‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

‘ಕತ್ತಲೆ-ಬೆಳಕು’ ನಾಟಕದ ಚಾರಿತ್ರಿಕ ಮಹತ್ವ

‘ಕತ್ತಲೆ-ಬೆಳಕು’ ನಾಟಕವು ಏಕಕಾಲಕ್ಕೆ ಸ್ವರೂಪದ ದೃಷ್ಟಿಯಿಂದ ನಾಟಕವೆನಿಸಿದರೆ, ತನ್ನ ತಾತ್ವಿಕತೆಯ ದೃಷ್ಟಿಯಿಂದ ಹೊಸ ನಾಟಕದ ಮೀಮಾಂಸೆಯ ಕೃತಿಯಾಗಿ ಕಾಣಿಸುತ್ತದೆ. ಇದನ್ನು ವಿವರಿಸುವುದೇ ಈ ಲೇಖನದ ಆಶಯವಾಗಿದೆ.

ಜಾನಪದ, ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಗಳಲ್ಲಿ ಬೆಳೆದು ಬಂದಿರುವ ಕನ್ನಡ ನಾಟಕಗಳ ಇತಿಹಾಸವು ಕಥಾ ಪ್ರಧಾನವಾದ ವಿನ್ಯಾಸವನ್ನು ಪಡೆದಿದೆ. ಪೌರಾಣಿಕ, ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳು ಈ ನಾಟಕಗಳ ಒಡಲನ್ನು ತುಂಬಿವೆ. ಸಾಮಾನ್ಯವಾಗಿ ಇಲ್ಲಿಯ ಕತೆಗಳು ಸರಳ ರೇಖಾಮುಖಿಯಾಗಿ ಚಲಿಸುತ್ತವೆ. ಇಂತಹ ನಾಟಕಗಳೇ ೧೯೫೮ರ ವರೆಗೂ ಕನ್ನಡದಲ್ಲಿ ಪ್ರಚಲಿತವಿದ್ದದ್ದು ಎಂಬುದು ಇತಿಹಾಸದ ಮಾತು.

ಹೀಗೆ ಕತೆಯ ದೃಷ್ಟಿಯಿಂದ ಸಾಂಪ್ರದಾಯಿಕ ಮಾರ್ಗದಲ್ಲಿ ನಡೆದು ಬಂದ ಕನ್ನಡ ನಾಟಕದ ಇತಿಹಾಸಕ್ಕೆ ‘ಕತ್ತಲೆ-ಬೆಳಕು’ ಮಹತ್ವದ ತಿರುವನ್ನು ನೀಡುತ್ತದೆ. ಇದನ್ನು ಬರೆದ ಶ್ರೀರಂಗರು ಬದುಕಿನಲ್ಲಿ ಕಂಡ ಹೊಸ ಕಾಣ್ಕೆಯನ್ನು ಮುಂದಿಡುತ್ತಾರೆ. ಇದರ ಮೂಲಕ ಕೇವಲ ರಂಗಕರ್ಮಿಗಳನ್ನಲ್ಲದೆ ಇತರೆ ಕಲಾಕ್ಷೇತ್ರಗಳ ಚಿಂತಕರನ್ನು ಸಹ ಹೊಸ ನಿಟ್ಟಿನಲ್ಲಿ ಆಲೋಚಿಸುವಂತೆ ಮಾಡುತ್ತಾರೆ.

