2005-06ರ ಅಂತಿಮ ಬಿ.ಎ. ತಂಡದ ಪಾವನ ಕೃಷ್ಣ ಮತ್ತು ಅವನ ಗೆಳೆಯ ರೊಡನೆ ನಡೆಸಿದ ಸಾಹಸದ ಬಗ್ಗೆ ಪದೇ ಪದೇ ನೆನೆಪಿಸುತ್ತಿದ್ದವನು ನಕಲೀಶ್ಯಾಮನೆಂಬ ಕಮಲಾಕ.
ಅವನ ಚಾರಣ ಮಿತ್ರರಲ್ಲಿ ಹೆಚ್ಚಿನವರು ಉನ್ನತ ಶಿಕಣ ಅಥವಾ ಉದ್ಯೋಗದ ನೆವದಲ್ಲಿ ಸುಳ್ಯ ಬಿಟ್ಟಿದ್ದರು. ಮಡಪ್ಪಾಡಿ ಪ್ರವೀಣನೂ ತನ್ನ ಅಕ್ಕ ವೀಣಾಳ ಯಲಹಂಕದ ಮನೆಯನ್ನು ಸೇರಿಕೊಂಡಿದ್ದ. ಸುಳ್ಯದಲ್ಲೇ ಬೀದಿ ಸುತ್ತುತ್ತಿದ್ದ ನಕಲೀಶ್ಯಾಮ ವಿಪರೀತ ಏಕಾಕಿತನ ಅನುಭವಿಸುತ್ತಿದ್ದ.
ಈ ನಡುವೆ ಪಾವನ ಕೃಷ್ಣ ತನ್ನ ಪಟಾಲಂ ಕಟ್ಟಿಕೊಂಡು ಕೊಡಗಿನ ಬ್ರಹ್ಮಗಿರಿಗೆ ಮತ್ತು ತಡಿಯಂಡ ಮೋಳು ಪರ್ವತಕ್ಕೆ ಹೋಗಿ ಬಂದಿದ್ದ. ಎರಡೂ ಬಾರಿ ನನ್ನನ್ನು ಕರೆದಿದ್ದ. ನನಗೆ ಹೋಗಲಾಗಿರಲಿಲ್ಲ. ನಾನಿಲ್ಲದ್ದರಿಂದ ತಂಡಕ್ಕೆ ಸಖತ್ ಎಂಜಾಯ್ ಮಾಡಲು ಸಾಧ್ಯವಾಗಿತ್ತು!
ಆದರೆ ನಕಲಿಶ್ಯಾಮನನ್ನು ಪದೇ ಪದೇ ಏಕಾಕಿತನ ಕಾಡುತ್ತಿತ್ತು. ಅವನು ನನಗೆ ಆಗಾಗ ಜಂಗಮ ಸಂದೇಶ ರವಾನಿಸುತ್ತಿದ್ದ. ನನ್ನಿಂದ ಉತ್ತರ ಹೋಗದಿದ್ದರೆ ಏನನ್ನೋ ಕಳಕೊಂಡವನಂತೆ ಆಡುತ್ತಿದ್ದ.
‘ನನಗೆ ಎಷ್ಟು ಶಿಷ್ಯರಿದ್ದಾರೆ ಗೊತ್ತಾ ಕಮಲಾಕ? ಅವರ ಎಸ್ಸೆಮ್ಮೆಸ್ಸುಗಳಿಗೆಲ್ಲಾ ಉತ್ತರಿಸಲು ನನ್ನ ಇಡೀ ಆಯಸ್ಸು ಸಾಲಲ್ಲ. ನನಗೆ ಬೇರೆ ಕೆಲ್ಸ ಇಲ್ಲ ಅಂದ್ಕೂಂಡಿದ್ದೀಯಾ?’ ಎಂದು ಎದುರು ಸಿಕ್ಕಾಗ ಕೇಳಿದೆ.
‘ನನಗೆ ಗೊತ್ತು ಸರ್. ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದೀನಿ. ಜಲಲ ಜಲಲ ಜಲಧಾರೆ ಬ್ಯಾಚು ಒಟ್ಟಾಗಿ ಇಲ್ಲೇ ಹತ್ತಿರ ಎಲ್ಲಿಗಾದರೂ ಹೋಗಿ ಬರೋಣ ಸರ್. ಕಳೆದೆರಡು ಪರ್ವತಾರೋಹಣದಲ್ಲಿ ನಿಮ್ಮನ್ನು ನಾವು ಮಿಸ್ಸ್ ಮಾಡ್ಕೂಂಡ್ವಿ.’
