ಆಫ್ರಿಕಾ

ಕತ್ತಲೆಯ ಖಂಡ ಎನಿಸಿಕೊಂಡಿದ್ದ ಆಫ್ರಿಕಾ ಬೆಳಕಿಗೆ ಬಂದದ್ದು ಯುರೋಪಿನ ಸಾಹಸಿಗಳು ಅನ್ವೇಷಣೆ ಮಾಡಿದ ನಂತರವೇ  ಎಂದು ಹೇಳಬಹುದು. ತಾಂಜಾನಿಯಾದ ಮಹಾಕಣಿವೆ ಗ್ರೇಟ್ ರಿಫ್ಟ್‌ವ್ಯಾಲಿಯಲ್ಲಿ ಕಂಡು ಬಂದಿರುವ ಪುರಾತನ ಅವಶೇಷಗಳಿಂದ ಈ ಖಂಡದಲ್ಲೇ ಮಾನವಕುಲ ಪ್ರಾರಂಭವಾಯಿತೆಂದು ತಿಳಿದು ಬರುತ್ತದೆ. ಪ್ರಪಂಚದ ಅತಿದೊದ್ದ ಮರುಭೂಮಿ ಸಹಾರಾ ಇಲ್ಲಿದೆ. ಇಜಿಪ್ತಿನ ಮರುಭೂಮಿಗೆ ಸಹಸ್ರಾರು ವರ್ಷಗಳಿಂದ ನೀರುಣಿಸುತ್ತಿರುವ ನೈಲ್ ನದಿ ಇಲ್ಲಿದೆ. ಜಗದ್ವಿಖ್ಯಾತವಾದ ಅತ್ಯಂತ ರಮಣೀಯವಾದ ವಿಕ್ಟೋರಿಯವ ಜಲಪಾತ ಇಲ್ಲಿದೆ. 53 ದೇಶಗಳನ್ನೊಳಗೊಂಡ ಅಫ್ರಿಕಾ ಖಂದ ಇದಾಗಿದ್ದರೂ ನಮಗೆ ಥಟ್ಟನೆ ಕಣ್ಣಿಗೆದುರಾಗುವುದು ದಕ್ಷಿಣ ಅಫ್ರಿಕಾ ದೇಶ. ಕಾರಣ ನಮ್ಮ ಮೋಹನದಾಸ ಕರಮಚಂದ ಗಾಂಧಿ ತಮ್ಮ ಸತ್ಯಾಗ್ರಹ ಚಳುವಳಿಯನ್ನು ಪ್ರಾರಂಭಿಸಿದ್ದು ಮೊದಲು ಇಲ್ಲಿಯೇ ಎಂಬುದಕ್ಕಾಗಿ. ಯುರೋಪಿನ ಸಾಹಸಿ ಅನ್ವೇಷಣಕಾರರಿಗೆ ದಕ್ಷಿಣ ಆಫ್ರಿಕಾದ ಬಂಗಾರ ಮತ್ತು ವಜ್ರದ ನಿಕ್ಷೇಪ ಅಕರ್ಷಣೆಯಾಗಿ ಸುಮಾರು 17ನೆಯ ಶತಮಾನದಲ್ಲಿ ಇಲ್ಲಿ ನೆಲೆಯೂರಿದ್ದು ಕಂಡು ಬರುತ್ತದೆ.

ಅಫ್ರಿಕಾ ಖಂಡದ ಅನೇಕ ದೇಶಗಳು ಯೂರೋಪಿಯನ್ನರು ಬರುವುದಕ್ಕಿಂತ ಮೊದಲು ಸ್ಥಳೀಯ ಸಾಮ್ರಾಜ್ಯಗಳಿಂದ ಸಮೃದ್ಧವಾಗಿಯೇ ಇದ್ದವು. 15ನೆಯ ಶತಮಾನದಲ್ಲಿ ಯುರೋಪದ ಅನ್ವೇಷಣಾಕಾರರು ಅಲ್ಲಲ್ಲಿ ದೇಶಗಳನ್ನು ವಶಪಡಿಸಿಕೊಳ್ಳುತ್ತ ಅವರ ಸಂಪತ್ತನ್ನು ಸೂರೆಗೊಳ್ಳುತ್ತ ಅವರನ್ನು ಗುಲಾಮರನ್ನಾಗಿ ಮಾಡಿಕೊಂಡು ಯೂರೋಪು ಅಮೆರಿಕಗಳಿಗೆ ರವಾನಿಸುತ್ತ ಹಾಯಾಗಿರತೊಡಗಿದ್ದರು. ಬಿಳಿಯರ ಶ್ರೇಷ್ಠತೆ ಎತ್ತಿ ಹಿಡಿದು ಕರಿಯ ಜನಾಂಗದವರನ್ನು ನಿರ್ದಿಷ್ಟ ಸ್ಥಳಗಳಲ್ಲಿ ವಾಸಿಸುವಂತೆ ನಿರ್ಬಂದಿಸಿದ್ದಲ್ಲದೆ ಅವರಿಗೆ ಯಾವ ನಾಗರಿಕ ಹಕ್ಕುಗಳೂ ಇಲ್ಲದಂತೆ ಮಾಡಿದರು. ಇದೇ ಸಂದರ್ಭದಲ್ಲಿ ಅಫ್ರಿಕಾದ ಟ್ರಾನ್ಸ್‌ವಾಲ್ ಸಕ್ಕರೆ ಉದ್ಯಮಕ್ಕೆ ಕೂಲಿಕಾರರು ಇನಷ್ಟು ಬೇಕಾದುದರಿಂದ ಭಾರತ ಸರಕಾರದೊಡನ ಒಪ್ಪಂದ ಮಾಡಿಕೊಂಡು ಕೆಲಸಗಾರರನ್ನು ಕರೆಸಿಕೊಂಡಿದ್ದರು. ಆದರೆ ಅವರ ಯೋಗ ಕ್ಷೇಮದ ಬಗೆಗೆ ಬ್ರಿಟಿಷರು ಗಮನ ಕೊಡದೇ ಇದ್ದುದರಿಂದ ಅಸಮಾಧಾನ ಉಂಟಾಯಿತು. ಈ ಸಮಯದಲ್ಲಿಯೇ ಗಾಂಧೀಜಿಯವರು ಇಲ್ಲಿ ವಕೀಲಿವೃತ್ತಿ ನಡೆಸಲು ಬಂದರು. ಬ್ರಿಟಿಷ್ ಸರಕಾರದ ವಿರುದ್ದ ಸತ್ಯಾಗ್ರಹ ನಡೆಸಿದರು. ಈ ತರಹದ ಪ್ರದರ್ಶನ ಸ್ಥಳೀಯ ಕರಿಯರಿಗೂ ಪ್ರಭಾವ ಬೀರಿತು. ಅವರೂ ತಮ್ಮ ದೇಶದ ಸ್ವಾತಂತ್ರಕ್ಕಾಗಿ ಹೋರಾಡಿದರು. ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ ನೆಲ್ಸನ್ ಮಂಡೇಲಾರ ನಾಯಕತ್ವದಲ್ಲಿ ಹೋರಾಟ ಪ್ರಾರಂಬಿಸಿತು. ಬ್ರಿಟಿಷರು ನೆಲ್ಸನ್ ಮಂಡೇಲಾರ ಮೇಲೆ ಸುಳ್ಳು ಅಪಾದನೆ ಹೊರೆಸಿ ಅವರನ್ನು 28 ವರ್ಷಗಳು ಜೈಲಿನಲ್ಲಿ ಇಟ್ಟರು. 1991ರಲ್ಲಿ ಅವರ ಬಿಡುಗಡೆಯಾಗಿ ದೇಶ ಸ್ವತಂತ್ರಗೊಂಡಿತು. 1994ರಲ್ಲಿ ದಕ್ಷಿಣ ಆಫ್ರಿಕಾದ ಮೊದಲ ರಾಷ್ಟ್ರಪತಿಯಾದರು. ನೊಬೆಲ್ ಶಾಂತಿ ಪುರಸ್ಕಾರ ಪಡೆದರು.