ಆದ್ದರಿಂದ ಈ ಕೃತಿಯು ಕೇವಲ ನಾಟಕವಾಗದೆ ಹೊಸ ಮೀಮಾಂಸೆಯನ್ನು ಮಂಡಿಸುವ ಕೃತಿಯಾಗುತ್ತದೆ. ಈ ನಿಟ್ಟಿನಲ್ಲಿ ತನ್ನ ರಾಚನಿಕ ನೆಲೆಯಲ್ಲಿ ಶುದ್ಧ ನಾಟಕ ಎನಿಸಿದರೆ, ಕಾವ್ಯ ಪ್ರತಿಮಾತ್ಮಕ ನೆಲೆಯಲ್ಲಿ ನಾಟಕರೂಪಿ ಮೀಮಾಂಸಾ ಶಾಸ್ತ್ರ ಎನಿಸುತ್ತದೆ. ಇದರ ವಿಸ್ತೃತ ಚರ್ಚೆ ಬರವಣಿಗೆಯ ಮುಂದಿನ ಭಾಗವಾಗಿದೆ.
ಕನ್ನಡ ನಾಟಕಗಳ ಬೆಳವಣಿಗೆಯ ಒಟ್ಟು ಸ್ವರೂಪವನ್ನು ಕೇವಲ ಗಮನದಲ್ಲಿರಿಸಿಕೊಂಡು ಅದರ ನಡುವೆ ‘ಕತ್ತಲೆ-ಬೆಳಕು’ ನಾಟಕಕ್ಕಿರುವ ವಿಶಿಷ್ಟತೆಯನ್ನು ಮಾತ್ರ ಇಲ್ಲಿ ಚರ್ಚಿಸಲಾಗಿದೆ. ಈ ಮೂಲಕ ಕನ್ನಡ ನಾಟಕದ ಇತಿಹಾಸದಲ್ಲಿ ಇದರ ಮಹತ್ವವನ್ನು ಗುರುತಿಸಲು ಯತ್ನಿಸಲಾಗಿದೆ.

ಒಂದು ನಿರ್ದಿಷ್ಟ ಪ್ರದೇಶದ ಬದುಕು ಯಾವತ್ತೂ ಏಕಮುಖವಾಗಿ ಚಲಿಸುವುದಿಲ್ಲ. ಅಲ್ಲಿ ಅಸಂಖ್ಯ ವ್ಯಕ್ತಿಗಳ ವಿಭಿನ್ನ ಬದುಕು ಇರುತ್ತದೆ. ಈ ಒಂದೊಂದು ಬದುಕು ಸಹ ಒಂದೊಂದು ಕತೆಯಾಗಿರುತ್ತದೆ. ಈ ಒಂದೊಂದು ಕತೆಗೂ ಆಯಾ ವ್ಯಕ್ತಿತ್ವಗಳೇ ನಾಯಕತ್ವವನ್ನು ಪಡೆದುಕೊಂಡಿರುತ್ತವೆ. ಆದ್ದರಿಂದ ಒಂದು ನಿರ್ದಿಷ್ಟ ಪ್ರದೇಶ ಎನ್ನುವಾಗ ಅಲ್ಲಿ ಅಸಂಖ್ಯ ಕತೆಗಳಿರುತ್ತವೆ ಎಂಬುದು ಸ್ಪಷ್ಟವಾಗುತ್ತದೆ. ಜೊತೆಗೆ, ಅಲ್ಲಿನ ಎಲ್ಲಾ ಕತೆಗಳೂ ಏಕಕಾಲಕ್ಕೆ ಪ್ರಾರಂಭವಾಗುವುದಿಲ್ಲ. ಒಂದು ಕತೆ ಮುಕ್ತಾಯವಾಗುತ್ತಿದ್ದಾಗಲೋ ಮತ್ತೊಂದು ಕತೆ ಅರ್ಧದ ಘಟ್ಟವನ್ನು ಮುಟ್ಟಿದಾಗಲೋ ಹೊಸಕತೆ ಆರಂಭವಾಗುತ್ತದೆ. ಈ ಕತೆಯು ಉಳಿದ ಕತೆಗಳಿಗೆ ಪೂರಕವಾಗಿರಬಹುದು. ಅಥವಾ ತನಗೆ ತಾನೆ ಸ್ವತಂತ್ರವಾಗಿರಬಹುದು ಅಥವಾ ಉಳಿದ ಕತೆಗಳೊಂದಿಗೆ ಸಂಧಿಸಬಹುದು ಅಥವಾ ಹುಟ್ಟಿದ ಘಳಿಗೆಯಲ್ಲಿಯೆ ಸಾಯಲೂಬಹುದು. ಈ ಹಿನ್ನೆಲೆಯಲ್ಲಿ ಒಂದು ನಿರ್ದಿಷ್ಟ ಪ್ರದೇಶದ ಕತೆ ಎಂದಾಗ ಅಲ್ಲಿ ಕತೆಗಳಿರುತ್ತವೆ. ಸಂಕೀರ್ಣತೆ ಇರುತ್ತದೆ. ಆದಿ-ಅಂತ್ಯ ಎನ್ನುವುದು ನಿಶ್ಚಿತ ಬಿಂದುಗಳಲ್ಲಿ ಇರುವುದಿಲ್ಲ ಎಂಬುದು ವಿದಿತವಾಗುತ್ತದೆ. ಇದರ ಜೊತೆಗೆ ಯಾವುದೇ ಒಂದು ಪಾತ್ರಕ್ಕೆ ಉಳಿದ ಪಾತ್ರಗಳೊಂದಿಗೆ ಸಂಪರ್ಕವು ಕಡ್ಡಾಯವಾಗಿ ಇರುತ್ತದೆಯೆಂಬುದಾಗಲಿ ಆ ಪಾತ್ರಗಳ ಹೆಸರುಗಳನ್ನು ತಾನು ತಿಳಿದಿದ್ದೇನೆಂಬುದಾಗಲಿ ವಾಸ್ತವವಲ್ಲ. ಇದು ಬದುಕು. ಆದ್ದರಿಂದ ಬದುಕು ಎಂಬುದು ಸರಳರೇಖೆ ಎಂದಾಗಲೀ ಸರಳ ಕಲ್ಪನೆಯೆಂದಾಗಲೀ ಗ್ರಾಹ್ಯವಾಗುವುದಿಲ್ಲ.