ಹಾಗೆ ಸಿದ್ಧಗೊಂಡಿತು ಕೋಳಿಕೆ ಮಲೆ ಚಾರಣ ಕಾರ್ಯಕ್ರಮ.
ಅದು ಕೊಡಗಿನ ಬೆಟ್ಟ!
ಸುಳ್ಯದಿಂದ ಅರಂತೋಡಿಗೆ ಹೋಗುವಾಗ ಬಲಬದಿಯಲ್ಲಿ ಪೆರಾಜೆ ಬಳಿ ಕಾಣ ಸಿಗುತ್ತದೆ ಚೆಲುವಿನ ಕೋಳಿಕೆ ಮಲೆ. ದೂರದ ಬೆಟ್ಟ ನುಣ್ಣಗೆ! ಸುಳ್ಯ ಮತ್ತು ಅರಂತೋಡು ದಕಿಣ ಕನ್ನಡ ಜಿಲ್ಲೆಯ ಪ್ರದೇಶಗಳು. ಅವುಗಳ ಮಧ್ಯದಲ್ಲಿರುವ ಪೆರಾಜೆ ಕೊಡಗಿನ ಗ್ರಾಮ. ಯಾವ ಬೃಹಸ್ಪತಿ ಅದನ್ನು ಯಾವಾಗ, ಯಾಕಾಗಿ ಕೊಡಗಿಗೆ ಸೇರಿಸಿದನೊ? ಅಲ್ಲಿರುವುದು ದಕಿಣ ಕನ್ನಡದ ಭೂತಾರಾಧನೆ ಮತ್ತು ಯಕಗಾನ ಸಂಸ್ಕೃತಿ. ಬಹುತೇಕರ ಆಡುನುಡಿ ಅಮರ ಸುಳ್ಯದ ಇಂಟರ್ ನ್ಯಾಶನಲ್ ಲ್ಯಾಂಗ್ವೇಜ್ ಅರೆಭಾಷೆ. ಆದರೂ ಪೆರಾಜೆ ಕೊಡಗಿನದ್ದು!
ಪೆರಾಜೆಯಲ್ಲಿ ಒಂದು ಶಾಸ್ತಾವೇಶ್ವರ ದೇವಾಲಯವಿದೆ. ಅಲ್ಲಿನ ವರ್ಷಾವಧಿ ಜಾತ್ರೆಯಲ್ಲಿ ನೂರಕ್ಕೂ ಹೆಚ್ಚು ದೈವಗಳ ಸೇವೆ ನಡೆಯುತ್ತದೆ. ಅವೈದಿಕ ಸಂಸ್ಕೃತಿಯ ಅಧ್ಯಯನಕಾರರಿಗೆ ಅಲ್ಲಿ ಸಂಶೋಧನೆಗೆ ಎಂದೂ ಮುಗಿಯದಷ್ಟು ವಿಷಯಗಳಿವೆ.
ಪೆರಾಜೆಕುಂಬಳಚ್ಚೇರಿ ಒಂದು ಕಾಲದಲ್ಲಿ ಯಕಗಾನ ಕಲಾವಿದರ ಜೇನುಗೂಡು. ಕುಂಬಳಚ್ಚೇರಿ ಕುಶಾಲಪ್ಪಣ್ಣ ಯಕಗಾನ ವೇಷಭೂಷಣವನ್ನು ಈಗಲೂ ಬಾಡಿಗೆಗೆ ಒದಗಿ ಸುತ್ತಾರೆ. ಅವರು ಮತ್ತು ಪೆರಾಜೆಯ ಒಂದಷ್ಟು ಸಾಹಸಿಗಳು ಕೆಲವು ವರ್ಷಗಳ ಕಾಲ ಪೆರಾಜೆ ಯಕಗಾನ ಮೇಳವೊಂದನ್ನು ಕಟ್ಟಿ ತಿರುಗಾಟ ನಡೆಸಿದ್ದರು. ಈಗಲೂ ಅಲ್ಲಿ ಸಾಕಷ್ಟು ಯಕಗಾನ ಕಲಾವಿದರಿದ್ದಾರೆ. ಆದರೂ ಪೆರಾಜೆ ಕೊಡಗಿನಲ್ಲಿದೆ!
