ನೀರು ಪಾಲಾದ ‘ನೀರಾ’

ನೀರು ಪಾಲಾದ ‘ನೀರಾ’

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

-೧-
‘ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಿ, ನಿಮಗೆ ಬೇಕಾದುದನ್ನು ನೀವೇ ಉತ್ಪಾದಿಸಿಕೊಳ್ಳಿ.  ಇದಕ್ಕೂ ಮುನ್ನ ಸರಳವಾಗಿರುವುದನ್ನು ಕಲಿತುಕೊಳ್ಳಿ.  ಇದರಿಂದಾಗಿ ಸುಮಾಸುಮ್ಮನೆ ಇತರರನ್ನು ಅವಲಂಬಿಸುವುದು ತಪ್ಪುತ್ತದೆ’.

ಫಕೀರನಂತೆ ಕಾಣುತ್ತಿದ್ದ ಗಾಂಧಿ ಎನ್ನುವ ಅರೆಬೆತ್ತಲೆ ಮನುಷ್ಯ ಈ ಮಾತುಗಳನ್ನು ಹೇಳಿದಾಗ ದೇಶ ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ.  ಈ ದೇಶ- ಜನತೆಯ ಉದ್ಧಾರಕ್ಕೆ ಈ ಫಕೀರ ಹೇಳುವುದು ಸರಿಹೊಂದುವುದಿಲ್ಲ.  ಕೈಗಾರಿಕೆಗಳೇ ದೇಶದ ಪ್ರಗತಿಯ ಜೀವನಾಡಿಗಳು ಎನ್ನುವ ಸಿದ್ಧಾಂತವನ್ನು ಅಧಿಕಾರದ ಸೂತ್ರಗಳ ಹಿಡಿದಿದ್ದ ನೆಹರೂ ಪ್ರತಿಪಾದಿಸಿದರು.  ಆಕರ್ಷಕ ನಿಲುವಿನ ನೆಹರೂ ಮಾತುಗಳನ್ನು ಜನ ನಂಬಿದವರು ದೇಶದಲ್ಲಿ ಬೃಹತ್ ಉದ್ದಿಮೆ-ಕೈಗಾರಿಕೆಗಳು ಶುರುವಾದವು.  ಪರಿಣಾಮವಾಗಿ ಗುಡಿ ಕೈಗಾರಿಕೆಗಳು ನೆಲ ಕಚ್ಚಿದವು ಅಥವಾ ನಗಣ್ಯವಾದವು.

ಕೈಗಾರೀಕರಣದ ಭ್ರಮೆಗಳನ್ನು ನೆಹರೂ ಬಿತ್ತಿ ಅರ್ಧ ಶತಮಾನದ ಮೇಲಾಯಿತು.  ದೇಶ ಮಾತ್ರ ಇದ್ದ ಸ್ಥಿತಿಯಿಂದ ಎದ್ದು ನಿಂತಿಲ್ಲ.  ಅಂದರೆ, ಅರ್ಧ ಶತಮಾನದಲ್ಲಿ ಯಾವುದೇ ಸಾಧನೆಗಳಾಗಿಲ್ಲ ಎಂದರ್ಥವಲ್ಲ.  ಆದರೆ, ಕಣ್ಣ ಮುಂದಿರುವ ಸಾಧನೆಗಳನ್ನು ಮಾಡಲು ನೆಹರೂ ಅವರೇ ಬೇಕಾಗಿರಲಿಲ್ಲ.  ಒಮ್ಮೆ ದೇಶದ ಅಗಾಧ ಪ್ರಾಕೃತಿಕ ಹಾಗೂ ಮಾನವಿಕ ಸಂಪನ್ಮೂಲವನ್ನು ನೆನಪಿಸಿಕೊಳ್ಳಿ!

ತಮಾಶೆಯ ಸಂಗತಿಯೆಂದರೆ – ಈಗಲೂ ಕೂಡಾ ದೇಶದ ಚುಕ್ಕಾಣಿ ಹಿಡಿದಿರುವ ಪ್ರಮುಖರು ನೆಹರೂ ಕನಸುಗಳನ್ನೇ ಬಂಡವಾಳವಾಗಿಸಿಕೊಂಡಿದ್ದಾರೆ.  ಅವುಗಳನ್ನು ಬಿತ್ತುತ್ತಿದ್ದಾರೆ.  ದೇಶದಲ್ಲಿ ಹೊಸ ಉದ್ದಿಮೆಗಳು ತಲೆ ಎತ್ತುತ್ತಲೇ ಇವೆ.  ಅದೇ ಅವಧಿಯಲ್ಲಿ ಭಾರೀ ಉದ್ಯಮಗಳು ನೆಲ ಕಚ್ಚುತ್ತಿವೆ.  ಪ್ರತಿಯೊಂದು ಕಾಮಗಾರಿಗೂ ವಿದೇಶದತ್ತಲೇ ಮುಖ ಮಾಡುವ ಅಭ್ಯಾಸದಲ್ಲೂ ಬದಲಾವಣೆಯಾಗಿಲ್ಲ.  ‘ಗಾಂಧಿ ಹೇಳಿದ್ದು ಈಗಲೂ ಪ್ರಸ್ತುತ, ಗಾಂಧಿಯೇ ನಮಗೆ ಬೆಳಕು’ ಎನ್ನುವ ಸಣ್ಣ ದನಿಗಳಿಗೆ ಯಾವ ಬೆಂಬಲವೂ ಇಲ್ಲ.

ಕಪ್ಪೆಗಳನ್ನು ತಕ್ಕಡಿಯಲ್ಲಿ ಹಿಡಿದಿಟ್ಟಂತೆ ಹದಿನಾಲ್ಕು ಪಕ್ಷಗಳನ್ನು ಒಟ್ಟುಮಾಡಿ ದೇಶದ ಚುಕ್ಕಾಣಿ ಹಿಡಿದಿದ್ದ ಭಾರತೀಯ ಜನತಾಪಕ್ಷದ ನೀತಿಗಳ ರೂಪಾಂತ ಅತ್ಯಂತ ಕುತೂಹಲಕರ.  ಗದ್ದುಗೆ ಏರುವ ಮುನ್ನ ‘ಸ್ವದೇಶಿ’ ಜಪ ಪಾರಾಯಣ ಮಾಡುತ್ತಿದ್ದ ಭಾಜಪ, ಅನಂತರದ ದಿನಗಳಲ್ಲಿ ಜಾಗತೀಕರಣಕ್ಕೆ ಜೋತುಬಿದ್ದದ್ದು ಸಿದ್ಧಾಂತ ರಹಿತ ಪ್ರಚಲಿತ ರಾಜಕಾರಣಕ್ಕೊಂದು ಉತ್ತಮ ಉದಾಹರಣೆ.

