ಚಕ್ರವರ್ತಿಗಳು ದೇವರಗುಂಡಿಗೆ

ನಾವು ಇಪ್ಪತ್ತಾರು ಮಂದಿ ಈಗ ಬಂಟವಾಳ ಮೈಸೂರು ರಾಜ್ಯ ಹೆದ್ದಾರಿಯ ಗುಂಡಿಗಳನ್ನು ತಪ್ಪಿಸುತ್ತಾ ದೇವರಗುಂಡಿಗೆ ಬೈಸಿಕಲ್ಲು ತುಳಿಯುತ್ತಿದ್ದೆವು. ಚಕ್ರಗಳ ಮೇಲೆ ಚಕ್ರವರ್ತಿಗಳು.ಬೈಕುಗಳಲ್ಲಿ ಪಯಣಿಸುವವರನ್ನು ಹಾಗೆಂದು ಕರೆಯುತ್ತಿದ್ದವರು ಅತ್ರಿ ಬುಕ್ಕು ಹೌಸಿನ ಅಶೋಕವರ್ಧನ. ಈಗದನ್ನು ಬೈಸಿಕಲ್ಲ ಒಡೆಯರಿಗೆ ಅನ್ವಯಿಸಿದೆ. ನಾಲ್ಕು ಗೋಡೆಗಳ ಮಧ್ಯೆ ಪಾಠ ಕೇಳಿದಂತೆ ನಟಿಸುತ್ತಾ ಒಮ್ಮೊಮ್ಮೆ ಶೀತಲ ಸಮರಕ್ಕೆ ಕಾರಣವಾಗುತ್ತಿದ್ದ ಪಡ್ಡೆ ಹುಡುಗರು ಬಂಧ ಮುಕ್ತ ಹಕ್ಕಿಗಳಂತೆ ಕಲರವವೆಬ್ಬಿಸುತ್ತಾ ಬೈಸಿಕಲ್ಲಲ್ಲಿ ತೇಲುತ್ತಿದ್ದರು.

ಮಲೆನಾಡ ಈ ಸೀಮೆಯಲ್ಲಿ ಬೈಸಿಕಲ್ಲು ಪ್ರಯಾಣವೂ ಒಂದು ಸಾಹಸವೇ. ಸುಳ್ಯದಿಂದ ದೇವರಗುಂಡಿಗೆ ಹೋಗಿ ಬರುವಾಗ ಒಟ್ಟು ನಲುವತ್ತಾರು ಕಿಲೋ ಮೀಟರು ದೂರವಾಗುತ್ತದೆ. ಅರ್ಧಾಂಶ ನಡಕೊಂಡೇ ಕ್ರಮಿಸಬೇಕು. ಏರಿನಲ್ಲಿ ಅದು ಅನಿವಾರ್ಯ. ಇಲ್ಲಿ ಬೈಸಿಕಲ್ಲು ಪ್ರಯಾಣ ಮಾಡುವವರಿಗೆ ಚಾರಣ ಉಚಿತ.

ಹಳ್ಳಿ ಪ್ರದೇಶದವರು ಅದನ್ನು ಬೈಸಿಕಲ್ಲು ಎನ್ನುವುದಿಲ್ಲ. ಆದರೆ ‘ಸೈಕಲ್ಲು’ ಇಲ್ಲಿ ಚಿನಾಲಿ ಅಥವಾ ಗುಡಸೆಟ್ಟಿಗೆ ಪರ್ಯಾಯ ಪದ. ಅದಕ್ಕೆಂದೇ ಪಡ್ಡೆಗಳನ್ನು ಕಟ್ಟುನಿಟ್ಟಾಗಿ ಎಚ್ಚರಿಸಿದ್ದೆ, ‘ಬೈಸಿಕಲ್ಲು’ ಎಂದೇ ಹೇಳಬೇಕೆಂದು. ಮೇಸ್ಟ್ರು ಜತೆಗೆ ಬಾರದಿದ್ದರೆ ಜಾಥಾ ತಪ್ಪಿಹೋಗುತ್ತದೆಂಬ ಭಯದಿಂದ ಪಡ್ಡೆಗಳು ನನ್ನೆದುರು ಆ ಮಾತನ್ನು ಸುಗ್ರೀವಾಜ್ಞೆಯೆಂದೇ ತಿಳಿದು ವರ್ತಿಸುತ್ತಿದ್ದರು. ಕೆಲವೊಮ್ಮೆ ಅಭ್ಯಾಸ ಬಲ ಅವರಿಂದ ‘ಸೈಕಲ್ಲು’ ಪದವನ್ನು ಹೊರಡಿಸುತ್ತಿತ್ತು. ತಕ್ಷಣ ನಾಲಿಗೆ ಕಚ್ಚಿಕೊಂಡು ತಪ್ಪು ಮಾಡಿದೆವೆಂಬಂತೆ ನಟಿಸುತ್ತಿದ್ದರು.

ಬೈಸಿಕಲ್ಲೆಂಬ ಸಂಗಾತಿ

ಬೈಸಿಕಲ್ಲು ತನ್ನ ಅತ್ಯಂತ ಇಷ್ಟದ ವಾಹನ. ಅದಕ್ಕೆ ಪೆಟ್ರೋಲು, ಡೀಸಿಲ್ಲು ಬೇಡ. ಅದು ಹೊಗೆ ಕಕ್ಕುವುದಿಲ್ಲ. ಅನ್ಯರಿಗೆ ಢೀ ಕೊಟ್ಟು ಕೈಕಾಲು ಮುರಿಯುವುದಿಲ್ಲ. ಪ್ರಾಣ ತೆಗೆಯುವುದಿಲ್ಲ. ಎಂತಹ ಸಂದು ಗೊಂದುಗಳಲ್ಲೂ ಹೋಗುವುದಿಲ್ಲವೆಂದು ತಕರಾರು ಎತ್ತುವುದಿಲ್ಲ. ಅದನ್ನು ರಿಬೋರ್‌ ಮಾಡಿಸಬೇಕಾಗಿಲ್ಲ. ಅದರ ಬ್ರೇಕು ಫೈಲಾಗುವುದಿಲ್ಲ. ರಿವರ್ಸ್ ಹೋಗಿ ಗುಂಡಿಗೆ ಬೀಳುವುದಿಲ್ಲ. ಅದಕ್ಕೆ ಲೈಸನ್ಸ್‌ ಬೇಡ. ರೋಡು ಟ್ಯಾಕ್ಸು ಕಟ್ಟ ಬೇಕಾಗಿಲ್ಲ. ಅದನ್ನು ಆರ್ಟಿವೋ ಅಥವಾ ಪೋಲೀಸರು ತಡೆದು ನಿಲ್ಲಿಸುವುದಿಲ್ಲ. ತಾಕತ್ತಿದ್ದರೆ ಮೂವರು ಅದರ ಮೇಲೆ ಕೂತು ಹೋಗಬಹುದು. ಅಲ್ಲದೆ ಅದು ವರ್ಷಕ್ಕೊಮ್ಮೆ ಆಯುಧ ಪೂಜೆ ಮಾಡೆಂದು ತಕರಾರು ಹೂಡುವುದಿಲ್ಲ. ಒಂದೆರೆಡು ಸಲ ನಾನು ಬೈಸಿಕಲ್ಲಿಂದ ಬಿದ್ದದ್ದಿದೆ. ಆದರೆ ಹಲ್ಲು ಹೋಗಿರಲಿಲ್ಲ. ಬೋನು ಫ್ರಾಕ್ಚರು ಆಗಿರಲಿಲ್ಲ. ವಿಶ್ವದ ಈ ವರೆಗಿನ ಸಮಸ್ತ ಸಂಶೋಧಿತ ಮತ್ತು ಮುಂದಿನ ಸಹಸ್ರ ಸಹಸ್ರಮಾನಗಳಲ್ಲಿ ಸಂಶೋಧಿಸಲ್ಪಡಲಿರುವ ವಾಹನಗಳಲ್ಲಿ ನಾನು ಛಾಂಪಿಯನ್‌ನ ಎಂದು ಪರಿಗಣಿಸುವುದು ಬೈಸಿಕಲ್ಲನನ್ನೇ.

