ಎಂಥಾ ಮೋಜಿನ ಕುದರಿ
ಹತ್ತಿದ ಮ್ಯಾಲ ತಿರುಗುವದು ಹನ್ನೊಂದು ಫೇರಿ ||ಪ||

ಸಾರಿ ನಾನು ಹೇಳತೀನಿ ಸಟಿಯಲ್ಲ ಈ ಮಾತು
ಸತ್ಯಸದ್ಗುರುವಿನ ಪಾದ ಗಟ್ಟ್ಯಾಗಿ ಮುಟ್ಟಿಸಿತು ||ಅ.ಪ||

ಹಚ್ಚನ್ನ ಕಡ್ಡವ ಹಾಕಲಿಬೇಕೋ
ನಿಚ್ಚಳ ನೀರ ಕುಡಿಸಲಿಬೇಕೋ
ಸಂಸ್ಕಾರ ಹಿಡಿದು ಹೊಡಿಯಲಿಬೇಕೋ
ಅಚ್ಯುತ ಮೆಚ್ಚುವಂತೆ ಮೈ ತಿಕ್ಕಲಿಬೇಕೋ ||೧||

ತಪ್ಪುವದಿಲ್ಲಪ್ಪಾ ಎರಡು ಹೊತ್ತು ದಾಣಿ
ತಿಂದ ಮೇಲ ತಿರುಗತೈತಿ ಮೇಗಲ ಓಣಿ
ಖಾದರಲಿಂಗನು ಪಾಡಿದವಾಣಿ
ಸೋಸಿನೋಡಿಕೋ ಹಾಕಿದ ಗೋಣಿ ||೨||
ಪಾಂಡವರ ಮನಿಯೊಳಗ ಪಾಗಾದಾಗಿತ್ತು
ಪಾಗಾದ ಗೂಟವ ಕಿತ್ತು ಓಡಿ
ಹೋಗುವಾಗ ಶಿಶುನಾಳಿಗೆ ಬಂತು
ಗೋವಿಂದ ನೋಡಿದ ತಾನೇ ತಾನಾತು ||೩||

*****