ನಮ್ಮ ರಾಜಕಾರಣಿಗಳ ಬೋಳೇತನ ಯಾವ ಮಟ್ಟಕ್ಕೆ ಮುಟ್ಟಿದೆಯೆಂದರೆ – ವಿದೇಶಿ ಬಂಡವಾಳ ಹಾಗೂ ತಂತ್ರಜ್ಞಾನದ ಹೊರತು ಅವರ ಪಾಲಿಗೆ ಹಿತ್ತಲಿನ ಹುಲ್ಲು ಅಲ್ಲಾಡುವುದೂ ಸಾಧ್ಯವಿಲ್ಲ.  ಪರಸ್ಪರ ಅವಲಂಬನೆಯೇ ಈ ಶತಮಾನದ ನೀತಿ ಅನ್ನುವುದನ್ನು ಒಪ್ಪೋಣ.  ಆದರೆ, ನಮ್ಮಿಂದಲೇ ಏನಾದರೂ ಸಾಧ್ಯವಾಗಬಹುದಾದ ಪರಿಸ್ಥಿತಿಗಳಲ್ಲಿ ನಾವು ಯಾಕೆ ಹಿಂಜರಿಯ ಬೇಕು?  ಯಶಸ್ಸುಗಳಿಸುತ್ತೇವೋ ಇಲ್ಲವೋ, ಯಾಕೆ ಪ್ರಯತ್ನ ಮಾಡಬಾರದು.  ಒಂದು ಉದಾಹರಣೆ ಗಮನಿಸಿ – ವೀರಪ್ಪನ್ ಸಿಕ್ಕುವುದಿಲ್ಲ ಎನ್ನುವುದು ಗೊತ್ತಿದ್ದರೂ, ಕಾರ್ಯಾಚರಣೆಗೆ ಕೋಟಿಗಟ್ಟಲೆ ರೂಪಾಯಿ ಖರ್ಚು ಮಾಡುವ ಸರ್ಕಾರ ಗುಡಿ ಕೈಗಾಕೆಯೊಂದರ ಅಭ್ಯುದಯಕ್ಕೆ ಸಂಪನ್ಮೂಲಗಳ ಕೊರತೆ ಎನ್ನುವ ನೆಪ ತೆಗೆಯುತ್ತದೆ.

– ೧ –

ಇಡೀ ರಾಜ್ಯದ ಗಮನ ಸೆಳೆದ ನೀರಾ ಚಳವಳಿ ನಮ್ಮ ರಾಜಕಾರಣಿಗಳ ಬೋಳೇತನಕ್ಕೆ ತಾಜಾ ನಿದರ್ಶನ.  ತೆಂಗಿನ ಮರಗಳಿಂದ ನೀರಾ ಇಳಿಸದಿದ್ದರೆ ಬೀದಿ ಪಾಲಾಗುತ್ತೇವೆ ಎನ್ನುವ ರೈತರ ವಾದಕ್ಕೆ ಸರ್ಕಾರದ್ದು ಹಟಮಾರಿ ಪ್ರತಿಕ್ರಿಯೆ.  ಚನ್ನಪಟ್ಟಣದಲ್ಲಿ ನಡೆದ ರೈತರು ಹಾಗೂ ಪೊಲೀಸರ ನಡುವಿನ ಘರ್ಷಣೆಯಲ್ಲಿ ಇಬ್ಬರು ರೈತರು ಸಾವಿಗೀಡಾದರು.  ನಂತರದಲ್ಲಿ ಪ್ರತಿಭಟನೆ ತೀವ್ರಗೊಂಡಾಗಷ್ಟೆ ಸರ್ಕಾರ ನೀರಾ ಇಳಿಸಲು ವಿಧಿಯಿಲ್ಲದೆ ಒಪ್ಪಿಗೆ ನೀಡಿತು;  ನೀರಾವನ್ನು ನೀರಾ ರೂಪದಲ್ಲಿ ಮಾತ್ರ ಮಾರಾಟಮಾಡಬೇಕೆಂಬ ಷರತ್ತಿನೊಡನೆ.

ನೀರಾ ಚಳವಳಿಯ ವಿದ್ಯಮಾನಗಳನ್ನು ರೈತರ ಸಮಯಸಾಧಕತನ ಹಾಗೂ ಸರ್ಕಾರದ ಹಟಮಾರಿತನ ಎಂದು ಸುಲಭವಾಗಿ ತಳ್ಳಿ ಹಾಕುವಂತಿಲ್ಲ.  ನೀರಾ ವಿದ್ಯಮಾನಗಳಿಗೆ ಬೇರೆ ರೀತಿಯ ಆಯಾಮಗಳೂ ಇವೆ.  ಇವುಗಳನ್ನು ಪರಿಶೀಲಿಸೋಣ.

ರಾಜ್ಯದಲ್ಲಿ ಸುಮಾರು ೫ ಲಕ್ಷ ಹೆಕ್ಟೇರ್‍ ಪ್ರದೇಶದಲ್ಲಿ ತೆಂಗು ಕೃಷಿ ನಡೆಯುತ್ತಿದ್ದು, ೭ ಕೋಟಿಗೂ ಹೆಚ್ಚಿನ ತೆಂಗಿನ ಮರಗಳಿವೆ.  ತೆಂಗಿನ ಮರಗಳನ್ನು ನಂಬಿಕೊಂಡೇ ಬದುಕು ಸಾಗಿಸುವ ರೈತರ ಸಂಖ್ಯೆಯೂ ದೊಡ್ಡದು.  ಕಳೆದ ನಾಲ್ಕೈದು ವರ್ಷಗಳಿಂದ ಕಾಡುತ್ತಿರುವ ನುಸಿ ರೋಗ ತೆಂಗು ಮರಗಳಿಗೆ ಬಂಜೆತನ ತಂದಿದೆ.  ನುಸಿ ಹೋಗದ ಹೊರತು ತೆಂಗು ರೈತನಿಗೆ ದಕ್ಕುವಂತಿಲ್ಲ.  ನುಸಿ ಹೋಗುವುದು ಹೇಗೆ?  ಯಾವಾಗ?  ಎನ್ನುವುದು ಯಾರಿಗೂ ಗೊತ್ತಿಲ್ಲ.

ನುಸಿ ನಾಶಗೊಳಿಸಲು ಈವರೆಗೆ ಪ್ರಯೋಗಿಸಿರುವ ಎಲ್ಲ ಔಷಧಿಗಳೂ ವಿಫಲವಾಗಿವೆ.  ರಾಸಾಯನಿಕಗಳಿಗೆ ನುಸಿ ಬಗ್ಗುವುದಿಲ್ಲ.  ಬದಲಾಗಿ ರಾಸಾಯನಿಕಗಳ ಪ್ರಯೋಗಗಳಿಂದ ಜೈವಿಕ ಸಮತೋಲನ ಏರುಪೇರಾಗುತ್ತದೆ ಎನ್ನುವ ಅಭಿಪ್ರಾಯ-ಎಚ್ಚರಿಕೆಯನ್ನು ಕೆಲವು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.  ಈವರೆಗಿನ ಅನುಭವ ವಿಜ್ಞಾನಿಗಳ ಅನಿಸಿಕೆಗೆ ಪೂರಕವಾಗಿಯೆ ಇದೆ.  ಇಂಥ ಸಂದರ್ಭದಲ್ಲಿ ರೈತ ಏನು ಮಾಡಬೇಕು?