ಮೈಸೂರಲ್ಲಿ ಎಂ. ಎ. ಓದುತ್ತಿರುವಾಗ ಹಾಸನದ ಚಿಕ್ಕಪ್ಪ ನನಗೆ ಒಂದು ಬೈಸಿಕಲ್ಲು ಕೊಡಿಸಿದ್ದರು. ಅದಕ್ಕೆ ಲೈಟು ಇರಲಿಲ್ಲ. ಎಷ್ಟು ಸಲ ರಿಪೇರಿ ಮಾಡಿದರೂ ಅದರ ಬ್ರೇಕು ನಿಲ್ಲುತ್ತಿರಲಿಲ್ಲ. ನೀವು ನಗದಿದ್ದರೆ ಗುಟ್ಟೊಂದನ್ನು ಹೇಳಿಬಿಡುತ್ತೇನೆ. ಅದರ ಬೆಲ್ಲೊಂದನ್ನು ಬಿಟ್ಟು ಉಳಿದೆಲ್ಲಾ ಪಾರ್ಟುಗಳು ಸೌಂಡು ಹೊರಡಿಸುತ್ತಿದ್ದವು. ಆದರೂ ಅದರಲ್ಲಿ ರಂಗನತಿಟ್ಟು, ಶ್ರೀರಂಗಪಟ್ಟಣಗಳಿಗೆ ಮೂರು ಬಾರಿ ಹೋಗಿ ಬದುಕಿ ಬಂದಿದ್ದೆ. ಅದೂ ಅಕ್ಕಪಕ್ಕದ ಸೀಬೆ ಮರಗಳಿಂದ ಹಣ್ಣು ಕದ್ದು ಯಾರ ಕೈಗೂ ಸಿಕ್ಕಿಬೀಳದೆ ಅ ಮೂವತ್ತು ವರ್ಷಗಳ ಹಿಂದೆ ಹಾಸನದ ಹೆಂಗಳೆಯರ ಕಾಲೇಜಲ್ಲಿ ಟೆಂಪೊರರಿ ಲೆಕ್ಚರ್ರು ಆಗಿದ್ದಾಗ ಚಿಕ್ಕಪ್ಪ ಅವರ ಬೈಸಿಕಲ್ಲನ್ನು ನನಗೇ ಬಿಟ್ಟುಕೊಟ್ಟಿದ್ದರು.  ನಿನ್ನ ಪಾಠವನ್ನಲ್ಲದಿದ್ದರೂ ಆ ಮದನಾಕಿಯರು ನಿನ್ನನ್ನು, ನಿನ್ನ ಬೈಸಿಕಲ್ಲನ್ನು ಮೆಚ್ಚಿಕೊಳ್ಳಲಿ ಎಂದು ಮನಸಾರೆ ಆಶೀರ್ವದಿಸಿದ್ದರು. ಹಿರಿಯರ ಆಶೀರ್ವಾದ ಪೂರ್ತಿ ಸುಳ್ಳಾಗಲಿಲ್ಲ.

ಮರುವರ್ಷ ಸುಳ್ಯದ ನೆಹರೂ ಮೆಮೋರಿಯಲ್‌ ಕಾಲೇಜಲ್ಲಿ ಪರಮನೆಂಟು ಉಪನ್ಯಾಸಕನಾದಾಗ ಓಡಾಟಕ್ಕೆ ಬೈಸಿಕಲ್ಲು ಕೊಳ್ಳೋದೇ ವಾಸಿ ಎಂಬ ಭಾವನೆ ಮೂಡಿತು. ಮಾನಸಗಂಗೋತ್ರಿಯಲ್ಲಿ ಸೂಟು, ಟೈ, ಬೂಟು ಹಾಕಿದ ದೊಡ್ಡ ದೊಡ್ಡ ಪ್ರೊಫೆಸರುಗಳು ಬೈಸಿಕಲ್ಲು ತುಳಿಯುತ್ತಾ ಬರುತ್ತಿದ್ದರು. ಇಲ್ಲಿ ವಿದ್ಯಾರ್ಥಿಗಳಲ್ಲೂ ಬೈಕುಗಳು ಅ ಇವರು ತಲೆಯಿರುವುದೇ ಬೈಕುಗಳನ್ನು ಯಾವಾಗ, ಎಲ್ಲಿ ಯಾವ ಸ್ತರದಲ್ಲಿ ಓಡಿಸಿದರೆ ಲಲನಾಮಣಿಗಳ ಹೃದಯ ಗೆಲ್ಲಬಹುದು ಎಂಬ ಯೋಚನೆಗಾಗಿ ಎಂದು ಭಾವಿಸಿದವರು. ಏನು ಮಾಡಲಿ?

ಕೊನೆಗೂ ಕೀಳರಿಮೆಯನ್ನು ಗೆದ್ದು ಬಿಟ್ಟೆ. ಹೊಸದೊಂದು ಬೈಸಿಕಲ್ಲು ಕೊಂಡೆ. ಕ್ಯಾರಿಯರಲ್ಲಿ ಪತ್ನಿ ಶೈಲಿಯನ್ನು ಕೂರಿಸಿಕೊಂಡು ಬೀದಿಗಳಲ್ಲಿ ಬೈಸಿಕಲ್ಲು ತುಳಿದು ಸುಳ್ಯದಲ್ಲಿ ಹೊಸ ಟ್ರೆಂಡು ಸೆಟ್ಟು ಮಾಡಿಬಿಟ್ಟೆ. ಅ ನಮ್ಮ ಕಾಲೇಜಿನ ಸ್ಥಾಪಕರು ಉಪನ್ಯಾಸಕರುಗಳಿಗೊಂದು ಡ್ರೆಸ್ಸುಕೋಡನ್ನು ಬಲವಾಗಿ ಪ್ರತಿಪಾದಿಸುತ್ತಿದ್ದವರಿಗೆ ನನ್ನ ಬೈಸಿಕಲ್ಲು ನಂಟನ್ನು ಕಂಡು ಏನನ್ನಿಸಿತೋ ಕಾಲೇಜು ಲೆಕ್ಚರರು ಬೈಸಿಕಲ್ಲಲ್ಲಿ ಬರೋದು ಮರ್ಯಾದಿಗೆ ಕಮ್ಮಿ ಎಂದು ಒಂದು ಸಲ ಹೇಳಿದರು.  ಲೆಕ್ಚರರಿಂದಾಗಿ ಬೈಸಿಕಲ್ಲಿನ ಮರ್ಯಾದೆ ಹೆಚ್ಚಾಗುತ್ತದಲ್ಲಾ ಸರ್‌ ಎಂದೆ. ಇದು ರಿಪೇರಿಯಾಗದ ಕೇಸು ಎಂದು ಅವರು ನಕ್ಕು ಸುಮ್ಮನಾದರು.

ಮುಂದೆ ನಾನು ಕಂತಿನಲ್ಲಿ ಸ್ಕೂಟರು ಕೊಂಡೆ. ಮಗ ಪೃಥ್ಥಿ ಹೈಸ್ಕೂಲು ಓದುವಾಗ ಅವನಿಗೊಂದು ಬೈಸಿಕಲ್ಲು ಕೊಡಿಸಿದೆ. ಬೈಸಿಕಲ್ಲಿಗೆ ದೊಡ್ಡ ಚಕ್ರಗಳಿರುವುದರಿಂದ ಅದರಲ್ಲಿ ಪ್ರಯಾಣಿಸುವವ ಚಕ್ರವರ್ತಿ ಎಂದು ಅವನಲ್ಲಿ ಹೇಳಿದೆ. ಅಪ್ಪನಿಗೆ ಬೇಸರವಾಗಬಾರದೆಂದು ಅವನು ನಂಬಿದಂತೆ ನಟಿಸಿದ. ಈಗಲೂ ಅವನು ರಜೆಯಲ್ಲಿ ಬೈಸಿಕಲ್ಲು ಖುಷಿಯಿಂದ ತುಳಿಯುತ್ತಿರುತ್ತಾನೆ ಕಾಂತಮಂಗಲದಿಂದ ಮಂಡೆಕೋಲಿನ ವರೆಗೆ.