ಇನ್ನುಳಿದ ಅಫ್ರಿಕಾದ ದೇಶಗಳಿಗೂ ಒಂದೊಂದು ಇತಿಹಾಸವೇ ಇದೆ. ಅಲ್ಲಿ ಪ್ರವಾಸಕ್ಕೆಂದೇ ಯಾರೂ ಹೋದದ್ದಿಲ್ಲ. ಯಾವುದಾದರೊಂದು ಕೆಲಸದ ಮೇಲೆ ಭಾರತ ಸರಕಾರ ಕಳಿಸಿದವರು ಮಾತ್ರ ಹೋಗಿದ್ದಾರೆ. ಅಲ್ಲಿಗೆ ಹೋಗಿ
ಬಂದ ಕೆಲವೇ ಬೆರಳೆಣಿಕೆಯ ಕನ್ನಡಿಗರು ತಮ್ಮ ಅನುಭವವನ್ನು ಬರೆದಿದ್ದಾರೆ. ಯುರೋಪು ಅಮೆರಿಕದ ಬಗೆಗೆ ನೂರಾರು ಪ್ರವಾಸ ಪುಸ್ತಕಗಳು ಇದ್ದಷ್ಟು ಅಫ್ರಿಕಾದ ಬಗೆಗೆ ಇಲ್ಲವೇ ಇಲ್ಲ. ಅಬ್ಬಬ್ಬಾ ಎಂದರೆ 4 ಅಥವಾ 5 ಕೃತಿಗಳಿವೆ
ಅಷ್ಟೇ. ಟಿ.ಆರ್.ನಾಗಪ್ಪ(ಅಫ್ರಿಕದ ಒಂದು ನೋಟ) ಎನ್.ಭದ್ರಯ್ಯನವರ (ಕ್ಯಾಮರೂನ್ ಬಣಗಳ ನಡುವೆ) ಮನು ಅವರ (ಈಜಿಪ್ತ ಪ್ರವಾಸ, ಸುಧಾ ಪತ್ರಿಕೆಯ ಧಾರಾವಾಹಿ) ದೇ. ಜವರೇಗೌಡರ(ಆಫ್ರಿಕಾ  ಪತ್ರಿಕೆಗಳ ಮುಖಾಂತರ ಪ್ರೊ.ಭಾಸ್ಕರ್‌ರಾವ್, ಎ.ಪಿ.ಎಸ್. ಅರಸು ಮತ್ತು ಸಿ.ನಾಗಣ್ಣ ಅವರ ವಿಶೇಷ ಲೇಖನಗಳು. ಇನ್ನೂ ವಿವರವಾಗಿ ಪೂರ್ಣಚಂದ್ರ ತೇಜಸ್ವಿಯವರ ದೇಶ ವಿದೇಶ ಪುಸ್ತಕಗಳ ಮುಖಾಂತರ ಒಂದಿಷ್ಟು ತಿಳಿದುಕೊಳ್ಳಬಹುದಾಗಿದೆ.

ಟಿ.ಆರ್‌.ನಾಗಪ್ಪನವರ ‘ಅಫ್ರಿಕದ ಒಂದು ನೋಟ’ ಪ್ರವಾಸ ಕೃತಿ ಆಫ್ರಿಕದ ಬಗೆಗೆ ಅನೇಕ ವಿಷಯಗಳು  ತಿಳಿಸಿಕೊಡುತ್ತದೆ. ಅವರು ಭಾರತ ಸರಕಾರದ ಮುಖಾಂತರ ಅಲ್ಲಿಗೆ ಹೋಗಿದ್ಧಾರೆ.

ಆಫ್ರಿಕದ ಪೂರ್ವ ತೀರದ ಪ್ರದೇಶಗಳೊಂದಿಗೆ ಭಾರತದ ಪಶ್ಚಿಮ ಪ್ರದೇಶಗಳ ವ್ಯಾಪಾರ ಸಂಬಂಧ ಕ್ರಿ.ಶ. ಪೂರ್ವದಿಂದಲೂ ಉತ್ತಮವಾಗಿಯೇ ಇತ್ತು. ಅರಬ್ ವ್ಯಾಪಾರಿಗಳು ದೋಣಿಗಳ ಮೂಲಕ ಆಫ್ರಿಕದಿಂದ ದಂತವನ್ನು
ಭಾರತಕ್ಕೆ ಒಯ್ಯುತ್ತಿದ್ದರು. ಭಾರತದಿಂದ ರೇಷ್ಮೆ ಮತ್ತು ಹತ್ತಿ ಬಟ್ಟೆಯನ್ನು ತರುತ್ತಿದ್ದರು. ಮೊಗಲ ರಾಜರ ಅಡಳಿತದಲ್ಲಿ ಅಫ್ರಿಕನ್ನರನ್ನು ಸೈನಿಕರನ್ನಾಗಿ ನೇಮಕ ಮಾಡಿಕೊಂಡ ಉದಾಹರಣೆ ಇದೆ. ಪಶ್ಚಿಮ ಬಂಗಾಳದಲ್ಲಿ (1474- 1495) ‘ಗಾರು’ ಎಂಬ ಮುಸಲ್ಮಾನ ದೊರೆಯ ಹತ್ತಿರ 8000 ಮಂದಿ ಆಫ್ರಿಕನ್ ಸೈನಿಕರು ಇದ್ದರು. ಅಫ್ರಿಕನ್ನರಂತೆಯೇ ಭಾರತೀಯರೂ ಪೂರ್ವ ಆಫ್ರಿಕದ ದೇಶಗಳಿಗೆ ಹೋಗಿ ನೆಲೆಸಿದ ಅನೇಕ ಉದಾಹರಣೆಗಳೂ ಸಿಗುತ್ತವೆ. 1807ರಲ್ಲಿ ಕೆನಿಯಾ ಉಗಾಂಡಾ ರೈಲು ಮಾರ್ಗ ಪ್ರಾರಂಭವಾದಾಗ ಬ್ರಿಟಿಷರು ಭಾರತದಿಂದ 25,000 ಮಂದಿ ಕುಶಲ ಕರ್ಮಿಗಳನ್ನು ಕರೆದುಕೊಂಡು ಹೋಗಿದ್ದರು. ಇದಕ್ಕೆ  ಮೊದಲು ಭಾರತೀಯ ವ್ಯಾಪಾರಿಗಳು ಸಮುದ್ರ ತೀರ ಪ್ರದೇಶದಲ್ಲಿ ನೆಲೆಸಿದ್ದರು. ಅಲ್ಲಿಯ ಕಬ್ಬು ಸಕ್ಕರೆ ಉದ್ಯಮಗಳಲ್ಲಿ ದುಡಿಯುತ್ತಿದ್ದರು ಎಂದು ವಿವರವಾಗಿ
ತಿಳಿಸಿರುವರು.