ನುಸಿಪೀಡೆಯಿಂದ ಕಂಗೆಟ್ಟಿರುವ ರೈತನಿಗೆ ನೀರಾ ಆಶಾಕಿರಣವಾಗಿ ಕಾಣಿಸುತ್ತಿದೆ.  ತೆಂಗಿನ ಹೊಂಬಾಳೆ ಮೂಲಕ ನೀರಾ ಇಳಿಸುವುದರಿಂದ ನುಸಿಯೂ ನಿಯಂತ್ರಣಕ್ಕೆ ಬರುತ್ತದೆ ಎನ್ನುವುದು ಒಂದು ವಾದ.  ಆ ಕಾರಣದಿಂದಲೇ ನೀರಾ ಇಳಿಸುವುದು ಅನಿವಾರ್ಯ ಎನ್ನುತ್ತಾರೆ ನೀರಾ ಚಳುವಳಿ ರೂಪಿಸಿರುವ ರಾಜ್ಯ ರೈತಸಂಘದ ಮುಖಂಡರು.

ನೀರಾ ಇಳಿಸಿದರೆ ಸರ್ಕಾರಕ್ಕೇನು ಬಾಧೆ ಎನ್ನುವ ಪ್ರಶ್ನೆ ಕುತೂಹಲಕರ.  ಸರ್ಕಾರ ವಾದ ಮಂಡಿಸುತ್ತದೆ ಕೇಳಿ –

ಂ ನೀರಾ ಇಳಿಸುವುದು ಅಬಕಾರಿ ಕಾನೂನಿಗೆ ವಿರುದ್ಧ.

ಂ ಸೂರ್ಯೋದಯದ ನಂತರ ನೀರಾ ಹೆಂಡವಾಗುತ್ತದೆ.  ಕ್ಲೋರೈಡ್, ಹೈಡ್ರೈಡ್ ಇತ್ಯಾದಿಗಳನ್ನು ಬೆರೆಸಿ ಮಾರಾಟ ಮಾಡುವ ವಿಷಯದಲ್ಲಿ ಸರ್ಕಾರ ಮೂಕ ಪ್ರೇಕ್ಷಕನಾಗಿರಲು ಸಾಧ್ಯವಿಲ್ಲ.

ಂ ಸಮಾಜದ ಕೆಳಸ್ತರದಲ್ಲಿರುವವರು ನೀರಾ ಚಟಕ್ಕೆ ಬಲಿಯಾಗುತ್ತಾರೆ.  ದುರ್ಬಲ ವರ್ಗದವರ ಹಿತಾಸಕ್ತಿ ರಕ್ಷಣೆಗೆ ಸರ್ಕಾರ ಬದ್ಧ.  ಆದ್ದರಿಂದಲೇ ಸರ್ಕಾರ ನೀರಾ ಇಳಿಸುವುದರ ವಿರುದ್ಧ.

ಂ ನೀರಾ ಇಳಿಕೆ ಹಾಗೂ ಮಾರಾಟ ಅಂಥ ಲಾಭಕರ ಉದ್ಯಮವೂ ಅಲ್ಲ.

ಸರ್ಕಾರದ ವಾದಗಳನ್ನು ಗಮನಿಸಿದರೆ, ಆಲ್ಲಿ ಸಾರ್ವಜನಿಕ ಕಾಳಜಿಗಿಂಥ ಹೆಚ್ಚಾಗಿ ಕದನ ಕಾತುರವೇ ಎದ್ದು ಕಾಣುತ್ತದೆ. ರೈತರಿಗೂ ನೀರಾ ಇಳಿಸುವುದು ಕಾನೂನುಬದ್ಧ ಅಲ್ಲವೆನ್ನುವುದು ಗೊತ್ತಿದೆ.  ಆ ಕಾರಣದಿಂದಲೇ ಅವರು ಅನುಮತಿ ಕೋರುತ್ತಿದ್ದಾರೆ.  ಅಂತೆಯೇ ನೀರಾ ಲಾಭಕರ ಹೌದೋ ಅಲ್ಲವೋ ಎನ್ನುವುದನ್ನು ನಿರ್ಧರಿಸಬೇಕಾದುದು ರೈತರೇ ಹೊರತು, ಸರ್ಕಾರವಲ್ಲ.

ಎರಡನೆಯದಾಗಿ ದುರ್ಬಲ ವರ್ಗದವರ ಹಿತಾಸಕ್ತಿ ರಕ್ಷಣೆ ಎನ್ನುವ ಮಾತೇ ಹಾಸ್ಯಾಸ್ಪದ. ಬೀದಿ ಬೀದಿಗಳಲ್ಲಿ ಶರಾಬು ಅಂಗಡಿಗಳಿಗೆ ಅನುಮತಿ ನೀಡಿರುವ ಸರ್ಕಾರಕ್ಕೆ ಇಂಥ ಮಾತುಗಳನ್ನು ಆಡಲು ನೈತಿಕತೆ ಎಲ್ಲಿದೆ? ತಜ್ಞರು ಹೇಳುವ ಪ್ರಕಾರ ನೀರಾ ಹಾನಿಕರವೂ ಅಲ್ಲ. ಸಾರಾಯಿಯಲ್ಲಿ ಪ್ರತಿಶತ ೩೦ ರಷ್ಟು ಆಲ್ಕೋಹಾಲ್ ಇದ್ದರೆ, ನೀರಾದಲ್ಲಿ ಆಲ್ಕೋಹಾಲ್ ಪಾಲು ಶೇ.3 ಮಾತ್ರ. ಪ್ರೋಟೀನ್, ವಿಟಮಿನ್ ಸಿ ಹಾಗು ಶರ್ಕರ ಪಿಷ್ಟಗಳೂ ನೀರಾದಲ್ಲುಂಟು ಎನ್ನುತ್ತದೆ ತಜ್ಞರ ವರದಿ. ನೀರಾದಿಂದ ಬೆಲ್ಲ, ಕಲ್ಲು ಸಕ್ಕರೆ ತಯಾರಿಕೆಯೂ ಸಾಧ್ಯ. ಇದೆಲ್ಲ ಕೃಷ್ಣ ಬಳಗಕ್ಕೆ ಗೊತ್ತಿಲ್ಲದ್ದೇನೂ ಅಲ್ಲ.

