ಕತ್ತಲಲ್ಲಿ ನಡುರಾತ್ರಿಯಲ್ಲಿ ಸುಡುಗಾಡಿನಲ್ಲಿ ನಡೆವ
ಬೆತ್ತಲಾಗಿ ಬರಿ ಹುಚ್ಚನಂತೆ ಸುತ್ತಾಡಿ ನೋಡಿಬಿಡುವ

ಹರಕು ಅಂಗಿಯಲಿ ಪರಕು ಮೈಯಿಯಲಿ ಭಿಕ್ಷೆ ಬೇಡಲೆಂಬ
ಸರಕು ಗಿರಕುಗಳ ತುತ್ತ ತೂರಿ ಕುಣಿದಾಡಿ ನಲಿಯಲೆಂಬ

ಜನರ ಜಾತ್ರೆಯಲಿ ನೂರು ವೇಷಗಳ ತೊಟ್ಟು ಮೆರೆಯಲೆಂಬ
ಮನವು ಒಯ್ದ ಕಡೆ ಊರು ಊರುಗಳ ಬೆದಕಿ ತಿರುಗಲೆಂಬ

ಹಗಲು ರಾತ್ರಿಗಳ ಹುಟ್ಟು ಸ್ವಾವುಗಳ ಹೆಣ್ಣು ಗಂಡು ಭೇದ
ಹೊಗದ ರೂಪವನು ಜಗದಿ ತಾಳಿ ನಗುತಳುತ ಬಾಳುವಂಥ

ಬಿಡುತೆ ಜೀವನವ ಬಾಳಲೆಂದು ಮನ ಮನನ ಮಾಡುತಿಹುದು
ಸುಡುತ ಚಿಂತೆಗಳ ಒಡಕು ಕಂತೆಗಳ ತೊರೆವುದೆಂದು ಬಹುದು
*****

Latest posts by ವೃಷಭೇಂದ್ರಾಚಾರ್‍ ಅರ್ಕಸಾಲಿ (see all)