ಹೀಗೆ ಅಸಂಖ್ಯ ವಿಸಂಗತಿಗಳ ಸಂಕೀರ್ಣ ಅ-ಸಂಬಂಧ ರೂಪಕವಾಗಿ ಬದುಕು ಗೋಚರಿಸುತ್ತದೆ. ಇದಕ್ಕೆ ಗತಿಬಿಂಬವಾಗಿ ನಾಟಕವು ಮುಖಾಮುಖಿಯಾದಾಗ ಅದು ಅಸಂಗತ ನಾಟಕವಾಗಿ ಪರಿವರ್ತನೆಗೊಳ್ಳುತ್ತದೆ. ಹಾಗಾದಾಗ ಅಲ್ಲಿ ನಾಮಾಂಕಿತ ರಹಿತ ಪಾತ್ರಗಳು, ಪರಸ್ಪರ ಪೂರಕವಲ್ಲದ ಘಟನೆಗಳು-ಸನ್ನಿವೇಶಗಳು-ಪಾತ್ರಗಳು ಮೂಡಿ, ಇಡೀ ನಾಟಕವೇ ಅನಾಟಕೀಯವಾದ ಆವರಣವನ್ನು ಸೃಷ್ಟಿಸಿಕೊಳ್ಳುತ್ತದೆ ಅಥವಾ ಒಟ್ಟು ನಾಟಕವು ಅನಾಟಕವಾಗಿ ಮಾರ್ಪಡುತ್ತದೆ.

ಹೀಗೆ ನಿಜದ ಬದುಕಿಗೆ ಕನ್ನಡಿಯಾಗ ಬಯಸಿದ ನಾಟಕವು ಬದುಕಿನ ಅಸಾಂಗತ್ಯದ ದರ್ಶನವನ್ನು ಕಟ್ಟಿಕೊಡುವ ಮೂಲಕ ಅಸಂಗತ ನಾಟಕವಾಗಿ ರೂಪು ತಳೆಯುತ್ತದೆ. ಈ ತಾತ್ವಿಕತೆಯನ್ನೇ ಮೂಲ ಆಶಯವನ್ನಾಗಿ ಹೊಂದಿರುವ ‘ಕತ್ತಲೆ-ಬೆಳಕು’ ನಾಟಕವು ಕನ್ನಡ ರಂಗಭೂಮಿಗೆ ಹೊಸ ಬೌದ್ಧಿಕತೆಯನ್ನು ಪರಿಚಯಿಸುತ್ತದೆ. ಇದರ ವಿವರಣಾತ್ಮಕ ಚರ್ಚೆ ಈ ಮುಂದಿನ ಭಾಗವಾಗಿದೆ.

