ಜಗದಗಲ ಮುಗಿಲಗಲ ಮೆರೆದಂತ ಹಂಪೆ
ಏಕಾದೆ ನೀನಿಂದು ಈ ಹಾಳು ಹಂಪೆ
ವೀರಾಧಿ ವೀರರಿಗೆ ಜನ್ಮವಿತ್ತರೇನು
ನಾಲ್ಕಾರು ದಿಕ್ಕಿಂದ ಜಯ ತಂದರೇನು
ನೂರಾರು ವರುಷಗಳು ನೀ ಮೆರೆದರೇನು
ಕಡೆಗಾಲದಲಿ ಶೌರ್ಯ ಬರಿದಾಯಿತೇನು!?
ಸಂಗೀತ ಸಾಹಿತ್ಯ ಸುಧೆ ಹರಿಸಿ ಅಂದು
ಬೆಳ್ಳಿ ಕಾಲ್ಗೆಜ್ಜೆಗಳ ಮಿಡಿಸುತಲಿ ನಿಂದು
ನರಸಿಂಹ ವಿಠಲರನು ರಕ್ಷಣೆಗೆ ತಂದು
ಕಣ್ಣೀರ ಇತಿಹಾಸ ಮಾಡಿದೆ ಏಕಿಂದು!?
ರಸಪೂರ್ಣ ನುಡಿಗಳಿಗೆ ನವ ಸ್ಫೂರ್ತಿಯಾಗಿ
ಇತಿಹಾಸ ಕೃತಿಗಳಿಗೆ ಚಿರ ವಸ್ತುವಾಗಿ
ಮುದಭರಿತ ಪಯಣದಲಿ ನೀ ತಾಣವಾಗಿ…
ಹರಿವೆ ನನ್ನಲಿ ಏಕೆ ಕಣ್ದಾರೆಯಾಗಿ!?
*****