ಚಿತ್ರ: ಅಲ್ಕೆಟ್ರಾನ್.ಕಾಂ
ಚಿತ್ರ: ಅಲ್ಕೆಟ್ರಾನ್.ಕಾಂ

ತುಳುನಾಡಿನ ಕೇಂದ್ರಬಿಂದು ಮಂಗಳೂರಿನಲ್ಲಿ ಜನಿಸಿದ ಎಂ.ಗೋವಿಂದ ಪೈ (ಜನನ: ೧೮೮೩ ರ ಮಾರ್ಚ್ ೨೩) ಕವಿ, ನಾಟಕಕಾರ, ವಿಮರ್ಶಕ, ಸಂಶೋಧಕ, ಭಾಷಾತಜ್ಞರಾಗಿ ‘ಸಾರಸ್ವತ ಲೋಕದಲ್ಲಿ ತಮ್ಮ ಅಚ್ಚಳಿಯದ ಛಾಪು ಮೂಡಿಸಿದವರು. ಮಹತ್ವದ ಲೇಖನಗಳ ಮೂಲಕ ತುಳುನಾಡಿನ ಸಾಂಸ್ಕೃತಿಕ ಇತಿಹಾಸದ ವಕ್ತಾರರಾಗಿ ಕೆಲಸ ಮಾಡಿದವರು.

ಕನ್ನಡದ ಮಹತ್ವದ ಕವಿಗಳ ಪಟ್ಟಿಯಲ್ಲಿ ಪೈ ಅವರಿಗೆ ಮೊದಲ ಸಾಲಿನಲ್ಲೇ ಸ್ಥಾನ. ಸಂಖ್ಯಾದೃಷ್ಟಿಯಲ್ಲಿ ಅವರದ್ದು ವಾಮನ ಸಾಧನೆ. ಗುಣಮಟ್ಟದಲ್ಲಿ ತ್ರಿವಿಕ್ರಮ. ಪೈ ಅವರ ಪ್ರತಿಭಾವಿಲಾಸದ ಉತ್ತುಂಗದ ದರ್ಶನಕ್ಕೆ ‘ಗಿಳಿವಿಂಡು’ ಹಾಗೂ ‘ಗೋಲ್ಗೋಥಾ’ ಕೃತಿಗಳಷ್ಟೇ ಸಾಕು.

ಗೋವಿಂದ ಪೈ ಕಾವ್ಯ ಎಂದಕೂಡಲೇ ನೆನಪಿಗೆ ಬರುವುದು ಅವರ ಪ್ರಯೋಗಶೀಲತೆ. ಕನ್ನಡ ಕಾವ್ಯ ಪ್ರಾಸದ ಮೋಹದಲ್ಲಿ ಸಂಭ್ರಮಿಸುತ್ತಿದ್ದ ಸಂದರ್ಭದಲ್ಲಿ ‘ಪ್ರಾಸವನೀಗಲೆ ತೊರೆದು ಬಿಡುವೆನು’ ಎಂದು ಹೊಸತನದತ್ತ ಹೊರಟವರು ಪೈ. ಅದೇನೂ ಸುಲಭದ ದಾರಿಯಾಗಿರಲಿಲ್ಲ. ಪ್ರಾಸವನ್ನು ಹೊರತುಪಡಿಸಿದ ಕಾವ್ಯವನ್ನು ಕಲ್ಪಿಸಿಕೊಳ್ಳುವುದೂ ಕಷ್ಟವಾಗಿದ್ದ ದಿನಗಳಲ್ಲಿ ಕಾವ್ಯದ ಮಡಿ ಹುಡಿ ಮಾಡಿದ ಪೈ ಕುರಿತು ಸಂಪ್ರದಾಯಶರಣ ಕವಿಗಳು ಕಿಡಿಕಿಡಿಯಾದರು. ಪೈ ಕಂಗೆಡಲಿಲ್ಲ. ಹೊಸ ದಾರಿಯ ಸಾಧ್ಯತೆಗಳ ಕುರಿತು ಅವರಿಗೆ ಅಚಲ ವಿಶ್ವಾಸವಿತ್ತು. ಮುಂದಿನ ದಿನಗಳಲ್ಲಿ ಪೈ ತೋರಿದ ಹಾದಿ ಹೆದ್ದಾರಿಯಾದುದು ಈಗ
ಇತಿಹಾಸ.

ಕ್ರಿಸ್ತನ ಕೊನೆಯ ದಿನಗಳ ಚಿತ್ರಣದ ‘ಗೋಲ್ಗೋಥಾ’ ಕಥನ ಕಾವ್ಯ ಪೈ ಅವರ ಪ್ರಯೋಗಶೀಲತೆ ಹಾಗೂ ಪ್ರತಿಭಾವಿಲಾಸದ ಸಮ್ಮಿಲನವಾಗಿತ್ತು. ಈ ನಿಟ್ಟಿನಲ್ಲಿ ಅರಿವಿನ ಹಾದಿಯಲ್ಲಿನ ಬುದ್ದನ ಪಯಣದ ‘ವೈಶಾಖಿ’ ಖಂಡ ಕಾವ್ಯ ಇನ್ನೊಂದು ಉದಾಹರಣೆ. ಸುನೀತ (ಸಾನೆಟ್) ಪ್ರಕಾರ’ವನ್ನು ಕನ್ನಡಕ್ಕೆ ಪರಿಚಯಿಸಿದ ಅಗ್ಗಳಿಕೆಯೂ ಪೈ ಅವರಿಗೇ ಸಲ್ಲಬೇಕು. ಕಾವ್ಯ ಮಾತ್ರವಲ್ಲ ನಾಟಕಕಾರನಾಗಿಯೂ ಪೈ ಅವರದ್ದು ಮಹತ್ತರ ಸಾಧನೆ. ಏಕಲವ್ಯನ ದುರಂತ ಕಥನದ ‘ಹೆಬ್ಬೆರಳು’ ಅವರಿಗೆ ಪ್ರಸಿದ್ದ ತಂದುಕೊಟ್ಟ ನಾಟಕ. ‘ಚಿತ್ರಭಾನು’ ಪೈ ಅವರ ಮತ್ತೊಂದು ಜನಪ್ರಿಯ ನಾಟಕ.