ನೀರಾ ಸೂರ್ಯೋದಯದ ನಂತರ ಹೆಂಡವಾಗುತ್ತದೆ ಎನ್ನುವುದು ನಿಜ. ಆದರೆ, ಕನಿಷ್ಠ 6 ತಿಂಗಳ ಕಾಲ ನೀರಾವನ್ನು ಕೆಡದಂತೆ ರಕ್ಷಸುವ ತಂತ್ರಜ್ಞಾನ ಶ್ರೀಲಂಕಾದಲ್ಲಿದೆ. ಇಂಡೋನೇಷಿಯಾದಲ್ಲೂ ಕೂಡ ನೀರಾ ತಂತ್ರಜ್ಞಾನ ಸಾಕಷ್ಟು ಮುಂದುವರಿದಿದೆ. ಈ ತಂತ್ರಜ್ಞಾನವನ್ನು ಸರ್ಕಾರ ಯಾಕೆ ಅಮದು ಮಾಡಿಕೊಳ್ಳಬಾರದು ಎನ್ನುತ್ತದೆ ರೈತಸಂಘ.  ಐಟಿ ವಿಷಯದಲ್ಲಿ ಉದಾರ ಮನೋಭಾವತೋರಿ ದಿಡ್ಡಿ ಬಾಗಿಲುಗಳನ್ನು ತೆರೆದಿರಿಸುವ
ಸರ್ಕಾರ ನೀರಾ ವಿಷಯದಲ್ಲಿ ಹಟಕ್ಕೆ ಬೀಳುವುದೇಕೆ?

ಮತ್ತೊಂದು ವ್ಯಾಪಕ ಅಭಿಪ್ರಾಯದ ಪ್ರಕಾರ- ಅಬಕಾರಿ ಆದಾಯಕ್ಕೆ ಖೋತಾ ಉಂಟಾಗಬಹುದೆನ್ನುವ ಭಯದಿಂದ ನೀರಾಗೆ ಅನುಮತಿಸಲು ಸರ್ಕಾರ ಹಿಂದುಮುಂದು ನೋಡುತ್ತಿದೆ. ೧೭೫ ತಾಲ್ಲೂಕುಗಳಲ್ಲಿ ನಡೆಯುವ ಸಾರಾಯಿ ಟೆಂಡರ್ ಮೂಲಕ ಸರ್ಕಾರಕ್ಕೆ ೧,೧೦೦ ಕೋಟಿ ರುಪಾಯಿ ವಾರ್ಷಿಕ ವರಮಾನವಿದೆ. ಇದನ್ನು ತಪ್ಪಿಸಿಕೊಳ್ಳಲು ಸರ್ಕಾರಕ್ಕೆ ಮನಸ್ಸಿಲ್ಲ. ಆದರೆ, ವಾಸ್ತವ ಸಂಗತಿ ಇದಲ್ಲ.  ಸರ್ಕಾರ ಅಬಕಾರಿ ದೊರೆಗಳ ಹಂಗಿಗೆ ಬಿದ್ದಿದೆ. ಮದ್ಯೋದ್ಯಮಿಗಳ ಹಿತಾಸಕ್ತಿ ರಕ್ಷಸುವುದಕ್ಕೋಸ್ಕರ ರೈತರ ಹಿತಾಸಕ್ತಿ ಬಲಿಕೊಡಲು ಮುಂದಾಗಿದೆ ಎನ್ನುತ್ತಾರೆ ರೈತಸಂಘದ ಪ್ರಧಾನ ಕಾರ್ಯದರ್ಶಿ ಕೋಡಿಹಳ್ಳಿ ಚಂದ್ರಶೇಖರ್. ಅವರು ಹೇಳುವ ಲೆಕ್ಕಾಚಾರ ಇದು: ರಾಜ್ಯದಲ್ಲಿ ೭ ಕೋಟಿ ತೆಂಗಿನ ಮರಗಳಿವೆ ಎಂದುಕೊಳ್ಳುವ.  ಸರ್ಕಾರ ೨೦೦ ರು. ಸುಂಕ ವಿಧಿಸಿದರೆ ೧,೪೦೦ ಕೋಟಿ ರುಪಾಯಿ ವಾರ್ಷಿಕ ತೆರಿಗೆ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ.

ನೀರಾ ಇಳಿಸುವುದರ ಬಗ್ಗೆ ಸರ್ಕಾರ ತಳೆದ ಧೋರಣೆಯಲ್ಲಿ ಅದರ ಚಿಂತನೆಯ ದೋಷ ಎದ್ದು ಕಾಣುತ್ತದೆ. ನೀರಾ ಚಳವಳಿ ಯಾವುದೋ ಉತ್ಸಾಹದ ಭರದಲ್ಲಿ ಅಥವಾ ಲಾಭಬಡುಕರ ಸ್ವಾರ್ಥದ ಮೂಸೆಯಲ್ಲಿ ಮೊಳೆತದ್ದಲ್ಲ ಎನ್ನುವುದನ್ನು ಗಮನಿಸಬೇಕು. ನೀರಾ ಚಳವಳಿಯ ಹಿಂದೆ ರೈತರ ಹಿತಾಸಕ್ತಿಯನ್ನು ಕಾಯುವ ಉದ್ದೇಶವಿದೆ. ಜನಪರವಾದ ಸರ್ಕಾರದ ಪ್ರಯತ್ನಗಳು ಇಂಥ ಚಳವಳಿಗಳ ಲಾಭ ಪಡೆಯುವತ್ತ ಇರಬೇಕೇ ಹೊರತು, ಹತ್ತಿಕ್ಕುವ ಕುರಿತಾಗಿಯಲ್ಲ.

-೨-
ಗಾಂಧೀಜಿ ಕೂಡ ನೀರಾವನ್ನು ಮೆಚ್ಚಿದ್ದರು. ನೀರಾ ಆರೋಗ್ಯಕರ ಪೇಯ ಎನ್ನುವುದು ಗಾಂಧಿ ನಿಲುವು. ಗೃಹ ಕೈಗಾರಿಕೆಗೆ ನೀರಾ ಅವಕಾಶ ಕಲ್ಪಿಸುತ್ತದೆ. ಕಬ್ಬಿನಿಂದ ತಯಾರಿಸಿದ ಬೆಲ್ಲಕ್ಕಿಂಥ ನೀರಾ ಬೆಲ್ಲ ಹೆಚ್ಚು ರುಚಿಕರ ಹಾಗೂ ಆರೋಗ್ಯಕರ ಎಂದು ಗಾಂಧಿ ಹೇಳುತ್ತಿದ್ದರು.

