ಮದುವೆಯಾಗಿ ಮೂರು ವರ್ಷಗಳ ಬಳಿಕ
ಮಡದಿ ಮಗಳೊಂದಿಗೆ ಮೊನ್ನೆ
ಲಾಲ್‌ಬಾಗ್ ನೋಡಲು ಹೋದಾಗ
ಮಗಳನ್ನು ಆಡಲು ಬಿಟ್ಟು,
ಮುದ್ದು ಮಡದಿಯೊಂದಿಗೆ
ಜೋಡಿಯಾಗಿ ಕುಳಿತಿದ್ದಾಗ
ಅನಿಸಿತು, ನಮ್ಮ ಬಾಳೇ ಒಂದು ರೀತಿ,
ನಮಗೆ ನಮ್ಮದೇ ಒಂದು ನೀತಿ,
ಒಬ್ಬೊಬ್ಬರದು ಒಂದೊಂದು ರೀತಿ.
ಹೀಗೆಯೇ ಯೋಚಿಸುತ್ತಾ ಕುಳಿತಿದ್ದಾಗ
ನಮ್ಮ ಮುಂದೆ, ಆಗೊಮ್ಮೆ-ಈಗೊಮ್ಮೆ
ಹಾದು ಹೋಗುತ್ತಿದ್ದವು ಒಂದೊಂದು ಜೋಡಿ
ಅವರಲೊಬ್ಬೊಬ್ಬರದೂ ಒಂದೊಂದು ರೀತಿ.
ಯಾರಿಗೂ ಕಾಣದೆ ಕದ್ದು ಓಡಾಡುತ್ತಿರುವ
ನಲ್ಲ-ನಲ್ಲೆಯರದೇ ಒಂದು ರೀತಿ .
ಮದುವೆಗೆ ಮುಂಚೆ ಓಡಾಡುವ
ಮದು-ಮಕ್ಕಳದೇ ಒಂದು ರೀತಿ.
ಹೊಸದಾಗಿ ಮದುವೆಯಾದ ಜೋಡಿ,
ಅವರದೇ ಒಂದು ರೀತಿ ನೋಡಿ!
ಒಂದು ಮಗು ಆದವರದು,
ಎರಡು ಮಕ್ಕಳಾದವರದು,
ಮಕ್ಕಳೇ ಆಗದವರದು
ಒಬ್ಬೊಬ್ಬರದು ಒಂದೊಂದು ರೀತಿ
ಅವರವರಿಗೆ ಅವರವರದೇ ನೀತಿ!
ಅದು ಪ್ರಕೃತಿ ನಿಯಮ.
ಈ ರೀತಿ ನೀತಿಗಳ ನಿರ್ಮಿಸಿ,
ಅದರ ಇತಿ ಮಿತಿಯೊಳಗೇ
ನಮ್ಮೆಲ್ಲರ ಬಾಳ ನಾಟಕಗಳ
ಆಡಿಸುವ ಸೂತ್ರಧಾರನದೇ
ಒಂದು ರೀತಿ… ಒಂದು ನೀತಿ!
*****
೨೧-೦೧-೧೯೮೭