ಪೆರಾಜೆಯ ನಿಡ್ಯಮಲೆ ಕುಟುಂಬ, ಕೋಡಿ ಕುಟುಂಬದ ಸಾಧನೆ ಈ ಭಾಗದ ಜನರಿಗೆ ಎಂದೆಂದೂ ಮಾಸದ ನೆನಪು. ಭಾಷಾ ಶಾಸ್ತ್ರಜ್ಞರಾಗಿ ಚೆನ್ನೈಯಲ್ಲಿ ಹೆಸರು ಗಳಿಸಿದ ಕೋಡಿ ಕುಶಾಲಪ್ಪ ಗೌಡರು ಮತ್ತು ಬೆಂಗಳೂರಲ್ಲಿ ಖ್ಯಾತಿ ಪಡೆದ ಈ ರಾಧಾಕೃಷ್ಣ ಪೆರಾಜೆಗೆ ಸೇರಿದವರು. ನಾನು ಬಹು ನಿರೀಕ್ಷೆ ಇಟ್ಟುಕೊಂಡಿರುವ ಕುಂದಲಪಾಡಿ ನಾಗೇಶ ಮತ್ತು ನಿಡ್ಯಮಲೆ ಜ್ಞಾನೇಶ ಈ ಊರಿನವರು. ಶೈಕಣಿಕ ಕಾರಣಕ್ಕಾಗಿ ನನ್ನ ಮೆಚ್ಚುಗೆ ಪಡೆದ ಜ್ಯೋತಿ ಹೈಸ್ಕೂಲು, ಲಗೋರಿಯನ್ನು ರಾಷ್ಟ್ರೀಯ ಕ್ರೀಡೆಗಳ ಸಾಲಲ್ಲಿ ಸೇರಿಸಿದ ಜ್ಯೋತಿ ಹೈಸ್ಕೂಲಿನ ಬರೆಮೇಲು ದೊಡ್ಡಣ್ಣ ಮತ್ತವನ ಸಹೋದ್ಯೋಗಿಗಳು ಯಾವ ಕಾರಣಕ್ಕೂ ಭತ್ತ ಬೆಳೆಸುವುದನ್ನು ಕೈ ಬಿಡದ ಕಾರಣಕ್ಕೆ ನಾನು ತುಂಬಾ ಪ್ರೀತಿಸುವ ಬಂಗಾರು ಕೋಡಿಯ ರೈತ ಗಡಣಇಲ್ಲೇ ಆಸುಪಾಸಿನಲ್ಲಿದೆ. ಆದರೆ ಪೆರಾಜೆ ಕೊಡಗಿನಲ್ಲಿದೆ!
ಕೋಳಿಕೆ ಮಲೆಗೊಂದು ರೋಪ್ ವೇ
ಕೋಳಿಕೆ ಮಲೆಗೆ ಚಾರಣ ಹೋಗಿ ಬರುವುದು ಬಹಳ ಸರಳ ಮತ್ತು ಸುಲಭ. ಮಲೆಯ ಬುಡದಲ್ಲಿ ಒಂದು ಸರಕಾರೀ ಶಾಲೆಯಿದೆ. ಅಲ್ಲಿಯ ವರೆಗೆ ರಸ್ತೆ ಸಂಪರ್ಕವಿದೆ. ಅಲ್ಲಿಂದ ಮೂರು ಕಿ.ಮೀ. ನಡೆದರೆ ನಾವು ಕೋಳಿಕೆ ಮಲೆಯ ತುದಿಯಲ್ಲಿರುತ್ತೇವೆ.
