್ನು ರೂಪಿಸುವುದು ಅವರ ಕೆಲಸ. ಈ ಸೈಂಟಿಸ್ಟ್ ‌ಗಳ ಸಂಬಳ ತಿಂಗಳಿಗೆ 40000 ಫ್ರಾಂಕುಗಳು (ರೂ. 2.80ಲಕ್ಷ) ಸಹಾಯಕ್ಷರ ಕನಿಷ್ಠ ವೇತನ ತಿಂಗಳಿಗೆ 7000 ಫ್ರಾಂಕುಗಳು (ರೂ.49000). ಯಂತ್ರಗಳು ಮತ್ತು ಜನರಲ್ಲದೆ ಈ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಮೂವರು ಯಂತ್ರ ಮಾನವರಿದ್ದಾರೆ. (ರೋಬಟ್ಸ್‌) ರೋಬಟ್‌ ಒಂದು ಕೆಲಸ ಮಾಡುವ ವಿಧಾನವನ್ನು ಕೂಡಾ ಮಿಷೇಲ್‌ ತೋರಿಸಿದ. ತನ್ನ ಫ್ಯಾಕ್ಟರಿಯಲ್ಲಿ ಉತ್ಪಾದನೆಯಾಗುವ ಬಿಡಿಭಾಗಗಳು ಫ್ರೆಂಚ್‌ ವಾಯುದಳಕ್ಕೆ ಮತ್ತು ಬಾಹ್ಯಾಕಾಶ ಸಂಶೋಧನೆಗೆ ಬಳಕೆಯಾಗುತ್ತವೆ ಎಂದು ಮಿಷೇಲ್‌ ಹೆಮ್ಮೆಯಿಂದ ಹೇಳಿಕೊಂಡ. ಆತನ ಫ್ಯಾಕ್ಟರಿಯನ್ನು ನೋಡಿದ ಬಳಿಕ ನನಗರಿವಿಲ್ಲದೆ ‘ಯೂ ಆರ್‌ ಎ ಗ್ರೇಟ್‌ ಮ್ಯಾನ್‌’ ಎಂಬ ಉದ್ಗಾರ ನನ್ನ ಬಾಯಿಯಿಂದ ಹೊರಟಿತು. ಮಿಷೇಲ್‌ ಅದನ್ನು ನಿರಾಕರಿಸಲು ಹೋಗಲಿಲ್ಲ.

ಮಿಷೇಲನ ಫ್ಯಾಕ್ಟರಿ ಕೆಲಸಗಾರರಲ್ಲಿ ಹೆಚ್ಚಿನವರು ಜಪಾನೀಯರು ಮತ್ತು ಆಫ್ರಿಕನ್ನರು.  ಬಿಡಿಭಾಗವೊಂದಕ್ಕೆ ವಯರ್‌ ಜೋಡಣೆ ಮಾಡುವ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಮೂವರು ಯುವಕರ ಪೈಕಿ, ಒಬ್ಬಾತ ನನ್ನ ಗಮನ ಸೆಳೆದ. ಆತ ಬಲಗೈಗೆ ಕಪ್ಪನೆಯ ಕಾಶಿದಾರ ಕಟ್ಟಿಕೊಂಡಿದ್ದ! ‘ಅವನು ಭಾರತೀಯು ಎಂದೆ ನಾನು. ಮಿಷೇಲ್‌ ಅದಕ್ಕೆ ‘ಇಲ್ಲ ಇಲ್ಲ.  ಆತ ಮಾರಿಷಸ್ಸಿನವನು’ ಎಂದ. ನನ್ನ ಕುತೂಹಲ ಹೆಚ್ಚಾಗಿ ಅವನ ಬಳಿಗೆ ಹೋಗಿ ಕೇಳಿದೆ.  ಆಗ ಗೊತ್ತಾಯಿತು ಆತ ನಾಗಪುರದ ಲಕ್ಕೂಭಾಯಿ ಎಂದು. ಅದು ಗೊತ್ತಾದ ತಕ್ಷಣ ನಾನು ಹಿಂದಿಯಲ್ಲೇ ಮಾತಾಡತೊಡಗಿದೆ. ಲಕ್ಕೂಭಾಯಿಗೆ ತುಂಬಾ ಖುಷಿಯಾಯಿತು.
ಲಕ್ಕೂಭಾಯಿಯ ಮಾವ ಹತ್ತು ವರ್ಷಗಳ ಹಿಂದೆ ಫ್ರಾನ್ಸಿಗೆ ಬಂದವ ಕೊನೆಗೆ ತುಲೋಸಿನಲ್ಲಿ ತಳವೂರಿದ್ದ. ಇಲೆಕ್ಟ್ರಿಕಲ್‌ ಡಿಪ್ಲೋಮಾ ಮಾಡಿ ನಾಗಪುರದ ಬೀದಿಗಳಲ್ಲಿ ಠಳಾಯಿಸುತ್ತಿದ್ದ ಲಕ್ಕೂಭಾಯಿಯನ್ನು, ಮಾವ ಒತ್ತಾಯದಿಂದ ತುಲೋಸಿಗೆ ಕರೆಸಿಕೊಂಡಿದ್ದ. ಈಗ ಲಕ್ಕೂಭಾಯಿ ಮಿಷೇಲನ ಫ್ಯಾಕ್ಟರಿಯಲ್ಲಿ ತಿಂಗಳಿಗೆ 56000 ರೂಪಾಯಿ ಗಳಿಸುತ್ತಿದ್ದಾನೆ. ಅಲ್ಲೇ ಕಂಪ್ಯುಟರ್‌ ಕಂಪೆನಿಯೊಂದರಲ್ಲಿರುವ ಮಾರಿಷಸ್ಸಿನ ಹುಡುಗಿಯೊಬ್ಬಳನ್ನು ಮದುವೆಯಾಗಿ, ತುಲೋಸಿನಲ್ಲೆ ಶಾಶ್ವತವಾಗಿ ನಿಂತು ಬಿಡುವ ಯೋಚನೆ ಅವನದು. ‘ನನ್ನವರಿಂದ ದೂರವಾಗಿದ್ದೇನೆ ಅನ್ನುವುದನ್ನು ಬಿಟ್ಟರೆ ಇಲ್ಲಿ ನಾನು ಯಾವುದಕ್ಕೂ ಚಿಂತೆ ಪಡಬೇಕಾಗಿಲ್ಲ’ ಎಂದ ಲಕ್ಕೂಬಾಯಿ.
ಮನೆಗೆ ವಾಪಾಸಾಗುವಾಗ ಮಿಷೇಲ್‌ ಹೇಳಿದ. ‘ಈ ಲಕ್ಕೂಭಾಯಿ ನನ್ನ ಮನೆಯವನೇ ಆಗಿಬಿಟ್ಟಿದ್ದಾನೆ. ವಾರಕ್ಕೊಮ್ಮೆ ಇಂಡಿಯಾದ ಬಸುಮತಿ ಅಕ್ಕಿ ಹಿಡಕೊಂಡು ಮನೆಗೆ ಬಂದು ಅದೇನೇನೋ ತಿಂಡಿ ಮಾಡಿ ಕೊಡ್ತಾನೆ. ಚೆನ್ನಾಗಿರ್ತವೆ. ಆದರೆ ಅವನು ಭಾರತದವನು ಅಂತ ನನಗೆ ಗೊತ್ತಿರಲೇ ಇಲ್ಲ. ಇಲ್ಲದಿದ್ದರೆ ನಿನಗೆ ಅವನಿಂದಲೇ ತಿಂಡಿ ಮಾಡಿಸಿ ಹಾಕಿಸುತ್ತಿದ್ದೆ’ ಎಂದು ಹೇಳಿ, ನನಗೆ ದೋಸೆಇಡ್ಲಿಗಳ ನೆನಪಾಗುವಂತೆ ಮಾಡಿ ಬಾಯಲ್ಲಿ ನೀರೂರಿಸಿದ. ಜತೆಗೆ ಒಂದು ಬಾಂಬನ್ನು ಎಸೆದ. ‘ಅದ್ಯಾರೋ ಲಕ್ಕೂಭಾಯಿ ಅನ್ನೋನು ನಿನ್ನೊಬ್ಬ ಪ್ರಧಾನಿ ಮೇಲೆ ಅದೇನೋ ಕೇಸು ಹಾಕಿದ್ದನ್ನು ಒಮ್ಮೆ ಓದಿದ ನೆನಪು.  ಅದೇನೆಂದು ನನಗೆ ಅರ್ಥವಾಗಲೇ ಇಲ್ಲ.’
ಅವನಿಗೆ ಲಕ್ಕೂಭಾಯಿ ಪಾಠಕ್‌, ಚಂದ್ರಸ್ವಾಮಿ ಮತ್ತು ನರಸಿಂಹರಾಯರ ಮೇಲೆ ಹಾಕಿದ ಮೊಕದ್ದಮೆಯನ್ನು ಪೂರ್ತಿಯಾಗಿ ಹೇಳುವುದು ನನಗೆ ಸಂತೋಷದ ವಿಷಯವೇನಾಗಿರಲಿಲ್ಲ.  ಪಾಶ್ಚಾತ್ಯರು ತಾವು ಹೇಗೇ ಇದ್ದರೂ ತಮ್ಮನ್ನು ಆಳುವವರ ನೈತಿಕತೆ ಮತ್ತು ಚಾರಿತ್ರ್ಯ ಸರಿಯಾಗಿರಬೇಕೆಂದು ಬಯಸುತ್ತಾರೆ. ಆದುದರಿಂದ ವಿಷಯವನ್ನು ಮೊಟಕುಗೊಳಿಸಿ ಹೇಳಿದೆ:  ‘ನಮ್ಮ ಮಾಜಿ ಪ್ರಧಾನಿಯೊಬ್ಬರು, ಬಹಳ ವರ್ಷಗಳ ಹಿಂದೆ, ತಾವು ಇನ್ನೂ ಪ್ರಧಾನಿ ಆಗಿಲ್ಲದೆ ಇರುವಾಗ ನಡೆದ ವ್ಯವಹಾರ ಅದು. ಇಂಗ್ಲೆಂಡಿನಲ್ಲಿ ಉಪ್ಪಿನಕಾಯಿ ವ್ಯಾಪಾರಿಯಾಗಿದ್ದ ಲಕ್ಕೂಭಾಯಿಯಿಂದ ಅವರು ಸ್ವಲ್ಪ ಹಣ ಪಡೆದಿದ್ದರಂತೆ. ಅದನ್ನು ಪ್ರಧಾನಿಯಾದ ಮೇಲೂ ತೀರಿಸಲಿಲ್ಲವಂತೆ. ಅದಕ್ಕೆ ಆತ ಕೇಸ್‌ ಹಾಕಿಬಿಟ್ಟ.’

‘ಏನೋ ಮಾರಾಯ…… ದೊಡ್ಡ ಮನುಷ್ಯರಲ್ಲಿ ಕೂಡಾ ವ್ಯವಹಾರ ಶುದ್ಧತೆ ಇಲ್ಲದಿದ್ದರೆ ಹೇಗೆ? ನನ್ನ ಫ್ಯಾಕ್ಟರಿಯಲ್ಲಿ ಒಂದು ಸೆಂಟಿಮಾ (ಫ್ರಾಂಕ್‌ನ ಕನಿಷ್ಠ ಭಾಗ) ಕೂಡಾ ಅವ್ಯವಹಾರ ನಡೆದಿಲ್ಲ. ಕಳೆದ ವರ್ಷ ವ್ಯವಹಾರದಲ್ಲಿ ನಷ್ಟ ಬಂತು. ಆದರೂ ಸರಕಾರಕ್ಕೆ ಕಟ್ಟಬೇಕಾದ ತೆರಿಗೆ ಕಟ್ಟಿದ್ದೇನೆ. ಸಿಬ್ಬಂದಿಗಳಿಗೆ ಕೊಡಬೇಕಾದ್ದನ್ನು ಸರಿಯಾದ ಕಾಲಕ್ಕೆ ಕೊಟ್ಟಿದ್ದೇನೆ.  ನಾವು ಎಂದಿಗೂ ಹೊಣೆಗಾರಿಕೆಯಿಂದ ಜಾರಿಕೊಳ್ಳಬಾರದು ಅಲ್ವಾ?’ ಎಂದು ನನ್ನನ್ನು ಪ್ರಶ್ನಿಸಿದ.
ನಾನದಕ್ಕೆ ‘ನೀನು ತುಂಬಾ ಯಂಗು. ನೆನಪಿನ ಶಕ್ತಿ ಚೆನ್ನಾಗಿ ಇಟ್ಟುಕೊಂಡಿದ್ದೀಯಾ.  ನಮ್ಮ ಮಾಜಿ ಪ್ರಧಾನಿಗಳು ತುಂಬಾ ಮುದುಕರು. ಅದೂ ಬೇರೆ ಎಷ್ಟೋ ವರ್ಷಗಳ ಹಿಂದೆ ನಡೆದ ಪ್ರಕರಣ ಅದು. ಬಹುಶಃ ಅವರು ಅದನ್ನು ಮರೆತೇ ಬಿಟ್ಟಿರಬೇಕು’ ಎಂದು ನಕ್ಕೆ.  ಅವನು ನಗಲಿಲ್ಲ. ಆಗ ನಾನು ‘ಅದೊಂದು ನ್ಯಾಯಾಲಯದಲ್ಲಿರುವ ಮೊಕದ್ದಮೆ ಮಾತ್ರ.  ಇನ್ನೂ ನಿರ್ಣಯವಾಗದ ಕೇಸು ಅದು. ಅಲ್ಲಿಯವರೆಗೆ ತಪ್ಪಿತಸ್ಥರು ಯಾರು ಎಂದು ಹೇಳುವಂತಿಲ್ಲವಲ್ಲಾ?’ ಅಂದೆ. ‘ಅದು ಹೌದು’ ಎಂದು ಅವನು ದನಿಗೂಡಿಸಿದ. ಸದ್ಯಕ್ಷ್ಕೆ ಬೀಸುವ ದೊಣ್ಣೆಯಿಂದ ಬಚಾವಾದೆ!

ಯಕ್ಷ್ಷಗಾನವೋ, ರಾಕ್‌ ಎನ್‌ ರೋಲೊ ?
ಮಿಷೇಲ್‌ ನಡೆಸುವ ರಾಕ್‌ ಎನ್‌ ರೋಲ್‌ ಕಲಾಶಾಲೆಯ ಹೆಸರು ಗಿಕಿವ. ಅದರ ವಿಸ್ತೃತ ರೂಪ ತುಲೋಸ್‌ ರಾಕ್‌ ಏರೋಬ್ಯಾಟಿಕ್‌ ಕ್ಲಬ್‌. 1995ರ ರಾಕ್‌ ಎನ್‌ ರೋಲ್‌ ಸ್ಪರ್ಧೆಯ ವಿಶ್ವಛಾಂಪಿಯನ್‌ಶಿಪ್ಪ್‌ ಪಡೆದ ಕ್ಲಬ್ಬದು. ಮಿಷೇಲ್‌ ಅದರ ಸಂಸ್ಥಾಪಕ ಮತ್ತು ಪ್ರಧಾನ ಗುರು. ಅವನ ಹೆಂಡತಿ ಮಿಷಿಲ್‌ ಅಲ್ಲಿಗೆ ನೃತ್ಯಕ್ಕೆಂದು ಬರುತ್ತಿದ್ದವಳು ಕೊನೆಗೆ ಮಿಷೇಲನ ಹೃದಯದ ತಾಳವನ್ನೇ ತಪ್ಪಿಸಿಬಿಟ್ಟಳು. ಅವನ ಮಡದಿಯಾಗಿ, ಕಲಾಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿ ಮಿಷಿಲ್‌ ಗಂಡನ ನೆರಳಾಗಿದ್ದಾಳೆ. ಇನ್ನೊಬ್ಬಾಕೆ ಗಂಡನ ಹೃದಯದ ತಾಳ ತಪ್ಪಿಸಬಾರದಲ್ಲಾ!

ಟ್ರಾಕ್‌ನಲ್ಲಿ ನೃತ್ಯಕಲಿಕೆಗೆ ಎರಡು ವಿಶಾಲ ಹಾಲ್‌ಗಳಿವೆ. ಅವುಗಳಲ್ಲಿ ಪ್ರತಿಯೊಂದರಲ್ಲಿ 200 ಜನರು ಏಕಕಾಲದಲ್ಲಿ ನೃತ್ಯಾಭ್ಯಾಸ ಮಾಡಬಹುದು. ಎರಡು ಹಾಲ್‌ಗಳಲ್ಲಿ ನಾಲ್ಕು ಬ್ಯಾಚುಗಳಲ್ಲಿ ವಿದ್ಯಾರ್ಥಿಗಳು ನೃತ್ಯಾಭ್ಯಾಸ ನಡೆಸುತ್ತಾರೆ. ಗಂಟೆಗೊಂದರಂತೆ ಬ್ಯಾಚುಗಳು ಬದಲಾಗುತ್ತವೆ. ವಾರಕ್ಕೆ ಮೂರು ಬಾರಿ ಈ ಶಿಕ್ಷಣ. ಸಂಜೆ 7 ಗಂಟೆಗೆ ಕಲಾಶಾಲೆ ಆರಂಭವಾದರೆ ರಾತ್ರೆ 11ಕ್ಕೆ ಶಿಕ್ಷಣ ಮುಗಿಯುತ್ತದೆ. ಆ ಬಳಿಕ ಹಾಳುಹರಟೆ, ಪಾನೀಯ ಸೇವನೆಯಾಗಿ ಮಿಷೇಲ್‌ ಪತ್ನಿಯೊಡನೆ ಮನೆ ಸೇರುವಾಗ ಹನ್ನೆರಡುವರೆ ದಾಟಿರುತ್ತದೆ.  ಅಲ್ಲಿಯವರೆಗೆ ಪುಟಾಣಿ ಲೋರಾ ಅನಾಲಿನಾಳ ತೆಕ್ಕೆಯಲ್ಲಿ ನಿದ್ದೆ ಮಾಡುತ್ತಿರುತ್ತಾನೆ.