ಮಗನಿಗಾಗಿ ಬೈಸಿಕಲ್ಲು ಕೊಂಡ ಹೊಸತರಲ್ಲಿ ಯಾವುದೋ ಲಹರಿಯಲ್ಲಿ ಬಿ. ಎ. ಕೊನೆಯ ವರ್ಷದ ಕ್ಲಾಸಲ್ಲಿ ಹೇಳಿಬಿಟ್ಟೆ. ಚೀನಾ ಮತ್ತು ಕೊರಿಯಾಗಳಲ್ಲಿ ಬೈಸಿಕಲ್ಲೇ ಪ್ರಧಾನ ವಾಹನ.

ಅದಕ್ಕೇ ಅವರು ಅಷ್ಟೊಂದು ದೃಢಕಾಯರಾಗಿದ್ದಾರೆ. ನಾವು ಬೈಸಿಕಲ್ಲುಗಳನ್ನು ಪ್ರೀತಿಸಬೇಕು. ಅದಕ್ಕಾಗಿ ಒಂದು ದಿನದ ಬೈಸಿಕಲ್ಲು ಜಾಥಾ ಮಾಡುವಾ.

ಹುಚ್ಚು ಮುಂಡೇವು ಒಪ್ಕೊಂಬಿಟ್ವು. ಮಳೆಗಾಲದ ಕೊನೆಯ ದಿನಗಳವು. ತೀರ್ಥವರ್ಣ, ಧನಂಜಯ, ಶ್ರೀನಿವಾಸ, ಮುಂತಾದವರ ನಾಯಕತ್ವದಲ್ಲಿ ಆಯುಧ ಪೂಜೆಯಂದು ನಾವು ಸುಳ್ಯದಿಂದ ಜಾಲ್ಸೂರಿಗಾಗಿ ಅಡೂರಿಗೆ ಬೈಸಿಕಲ್ಲಲ್ಲಿ ಹೊರಟು ಬಿಟ್ಟೆವು. ಇಪ್ಪತ್ತೊಂದು ಮಂದಿ. ಜಾಥಾದಂದೇ ಬೈಸಿಕಲ್ಲು ಕಲಿಯ ಹೊರಟವನೊಬ್ಬ ಕಾಲೇಜು ಮುಂಭಾಗದಲ್ಲಿ ಬಿದ್ದು ಗಾಯ ಮಾಡಿಕೊಂಡ. ಅವನನ್ನು ಅಲ್ಲೇ ಆಸ್ಪತ್ರೆಗೆ ಸೇರಿಸಿ ನಾವು ಮುಂದುವರಿದೆವು. ಆರೂಕಾಲಡಿ ಎತ್ತರದ ತೀರ್ಥವರ್ಣ ಸಣ್ಣದೊಂದು ಬೈಸಿಕಲ್ಲು ತಂದಿದ್ದ. ಅವನು ಅದರಲ್ಲಿ ಕೂತಾಗ ಚಿಂಪಾಂಜಿ ಬೈಸಿಕಲ್ಲು ಸರ್ಕಸ್‌ ಮಾಡುವುದು ನೆನಪಾಗುತ್ತಿತ್ತು.

ಜಾಲ್ಸೂರಿನಿಂದಾಚೆ ಕೇರಳದ ಸಾಪಾಟಾದ ರೋಡಲ್ಲಿ ಬೈಸಿಕಲ್ಲು ಬಿಡುವುದೇ ಒಂದು ಆನಂದ. ಕರ್ನಾಟಕ ಸರ್ಕಾರ ಮೋಟಾರು ವೆಹಿಕಲ್ಲು ತೆರಿಗೆಯಿಂದ ಸಂಗ್ರಹವಾಗುವ ಹಣವನನ್ನೇ ರೋಡಿಗೆ ಹಾಕಿದರೂ ಸಾಕು, ಕೇರಳದ ರಸ್ತೆಗಳಿಗಿಂತ ನಮ್ಮ ರಸ್ತೆಗಳು ಚೆನ್ನಾಗುತ್ತವೆ. ಲಾಲೂ ಪ್ರಸಾದನ ಉವಾಚದಂತೆ, ಹೇಮಾಮಾಲಿನಿಯ ಕೆನ್ನೆಗಳಿಂತ ಹೆಚ್ಚು ಲಕಲಕ ಹೊಳೆಯಲಿವೆ. ಕನ್ನಡಿಗರಲ್ಲಿ ಕೇರಳದವರಷ್ಟು ರಾಜಕೀಯ ಪ್ರಜ್ಞೆಯಿಲ್ಲ. ಒಗ್ಗಟ್ಟೂ ಇಲ್ಲ. ನಾವು ಏನಿದ್ದರೂ ಜಾತಿ ಸಂಘಟನೆಗಳನ್ನು ಮಾಡಿಕೊಂಡು ಹುಟ್ಟಿನ ಕಾರಣವೊಡ್ಡಿ ಎಲ್ಲರನ್ನೂ ದೂರ ಇಟ್ಟು ಎಲ್ಲಾ ಅವಕಾಶಗಳನ್ನು ನಮ್ಮ ಜಾತಿ ಮಾತ್ರವೇ ಕಬಳಿಸುವುದು ಹೇಗೆ ಎಂದು ಯೋಚಿಸುವ ಅಪ್ಪಟ ಜಾತ್ಯತೀತರು. ರಸ್ತೆಗಳ ಬಗ್ಗೆ, ಬಡತನ ಮತ್ತು ನಿರುದ್ಯೋಗದ ಬಗ್ಗೆ, ಅಸಮಾನತೆ ಮತ್ತು ಶೋಷಣೆಯ ಬಗ್ಗೆ, ಬೆಳೆಯುತ್ತಿರುವ ಭ್ರಷ್ಟಾಚಾರ ಮತ್ತು ಅಪರಾಧ, ಹೆಚ್ಚುತ್ತಿರುವ ಏಡ್ಸ್‌ ಬಗ್ಗೆ, ಕಣ್ಮರೆಯಾಗುತ್ತಿರುವ ಕಾಡುಗಳ ಬಗ್ಗೆ ಯೋಚಿಸುವುದಕ್ಕಿಂತ ಇದು ಸುಲಭ. ರಾಜಕೀಯವಾಗಿ ಬೆಳೆದರೆ ಅವಕಾಶ ಗಿಟ್ಟಿಸಬಹುದು.

ಮೂರು ವರ್ಷಗಳ ಹಿಂದಿನ ಅಡೂರು ಬೈಸಿಕಲ್ಲು ಜಾಥಾದ ಬಗ್ಗೆ ಈ ವರ್ಷದ ಅಂತಿಮ ಬಿ. ಎ. ಯಲ್ಲಿ ವಿವರಿಸಿದೆ. ನೀವಿದ್ದೀರಾ ಬರೀ ಕುಂಭಕರ್ಣರು, ಬಕಾಸುರರು, ಕೀಚಕರು ಮತ್ತು ಸೋಮಪ್ರಿಯ ಧೂಮ್ರಾಕರು. ಜೀವನದಲ್ಲಿ ಒಂದೇ ಒಂದಾದರೂ ನೆನಪಿಟ್ಟುಕೊಳ್ಳುವ ಕಾರ್ಯ ಏನನ್ನು ಮಾಡಿದ್ದೀರಿ?

ನನ್ನ ಮಾತು ಮಗಿಯುವ ಮುನ್ನವೇ ಕೊನೆಯ ಮೂರು ಬೆಂಚುಗಳಿಂದ ಪ್ರತಿಭಟನೆಯ ಸ್ವರ ಮೊಳಗಿತು. ಸರ್‌, ನೀವು ಎಲ್ಲಿಗೆ ಹೇಳ್ತಿರೋ ಅಲ್ಲಿಗೆ ನಾವು ಬೈಸಿಕಲಲ್ಲಿ ಬಂದು ಬಿಡ್ತೇವೆ.