ನಕಲಿಶ್ಯಾಮನ ಮಹತ್ವಾಕಾಂಕ್ಷೆ ಈಡೇರಿಸಲೆಂದು ಹದಿನಾರು ಮಂದಿ ಪಡ್ಡೆಗಳು ಅಂದು ಸುಳ್ಯದಲ್ಲಿ ಸೇರಿದ್ದರು. ಬೆಳಿಗ್ಗೆ ನಾನು ಅವರನ್ನು ಕೂಡಿಕೊಂಡೆ. ಜೀಪು ಪೆರಾಜೆ ಹಾದಿ ಹಿಡಿದಾಗ ಎಂದಿನಂತೆ ಹಾಸ್ಯದ ಹೊನಲು ಹರಿಯ ತೊಡಗಿತು. ಅವರೀಗ ನನ್ನ ಮಾಜಿ ವಿದ್ಯಾರ್ಥಿಗಳು. ಹಾಜರಿಯ ಅಂಕೆಯಿಲ್ಲದ ಇಂಟರ್ನಲ್ ಮಾರ್ಕಿನ ಶಂಕೆಯಿಲ್ಲ! ‘ಈ ನಕ್ಲೀಶ್ಯಾಮ ರಾತ್ರಿಯಿಡೀ ವಿ ಚ್ಯಾನಲ್ ನೋಡಿ ನಮ್ಮೆಲ್ಲರ ನಿದ್ದೆ ಕೆಡಿಸಿದ ಸರ್’ ಎಂದು ವಶಿಷ್ಠ ದೂರು ಹೇಳಿದ.
ನಾವು ಕೋಳಿಕೆ ಮಲೆಯ ಬುಡಕ್ಕೆ ತಲುಪಿದಾಗ ಇನ್ನೂ ಒಂಬತ್ತು ಗಂಟೆ. ಜೀಪನ್ನು ಸುಳ್ಯಕ್ಕೆ ಹೋಗಗೊಟ್ಟು ನಾವು ಮಲೆ ಏರ ತೊಡಗಿದವು. ನಮ್ಮೆಲ್ಲರ ಬ್ಯಾಗುಗಳಲ್ಲಿ ತಿಂಡಿಗಳಿದ್ದವು. ಬಾಟಲಿಗಳು ನೀರಿನಿಂದ ಭರ್ತಿಯಾಗಿದ್ದವು.
ಕೋಳಿಕೆ ಮಲೆಯ ಎಲ್ಲಾ ಮರಗಳು ನಿರ್ನಾಮವಾಗಿಲ್ಲ. ಒಂದು ಕಾಲದಲ್ಲಿ ಪೆರಾಜೆ, ಕುಂಬಳ ಚೇರಿ, ನಿಡ್ಯಮಲೆ ಎಲ್ಲವೂ ದಟ್ಟಾರಣ್ಯ ಪ್ರದೇಶವಾಗಿದ್ದವು. ಕೃಷಿ ಸಂಸ್ಕೃತಿ ವಿಸ್ತರಣ ಅರಣ್ಯಗಳನ್ನು ನಾಶ ಮಾಡಿ ಹಾಕಿತು. ಆಗ ಭತ್ತ ಬೆಳೆಯುತ್ತಿದ್ದುದರಿಂದ ಊರು ಆಹಾರದ ವಿಷಯದಲ್ಲಿ ಸ್ವಾವಲಂಬಿಯಾಗಿತ್ತು. ಆಟಿ ಕಳೆಂಜ, ಹೊಸ ಅಕ್ಕಿ ಊಟ, ಮನೆ ತುಂಬಿಸುವುದು, ಸುಗ್ಗಿ ಹುಣ್ಣಿಮೆ, ಸಿದ್ಧ ವೇಷ, ಬಿಸು ಕಣಿ ಎಂದು ವರ್ಷವಿಡೀ ಸಾಂಸ್ಕೃತಿಕ ಸಂಭ್ರಮವಿತ್ತು. ಭತ್ತ ಹೋಗಿ ಅಡಿಕೆ ಬಂತು. ಕಾಡು ಹೋಗಿ ರಬ್ಬರು ಬಂತು. ಊರು ಆಹಾರಕ್ಕಾಗಿ ಬೇರೆ ಊರುಗಳನ್ನು ಅವಲಂಬಿಸಬೇಕಾಗಿ ಬಂತು. ಇದು ಕೊಡಗಿಗೆ ಸೇರಿದ ಪ್ರದೇಶ. ಯಾರು ಬೇಕಾದರೂ ಕೋವಿ ಇಟ್ಟುಕೊಳ್ಳಬಹುದು. ಅರಣ್ಯಗಳನ್ನು ರಬ್ಬರ್‌ಗಾಗಿ ಕಡಿದಾಗ ಅಳಿದುಳಿದ ಮೃಗ ಪಕ್ಷಿಗಳು ಕೋವಿಗಳಿಗೆ ಬಲಿಯಾದವು. ಈಗ ಕೋಳಿಕೆ ಮಲೆಯಲ್ಲಿ ವಸಂತದಲ್ಲೂ ಹಾಡಲು ಕೋಗಿಲೆಗಳಿಲ್ಲ, ಕುಣಿಯುವ ಜಿಂಕೆ, ಬರಿಂಕ, ಕಡವೆಗಳಿಲ್ಲ! ವಸಂತದ ಮೊದಲ ಮಳೆಗೆ ಗರಿಬಿಚ್ಚಿ ನರ್ತಿಸುವ ನವಿಲುಗಳಿಲ್ಲ. ಬೇಸಿಗೆ ಬಂತೆಂದರೆ ಜಾನಪದ ವಿಜ್ಞಾನಿಗಳಾಗಿ ರೂಪಾಂತರಗೊಳ್ಳುವವರಿಗೆ ಕೊರತೆಯಿಲ್ಲ. ಊರು ಜೀವ ವೈವಿಧ್ಯಕ್ಕೆ, ಸಾಂಸ್ಕೃತಿಕ ಬಹುತ್ವಕ್ಕೆ ಎರವಾಗಿ ವ್ಯಾಪಾರ ಸಂಸ್ಕೃತಿಗೆ ಬಲಿ ಯಾಗಿ ಜೀವನದ ಸ್ವಾರಸ್ಯವನ್ನೇ ಕಳಕೊಂಡುಬಿಟ್ಟಿದೆ. ಮನುಷ್ಯರು ದುಡ್ಡು ಗಳಿಸುವ ಯಂತ್ರಗಳಾಗಲು ಹವಣಿಸುತ್ತಿದ್ದಾರೆ.
‘ಮೃಗಗಳಿಲ್ಲದ, ಹಕ್ಕಿಗಳ ಕೂಜನ ಕೇಳದ ಕಾಡುಗಳನ್ನು ಮೃತ ಅರಣ್ಯಗಳೆಂದು ಕರೆಯುತ್ತೇವೆ’ ಎಂದೆ ನಾನು.
‘ನಮ್ಮ ಮಕ್ಕಳ ಕಾಲಕ್ಕೆ ಈ ಅರಣ್ಯವೂ ಇರುವುದಿಲ್ಲ’ ಎಂದು ಪಾವನ ಕೃಷ್ಣ ವಿಷಾದಿಸಿದ.
ನಾವೀಗ ಕೋಳಿಕೆ ಮಲೆ ಬೆಟ್ಟದ ತುದಿಯಲ್ಲಿದ್ದೆವು. ಅಲ್ಲಿ ಎತ್ತರದ ಮುಳಿಹುಲ್ಲು ಬೆಳೆದು ನಿಂತಿತ್ತು. ‘ಯಾವ ದುರಾತ್ಮರು ಇದಕ್ಕೆ ಯಾವಾಗ ಬೆಂಕಿ ಕೊಡುತ್ತಾರೊ?’ ಎಂದು ನಕಲಿ ಶ್ಯಾಮ ಬೇಗುದಿ ತೋಡಿಕೊಂಡ. ಅಲ್ಲಿ ಗಿಡ ಮರಗಳಿರಲಿಲ್ಲ. ಬೋಳು ಗುಡ್ಡೆಯ ತಲೆಯಲ್ಲೇ ಪಡ್ಡೆ ತಂಡ ಅಂದು ನಾಟಿಕಲ್ಲಿನಲ್ಲಿ ಆಡಿದ ಆಟಗಳನ್ನು ಆಡಿದರು. ಏನೇ ಆದರೂ ಚರಿತ್ರೆಯನ್ನು ಪುನರಾವರ್ತಿಸುವುದು ಕಷ್ಟವೇ!