ಆಫ್ರಿಕಾದ ದೇಶಗಳು ಸ್ವಾತಂತ್ರ್ಯ ಪಡೆದಾಗ ಅಂತಹ ಅನುಕೂಲಕರ ಪರಿಸ್ಥಿತಿ ಇರಲಿಲ್ಲ. ಅವು ಹಿಂದುಳಿದಿದ್ದವು. ಅನೇಕ ಕಡೆಗೆ ಕ್ಷಾಮ. ರೋಗ ರುಜಿನಗಳು ತಲೆದೋರಿದ್ದವು. ವೃವಸಾಯ ಅಬಿವೃದ್ಧಿ ಕುಂಠಿತವಾಗಿತ್ತು. ಆಹಾರ
ಪದಾರ್ಥಗಳನ್ನು ಹೊರಗಿನಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ಇತ್ತು. ಇಂಥ ಪರಿಸ್ಥಿತಿಗಳು ತೀವ್ರವಾದಾಗ ಭಾರತ ಸರಕಾರ (ಇಂದಿರಾ ಗಾಂಧಿ ಸಮಯದಲ್ಲಿ) ತನ್ನ ನೆರವನ್ನು ನೀಡಿತು. ವ್ಯಾಪಾರ ಸಂಪರ್ಕ ಹೊಂದಿತು. ಭಾರತ ಆಫ್ರಿಕಾಕ್ಕೆ ಹತ್ತಿ  ಸೆಣಬು, ಔಷಧಿ ವಸ್ತುಗಳು, ಇಂಜಿನಿಯರಿಂಗ್ ಸಲಕರಣೆಗಳು, ಹೊಗೆಸೊಪ್ಪು ಮುಂತಾದವುಗಳನ್ನು ರಫ್ತು ಮಾಡುತ್ತಿದೆ. ಆಫ್ರಿಕದಿಂದ ಪಾಮ್ ಅಯಿಲ್, ಹತ್ತಿ, ತಾಮ್ರ, ತವರ, ಗೇರು ಬೀಜ, ಬೆಲೆಬಾಳುವ ವಜ್ರಗಳನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ. ಇಷ್ಟೇ ಅಲ್ಲದೆ ಭಾರತ ಸರಕಾರ ಅಲ್ಲಿಯ ಮುಖ್ಯ
ಕ್ಷೇತ್ರಗಳಿಗೂ ಸಹಕಾರ ನೀಡುತ್ತಿದೆ ಎನ್ನುತ್ತಾರೆ ನಾಗಪ್ಪನವರು.

ಅಫ್ರಿಕದ ಸಾಮಾಜಿಕ ವ್ಯವಸ್ಥೆಯ ಬಗೆಗೆ ಬಹಳ ಆಳವಾಗಿ ತಿಳಿಸಿಕೊಟ್ಟರುವರು. ಬಹಳಷ್ಟು ವರ್ಷಗಳು ಅವರು ಅಲ್ಲಿಯೇ ಇದ್ದುದರಿಂದ ಅಲ್ಲಿಯ ಸಾಮಾಜಿಕ ಪರಿಸರದಲ್ಲಿ ಗಮನ ಹರಿಸಿರುವುದರಿಂದ ಬಹು ಮುಖ್ಯವಾದ ವಿಷಯಗಳನ್ನು ಬರೆದಿದ್ದಾರೆ. ಅಫ್ರಿಕದಲ್ಲಿ ಬಹುಮಂದಿ ಗ್ರಾಮದಲ್ಲೇ ವಾಸಿಸುವವರಾಗಿದ್ದಾರೆ. ಆಫ್ರಿಕದ ಕೆಲವು ದೇಶಗಳು ವಜ್ರಗಳ ಗಣಿಗಳನ್ನೇ ಹೊಂದಿದ್ದರೂ ಅದೆಲ್ಲ ಅವರ ಕೈಗೆ ಸಿಗದೆ ಯುರೋಪಿಯನ್ನರ ಕೈವಶವಾಗುತ್ತ
ಹೋಗಿ ಇವರು ಬಡತನದಲ್ಲಿ ನರಳುವಂತಾಗಿದೆ.

ಅಫ್ರಿಕಾದ ಬುಡಕಟ್ಟುಗಳಲ್ಲಿ 16 ರಿಂದ 20 ವರ್ಷದ ಹುಡುಗಿಯರ ಮದುವೆ ಮಾಡುತ್ತಾರೆ. ಈ ಹುಡುಗಿ ಗಂಡನಿಗೆ ಮೊದಲನೆಯವಳೊ, ಎರಡು ಮೂರು ನಾಲ್ಕನೆಯವಳೋ ಆಗಿರಬಹುದು. ಗಂಡ 60 ವರ್ಷದವನೂ
ಇರಬಹುದಂತೆ. ಹುಡುಗಿಯನ್ನು ಮದುವೆಯಾಗಬೇಕಾದರೆ ವರ ಆ ಹುಡುಗಿಯ ತಂದೆಗೆ ‘ಗೋ’ ದಕ್ಷಿಣೆಯಾಗಿ ಕೊಡಬೇಕು. ಅವು 8 ರಿಂದ 10 ಅಥವಾ ಇನ್ನೂ ಹೆಚ್ಚಿರಬಹುದು. ಆಫ್ರಿಕಾದಲ್ಲಿ ಬಹಳಷ್ಟು ಮಕ್ಕಳನ್ನು ಹಡೆದ ತಾಯಿ ಮಹಾತಾಯಿ ಅನಿಸಿಕೊಳ್ಳುತ್ತಾಳಂತೆ. ಅಲ್ಲಿಯೂ ಮಂತ್ರ ತಂತ್ರಗಳಲ್ಲಿ ನಂಬಿಕೆ ಇರುವ ಜನರಿದ್ಧಾರಂತೆ.

18ನೆಯ ಶತಮಾನದಲ್ಲಿ ಯುರೋಪಿನ ಕ್ರೈಸ್ತ ಪಾದ್ರಿಗಳು ಅಫ್ರಿಕದಲ್ಲಿ ಕಾಲಿಟ್ಟು ಚರ್ಚುಗಳನ್ನು ಸ್ಥಾಪಿಸಿದರು. ಶಾಲೆ ಇತರ ತರಬೇತಿ ಕೇಂದ್ರಗಳು ನಿರ್ಮಾಣವಾದವು. ಮಿಷನರಿ ಶಾಲೆಗಳಲ್ಲಿ ಕೆಲಸ ಮಾಡಲು ಗುಮಾಸ್ತರ ತರಬೇತಿ
ಕೇಂದ್ರಗಳು, ಆಸತ್ರೆಯಲ್ಲಿ ಕೆಲಸ ಮಾಡಲು ದಾದಿಯರ ತರಬೇತಿ ಕೇಂದ್ರಗಳು ಆರಂಭವಾದವು ಎಂದು ವಿವರಣೆ ಕೊಡುವರು. 1978ರ ಹೊತ್ತಿಗೆ ಪ್ರಾಥಮಿಕ ಶಿಕ್ಷಣ ಕಡ್ಡಾಯ ಜಾರಿಗೆ ಬಂದರೂ ಪ್ರಮಾಣದಲ್ಲಿ ಕಡಿಮೆಯೇ ಇದೆ. ಅನೇಕ ಮಕ್ಕಳು ಬಡತನದ ಕಾರಣ ಸೆಕೆಂಡರಿ ಶಾಲೆಗಳಿಗೆ ಸೇರುವುದಿಲ್ಲ. ಶ್ರೀಮಂತ ವರ್ಗದವರಿಗೆ ವಸತಿ ಸೌಕರ್ಯ, ಒಳ್ಳೆಯ ಶಿಕ್ಷಣದ ಅನುಕೂಲತೆಗಳೆಲ್ಲ ಇವೆ ಎನ್ನುತ್ತಾರೆ ಲೇಖಕರು.