ಜಾರಿ ಬಿದ್ದ ಜಾಣ

ಎಲ್ಲಿಗೆ ಹೋಗುವುದು? ಅಂದು ಬೈಸಿಕಲ್ಲು ಜಾಥಾ ಹೋಗುವಾಗ ಜಾಲ್ಸೂರಿನಲ್ಲಿ ಚಂದ ಪಾಟಾಳಿ ಭರ್ಜರಿ ಫಲಾಹಾರ ನೀಡಿದ್ದ. ಅಡೂರಲ್ಲಿ ಊರ ಧುರೀಣ ಸೀತಾರಾಮ ನಾಯಕ ಪಾವನಕೃಷ್ಣ ಹೇಳಿದ್ದ. ನಮ್ಮ ರಾಷ್ಟ್ರೀಯ ಸೇವಾ ಶಿಬಿರ ಬಬ್ಬಿದಿ ಸಂಜೀವ ಕುದ್ಪಾಜೆಯವರ ಮುಂದಾಳ್ತನದಲ್ಲಿ ಅಲ್ಲಿ ನಡೆಯುತ್ತಿತ್ತು. ಚಕ್ರವರ್ತಿಗಳ ದಂಡನ್ನು ಕಂಡು ರೋಮಾಂಚಿತರಾದ ಲಲನಾಮಣಿಯರು ಚಿತ್ರವಿಚಿತ್ರ ಚೀತ್ಕಾರ ಉದ್ಗಾರಗಳೊಡನೆ ನಮ್ಮನ್ನು ಸ್ವಾಗತಿಸಿದರು. ಕೆಲವರ ಹೆಸರನ್ನು ಅವರು ಹೇಳುವಾಗ ಪಡ್ಡೆಗಳ ಕಾಲಿಗೆ ಹೊಸ ಶಕ್ತಿ, ಮೈಯಲ್ಲಿ ಹೊಸ ಉತ್ಸಾಹ. ನಮ್ಮ ತಂಡ ಮೈದಾನಕ್ಕೆ ಎರಡು ಸುತ್ತು ಬಂದು ಹೀರೋಯಿಸಂ ಪ್ರದರ್ಶಿಸಿತು. ಹಿಂದಿನ ದಿನ ಮಳೆಬಂದು ಮೈದಾನದ ಕೆಲವೆಡೆ ಕೆಸರಿತ್ತು. ಶ್ರೀವತ್ಸ ಬೈಸಿಕಲ್ಲು ಸಮೇತ ದಢಾರನೆ ಜಾರಿ ಬಿದ್ದ. ಯಾರನ್ನು ನೋಡಿಕೊಂಡು ಬೈಸಿಕಲ್ಲು ಬಿಡುತ್ತಿದ್ದನೊ? ಅವನನ್ನು ನಾನು ವಶಿಷ್ಠನೆಂದು ಕರೆಯುತ್ತಿದ್ದೆ. ಅವನು ಬಿದ್ದಾಗ ಲಲನಾಮಣಿಯರೂ ಸೇರಿದಂತೆ ನೋಡುತ್ತಿದ್ದವರೆಲ್ಲಾ ಗಹಗಹಿಸಿ ಸಂಭ್ರಮಿಸಿದರು!

ನಾವು ಬೈಸಿಕಲ್ಲು ನಿಲ್ಲಿಸಿ ಅರಂತೋಡು ಕಾಲೇಜನ್ನು ಪ್ರವೇಶಿಸಿದೆವು. ಮಡಪ್ಪಾಡಿ ಪ್ರವೀಣ ಮೆಲ್ಲ ಬಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದ.  ಪಾಪ ವಶಿಷ್ಠ. ಅವನ ಹೃದಯ ಗೆದ್ದವಳು ಕ್ಯಾಂಪಿನಲ್ಲಿದ್ದಾಳೆ. ಅವಳಿಗದು ಗೊತ್ತೇಇಲ್ಲ. ಈ ಬಾರಿ ಅವಳನ್ನು ಮಾತಾಡಿಸಲೇಬೇಕೆಂಬ ಭೀಷ್ಮ ಪ್ರತಿಜ್ಞೆ ಮಾಡಿ ಇವನು ಬಂದವನು. ಇನ್ನು ಅವಳಲ್ಲಿ ಇವನು ಯಾವ ಮುಖ ಇಟ್ಟುಕೊಂಡು ಮಾತಾಡುತ್ತಾನೆ?

ಮನಸ್ಸಿಗಿಲ್ಲ ವಾರ್ಧಕ್ಯ

ತಿಂಡಿ ಮುಗಿಸಿ ಹೊರಡಲು ತಯಾರಾದಾಗ ಪುಂಡರೀಕ ಸಿಕ್ಕಿದ. ನಮ್ಮ ಕಾಲೇಜಲ್ಲಿ ಓದಿ ಅರಂತೋಡಲ್ಲಿ ಕಛೇರಿ ಮುಖ್ಯಸ್ಥನಾಗಿರುವ ಹಳೆ ಅಪರಾಧಿ. ನಮ್ಮ ಸಾಹಸ ಕೇಳಿ ಖುಷಿಪಟ್ಟು ಹೇಳಿದ. ಈ ಪ್ರಾಯದಲ್ಲಿ ಇಂತಹ ಯುವಕರ ಜತೆ ಎಷ್ಟು ಧೈರ್ಯದಿಂದ ಹೊರಟಿದ್ದೀರಿ. ನೀವು ಪ್ರಳಯಾಂತಕರು ಸರ್‌. ನಾನು ನಗುತ್ತಾ ವಯಸ್ಸಾಗುವುದು ದೇಹಕ್ಕೆ, ಮನಸ್ಸಿಗಲ್ಲ ಎಂದೆ. ಪುಂಡ ತನ್ನ ತಾಂಬೂಲವರ್ಣರಂಜಿತ ದಂತಪಂಕ್ತಿ ಪ್ರದರ್ಶಿಸುತ್ತಾ ನಕ್ಕ. ಅರಂತೋಡು ಪದ್ಮನಾಭಣ್ಣ, ಗಂಗಾಧರ್‌ ಮತ್ತು ಕುದ್ಪಾಜೆ ಶುಭಹಾರೈಸಿ ಬೀಳ್ಕೊಟ್ಟರು. ನಮ್ಮ ಬೈಸಿಕಲ್ಲುಗಳು ಮುಂದುವರಿದವು, ಪಯಸ್ವಿನಿ ಸೇತುವೆ ದಾಟಿ ತೊಡಿಕ್ಕಾನದತ್ತ.

ಅಲ್ಲಿಂದ ಆರೇ ಕಿಲೋಮೀಟರು. ಅಡ್ಯಡ್ಕದ ವರೆಗೆ ಇಕ್ಕೆಲಗಳಲ್ಲಿ ವೃಕ್ಷಗಳು. ಮಟ್ಟಸ ರಸ್ತೆಯೇ ಇಲ್ಲ. ಪೂರ್ತಿ ಏರು ತಗ್ಗುಗಳು. ಏರುಗಳಲ್ಲಿ ಇಳಿದು ಬೈಸಿಕಲ್ಲು ತಳ್ಳೋದು. ಇಳಿಜಾರುಗಳಲ್ಲಿ ಪೆಡಲ್ಲಿಗೆ ವಿಶ್ರಾಂತಿ ನೀಡಿ ರೊಂಯ್ಯಯೆಂದು ಗಾಳಿಯಲ್ಲಿ ತೇಲುವುದು. ನಡೆಯುವುದು, ತುಳಿಯುವುದು, ದೂಡುವುದು, ಏರುವುದು, ಇಳಿಯುವುದು. ಬೈಸಿಕಲ್ಲು ಬಿಟ್ಟರೆ ಬೇರಾವ ವಾಹನ ಹೀಗೆ ವೈವಿಧ್ಯಮಯ ಅನುಭವ ನೀಡಲು ಸಾಧ್ಯ? ತೆಂಗಿನ ಮರ ಕಲ್ಪವೃಕವಾದರೆ ಬೈಸಿಕಲ್ಲು ಕಲ್ಪವಾಹನ!

