ಬೇಸಿಗೆಯ ಸಂಜೆ
ತಂಗಾಳಿ ಬೀಸಿತು
ತಂಪಿನಲಿ ಅವನ ಉಸಿರಿತ್ತು.

ರಾತ್ರಿಯಲಿ ಆಕಾಶದ
ತುಂಬ ಬೆಳದಿಂಗಳು ಹರಡಿದೆ
ಅಂಗಳದಲಿ ಮಕ್ಕಳು ತುಂಬಿಕೊಂಡಿವೆ.

ಮುಂಜಾವಿನಲಿ
ಹನಿಹನಿ ಇಬ್ಬನಿ ಹಾಸಿವೆ
ನನ್ನಲ್ಲಿ ಕವಿತೆಯ ಜೀವ ಒಸರುತಿದೆ.

ಮಧ್ಯಾಹ್ನದಲಿ
ಒಂದು ಚಮಚ ನೀರು
ಭಾವಗಳನ್ನು ನಿಶ್ಶಬ್ದವಾಗಿಸುತ್ತಿದೆ.

ಓಣಿಯಲಿ ನಡುರಾತ್ರಿ
ಹೆಜ್ಜೆ ಸಪ್ಪಳಗಳು
ನಾಯಿಗಳು ತುಂಬ ಊಳಿಡುತ್ತವೆ.

ಮಗು ಗಲಗಲ ತೊದಲಿತು
ಎದೆಯಲಿ
ದೇವಸ್ಥಾನದ ಗಂಟೆಗಳು ಮೊಳಗಿದವು.

ಅಮವಾಸ್ಯೆಯ ನಂತರ
ಚಂದ್ರ ಹುಟ್ಟುತ್ತಾನೆ
ಕಲ್ಲು ಸಂದಿಯಿಂದ ಕಪ್ಪೆಗಳು ವಟಗುಟ್ಟುತ್ತವೆ.

ಚಿಟ್ಟೆ ಕೆಂಪು ದಾಸವಾಳದ
ಮೇಲೆ ಹಾರಾಡುತ್ತವೆ
ಸೂರ್ಯ ಕೆಂಪಾಗಿ ಉದಯಿಸುತ್ತಾನೆ.

ಮಾಗಿಯ ಚಳಿಯಲಿ
ಹೊದ್ದ ಕಂಬಳಿಯಿಂದ
ನೆನಪಿನ ಕಂಬಳಿ ಹುಳಗಳಿದ್ದವು.

ಚಳಿಗಾಲದ ಸಂಜೆ
ಗಾಳಿ ಸವರುತ್ತವೆ ಜೀವವ
ದೂರದಿಂದ ಉದುರುತ್ತದೆ ನೆರಳು

ಬೇಸಿಗೆಯಲಿ ಅಕಾಲಿಕ ಮಳೆ
ಮಣ್ಣವಾಸನೆಗೆ
ಎದೆಯ ಕನಸುಗಳು ಬಿರಿದವು.

ಸಮುದ್ರದ ದಂಡೆಯಲಿ
ಅಲೆಗಳು ಅಪ್ಪಳಿಸಿವೆ
ನಾನಿನ್ನು ಜೀವಂತವಾಗಿರುವೆ.

ಸಂಜೆ ಹೂವು ಗಿಡ
ಮುಲುಕಾಡಿ ಕಂಪಿಸಿವೆ
ಚಿಟ್ಟೆಭಾರ ಹೆಗಲಿಗೇರಿಸಿಕೊಂಡಿವೆ.

ಅವಳು ಬದುಕು ಬೇಡ ಅಂದಳು.
ಸಾಯಂಕಾಲ ದೇವರ ಮನೆ ನೀಲಾಂಜನದಲಿ
ಮಕ್ಕಳ ಕಣ್ಣುಗಳು ಮಿನುಗಿದವು.

ಈದ್ ಚಾಂದ ಹರಡಿವೆ ತಿಳಿ ಬೆಳದಿಂಗಳು
ಓಣಿಯಲಿ ಹಲಗೆಗಳು ಭಾರಿಸುತ್ತಲಿದೆ
ಬಣ್ಣದ ಹೋಳಿ ಮೃದುವಾಗಿ ಸಿಂಗರಿಸಿದೆ ಊರನು.

ಸಾವಿನ ಕರಿನೆರಳು ತಬ್ಬಿ
ತಲೆಯ ಕೂದಲೆಲ್ಲಾ ಬೋಳು
ವಸಂತನ ಆಗಮವಾಗಿದೆ ಹಸಿರು ಚಿಗುರುತ್ತದೆ.

ಬದುಕಿನ ಕೊನೆಯ ಕ್ಷಣಗಳು
ಸಾವು ತಬ್ಬಿದೆ ಎಷ್ಟೊಂದು
ಶಾಂತಿ ಹಿತಗಳು ಅರಳಿವೆ ಎದೆಯೊಳಗೆ.

ಆ ಪಕ್ಷಿಯ ಏಕಾಂತರ ಹಾಡು
ನೇವರಿಸುತ್ತದೆ ಅವಳ ಕೂದಲು
ಎಲ್ಲಾ ಕಣಿವೆಗಳು ಬೆಳಕು ಹರಡುತ್ತಿದೆ.

ವಸಂತ ಮತ್ತೆ ಬಂದಿದ್ದಾನೆ.
ಪುಟ್ಟ ಹುಲ್ಲುಗರಿಯ ಬೆನ್ನ ಮೇಲೆ
ಹನಿ ಇಬ್ಬನಿ ಕುಳಿತಿದೆ ಒಂದೇ.

ಮಳೆ ಬಿದ್ದು ಒದ್ದೆಯಾದ ಮಣ್ಣು
ಅರಳಿದವು ಕವಿತೆಯ ಕಣ್ಣು
ನಿಶ್ಶಬ್ದದಲಿ ಕವಿ ಕುಳಿತಿದ್ದಾನೆ ಒಬ್ಬನೇ.

ಈ ಮಧ್ಯಾಹ್ನದ ಬಿಸಿಲಿಗೆ
ಬೋಧಿ ಮರದ
ನೆರಳಿನ ಕನವರಿಕೆ.

ಉದಯಿಸುತ್ತಿರುವ ಮಂಕಾದ
ಸೂರ್ಯ ಕಂಬದ ಮೇಲೆ
ಒಂಟಿ ಹಕ್ಕಿ ನೆನಪು.

ಅಂಗಳದ ಸರಿಗೆ ತುಂಬ
ಬಟ್ಟೆಗಳು
ಹಾರಾಡಿವೆ ಬಣ್ಣದ ಚಿಟ್ಟೆಗಳು.

ನೀಲಿ ಬಾನ ತುಂಬ ನಕ್ಷತ್ರಗಳು
ಅರಳಿವೆ ಸುಗಂಧಿ ಅಂಗಳದಲಿ
ಮಿನುಗಿವೆ ಅವಳ ಕಣ್ಣುಗಳು.

ನಿರಂತರ ಚಲನೆಯ ದಾರಿ
ಮೂಡಿದ ಹೆಜ್ಜೆ ಗುರುತುಗಳು
ಅಳಿಸಿವೆ ಅವನ ನೆನಪು
*****