ತಾಂಜಾನಿಯಾದ ಖಿಲಿಮಂಜರೋ ಪರ್ವತದ ಬುಡದಲ್ಲಿ ವಾಸವಾಗಿರುವ ಮಸಾಯಿ ಬುಡಕಟ್ಟಿನವರ ಪರಿಚಯ ಮಾಡಿಕೊಡುತ್ತಾರೆ. ಮಸಾಯಿ ಜನರ ಸಂಪತ್ತು ಗೋ ಸಂಪತ್ತು. ಅಕಳು, ಒಂಟೆ, ಕುರಿಗಳ ಹಿಂಡೇ ಅವರ ಸುತ್ತೆಲ್ಲ.
ಮದುವೆಗಳಲ್ಲಿ ಕನ್ಯಾಶುಲ್ಕವಾಗಿ ಗೋವುಗಳನ್ನೇ ಕೊಡುವರು. ಇವರು ಸಾಹಸಿಗರು ಭೀಕರ ಪ್ರವೃತ್ತಿ ಉಳ್ಳವರು. ಕ್ರೋಧ ಉಂಟಾದರೆ ತನ್ನ ಕೈನಲ್ಲಿದ್ದ ಭರ್ಜಿ ಎದುರಾಳಿಯ ಎದೆಯನ್ನು ಸೀಳುವುದು. ಹೆಂಗಸರ ಕತ್ತು ಬಣ್ಣ ಬಣ್ಣದ
ಮಣಿಗಳಿಂದ ತಯಾರಿಸಿದ ಸರಗಳಿಂದ ಅಲಂಕೃತವಾಗಿರುತ್ತವೆ. ಅವರು ಧರಿಸುತ್ತಿದ್ದ ಸರ ಒಂದಲ್ಲ ಹತ್ತಾರು. ದೂರವಾಣಿಯ ಕಂಬದಿಂದ ತಗೆದ ತಾಮ್ರದ ತಂತಿಗಳಿಂದ ತಯಾರಿಸಿದ್ದು. ಅದರಿಂದ ಬಳೆಗಳನ್ನು ತಯಾರಿಸಿ ಕೈ ಕಾಲುಗಳಿಗೆ ಸುತ್ತಿಕೊಳ್ಳುತ್ತಾರೆ. ಮರದ ಬಿಲ್ಲೆಗಳು ಅವರ ಬೆಂಡೋಲೆ. ಕೆಲವು ಒಂದಡಿ ವ್ಯಾಸವುಳ್ಳವು. ಕೆಲವು ಲೋಹದಿಂದ ತಯಾರಿಸಿದ ಓಲೆಗಳು ಅವರ ಕಿವಿಯನ್ನು ಜಗ್ಗುತ್ತಿದ್ದವು ಎನ್ನುತ್ತಾರೆ ಲೇಖಕರು.

ದೇ. ಜವರೇಗೌಡರ ‘ಆಫ್ರಿಕಾ ಯಾತ್ರೆ’ ಪ್ರವಾಸ ಕೃತಿ. ಇದೊಂದು ಅಫ್ರಿಕದ ಬಗೆಗೆ ಹೆಚ್ಚೂ ಕಡಿಮೆ ಸಮಗ್ರವಾದ ಅಧ್ಯಯನದ ಕೃತಿ ಎಂದೇ ಹೇಳಬಹುದಾಗಿದೆ. ಅಫ್ರಿಕದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ, ಇತಿಹಾಸ,
ಭಾಷೆ, ಸಾಹಿತ್ಯಗಳನ್ನು ಕುರಿತು ಹೇಳಿದ್ದಾರೆ. ಅಫ್ರಿಕನ್ನರು ಹಿಂದಿನಿಂದಲೂ ದರ್ಪ. ದೌರ್ಜನ್ಯಗಳಿಗೆ ಗುರಿಯಾಗಿ ಜಗತ್ತಿನ ಯಾವ ರಾಷ್ಟವೂ ಅನುಭವಿಸದಷ್ಟು ಕಷ್ಟ ನಷ್ಟಗಳನುನ್ನು ಅನುಭವಿಸಿದ ಪರಿಚಯಕೊಡುತ್ತ, ಅದರೂ ಅತೃಂತ ಮೇಥಾವಿಗಳಾದ ಅವರು ತಮ್ಮ ಸಂಸ್ಕೃತಿಯನ್ನು ಉಳಿಸಿಕೊಂಡರು ಎನ್ನುವರು. ಸಂಸ್ಕೃತಿಯ ಅಂಗವಾದ ಜಾನಪದ ಸಂಪತ್ತು ಅಲ್ಲಿ ಅಪಾರವಾಗಿರುವುದನ್ನು ಕಂಡಿದ್ದಾರೆ. ಅಫ್ರಿಕದ ಯಾವ ಭಾಗಕ್ಕೆ ಹೋದರೂ ಜಾನಪದ ವಿಷಯಗಳು ಹೊರೆಹೊರೆಯಾಗಿ ಬಿದ್ದಿವೆ ಎನ್ನುವರು. ಗೀತ, ಸಂಗೀತ, ಕುಣಿತ, ಸಾಹಿತ್ಯ  ಅಪಾರವಾಗಿದೆಯಂತೆ. ಅಲ್ಲಿರುವಷ್ಟು ಜಾನಪದ ಸಂಗೀತಗಳು ಪ್ರಪಂಚದ ಬೇರೆ ಕಡೆ ಇಲ್ಲಿವೆಂದೇ ತೋರುತ್ತದೆ ಎನ್ನುತ್ತಾರೆ.

ಎ.ಪಿ.ಎಸ್‌.ಅರಸು ಅವರು ಸುಥಾದಲ್ಲಿ ಬರೆದ ‘ಆಫ್ರಿಕದ ಮೌಖಕ ಸಾಹಿತ್ಯ’ ಓದಿದಾಗ ಆಶ್ಚರ್ಯಪಡುವಂತಾಗುತ್ತದೆ. ಒಂದು ಲಿಪಿಯಾಗಲಿ, ಲಿಖಿತ ಸಾಹಿತ್ಯವಾಗಲಿ ಅಫ್ರಿಕದ ಜನರಿಗೆ ಬಹಳ ಕಾಲದವರೆಗೆ ತಿಳಿದಿರಲಿಲ್ಲ. ಅದರೆ ಲಿಪಿ ಅಥವಾ ಲಿಖಿತ ಸಾಹಿತ್ಯವಿಲ್ಲವೆಂದ ಮಾತ್ರಕ್ಕೆ ಅವರಲ್ಲಿ ಬಾಷೆ ಸಂಸ್ಕೃತಿ ನಾಗರಿಕತಗಳಿರಲಿಲ್ಲ ಎಂದು ಭಾವಿಸಿದರೆ ತಪ್ಪಾದೀತು. ಅಲ್ಲಿ ಅವರದೇ ಅದ ಪೀಳಿಗೆಯಿಂದ ಪೀಳಿಗೆಗೆ ಮುಖತಃ ಆಡುಮಾತಿನ ಇವರ ಸಾಹಿತ್ಯವು ಏನೆಲ್ಲ
ವಸ್ತು ವಿಷಯಗಳಮ್ನ ಒಳಗೊಂಡಿವೆಯೆಂದರೆ ಮನರಂಜನೆ, ಹಾಡು, ಕಥೆ, ವಿಡಂಬನೆ, ಗಾದೆ, ಒಗಟು ಇತ್ಯಾದಿಗಳು ಸೇರಿದೆ ಎನ್ನುತ್ತಾರೆ. ಜನಪದ ಹಾಡುಗಳು, ಜನಪದ ನೃತ್ಯಗಳು ಗೆಜ್ಜೆ ತಾಳಗಳೊಂದಿಗೆ ಮಾಡುತ್ತ ಸಂತೋಷಿಸುತ್ತಾರೆ. ಜನಪದ ಗಾದೆಗಳು, ಜನಪದ ಕಥೆಗಳು, ಕಾಡಿನೊಳಗಿನ ಸಂಸ್ಕೃತಿಗಳ ಬಗೆಗೆ ಅನೇಕ
ಉದಾಹರಣೆಗಳೊಂದಿಗೆ ತಿಳಿಸಿಕೊಡುತ್ತಾರೆ ಲೇಖಕರು.