ತೊಡಿಕ್ಕಾನ ದೇವಾಲಯಕ್ಕೆ ಮೊದಲೇ ಸಿಗುತ್ತದೆ ಪುಟ್ಟ ಕಮಲಾಕನ ಮನೆ. ಇವನು ವೈಲಾಯರು ಮನೆಯಲ್ಲಿ ರಸಗವಳ ಹಾಕಿಸಿದ್ದರು. ಮಂಡೆಕೋಲಲ್ಲಿ ಪೂವಪ್ಪ ಕಣಿಯೂರರ ಮಾವ ತ್ಯಾಂಪಣ್ಣ ಗೌಡರ ಮನೆಯಲ್ಲಿ ಎಳನೀರು. ಮಧುರಾಳ ಮನೆಯಲ್ಲಿ ಅವಲಕ್ಕಿ ಬಾಳೆಹಣ್ಣು. ಈಗ ಇನ್ನೊಮ್ಮೆ ಇವರೆಲ್ಲರಿಗೆ ಉಪದ್ರವ ಕೊಡಲು ಮನಸ್ಸು ಒಪ್ಪಲಿಲ್ಲ. ಮತ್ತೆಲ್ಲಿಗೆ? ಮಧ್ಯಾಹ್ನದ ಭೋಜನಕ್ಕೆ ತೊಂದರೆಯಾಗಬಾರದಲ್ಲಾ ? ಯೆಸ್ಸ್‌. ಅದುವೇ ಸರಿ. ತೊಡಿಕ್ಕಾನಕ್ಕೇ ಹೋಗುವುದು. ಅಲ್ಲಿಂದ ದೇವರಗುಂಡಿ ಜಲಪಾತಕ್ಕೆ. ಆಹಾ! ಜಲಲ ಜಲಲ ಜಲಧಾರೆ.

ಈ ಸಲದ ಸಾಹಸಕ್ಕೆ ಇಪ್ಪತ್ತಾರು ಪಡ್ಡೆಗಳು ಹೊರಟು ಬಿಟ್ಟವು. ನಾಯಕ ಪಾವನಕೃಷ್ಣ ಮತ್ತು ಜಾಲಿ ಮ್ಯಾಥ್ಯೂ ಬೈಕಲ್ಲಿ. ಹಾದಿಯಲ್ಲಿ ಯಾರಿಗಾದರೂ ಏನಾದರೂ ಸಂಭವಿಸಿದರೆ ರಕಣೆಗೆ. ಅಕ್ಟೋಬರ ಎಂಟರಂದು ಬೆಳ್ಳಂಬೆಳಗ್ಗೆ ನಾವು ಕಾಲೇಜಿನಿಂದ ಹೊರಟಾಗ ಪ್ರಭಾರ ಪ್ರಾಚಾರ್ಯ ಶ್ರೀ ಕೃಷ್ಣ ಭಟ್‌, ಸ್ಟುಡಿಯೋ ಗೋಪಾಲಂಣನ ಕ್ಯಾಮರಾ ನಮ್ಮ ಮೇಲೆ ಫ್ಲಾಶ್‌ ಲೈಟು ಚೆಲ್ಲುತ್ತಿರುವಂತೆ, ಶುಭ ಹಾರೈಸಿ ಬೀಳ್ಕೊಟ್ಟರು. ಪಳ್ಳಿಯ ಬಾಂಗು, ದೇವಾಲಯದ ಸುಪ್ರಭಾತ ಕಿವಿಗಳಲ್ಲಿ ಅನುರಣಿಸುತ್ತಿರುವಂತೆ ಚಕ್ರವರ್ತಿಗಳು ವೇಗ ಹೆಚ್ಚಿಸಿಕೊಂಡರು.

ತಗೋ! ಪರಿವಾರಕಾನದ ಚಡಾವಿನಲ್ಲಿ ದೇವರಾಜನ ಬೈಸಿಕಲ್ಲಿನ ಚೈನು ಕಟ್ಟ್‌. ಎಲ್ಲಿಂದ ತಂದಿದ್ದನೋ ಗ್ರೀಸು ಕಾಣದ ಲಟಾರಿ ಬೈಸಿಕಲ್ಲನ್ನು. ಹಿಂದೆ ನಾನು ಕಾಲೇಜು ಓದುತ್ತಿರುವಾಗ ಹಾದಿಗೊಂದು, ಬೀದಿಗೊಂದು ಬೈಸಿಕಲ್ಲ ಶಾಪ್! ಈಗೇನು ಮಾಡುವುದು? ಜಾಲಿ ತಲೆಯೋಡಿಸಿ ತನ್ನ ಬೈಕಿಗೆ ದೇವರಾಜನ ಬೈಸಿಕಲ್ಲನ್ನು ಕಟ್ಟಿದ. ದೇವರಾಜ ಬೈಸಿಕಲ್ಲಲ್ಲಿ ಕೂತು ಬೈಕಿನ ವೇಗದಲ್ಲಿ ಪಯಣಿಸಿದ. ಹುಲಿಯ ಸೊಂಟಕ್ಕೆ ಹಗ್ಗ ಹಾಕಿ ತನ್ನ ಸೊಂಟಕ್ಕೆ ಸಿಕ್ಕಿಸಿಕೊಂಡ ನರಿಯ ಪಾಡು ನೆನಪಾಯಿತು. ಅದನ್ನು ಹೇಳುವುದಾದರೂ ಹೇಗೆ ?

ದೇವರಾಜನ ಸೌಭಾಗ್ಯ ನೋಡಿ ಕಮಲಾಕ ರೈಗೆ ಮಂಡೆಬೆಚ್ಚ ಆಯಿತು. ಅಂತಿಮ ಬಿ.ಎ. ಯಲ್ಲಿ ಮೂವರು ಕಮಲಾಕರು. ಇವ ಪ್ರಥಮ ಬಿ. ಎ. ಯಲ್ಲಿದ್ದಾಗ ತರಗತಿಯ ನಾಯಕನಾಗಿದ್ದವ. ಮಾತಿನಲ್ಲಿ ಬಲುನಿಪುಣ, ಹಿಂದಿನ ಬೆಂಚಲ್ಲಿ ಕೂತಾಗ ಮಾತ್ರ! ತರಗತಿಗೆ ಸಮಯಕ್ಕೆ ಸರಿಯಾಗಿ ಬರುವುದು ಅವಿವೇಕಿಗಳ ಲಕ್ಷಣ ಎಂದು ಬಲವಾಗಿ ಮತ್ತು ಬಹಳ ಹಿಂದಿನಿಂದಲೂ ಸಾಂಪ್ರದಾಯಿಕವಾಗಿ ನಂಬಿಕೊಂಡೇ ಈ ಮಟ್ಟಕ್ಕೆ ಬೆಳೆದವ. ಸಂಪ್ರದಾಯವನ್ನು ಬಿಡಬಾರದೆಂದು ಚಾಚೂತಪ್ಪದೆ ಪಾಲಿಸಿಕೊಂಡು ಬರುವವನು. ಪಾಪ ಕಮಲಾಕ ರೈತ. ಹೊಲ ತೋಟ ನೋಡಿಕೊಂಡು ಬರುವಾಗ ಹೊತ್ತಾಗುತ್ತದೆ ಎಂದು ಒಂದು ಬಾರಿ ಅವನ ಮೇಲೆ ಅನುಕಂಪದ ಮಳೆಗೆರೆದೆ. ಅವನ ‘ರೈ’ ಮುಂದುಗಡೆ ‘ತ’ ಸೇರಿಕೊಂಡಿತು. ರೈತನ ಪಟ್ಟ ಅವನಿಗೆ ಆಚಂದ್ರಾರ್ಕವಾಗಿ ಉಳಿದು ಹೋಯಿತು. ಅವನು ಬೈಸಿಕಲ್ಲು ಬಿಡಲಾಗದೆ ಒದ್ದಾಡುತ್ತಿದ್ದವ ಗೊಣಗಿಕೊಳ್ಳುವುದು ಕೇಳಿಸಿತು. ಹಾಳಾದ್ದು ಆ ದೇವರಾಜನದರ ಬದಲು ನನ್ನ ಬೈಸಿಕಲ್ಲಿನ ಚೈನು ಕಟ್ಟಾಗಬಾರದಿತ್ತಾ ?