ಕೋಳಿಕೆ ಮಲೆ ಅರಂತೋಡು ಮತ್ತು ಕೇರಳದ ಮಧ್ಯದಲ್ಲಿದೆ. ನಮ್ಮ ಪ್ರವಾಸೋದ್ಯಮ ಇಲಾಖೆ ಮನಸ್ಸು ಮಾಡಿದರೆ ಅರಂತೋಡಿನಿಂದ ಒಂದು ಕೇಬಲ್ ಕಾರ್ ವ್ಯವಸ್ಥೆ ಕೋಳಿಕೆ ಮಲೆಗೆ ಮಾಡಬಹುದು. ಜನರಿಗೆ ಒಂದು ಬದಲಾವಣೆ ಮತ್ತು ಸರಕಾರಕ್ಕೆ ಆದಾಯ. ಪರಿಸರಕ್ಕೆ ಒಂದಿನಿಂತೂ ಧಕ್ಕೆ ಬಾರದ ರೀತಿಯಲ್ಲಿ ಗುಹೆಗಳನ್ನು, ಬೆಟ್ಟ ಗುಡ್ಡಗಳನ್ನು, ನದಿಗಳನ್ನು ಹೇಗೆ ಪ್ರವಾಸೀ ಆಕರ್ಷಣೆಯ ಕೇಂದ್ರಗಳನಾನಗಿ ಮಾಡಬಹುದು ಎಂಬುದನ್ನು ನಾವು ಫ್ರಾನ್ಸ್ ನಂತಹ ಪುಟ್ಟ ದೇಶಗಳಿಂದ ಕಲಿಯಬೇಕು. ನಮ್ಮ ಶಾಸಕ, ಸಂಸದ, ಮಂತ್ರಿಗಳು ಸುಸ್ಥರ ಅಭಿವೃದ್ಧಿಯ ಯೋಚನೆ ಯಾಕೆ ಮಾಡುವುದಿಲ್ಲವೊ?
ಇಲ್ಲೊಂದು ಜಲಪಾತ
ಕೋಳಿಕೆ ಮಲೆಯಲ್ಲಿ ಬಿಸಿಲು ಅತಿಯಾದಾಗ ಕೆಳಗಿಳಿದೆವು. ಅಲ್ಲಿಂದ ಮತ್ತೆ ಎರಡು ಕಿ.ಮೀ. ಪಯಣಿಸಿ ನಿಡ್ಯಮಲೆ ಜಲಪಾತವನ್ನು ನೋಡಿದೆವು. ನೀರೇನೋ ತಣ್ಣಗಿತ್ತು. ಆದರೆ ಕಡಿದಾದ ಬಂಡೆಗಳು. ದೇವರಗುಂಡಿ, ಬಾಣ, ಅರ್ಬಿ, ಲೈನ್ಕಜೆ, ಕಲ್ಲಾಳದ ಜಲಪಾತಗಳ ಸೊಬಗು ಇದಕ್ಕಿಲ್ಲ. ಆದರೂ ನಾವು ಜಲಪಾತಕ್ಕಿಳಿದು ತಣ್ಣನೆಯ ನೀರಲ್ಲಿ ಒಂದಷ್ಟು ಹೊತ್ತು ಕಳೆದೆವು. ನಾನು ಎರಡು ಬಾರಿ ಕಾಲು ಜಾರಿ ಬಿದ್ದೆ. ಒಮ್ಮೆ ನನ್ನ ತಲೆ ಬಂಡೆಗೆ ಬಡಿಯುವುದು ಸ್ವಲ್ಪದರಲ್ಲಿ ತಪ್ಪಿತು.
ನಾವು ಹಿಂದಿರುಗುವಾಗ ನನ್ನ ಎಡಗಾಲು ಕೋಸಿದಂತಾಗಿ ಬಿದ್ದುಬಿಟ್ಟೆ. ಪಡ್ಡೆ ಹುಡುಗರ ತಂಡ ನನ್ನನ್ನು ಎತ್ತಿ ಕರುಣೆಯಿಂದ ಕೇಳಿತು.
‘ಏನಾಗುತ್ತಿದೆ ಸರ್ ನಿಮಗೆ?’
‘ಎಲ್ಲೋ ರಕ್ತ ಸಂಚಾರದ ಸಮಸ್ಯೆ ಇರಬೇಕು. ಐವತ್ತು ಕಳೆದ ಮೇಲೆ ನಾವು ಯಾವುದಕ್ಕೂ ಚಿಂತಿಸಬಾರದು.’
ತಂಡದವರು ಮತ್ತೆ ಮಾತಾಡಲಿಲ್ಲ.
ನಾವು ಸುಳ್ಯಕ್ಕೆ ವಾಪಾಸಾಗುವಾಗ ತಂಡದವರಿಗೆ ಹೊಟ್ಟೆ ತುಂಬಾ ಎಳನೀರು ಕುಡಿಸಿದೆ.
‘ನಿಮ್ಮ ಹೊಟ್ಟೆ ತಣ್ಣಗಿರಲಿ’ ಎಂದು ಅವರು ಹಾರೈಸಿದರು.
ನನ್ನನ್ನು ಬೀಳ್ಗೊಟ್ಟರು.