೧೯೫೮ರಲ್ಲಿ ಕೃತಿಯಾದ ಕತ್ತಲೆ-ಬೆಳಕಿ’ನಲ್ಲಿ ಸಾಂಪ್ರದಾಯಿಕ ಶೈಲಿಯ ಕತೆಯಿಲ್ಲ. ಇಲ್ಲಿ ಕತ್ತರಿಸಿ ತೆಗೆದ ಹಲವು ಕಥೆಯ ತುಣುಕುಗಳಿವೆ. ಅವು ಪರಸ್ಪರ ಸಂಪರ್ಕವನ್ನಾಗಲೀ ಸಂಬಂಧವನ್ನಾಗಲೀ ಪಡೆದುಕೊಂಡಿಲ್ಲ. ಇಲ್ಲಿಯ ಅನೇಕ ಪಾತ್ರಗಳು ಕಡೆಗೂ ಪರಸ್ಪರ ಸಂಧಿಸುವುದಿಲ್ಲ. ಹೀಗಾಗಿ ಇಲ್ಲಿ ಒಂದು ನಿರ್ದಿಷ್ಟ ಕತೆಯಿಲ್ಲ; ಹಲವು ಕಥಾ ತುಣುಕುಗಳಿವೆ. ಪಾತ್ರಗಳಿವೆ; ಆದರೆ ಅವುಗಳಿಗೆ ಹೆಸರುಗಳಿಲ್ಲ. ಹೀಗೆ ಹಲವು ವಲಯಗಳ ಪಾತ್ರಗಳಾಗಲೀ ಕಥಾ ತುಣುಕುಗಳಾಗಲೀ ಪರಸ್ಪರ ಪೂರಕವಾಗಿಲ್ಲ. ಹೀಗೆ ಒಟ್ಟು ನಾಟಕವು ಹಲವು ಸಂಗತಿಗಳ ಅ-ಸಂಬಂಧ ರೂಪವಾಗಿರುವುದರಿಂದ ತಾನು ಅಸಂಗತ ಎನಿಸುತ್ತದೆ. ವಾಸ್ತವವಾಗಿ ನಿಜದ ಬದುಕು ಇದೇ ಆಗಿರುವುದರಿಂದ ಬದುಕು ಸಹ ಅಸಂಗತವೇ ಎನಿಸುವುದು ಶ್ರೀರಂಗರ ಈ ಹೊಸ ಬೌದ್ಧಿಕತೆಯನ್ನು ಮೈಗೂಡಿಸಿಕೊಂಡ ಒಳಗಣ್ಣುಗಳಿಗೆ ಗೋಚರಿಸುವ ಸಂಗತಿ ಯಾಗುತ್ತದೆ.

ಹೀಗೆ ಬದುಕಿನ ಅಸಾಂಗತ್ಯದ ದರ್ಶನವನ್ನು ಬಹಳ ಸಮರ್ಥವಾಗಿ ಕಟ್ಟಿಕೊಡುವ ‘ಕತ್ತಲೆ-ಬೆಳಕು’ ನಾಟಕವು ಮುಂದಿನ ನಾಟಕಗಳಿಗೆ ಮೇಲ್ಪಂಕ್ತಿಯಾಗುತ್ತದೆ.

ಇಷ್ಟಾದರೂ ಪ್ರಸ್ತುತ ನಾಟಕವು ಪೂರ್ಣವಾಗಿ ಅಸಂಗತ ಎನಿಸುವುದಿಲ್ಲ. ಕಾರಣ, ನಾಟಕ ಕಂಪನಿಯ ಮಾಲೀಕ ಮತ್ತು ಮೇನೇಜರ್‌ರವರು ನಾಟಕಕಾರರನ್ನು ಸಂಧಿಸಿ, ತಮ್ಮ ಅಪೇಕ್ಷೆಯನ್ನು ವ್ಯಕ್ತಪಡಿಸುವ ಮೂಲಕ ನಾಟಕವು ಆರಂಭಗೊಳ್ಳುತ್ತದೆ. ಇವರ ಸಂಭಾಷಣೆಯ ಬಿಡುವಿನ ಮಧ್ಯೆ ಹಲವು ಸನ್ನಿವೇಶಗಳು ಜರುಗಿದರೂ ಅಂತಿಮವಾಗಿ ನಾಟಕಕಾರ ತನ್ನ ಹಿಂದಿನ ಮಾದರಿಯಲ್ಲಿ ನಾಟಕ ಬರೆಯುವುದಿಲ್ಲ ಎಂಬ ಮಾತನ್ನು ಸ್ಪಷ್ಟವಾಗಿ ಅವರೆದುರು ಆಡುವ ಮೂಲಕ ನಾಟಕವು ಮುಕ್ತಾಯವನ್ನು ಪಡೆಯುತ್ತದೆ. ಹೀಗೆ ನಾಟಕಕಾರನ ಹೊಸ ತಾತ್ವಿಕತೆಗೆ ಪೂರಕವಾಗಿ ಅಸಂಗತ ಎನಿಸುವುದಿಲ್ಲ. ಆದರೆ ಬದುಕಿನ ಅಸಾಂಗತ್ಯದ ದರ್ಶನವನ್ನು ಸ್ವಲ್ಪಮಟ್ಟಿಗೆ ಸುಸಂಗತದ ವಿನ್ಯಾಸದಲ್ಲಿ ಕಟ್ಟಿಕೊಡಲು ಯತ್ನಿಸುವ ನಾಟಕವಾಗಿ ಇದು ಮುಖ್ಯವಾಗಿ ಗಮನವನ್ನು ಸೆಳೆಯುತ್ತದೆ. ಇದಕ್ಕೆ ಸ್ಫೂರ್ತಿಯಾಗಿ, ಪ್ರೇರಣೆಯಾಗಿ ಪಾಶ್ಚಾತ್ಯ ರಂಗಭೂಮಿಯ ಅಸಂಗತ ಚಿಂತಕರಾದ ಕಾಮು, ಸಾರ್ತ್ರ, ಜೆರಾದೊ, ಬೆಕೆಟ್, ಅಯನೆಸ್ಕೊ ಮೊದಲಾದವರು ಇದ್ದರು ಎಂಬುದನ್ನು ಈಗಾಗಲೇ ಅನೇಕರು ಗುರುತಿಸಿದ್ದಾರೆ.