ಅರಂತೋಡಿಗೆ ಮುಟ್ಟಿದೆವು. ಖಾಲಿ ಹೊಟ್ಟೆ ತಾಳ ಹಾಕುತ್ತಿತ್ತು. ಅಲ್ಲಿ ಭರ್ಜರಿ ಉಪಹಾರ ನಮಗಾಗಿ ಕಾದಿರುತ್ತದೆ. ನಿನ್ನೆ ಬೆಳಗ್ಗೊಮ್ಮೆ, ಸಂಜೆಯೊಮ್ಮೆ ಹೇಳಿದ್ದೇನೆ ಎಂದು.

ಗಿಡ್ಡನೆಯ ಆಳು. ಎದುರು ಬೆಂಚಲ್ಲೇ ಕುಳಿತುಕೊಳ್ಳುವವನು. ಪಾಠ ಕೇಳುತ್ತಾನೆ, ಪ್ರಶ್ನೆಯನ್ನೂ ಕೇಳುತ್ತಾನೆ. ಚೆನ್ನಾಗಿ ಅಂಕಗಳಿಸುತ್ತಾನೆ. ವಿದ್ಯೆಯು ವಿನಯದಿಂದ ಶೋಭಿಸುತ್ತದೆ ಎನ್ನುವುದನ್ನು ತಿಳಿದುಕೊಂಡವನು. ಅವನ ಮನೆಗೆ ಹೊಳೆ ದಾಟಿ ಹೋಗಬೇಕು. ಬೂಟಿಗಾಲಿನವರನ್ನು ಕೂಸುಮರಿ ಮಾಡಿಕೊಂಡು ಉಳಿದವರು ಹೊಳೆ ದಾಟುವಾಗ ಅಡಿಗರ ಕವನ ನೆನಪಾಯಿತು. ಹೆಳವನ ಹೆಗಲಲ್ಲಿ ಕುರುಡ ಕುಳಿತಿದ್ದಾನೆ. ಹಾದಿ ಹೇಗೆ ಸಾಗೀತು!

ಪುಟ್ಟ ಕಮಲಾಕನ ಮನೆಯಲ್ಲಿ ಪುಟ್ಟ ಪುಟ್ಟ ಕೋಣೆಗಳು. ಅವನ ತಂದೆ, ತಾಯಿ, ಅಜ್ಜ, ಅಣ್ಣ ಎಲ್ಲರದ್ದೂ ಪುಟ್ಟ ಆಕೃತಿಗಳು. ನಮಗಾಗಿ ಆ ಪುಟ್ಟ ಮನೆಯ ಬುಟ್ಟಿಯಲ್ಲಿ ಇಡ್ಲಿ, ಎರಡು ಪಾತ್ರೆಗಳಲ್ಲಿ ಸಾಂಬಾರು ಮತ್ತು ಚಟ್ನಿ, ಹಂಡೆಯಲ್ಲಿ ಚಹಾ ಕಾಯುತ್ತಿತ್ತು. ಚಕ್ರವರ್ತಿಗಳ ದಿಗ್ವಿಜಯಯಾತ್ರೆ ನಿರ್ವಿಘ್ನವಾಗಿ ಮತ್ತು ವೇಗವಾಗಿ ಸಾಗಿತು.

ಪುಟ್ಟ ಕಮಲಾಕನ ಅಜ್ಜನಿಗೆ ಈ ಪಡ್ಡೆಗಳ ಮಾತು ಮತ್ತು ತುಂಟತನ ನೋಡಿ ಬಾಲ್ಯದ ನೆನಪಾಗಿರಬೇಕು. ಹೊಸ ಚೈತನ್ಯದಿಂದ ಮನೆಯಿಡೀ ಓಡಾಡುತ್ತಾ ನಾವು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತಾ ಕೋವಿಯೊಂದನ್ನು ತಂದು ತೋರಿಸಿದರು. ಇದು ಆಟಿಗೆಯದ್ದು. ರವುಂಡು ಆಕಾರದ್ದು ಏನನ್ನು ಹಾಕಿದರೂ ಗುರಿ ಹೊಡೆಯಬಹುದು ಎಂದರು.

ಜಾಲಿ ಅದನ್ನು ಎತ್ತಿಕೊಂಡ. ಅಂಗಳದ ಎಡ ಬದಿಯ ಕಂಗಿನ ಗಿಡಗಳು ಮೈತುಂಬಾ ಹೊದ್ದು ಕೊಂಡಿದ್ದ ಬಳ್ಳಿಗಳಿಂದ ಕಾಳು ಮೆಣಸುಗಳನ್ನು ಕಿತ್ತು ಕೋವಿಗೆ ಹಾಕಿ ಗುರಿ ಇಡತೊಡಗಿದ. ಎಷ್ಟು ಚುರುಕಾಗಿದೆ ಇವನ ಬುದ್ಧಿ! ಜಾಲಿ ಎಂದು ಯಾಕಾದರೂ ಹೆಸರಿಟ್ಟರೋ! ಸದಾ ಜಾಲಿಯಾಗಿರುತ್ತಾನೆ ತರಗತಿಗೆ ಬಾರದೆ, ಬಂದರೂ ಪಾಠ ಕೇಳದೆ.

ಬನ್ನಿ ನಿಮಗೆ ವಿಷ್ಣು ಮೂರ್ತಿಯ ಗುಡಿ ತೋರಿಸುತ್ತೇನೆ. ಬಹಳ ಕಾರಣಿಕದ್ದು. ಪುಟ್ಟ ಕಮಲಾಕನ ಅಜ್ಜ ಮನೆಯ ಹಿಂಬದಿಯ ಎತ್ತರದ ಜಾಗಕ್ಕೆ ನಮ್ಮನ್ನು ಕರಕೊಂಡು ಹೋದರು. ಅಶ್ವತ್ಥಮರ, ಅದರ ಸಮೀಪದ ಗುಳಿಗ್ಗನ ಕಲ್ಲು, ವಿಷ್ಣುಮೂರ್ತಿ ಗುಡಿ ಮತ್ತು ವಿಗ್ರಹ ತೋರಿಸಿದರು. ತಟ್ಟೆಯಲ್ಲಿದ್ದ ಅರಸಿನ ಮತ್ತು ಅಕ್ಕಿಕಾಳು ಪ್ರಸಾದ ನೀಡಿದರು. ಈ ಹುಡುಗ ಮುಂಡೇವುಗಳ ಬುದ್ಧಿ ಸರಿಪಡಿಸುವಂತೆ ವಿಷ್ಣು ಮೂರ್ತಿಗೆ ಒಂದು ಪ್ರಾರ್ಥನೆ ಸಲ್ಲಿಸಿ ಎಂದೆ. ಇವಕ್ಕೇನಾಗಿದೆ ? ಪ್ರಾಯ ಅಷ್ಟೇ. ಮದುವೆ ಮಾಡಿಸಿದರೆ ಸರಿಹೋಗ್ತಾರೆ ಎಂದು ಅಜ್ಜ ಹೇಳಿದರು. ನಾನಾಗ ಇವರು ಅದಕ್ಕೇ ಕಾದಿದ್ದಾರೆ. ನೀವೂ ಅದನನ್ನೇ ಹೇಳ್ತಿದ್ದೀರಿ. ಆದರೆ ಅಜ್ಜ ಇವರ ಬುದ್ಧಿ ಸರಿಯಾಗದೆ ಇವರಿಗೆ ಯಾರು ಹೆಣ್ಣು ಕೊಡುತ್ತಾರೆ? ಒಟ್ಟಿನಲ್ಲಿ ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು ಎಂಬಂತಾಗಿದೆ ಇವರ ಕತೆ ಎಂದೆ. ಎಲ್ಲರೊಡನೆ ಅಜ್ಜನೂ ನಕ್ಕರು.