ಎಪ್ರಿಲ್‌ 28ರಂದು ನನ್ನನ್ನು ತನ್ನ ರಾಕ್‌ ಎನ್‌ ರೋಲ್‌ ಕಲಾಶಾಲೆಗೆ ಕರೆದೊಯ್ಯುವ ಮುನ್ನ ಮಿಷೇಲ್‌ ‘ಇಂದು ಟ್ರಾಕ್‌ನಲ್ಲಿ ನಿಜವಾದ ಸಾಂಸ್ಕೃತಿಕ ವಿನಿಮಯ ನಡೆಯಲಿದೆ’ ಎಂದಿದ್ದ. ಅದಕ್ಕೆ ತಯಾರಾಗಿ ನಾನು ಸುಳ್ಯದ ತೆಂಕುತಿಟ್ಟು ಹಿತರಕ್ಷಣಾ ವೇದಿಕೆಯವರು ಸಿದ್ಧಪಡಿಸಿದ್ದ ಯಕ್ಷ್ಷಗಾನ ಪೂರ್ವರಂಗದ ಎರಡು ಕ್ಯಾಸೆಟ್ಟುಗಳನ್ನು ನನ್ನ ಬ್ಯಾಗಲ್ಲಿ ಹಾಕಿಕೊಂಡಿದ್ದೆ. ಟ್ರಾಕ್‌ನಲ್ಲಿ ಮಿಷೇಲನ ವಿದ್ಯಾರ್ಥಿ, ವಿದ್ಯಾರ್ಥಿನಿಯರು ನಮಗಾಗಿ ಕಾದಿದ್ದರು. ಮಿಷೇಲ್‌ ‘ಈತ ಭಾರತದಿಂದ ಬಂದ ಅರ್ಥಶಾಸ್ತ್ರದ ಪ್ರೊಫೆಸರ್‌.  ಇವನೊಬ್ಬ ರಂಗಕಲಾವಿದ. ನಿಮ್ಮ ನೃತ್ಯವನ್ನು ಈತ ಈಗ ನೋಡುತ್ತಾನೆ. ಮತ್ತೆ ಅವನ ನೃತ್ಯವನ್ನು ಮಾಡಿ ತೋರಿಸುತ್ತಾನೆ’ ಎಂದು ಸಾರಿದ. ಅವನ ಶಿಷ್ಯವೃಂದ ಈ ಮಾತಿಗೆ ಕೈ ಚಪ್ಪಾಳೆ ತಟ್ಟಿತು.

ಟ್ರಾಕ್‌ನಲ್ಲಿ ಉಡುಪು ಬದಲಾಯಿಸಲು ಐದು ಕೋಣೆಗಳಿವೆ. ಬಾಯಾರಿಕೆಯಾದರೆ ಕುಡಿಯಲು ಏನು ಬೇಕಾದರೂ ಸಿದ್ಧವಾಗಿರುತ್ತದೆ. ಎರಡು ಹಾಲುಗಳಲ್ಲಿ ಪ್ರತ್ಯಪ್ರತ್ಯೇಕ ಧ್ವನಿ ವ್ಯವಸ್ಥೆಯಿದೆ. ಮಿಷೇಲ್‌ ತನ್ನ ಕೋಟು ಟೈ ಬಿಚ್ಚಿ, ಬರಿಯ ಬನಿಯನ್ನಿನಲ್ಲಿ ತಯಾರಾದ.  ರಾಕ್‌ ಎನ್‌ ರೋಲಿನ ಸಂಗೀತ, ಹಾಲಿನಲ್ಲಿ ಮೊಳಗಿತು. ಒಬ್ಬ ಗಂಡು  ಒಬ್ಬಾಕೆ ಹೆಣ್ಣು ಹೀಗೆ ಜೋಡಿಗಳು ಸಿದ್ಧಗೊಂಡವು. ಮಿಷೇಲ್‌ ಒಬ್ಬಾಕೆಯ, ಸೊಂಟ ಬಳಸಿ, ನೃತ್ಯ ಕಲಿಸಲು ಶುರು ಮಾಡಿದ. ಇನ್ನೊಂದು ಹಾಲಿನಲ್ಲಿ ಮಿಷಿಲ್‌ ಕೂಡಾ ಯಾರೋ ಒಬ್ಬನ ಕೈ ಹಿಡಿದು ನೃತ್ಯ ಪಾಠ ಆರಂಭಿಸಿದಳು.
ಮೂರು ಗಂಟೆಗಳು ಉರುಳಿದವು. ಈಗ ಕೊನೆಯ ಬ್ಯಾಚು ನೃತ್ಯ ಶಿಕ್ಷಣವನ್ನು ಆರಂಭಿಸಿತು. ಸುಮ್ಮನೆ ಕುಳಿತು ಇದನ್ನೆಲ್ಲಾ ನೋಡುತ್ತಿದ್ದ ನನ್ನನ್ನು ಮಿಷೇಲ್‌ ಒಬ್ಬಳು ಫ್ರೆಂಚಳ ಕೈಗೆ ಒಪ್ಪಿಸಿಬಿಟ್ಟ. ಆಕೆ ರಾಕ್‌ ಎನ್‌ ರೋಲಿನ ಆರಂಭದ ಹೆಜ್ಜೆಗಳನ್ನು ನನಗೆ ತೋರಿಸಿದಳು. ಏಕತಾಳದ ಆ ಹೆಜ್ಜೆಗಳನ್ನು ಕಲಿಯಲು ನನಗೆ ಕಷ್ಟವಾಗಲಿಲ್ಲ. ಸ್ವಲ್ಪ ಕುಣಿದ ಬಳಿಕ ನಾನು ನಿಲ್ಲಿಸಿದೆ. ಆಗ ಸ್ವತಾಃ ಮಿಷೇಲನೇ ನನ್ನ ಕೈ ಹಿಡಿದು ಸೊಂಟ ಬಳಸಿ ಕುಣಿದ, ನನ್ನನ್ನು ಕುಣಿಸಿದ. ‘ನೀನ್ಯಾಕೆ ಆಗ ನಿಲ್ಲಿಸಿದೆ?’ ಎಂದು ಕುಣಿತದ ಮಧ್ಯೆ ನನ್ನನ್ನು ಕೇಳಿದ. ‘ಈ ರಾಕ್‌ ಎನ್‌ ರೋಲ್‌ ಏನಿದ್ದರೂ ಈ ರಾತ್ರೆಗೆ ಮಾತ್ರ. ಭಾರತಕ್ಕೆ ಹೋದ ಬಳಿಕ ಇದನ್ನೆಲ್ಲಾ ನಾನು ಎಲ್ಲಿ ಮಾಡುತ್ತೇನೆ? ಅಲ್ಲಿ ಯಾವತ್ತೂ ನನ್ನ ಒಲವು ಯಕ್ಷ್ಷಗಾನಕ್ಕೇ’ ಎಂದೆ.

ಸರಿಯಾಗಿ ಹನ್ನೊಂದು ಗಂಟೆಗೆ ನೃತ್ಯಪಾಠ ನಿಂತಿತು. ಅಲ್ಲಿ ಹದಿಮೂರರಿಂದ ಎಪ್ಪತ್ತು ವರ್ಷದವರೆಗಿನ ವಿದ್ಯಾರ್ಥಿಗಳನ್ನು ನಾನು ಗಮನಿಸಿದ್ದೆ. ನಮ್ಮ ಭರತನಾಟ್ಯ, ಕೂಚುಪುಡಿಗಳಂತೆ ಒಬ್ಬೊಬ್ಬರೇ ಕುಣಿಯುವ ಯಾವುದೇ ನೃತ್ಯ ಪ್ರಕಾರಗಳಿಲ್ಲದ ದೇಶ ಅದು.  ಅಷ್ಟೇ ಅಲ್ಲ, ರಾಕ್‌ ಎನ್‌ ರೋಲಿನಲ್ಲಿ ಗಂಡು ಮತ್ತು ಹೆಣ್ಣು ಜೋಡಿಯಾಗಿಯೇ ನರ್ತಿಸುವುದು ಕ್ರಮ. ಇಳಿಯುತ್ತಿರುವ ತನ್ನ ಯೌವ್ವನವನ್ನು ಎಪ್ಪತ್ತರ ಮುದುಕ, ಹದಿನೆಂಟರ ಹರೆಯದ ಹುಡುಗಿಯ ಸೊಂಟ ಬಳಸಿ ನರ್ತಿಸುವ ಮೂಲಕ ಮರಳಿ ಪಡೆಯುತ್ತಾನೆ! ಅರುವತ್ತು ದಾಟಿದ ವೃದ್ಧಿ ಇಪ್ಪತ್ತರ ಹರೆಯದ ತರುಣನೊಡನೆ ನರ್ತಿಸಿ ನವ ಯೌವ್ವನವತಿಯಾಗುತ್ತಾಳೆ. ಜೀವನವನ್ನು ಅದರ ಕೊನೆಯ ಕ್ಷಣದವರೆಗೂ ಅನುಭವಿಸುವುದು ಎಂದರೆ ಇದು!

ನೃತ್ಯ ಮುಗಿದ ಬಳಿಕ ಅಲ್ಲಿ ಸುಮಾರು ಅರುವತ್ತು ಮಂದಿ ಉಳಿದುಕೊಂಡರು. ಈಗ ಪಾನೀಯ ಸರಬರಾಜಾಯಿತು. ನಾನು ಸಖತ್ತಾಗಿ ಮೂಸಂಬಿ ರಸ ಹೀರಿದೆ. ‘ನಾವಿಲ್ಲಿ ಏರೋಬೆಕ್ಸ್‌ ಮಾಡಿದ್ದನ್ನು ನೀನು ನೋಡಿದ್ದೀಯಾ. ಈಗ ನಿನ್ನ ಯೋಗಾಸನಗಳನ್ನು ಇವರಿಗೆ ತೋರಿಸಬೇಕು’ ಎಂದ ಮಿಷೇಲ್‌. ಆಗ ರಾತ್ರೆ ಹನ್ನೊಂದುವರೆ. ಭಾರತದಲ್ಲಿ ಬೆಳಗಿನ ಜಾವ ಮೂರುವರೆ. ಬ್ರಾಹ್ಮೀ ಮುಹೂರ್ತ! ಇಲ್ಲಿಯವರೆಗೆ ರಾಕ್‌ ಎನ್‌ ರೋಲ್‌ ಕುಣಿದು ದಣಿದವರೆದುರು, ನಿದ್ದೆಯಿಲ್ಲದೆ ದಣಿದಿದ್ದ ನಾನು ಯೋಗಾಸನಗಳನ್ನು ಮಾಡಲೇ ಬೇಕಾಯಿತು.  ಆ ಸ್ಥಿತಿಯಲ್ಲೂ ಫ್ರೆಂಚರ ಉತ್ಸಾಹವೇ! ನಾನು ಮಾಡಿದಂತೆ ಅವರೂ ಮಾಡತೊಡಗಿದರು.  ಶೀರ್ಷಾಸನಕ್ಕಾಗುವಾಗ ಅವರ ಅನುಕರಣೆ ನಿಂತಿತು. ಕೊನೆಯಲ್ಲಿ ಮಯೂರಾಸನ ಮಾಡಿದಾಗ ನೃತ್ಯಶಾಲೆ ಕೈ ಚಪ್ಪಾಳೆಯಿಂದ ಪ್ರತಿಧ್ವನಿಸಿತು.’ಇದನ್ನಂತೂ ನನ್ನಿಂದ ಮಾಡಲು ಸಾಧ್ಯವೇ ಇಲ್ಲ’ ಎಂಬ ಮಾತುಗಳು ಅವಳಿಗರಿಯದಂತೆ ಹೊಂಗೂದಲ ಚೆಲುವೆ ಕ್ಲಾರಾಳ ಬಾಯಿಯಿಂದ ಹೊರಬಂದವು.

ತುಂಬಾ ಸುಸ್ತಾಗಿದ್ದ ನಾನು ದಣಿವಾರಿಸಲು ಕಾಲುಚಾಚಿ ಕೂತುಕೊಂಡೆ. ಮಿಷೇಲನ ವಿದ್ಯಾರ್ಥಿ ವೃಂದ ನನ್ನ ಸುತ್ತಮುತ್ತ ಜಮಾಯಿಸಿತು. ಅವರಿಗೆ ಭೂತಾರಾಧನೆ, ಕಥಕ್ಕಳಿ, ಭರತನಾಟ್ಯ ಮತ್ತು ಯಕ್ಷ್ಷಗಾನದ ಬಗ್ಗೆ ವಿವರಿಸಿದೆ. ನನ್ನಲ್ಲಿದ್ದ ಯಕ್ಷ್ಷಗಾನದ ಚಿತ್ರಗಳನ್ನು ತೋರಿಸಿದೆ: ‘ಓ ಲಲಾಅ ಇದು ನೀನಾ?’ ಎಂದು ಅವರು ಅವನ್ನು ಬೆರಗುಗಣ್ಣುಗಳಿಂದ ನೋಡಿದರು.  ಕೊನೆಗೆ ‘ಯಕ್ಷ್ಷಗಾನ ಕುಣಿದು ತೋರಿಸು’ ಎಂದು ದುಂಬಾಲು ಬಿದ್ದರು. ಮಿಷೇಲ್‌ ರೆಕಾರ್ಡರಿನಲ್ಲಿ ಯಕ್ಷ್ಷಗಾನದ ಕ್ಯಾಸೆಟ್ಟು ಹಾಕಿದ. ಫ್ರಾನ್ಸಿನ ಕಲಾಶಾಲೆಯೊಂದರಲ್ಲಿ ಬಲಿಪ ನಾರಾಯಣ ಭಾಗವತರ ಕಂಚಿನ ಕಂಠ ಮೊಳಗಿತು. ರಾಕ್‌ ಎನ್‌ ರೋಲ್‌ ಸಂಗೀತ ಕೇಳಿಸುತ್ತಿದ್ದಲ್ಲಿ ಪದ್ಯಾಣ ಗಣಪತಿ ಭಟ್ಟರ ‘ಚಿಕ್ಕ ಪ್ರಾಯದ ಬಾಲೆ ಚದುರೆ’ ಕೇಳಿಸತೊಡಗಿತು. ನಾನು ಹಾಡಿಗೆ ತಕ್ಕಂತೆ ಅಭಿನಯಿಸಿದೆ, ಕುಣಿದೆ. ಕೊನೆಗೆ ಧೀಂಗಿಣ ಹೊಡೆದೆ, ನನಗೆ ಕೂಡುವಷ್ಟು. ಹಾಡು ನಿಂತಾಗ ಕುಣಿತ ನಿಂತಿತು. ಅದರ ಬೆನ್ನಿಗೆ ಆ ಹಾಲಿನಲ್ಲಿ ದೀರ್ಘ ಕರತಾಡನವಾಯಿತು.
‘ಇದು ಭಾರತದ ರಾಷ್ಟ್ರೀಯ ನೃತ್ಯವೇ?’ ಎಂದು ಅರುವತ್ತೈದರ ಹರೆಯದ ಪಿಯರೆ ಪೌಲ್‌ ಕೇಳಿದ. ಯಾರಾದರೂ ಕೇಳಬಹುದಾದ ಪ್ರಶ್ನೆಯೇ. ಸಾವಿರಾರು ಜನ ರಾತ್ರಿಯಿಡೀ ನಿದ್ದೆಗೆಟ್ಟು ಕರಾವಳಿ ಕರ್ನಾಟಕದಲ್ಲಿ ಯಕ್ಷ್ಷಗಾನ ನೋಡುತ್ತಾರೆ. ಸುಮಾರು ಇಪ್ಪತ್ತರಷ್ಟು ವೃತ್ತಿಪರ ಯಕ್ಷ್ಷಗಾನ ಮೇಳಗಳಲ್ಲಿ ಐನೂರಕ್ಕೂ ಹೆಚ್ಚು ಮಂದಿ ಕಲಾವಿದರು ತಮ್ಮ ಜೀವನೋಪಾಯ ಕಂಡುಕೊಂಡಿದ್ದಾರೆ. ಹಾಡು, ಕುಣಿತ, ವೇಷಭೂಷಣ, ಸಂಭಾಷಣೆ  ಎಲ್ಲವೂ ಮೇಳೈಸಿ ಅದ್ಧಿತ ರಮ್ಮಲೋಕಕ್ಕೆ ನಮ್ಮನ್ನು ಹೀಗೆ ಒಯ್ಯಬಲ್ಲ ಸಾಮರ್ಥ್ಯ ಬೇರೆ ಯಾವುದೇ ಕಲಾಪ್ರಕಾರಕ್ಕಿರಲು ಸಾಧ್ಯವಿಲ್ಲ ಎಂದು ನಾನು ದೃಢವಾಗಿ ನಂಬಿದ್ದೆ. ಸಾಕ್ಷರತಾ ಆಂದೋಲನ, ಪರಿಸರ ಸಂರಕ್ಷಣೆ, ಏಡ್ಸ್‌ ವಿರುದ್ದದ ಸಮರದ ಸಂದರ್ಭಗಳಲ್ಲಿ ನಾವು ಯಕ್ಷ್ಷಗಾನವನ್ನು ಒಂದು ಪರಿಣಾಮಕಾರೀ ಅಭಿವ್ಯಕ್ಷ್ತಿ ಮಾಧ್ಯಮವಾಗಿ ಬಳಸಿಕೊಂಡಿದ್ದೆವು ಕೂಡಾ. ಇಂತಹ ಅದ್ಧಿತ ಕಲಾಪ್ರಕಾರಕ್ಕೆ ಅಖಿಲ ಭಾರತ ಮಟ್ಟದಲ್ಲಿ ಎಂಥಾ ಅವಗಣನೆ! ಹೋಗಲಿ…… ಕರ್ನಾಟಕದಲ್ಲಿ ಕರಡಿ, ಕೋತಿಗಳನ್ನು ಕುಣಿಸುವವರ, ಬುರುಡೆದಾಸಯ್ಯರ ಕಲೆಗೂ ಯಕ್ಷ್ಷಗಾನಕ್ಕೂ ಇರುವ ವ್ಯತ್ಯಾಸವೇ ಅರಿಯದ ಸರ್ಕಾರ ಎಲ್ಲದಕ್ಕೂ ಒಂದೇ ಅಕಾಡೆಮಿ ಮಾಡಿ ‘ಜಾನಪದವನ್ನು ಸಂರಕ್ಷಿಸಿದ್ದೇವೆ’ ಎಂದು ಎದೆತಟ್ಟಿಕೊಳ್ಳುತ್ತಿದೆ.  ಇದನ್ನೆಲ್ಲಾ ಪಿಯರೆಯಲ್ಲಿ ಹೇಗೆ ಹೇಳಲಾದೀತು?’ ಅಲ್ಲ. ಇದು ನನ್ನ ನಾಡಿನ ಕಲೆ.  ನನ್ನ ಜಿಲ್ಲೆಗೆ ಹಿಂದೆ ತುಳುನಾಡು ಎಂಬ ಹೆಸರಿತ್ತು. ಇದು ತುಳುನಾಡಿನ ಮಣ್ಣಿನ ಕಲೆ’ ಅಂದೆ.
ಮಿಷೇಲ್‌ ನಗುತ್ತಾ ಹೇಳಿದತ  ‘ಎಂಥಾ ಅದ್ಭುತ ಸಾಮ್ಯ ನೋಡು! ನಮ್ಮದು ರಾಕ್‌ ಎನ್‌ ರೋಲ್‌. ನಿನ್ನದು ಯಕ್ಷ್ಷಗಾನ. ನಮ್ಮದು ತುಲೋಸು. ನಿನ್ನದು ತುಳುನಾಡು.’
ಈಗ ಗುಂಪು ಗೊಳ್ಳೆಂದು ನಕ್ಕುಬಿಟ್ಟಿತು. ಕಲಾಶಾಲೆಯಿಂದ ಮಿಷೇಲ್‌ ಮನೆಗೆ ಬಂದು ನಾನು ಹಾಸಿಗೆ ಸೇರುವಾಗ ಎರಡು ಗಂಟೆ. ಭಾರತದಲ್ಲಿ ಆಗ ಬೆಳಗಿನ ಐದೂವರೆ.  ದೇವಸ್ಥಾನದಿಂದ ಸುಪ್ರಭಾತ, ಮಸೀದಿಯಿಂದ ಬಾಂಗು, ಇಗರ್ಜಿಯಿಂದ ಗಂಟೆ ಕೇಳುವ ಸಮಯ!