ಒಟ್ಟಾರೆ, ನಾಟಕ ಮತ್ತು ಬದುಕು: ಈ ಎರಡನ್ನೂ ವಾಸ್ತವವಾದಿ ನೆಲೆಗಟ್ಟಿನಲ್ಲಿ ಪರಸ್ಪರ ಮುಖಾಮುಖಿಗೊಳಿಸಲು ಶ್ರೀರಂಗರು ಇಲ್ಲಿ ಯತ್ನಿಸುತ್ತಾರೆ. ತಂತ್ರ ಮತ್ತು ವಿನ್ಯಾಸಗಳ ನೆಲೆಯಲ್ಲಿ ಹೊಸ ಪ್ರಯೋಗಶೀಲತೆಗೆ ಹೆಸರಾದ ನವ್ಯದ ಸಂದರ್ಭವೂ ಇಂತಹ ನಾಟಕದ ನಿರ್ಮಿತಿಗೆ ಪ್ರಚೋದನೆಯನ್ನು ಕೊಟ್ಟಿರಲು ಸಾಧ್ಯವಿದೆ. ಈ ಮೂಲಕ ಸ್ವಾತಂತ್ರ್ಯ ಪೂರ್ವ ಸಂದರ್ಭಕ್ಕೆ ಪ್ರತಿಕ್ರಿಯೆ ಕೊಟ್ಟಂತೆ ಈ ಕಾಲಕ್ಕೂ ಪ್ರತಿಕ್ರಿಯೆಯನ್ನು ರಚನಾತ್ಮಕವಾಗಿ ಕೊಡುವ ಮೂಲಕ ಶ್ರೀರಂಗರು ನಿಂತ ನೀರಾಗದೆ ಚಲಿಸುವ ನೀರಾಗಿ ಆರೋಗ್ಯಕರ ಎನ್ನಿಸುತ್ತಾರೆ.

ಈ ಹಿನ್ನೆಲೆಯಲ್ಲಿ ಅಸಂಗತ ನಾಟಕಗಳಿಗೆ ಮುನ್ಸೂಚನೆಯಾಗಿ ಬರುವ ‘ಕತ್ತಲೆ-ಬೆಳಕು’ ನಾಟಕವು ಎರಡು ತಾತ್ವಿಕತೆಗಳ ನಡುವಿನ ಸಂವಾದ ಮತ್ತು ಸಂಘರ್ಷದ ರೂಪದಲ್ಲಿ ಪ್ರತಿಮೆಯಾಗಿ ನಿಲ್ಲುತ್ತದೆ. ಸಾಂಪ್ರದಾಯಕ ನಾಟಕಗಳನ್ನು ಒಪುವ ಬಹುಸಂಖ್ಯಾತ ಸಹೃದಯರ ಪ್ರತಿನಿಧಿಗಳಾಗಿ ೨ನೇ ಮತ್ತು ೩ನೇ ವ್ಯಕ್ತಿಗಳಾದ ನಾಟಕ ಕಂಪೆನಿಯ ಮಾಲೀಕ ಮತ್ತು ಮೇನೇಜರ್‌ರವರು ನಿಲ್ಲುತ್ತಾರೆ. ಇದಕ್ಕೆ ವಿರುದ್ಧವಾದ ನೆಲೆಯಲ್ಲಿ, ಬದುಕನ್ನು ಅ-ಸಾಂಪ್ರದಾಯಿಕವಾಗಿ ಗ್ರಹಿಸಿ, ಹೊಸ ತಾತ್ವಿಕತೆಗೆ ಪ್ರತಿನಿಧಿಯಾಗಿ; ಪ್ರತೀಕವಾಗಿ ೧ನೇ ವ್ಯಕ್ತಿ ಎನಿಸಿದ ನಾಟಕಕಾರ ನಿಲ್ಲುತ್ತಾನೆ. ಇವರ ನಡುವಿನ ಸಂವಾದ, ಸಂಘರ್ಷವು ಎರಡು ಭಿನ್ನ ತಾತ್ವಿಕತೆಗಳ ಸಾಂಸ್ಕೃತಿಕ ಸಮರವಾಗಿ ಗೋಚರಗೊಳ್ಳುತ್ತದೆ. ಇದಕ್ಕೆ ಪರೋಕ್ಷ-ಪೂರಕವಾಗಿ ನಿಜದ ಬದುಕಿನ ಹಲವು ಸನ್ನಿವೇಶಗಳು ವೇದಿಕೆ ಮೇಲೆ ಹಾದು ಹೋಗುತ್ತವೆ. ಇವುಗಳ ನಡುವೆ ಹೊಂದಾಣಿಕೆ ಇಲ್ಲ. ಇದೇ ನಿಜದ ನಾಟಕ. ಆದ್ದರಿಂದ ಈ ದರ್ಶನವೇ ಹೊಸ ನಾಟಕದ ದರ್ಶನವೂ ವಸ್ತುವೂ ಆಗಬೇಕೆಂಬುದು ನಾಟಕದ ಮತ್ತು ನಾಟಕಕಾರರ ಆಶಯವಾಗಿ ತೋರುತ್ತದೆ. ಇದಕ್ಕೆ ದೂರವಾದ ನೆಲೆಯಲ್ಲಿ ಹೊಸ ನಾಟಕವನ್ನು ಅಪೇಕ್ಷಿಸಿ ಬಂದ ಮಾಲೀಕ ಮತ್ತು ಮೇನೇಜರ್ ಅವರು ಸಾಮಾಜಿಕ ಹೊಣೆಗಾರಿಕೆಗೆ ವಿ-ದೂರರಾಗಿ, ನಾಟಕವನ್ನು ಕೇವಲ ದಂಧೆಯನ್ನಾಗಿ ಮಾಡಿಕೊಂಡಿರುವುದು ಇಲ್ಲಿನ ವಸ್ತು ಸತ್ಯವಾಗುತ್ತದೆ. ಜಗತ್ತಿನ ಬಹುಸಂಖ್ಯಾತ ಜನರು ಇಂತಹ ‘ದಂಧೆ’ಯಿಂದ ಪಡೆಯುತ್ತಿರುವ ತಾತ್ಕಾಲಿಕ ಮನರಂಜನೆ ಮತ್ತು ಅದರ ಮೂಲಕ ವಿರೂಪ ಬದುಕಿಗೆ ವಿಮುಖರಾಗಿ ಪಲಾಯನವಾದಿ ಧೋರಣೆ ತಳೆದಿರುವುದನ್ನು ಈ ಪಾತ್ರಗಳ ಮಾತುಗಳು ಸೂಚಿಸುತ್ತವೆ. ಹೀಗೆ ಸಾಂಪ್ರದಾಯಕ ಕಥಾ ವಸ್ತುವನ್ನು ಒಳಗೊಂಡ ನಾಟಕಗಳು ಸಾಮಾಜಿಕ ಹೊಣೆಗಾರಿಕೆಯಿಂದ ದೂರ ಸರಿದಿವೆ ಎಂಬ ಭಾವವನ್ನು ತಳೆಯುವ ನಾಟಕಕಾರನು ‘ದಂಧೆ’ಯ ವಕ್ತಾರರು ಅಪೇಕ್ಷಿಸುವ ನಾಟಕವನ್ನು ಬರೆದುಕೊಡಲು ಅತ್ಯಂತ ಸ್ಪಷ್ಟವಾಗಿ ಅಂತಿಮ ಘಟ್ಟದಲ್ಲಿ ನಿರಾಕರಿಸುತ್ತಾನೆ. ತನ್ನಂತೆ ಬದುಕನ್ನು ಗ್ರಹಿಸಿದ ಜವಾಬ್ದಾರಿಯುತ ಸಹೃದಯರು ದೊರೆಯುವವರೆಗೂ ನಾಟಕವನ್ನು ರಚಿಸುವುದಿಲ್ಲ ಎಂಬ ಮೊಂಡುತನವನ್ನು ಸ್ಥಾಪಿಸುವ ಮೂಲಕ ರಾಜಿಗೆ ದೂರವಾಗುತ್ತಾನೆ.