ದೇವರ ಗುಂಡಿ ಜಲಧಾರೆ ಮತ್ತು ಪಾಂಡವರು

ತೊಡಿಕ್ಕಾನ ದೇವಾಲಯದಿಂದ ದೇವರಗುಂಡಿ ಜಲಪಾತಕ್ಕೆ ಎರಡು ಕಿ. ಮೀ. ದೂರದ ಏರುದಾರಿ. ಬೈಸಿಕಲ್ಲುಗಳು ತತ್ಕಾಲಕ್ಕೆ ನಿರುಪಯೋಗಿ ಎಂದು ದೇವಾಲಯದ ಮುಂದೆ ಅವನ್ನು ಸಾಲಾಗಿ ನಿಲ್ಲಿಸಿ ಪಯಣ ಮುಂದುವರಿಸಿದೆವು. ಜಾಲಿ ಮಾತ್ರ ಅಲ್ಲಿಯವರೆಗೂ ಜಾಲಿ ರೈಡು ಮಾಡಿಯೇ ಬಿಟ್ಟಿ.

ಹಾದಿಯಲ್ಲಿ ನಾಯಿಯೊಂದು ನಮ್ಮನ್ನು ನೋಡಿ ಬಾಲ ಅಲ್ಲಾಡಿಸುತ್ತಾ ಸ್ವಾಗತಿಸಿತು. ಅದನ್ನು ನೋಡಿ ಯತಿರಾಜ ಸುನೀಲ್‌ಗೆ ಹೇಳಿದ.  ನೋಡು ನಿನ್ನನ್ನು ನೋಡಿ ಖುಷಿಯಾಗಿದೆ ಅದಕ್ಕೆ. ಎಷ್ಟಾದರೂ ಸ್ವಜಾತಿ ಪ್ರೇಮ.

ಸ್ಪಲ್ಪ ಮುಂದೆ ಇನ್ನೊಂದು ನಾಯಿ ಕಾಣಸಿಕ್ಕಿತು. ನಮ್ಮ ಬೊಬ್ಬೆ ಗಲಾಟೆಗಳಿಗೆ ಅದು ಸಹನೆ ಕಳಕೊಂಡು ಬೊಗಳತೊಡಗಿತು. ಸುನಿಲ್‌ ಆಗ ಯತಿರಾಜನಿಗೆ ಚುಚ್ಚಿದ. ನೋಡು ನಿನ್ನನ್ನು ನೋಡಿ ಅದಕ್ಕೆ ಬಿಸಿಯಾಗಿದೆ. ಯಾಕೆಂದರೆ ಜಾತಿಗ್‌ ಜಾತಿ ಪಗೆ!

ದೇವರಗುಂಡಿ ಸುಂದರವಾದ ಜಲಪಾತ. ಸುಮಾರು ನಲವತ್ತು ಅಡಿ ಎತ್ತರದಿಂದ ಧುಮುಕ್ಕುವ ನೀರು ಆಳಅರಿಯದ ಗುಂಡಿಯನ್ನು ನಿರ್ಮಿಸಿದೆ. ಮಳೆಗಾಲದ ಕೊನೆಯ ಚರಣವಾದುದರಿಂದ ಮೈ ತುಂಬಿಕೊಂಡು ವೈಯ್ಯಾರದಿಂದ ಜಲ ಕೆಳಗೆ ಧುಮ್ಮಮಿಕ್ಕುತ್ತಿತ್ತು. ಇಲ್ಲೇ ಕಣ್ವ ಮುನಿ ತಪಸ್ಸು ಮಾಡಿದ್ದು. ಇಲ್ಲೇ ಶಬರವೇಷ ತಾಳಿ ಶಿವಪಾರ್ವತಿಯರು ಅರ್ಜುನನ ಬಲ ಮತ್ತು ಛಲ ಪರೀಕೆ ಮಾಡಿದ್ದು. ಇಲ್ಲೇ ಹಂದಿರೂಪದ ಮೂಕಾಸುರ ಶಿವನ ಮತ್ತು ಅರ್ಜುನನ ಬಾಣಕ್ಕೆ ಬಲಿಯಾದದ್ದು. ಇಲ್ಲೇ ಪಾರ್ಥ ಮತ್ತು ಶಬರಶಂಕರರ ನಡುವೆ ಘನಫೋರ ಕದನವಾದದ್ದು. ಅದರಲ್ಲಿ ಅರ್ಜುನ ಸೋತು, ಇದೇ ಜಲಪಾತದಲ್ಲಿ ಮಿಂದು, ಮಳಲ ಲಿಂಗವ ರಚಿಸಿ ಅರ್ಚಿಸಿ, ಪರಶಿವನನ್ನು ಮೆಚ್ಚಿಸಿದ್ದು. ಆ ನೆನಪಿಗೆ ಇಲ್ಲಿಂದ ಸ್ವಲ್ಪ ಕೆಳಗೆ ತೊಡಿಕ್ಕಾನದಲ್ಲಿ ಶಿವ ಮಲ್ಲಿಕಾರ್ಜುನನಾಗಿ ನೆಲೆಸಿದ. ತೋಡು ಮತ್ತು ಕಾಡು ಮಧ್ಯದ ಊರು ತೊಡಿಕ್ಕಾನವಾಯಿತು. ತೊಡಿಕ್ಕಾನದ ಹಳೆಯ ತಲೆಗಳು ಭಾವುಕತೆಯಿಂದ ಸ್ಥಳ ಪುರಾಣ ಹೇಳುತ್ತವೆ. ಆ ಮಟ್ಟಿಗೆ ಭಾರತೀಯರ ವಿವಿಧತೆಯಲ್ಲಿ ಏಕತೆಯಿದೆ. ಎಲ್ಲರ ಊರುಗಳಲ್ಲೂ ಇವೆ  ಪಾಂಡವರ ಗುಹೆ, ಪಾಂಡವರ ಕೊಳ, ಪಾಂಡವರ ಅಡಿಕೆ ಮತ್ತು ಪಾಂಡವರ ಒಲೆ!

ಗುಂಡಿಗಿಂತ ಕೆಳಗೆ ಬಂಡೆಗಳ ನಡುವೆ ಹರಿಯುವ ಶುಭ್ರಶ್ವೇತ ನೀರು ನನ್ನನ್ನು ಸೆಳೆಯಿತು. ತೊಡಿಕಾನದ ಕವಯಿತ್ರಿ ಲೀಲಾ ನಮ್ಮನ್ನು ಸ್ವಾಗತಿಸಲು ಅಲ್ಲಿಗೆ ಬಂದಿದ್ದಳು ಛಾಯಾಗ್ರಾಹಕ ಅಣ್ಣ ಸೀತಾರಾಮನೊಡನೆ. ಆತ ಛಾಯಾಗ್ರಹಣದೊಡನೆ ಎಲ್ಲವನ್ನೂ ವೀಡಿಯೋ ರೆಕಾರ್ಡಿಂಗ್‌ ಮಾಡುತ್ತಿದ್ದ. ನೀರಿನ ಆಕರ್ಷಣೆಯಿಂದ ನಾನೀಗ ನೀರಿಗಿಳಿದರೆ ಅದು ಚಿತ್ರೀಕರಣವಾಗುತ್ತದೆ. ನಾನು ಚಡ್ಡಿ ಬನಿಯನ್ನು ಧಾರಿಯಾಗಿ ನೀರಿಗಿಳಿದೆ. ಬಂಡೆಯುದ್ದಕ್ಕೂ ಒರಗಿ ನನ್ನ ಮೇಲಿನಿಂದ ನೀರನ್ನು ಹರಿಯಗೊಟ್ಟೆ. ತಲೆ, ಮುಖ, ಕಣ್ಣು ಕಿವಿಯೆಂದು ನೋಡದೆ ನೀರು ನನ್ನನ್ನು ಪೂರ್ತಿಯಾಗಿ ಆವರಿಸಿಕೊಂಡಿತು. ನನ್ನ ಕಿವಿಯಲ್ಲಿ ನೂಪುರ ನಾಟ್ಯಧಾರಾ ರಸಗಂಗೆಯಾಯಿತು. ಬಾಯಾರಿಕೆಗೆ ಸುರ ತರಂಗಿಣಿಯಾಯಿತು. ಜಲಧಾರೆಗೆ ತಲೆಯೊಡ್ಡಿ ನಾನು ಜಾಹನವೀಧರನಾಗಲೆತಿನಸಿದೆ. ಹಾಗೇ ಮೈಮೆರೆತು ಪ್ರಕೃತಿಯೊಡನೆ ಅನುಸಂಧಾನ ನಡೆಸಿದೆ.