(ಅಫ್ರಿಕಾದ ಲಿಖಿತ ಸಾಹಿತ್ಯದಲ್ಲಿ ನೈಜೀರಿಯದ ಚಿನುವಾ ಅಚಿಬೆಯ ಹೆಸರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತದೆ. ಅಚಿಬೆಯ ಕಾದಂಬರಿ Things  fall apart 1958 ರಲ್ಲಿ ಪ್ರಕಟವಾದದ್ದು. ಇದರಲ್ಲಿ ಧರ್ಮ, ವ್ಯಕ್ತಿ, ನಂಬಿಕೆಗಳ
ಬಗೆಗೆ ಅನೇಕ ಉದಾಹರಣೆಗಳನ್ನು ಕೊಡುತ್ತ ಕಾದಂಬರಿ ರಚಿಸಿದ ಅಚಿಬೆ, ಇಂತಹ ಒಂದು ಸಂಸ್ಕೃತಿಯ ಮೇಲೆ ಬಿಳಿಯರ ಅಗಮನದಿಂದ ನಡೆದ ದೌರ್ಜನ್ಯದಿಂದ ನಾಶವಾಗಿರುವ ಚಿತ್ರಣ ಇದರಲ್ಲಿ ಸಮಗ್ರವಾಗಿ ತಿಳಿದು ಬರುತ್ತದೆ)

ಆಫ್ರಿಕಾ ಸಾಹಿತ್ಯದ ಬಗೆಗೆ ಸುದೀರ್ಘವಾಗಿ ಪ್ರೊ.ಸಿ.ನಾಗಣ್ಣನವರು ತಮ್ಮ ‘ಕಪ್ಪು ಸಾಹಿತ್ಯ : ತತ್ವ ಮತ್ತು ಸತ್ಯ’ ಎಂಬ ಕೃತಿಯಲ್ಲಿ ಚರ್ಚಿಸಿದ್ಧಾರೆ. ಆಫ್ರಿಕಾದ ಸಾಹಿತ್ಯ ತಿಳಿದುಕೊಳ್ಳಬೇಕಾದವರು ಓದಲೇಬೇಕಾದಂತಹ ಕೃತಿ ಇದು.

ಅಫ್ರಿಕಾ ಖಂಡದ ಒಳನಾಡುಗಳ, ಮರಭೂಮಿಗಳ ಪರಿಚಯ ನಮಗೆ ಹೆಚ್ಚು ತಿಳಿದು ಬರುವುದಿಲ್ಲ. ಅಫ್ರಿಕಾಕ್ಕೆ ಹೋದಂತಹ ನಮ್ಮ ಪ್ರವಾಸಿಗರು, ಸಾಹಿತಿಗಳೂ ಅತೀ ಕಡಿಮೆ ಎಂದು ಮೊದಲೇ ತಿಳಿಸಿದ್ದೇನೆ. ಹೀಗಾಗಿ ಒಂದಿಷ್ಟು
ಹೆಚ್ಚಿನ ಮಾಹಿತಿಗೆ ಪೂರ್ಣಚಂದ್ರ ತೇಜಸ್ವಿಯವರ ‘ದೇಶ ವಿದೇಶ-2’ ಕೃತಿಯನ್ನು ಓದಬಹುದು. ಅದರಲ್ಲಿ ಸಹಾರಾ ಮರಳುಗಾಡಿನ ಪರಿಚಯ. ಅದು ವಿಸ್ತರಿಸಿದ ದೇಶಗಳಾದ ಇಥಿಯೋಪಿಯಾ, ಸುಡಾನ್. ಚೆಡ್, ನೈಜರ್, ಟ್ಯುನೀಸಿಯಾ, ಅಲ್ಜೇರಿಯಾ. ಮೊರೆಕ್ಕೋದ ಜನಾಂಗಗಳ ಜೀವನ ಶೈಲಿ ಪರಿಚಯಿಸಿ ಕೊಡುವರು. ಒಂದು ಕಾಲದಲ್ಲಿ ಮರುಭೂಮಿಯ ನಡುವೆ ಇರುವ ಸರೋವರಗಳು ಬತ್ತಿಹೋಗಿ ಉಪ್ಪಿನ ಗಣಿಗಳಾದದ್ದು. ಉಪ್ಪಿನ ಮೂಲಗಳು ಮನುಷ್ಯನಿಗೆ ಗೊತ್ತಿಲ್ಲದ ಆ ಕಾಲದಲ್ಲಿ ಉಪ್ಪು ಚಿನ್ನದಂತೆ ಅಮೂಲ್ಯವಾದದ್ದು, ಉಪ್ಪನ್ನು ಚಿನ್ನದೊಡನೆ ವಿನಿಮಯ ಮಾಡುತ್ತಿದ್ದುದು ಎನ್ನುವ ಚಾರಿತ್ರಿಕ ಸತ್ಯಗಳು ತಿಳಿಸಿಕೊಟ್ಟಿದ್ದಾರೆ. ಹಾಗೆಯೇ ಜೈರೆಯಲ್ಲಿರುವ ಹರಿದ್ವರ್ಣ ಕಾಡು ಪ್ರದೇಶ, ಮಹಾನದಿ ಕಾಂಗೋದ ಪರಿಚಯ ಮಾಡಿದ್ಧಾರೆ. ಕಾಂಗೋ ನದಿಯಲ್ಲಿ ಚಲಿಸುವ ವಿಚಿತ್ರ ನೌಕೆ ‘ಪುಷರ್’
(ಇದನ್ನು ಹಡಗು, ದೋಣಿ, ತೆಪ್ಪೆಗೆ ಹೊಲಿಸಲಾಗುವುದಿಲ್ಲ)ದ ಸಾರಿಗೆ ವ್ಯವಸ್ಥೆ, ಅದರೊಳಗಿನ ವ್ಯವಹಾರಗಳೆಲ್ಲ ಬಹಳ ಸುಂದರವಾಗಿ ಚಿತ್ರಸಮೇತ ತಿಳಿಸಿಕೊಟ್ಟದ್ದಾರೆ.

‘ಸಫಾರಿ ಎಂಬ ಲಕ್ಷುರಿ’ ಇದು ಬಿ.ಎಸ್. ಶೈಲಜಾ ಅವರ ಅಫ್ರಿಕಾ ಪ್ರವಾಸ ಕೃತಿ. ಬೆಂಗಳೂರಿನ ತಾರಾಲಯದ ಅಧಿಕಾರಿ-ಸಂಶೋದಕಿಯಾದ ಲೇಖಕಿ- ಅಫ್ರಿಕದ ಕೇಪ್ ಟೌನ್‌ನಲ್ಲಿ ಸಂಭವಿಸುವ ಸೂರ್ಯಗ್ರಹಣದ ಬಗೆಗೆ
ನಡೆಯುವ ಗೋಷ್ಠಿಗಳಲ್ಲಿ ಪಾಲ್ಗೊಳ್ಳಲು ಹೋಗಿದ್ದಾರೆ. ಅಲ್ಲಿಯೇ ನಡೆದ ಗ್ರಹಣಗಳ ಸಂಶೋಧನೆಗಳ ಬಗೆಗೆ ದೀರ್ಘವಾದ ಪರಿಚಯ ಇಲ್ಲಿ ಸಿಗುತ್ತದೆ. ಜೋಹಾನ್ಸ್‌ಬರ್ಗದ ಗಾಂಧಿಚೌಕದಲ್ಲಿ ಅಡ್ಡಾಡಿದ್ದಾರೆ. ಅಲ್ಲಿಯ ಮ್ಯೂಸಿಯಂನಲ್ಲಿ ಗಾಂಧಿ ಬಗೆಗೆ ಇದ್ದ ವಿವರವಾದ ಮಾಹಿತಿಗಳನ್ನು (ಚಿತ್ರಗಳು – ಪತ್ರಿಕೆಗಳು) ನೋಡಿದ್ದಾರೆ. ಅಭಿಮಾನಪಟ್ಟಿರುವರು.