ತಮಿಳುನಾಡಿನ ಗ್ರಾಮೀಣರು ಈಗಲೂ ಕೂಡ ನೀರಾ ಇಳಿಸುವುದನ್ನು ಆದಾಯದೊಂದು ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಮನೆಯ ಗಂಡಸರು ಬೆಳಗ್ಗೆ ತಮ್ಮ ಜಮೀನುಗಳಲ್ಲಿನ ತಾಳೆಯ ಮರಗಳಿಂದ ನೀರಾ ಇಳಿಸಿ ತಂದರೆ, ಹೆಂಗಸರು ಬೆಲ್ಲ ತಯಾರಿಸುತ್ತಾರೆ. ಈ ಬೆಲ್ಲ (ಪನೆಬೆಲ್ಲ)ವನ್ನು ಸಂತೆಗಳಲ್ಲಿ ಮಹಿಳೆಯರೇ ಮಾರಿ ಪುಡಿಗಾಸು ಸಂಪಾದಿಸುತ್ತಾರೆ. ಇದಕ್ಕೆ ಕಾನೂನಿನ ರಕ್ಷೆಯಿಲ್ಲ ಅನ್ನುವುದು ಬೇರೆಯ ಮಾತು.

ನೀರಾ ಚಳವಳಿ ರೈತರ ಹಿತಾಸಕ್ತಿ ಉದ್ದೇಶ ಹೊಂದಿದೆಯಾದರೂ, ಅಲ್ಲಿ ಒಳನೋಟಗಳು ಕಡಿಮೆ. ಸರಿ ಸುಮಾರು ೧೮ ಕೋಟಿ ಲೀಟರ್ ಮದ್ಯಕ್ಕೆ ರಾಜ್ಯದಲ್ಲಿ ವಾರ್ಷಿಕ ಬೇಡಿಕೆಯಿದೆ. ರೈತರು ನಿರಾ ತಯಾರಿಸುತ್ತಾರೆ ಎಂದುಕೊಳ್ಳೋಣ. ಮರವೊಂದಕ್ಕೆ ೨ ಲೀಟರ್ ನೀರಾದಂತೆ ೭ ಕೋಟಿ ಮರಗಳಿಂದ ಪ್ರತಿದಿನ ೧೪ ಕೋಟಿ ಲೀಟರ್ ನೀರಾ ಉತ್ಪತ್ತಿಯಾಗುತ್ತದೆ. ಇಷ್ಟೊಂದು ಭಾರೀ ಪ್ರಮಾಣದ ನೀರಾ ಏನು ಮಾಡುವುದು? ಸರ್ಕಾರದ ಮಧ್ಯಪ್ರವೇಶ ಅಗತ್ಯವಾಗುವುದೇ ಇಂಥ ಸಂದರ್ಭಗಳಲ್ಲಿ.

ಪ್ರಸ್ತುತ ನಮ್ಮ ಮುಂದಿರುವ ಸಾಧ್ಯತೆಗಳನ್ನು ಗಮನಿಸಿದರೆ ನೀರಾದ ಉಪಯೋಗವನ್ನು ಎರಡು ರೀತಿಗಳಲ್ಲಿ ಪಡೆಯಬಹುದು. ಮೊದಲನೆಯದಾಗಿ ಪೆಪ್ಸಿ ಕೋಲಾಗಳ ಮಾದರಿಯಲ್ಲಿ ನೀರಾ ಅಭಿವೃದ್ಧಿಪಡಿಸಿ ಮಾರಾಟ ಮಾಡುವುದು. ಇದರಿಂದಾಗಿ ಮದ್ಯ ಮಾರಾಟಕ್ಕೆ ನೀರಾ ಸ್ಪರ್ಧಿಯಾಗುವುದು ತಪ್ಪುತ್ತದೆ. ನಂತರದ್ದು- ಸಕ್ಕರೆ, ಬೆಲ್ಲಗಳ ಉತ್ಪಾದನೆಗೆ ನೀರಾ ಬಳಸಿಕೊಳ್ಳುವುದು.

ನೀರಾದಿಂದ ಸಕ್ಕರೆ, ಬೆಲ್ಲ ತಯಾರಿಸುವುದನ್ನಾಗಲೀ ಅಥವಾ ನೀರಾವನ್ನು ಲಘು ಪಾನೀಯವಾಗಿ ರೂಪಿಸುವ ಕೈಗಾರಿಕೆಯನ್ನಾಗಲೀ ಜನತೆಗೇ ಬಿಟ್ಟು ಸರ್ಕಾರ ಸುಮ್ಮನಿರುವಂತಿಲ್ಲ. ನೀರಾ ಮಾರಾಟವನ್ನು ರೈತರಿಗೇ ಬಿಟ್ಟು ಸರ್ಕಾರ ಸುಮ್ಮನಿದ್ದರೆ, ಸರ್ಕಾರದ ಅಂಜಿಕೆಯಂತೆ ನೀರಾ ಮದ್ಯವಾಗಿ ಬಳಕೆಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಸಂಪನ್ಮೂಲ ಆಥವಾ ಪ್ರಬಲ ಸಂಘಟನೆ ಹೊಂದಿಲ್ಲದ ರೈತರಿಗೆ ನೀರಾ ಇಳಿಸಲಿಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಬೇಕು. ಉಳಿದಂತೆ ನೀರಾ ಮಾರಾಟ ಮತ್ತು ಬಳಕೆ ಕುರಿತಂತೆ ಸಂಪೂರ್ಣ ಅಧಿಕಾರ, ನಿಯಂತ್ರಣ ಸರ್ಕಾರದ್ದಾಗಿರಬೇಕು. ಈ ನಿಟ್ಟಿನಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯನ್ನು ಸರ್ಕಾರ ಮಾದರಿಯನ್ನಾಗಿ ಅನುಸರಿಸಬಹುದು. ನೀರಾ ಸಂಗ್ರಹಣೆ, ಬಳಕೆ ಕುರಿತಂತೆ ಕೆ ಎಮ್ ಎಫ್ ರೀತಿಯಲ್ಲಿ ನೀರಾ ಒಕ್ಕೂಟವನ್ನು ಸರ್ಕಾರ ಸ್ಥಾಪಿಸಬಹುದು.

ನೀರಾ ಚಳವಳಿ ರಾಜ್ಯದಲ್ಲಿ ಉಂಟು ಮಾಡಿರುವ ಕೆಲವು ಪರಿಣಾಮಗಳನ್ನು ಇಲ್ಲಿ ಗಮನಿಸಬೇಕು. ಅವುಗಳಲ್ಲಿ ಮುಖ್ಯವಾದುದು ಗುಡಿ ಕೈಗಾರಿಕೆಯೊಂದು ಇನ್ನೊಂದು ಗುಡಿ ಕೈಗಾರಿಕೆಯನ್ನು ಉತ್ತೇಜಿಸಿರುವುದು. ಪತ್ರಿಕೆಯಲ್ಲಿನ ವರದಿಯೊಂದು ಹೇಳುವಂತೆ- ನೀರಾ ಚಳವಳಿ ತೀವ್ರವಾಗಿರುವ ಪ್ರದೇಶಗಳಲ್ಲಿ ಮಣ್ಣಿನ ಗಡಿಗೆಗಳಿಗೆ ಬೇಡಿಕೆ ಯದ್ವಾತದ್ವಾ ಏರಿದೆಯಂತೆ. ಪರಿಣಾಮವಾಗಿ ಕುಂಬಾರಣ್ಣನ ಚಕ್ರ ವೇಗವಾಗಿ ತಿರುಗುತ್ತಿದೆ. ಬಹುಶಃ ಇಂಥ ದಿನಗಳನ್ನು ಕುಂಬಾರರು ನಿರೀಕ್ಷಸಿರಲಾರರು.