ಅನಾಲಿನಾ ಎಂಬೊಬ್ಬ ಹೆಣ್ಣು : ಫ್ರಾನ್ಸಿನಲ್ಲಿ ಗಂಡಹೆಂಡತಿ ಇಬ್ಬರೂ ದುಡಿಯುವವರಾದರೆ ಅವರ ಪುಟ್ಟ ಮಗುವನ್ನು ನೋಡಿಕೊಳ್ಳುವುದೇ ಒಂದು ದೊಡ್ಡ ಸಮಸ್ಯೆ. ಆ ದೇಶದಲ್ಲಿ ಫುಲ್‌ಟೈಂ ಕೆಲಸದಾಕೆ ದೊರೆಯಲು ಸಾಧ್ಯವೇ ಇಲ್ಲ. ಪಾರ್ಟ್‌ಟೈಂ ಕೆಲಸದಾಕೆ ದೊರೆತರೂ ಆಕೆಯ ಸಮಯ ಇವರದಕ್ಕೆ ಹೊಂದಾಣಿಕೆಯಾಗುವುದು ಕಷ್ಟ. ಯುರೋಪಿನ ಇತರ ರಾಷ್ಟ್ರಗಳಿಂದ ಫ್ರೆಂಚ್‌ ಕಲಿಯಲು ಫ್ರಾನ್ಸ್‌ಗೆ ಅನೇಕ ಯುವತಿಯರು ಬರುತ್ತಾರೆ.  ಅಂತಹ ಹುಡುಗಿಯರಿಗಾಗಿ ದುಡಿಯುವ ಪುಟ್ಟ ಮಗುವುಳ್ಳ ದಂಪತಿಗಳು ಪತ್ರಿಕಾ ಜಾಹಿರಾತು ನೀಡುತ್ತಾರೆ. ಜಾಹಿರಾತು ನೋಡಿ ಮನೆ ಹುಡುಕಿಕೊಂಡು ಬರುವ ಹುಡುಗಿಯರನ್ನು ತಮ್ಮ ಮನೆಗಳಲ್ಲಿ ಇರಿಸಿಕೊಳ್ಳುತ್ತಾರೆ. ಹಾಗೆ ನಿಂತ ಹುಡುಗಿಯರು ಪಾಠದ ಅವಧಿಯಲ್ಲಿ ತರಗತಿಗಳಿಗೆ ಹಾಜರಾಗುತ್ತಾರೆ. ಉಳಿದ ಸಮಯದಲ್ಲಿ ಮಗುವನ್ನು ನೋಡಿಕೊಳ್ಳುತ್ತಾರೆ. ಅದಕ್ಕೆ ಸಂಬಳವಿಲ್ಲ. ಊಟತಿಂಡಿ, ಮನೆಯೊಳಗೆ ಒಂದು ಸುಸಜ್ಜಿತ ಕೋಣೆ  ದೊರೆಯುತ್ತದೆ. ಮನೆಯ ವಾಹನವನ್ನು ಬಳಸುವ ಅವಕಾಶವೂ ಸಿಗುತ್ತದೆ.
ಹಾಗೆ ಮಿಷೇಲನ ಮನೆಯಲ್ಲಿ ನಿಂತವಳು ಅನಾಲಿನಾ. ಅವಳಿಗೆ ಫ್ರೆಂಚ್‌ ಕಲಿಯುವ ಹಂಬಲ.  ಮಿಷೇಲನ ಮನೆಗೆ ಹೋದಂದು ಮನೆಯ ಬಾಗಿಲು ತೆಗೆದವಳೇ ಈ ಅನಾಲಿನಾ. ಅವಳದು ಕೋಟ್ಯಧೀಶರ ಕುಟುಂಬ. ‘ನಮಗೊಬ್ಬಳೇ ಮಗಳು. ಇವಳಿಗೆ ಬೇರೆ ಬೇರೆ ದೇಶಗಳ ಜನರನ್ನು ನೋಡುವ, ಅವರ ಭಾಷೆಯನ್ನು ಕಲಿಯುವ ಹುಚ್ಚು. ನಾನಿವಳ ಆಸೆಯನ್ನೇ ಬಿಟ್ಟಿದ್ದೇನೆ’ ಎಂದು ಕಂಪ್ಯುಟರ್‌ ಸಂಸ್ಥೆಯೊಂದರ ಮ್ಯಾನೇಜಿಂಗ್‌ ಡೈರೆಕ್ಟರಾಗಿರುವ ಅವಳ ತಾಯಿ ನಕ್ಕಳು. ಆ ನಗುವಿನಲ್ಲಿ ನೋವಿತ್ತು. ಇಂಗ್ಲೀಷ್‌ ಸರಿಯಾಗಿ ಬಾರದ ಅನಾಲಿನಾಳ ಅಪ್ಪ ಹೈನೋದ್ಯಮಿಯಾಗಿ ಒಳ್ಳೆಯ ಹೆಸರು ಗಳಿಸಿದ್ದ. ನಾನು ಮಿಷೇಲನ ಮನೆಗೆ ಹೋದ ಮಾರನೆಯ ದಿನ ಅನಾಲಿನಾಳ ಕುಟುಂಬ ಸ್ವೀಡನ್ನಿಗೆ ವಾಪಾಸಾಯಿತು.  ಮಗಳನ್ನು ಬಿಟ್ಟು ಹೋಗುವಾಗ ಅಪ್ಪನ ಕಣ್ಣುಗಳು ಕೊಳಗಳಾಗಿದ್ದವು.

ಅನಾಲಿನಾಳಿಗೆ ಸ್ವೀಡಿಶ್‌, ನಾರ್ವೇಜಿಯನ್‌, ಜರ್ಮನ್‌ ಮತ್ತು ಇಂಗ್ಲೀಷ್‌ ಚೆನ್ನಾಗಿ ಬರುತ್ತಿದ್ದವು. ಈಗ ಅವಳು ಫ್ರೆಂಚ್‌ನಲ್ಲಿ ಪ್ರಾವೀಣ್ಯ ಗಳಿಸುತ್ತಿದ್ದಾಳೆ. ಮುಂದಿನ ವರ್ಷ ಕೋಸ್ಟಾರಿಕಾಕ್ಕೆ ಹೋಗಿ ಅಲ್ಲಿನ ಭಾಷೆ ಕಲಿಯುವ ಯೋಜನೆ ಹಾಕಿಕೊಂಡಿದ್ದಾಳೆ. ಅವಳದನ್ನು ಹೇಳಿದಾಗ ‘ಭಾರತದಲ್ಲಾದರೆ ನಿನ್ನ ಪ್ರಾಯದ ಹುಡುಗಿಯರನ್ನು ಹೀಗೆಲ್ಲಾ ಹೋಗಲು ಸಾಮಾನ್ಯವಾಗಿ ಬಿಡುವುದಿಲ್ಲ. ನೀನಾದರೋ ಕೋಟ್ಯಧೀಶೆ. ಇಲ್ಲಿ ಯಾರದೋ ಮಗುವನ್ನು ಆಡಿಸುತ್ತಾ ಇರಬೇಕಲ್ಲಾ? ನಿನಗೇನೂ ಅನಿಸೋದಿಲ್ವೆ?’ ಎಂದು ಕೇಳಿದೆ.

‘ಮಗುವನ್ನು ಆಡಿಸೋದು ಕೆಲವು ಗಂಟೆ ಮಾತ್ರ. ನಾನಿಲ್ಲಿ ಇಂಡಿಪೆಂಡೆಂಟ್‌ ಆಗಿದ್ದು ನನ್ನ ಜೀವನವನ್ನು ನಾನೇ ನೋಡಿಕೊಳ್ಳುತ್ತಿದ್ದೇನೆ. ಜೀವನದುದ್ದಕ್ಕೂ ಕಲಿಯುತ್ತಲೇ ಇರಬೇಕೆಂದು ನಾನು ತೀರ್ಮಾನಿಸಿದ್ದೇನೆ. ನಾನು ಮದುವೆಯಾಗೋದಿಲ್ಲ.  ಮದುವೆಯಾಗದೆಯೂ ಮಗುವನ್ನು ಎತ್ತಿ ಆಡಿಸುವ ಸುಖವನ್ನು ಇಲ್ಲಿ ಪಡೆಯುತ್ತಿದ್ದೇನೆ. ನನ್ನ ತಮ್ಮಂದಿರನ್ನು ಹೀಗೆಯೇ ಎತ್ತಿ ಆಡಿಸಿ ಸುಖಪಟ್ಟಿದ್ದೇನೆ. ಸ್ವಾವಲಂಬಿಯಾಗಿರಲು ಯಾವ ಕೆಲಸವಾದರೇನು?’ ಎಂದು ನನ್ನನ್ನೇ ಆಕೆ ಪ್ರಶ್ನಿಸಿದಳು.

ತುಲೋಸಿನಿಂದ ನಾನು ಹೊರಡಬೇಕಿದ್ದ ದಿನ ಅನಾಲಿನಾ ನನ್ನೆದುರೇ ಬೆಳಗಿನ ತಿಂಡಿಯನ್ನು ಒಬ್ಬಳೇ ತಿಂದಳು. ತಿಂಡಿ ತಿಂದು ಅವಳು ಎದ್ದಾಗ ನಾನೆಂದೆ: ‘ಎಂಥಾ ವ್ಯಕ್ಷ್ತಿ ನೀನು? ಭಾರತದಲ್ಲಿ ಅತಿಥಿಗಳೆಂದರೆ ದೇವರಿಗೆ ಸಮಾನ. ನಮಗೆ ಇಲ್ಲದಿದ್ದರೂ ನಮ್ಮ ಮನೆಗೆ ಬಂದವರಿಗೆ ನಾವು ಏನೂ ಕಡಿಮೆ ಮಾಡುವುದಿಲ್ಲ. ಅವರ ತಿಂಡಿ  ಊಟ ಆಗದೆ ನಾವು ತಿನ್ನುವುದಿಲ್ಲ. ನೀನಾದರೋ ಹಸಿದಿರುವ ನನ್ನ ಕಣ್ಣೆದುರೇ ತಿಂಡಿ ತಿಂದು ಬಿಟ್ಟೆಯಲ್ಲ?’ ಅದಕ್ಕವಳು ಕಿಲಕಿಲನೆ ನಕ್ಕು ‘ಅಯ್ಯಯೋ ಮಾರಾಯ. ನಿನಗೆ ಹಸಿವಾದರೆ ನೀನು ಕೇಳುತ್ತಿ ಅಂದುಕೊಂಡಿದ್ದೆ ನಾನು. ಈಗ ನಾನು ತಿಂಡಿ ತಿಂದರೂ ನಿನಗೆ ಮಾಡಿ ಹಾಕಬೇಕಾದವಳು ನಾನೆ. ಬಾ’ ಎಂದು ನನ್ನ ಕೈ ಹಿಡಿದುಕೊಂಡು ಡೈನಿಂಗ್‌ ಟೇಬಲ್‌ ಬಳಿಗೆ ಕರೆದೊಯ್ದು ತಿಂಡಿ, ಹಣ್ಣು ತಂದಿಟ್ಟು ‘ಬೇಜಾರು ಮಾಡಿಕೊಳ್ಳಬೇಡ. ದಯವಿಟ್ಟು ತಿನ್ನು’ ಎಂದಳು.