ಈ ರೀತಿಯಲ್ಲಿ ಕತ್ತಲೆ ಕತ್ತಲೇ ಆಗಿ ಬೆಳಕು ಬೆಳಕೇ ಆಗಿ ಉಳಿದು ಬಿಡುತ್ತದೆ. ಇವೆರಡೂ ಸಾವಯವ ಸಂಬಂಧವನ್ನು ಸಾಧಿಸುವುದೇ ಇಲ್ಲ. ಇಂತಹ ಸಂಘರ್ಷವೇ ಜಗತ್ತಿನ ಸಂಕಥನದ ಜೀವಾಳ ಎಂಬುದು ಈ ಹಿನ್ನೆಲೆಯಲ್ಲಿಯೂ ಸ್ಪಷ್ಟಗೊಳ್ಳುತ್ತದೆ. ಈ ಮಾತನ್ನು ಸ್ವತಃ ನಾಟಕಕಾರನೇ ಆಡುವುದರಿಂದ ಹಲವು ಮಹತ್ವಗಳು ಇಲ್ಲಿ ಅನಾವರಣಗೊಳ್ಳುತ್ತವೆ. ಅವುಗಳಲ್ಲಿ ಒಂದು-ಬಹುಶಃ ಈ ನಂತರವೂ ಸಾಂಪ್ರದಾಯಿಕ ನಾಟಕಗಳೇ ಮೇಲ್ಮೆಯನ್ನು ಸಾಧಿಸುತ್ತವೆ ಎಂಬುದು. ಮತ್ತೊಂದು ತನ್ನ ತಾತ್ವಿಕತೆಗೆ ತನ್ನ ಕಾಲದಲ್ಲಿ ಮಾತ್ರವಲ್ಲದೆ ಭವಿಷ್ಯದಲ್ಲೂ ವಿಫಲತೆ ನಿರೀಕ್ಷಿತವಾದುದು ಎಂಬುದು. ಇಂತಹ ವಿಚಾರಗಳಿಗೆ ಧ್ವನಿಯಾಗಿ ನಾಟಕಕಾರನ ಕೊನೆಯ ಮಾತುಗಳು ಕೇಳಿಸುತ್ತವೆ.

ಹೀಗೆ ಬದುಕಿನ ಹಲವು ದ್ವಂದ್ವಗಳಿಗೆ ಕನ್ನಡಿಯಾಗಬಯಸಿದ ‘ಕತ್ತಲೆ-ಬೆಳಕು’ ನಾಟಕವು, ಸಾಮಾಜಿಕ ಹೊಣೆಗಾರಿಕೆ ಎಂಬುದು ಯಾವುದೇ ಕಲೆಯ ಒತ್ತಾಸೆಯಾಗಬೇಕೇ ವಿನಃ ದಂಧೆಯೇ ಅದರ ಒತ್ತಾಸೆಯಾಗಬಾರದು ಎಂಬುದನ್ನು ಶ್ರುತಪಡಿಸುತ್ತದೆ. ಈ ನಿಟ್ಟಿನಲ್ಲಿ ನಾಟಕಕಾರನಿಗೂ ಸಮಾಜಕ್ಕೂ ಇರಬೇಕಾದ ಸಂಬಂಧವನ್ನು ಪ್ರಸ್ತುತ ಕೃತಿ ವಿಶ್ಲೇಷಿಸುತ್ತದೆ.