ಮನು ಅವರ ‘ಇಜಿಪ್ತ ಪ್ರವಾಸ’ದಲ್ಲಿ ಅಫ್ರಿಕಾ ಖಂಡದ ಉತ್ತರದಲ್ಲಿರುವ ದೇಶ ಇಜಿಪ್ತಿನ ಪ್ರಾಚೀನ ಇತಿಹಾಸವನ್ನು ಕಣ್ಣಿಗೆ ಕಟ್ಟುವಂತೆ ಎಳೆ ಎಳೆಯಾಗಿ ಬಿಡಿಸುತ್ತಾ ಹೋಗಿದ್ದಾರೆ. ಕ್ರಿ.ಪೂ. 5000ದಲ್ಲೇ ಇಜೆಪ್ತ ವ್ಯವಸ್ಥಿತವಾದ ರಾಜಕೀಯ, ಸಾಮಾಜಿಕ, ಕೃಷಿ ಮುಂತಾದ ಚಟುವಟಿಕೆಗಳನ್ನು  ಹೊಂದಿತ್ತು. ನೈಲ್ ನದಿಯ ಪ್ರದೇಶದಲ್ಲಿ ಪ್ರಪಂಚದ ಅತ್ಯುನ್ನತ ನಾಗರಿಕತೆ ಅಸ್ತಿತ್ವದಲ್ಲಿತ್ತು. ಇಜಿಪ್ತಿನ ಸಾಮ್ರಾಜ್ಯದಲ್ಲಿ ಭಾರತದಲ್ಲಿ ಇದ್ದಂತಹ ದೇವಸ್ಥಾನಗಳ ಪರಿಕಲ್ಪನೆ ಇತ್ತು. ನಾವು ದೇವ ದೇವತೆಗಳನ್ನು ಪೂಜಿಸಲು ಕಟ್ಟಿಸುವಂತಹ ದೇವಸ್ಥಾನಗಳನ್ನೇ ಇಜಿಪ್ತಿನ ಜನರು ಕಟ್ಟಿದ್ದರು. ನಮ್ಮಲ್ಲಿ ವಿಷ್ಣು ಶಿವ ಎಂಬ ದೇವತೆಗಳ ಹೆಸರಿನಲ್ಲಿ ದೇವಾಲಯುದ್ದಂತೆ ರಾ, ಒಸ್ಕೆರಿಸ್, ಈಸಿಸ್ ದೇವತೆಗಳ ಹೆಸರಿನಲ್ಲಿ ಇಲ್ಲಿ ದೇವಸ್ಥಾನಗಳು ನಿರ್ಮಾಣವಾಗಿದ್ದವು. ಸೂರ್ಯದೇವನನ್ನು ‘ರಾ’ ಎಂಬ ಹೆಸರಿನಿಂದ ಪೂಜಿಸುತ್ತಿದ್ದರು. ‘ರಾ’ನ ಕಧೆ ಸೃಷ್ಟಿಯ ಆರಂಭದ ಕಥೆ ಎಂದು ಅವರ ನಂಬಿಕೆ. ತಾನು ‘ರಾ’ ನಿಂದ ಹುಟ್ಟಿದವನು ಎಂದು ಪ್ರತಿಪಾದಿಸಲು ತನ್ನ

ತಲೆಯ ಮೇಲೆ ಸೂರ್ಯಮಂಡಲವನ್ನು ಧರಿಸಿರುತ್ತಾನೆ.

ಕ್ರಿ.ಪೂ. 8ನೆಯ ಶತಮಾನದ ನಂತರ ಗ್ರೀಕರ ಅಕ್ರಮಣ ಇಜಿಪ್ತಿನ ಮೇಲಾಗುತ್ತದೆ. ಗ್ರೀಕರು ಬರುವವರೆಗೆ ಇಲ್ಲಿ ಪಿರಾಮಿಡ್ಡುಗಳು. ದೇವಾಲಯಗಳು ನಿರ್ಮಾಣವಾಗಿದ್ದವು. ನಂತರ ರೋಮನ್ ಸಾಮ್ರಾಜ್ಯದಲ್ಲಿ ಪೂರ್ಣ ವಿಲೀನಗೊಂಡಿತು. ಕ್ರಿ.ಶ.6 ರನೆಯ ಶತಮಾನದಲ್ಲಿ ಅರಬ್ದರ ದಾಳಿಯ ನಂತರ ಇಲ್ಲಿ ಇಸ್ಲಾಂ ಧರ್ಮದ ಆಗಮನವಾಯಿತು. ಇಜಿಪ್ತಿನ ಸಂಸ್ಕೃತಿಗಳಾಗಿದ್ಧ ದೇವಾಲಯಗಳು, ಪಿರಾಮಿಡ್ಡುಗಳನ್ನು ಅಲ್ಲಗಳೆಯಲಾಯಿತು. ಹೀಗಾಗಿ ಅಂದಿನ ಸಂಸ್ಕೃತಿಯೇಲ್ಲಾ ನಾಶವಾಯಿತು. ಹಾಗಾಗಿ ಅರಬರ ಭಾಷೆ, ಸಂಸ್ಕೃತಿ, ಧರ್ಮ ಅಲ್ಲಿ ಬೆಳೆಯತೊಡಗಿತು ಎನ್ನುತ್ತಾರೆ ಮನು ಅವರು.

ಸುಮಾರು ಐದು ಸಾವಿರಗಳಷ್ಟು ವರ್ಷಗಳ ಹಿಂದೆಯೇ ಮೃತ ಶರೀರವನ್ನು ಕಾಯ್ದಿಡುವ ಅಂದರೆ ‘ಮಮ್ಮಿ’  ಮಾಡುವ ಕ್ರಿಯೆ ಹೇಗಿತ್ತೆಂದು ಅವರೂ ಇತಿಹಾಸವನ್ನು, ಓದಿಕೊಂಡು ನಮಗೆ ತಿಳಿಸಿಕೊಡುತ್ತಾರೆ. ಮೃತರಾದವರ ಶರೀರಕ್ಕೆ ಅವರವರ ಅಂತಸ್ತಿಗೆ ತಕ್ಕಂತೆ ಸಂಸ್ಕಾರ ಮಾಡುತ್ತಿದ್ದರಂತೆ. ಅದಕ್ಕೆ ಕಾರಣ ಪುನರ್ಜನ್ಮದಲ್ಲಿ ನಂಬಿಕೆ. ಹೀಗಾಗಿ ಮೃತ ಶರೀರವನ್ನು ಹಾಗೇ ಹೂಳದೆ ರಾಸಾಯನಿಕ ದ್ರವಗಳನ್ನು ಸವರಿ ಕಾಯ್ದುಕೊಳ್ಳುತ್ತಿದ್ದರು. ಮಮ್ಮಿ ಮಾಡುವ
ಸುಮಾರು 70 ದಿನಗಳ ಪ್ರಕ್ರಿಯೆಯಲ್ಲಿ ಎಲ್ಲ ಹಂತಗಳನ್ನು ದಾಟಿ ಬರಬೇಕಾಗಿತ್ತಂತೆ. ರಾಸಾಯನಿಕ ದ್ರವಗಳಲ್ಲಿ ಶವಗಳನ್ನು ತೊಳೆಯುವುದು, ನಂತರ ಶವದ ಒಳಭಾಗದ ಅವಯವಗಳಾದ ಹೃದಯ ಶ್ವಾಸಕೋಶ, ಪಿತ್ತಕೋಶ, ಮೂತ್ರ ಪಿಂಡಗಳು ಇತ್ಯಾದಿಗಳನ್ನು ಹೊರತೆಗೆದು ಬೇರೆ ಬೇರೆ ಚಿನ್ನದ ಪೆಟ್ಟಿಗೆಗಳಲ್ಲಿ ಇಡುತ್ತಿರುವುದು, ನಂತರ ಹತ್ತಿ ಬಟ್ಟೆಯಿಂದ ಪಟ್ಟಿಗಳಾಗಿ ಮಾಡಿ ಶರೀರವಮ್ನ ಬಂಧಿಸುವುದು ಮಾಡುತ್ತಿದ್ದರು. ಇದಕ್ಕೆ ‘ಮಮ್ಮಿ’ ಎನ್ನುತ್ತಾರೆ ಎಂದಿರುವರು. ರಾಜರುಗಳು ತಾವು ಸಾಯಾವುದಕ್ಕೆ ಮುನ್ನವೇ ತಮ್ಮ ಗೋರಿಗಳನ್ನು ಕಟ್ಟಿಸಿಕೊಳ್ಳುತ್ತಿದ್ದರು. ಅದರರ್ಥ ತನಗೆ ಹೇಗೆ ಬೇಕೋ  ಹಾಗೆ, ಅದು ಶ್ರೀಮಂತಿಕೆಯಿಂದ ಕೂಡಿದ್ದಾಗಿರಬೇಕು. ತಾನು ಸತ್ತನಂತರವೂ
ಐಶಾರಾಮಿಯಾಗಿರಬೇಕು. ಅದಕ್ಕೆಂದೇ ತಮ್ಮ ಗೋರಿ ಶ್ರೀಮಂತವಾಗಿ ಕಾಣಲು ಅನೇಕ ಜನರನ್ನು ದುಡಿಸಿಕೊಳ್ಳುತ್ತಿದ್ದರು ಎಂದಿದ್ದಾರೆ. ನೈಲ್ ನದಿಯ ಇತ್ತೀಚಿನ ಕ್ರೂಜ್ ಸಂಸ್ಕೃತಿ, ಗುಂಪು ಗುಂಪಾಗಿ ತಿರುಗಾಡುವ ಪ್ರವಾಸಿಗರು. ಅಲ್ಲಿಯ ಮ್ಯೂಸಿಯಂ ಬಗೆಗೆ ಹೀಗೆ ತಮ್ಮ ಅನೇಕ ಅನುಭವಗಳನ್ನು ರಸವತ್ತಾಗಿ ನಿರೂಪಿಸಿದ್ಧಾರೆ.