ನಾನು ತಿಂಡಿ ತಿನ್ನುವಾಗ ಅನಾಲಿನಾ ನನ್ನೆದುರು ಕೂತು ಭಾರತದ ಬಗ್ಗೆ ಪ್ರಶ್ನೆ ಕೇಳತೊಡಗಿದಳು. ನಾನವಕ್ಕೆ ಉತ್ತರಿಸುತ್ತಾ ‘ನೀನ್ಯಾಕೆ ಭಾರತಕ್ಕೆ ಬರಬಾರದು’ ಅಲ್ಲಿ ಎಷ್ಟೊಂದು ಭಾಷೆಗಳಿವೆ ಗೊತ್ತಾ? ನಿನ್ನ ಜನ್ಮಪೂರ್ತಿ ಅಲ್ಲಿದ್ದರೂ ಅವನ್ನೆಲ್ಲಾ ನೀನು ಕಲಿಯಲು ಸಾಧ್ಯವೇ ಇಲ್ಲ. ಅಷ್ಟೊಂದು ಪ್ರಕಾರ’ ಎಂದೆ. ಅದಕ್ಕವಳು ನಗುತ್ತಾ ‘ಅಯ್ಯಯೋ ಮಾರಾಯ……… ನಮಗೆ ಪಾಶ್ಚಾತ್ಯರಿಗೆ ಪೂರ್ವದ ಕಡೆಯ ಭಾಷೆಗಳನ್ನು ಕಲಿಯೋದು ಅಂದರೆ ದೊಡ್ಡ ಸಂಕಟ. ನಿಮ್ಮ ಶಬ್ದಗಳನ್ನು ಉಚ್ಚರಿಸುವುದರಲ್ಲಿ ನಮ್ಮ ಶಕ್ತಿಯೆಲ್ಲಾ ಹೊರಟು ಹೋಗಿರುತ್ತದೆ. ಹಾಗಾಗಿ ಭಾಷೆ ಕಲಿಯಲು ನಿಮ್ಮಲ್ಲಿಗೆ ಬರುವುದಿಲ್ಲ. ಆದರೆ ನಿಮ್ಮ ಕೆಲವು ದೇವಾಲಯಗಳ ವಾಸ್ತು ಅದ್ಭುತವಾಗಿದೆಯೆಂದು ಕೇಳಿದ್ದೇನೆ. ಅದನ್ನು ನೋಡಲು ಬರಬೇಕೆಂದಿದ್ದೇನೆ. ಅದು ಈಗಲ್ಲ. ನನಗೆ ನಲುವತ್ತು ದಾಟಿದ ಮೇಲೆ’ ಅಂದಳು. ‘ಆಗ ನಾನು ಬದುಕಿರುತ್ತೇನೋ, ಇಲ್ಲವೊ?’ ಎಂದು ನಾನೆಂದಾಗ ‘ನೀನು ವಿಳಾಸ ಕೊಟ್ಟಿದ್ದೀಯಲ್ಲಾ? ನೀನು ಇಲ್ಲದಿದ್ದರೆ ನಿನ್ನ ಮಗ ಇದ್ದೇ ಇರ್ತಾನೆ. ಅವನನ್ನು ಕಂಡು ಮಾತಾಡಿಸುತ್ತೇನೆ’ ಎಂದಳು.
ನಾನೀಗ ಗಂಭೀರವಾಗಿ ‘ನೀನು ಇನ್ನು ಹೊಸ ಭಾಷೆ ಕಲಿಯುವ ಹುಚ್ಚು ಬಿಡು.  ಯಾವುದಾದರೂ ಒಂದೆರಡು ಭಾಷೆಗಳಲ್ಲಿ ಆಳ ಅಧ್ಯಯನ ನಡೆಸಿ ಭಾಷಾ ಕ್ಷೇತ್ರಕ್ಕೆ ಏನಾದರೂ ಕೊಡುಗೆ ನೀಡು’ ಎಂದೆ. ಅದಕ್ಕವಳು ಗಟ್ಟಿಯಾಗಿ ನಕ್ಕು ‘ಏನು ಹೇಳುತ್ತಿದ್ದಿ ನೀನು? ನನ್ನಿಂದ ಅದೆಲ್ಲಾ ಸಾಧ್ಯವಿಲ್ಲಪ್ಪಾ’ ಅಂದಳು. ‘ಹಾಗನ್ನಬೇಡ. ನಿನಗೆ ಇನ್ನೂ ಎಷ್ಟೊಂದು ವಯಸ್ಸಿದೆ. ಬದುಕಿನ ಸಾಧ್ಯತೆಗಳ ಬಗ್ಗೆ ಪ್ರೌಢವಾಗಿ ಯೋಚಿಸಲು ನಿನಗೀಗ ಸಾಧ್ಯವಾಗುತ್ತಿಲ್ಲ ಅಷ್ಟೆ. ಆದರೆ ಕಲಿಕೆಗೆ ಅಂತ್ಯವೆಂಬುದೇ ಇಲ್ಲವಲ್ಲಾ? ಹಾಗೆ ಕಲಿಯುತ್ತಾ ಹೋಗಿ ಪ್ರಯೋಜನವೂ ಇಲ್ಲ. ಏಕೆಂದರೆ ಅಂತಹ ಕಲಿಕೆ ಕೇವಲ ಸ್ವಾರ್ಥಕ್ಕಾಗಿ ಮಾತ್ರ.  ನಾವು ನಮ್ಮ ಸಂತೋಷಕ್ಕಾಗಿ ಮಾತ್ರವೇ ಬದುಕುವಂತಾಗಬಾರದಲ್ಲಾ? ನಮ್ಮ ಮಿತಿಗಳೊಳಗೆ ಕೆಲವರಾದರೂ ನೆನಪಿಟ್ಟುಕೊಳ್ಳುವಂತಹ, ಇತರರಿಗೆ ಉಪಯೋಗವಾಗುವ ಸಾಧನೆಗಳನ್ನು ಮಾಡಬೇಕು. ನೀನು ನಿನ್ನ ಬಗ್ಗೆ ಯೋಚಿಸುವುದನ್ನು ಬಿಟ್ಟು, ನೀನು ಕಲಿತಿರುವ ಭಾಷೆಗಳನ್ನು ಕಲಿಯದವರಿಗಾಗಿ ಯೋಚಿಸು. ಅವರಿಗಾಗಿ ಏನನ್ನಾದರೂ ಮಾಡು? ಎಂದು ತಿಂಡಿ ಮುಗಿಸಿ ಎದ್ದೆ.
ಗಂಭೀರವಾಗಿ ಯೋಚಿಸುತ್ತಿರುವಂತೆ ಕಂಡ ಅನಾಲಿನಾ ತನ್ನ ಕೋಣೆಗೆ ನಡೆದಳು. ಸ್ವಲ್ಪ ಹೊತ್ತಲ್ಲಿ ಡ್ರೆಸ್ಸು ಬದಲಿಸಿ ನನ್ನ ಕೋಣೆಯ ಬಾಗಿಲು ಬಡಿದು ತೆರೆದಿದ್ದ ಬಾಗಿಲ ಮೂಲಕ ಒಳಹೊಕ್ಕಳು. ‘ನಾನೀಗ ಕ್ಲಾಸಿಗೆ ಹೋಗಬೇಕು. ಬರುವಾಗ ಮಧ್ಯಾಹ್ನ ಒಂದು ಗಂಟೆಯಾಗಿರುತ್ತದೆ. ನೀನು ಹನ್ನೆರಡು ಗಂಟೆಗೆ ಹೊರಟು ಬಿಡ್ತೀಯಾಂತ ಮಿಷೇಲ್‌ ಹೇಳಿದ.  ಒಂದು ಬಾರಿ ನೀನು ಸ್ವೀಡನ್ನಿಗೆ ಬರುವ ಹಾಗಾಗಲಿ. ನೀನು ನನ್ನ ತಂದೆಗೆ ಮತ್ತು ತಮ್ಮಂದಿರಿಗೆ ಯೋಗಾಸನ ಕಲಿಸಿದ್ದಕ್ಕೆ ಅವರು ಖುಷಿಪಟ್ಟಿದ್ದಾರೆ. ಹಾಗಂತ ಹೇಳಲು ಇಂದು ಫೋನು ಮಾಡಿ ತಿಳಿಸಿದ್ದಾರೆ. ನೀನು ನಮ್ಮೆಲ್ಲರ ನೆನಪಲ್ಲಿರ್ತಿ’ ಎಂದು ಹೇಳಿ ಕೈ ಕುಲುಕಿ ಎರಡು ಫ್ರೆಂಚ್‌ ಕಿಸ್ಸ್‌ ನೀಡಿ ಹೋರಟೇ ಹೋದಳು.

ಹಾರೋಣ ಬಾನಿನೆತ್ತರಕೆ
ತುಲೋಸಿನಲ್ಲಿ ನಾವು ನೋಡಿದುದರಲ್ಲಿ ಎಂದೆಂದಿಗೂ ಮರೆತು ಹೋಗದ್ದು ಏರೋ ಸ್ಪೇಶಿಯಲ್‌ನ ಸಂದರ್ಶನ. ಅದು ಆಂಗ್ಲೊಫ್ರೆಂಚ್‌ ಸಹಯೋಗದ ವಿಮಾನ ನಿರ್ಮಾಣ ಸಂಸ್ಥೆ. ಸಂಸ್ಥೆ ಇರುವುದು ತುಲೋಸಿನಿಂದ ಹತ್ತು ಕಿ.ಮೀ. ದೂರದ ಹೊರವಲಯದಲ್ಲಿ. ಅಲ್ಲಿ ಸಾವಿರಾರು ಎಕರೆ ಪ್ರದೇಶವನ್ನು ಹೊಂದಿರುವ ಏರೋ ಸ್ಪೇಶಿಯಲ್ಲ್‌ಗೆ ಸಾರ್ವಜನಿಕರು ಮುಕ್ತವಾಗಿ ಪ್ರವೇಶಿಸುವಂತಿಲ್ಲ. ಒಳಪ್ರದೇಶಕ್ಕೆ ಕನಿಷ್ಠ ಒಂದು ತಿಂಗಳು ಮುಂಚಿತವಾಗಿ ಅನುಮತಿ ಪಡೆದಿರಬೇಕು. ವಿದೇಶೀಯರಾದರೆ ಪಾಸ್‌ಪೋರ್ಟ್‌ ತೋರಿಸಿ ಸಾಕಷ್ಟು ಮುಂಚಿತವಾಗಿ ಪೂರ್ವಾನುಮತಿ ಪಡೆದಿರಬೇಕು.

ಈ ಸಂಸ್ಥೆಯ ಮ್ಯಾನೇಜಿಂಗ್‌ ಡೈರೆಕ್ಟರ್‌ಲಾಂಗಿನ್‌ ಫೋರ್ಡಿನೋ ತುಲೋಸ್‌ ರೋಟರಿ ಸದಸ್ಯ. ನಮ್ಮ ಮಿತ್ರ ಜುವಾನ್‌ ಬುಯೋ ಓರ್ವ ಹವ್ಯಾಸಿ ವಿಮಾನ ಹಾರಾಟಗಾರನಾಗಿರುವುದರಿಂದ ಈತನಿಗೆ ಆತ್ಮೀಯನಾಗಿದ್ದ.  ಏರೋಸ್ಪೇಶಿಯಲ್ಲಿಗೆ ನಮ್ಮ ಸಂದರ್ಶನವನ್ನು ನಿಗದಿಗೊಳಿಸಿದ್ದೇ ಜುವಾನ್‌ ಬುಯೋ. ಎಪ್ರಿಲ್‌ 29ರ ಅಪರಾಹ್ನ ನಮ್ಮನ್ನು ಏರೋಸ್ಪೇಶಿಯಲ್ಲಿಗೆ ಕರೆದೊಯ್ದ ಜುವಾನ್‌ ತನಗೆ ವಿಪರೀತ ಜ್ವರವೆಂದು ಲಾಂಗಿನ್‌ ಫೊರ್ಡಿನೋನ ಅನುಮತಿ ಕೇಳಿ ಅವನ ಕೋಣೆಯ ಸೋಫಾದಲ್ಲಿ ಕಾಲುನೀಡಿ ಮಲಗಿಬಿಟ್ಟ.

ಏರೋಸ್ಪೇಶಿಯಲ್‌ ಆಡಳಿತ ಕಛೇರಿಯ ಎರಡನೇ ಅಂತಸ್ತಿನಲ್ಲಿರುವ ಆತನ ಛೇಂಬರ್‌ ವಿಶಾಲವಾಗಿತ್ತು. ಅದರ ಪಕ್ಕದಲ್ಲೇ ನಲುವತ್ತು ಮಂದಿ ಕೂರಬಹುದಾದ ದುಂಡು ಮೇಜಿನ ಹಾಲ್‌. ಅಲ್ಲಿ ನಮ್ಮನ್ನು ಕೂರಿಸಿ ಆತ ಬೆಲ್ಲ್‌ ಒತ್ತಿದಾಗ ಆಕರ್ಷಕ ವ್ಯಕ್ಷ್ತಿತ್ವದ ಮಧ್ಯವಯಸ್ಕಳೊಬ್ಬಳು ಕಾಣಿಸಿಕೊಂಡು ‘ಎಲ್ಲಾ ರೆಡಿಯಾಗಿದೆ’ ಎಂದಳು. ಆತ ಅವಳನ್ನು ಪರಿಚಯಿಸುತ್ತಾ ‘ಇವಳು ಗ್ರಿಫಿತ್‌. ನನ್ನ ಪರ್ಸನಲ್‌ ಅಸಿಸ್ಟಂಟ್‌. ನನ್ನ ಹೆಂಡತಿಗಿಂತ ಚೆನ್ನಾಗಿ ನನ್ನನ್ನು ಅರ್ಥಮಾಡಿಕೊಂಡವಳು’ ಅಂದ. ಗ್ರಿಫಿತಳ ಕೆಂಪು ಮುಖ ನಾಚಿಕೆಯಿಂದ ಮತ್ತಷ್ಟು ಕೆಂಪಗಾಯಿತು.

ನಾವು ಆಸನಗಳಲ್ಲಿ ಕೂತುಕೊಂಡೆವು. ಆತ ಏರೋಸ್ಪೇಶಿಯಲ್‌ ಪರವಾಗಿ ನಮ್ಮನ್ನು ಔಪಚಾರಿಕವಾಗಿ ಸ್ವಾಗತಿಸಿ ಹಾಲ್‌ನ ಕಿಟಕಿಗಳ ಪರದೆ ಹಾಕತೊಡಗಿದ. ‘ಕಿಟಕಿ ಹಾಕಿಯೇ ಇಲ್ಲವಲ್ಲಾ’ ಎಂದು ಹೆಬ್ಬಾರರು ಹೇಳಿದಾಗ ಅವನು ‘ಬಂದು ನೋಡಿ’ ಎಂದ. ಹೆಬ್ಬಾರರು ಕಿಟಕಿ ಬಳಿಗೆ ಹೋಗಿ ಕೈಹಾಕಿದರೆ ಕಿಟಕಿ ಮುಚ್ಚಿತ್ತು. ಕಿಟಕಿಯ ಗಾಜು ಕಿಟಕಿ ತೆರೆದಿಟ್ಟಂತೆ ಕಾಣಿಸುವಷ್ಟು ಶುಭ್ರವಾಗಿತ್ತು!

ಕಿಟಕಿಯ ಪರದೆ ಹಾಕಿದ ಬಳಿಕ ಗ್ರಿಫಿತ್‌ ವೀಡಿಯೋ ಆನ್‌ ಮಾಡಿದಳು. ವಿಶಾಲವಾದ ಪರದೆಯ ಮೇಲೆ ಏರೋಸ್ಪೇಶಿಯಲ್ಲಿನ ಮಾಹಿತಿ, ಆಡಳಿತ ಕಛೇರಿ, ಜೋಡಣಾ ವಿಭಾಗ, ಜೋಡಣೆಯ ವಿವಿಧ ಹಂತಗಳು, ವಿವಿಧ ವಿಮಾನಗಳ ವಿವರ, ಹಾರಾಟ ಕ್ರಮ, ವಿಮಾನ ಅವಘಡ  ಇತ್ಯಾದಿಯಾಗಿ ಅರ್ಧಗಂಟೆಯಷ್ಟು ಹೊತ್ತು ವಿವರಣೆ ಸಹಿತ ಚಿತ್ರಗಳು ಮೂಡಿಬಂದವು. ಆ ಬಳಿಕ ಪ್ರಶ್ನೋತ್ತರ ಕಾರ್ಯಕ್ರಮ ನಡೆಯಿತು. ಏರ್‌ ಇಂಡಿಯಾ, ಏರ್‌ ಫ್ರಾನ್ಸ್‌ಗಳ ಕಾರ್ಯಕ್ಷಮತೆಯ ಬಗ್ಗೆ ಮಾತುಕತೆಗಳಾದವು. ಅದ್ಭುತ ವ್ಯಕ್ತಿತಿ ಫೋರ್ಡಿನೋ ಅನೇಕ ಮಾಹಿತಿಗಳನ್ನು ನೀಡಿ ನಮ್ಮ ಕುತೂಹಲವನ್ನು ತಣಿಸಿದ.

ಅದಾದ ಬಳಿಕ ವಿಮಾನ ಜೋಡಣಾ ವಿಭಾಗಕ್ಕೆ ನಮ್ಮ ಭೇಟಿ. ಅಲ್ಲಿಗೆ ನಮ್ಮನ್ನು ಕೊಂಡೊಯ್ಯಲು ಧ್ವನಿವರ್ಧಕ ಸಜ್ಜಿತ ಲಕ್ಸುರಿ ವ್ಯಾನೊಂದು ಸಿದ್ಧವಾಗಿ ನಿಂತಿತ್ತು.  ನಾವೆಲ್ಲಾ ಅದರಲ್ಲಿ ಹತ್ತಿ ಕೂತ ಬಳಿಕ ಡ್ರೈವರ್‌ ಅಟೋಮ್ಯಾಟಿಕ್‌ ಬಾಗಿಲನ್ನು ಮುಚ್ಚಿದ.  ಫೋರ್ಡಿನೋ ಧ್ವನಿವರ್ಧಕ ಹಿಡಿದುಕೊಂಡು ವಿವರಣೆ ನೀಡುತ್ತಾ ಬಂದ. ವಾಹನ ಏರೋಸ್ಪೇಶಿಯಲ್ಲಿನ ವಿಸ್ತಾರ ಪ್ರದೇಶವನ್ನು ಹಾದು ಬೃಹತ್‌ ಕಟ್ಟಡವೊಂದರ ಎದುರಿಗೆ ಬಂದು ನಿಂತಿತು. ಅಲ್ಲೊಬ್ಬ ಏರೋಸ್ಪೇಶಿಯಲ್ಲಿನ ಅಧಿಕೃತ ಫೋಟೊಗ್ರಾಫರ್‌ ನಮಗಾಗಿ ಕಾದಿದ್ದ. ನಮ್ಮ ಎರಡು ಗ್ರೂಫ್‌ ಫೋಟೋ ತೆಗೆದು ಕೈಬೀಸಿ ಅಲ್ಲೇ ಇದ್ದ ಬೈಕ್‌ ಹತ್ತಿ ಆಡಳಿತ ಕಛೇರಿಯತ್ತ ದೌಡಾಯಿಸಿದ.