ಕೇವಲ ಜನಾಂಗವೊಂದರ ಕುಲ ಕಸುಬಾಗಿದ್ದ ನೀರಾ/ ಹೆಂಡ ಇಳಿಸುವುದು ಈಗ ಜಾತಿಯ ಪೊರೆ ಕಳಚಿಕೊಂಡು ಸಾರ್ವತ್ರಿಕವಾಗುತ್ತಿರುವುದು ಕೂಡ ಗಮನಾರ್ಹ. ಈ ಹಿನ್ನೆಲೆಯಲ್ಲಿ ನೀರಾ ಚಳವಳಿ ಜಾಗತೀಕರಣಕ್ಕೆ ಕರ್ನಾಟಕದ ಉತ್ತರವಲ್ಲದೆ ಬೇರೆಯೇನೂ ಅಲ್ಲ.

-೩-
ನೀರಾ ಚಳವಳಿಯನ್ನು ಜನಮುಖಿಯಾಗಿ ಸರ್ಕಾರ ಬಳಸಿಕೊಳ್ಳಬಹುದಾದ ಕುರಿತಾದ ಇಲ್ಲಿನ ಯೋಚನೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯಸಾಧ್ಯ ಹಾಗೂ ಲಾಭಕರ ಎಂದೇನಲ್ಲ. ಇಲ್ಲಿನ ಆಲೋಚನೆಗಳು- ಚಳವಳಿಯೊಂದು ರೂಪುಗೊಂಡಾಗ ಸರ್ಕಾರ ಮುಕ್ತವಾಗಿ ಆಲೋಚಿಸಬಹುದಾದ ಅಗತ್ಯವನ್ನು ಕುರಿತು ಹೇಳುವಂತದ್ದಾಗಿದೆ ಹಾಗೂ ಏಕಾ‌ಏಕಿ ಚಳವಳಿಯನ್ನು ಹತ್ತಿಕ್ಕಲು/ ಪ್ರೋತ್ಸಾಹಿಸಲು ರಾಜಕಾರಣಿಗಳು ಮುಂದಾಗುವ ಬದಲು ತುಸು ಭಿನ್ನವಾಗಿ ಆಲೋಚಿಸಿ, ವರ್ತಿಸಬೇಕೆನ್ನುವುದಾಗಿದೆ.

ಯಾವುದೇ- ಒಂದು ಚಳವಳಿ ರೂಪುಗೊಂಡಾಗ ಗಾಬರಿ ಬೀಳುವುದನ್ನು ಸರ್ಕಾರಗಳು ರೂಢಿಯಾಗಿಸಿಕೊಂಡಿವೆ. ಸರ್ಕಾರದಲ್ಲಿರುವವರಿಗೆಲ್ಲ ತಾವು ದೇವತೆಗಳೆನ್ನುವ ಭ್ರಮೆ. ಯಾರಾದರೂ ತಪಸ್ಸಿಗೆ ಕೂತಾಗ ಕುರ್ಚಿಗೆ ಸಂಚಕಾರ ಬಂದೀತೆಂದು ದೇವೇಂದ್ರ ತಪಸ್ಸು ಕೆಡಿಸಲು ಮುಂದಾಗುತ್ತಿದ್ದನಂತೆ. ನಮ್ಮಸರ್ಕಾರಗಳೂ ಹೀಗೇ. ಚಳವಳಿ ಎಂದರೆ ಹತ್ತಿಕ್ಕು ಅನ್ನುವುದು ಅವರ ನೀತಿ. ಇದಕ್ಕೆ ವಿರುದ್ದವಾಗಿ ವಿರೋಧ ಪಕ್ಷಗಳು ಚಳವಳಿಗಳನ್ನು ಪ್ರೋತ್ಸಾಹಿಸುತ್ತವೆ. ಈ ಮೂಲಕ ಸರ್ಕಾರವನ್ನು ತೆಗಳುವ ಹಾಗೆ ತಮ್ಮ ಜನಪರತೆಯನ್ನು ತೋರಿಸುವ ಅವಕಾಶವಾದಿ ರಾಜಕಾರಣ ಅವುಗಳದ್ದು. ವಿಷಾದದ ಸಂಗತಿಯಂದರೆ- ಚಳವಳಿಯ ಮೂಲ ಉದ್ದೇಶಗಳನ್ನು ಹಾಗೂ ಚಳವಳಿ ರೂಪುಗೊಂಡ ಬಗೆಯನ್ನು ಯಾವುದೇ ರಾಜಕಾರಣಿ ಅರ್ಥ ಮಾಡಿಕೊಳ್ಳಲು
ಪ್ರಯತ್ನಿಸುವುದೇ ಇಲ್ಲ. ನೀರಾ ಚಳವಳಿಯೂ ಇದಕ್ಕೆ ಹೊರತಲ್ಲ.

ನೀರಾ ಇಳಿಸುವುದೂ ರಾಜ್ಯಕ್ಕೆ ಹೊಸ ಸಂಪ್ರದಾಯವೇನೂ ಅಲ್ಲ. ಗೃಹ ಕೈಗಾರಿಕೆಯನ್ನು ರೂಪಿಸುವ ಉದ್ದೇಶದಿಂದ ಅರವತ್ತರ ದಶಕದಲ್ಲಿ ಖಾದಿ ಬೋರ್ಡ್ ಆಶ್ರಯದಲ್ಲಿ ನೀರಾ ಇಳಿಸಲಾಗುತ್ತಿತ್ತು. ನೀರಾದಿಂದ ಬೆಲ್ಲ, ಸಕ್ಕರೆಯನ್ನು ಅಲ್ಪ ಪ್ರಮಾಣದಲ್ಲಿ ತಯಾರಿಸಲಾಗುತ್ತಿತ್ತು. ಅನಂತರ ಪಾನ ನಿರೋಧ ರದ್ದಾದಾಗ ನೀರಾ ಇಳಿಸುವುದಕ್ಕೆ ನಿಷೇಧ ಹೇರಿ, ಹೆಂಡ ಇಳಿಸಲು ಅನುಮತಿ ನೀಡಲಾಯಿತು. ರಾಜ್ಯದಲ್ಲಿ ಈಚಲ ಮರಗಳ ಸಂಖ್ಯೆ ಕಡಿಮೆಯಾಗಿದೆಯೆಂದು, ದಕ್ಷಿಣ ಕನ್ನಡ ಹಾಗೂ ರಾಯಚೂರು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಹೆಂಡ ಇಳಿಸುವುದನ್ನು ಕೂಡ ನಿಷೇಧಿಸಲಾಯಿತು. ಬಹುಶಃ ತೆಂಗಿಗೆ ನುಸಿ ಬರದೆ ಹೋದಲ್ಲಿ ಈಗ ಕೂಡ ನೀರಾ ನೆನಪಿಗೆ ಬರುತ್ತಿರಲಿಲ್ಲವೇನೋ?
*   *   *
ನೀರಾ ಇಳಿಸಲು ಸರ್ಕಾರ ಒಪ್ಪಿಕೊಂಡಿದೆ. ಅಂದರೆ, ಸರ್ಕಾರ ತನ್ನ ಧೋರಣೆಯನ್ನು ಬದಲಿಸಿಕೊಂಡು, ರೈತರ ಹಿತಾಸಕ್ತಿಯಿಂದ ಈ ನಿರ್ಧಾರ ಕೈಗೊಂಡಿದೆ ಎಂದೇನಲ್ಲ. ಚಳವಳಿ ಪಡೆದುಕೊಳ್ಳುತ್ತಿರುವ ತೀವ್ರತೆಯಿಂದ ‘ನೀರಾ ಇಳಿಸಿಕೊಳ್ಳಿ’ ಎಂದು ಹೇಳುವ ಮೂಲಕ ಕೈ ತೊಳೆದುಕೊಳ್ಳಲು ಸರ್ಕಾರ ಪ್ರಯತ್ನಿಸಿದೆ.