ಸುಧಾ ಮೂರ್ತಿಯವರ ‘ಹಕ್ಕಿಯ ತೆರದಲಿ’ ಪ್ರವಾಸ ಕಥನದಲ್ಲಿ ಒಂದು ಭಾಗವಾಗಿ ಇಜಿಪ್ತಿನ ಬಗೆಗೆ ತಮ್ಮ ಪ್ರವಾಸದನುಭವಗಳನ್ನು ದಾಖಲಿಸಿದ್ದಾರೆ. ಒಬ್ಬರೇ ಪ್ರವಾಸಮಾಡುವುದರಲ್ಲಿ ಗಟ್ಟಿಗರಾದ ಸುಧಾ ಮೂರ್ತಿಯವರು ಇಲ್ಲಿಯೂ ಪ್ರವಾಸವನ್ನು ಒಬ್ಬರೇ ಮಾಡಿದ್ಧಾರೆ. ಹೆದರುವ ಕಾರಣ ಏನೂ ಇಲ್ಲ ಎಂದು ಧೈರ್ಯವಾಗಿ ಹೇಳಿದ್ಧಾರೆ. ಇಜಿಪ್ತದಲ್ಲಿ ಏನನ್ನು ನೋಡಬೇಕೆನ್ನುವ ನಿರ್ಥಾರ ಮೊದಲೇ ಮಾಡಿಕೊಂಡಿದ್ದರಿಂದ, ಸಾಕಷ್ಟು ಓದಿಕೊಂಡಿದ್ದರಿಂದ ಸಮಾಧಾನವಾಗಿ ಸುತ್ತಾಡುತ್ತ ಮಹತ್ವದ ಸ್ಥಳಗಳನ್ನೆಲ್ಲಾ ನೋಡಿದ್ಧಾರೆ. ಕೈರೋ ನಗರದ ವಸ್ತು ಸಂಗ್ರಹಾಲಯ, ಟುಟೆಂಖೇಮನ್ ಗೆಲರಿ, ಪಿರಮಿಟ್‌ಗಳು, ಇಜಿಪ್ತಿನ ಬಜಾರುಗಳು, ಪ್ರಾಚೀನ ದೇವಾಲಯಗಳು. ಸುಪ್ರಸಿದ್ಧ ಕಾರ್ನಾಕ್ ದೇವಾಲಯ. ಮೆಂಫಿಸ್ ಊರು, ಲುಕ್ಸರ್ ನಗರ, ಪಶ್ಚಿಮ ತೀರದ ಅರಸರ ಕೊಳ್ಳ. ನೆಫ್ರಿಟಾರಿ ಗೋರಿ ದೇರ್-ಅಲ್-ಬಹಾರಿ, ರಾಮ್ನೆಸ್ಸಿಯ ದೇವಾಲಯ, ಮುಂತಾದವುಗಳನ್ನು ಅವುಗಳ ಇತಿಹಾಸದ ಹಿನ್ನೆಲೆಯಲ್ಲಿ ನೋಡುತ್ತ ವಿವರಿಸುತ್ತ ಹೋಗಿದ್ದಾರೆ. ಇಜಿಪ್ತಿನ ಬಗೆಗೆ ಅನೇಕ ವಿಷಯಗಳುನ್ನೂ ಓದುತ್ತಿದ್ದಂತೆ ನಾವೂ ನಿಬ್ಬೆರಗಾಗುತ್ತೇವೆ. ಉಳಿದ ದೇಶಗಳಲ್ಲಿ ಜನರು ಶಿಲಾಯುಗದಲ್ಲಿ ಇದ್ದಾಗ ಇಜಿಪ್ತಿನ ಜನರು ನಾಗರೀಕರಾಗಿದ್ದರು. ಅಲ್ಲದೇ ಅವರು ತಮ್ಮದೇ ಆದ ಲಿಪಿಯನ್ನು ಕಂಡು ಹಿಡಿದಿದ್ದರು. ಅದನ್ನು ದ್ದನಿಯ ಮೂಲಕ ಚಿತ್ರದ ಮೂಲಕ ಕಂಡು ಹಿಡಿದಿದ್ದರು. ಕ್ರಿ.ಪೂ. 196ರಲ್ಲಿ ಶಿಲಾ ಲೇಖನಗಳಿದ್ದ ಉಲ್ಲೇಖ ಸಿಗುವುದು. 1799ರಲ್ಲಿ ಫ್ರೆಂಚ್ ಚಕ್ರವರ್ತಿ ನೆಪೊಲಿಯನ್‌ನ
ಸೈನಿಕರು ರೊಸೆಟ್ಟ ಎನ್ನುವ ಊರಿನಲ್ಲಿ (ಇದು ಈಗಿನ ಅಲೆಕ್ಸಾಂಡ್ರಿಯ ನಗರದ ಹತ್ತಿರ) ಕೊಟೆ ಕಟ್ಟಲು ನೆಲ ಅಗೆಯುತ್ತಿದ್ಧಾಗ ಅವರಿಗೆ ಕಪ್ಪು ಬಣ್ಣದ ದೊಡ್ಡ ಕಲ್ಲು ಸಿಕ್ಕಿತು. ಅದನ್ನು ಪರೀಕ್ಷಿಸಿದಾಗ ಅದರಲ್ಲಿ (ಕ್ರಿ.ಪೂ. 196ರಲ್ಲಿ) ಮೆಂಫಿಸ್ ಪುರೋಹಿತರು ರಚಿಸಿದ ಅರಸು ಪೋಟ್ಲಮಿಯ ಕಾಲದಲ್ಲಿ ನಡೆದ ರಾಜ್ಯಾಭಿ‍ಷೇಕದ ವರ್ಣನೆ ಇದೆ. ಈಗ ಲಂಡನ್ ಬ್ರಿಟಿಷ್ ಮ್ಯೂಸಿಯಂನಲ್ಲಿರುವ ‘ರೊಸೆಟ್ಟ ಕಲ್ಲು’ ಇಜಿಪ್ತಿನ ಇತಿಹಾಸವನ್ನೇ ಬದಲಿಸಿದೆ  ಎಂದು ಓದಿದಾಗ ನಮಗೆ ಆಶ್ಚರ್ಯವಾಗುತ್ತದೆ.