ನಾವು ಏರೋಸ್ಪೇಶಿಯಲ್‌ ಎಂಬ ಹೆಸರನ್ನು ಹೊತ್ತ ಭೂಮಗಾತ್ರದ ಕಟ್ಟಡವನ್ನು ಹೊಕ್ಕೆವು.  ಪ್ಯಾರಿಸ್ಸಿನ ವಿಶ್ವವಿಖ್ಯಾತ ಐಫೆಲ್‌ ಟವರಿಗಿಂತ ಹೆಚ್ಚು ಕಬ್ಬಿಣ ಈ ಕಟ್ಟಡದ ನಿರ್ಮಾಣಕ್ಕೆ ಬಳಕೆಯಾಗಿದೆ. ಅಮೇರಿಕಾದ ಸ್ವಾತಂತ್ರ್ಯ ಮೂರ್ತಿಗಿಂತ ಕೇವಲ ಎರಡಡಿಯಷ್ಟು ಕಡಿಮೆ ಎತ್ತರದ ಕಟ್ಟಡವದು. ಈ ಭೂಮ ಕಟ್ಟಡವನ್ನು ಮೂರೇ ತಿಂಗಳುಗಳಲ್ಲಿ ಕಟ್ಟಿ ಮುಗಿಸಿದ್ದೂ ಕೂಡಾ ಒಂದು ಎಂಜಿನಿಯರಿಂಗ್‌ ವಿಸ್ಮಯವೇ. ನಾವು ಕಟ್ಟಡದ ಒಳಹೊಕ್ಕಾಗ ಸಂಜೆ ನಾಲ್ಕು ಗಂಟೆ. ಕೆಲಸಗಾರರು ಕೆಲಸ ಬಿಟ್ಟು ಮನೆಗೆ ಹೋಗುವ ತರಾತುರಿಯಲ್ಲಿದ್ದರು.  ಆಗಲೂ ನಾವು ವಿದೇಶೀಯ ಅತಿಥಿಗಳೆಂಬುದನ್ನು ಗಮನಿಸಿ ‘ಬೋನ್ಸೂರ್‌’ ಎಂದು ಹೇಳಲು ಅವರು ಮರೆಯಲಿಲ್ಲ.
ನಾವು ವ 340 ಜಾತಿಗೆ ಸೇರಿದ ಮೂರು ವಿಮಾನಗಳ ಒಳಹೊಕ್ಕು ಜೋಡಣಾ ವಿಧಾನವನ್ನು ನೋಡಿದೆವು. ಮೊದಲನೆಯ ವಿಮಾನ ಕೇವಲ ಅಸ್ತಿಪಂಜರದಂತಿತ್ತು. ಅದರೊಳಗೆ ಯಾವುದೇ ಭಾಗದ ಜೋಡಣೆಯಾಗಿರಲಿಲ್ಲ. ಎರಡನೆಯ ವಿಭಾಗದಲ್ಲಿ ಎಲ್ಲಾ ಭಾಗಗಳು ಜೋಡಣೆಯಾಗಿದ್ದವು. ಅದರೊಳಗೆ ಎಲ್ಲವೂ ವಯರುಮಯ. ಎಲೆಕ್ಟ್ರಾನಿಕ್‌ ಸರ್ಕ್ಯೂಟ್‌ಗಳು ಅವೆಷ್ಟು! ಅವುಗಳ ಜೋಡಣೆಯಲ್ಲಿ ಒಂದೇ ಒಂದು ತಪ್ಪಾದರೂ ಸಾಕು. ಆ ತಪ್ಪು ನೂರಾರು ಹಸಿ ಹಸಿ ಜೀವಗಳನ್ನು ಬಲಿ ತೆಗೆದುಕೊಳ್ಳುತ್ತದೆ. ನಾವು ನೋಡಿದ ಮೂರನೇ ವಿಮಾನದಲ್ಲಿ ಸೀಟು ಜೋಡಣೆ ಮಾತ್ರ ಬಾಕಿ ಇತ್ತು. ಹಳದಿ ಬಣ್ಣದಿಂದ, ನಡುನಡುವೆ ನೀಲಿ ಪಟ್ಟಿಗಳಿಂದ ಅಲಂಕೃತವಾಗಿದ್ದ ಆ ವಿಮಾನಕ್ಕೆ ನಾಲ್ಕು ಟನ್‌ ಬಣ್ಣ ಬೇಕಾಯಿತಂತೆ.

ವಿಮಾನಗಳೊಳಗೆ ಹೊಕ್ಕು ನಮಗೆ ಅರ್ಥ ಆದುದನ್ನು ತಲೆಯಲ್ಲಿ ತುಂಬಿಸಿಕೊಂಡು, ಅರ್ಥವಾಗದ್ದಕ್ಕೆ ಆಶ್ಚರ್ಯಪಟ್ಟು ಏರೋಸ್ಪೇಶೀಯಲ್‌ ಆಡಳಿತ ಕಛೇರಿಗೆ ಅದೇ ವ್ಯಾನಲ್ಲಿ ನಾವು ವಾಪಾಸಾದಾಗ, ಸಣ್ಣನಿದ್ದೆ ಹೊಡೆದು ಜುವಾನ್‌ ಬುಯೋ ಗೆಲುವಾಗಿ ನಿಂತಿದ್ದ. ನಾವು ತುಲೋಸಿಗೆ ವಾಪಾಸಾಗುತ್ತಿದ್ದಂತೆ ಆತನೆಂದತ ‘ನೀವು ಅದೃಷ್ಟಶಾಲಿಗಳು. ನಿಮಗೆ ಏರೋಸ್ಪೇಶಿಯಲ್ಲನ್ನು ಸ್ವಯಂ ಎಂ.ಡಿ.ಯೇ ಕರಕೊಂಡು ಹೋಗಿ ತೋರಿಸಿದ. ಎಲ್ಲರಿಗೆ ಈ ಭಾಗ್ಯ ದಕ್ಕುವುದಿಲ್ಲ.’

ಬಂದೆವು, ನೋಡಿದೆವು, ಗೆದ್ದೆವು

ಅಂದು ರಾತ್ರೆ ಎಂಟು ಗಂಟೆಗೆ ರಮೋನ್‌ವಿಲ್‌ ಕಂಪರ್ಟ್ ಇನ್ನ್‌ನಲ್ಲಿ ನಮ್ಮನ್ನು ಬೀಳ್ಕೊಡುವ ಸಮಾರಂಭ ಇರಿಸಿಕೊಳ್ಳಲಾಗಿತ್ತು. ಮಾರ್ಚ್ 26ರಂದು ಪ್ಯಾರಿಸ್ಸಿನಲ್ಲಿಳಿದ ನಾವು, ನಾಳೆ ಅಂದರೆ ಎಪ್ರಿಲ್‌ 30ರಂದು ಫ್ರೆಂಚ್‌ ನೆಲ ಬಿಟ್ಟು ಲಂಡನ್ನಿಗೆ ಹಾರಲಿದ್ದೆವು.  ಐದು ವಾರಗಳ ಫ್ರಾನ್ಸ್‌ ಪ್ರವಾಸದ ಅನುಭವಗಳನ್ನು ಹಂಚಿಕೊಳ್ಳಲು ಅಂದು ನಮಗೊಂದು ವೇದಿಕೆ ಸಿದ್ಧವಾಗಿತ್ತು.
ನಮ್ಮ ತಂಡದ ನಾಯಕ ಹೆಬ್ಬಾರರು ಅಂದು ಸಂಜೆ ನಮ್ಮನ್ನು ಒಟ್ಟಿಗೆ ಸೇರಿಸಿ, ‘ಸಂಜೆ ನಮಗೆಲ್ಲರಿಗೂ ಎರಡೆರಡು ನಿಮಿಷ ಭಾಷಣ ಮಾಡಲಿಕ್ಕಿದೆ. ಆ ವೇದಿಕೆಯಿಂದ ನಾವು ಏನನ್ನು ಹೇಳುತ್ತೇವೆಯೋ ಅದು ವಿಶ್ವ ರೋಟರಿಗೆ ಮುಟ್ಟುತ್ತದೆ. ಆದುದರಿಂದ ನೀವೆಲ್ಲಾ ಏನು ಹೇಳುತ್ತೀರಿ ಅನ್ನುವುದನ್ನು ಈಗಲೇ ಖಚಿತಪಡಿಸಿ ನನಗೆ ತಿಳಿಸಿ. ಇದು ಬಾಯಿಪಾಠದ ಭಾಷಣ ಆಗಕೂಡದು. ನಮ್ಮ ಈ ಅನಿಸಿಕೆಗಳನ್ನು ಇಂಗ್ಲೀಷಲ್ಲೇ ಹೇಳೋಣ.  ಅದನ್ನು ಜುವಾನ್‌ ಬುಯೋ ಫ್ರೆಂಚಿಗೆ ತರ್ಜುಮೆ ಮಾಡಲು ಒಪ್ಪಿದ್ದಾನೆ’ ಎಂದರು.

ಎಲೈನ್‌, ಗುರು ಮತ್ತು ಅನಿತಾ ‘ಹೆಚ್ಚೇನೂ ಹೇಳುವುದು ಬೇಡ. ಬರೇ ಉಪಕಾರ ಸ್ಮರಣೆ ಮಾಡಿದರೆ ಸಾಕು. ಎಲ್ಲವನ್ನು ನೀವೇ ಹೇಳಿಬಿಡಿ’ ಎಂದು ಹೆಬ್ಬಾರರ ಮೇಲೆ ಇನ್ನಷ್ಟು ಭಾರ ಹೊರಿಸಿದರು. ‘ನೀನು ಏನು ಮಾಡ್ತೀಯಾ?’ ಎಂಬಂತೆ ಅವರು ನನ್ನತ್ತ ನೋಡಿದರು. ‘ನನಗೆ ನನ್ನ ಯೋಗಾಸನದ ಬಗ್ಗೆ ಹೇಳಲಿಕ್ಕಿದೆ. ನಾನು ಯಕ್ಷಗಾನ ಕುಣಿದು ರಾಕ್‌ ಎನ್‌ ರೋಲನ್ನು ಕಲಿತದ್ದನ್ನು ಬಿಡುವುದಾದರೂ ಹೇಗೆ? ಅಲ್ಲದೆ ಸಾಧ್ಯವಾದರೆ ತುಲೋಸಿನ ನಮ್ಮ ಪ್ರಥಮ ಅತಿಥೇಯಳಾದ ಮ್ಯಾಗಿ ಬಗ್ಗೆಯೂ ಹೇಳಬೇಕೆಂದಿದ್ದೇನೆ. ಆದರೆ ಯಾರಿಗೂ ನೋವಾಗದ ರೀತಿಯಲ್ಲಿ ‘ ಅಂದೆ.

ಅಂದು ಬೆಳಿಗ್ಗೆ ಜುವಾನ್‌ ಬುಯೋನಲ್ಲಿ ನಾವು ಮಾತಾಡುವಾಗ ಜಾರ್ಜ್‌ ಮತ್ತು ಮ್ಯಾಗಿಯ ಪ್ರಸ್ತಾಪ ಬಂದಿತ್ತು. ಅವಳ ಮನೆಯಲ್ಲಿ ನಾವು ರವೆ ಇಡ್ಲಿ ಮಾಡಿ, ಅವಳಿಗೆ ತಿನ್ನಿಸಿ ನಾವೂ ತಿಂದಿದ್ದೆವು. ಅದನ್ನವಳು ಮೆಚ್ಚಿಕೊಂಡಿದ್ದಳು ಕೂಡಾ. ಆದರೆ ಆ ಬಳಿಕ ಜುವಾನ್‌ ಬುಯೋನಲ್ಲಿ ಮಾತಾಡುವಾಗ ‘ಅವರು ಭಾರತದಿಂದ ರವೆ ತಂದು ಇಡ್ಲಿ ಮಾಡಿದ್ದು ನನಗೆ ಇಷ್ಟವಾಗಲಿಲ್ಲ. ನಮ್ಮ ತಿಂಡಿಯನ್ನೇ ಅವರು ತಿನ್ನಬೇಕಿತ್ತು’ ಎಂದಳಂತೆ. ಒಮ್ಮೊಮ್ಮೆ ಕಾಲಕ್ಷೇಪಕ್ಕಾಗಿ ನಾವು ಏನೇನೋ ಮಾತಾಡಿಬಿಡುವುದುಂಟು.  ನಮ್ಮ ಅತ್ಯಂತ ಆತ್ಮೀಯರು ಎಂದು ನಾವು ನಂಬಿಕೊಂಡವರೇ, ಹಿಂದಿನಿಂದ ನಮ್ಮ ಬಗ್ಗೆ ಇಲ್ಲಸಲ್ಲದ್ದನ್ನು ಹೇಳುವುದುಂಟು. ಇನ್ನು ಕೇವಲ ಎರಡು ದಿನಗಳ ಪರಿಚಯದ ಮ್ಯಾಗಿ ಹಾಗೆ ಹೇಳಿದ್ದರೆ, ಅದು ವಿಶೇಷವೇನೂ ಅಲ್ಲ. ಆದುದರಿಂದ ಆ ಪ್ರಕರಣವನ್ನು ಅಲ್ಲಿಗೇ ಬಿಟ್ಟು ಬಿಡುವುದೆಂದು ನಾವು ಬೆಳಿಗ್ಗೆಯೇ ನಿರ್ಧರಿಸಿದ್ದೆವು. ಆದರೆ ನಾನದನ್ನು ಮತ್ತೆ ಎತ್ತಿಕೊಳ್ಳಲು ತೀರ್ಮಾನಿಸಿದ್ದನ್ನು ಕಂಡು ವಕೀಲರಾದ ಹೆಬ್ಬಾರರ ಹುಬ್ಬು ಮೇಲೇರಿತು.  ‘ಮಹಾರಾಯ….. ಜಾಗ್ರತೆಯಿಂದ ಮಾತಾಡು. ನಮ್ಮ ಮಾತಿನಿಂದ ಇನ್ನಷ್ಟು ಫಜೀತಿಯಾಗುವುದು ಬೇಡ’ ಎಂದು ನಯವಾಗಿಯೇ ಎಚ್ಚರಿಸಿದರು.

ಸಂಜೆ ಏಳೂವರೆಗೆ ಹೋಟೆಲಿನ ಸಭಾಭವನಕ್ಕೆ ಹೋದಾಗ ಹ್ಹೋ! ಅದೆಷ್ಟು ಪರಿಚಯದ ಮುಖಗಳು! ಅಲ್ಬಿಯಿಂದ ಫಿಲಿಪ್ಪನ ತಾಯಿ “ಫ್ರಾನ್ಸಿನ ಇಂದಿರಾಗಾಂಧಿ” ಬಂದಿದ್ದಳು.  ಕ್ಯಾಸ್ತ್ರಾದ ಹೀರೋ ಬೆರ್ನಾರ್ಡಿನ್‌ ತನ್ನ ಮಡದಿ ನಾಡೈಟಳೊಡನೆ ಬಂದಿದ್ದ.  ಕ್ಯಾಸ್ತಲ್‌ನೂದರಿಯ ಕಂಸ ಜೆರಾರ್ಡಿಯನ್‌, ಅನೇಕ ಫೋಟೋಗಳನ್ನು ನಮಗಾಗಿ ತಂದಿದ್ದ.  ಮಾಂಪಿಲಿಯೇದ ತುಂಟ ಮುದುಕ ಜುವಾನ್‌ ವಿಲೋತ್‌ ಬಂದಿದ್ದ. ಅವನೊಡನೆ ಕ್ರಿಸ್ಟೋಫರ್‌ ಕೂಡಾ. ನಾಬೋನ್ನಿನಿಂದ ಎಲಿಜಾಬೆತ್‌ ಮತ್ತು ಲೂದ್ರ್‌ನಿಂದ ಸ್ವಯಂ ಅಲನ್‌ ಬಂದಿದ್ದರು. ನಮ್ಮ ಮ್ಯಾಗಿ ಮತ್ತು ಜಾರ್ಜ್‌ ಬಹಳ ಫ್ಯಾಶನೇಬಲ್‌ ಆಗಿ ಬಂದು, ವೇದಿಕೆಯ ಬಳಿಯಲ್ಲೇ ಕೂತಿದ್ದರು. ಬೆರ್ನಾರ್ಡಿನ್‌ ಮತ್ತು ಜೆರಾರ್ಡಿಯನ್‌ ನಮ್ಮನ್ನೆಲ್ಲಾ ಆಲಂಗಿಸಿಕೊಂಡರೆ, ವಿಲೋತ್‌ ನಮಗೆಲ್ಲರಿಗೂ ಮುತ್ತಿನ ಸುರಿಮಳೆಗರೆದ. ಜೆರಾರ್ಡಿಯನ್‌ ಕ್ಯಾಸ್ತಲ್‌ನೂದರಿಯಲ್ಲಿ ತೆಗೆದಿದ್ದ ಎಲ್ಲಾ ಫೋಟೋಗಳ ಐದೈದು ಪ್ರತಿಗಳನ್ನು ಮಾಡಿಸಿ ನಮಗೆಲ್ಲರಿಗೂ ಹಂಚಿದ. ಜತೆಗೆ ಪತ್ರಿಕಾ ವರದಿಗಳ ಯಥಾ ಪ್ರತಿಗಳನ್ನು ಕೂಡಾ. ದೈತ್ಯ ದೇಹದಲ್ಲಿ ಉದಾರ ಹೃದಯ ಅ ಕ್ರಿಸ್ಟೋಫರ್‌ ನೆಹ್ರೂ ಕುರ್ತಾ ಮತ್ತು ಪೈಜಾಮದಲ್ಲಿ ಎಲ್ಲರ ಗಮನ ಸೆಳೆದ. ನಾನು ದೇವೇಗೌಡರ ಸ್ಟೈಲಿನಲ್ಲಿ (ಪಂಚೆ ಮತ್ತು ಪೈರಾನು) ಕಂಗೊಳಿಸಿದೆ.  ಜತೆಗೆ ಕತ್ತಿನ ಸುತ್ತ ಒಂದು ಹಸಿರು ಶಾಲು. ಮಣ್ಣಿನ ಮಗ!
ಸ್ವಾಗತ ಭಾಷಣವನ್ನು ರೋಟರಿ ಗವರ್ನರ್‌ ಹಂಬರ್ಗ್ ಫ್ರೆಂಚಿನಲ್ಲೇ ಮಾಡಿದ.  ಸಾಂಸ್ಕೃತಿಕ ವಿನಿಮಯ ಕಾರ್ಯಕ್ಷ್ರಮವನ್ನು ಹಿಂದಿನ ವರ್ಷದ ಗವರ್ನರ್‌ ಸಂಯೋಜಿಸಬೇಕಾಗಿತ್ತೆಂದೂ, ಈ ಬಾರಿ ಏನಾದರೂ ಏರುಪೇರುಗಳಾಗಿದ್ದರೆ ಅದಕ್ಕೆ ಹಿಂದಿನ ವರ್ಷದ ಗವರ್ನರೇ ಕಾರಣವೆಂದು ಹೇಳಿ ಆತ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡ.  ಪುಣ್ಯಕ್ಕೆ ಹಿಂದಿನ ವರ್ಷದ ಗವರ್ನರ್‌ ಅಂದು ಬಂದಿರಲಿಲ್ಲ. ಬಂದಿರುತ್ತಿದ್ದರೆ ಹಂಬರ್ಗ್ ಆ ಮಾತು ಹೇಳುತ್ತಿರಲಿಲ್ಲ.