ಅನುವಾದದಲ್ಲೂ ಪೈ ಪಳಗಿದ ಕೈ. ಜಪಾನಿಯಿಂದ ಕನ್ನಡಕ್ಕೆ ತಂದ ‘ನೋ ನಾಟಕಗಳು’ ಇಲ್ಲಿ ಉಲ್ಲೇಖಾರ್ಹ. ಅವರು ಅನುವಾದಿಸಿದ ಮತ್ತೊಂದು ನಾಟಕ ‘ತಾಯಿ’.

ತಾಯಹಾಲಿನ ಜೊತೆಗೆ ಪೈ ಅವರಿಗೆ ಮೈಗೂಡಿದುದು ಕೊಂಕಣಿ. ಪರಿಸರದ ಮಾತು ತುಳು. ಹಿಂದಿ, ತಮಿಳು, ಮಲೆಯಾಳಂ, ಮರಾಠಿ ಹಾಗೂ ಹಲವು ವಿದೇಶಿ ಭಾಷೆಗಳು ಸೇರಿದಂತೆ ಪೈ ಅವರಿಗೆ ಮೂವತ್ತೈದು ಭಾಷೆಗಳ ಪರಿಚಯವಿತ್ತು. ಇವುಗಳಲ್ಲಿ ಅನೇಕ ಭಾಷೆಗಳಲ್ಲಿ ಆಳ ಪರಿಶ್ರಮವೂ ಇತ್ತು. ಇಷ್ಟೆಲ್ಲ ಭಾಷೆಗಳ ಸಾಂಗತ್ಯವಿದ್ದರೂ ಅವರು ಬದುಕಿದ್ದು ಬರೆದಿದ್ದು ಕನ್ನಡದಲ್ಲಿ ಈ ಕನ್ನಡ ಪ್ರೀತಿ ಸಾಹಿತ್ಯಕ್ಕಷ್ಟೇ ಮೀಸಲಾಗಿರಲಿಲ್ಲ. ಕನ್ನಡ ನಾಡುನುಡಿಯ ಏಳ್ಗೆಗಾಗಿಯೂ ಅವರು ದನಿಯೆತ್ತಿದರು. ಏಕೀಕರಣ ಚಳವಳಿಯಲ್ಲಿ ಸಕ್ರಿಯರಾಗಿದ್ದರು. ಗಡಿ ಹೋರಾಟದಲ್ಲಿ ತೊಡಗಿಸಿ ಕೊಂಡಿದ್ದರು.

ಪೈ ಜನಿಸಿದ್ದು ಮಂಗಳೂರಿನಲ್ಲಾದರೂ ಅವರು ಬೆಳೆದದ್ದು ಕಾಸರಗೋಡಿನ ಮಂಜೇಶ್ವರದಲ್ಲಿ ಹೆಸರಿನೊಂದಿಗೆ ಅಂಟಿಕೊಳ್ಳುವಷ್ಟರ ಮಟ್ಟಿಗೆ ಪೈ ಅವರಿಗೆ ಮಂಜೇಶ್ವರದ ನಂಟಿದೆ. ಆದರೆ ಈ ಮಂಜೇಶ್ವರವನ್ನು ಒಳಗೊಂಡ ಕಾಸರಗೋಡು ಕರ್ನಾಟಕದಿಂದ ಹೊರಗೇ ಉಳಿದ ಕೊರಗು ಪೈ ಅವರನ್ನು ಕೊನೆಯವರೆಗೂ ಕಾಡಿತು.

೧೯೪೯ ರಲ್ಲಿ ಅಂದಿನ ಮದರಾಸು ಸರ್ಕಾರ ಗೋವಿಂದ ಪೈ ಹಾಗೂ ಮಲೆಯಾಳಂನ ಪ್ರಸಿದ್ದ ಕವಿ ವಲ್ಲತೋಳ್ ಅವರಿಗೆ ರಾಷ್ಟ್ರಕವಿ ಪ್ರಶಸ್ತಿ ನೀಡಿ ಗೌರವಿಸಿತು. ಆ ಮೂಲಕ ಪೈ ಕನ್ನಡದ ಮೊದಲ ರಾಷ್ಟ್ರಕವಿ ಎನ್ನಿಸಿದರು. ನಿಜ ಅರ್ಥದಲ್ಲಿಯೂ ಪೈ ರಾಷ್ಟ್ರಕವಿಯೇ. ಜಿ.ಎಸ್.ಶಿವರುದ್ರಪ್ಪನವರ ಮೂಲಕ ಕನ್ನಡ ಸಾರಸ್ವತ ಲೋಕದಲ್ಲಿ ರಾಷ್ಟ್ರಕವಿ ಪರಂಪರೆ ಮುಂದುವರಿಯುತ್ತಿರುವ ಸಂದರ್ಭದಲ್ಲಿ ಈ ಪರಂಪರೆಯ ಪೂರ್ವಸೂರಿ ಗೋವಿಂದ ಪೈ ನೆನಪು ಗಾಢವಾಗುತ್ತದೆ.
*****