ನ.ಭದ್ರಯ್ಯ ಅವರು ‘ಕ್ಯಾಮರೂನ್ ಬಣಗಳಲ್ಲಿ’ ಪ್ರವಾಸ ಕಥನ ಬರೆದಿದ್ದಾರೆ. ಕ್ಯಾಮರೂನ್ ಇದು ಆಫ್ರಿಕದ ಒಂದು ದೇಶ. ಅಲ್ಲಿಗೆ ಇವರು ಭಾರತ ಸರಕಾರದ ಕೆಲಸದ ಮೇಲೆ ಹೋಗಿದ್ದಾರೆ. ಅಲ್ಲಿಯ ಕಾಡುಗಳಲ್ಲಿ ಕೆಲಸ ಮಾಡಬೇಕಾದ ಸಂದರ್ಭ. ಅನೇಕ ಅಡೆತಡೆಗಳನ್ನು ಸಂಕಷ್ಟಗಳನ್ನು ಅನುಭವಿಸಿದ್ದಾರೆ. ಅಫ್ರಿಕಾದ ಬುಡಕಟ್ಟು ಜನರ ಜೀವನ ಶೈಲಿಯ ಬಗೆಗೆ ಹೇಳುತ್ತಾರೆ. ಇದು ಐಶಾರಾಮಿಯಾಗಿ ಪ್ರವಾಸಿಯಾಗಿ ಅಡ್ಡಾಡಿಕೊಂಡು ಬಂದು ಬರೆದಂತಹ ಪುಸ್ತಕವಲ್ಲ. ಕೆಲಸದ ಮೇಲೆ ಅಲ್ಲಿ ಹೋದುದರಿಂದ ಅಲ್ಲಿಯ ಕೆಲವು ಸಂದರ್ಭಗಳಲ್ಲಿ ಪ್ರಾಣಾಪಾಯಕ್ಕೂ ಗುರಿಯಾದದ್ದು ತಿಳಿಸುತ್ತಾರೆ.

‘ಗಾಂಧಿ ಮೆಟ್ಟಿದ ನಾಡಿನಲ್ಲಿ’ ಸಿ.ಎಸ್. ದ್ಧಾರಕಾನಾಥ್ ಅವರೂ ಸುತ್ತಾಡಿ ಬಂದು ಬರೆದಿರುವ ದಕ್ಷಿಣ ಆಫ್ರಿಕಾದ ‘ಡರ್ಬಾನ್’ ಪ್ರವಾಸ ಕಥನ ಇದು. ದಕ್ಷಿಣ ಆಫ್ರಿಕಾದ ಡರ್ಬಾನಿನಲ್ಲಿ ನಡೆದ ವಿಶ್ವವರ್ಣಭೇದ ವಿರೋಧಿ ಸಮಾವೇಶದಲ್ಲಿ ಭಾಗವಹಿಸಲು ಹೋಗಿದ್ದ ಲೇಖಕರು ಅಲ್ಲಿ ನಡೆದ (ವಿಶ್ವದಲ್ಲಿಯ) ಜಾತಿ ವರ್ಣ ಭೇದಗಳ ಚರ್ಚೆಗಳ ಬಗೆಗೆ ಅನೇಕ ಉದಾಹರಣೆಗಳಿಂದ ತಿಳಿಸಿಕೊಡುವರು. ಅದು ಆಫ್ರಿಕದ ಕರಿಯರ ಸಂಕಟ ಭಾರತದ ಕೆಳವರ್ಗದ ನೋವುಗಳ ಭೀಕರತೆಯ ವಿಷಯಗಳೆಲ್ಲ ಇಲ್ಲಿ ಬಂದಿವೆ. ಉಳಿದಂತೆ ‘ಫೀನಿಕ್ಸ್ ಸೆಟಲ್‌ಮೆಂಟ್’. ದಕ್ಷಿಣ ಆಫ್ರಿಕಾದ ಮೂಲನಿವಾಸಿಗಳಾದ ‘ಜುಲ’ ಜನಾಂಗದ ಬಗೆಗೆ ವಿವರಗಳನ್ನು ಕೊಡುತ್ತಾರೆ.

ಪ್ರಭಾಮೂರ್ತಿಯವರ ‘ಕಾಲಗರ್ಭ’ ಇಜಿಪ್ತಿನ ಪ್ರವಾಸ ಕಥನ. ಸಾಕಷ್ಟು ವಿಷಯಗಳನ್ನು ಪರಿಚಯ ಮಾಡಿಕೊಟ್ಟಿದ್ದಾರೆ ಲೇಖಕಿ. 5000 ವರ್ಷಗಳ ಹಿಂದಿನ ಇಜಿಪ್ತಿನ ಇತಿಹಾಸ, ನಾಗರಿಕತೆಗಳ ಬಗೆಗೆ ಹೇಳುವರು ಇಜಿಪ್ತಿನಲ್ಲಿ 80
ಪಿರಾಮಿಡ್ಡುಗಳಿವೆ ಎನ್ನುತ್ತ ಅವುಗಳೊಂದಿಗೆ ರಾಜರ ಚರಿತ್ರೆ ಪಿರಾಮಿಡ್ಡುಗಳ ರಚನೆಯ ಬಗೆಗೆ ತಿಳಿಸಿಕೊಟ್ಟಿದ್ದಾರೆ. ಸುಂದರವಾದ ಚಿತ್ರಗಳಿವೆ. ಅಸ್ವಾನ್‌ನಿಂದ ನೈಲ್ ನದಿಯ ಮೇಲೆ ಹಡಗಿನಲ್ಲಿ ಒಂದು ವಾರ ಪ್ರಯಾಣ ಮಾಡುತ್ತ
ಸಂತಸಪಟ್ಟಿರುವರು.

****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೋಳಿಕೆ ಮಲೆಯಲ್ಲೊಂದು ಕೊನೆ
Next post ಮರಣಂ ಶರಣಂ

ಸಣ್ಣ ಕತೆ

  • ಗಂಗೆ ಅಳೆದ ಗಂಗಮ್ಮ

    ಕನ್ನಡ ನಾಡು ಆರ್ಯದ್ರಾವಿಡ ಸಂಸ್ಕೃತಿಗಳನ್ನು ಅರಗಿಸಿಕೊಂಡು ತನ್ನದಾದ ಒಂದು ಉಚ್ಚ ಸಂಸ್ಕೃತಿಯಿಂದ ಬಹು ಪುರಾತನ ಕಾಲದಿಂದಲೂ ಕೀರ್ತಿಯನ್ನು ಪಡೆದಿದೆ. ಇಂತಹ ನಾಡಿನಲ್ಲಿ ಕಾಣುವ ಅವಶೇಷಗಳು ಒಂದೊಂದು ಹಿರಿಸಂಸ್ಕೃತಿಯ… Read more…

  • ಕಳಕೊಂಡವನು

    ಸುಮಾರು ಒಂದು ಗಂಟೆಯ ಪಯಣದಿಂದ ಸುಸ್ತಾದ ಅವನು ಬಸ್ಸಿನಿಂದ ಇಳಿದು ರಸ್ತೆಯ ಬದಿಗೆ ಬಂದು ನಿಂತು ತನ್ನ ಕೈಗಡಿಯಾರ ದೃಷ್ಟಿಸಿದ. ಮಧ್ಯಾಹ್ನ ಒಂದು ಗಂಟೆ. ಒಮ್ಮೆ ಮುಖ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಕೆಂಪು ಲುಂಗಿ

    ಬೇಸಿಗೆಯ ರಜೆ ಬಂತೆಂದರೆ ಅಮ್ಮಂದಿರ ಗೋಳು ಬೇಡ; ಮಕ್ಕಳೆಲ್ಲಾ ಮನೆಯಲ್ಲೇ... ಟೀವಿಯ ಎದುರಿಗೆ ಇಲ್ಲವಾದರೆ ಅಂಗಳದ ಸೀಬೆಮರ ಮತ್ತು ಎತ್ತರವಾದ ಕಾಂಪೌಂಡಿನ ಗೋಡೆಗಳ ಮೇಲೆ.... ಯಾರಾದರೂ ಬಿದ್ದರೆ,… Read more…