ಅದಾದ ಬಳಿಕ 1997ರ ಜನವರಿಯಲ್ಲಿ ಭಾರತ ಸಂದರ್ಶಿಸಿದ್ದ ಜುವಾನ್‌ ಬುಯೋ, ಕ್ರಿಸ್ಟೋಫರ್‌ ಮತ್ತು ಅಲನ್‌ ತಮ್ಮ ಅನುಭವಗಳನ್ನು ಹೇಳಿಕೊಂಡರು. ನನ್ನ ಬಳಿ ಬಹಳ ಚೆನ್ನಾಗಿ ಇಂಗ್ಲೀಷ್‌ ಬಲ್ಲ ಲೂಸಿನಾ ಕೂತಿದ್ದಳು. ಅವಳು ಆ ಭಾಷಣಗಳ ಸಾರಾಂಶವನ್ನು ನನಗೆ ತಿಳಿಸಿದಳು. ಅವುಗಳಲ್ಲಿ ಆಕ್ಷೇಪಾರ್ಹವಾದವುಗಳೇನೂ ಇರಲಿಲ್ಲ. ಕೊನೆಯಲ್ಲಿ ಎಲಿಜಾಬೆತ್‌ ಹತ್ತು ನಿಮಿಷ ನಿರರ್ಗಳವಾಗಿ ಮಾತಾಡಿದಳು. ಅವಳ ಭಾಷಣದಲ್ಲಿ ‘ಭಾರತದ ಊರು ಕೇರಿ, ಪಟ್ಟಣಗಳು ಅತ್ಯಂತ ಕೊಳಕಾಗಿರುತ್ತವೆ. ಮಲಮೂತ್ರ ವಿಸರ್ಜನೆಯನ್ನು ಭಾರತೀಯರು ಎಲ್ಲಿ ಬೇಕೆಂದರಲ್ಲಿ ಮಾಡಿ ಬಿಡುತ್ತಾರೆ’ ಎಂಬ ಎರಡು ಆಕ್ಷೇಪಾರ್ಹ ವಾಕ್ಯಗಳಿದ್ದವು. ಎಲಿಜಾಬೆತ್ತು ಹೇಳಿದ್ದರಲ್ಲಿ ಸುಳ್ಳಿರಲಿಲ್ಲ. ಆದರೆ ಅಷ್ಟು ಮಂದಿ ಫ್ರೆಂಚರ ಎದುರು ನಮಗೆ ಖಂಡಿತಾ ಆ ಮಾತುಗಳಿಂದ ಅಪಮಾನವಾಗಿತ್ತು.

ಇದೀಗ ನಮ್ಮ ಸರದಿ. ಮೊದಲಿಗೆ ಹೆಬ್ಬಾರರು ಇಂಗ್ಲೀಷಿನಲ್ಲಿ ಮಾತಾಡಿದರು. ಅವರಿಗೆ ದುಭಾಷಿಯಾಗಿ ಕ್ರಿಸ್ಟೋಪರ್‌ ಸಹಾಯ ಮಾಡಿದ. ಎಲಿಜಾಬೆತ್ತಳ ಹೇಳಿಕೆಯನ್ನೇ ಪ್ರಧಾನವಾಗಿರಿಸಿಕೊಂಡ ಹೆಬ್ಬಾರರು ‘ಭಾರತದಲ್ಲಿ ಅನೇಕ ಕಡೆ ನೈರ್ಮಲ್ಯ ಇಲ್ಲ. ಅದು ನಿಜ. ಅದಕ್ಕೆ ಅನೇಕ ಕಾರಣಗಳಿವೆ. ಆದರೆ ಭಾರತದಲ್ಲಿ ಅದಕ್ಕಿಂತ ಹೆಚ್ಚಾಗಿ ನೀವು ಗಮನಿಸಬೇಕಾದ ಅನೇಕ ಸಂಗತಿಗಳಿವೆ. ಬೇಲೂರು, ಹಳೆಬೀಡು, ಬಾದಾಮಿ, ಪಟ್ಟದಕಲ್ಲು, ಐಹೊಳೆ, ಹಂಪೆ, ಶ್ರವಣಬೆಳಗೊಳದ ಗೊಮ್ಮಟೇಶ್ವರ  ಇಂಥವು ಭಾರತದಲ್ಲಲ್ಲದೆ ವಿಶ್ವದ ಇನ್ನು ಯಾವುದೇ ದೇಶದಲ್ಲಿ ಕಾಣಲು ಸಾಧ್ಯವಿಲ್ಲ. ಒಂದು ಕೋಲು ಹಿಡಿದ, ಎರಡು ತುಂಡು ಬಟ್ಟೆ ಧರಿಸಿದ, ಬಕ್ಕತಲೆಯ ಒಬ್ಬ ಮುದುಕ ಗಾಂಧಿ ಸೂರ್ಯ ಮುಳುಗದ ಸಾಮ್ಯಾಜ್ಯದ ಎದುರು ನಿಂತು ಸಡ್ಡೆ ಹೊಡೆದುದನ್ನು ನೀವು ಗಮನಿಸಬೇಕು. ಭೌತಿಕ ನೈರ್ಮಲ್ಯಕ್ಷ್ಕಿಂತ ಮಾನಸಿಕ ನೈರ್ಮಲ್ಯ ಮುಖ್ಯ. ಭೌತಿಕವಾಗಿ ಎಷ್ಟೇ ಸುಖ ಸಾಧಿಸಿದರೂ ಮಾನಸಿಕ ನೆಮ್ಮದಿ ಇಲ್ಲದಿದ್ದರೆ ಏನು ಪ್ರಯೋಜನ?’ ಎಂದು ಫ್ರೆಂಚರು ಆತ್ಮಾವಲೋಕನ ಮಾಡಿಕೊಳ್ಳುವಂತೆ ಮಾತಾಡಿದರು.

ಎಲೈನ್‌ ಒಂದು ತುಂಡು ಚೀಟಿಯಲ್ಲಿ ಬರೆದ ನಾಲ್ಕಾರು ಫ್ರೆಂಚ್‌ ವಾಕ್ಯಗಳನ್ನು ಓದಿ ಹೇಳಿದಳು. ಗುರು ನಾಲ್ಕೇ ವಾಕ್ಯಗಳಲ್ಲಿ ಎಲ್ಲರಿಗೂ ವಂದಿಸಿದ. ಅನಿತಾ ಕಥಾರರ ಕತೆಗೆ ತನ್ನ ಮನ ಕರಗಿದುದನ್ನು, ಲ್ಯಾಂಗ್‌ಡಕ್ಕಿನ ಸೌಂದರ್ಯ ತನ್ನ ಮನಸೆಳೆದುದನ್ನು ಹೃದಯಂಗಮವಾಗಿ ಇಂಗ್ಲೀಷಲ್ಲಿ ಹೇಳಿ ಫ್ರೆಂಚರ ಮೆಚ್ಚುಗೆ ಗಳಿಸಿದಳು.

ನಾನು ವೇದಿಕೆಗೆ ಹೋಗುವಾಗ ಲೂಸಿನಾಳನ್ನು ದುಭಾಷಿಯಾಗಿ ಕರೆದುಕೊಂಡೇ ಹೋಗಿ ಮಾತು ಆರಂಭಿಸಿದೆ: ‘ನನ್ನ ಪ್ರೀತಿಯ ಸಹೋದರ, ಸಹೋದರಿಯರೇ, ಇದು ಭಾರತದ ವಿಶ್ವವಿಖ್ಯಾತ ಸನ್ಯಾಸಿ ವಿವೇಕಾನಂದರು ತಮ್ಮ ಜಗತ್‌ಪ್ರಸಿದ್ಧ ಚಿಕಾಗೋ ಭಾಷಣವನ್ನು ಆರಂಭಿಸುವಾಗ ಅಮೇರಿಕನ್ನರನ್ನು ಸಂಬೋಧಿಸಿದ ಬಗೆ. ವಿವೇಕಾನಂದರ ಭಾರತಕ್ಕೆ ಸೇರಿದ ನಾನು ಈಗ ನಿಮ್ಮೆಲ್ಲರನ್ನು ನನ್ನ ಸಹೋದರ, ಸಹೋದರಿಯರೆಂದು ತಿಳಿದುಕೊಂಡೇ ಮಾತಾಡುತ್ತಿದ್ದೇನೆ.’ ನನ್ನ ಮಾತು ಫ್ರೆಂಚಿಗೆ ತರ್ಜುಮೆಗೊಂಡಾಗ ಅಲ್ಲಿ ನೆರೆದಿದ್ದವರು ತುಂಬಾ ಹೊತ್ತು ಚಪ್ಪಾಳೆ ತಟ್ಟಿದರು.

ಚಪ್ಪಾಳೆ ಸದ್ದು ಅಡಗಿದ ಬಳಿಕ ನಾನು ಮಾತು ಮುಂದುವರಿಸಿದೆ. ‘ಎಂತಹ ಅದ್ಭುತ ಮಣ್ಣು ನಿಮ್ಮದು. ನೀವು ಕಥಾರರ ಕತೆಯನ್ನು ಹಾಗೆಯೇ ಉಳಿಸಿಕೊಂಡಿದ್ದೀರಿ. ಕ್ಯಾಟಲನ್‌ ಸಂಸ್ಕೃತಿಯನ್ನು ಜೀವಂತ ಇರಗೊಟ್ಟಿದ್ದೀರಿ. ರಕಮದೋರ್‌ನ ಬೆಟ್ಟ ದೇಗುಲ, ಫುವಾನ ಕೊಂಕ್‌, ಬೆರ್ನಡಿಟ್ಟಳ ಲೂದ್ರ್‌, ತುಲೋಸ್‌ ಲ್ಯಾಟ್ರಿಕ್ಕನ ಚಿತ್ರಗಳು, ಸೆತ್ತ್‌ ಮತ್ತು ವೆಂದರಿನ ಬಂದರಗಳು, ಎಗ್‌ಮೋರ್ಟ್ ಮತ್ತು ಕರ್ಕಸೋನೆಯ ಕೋಟೆಗಳು, ಸುಂದರ ಮಿದಿಕಾಲುವೆ, ಮನೋಹರ ಮೆಡಿಟರೇನಿಯನ್‌, ಸಾಹಸಿಗಳ ಸ್ವರ್ಗವಾಗಿರುವ ಪಿರನೀಸ್‌  ಯಾವುದನ್ನೂ ಮರೆಯಲು ನಮ್ಮಿಂದ ಸಾಧ್ಯವೇ ಇಲ್ಲ. ‘

‘ನಾನೊಬ್ಬ ಅಧ್ಯಾಪಕ. ನಿಮ್ಮ ಊರಲ್ಲೂ ನನಗೆ ಶಿಷ್ಯರು ಸಿಕ್ಕಿಬಿಟ್ಟಿದ್ದಾರೆ. ಅಲ್ಬಿಯ ಮೀಸೆ ಫರೆಂಕ್‌ ಮತ್ತು ಅವನ ಮಗಳು ಮನು, ಫಿಜೆಯಾಕ್‌ನ ಮಾರ್ಸೆಲ್‌ ಕ್ಯಾಸ್ತಲ್‌ನೂದರಿಯ ರಾವತ್‌, ಲೂರ್ದಿನ ಬಿಲ್ಡೆಸ್ಟೈನ್‌, ನಾಬೋನ್ನಿನ ಪೇಜಸ್‌ ಜುವಾನ್‌, ಮತ್ತೀಗ ತುಲೋಸಿನ ಮಿಷೇಲ್‌ ನನ್ನಿಂದ ಯೋಗಾಸನ ಕಲಿತಿದ್ದಾರೆ. ಪರ್ಪಿನ್ಯಾದ ಫಿಲಿಪ್‌ ನನ್ನ ಯೋಗದ ಬಗ್ಗೆ ಕ್ಯಾಸೆಟ್ಟು ಕೂಡಾ ತಯಾರಿಸಿದ್ದಾನೆ. ದೂರದ ಮಾಂಪಿಲಿಯೇ ಮಹಾನಗರಿಯಲ್ಲಿ ನನಗೆ ಒಬ್ಬ ಮಾತೆ ದೊರೆತಿದ್ದಾಳೆ. ಈ ವಿಷಯದಲ್ಲಿ ನಾನು ತುಂಬಾ ಭಾಗ್ಯವಂತ ಎಂದು ನಾನು ಅಂದುಕೊಂಡಿದ್ದೇನೆ.’

‘ಅಷ್ಟೇ ಅಲ್ಲ. ನಿನ್ನೆ ನಾನು ನನ್ನ ಅತಿಥೇಯ ಮಿಷೇಲಿಗೆ ಯಕ್ಷಗಾನ ಕಲಿಸಿದ್ದೇನೆ.  ಅವನಿಂದ ರಾಕ್‌ ಎನ್‌ ರೋಲ್‌ ಕಲಿತಿದ್ದೇನೆ. ನೋಡಿ, ಎಂಥಾ ಸಾಂಸ್ಕೃತಿಕ ವಿನಿಮಯ’ ತುಲೋಸಿಗೆ ಬಂದ ಆರಂಭದಲ್ಲಿ ನಾನು ಮತ್ತು ಹೆಬ್ಬಾರರು ಉಳಿದುಕೊಂಡದ್ದು ಜಾರ್ಜ್ ಮತ್ತು ಮ್ಯಾಗಿಯರ ಜತೆ. ಅವರ ಅಡುಗೆ ಮನೆಯಲ್ಲಿ ನಿಜವಾದ ಸಾಂಸ್ಕೃತಿಕ ವಿನಿಮಯ ನಡೆದು ಹೋಗಿದೆ. ಮ್ಯಾಗಿಯ ಒತ್ತಾಯಕ್ಕೆ ಮಣಿದು ನಾವು ಅವಳಿಗೆ ಭಾರತದ ಅಡುಗೆ ಮಾಡುವುದು ಹೇಗೆನ್ನುವುದನ್ನು ಹೇಳಿಕೊಟ್ಟಿದ್ದೇವೆ. ಇಂದು ಮ್ಯಾಗಿ ಭಾರತದ ಅಕ್ಕಿಯ ಅನ್ನವನ್ನು ಮತ್ತು ಇಡ್ಲಿಯನ್ನು ಮಾಡಿ ಜಾರ್ಜನಿಗೆ ತಿನ್ನಿಸಬಲ್ಲಳು. ಮ್ಯಾಂಗೋ ಜ್ಯೂಸ್‌ ಮಾಡಿ ಜಾರ್ಜನ ಬಾಯಲ್ಲಿ ನೀರೂರುವಂತೆ ಮಾಡಬಲ್ಲಳು. ಫ್ರೆಂಚರು ಭಾರತದ ಅಡುಗೆ ಮಾಡಬಲ್ಲರು ಎಂದಾದರೆ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದ ಉದ್ದೇಶ ಸಫಲವಾದಂತೆಯೇ.’