ನೀರಾ ಇಳಿಸಲು ಸರ್ಕಾರ ಒಪ್ಪಿಗೆ ನೀಡಿರುವ ವಿಷಯ ನೀರಾ ಚಳವಳಿ ರೂಪಿಸಿದ ರೈತಸಂಘಕ್ಕೆ ಸಂತೋಷ ತಂದಿರಲಿಕ್ಕೆ ಸಾಧ್ಯವಿಲ್ಲ. ನೀರಾ ಹಾಳಾಗದಂತೆ ಕಾಪಾಡುವ ತಂತ್ರಜ್ಞಾನ, ವ್ಯವಸ್ಥಿತ ಮಾರುಕಟ್ಟೆ , ನೀರಾದಿಂದ ಉಪ ಉತ್ಪನ್ನಗಳ ತಯಾರಿಕೆ… ಈ ಕುರಿತು ರೈತಸಂಘದ ಯೋಜನೆಗಳು ಮಾತಿನ ರೂಪದಲ್ಲೇ ಉಳಿದಿರುವುದರಿಂದ, ‘ನೀರಾ ಇಳಿಸುವುದೇನೋ ಸರಿ, ಮುಂದೇನು?’ ಅನ್ನುವ ಗೊಂದಲ ಪರಿಹಾರವಾಗದೆ ಉಳಿಯುತ್ತದೆ. ನೀರಾ ಇಳಿಸಿದ ರೈತ ರಸ್ತೆ ಬದಿಗಳಲ್ಲಿ ಗಿರಾಕಿಗಳಿಗೆ ಕಾದು ನಿಲ್ಲುವುದು ಲಾಭಕರ ವಾಣಿಜ್ಯ ತಂತ್ರವಲ್ಲ. ಅದು ತುಂಬಾ ದಿನ ನಡೆಯುವುದೂ ಇಲ್ಲ. ಈ ಹಿನ್ನೆಲೆಯಲ್ಲಿ ಶುದ್ಧ ರೂಪದಲ್ಲಿಯೇ ನೀರಾ ಇಳಿಸುವ ರೈತನ ಉತ್ಸಾಹ ದೀರ್ಘಕಾಲಿಕವಾದುದೆಂದು ನಂಬುವುದು ಕಷ್ಟ.

ಮುಂದೇನು ಅನ್ನುವುದು ಸರ್ಕಾರಕ್ಕಂತೂ ಗೊಂದಲವೇ ಅಲ್ಲ ಏಕೆಂದರೆ. ನೀರಾ ಚಳವಳಿ ಯಶಸ್ವಿಯಾಗುವುದು ಸರ್ಕಾರಕ್ಕೆ ಬೇಕಿಲ್ಲ. ನುಸಿಪೀಡೆ ಸಂದರ್ಭದಲ್ಲಿ ಮಾತ್ರವಲ್ಲ ನುಸಿಪೀಡೆ ಇಲ್ಲದ ಸಂದರ್ಭದಲ್ಲು ನೀರಾ ಇಳಿಸುವುದನ್ನು ದೀರ್ಘಕಾಲಿಕ ಯಶಸ್ವಿ ಉದ್ಯಮನ್ನಾಗಿಸುವುದು ಸರ್ಕಾರಕ್ಕೆ ಸಾಧ್ಯವಿತ್ತು. ತೆಂಗಿನ ಮರಗಳನ್ನು ಕಾಯಿಗಾಗಿಯೇ ಬೆಳೆಸುವ ಪ್ರವೃತ್ತಿ ಇದರಿಂದ ಬದಲಾಗಿ, ತೆಂಗು ಬೆಳೆಯಲ್ಲಿ ಕ್ರಾಂತಿ ಉಂಟಾಗುವ ಸಾಧ್ಯತೆ ಇತ್ತು. ಆದರೆ, ನೀರಾ ಇಳಿಸಲು ಒಪ್ಪಿಗೆ ನೀಡುವಷ್ಟು ಮಾತ್ರ ತನ್ನ ಪಾತ್ರವನ್ನು ಸೀಮಿತಗೊಳಿಸಿಕೊಂಡಿರುವ ಸರ್ಕಾರ, ತಾನಾಗಿಯೇ ಸೃಷ್ಟಿಯಾಗಿದ್ದ ಅನೇಕ ಜನಪರ ಕಾರ್ಯಕ್ರಮಗಳಿಗೆ ಬೆನ್ನು ಹಾಕಿದೆ.

ನೀರಾ ಚಳವಳಿಯ ಯಶಸ್ಸು ಅಥವಾ ಸೋಲು ಮುಖ್ಯವಲ್ಲ. ಇಷ್ಟಕ್ಕೂ ಎಷ್ಟು ಚಳವಳಿಗಳು ಯಶಸ್ವಿಯಾಗಿವೆ? ಯಾವುದೇ ಜನಮುಖ ಚಳವಳಿ ಯಶಸ್ವಿಯಾಗದಿದ್ದರೆ, ಅದು ಚಳವಳಿಯ ಸೋಲೆಂದು ಭಾವಿಸಬೇಕಿಲ್ಲ ಈ ನೆಲದಲ್ಲಿ‌ಇನ್ನೂ ಜೀವಂತವಾಗಿರುವ ನೆಹರೂ ಕಳೆಗಳು ನೀರಾ ಚಳವಳಿಗೆ ನೀರೆಯುತ್ತಾರೆಂದು ಊಹಿಸುವುದು ಕಷ್ಟ. ಆದರೆ, ನೀರಾ ಚಳವಳಿ ಉಂಟುಮಾಡುವ ಜಾಗೃತಿ ದೀರ್ಘ ಕಾಲಿಕವಾದದ್ದು. ಅದು ಅಧಿಕಾರ ಕಳೆದುಕೊಂಡ ನಂತರ ನಮ್ಮ ರಾಜಕಾರಣಿಗಳಿಗೆ ಅರ್ಥವಾಗುತ್ತದೆ.