ಒಟ್ಟಾರೆ ತಾತ್ವಿಕತೆ ಮತ್ತು ತಂತ್ರ ವಿನ್ಯಾಸ-ಈ ಎರಡೂ ದೃಷ್ಟಿಗಳಿಂದ ಹೊಸದೆನಿಸಿದ ಪ್ರಸ್ತುತ ಕೃತಿಯು ಹೊಸ ನಾಟಕದ ಮೀಮಾಂಸೆಯನ್ನು ತನ್ನ ಆಶಯವನ್ನಾಗಿಸಿಕೊಳ್ಳುವಲ್ಲಿ ಸಾಫಲ್ಯವನ್ನು ಪಡೆದಿದೆ.
*****
ಬಹುಜನ ಕನ್ನಡಿಗರು, ೧೬ ಜನವರಿ ೨೦೦೧

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನ ಕೊಡಲಿ
Next post ನಾನು ಮತ್ತು ಲಕ್ಷ್ಮಿ

ಸಣ್ಣ ಕತೆ

 • ಜುಡಾಸ್

  "ಪೀಟರ್" "ಪ್ರಭು" "ಇನ್ನು ಮೂರುದಿನ ಮಾತ್ರ, ಪೀಟರ್. ಅನಂತರ...." ಮಾತು ಅರ್ಧಕ್ಕೆ ನಿಂತಿತು. ಯೇಸುಕ್ರಿಸ್ತ ತನ್ನ ಶಿಷ್ಯರೊಂದಿಗೆ ಕಾಲುನಡಿಗೆಯಲ್ಲಿ ಜೆರೂಸಲೆಂ ನಗರಕ್ಕೆ ನಡೆದು ಬರುತ್ತಿದ್ದ. ಹನ್ನೆರಡುಜನ ಶಿಷ್ಯರೂ… Read more…

 • ರಣಹದ್ದುಗಳು

  ಗರ್ಭಿಣಿಯರ ನೋವು ಚೀರಾಟಗಳಿಗೆ ಡಾಕ್ಟರ್ ಸರಳಾಳ ಕಿವಿಗಳೆಂದೋ ಕಿವುಡಾಗಿ ಬಿಟ್ಟಿವೆ. ಸರಳ ಮಾಮೂಲಿ ಎಂಬಂತೆ ಆ ಹಳ್ಳಿ ಹೆಂಗಸರನ್ನು ಪರೀಕ್ಷಿಸಿದ್ದಳು. ಹೆಂಗಸು ಹೆಲ್ತಿಯಾಗಿದ್ದರೂ ಒಂದಷ್ಟು ವೀಕ್ ಇದ್ದಾಳೇಂತ… Read more…

 • ಗೃಹವ್ಯವಸ್ಥೆ

  ಬೆಳಗು ಮುಂಜಾನೆ ಎಂಟು ಗಂಟೆಗೆ ಹೊಗೆಬಂಡಿಯು XX ಸ್ಟೇಶನಕ್ಕೆ ಬಂದು ನಿಂತಿತು. ಸಂತ್ರಾಧಾರವಾಗಿ ಮಳೆ ಹೊಡೆಯುತ್ತಿರುವದರಿಂದ ಪ್ರಯಾಣಸ್ಥರು ಬೇಸತ್ತು ಗಾಡಿಯಿಂದ ಯಾವಾಗ ಇಳಿಯುವೆವೋ ಎಂದೆನ್ನುತ್ತಿದ್ದರು. ನಿರ್ಮಲಾಬಾಯಿಯು ಅವಳ… Read more…

 • ನಿಂಗನ ನಂಬಿಗೆ

  ಹೊಸಳ್ಳಿ ನೋಡುವದಕ್ಕೆ ಸಣ್ಣದಾದರೂ ಕಣ್ಣಿಗೆ ಅಂದವಾಗಿದೆ. ಬೆಳವಲ ನಾಡಿನಲ್ಲಿ ಬರಿ ಬಯಲೆಂದು ಟೀಕೆ ಮಾಡುವವರಿಗೆ ಹೊಸಳ್ಳಿ ಕೂಗಿ ಹೇಳುತ್ತಿದೆ - ತಾನು ಮಲೆನಾಡ ಮಗಳೆಂದು ! ಊರ… Read more…

 • ಅವಳೇ ಅವಳು

  ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…