‘ಈ ಕ್ಷಣಕ್ಕೆ ನಮ್ಮೆಲ್ಲರಲ್ಲಿರುವುದು ಧನ್ಯತೆಯ ಭಾವ ಮತ್ತು ಅಗಲಿಕೆಯ ನೋವು ಮಾತ್ರ.  ನಿಮಗೆಲ್ಲರಿಗೂ ಭಾರತೀಯರೆಲ್ಲರ ಪರವಾಗಿ ಶುಭಾಶಂಸನೆಗಳು. ನಿಮ್ಮ ಪ್ರೀತಿಯನ್ನು ಭಾರತೀಯರಿಗೆ ತಿಳಿಸುತ್ತೇವೆ. ಫ್ರೆಂಚ್‌  ಇಂಡಿಯನ್‌ ಬಾಂಧವ್ಯ ಚಿರಾಯುವಾಗಲಿ. ಅದು ವಿಶ್ವಶಾಂತಿಗೆ ಸಹಾಯಕ್ಷವಾಗಲಿ. ಅಲೆಕ್ಸಾಂಡರ್‌ ದ ಗ್ರೇಟ್‌ ಹೇಳಿದ ಮಾತುಗಳೊಡನೆ ನನ್ನ ಮಾತು ಮುಗಿಸುತ್ತೇನೆ. ವಿನಿ, ವಿಡಿ, ವಿಸಿ.’ (ನಾವು ಬಂದೆವು, ನಾವು ನೋಡಿದೆವು, ನಾವು ಗೆದ್ದೆವು)

ನನ್ನ ಭಾಷಣಕ್ಕೆ ಸುದೀರ್ಘ ಕರ ತಾಡನವಾಯಿತು. ಎಲೈನ್‌ ಮ್ಯಾಗಿಯ ವಿಷಯ ಪ್ರಸ್ತಾಪಿಸಿ ‘ಬರಾಬ್ಬರ್‌ ದಿಯಾರೇ ಬುಡ್ಡೀಕೋ’ (ಮುದುಕಿಗೆ ಸಖತ್ತ್‌ ಕೊಟ್ಟೆ) ಎಂದು ಮೆಚ್ಚುಗೆ ವ್ಯಕ್ಷ್ತಪಡಿಸಿದಳು. ಹೆಬ್ಬಾರರಾಗ ‘ಅವಳಿಗದು ಅರ್ಥವಾಯಿತೋ ಇಲ್ಲವೋ’ ಎಂದು ಸಂಶಯ ವ್ಯಕ್ತಪಡಿಸಿದರು. ಆ ಕಾರ್ಯಕ್ರಮದ ಫೋಟೋ ತೆಗೆಯುತ್ತಾ ಸಂಭ್ರಮದಿಂದ ಓಡಾಡಿಕೊಂಡಿದ್ದ ಮ್ಯಾಗಿ ‘ತುಂಬಾ ಚೆನ್ನಾಗಿ ಮಾತಾಡಿದ್ದೀಯಾ’ ಎಂದು ನನ್ನ ಕೈಕುಲುಕಿ ಕೆನ್ನೆಗೆರಡು ಮುತ್ತು ಕೊಟ್ಟು ಬಿಟ್ಟಳು. ನಾನು ಭಾರತಕ್ಕೆ ಬಂದ ಬಳಿಕ ಆ ವಿದಾಯ ಸಮಾರಂಭದ ಹತ್ತು ಫೋಟೋಗಳನ್ನು ಮ್ಯಾಗಿ ಕಳುಹಿಸಿಕೊಟ್ಟಳು. ನಮ್ಮ ಬಗ್ಗೆ ಅವಳು ಯಾವುದೇ ರೀತಿಯ ಬೇಸರ ಇಟ್ಟುಕೊಂಡಿಲ್ಲ ಎನ್ನುವುದು ಆಗ ನನಗೆ ಖಚಿತವಾಯಿತು.

ವಿದಾಯ ಸಮಾರಂಭದ ಕೊನೆಯಲ್ಲಿ ಹೆಬ್ಬಾರರು ರಚಿಸಿದ ‘ತುಲೋಸ್‌ ಮೇರೀ ಜಾನ್‌’ ಎಂಬ ಹಾಡಿಗೆ ನಾವೆಲ್ಲಾ ಧ್ವನಿ ಸೇರಿಸಿ ಲಯಬದ್ಧವಾಗಿ ಕುಣಿದೆವು. ಆ ಹಾಡಿನಲ್ಲಿ ನಾವು ನೋಡಿದ ಎಲ್ಲಾ ಸ್ಥಳಗಳ ವಿವರಗಳಿದ್ದವು. ನಾವು ಕುಣಿಯುವಾಗ ಜುವಾನ್‌ಬುಯೋ, ಜಾಕ್‌ಗಿಬೇ, ಹಂಬರ್ಗ್‌, ಎಲಿಜಾಬೆತ್‌, ಕ್ರಿಸ್ಟೋಪರ್‌ ಮತ್ತು ಅಲೆನ್‌ ನಮ್ಮೊಡನೆ ಸೇರಿಕೊಂಡರು.  ನಾನು ಎಲ್ಲರ ಕೈಗೆ ಭಾರತದ ತ್ರಿವರ್ಣ ಧ್ವಜ ನೀಡಿದೆ. ಭಾರತದ ಧ್ವಜವನ್ನು ಎತ್ತಿಹಿಡಿದು ಮತ್ತೂ ಸ್ವಲ್ಪ ಹೊತ್ತು ಎಲ್ಲರೂ ಕುಣಿದಾಗ ನಮಗೆ ದೇಶ, ಕಾಲಗಳ ಪರಿವೆಯೇ ಇರಲಿಲ್ಲ.

ತುಲೋಸಿಗೆ ವಿದಾಯ
ಅಂದು ಎಪ್ರಿಲ್‌ 30. ರೋಟರಿಯ ಸಮೂಹ ಅಧ್ಯಯನ ವಿನಿಮಯ ಕಾರ್ಯಕ್ಷ್ರಮ ಅಂದಿಗೆ ಕೊನೆಗೊಂಡಿತ್ತು. ಅಂದು ನಾವು ತುಲೋಸಿನಿಂದ ಲಂಡನ್ನಿಗೆ ಹಾರಬೇಕು. ಇನ್ನು ಮುಂದಿನದೆಲ್ಲವೂ ನಮ್ಮ ಸ್ವಂತ ಕಾರ್ಯಕ್ಷ್ರಮ. ನಿನ್ನೆ ಏರ್‌ಫ್ರಾನ್ಸಿನವರು ವಿಮಾನಯಾನ ಖಾಸಗೀಕರಣದ ವಿರುದ್ಧ ಸಂಪು ಹೂಡಿದ್ದರು. ಫ್ರಾನ್ಸಿಗೆ ನಾವು ಬಂದಿಳಿದ ಬಳಿಕ ಅಂತಹ ಆರು ಸಂಘಗಳ ಬಗ್ಗೆ ಕೇಳಿದ್ದೆವು. ಪ್ಯಾರಿಸ್ಸಿನಿಂದ ತುಲೋಸಿಗೆ ಹಾರುವ ಹಿಂದಿನ ದಿನವೂ ಸಂಪು! ಆದರೂ ನಿಗದಿತ ವಿಮಾನದಲ್ಲಿ ನಮ್ಮೆಲ್ಲರ ಯಾನ ಕನ್‌ಫರ್ಮ್‌ ಮಾಡಿಕೊಂಡಿದ್ದೆವು.  ಆದರೆ ಅನಿತಾಳಿಗೆ ಮಾತ್ರ ನಮ್ಮ ವಿಮಾನದಲ್ಲಿ ಸೀಟು ಸಿಕ್ಕಿರಲಿಲ್ಲ. ಅವಳಿಗೆ ಸಾಯಂಕಾಲದ ಫ್ಲೈಟು. ಬ್ರಿಟನ್ನಿನಲ್ಲಿ ಹೆಬ್ಬಾರರ ಸೊಸೆ ಶಾಂತಾರಾವ್‌ ಮನೆಯಲ್ಲಿ ನಾವಿಬ್ಬರು ಅತಿಥಿಗಳಾಗಿ ಉಳಕೊಳ್ಳಲಿದ್ದೆವು. ಎಲೈನ್‌ಳಿಗೆ ಲಂಡನ್‌ನಲ್ಲಿ ಪ್ರಜ್ಞಾ ಎಂಬ ಪೆನ್‌ಫ್ರೆಂಡ್‌ ಒಬ್ಬಳಿದ್ದಳು. ಅವಳ ಮನೆಗೆ ಗುರು ಮತ್ತು ಎಲೈನ್‌ ಅತಿಥಿಗಳಾಗಿ ಹೋಗಲಿದ್ದರು. ಲಂಡನ್‌ ಸ್ಕೂಲ್‌ ಓಫ್‌ ಎಕನಾಮಿಕ್ಸ್‌ನಲ್ಲಿ ‘ಭಾರತದ ಆರ್ಥಿಕ ಉದಾರತೆಯ ಪರಿಣಾಮಗಳು’ ಎಂಬ ಬಗ್ಗೆ ಉಪನ್ಯಾಸ ಮಾಡಲು ಅವಕಾಶಗಿಟ್ಟಿಸಿಕೊಂಡಿದ್ದ ಸಮಾಜಶಾಸ್ತ್ರಜ್ಞೆ ಅನಿತಾ, ಅಲ್ಲಿನ ಪ್ರೊಫೆಸರರೊಬ್ಬರೊಟ್ಟಿಗೆ ತಂಗಲಿದ್ದಳು. ಮೇ 16ರಂದು ಭಾರತಕ್ಕೆ ನಾನು ಮತ್ತು ಹೆಬ್ಬಾರರು ಪ್ಯಾರಿಸ್ಸಿನಿಂದ ಹಾರಲಿರುವುದನ್ನು ಮೊದಲೇ ಖಚಿತಪಡಿಸಿಕೊಂಡಿದ್ದೆವು. ಅನಿತಾ ಮತ್ತು ಎಲೈನ್‌ ಅಂದು ನಮ್ಮನ್ನು ಪ್ಯಾರಿಸ್ಸಿನಲ್ಲಿ ಸೇರಿಕೊಳ್ಳುವವರಿದ್ದರು. ಗುರು ಮಾತ್ರ ತನ್ನ ಉದ್ಯಮದ ನಿಮಿತ್ತ ಮತ್ತೂ ಮೂರು ವಾರ ಜರ್ಮನಿ ಮತ್ತು ಸ್ವಿಜರ್ಲಂಡ್‌ ಸುತ್ತಲಿದ್ದ.

ನಾನು ತುಲೋಸ್‌ ಬಿಡುವ ದಿನ ಬೆಳಿಗ್ಗೆ ಮಿಷೇಲ್‌ ಬೇಗ ಎದ್ದ. ಸಾಮಾನ್ಯವಾಗಿ ಈ ಫ್ರೆಂಚರು ಹನ್ನೆರಡು ಗಂಟೆಗೆ ಮಲಗಿ ಎಂಟು ಗಂಟೆಗೆ ಏಳುವವರು. ನನಗೋ ಐದು ಗಂಟೆಯ ಬಳಿಕ ಸುತಾರಾಂ ನಿದ್ದೆ ಬರುತ್ತಿರಲಿಲ್ಲ. ಅಷ್ಟು ಹೊತ್ತಿಗೆ ಎದ್ದು ಯೋಗಾಸನ ಮಾಡಿ ನಾನು ಹಿಂದಿನ ದಿನದ ಘಟನಾವಳಿಗಳ ಬಗ್ಗೆ ಬರೆದಿಡುತ್ತಿದ್ದೆ. ಸಾಧ್ಯವಾದರೆ ಆತ್ಮೀಯರಿಗೆ ಪತ್ರಗಳನ್ನು ಕೂಡಾ. ಆದರೆ ಒಂದು ಪತ್ರವನ್ನು ನಾನು ಫ್ರಾನ್ಸಿನಿಂದ ಭಾರತಕ್ಕೆ ಕಳುಹಿಸಬೇಕಾದರೆ ನನಗೆ ಮೂವತ್ತೆರಡು ರೂಪಾಯಿ ಖಚಾಗುತ್ತಿತ್ತು.  ಫ್ರಾನ್ಸಿನಲ್ಲೇನೋ ನಾನು ರೋಟರಿ ಅತಿಥಿಯಾದುದರಿಂದ ಊಟತಿಂಡಿಗೆ ತೊಂದರೆಯಿರಲಿಲ್ಲ.  ಆದಾದ ಬಳಿಕಿನ ಸಪ್ತ ರಾಷ್ಟ್ರಗಳ ಪ್ರವಾಸ ಕಾಲದಲ್ಲಿ ನಾನು ಯಾರ ಅತಿಥಿಯೂ ಅಲ್ಲದ ಕಾರಣ, ನನ್ನಲ್ಲಿರುವ ಪೌಂಡುಗಳ ಬಗ್ಗೆ ನಾನು ತುಂಬಾ ಜಿಪುಣತನದಿಂದ ವರ್ತಿಸಲೇಬೇಕಿತ್ತು. ಹಾಗಾಗಿ ಪತ್ರಗಳನ್ನು ಬರೆದದ್ದೇ ಕಡಿಮೆ.
ಅಂದು ಬೆಳಿಗ್ಗೆ ನಾನು ಬೇಗ ಎದ್ದು ಯೋಗಾಸನ ಮಾಡುತ್ತಿದ್ದಾಗ ಬಾಗಿಲು ಬಡಿದ ಸದ್ದಾಯಿತು. ತೆರೆದು ನೋಡಿದರೆ ಮಿಷೇಲ್‌! ಯಾವತ್ತೂ ಎಂಟಕ್ಕೆ ಏಳುವವ ಇಂದು ಆರಕ್ಕೆ ಎದ್ದು ಬಿಟ್ಟಿದ್ದಾನೆ. ಅವನು ಪೇಸ್ಟು ಮತ್ತು ಬ್ರಷ್‌ ಬಳಸುವುದನ್ನು ನಾನು ಕಂಡಿರಲಿಲ್ಲ.  ಯಾವುದೋ ಲೋಶನ್‌ ಹಾಕಿ ಬಾಯಿ ಮುಕ್ಕುಳಿಸಿದರೆ ಮುಖ ಪ್ರಕ್ಷಾಮಳನ ಕಾರ್ಯಕ್ರಮ ಮುಗಿದೇ ಹೋಯಿತು. ಎಷ್ಟು ಸುಲಭ! ಹಾಗೆ ಮುಖ ತೊಳೆದು ಬಂದ ಮಿಷೇಲ್‌ ‘ಬೋನ್ಸೂರ್‌, ಮೊದಲ ಬೆಳಿಗ್ಗೆ ನಿನ್ನಿಂದ ಯೋಗಾಸನ ಪಾಠ ಹೇಳಿಸಿಕೊಂಡೆ. ನಿನ್ನೆ ಬೇಗ ಏಳಲು ಸಾಧ್ಯವಾಗಲಿಲ್ಲ. ಇಂದು ನೀನು ಹೋಗಿ ಬಿಡ್ತೀಯಾ. ಇನ್ನೊಮ್ಮೆ ಯೋಗಾಸನ ಪಾಠ ಹೇಳಿಸಿಕೊಳ್ಳೋಣವೆಂದು ಬಂದೆ’ ಅಂದ. ನನಗೆ ಇಮ್ಮಡಿ ಉತ್ಸಾಹ. ಸುಮಾರು ಒಂದು ಗಂಟೆಯಷ್ಟು ಹೊತ್ತು ಯೋಗಾಸನ, ಧ್ಯಾನ ಮತ್ತು ಪ್ರಾಣಾಯಾಮಗಳಲ್ಲಿ ಹೊತ್ತು ಕಳೆದೆವು.  ನನ್ನಲ್ಲಿ ಯೋಗಾಸನಗಳ ಚಿತ್ರಸಹಿತ ವಿವರಣೆಯ ಇಂಗ್ಲೀಷ್‌ ಪುಸ್ತಕವೊಂದಿತ್ತು.  ಅದನ್ನು ಮಿಷೇಲನಿಗೆ ನೀಡಿ ‘ಈಗ ಇದನ್ನು ನೀನು ಬಳಸು. ನಿನ್ನ ಲೋರಾ ಓದು ಕಲಿತಾಗ ಇದನ್ನು ಅವನಿಗೆ ನೀಡು’ ಎಂದೆ.

ಪುಸ್ತಕ ತಗೊಂಡ ಮಿಷೇಲ್‌ ‘ಇರು ಬಂದೆ’ ಎಂದು ಮಹಡಿಗೆ ಓಡಿದ. ಸ್ವಲ್ಪ ಹೊತ್ತಿನಲ್ಲಿ ಪುಸ್ತಕವೊಂದನ್ನು ಹಿಡಿದುಕೊಂಡು ಬಂದ. ಕೆಂಪು ರಟ್ಟಿನ ಫ್ರೆಂಚ್‌ ಭಾಷೆಯ ಆ ಪುಸ್ತಕವನ್ನು ನನ್ನ ಕೈಗಿತ್ತ. ನಾನದರ ಮುಖಪುಟ ನೋಡಿದೆ. ಅದರಲ್ಲಿ ಗುಹೆಯೊಂದರೊಳಗೆ ತಲೆಗೆ ಸಮುದ್ರ ಮುಳುಗುಗಾರರಂತೆ ಹೆಡ್‌ಲೈಟ್‌ ಕಟ್ಟಿ ತೆವಳುವ ಮೂವರ ಚಿತ್ರ. ಆ ಮೂವರನ್ನು ಮತ್ತೊಮ್ಮೆ ನೋಡಿದೆ.