ಇವತ್ತು —
ನೀರಾ ಚಳವಳಿ ವಿಫಲವಾಗಿದೆ. ಸ್ವಾತಂತ್ರ್ಯ ಚಳವಳಿ ಹಾಗೂ ಸ್ವಾತಂತ್ರ್ಯಾ ನಂತರದ ಪರಿಸ್ಥಿತಿಯನ್ನು ನಾವು ಮತ್ತೆ ಕಾಣುತ್ತಿದ್ದೇವೆ. ಸ್ವಾತಂತ್ರ್ಯ ಸಿಕ್ಕ ಸಂಭ್ರಮದಲ್ಲಿ ಜವಾಬ್ದಾರಿಯನ್ನು ಮರೆತ ರಾಜಕಾರಣಿ- ಜನತೆಯೇ ಇವತ್ತೂ ಇದ್ದಾರೆ. ಒತ್ತಡಗಳಿಗೆ ಮಣಿದ ಸರ್ಕಾರ ನೀರಾ ಇಳಿಸಲು ಪರವಾನಗಿ ನೀಡಿತೇ ಹೊರತು, ಅದನ್ನು ಜನಪರವಾಗಿ ರೂಪಿಸುವಲ್ಲಿ ಕೈ ಚೆಲ್ಲಿತು. ಇದೇ ನಡವಳಿಕೆ ವಿರೋಧ ಪಕ್ಷಗಳದು ಕೂಡ. ಲಾಭದ ಕನಸು ಕಾಣುತ್ತಿದ್ದ ರೈತರು ನಿರಾಶರಾಗಿದ್ದಾರೆ.

ನೀರಾ ಚಳವಳಿಯ ವೈಫಲ್ಯ ತುಂಬಾ ನಿರಾಶೆ ಉಂಟು ಮಾಡುವಂಥದು. ನಮ್ಮ ಬದುಕನ್ನು ಎಲ್ಲ ದಿಕ್ಕುಗಳಿಂದಲೂ ಆಕ್ರಮಿಸಿಕೊಳ್ಳುತ್ತಿರುವ ಜಾಗತೀಕರಣಕ್ಕೆ ನೀರಾ ಚಳವಳಿ ಕರ್ನಾಟಕದ ಒಂದು ದಿಟ್ಟ ಉತ್ತರವಾಗಿತ್ತು. ಆದರೆ ಜಾಗತೀಕರಣದ ಕಬಂಧ ಬಾಹುಗಳು ವಿಸ್ತಾರ ದೊಡ್ಡದು. ಜಾಗತೀಕರಣದಿಂದ ಕೇವಲ ಹೊರಗಿನಿಂದ ಹೇರಲಾಗುತ್ತಿಲ್ಲ; ನಮ್ಮ ನಡುವೆಯೇ ಬೆಳೆಯತೊಡಗಿದೆ.

ಒಟ್ಟಿನಲ್ಲಿ ನೀರಾ ನೀರು ಪಾಲಾಯಿತು. ಈ ಮೂಲಕ ಜಾಗತೀಕರಣದ ವಿರುದ್ಧ ಸೆಟೆದು ನಿಲ್ಲಬಹುದಾಗಿದ್ದ ಅಪರೂಪವಾದ ಅವಕಾಶ ತಪ್ಪಿ ಹೋಯಿತು. ಈ ಅವಕಾಶ ಪ್ರಜ್ಞಾಪೂರ್ವಕವಾಗಿ ಸೃಷ್ಟಿಯಾಗಿರಲಿಲ್ಲ ಎನ್ನುವುದನ್ನು ಕೂಡ ನಾವು ಮರೆಯಬಾರದು. ನೀರಾ ಚಳವಳಿ ವಿಫಲವಾಗುವಲ್ಲಿ ನಮ್ಮ ಬುದ್ದಿಜೀವಿಗಳ ಪಾತ್ರವೂ ಇದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸಹಚರ್ಯ
Next post ಬಯಲು ಬಯಕೆ

ಸಣ್ಣ ಕತೆ

 • ಕಳಕೊಂಡವನು

  ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

 • ಪ್ರೇಮನಗರಿಯಲ್ಲಿ ಮದುವೆ

  ಜಾರ್ಜ್, ಎಲೆನಾಳನ್ನು ಸಂಧಿಸಿದಾಗ ಅವಳ ಮನೋಸ್ಥಿತಿ ಬಹಳ ಹದಗೆಟ್ಟಿತ್ತು. ಪಾರ್ಕಿನ ಬೆಂಚಿನ ಮೇಲೆ ತಲೆ ಬಗ್ಗಿಸಿ ಕಣೀರನ್ನು ಒರೆಸಿಕೊಳ್ಳುತ್ತಿದ್ದ ಎಲೆನಾಳನ್ನು ಕಂಡು ಅವರ ಮನಸ್ಸು ಕರಗಿತು. "ಹಾಯ್,… Read more…

 • ಕನಸುಗಳಿಗೆ ದಡಗಳಿರುದಿಲ್ಲ

  ಬೆಳಗ್ಗಿನ ಸ್ನಾನ ಮುಗಿಸಿದ ವೃಂದಾ ತನ್ನ ರೂಮಿಗೆ ಬಂದು ಬಾಗಿಲುಹಾಕಿಕೊಂಡು ಕನ್ನಡಿಯಲ್ಲಿ ತನ್ನ ದೇಹ ಸಿರಿಯನ್ನೊಮ್ಮೆ ನೋಡಿಕೊಂಡಳು. ಯಾಕೋ ಅವಳ ಮೈ - ಮನ ಒಮ್ಮೆ ಪುಲಕಿತವಾಯಿತು.… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…

 • ಸ್ವಯಂಪ್ರಕಾಶ

  ಇಸ್ತ್ರೀ ಇಲ್ಲದ ಸೀರೆ, ಬಾಚದ ತಲೆ... ಕೈಯಲ್ಲಿ ಚೀಲದ ತುಂಬ ತರ್ಕಾರಿಗಳೊಂದಿಗೆ ಮಾರುಕಟ್ಟೆಯಿಂದ ಹೊರಗೆ ಬರುವುದು ಭ್ರಮರೆ’ಯೇ... ಕಂಡು ತುಂಬಾ ಆಶ್ಚರ್ಯವಾಯಿತು. ರೋಡಿನ ಈ ಕಡೆ ಕಾರು… Read more…