ಕಾಡಿನ ಮೃಗಗಳು
ಒಂದೆಡೆ ಸೇರಿ
ಬಿಸಿ ಬಿಸಿ ಚರ್ಚೆಗೆ ತೊಡಗಿದವು
ಮರಗಳ ಕಡಿದಾ
ಮನುಜರಿಗೆ
ಹಿಡಿ ಹಿಡಿ ಶಾಪ ಹಾಕಿದವು
ಮನುಜನ ಕೃತ್ಯಕೆ
ಮರುಗಿದವು
ಪರಿಹಾರಕೆ ದಾರಿ ಹುಡುಕಿದವು
ಕಾಡನು ಉಳಿಸುವ
ಬಗೆಯದು ಹೇಗೆ
ಎಂಬಾ ಚಿಂತನೆ ನಡೆಸಿದವು
ಮರಗಳ ನೆಡುವಾ
ಕಾಡನು ಬೆಳೆಸುವ
ಎಂಬಾ ದನಿಗಳು ಕೇಳಿದವು
ಪ್ರಾಣಿಗಳೆಲ್ಲಾ
ಒಕ್ಕೊರಲಿಂದಾ
ಸಮ್ಮತಿಯನ್ನು ನೀಡಿದವು
ಕೂಡಲೆ ಹೊರಟವು
ದೂರದವರೆಗೆ
ಮುದದಲಿ ಸಸಿಗಳ ತಂದಿಹವು
ಗುಂಡಿಯ ತೋಡಿ
ಮಣ್ಣನು ಬಗೆದು
ಕನಸುಗಳನ್ನೇ ನೆಟ್ಟಿಹವು
ಮಣ್ಣನು ನೂಕಿ
ನೀರನು ಹಾಕಿ
ಕೇಕೆಯಹಾಕಿ ಕುಣಿದಿಹವು
ಸಸಿಗಳ ನೆಟ್ಟು
ಟ್ರೀಗಾರ್ಡ ಇಟ್ಟು
ಭಾರೀ ಕಾಯಕ ಮಾಡಿದವು
ಕಳೆಯನ್ನು ಕಿತ್ತು
ಗೊಬ್ಬರ ಹೊತ್ತು
ಸೊಂಪಾಗಿ ಸಸಿಗಳ ಬೆಳೆಸಿದವು
ಬೆಳೆದವು ಮರಗಳು
ಬಾನೆತ್ತರಕೆ
ಮೃಗಗಳಿಗಾದವು ಆಶ್ರಯವು
ಈ ಪರಿ ಉತ್ಸವ
ಮಾಡಿದವು
ಮನುಜಗೆ ನೀತಿಯ ಹೇಳಿದವು.
*****