‘ಅರೇ, ಈ ಮೂರನೆಯವನು ನೀನು! ಇದೆಂತಹಾ ವಿಚಿತ್ರ ಹವ್ಯಾಸ ಮಾರಾಯ ನಿನ್ನದು?’ ಎಂದು ಮಿಷೇಲನನ್ನು ಪ್ರಶ್ನಿಸಿದೆ. ‘ಜಲಮೂಲವನ್ನು ಶೋಧಿಸುವುದು ಮತ್ತು ಅಂತರ್ಜಲ ಅನ್ವೇಷಣೆ ನನ್ನ ಹವ್ಯಾಸಗಳಲ್ಲಿ ಒಂದು. ನಮ್ಮ ಗುಂಪಿನಲ್ಲಿ ಎಂಟು ಜನರಿದ್ದಾರೆ. ಚಿತ್ರದಲ್ಲಿ ಮೊದಲಿಗೆ ಕಾಣುವವನೇ ತಂಡದ ನಾಯಕ್ಷ. ಈ ಪುಸ್ತಕವನ್ನು ಬರೆದವನೂ ಕೂಡಾ ಅವನೇ. ನೀನು ಮೋಂಟೇನ್‌ ನೈರ್‌ (ಕರಿಪರ್ವತ) ನೋಡಿದ್ದೀಯಲ್ಲಾ? ಆ ಪ್ರದೇಶದಲ್ಲಿರುವ ಗುಹೆಯಿದು. ಸ್ಪಷ್ಟವಾಗಿ ಗಮನಿಸಿದರೆ ನಿನಗೆ ಅಲ್ಲಿ ನೀರ ಬುಗ್ಗೆ ಕಾಣಿಸುತ್ತದೆ. ಈ ಪುಸ್ತಕದಲ್ಲಿ ನನ್ನದೂ ಒಂದು ಲೇಖನವಿದೆ. ಇದು ಇಂಗ್ಲೀಷಿನಲ್ಲಿರುತ್ತಿದ್ದರೆ ನಾನಿದನ್ನು ನಿನಗೆ ಕೊಟ್ಟು ಬಿಡುತ್ತಿದ್ದೆ. ಈಗ ಇದು ನಿನಗೆ ಉಪಯೋಗಕ್ಕೆ ಬರುವುದಿಲ್ಲ’ ಅಂದ.

ಮಿಷೇಲನ ಈ ಹವ್ಯಾಸದ ಬಗ್ಗೆ ತಿಳಿದು ನಾನು ದಂಗಾಗಿ ಹೋದೆ. ಈತ ಬಹು ಕೋಟ್ಯಧಿಪತಿ. ವಿಮಾನ ಮತ್ತು ರಾಕೆಟ್‌ ಬಿಡಿಭಾಗಗಳನ್ನು ಉತ್ಪಾದಿಸುವ ಎರಡು ಘಟಕಗಳ ಯಜಮಾನ. ಈತ ರಾಕ್‌ ಎನ್‌ ರೋಲ್‌ ಕಲಾಶಾಲೆಯ ಸ್ಥಾಪಕ, ಯಜಮಾನ ಮತ್ತು ಪ್ರಧಾನ ಗುರು. ಈತ ಯಕ್ಷ್ಷಗಾನ, ಯೋಗಾಸನ ಕಲಿಯುವ ಹಂಬಲವುಳ್ಳ ಜಿಜ್ಞಾಸು.  ಈ ಮಿಷೇಲ್‌ ಜಲಶೋಧಕ ಕೂಡಾ. ಒಬ್ಬ ವ್ಯಕ್ಷ್ತಿಯ ಪ್ರತಿಭೆಗೆ ಅದೆಷ್ಟು ಆಯಾಮಗಳು!  ಇಷ್ಟೆಲ್ಲಾ ಇದ್ದರೂ ಆತ ತನ್ನ ಬಗ್ಗೆ ನನ್ನಲ್ಲಿ ಒಮ್ಮೆಯೂ ಕೊಚ್ಚಿಕೊಂಡಿರಲಿಲ್ಲ. ಇವ ತುಂಬಿದ ಕೊಡ! ನನಗೆ ಅವನ ಬಗ್ಗೆ ಅಪಾರವಾದ ಗೌರವ ಮೂಡಿ ಅವನ ಕೈಗಳನ್ನು ಹಿಡಿದುಕೊಂಡು ‘ಮಿಷೇಲ್‌, ಎಂತಹ ಅದ್ಭುತ ವ್ಯಕ್ಷ್ತಿ ಮಹಾರಾಯಾ ನೀನು’ ಇದನ್ನೆಲ್ಲಾ ಯಾಕೆ ನೀನು ಮೊದಲ ದಿನವೇ ನನ್ನಲ್ಲಿ ಹೇಳಲಿಲ್ಲ?’ ಎಂದೆ. ಅವನು ತನ್ನ ಕೈಗಳನ್ನು ಬಿಡಿಸಿಕೊಂಡು ‘ಇದೇನು ಮಹಾ, ನೀನೇನು ಕಡಿಮೆಯಾ? ಅದೆಷ್ಟೊಂದು ಪುಸ್ತಕ ಬರ್ದಿದ್ದೀಯಾ ನೀನು? ನನ್ನಿಂದ ಒಂದೂ ಈವರೆಗೆ ಬರೆಯಲಾಗಿಲ್ಲ’ ಎಂದ. ನಾನದಕ್ಕೆ ‘ನಿನ್ನ ಬಗ್ಗೆಯೇ ಪುಸ್ತಕ ರಚಿಸುವಷ್ಟು ಸಾಧನೆ ಮಾಡಿದ್ದೀಯಾ. ಯೂ ಆರ್‌ ರಿಯಲಿ ಗ್ರೇಟ್’ ಅಂದೆ. ಅವನು ಭಾವನಾರಹಿತ ದನಿಯಲ್ಲಿ ‘ನನಗೆ ತಡವಾಗುತ್ತಿದೆ. ನಾನು ಸರಿಯಾಗಿ ಹನ್ನೆರಡು ಗಂಟೆಗೆ ಬರುತ್ತೇನೆ. ನಿನ್ನ ವಿಮಾನವಿರುವುದು ಒಂದೂವರೆ ಗಂಟೆಗೆ. ಇವತ್ತು ವಿಮಾನ ಸಿಬ್ಬಂದಿ ಸ್ಟ್ರೈಕ್‌ ಮಾಡುತ್ತಿಲ್ಲ. ನಿನ್ನ ಅದೃಷ್ಟ. ನಿನಗೆ ಬೆಳಗ್ಗಿನ ತಿಂಡಿ ಅನಾಲಿನಾ ಕೊಡುತ್ತಾಳೆ ಎಂದು ಹೊರಟು ಹೋದ.

ಅನಾಲಿನಾ ಬೆಳಗ್ಗಿನ ತಿಂಡಿಕೊಟ್ಟು ತರಗತಿಗೆ ಹೊರಟು ಹೋದ ಮೇಲೆ ನಾನು ನನ್ನ ಲಗ್ಗೇಜು ಸರಿಪಡಿಸತೊಡಗಿದೆ. ಹನ್ನೊಂದು ಗಂಟೆಗೆ ಮಿಷೇಲನ ಹೆಂಡತಿ ಮಿಷಿಲ್‌ ಬಂದು ಕೋಣೆಯ ಬಾಗಿಲು ಬಡಿದು ‘ಪ್ರಭ’ ಎಂದು ಕರೆದು ಒಳಬಂದಳು. ಅವಳು ‘ಪ್ರಭ’ ಎಂದು ಕರೆಯುವುದೇ ಒಂದು ಮೋಜು. ಯಾವಾಗಲೂ ಪ್ಯಾಂಟು ಶರ್ಟುಗಳಲ್ಲಿರುವ, ಬಾಯ್‌ಕಟ್ಟ್‌ ಮಾಡಿಸಿಕೊಂಡಿರುವ ಅವಳು ತುಂಬಾ ಚುರುಕಿನ ಹೆಣ್ಣು. ಆದರೆ ಅವಳ ಮುಖ ನೋಡುವಾಗ ನನಗೆ ಶೇಕ್ಸ್‌ಪಿಯರನ ನಾಟಕವೊಂದರ ಪಾತ್ರ ಲೇಡಿ ಮ್ಯಾಕ್‌ಬೆತ್ತಳ ನೆನಪಾಗುತ್ತಿತ್ತು.  ಗಡಿಬಿಡಿಯಲ್ಲಿದ್ದ ಅವಳು ‘ಪ್ರಭ, ನಾನು ಈಗ ಆಫೀಸಿಗೆ ಹೋಗಬೇಕು. ಈಗ ನನ್ನ ವರ್ಕ್‌ಟೈಮು’ ಎಂದಳು. ‘ಲೋರಾ ಎಲ್ಲಿ?’ ಎಂದು ನಾನು ಕೇಳಿದ್ದಕ್ಕೆ ‘ಅವನನ್ನು ಕೆಲಸದವಳು ನೋಡಿಕೊಳ್ಳುತ್ತಿದ್ದಾಳೆ. ನಾನಿನ್ನು ಮನೆಗೆ ಬರುವುದು ಸಂಜೆ ಐದಕ್ಕೆ. ತಗೋ ನಿನ್ನ ಮಗಳಿಗೆ ಕೆಲವು ಫರ್‌ಫ್ಯೂಮ್ಸ್‌ (ಸುಗಂಧದ್ರವ್ಯ) ಕೊಡುತ್ತಿದ್ದೇನೆ. ನಿನಗೆ, ನಿನ್ನ ಕುಟುಂಬಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದಳು. ನಾನು ಅಭ್ಯಾಸ ಬಲದಿಂದ ಕೈ ಮುಗಿದೆ. ಆಕೆಯೂ ಕೈ ಮುಗಿದು ‘ನಮಸ್ತೇ’ ಎಂದದ್ದಲ್ಲದೆ ಹತ್ತಿರ ಬಂದು ಕೆನ್ನೆಗೆರಡು ಫ್ರೆಂಚ್‌ ಕಿಸ್ಸು ಕೊಟ್ಟು’ ಭಾರತಕ್ಕೆ ಖಂಡಿತಾ ಬರಲಿದ್ದೇವೆ. ಲೋರಾ ಸ್ವಲ್ಪ ದೊಡ್ಡದಾಗಲಿ.  ಬೈ’ ಎಂದು ಹೇಳಿ ಹೊರಟು ಹೋದಳು.

ಮನೆಯಲ್ಲೀಗ ನಾನು, ಲೋರಾ, ಕೆಲಸದಾಕೆ ಮತ್ತು ಎರಡು ನಾಯಿಗಳು ಮಾತ್ರ. ಆ ಕೆಲಸದಾಕೆಯನ್ನು ನೋಡಿದರೆ ಛೆ! ಸಿನಿಮಾ ತಾರೆಯರನ್ನು ಅವಳ ಮುಂದೆ ನಿವಾಳಿಸಿ ಎಸೆಯಬೇಕು. ಅಷ್ಟು ಚೆಲುವೆ! ಅವಳಿಗೆ ಫ್ರೆಂಚ್‌ ಮತ್ತು ಸ್ಪಾನಿಷ್‌ ಬಿಟ್ಟರೆ ಬೇರೇನೂ ಬಾರದು. ಹಿಂದಿನ ದಿನ ಆಕೆ ನನ್ನೆಲ್ಲಾ ಬಟ್ಟೆಗಳನ್ನು ಒಗೆದು ಕೊಟ್ಟಿದ್ದಳು. ಆಗ ನನ್ನ ಬಣ್ಣಬಣ್ಣದ ರಾಜಸ್ಥಾನಿ ರುಮಾಲನ್ನು ಬಿಳಿ ಬನಿಯನ್‌, ಕುರ್ತಾಪೈಜಾಮಗಳ ಒಟ್ಟಿಗೇ ಯಂತ್ರಕ್ಕೆ ಹಾಕಿ ಅವೆಲ್ಲವಕ್ಕೂ ಹಳದಿ ಬಣ್ಣ ಬರಿಸಿದ್ದಳು. ಅದು ಗೊತ್ತಾಗಿ ಅವಳು ಅನಾಲಿನಾಳ ಮೂಲಕ ವಿಷಾದ ವ್ಯಕ್ತಪಡಿಸಿದ್ದಳು. ಅಲ್ಲದೆ ಅನಾಲಿನಾ ನನ್ನ ಯಕ್ಷ್ಷಗಾನ ಮತ್ತು ಯೋಗಾಸನದ ಚಿತ್ರಗಳನ್ನು ನೋಡುತ್ತಿದ್ದಾಗ ಆಕೆಯೂ ನೋಡಿ ಆಶ್ಚರ್ಯಪಟ್ಟಿದ್ದಳು. ಆದರೆ ನನ್ನ ಮತ್ತು ಆಕೆಯ ನಡುವೆ ‘ಬೋನ್ಸೂರ್‌, ಕೊಮತಲೆವು,’ ಬಿಟ್ಟರೆ ಅದಕ್ಕಿಂತ ಹೆಚ್ಚಿನ ಸಂವಹನ ಸಾಧ್ಯವಾಗಿರಲಿಲ್ಲ. ಈಗ ನಾನು ಹೊರಟಿರುವುದು ಅವಳಿಗೆ ಗೊತ್ತಾಗಿ ಲೋರಾನೊಡನೆ ಕೋಣೆಗೆ ಬಂದಳು. ನಾನು ಅವಳಿಂದಾಗಿ ಹಳದಿಯಾದ ನನ್ನ ಬನಿಯನ್ನು ಆಕೆಗೆ ತೋರಿಸಿದಾಗ ಅವಳಿಗೆ ನಾಚಿಕೆಯಾಯಿತು. ಏನೋ ಫ್ರೆಂಚಲ್ಲಿ ಹೇಳಿದಳು. ನನಗದು ಏನೆಂದು ಅರ್ಥವಾಗಲಿಲ್ಲ.

ಗಂಟೆ ಹನ್ನೆರಡು ಹೊಡೆದಾಗ ಮಿಷೇಲ್‌ ಹಾಜರಾದ. ಅವನು ‘ನಾವು ಇಲ್ಲಿಂದ ಹನ್ನೆರಡೂವರೆಗೆ ಹೊರಟರೆ ಸಾಕು. ಬಾ. ಕೆಲವು ಫೋಟೋ ಹೊಡಿಯೋಣ’ ಎಂದು ನನ್ನನ್ನು ತನ್ನ ಉದ್ಯಾನಕ್ಕೆ ಕರೆದುಕೊಂಡು ಹೋದ. ಕೆಲಸದಾಕೆ ಲೋರಾನನ್ನು ಎತ್ತಿಕೊಂಡು ಬಂದಳು. ಮಿಷೇಲ್‌ ಅವಳ ಕೈಗೆ ಕ್ಯಾಮರಾ ಕೊಟ್ಟು ಫೋಟೋ ಹೊಡೆಯಲು ಹೇಳಿದ.  ನಾನು ಲೋರಾನನ್ನು ಎತ್ತಿಕೊಂಡೆ. ಅವಳು ನಾಲ್ಕೈದು ಫೋಟೋ ಹೊಡೆದಳು. ಅದಾಗಿ ಅವಳು ಮಾಡಿಟ್ಟಿದ್ದ ಅಡುಗೆಯನ್ನು ನಮಗೆ ಆಕೆಯೇ ಬಡಿಸಿದಳು. ‘ನಿನ್ನ ಅಡುಗೆ ಚೆನ್ನಾಗಿದೆ’ ಎಂದು ನಾನು ಹೇಳಿದಾಗ ಅವಳಿಗೆ ತುಂಬಾ ಸಂತೋಷವಾಯಿತು. ಸರಿಯಾಗಿ ಹನ್ನೆರಡೂವರೆಗೆ ನಾನು ಹೊರಟು ನಿಂತೆ. ಲೋರಾನನ್ನು ಎತ್ತಿಕೊಂಡು ಅವನ ತಲೆ ನೇವರಿಸಿ ‘ಅಪ್ಪನನ್ನು ಮೀರಿಸುವ ಡ್ಯಾನ್ಸರ್‌ ಮತ್ತು ಉದ್ಯಮಿಯಾಗು’ ಎಂದೆ.  ಕೆಲಸದಾಕೆಯ ಕೈ ಕುಲುಕಿದಾಗ ಆಕೆ ‘ಅವ್ಪ’ (ಪುನಃ ಭೇಟಿಯಾಗೋಣ) ಎಂದಳು. ಆ ದನಿಯಲ್ಲಿ ಮಾರ್ದವತೆಯಿತ್ತು. ಬಹು ಕೋಟ್ಯಧಿಪತಿ ಮಿಷೇಲ್‌ ನನ್ನ ಲಗ್ಗೇಜನ್ನು ತಾನೇ ಎತ್ತಿಕೊಂಡು ಕಾರಲ್ಲಿರಿಸಿ ವಿಮಾನ ನಿಲ್ದಾಣದತ್ತ ಕಾರನ್ನು ಚಲಾಯಿಸಿದ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕ್ಯಾನ್ಸರ್ ಜೀವಕೋಶದ ಸೃಷ್ಟಿ
Next post ಮರುಭೂಮಿಗಳು

ಸಣ್ಣ ಕತೆ

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಗೃಹವ್ಯವಸ್ಥೆ

    ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಎರಡು ಮದುವೆಗಳು

    ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…

  • ಪತ್ರ ಪ್ರೇಮ

    ಅಂಚೆ ಇಲಾಖೆಯ ಅದೊಂದು ಸಮಾರಂಭ. ಇಲಾಖೆಯ ಸಿಬ್ಬಂದಿ ವರ್ಗದ ಕಾರ್ಯದಕ್ಷತೆ ಕುರಿತು ಕೇಂದ್ರ ಕಾರ್ಮಿಕ ಸಚಿವ ಆಸ್ಕರ್‍ ಫರ್ನಾಂಡಿಸ್ ಅಮೆರಿಕಾದಲ್ಲಿ ನಡೆದ ಒಂದು ಸತ್ಯ ಘಟನೆ ಎಂದು… Read more…

cheap jordans|wholesale air max|wholesale jordans|wholesale jewelry|wholesale jerseys