ಈಗ ಪಡ್ಡೆಗಳಿಗೆ ಧೈರ್ಯ ಬಂತು. ಒಬ್ಬೊಬ್ಬರಾಗಿ ನನ್ನನ್ನು ಕೂಡಿಕೊಂಡರು. ಬಂಡೆಯುದ್ದಕ್ಕೂ ಹರಿಯುವ ನೀರಲ್ಲಿ ಜಾರುಬಂಡಿಯಾಡಿದರು. ನನ್ನ ಬಳಿ ಕೂತು ಜಾರುಬಂಡಿಯಾಟ ನೋಡುತ್ತಿದ್ದ ಕಡ್ಡಿ ಗಿರೀಶನ ಪೃಷ್ಠಕ್ಕೊದ್ದಾಗ ಅವನು ಸರ್ರನೆ ಕೆಳಕ್ಕೆಜಾರಿದ. ಕಡ್ಡಿ ಗಿರೀಶನ ಅವಸ್ಥೆ ನೋಡಿ ಲಂಬೂ ಗಿರೀಶ ಪರಿಹಾಸ್ಯ ಮಾಡಿದ.

ಕೆಳಭಾಗದಲ್ಲಿ ನೀರಿನೊಡನೆ ಚಿನ್ನಾಟವಾಡುತ್ತಿದ್ದ ಪಡ್ಡೆಗಳು ಸಿಕ್ಕಿತು, ಸಿಕ್ಕಿತು ಎಂದು ಬೊಬ್ಬಿಟ್ಟರು. ಏನೆಂದು ನೋಡಿದರೆ ಪುರುಷೋತ್ತಮ ದಂಡಯಾತ್ರೆಯಲ್ಲಿ ವಿಜಯಸಾಧಿಸಿದ ಸಮ್ರಾಟನ ಭಂಗಿಯಲ್ಲಿ ನಿಂತಿದ್ದ.  ಇಷ್ಟು ಹೊತ್ತು ವಶಿಷ್ಠನ ದೇಹ ನೀರಿನಲ್ಲಿ ಒದ್ದೆಯಾದ ಮೇಲೆ ಅವನ ಮೈ ತಿಕ್ಕಿದಾಗ ಜನಿವಾರ ಸಿಕ್ಕಿಯೇ ಬಿಟ್ಟಿತು ಸರ್‌ ಎಂದು ಪುರುಷೋತ್ತಮ ಹೇಳುವಾಗ ಶ್ರೀವತ್ಸ ಹಲ್ಲು ಕಿರಿಯುತ್ತಿದ್ದ.

ಇದೆಲ್ಲವೂ ಲೀಲಾಳ ಅಣ್ಣನ ವೀಡಿಯೋದಲ್ಲಿ ಚಿತ್ರೀಕರಣವಾಗುತ್ತಲೇ ಇತ್ತು. ಅಣ್ಣನ ಸಹಾಯಕಿ ಮತ್ತು ಲೀಲಾ ಇಬ್ಬರೇ ಅಲ್ಲಿದ್ದ ಹೆಣ್ಣುಜೀವಗಳು. ಲೀಲಾ ಒಂದಷ್ಟು ಕವನ ಬರೆದವಳು. ಇನ್ನೇನು ಕೆಲವು ದಿನಗಳಲ್ಲಿ ಕವನ ಸಂಕಲನವೊಂದನ್ನು ಹೊರ ತರುವವಳು. ಮಂಗಳ ಗಂಗೋತ್ರಿಯಲ್ಲಿ ಎನ್‌. ಎಸ್‌. ಎಸ್‌. ಕ್ಯಾಂಪಿನಲ್ಲಿ ನನ್ನ ಮಗನನ್ನು ಭೇಟಿಯಾದವಳು ನಾನು ಸಿಕ್ಕಾಗ ಹೇಳಿದ್ದಳು. ಏನು ನಾಚಿಕೆ ಸರ್‌ ನಿಮ್ಮ ಮಗ ಪೃಥ್ಥಿಸಾಗರನಿಗೆ. ಮಾತೇ ಆಡುವುದಿಲ್ಲ. ಅವನನ್ನು ಮಾತಾಡಿಸುವುದರಲ್ಲಿ ಯಾವಳು ಯಶಸ್ವಿಯಾಗುತ್ತಾಳೋ ಅವಳೊಡನೆ ಅವನ ಮದುವೆ ಎಂದು ನಿಶ್ಚಯಿಸಿದ್ದೇನೆ ಎಂದಿದ್ದೆ. ಲೀಲಾ ನಾಚಿದ್ದಳು. ಇನ್ನೀಗ ನಮ್ಮ ನೀರಾಟದ ಬಗ್ಗೆ ಒಂದಾದರೂ ಕವನ ಬರೆದೇ ಬರೆಯುತ್ತಾಳೆ.

ನಮ್ಮಲ್ಲಿ ಹೆಚ್ಚಿನವರು ನೀರಿಗಿಳಿದಿದ್ದರೂ ಮಡಪ್ಪಾಡಿ ಪ್ರವೀಣ, ವಿನಯ ಮತ್ತು ಇನ್ನಿಬ್ಬರು ರಾಸಲೀಲೆಯಲ್ಲಿ ಪಾಲ್ಗೊಳ್ಳಲಿಲ್ಲ. ಮಡಪ್ಪಾಡಿ ನೀರು ಕಂಡರೆ ಓಡುತ್ತಿದ್ದ ಹಿಮ್ಮುಖವಾಗಿ. ಅವನಿಗೆ ಇಷ್ಟವಾಗುವುದು ನೀರೆಯರು ಮಾತ್ರ ಎಂದು ಹರೀಶ ಕಾವ್ಯಾತ್ಮಕವಾಗಿ ಹೇಳಿದ. ಆಗ ಜಲಪಾತದ ಭೋರ್ಗರೆತವನ್ನು ಮೀರಿದ ನಗುವಿನ ಅಬ್ಬರ.

ಮಡಪ್ಪಾಡಿಯಲ್ಲಿ ಎರಡು ಮೊಬೈಲುಗಳಿವೆ. ಅವುಗಳಲ್ಲಿ ಒಂದನ್ನು ಅವನ ಮನಗೆದ್ದವಳಿಗೆ ನೀಡಿದ್ದಾನೆ. ಅವಳಿಗೆ ಮಾತ್ರ ಇವನು ಫೋನು ಮಾಡುವುದು. ನಾವೀಗ ಇವನ ಕಣ್ಣಿಗೆ ಕಾಣಿಸುವುದೇ ಇಲ್ಲ ಎಂದು ಅವನ ಗಳಸ್ಯ ಕಂಠಸ್ಯ ಮಿತ್ರ ಕಾಂತಮಂಗಲದ ವಿನಯ ದೂರಿದ. ಸದಾ ಸಂದೇಹಾಸ್ಪದವಾಗಿ ಕಾಲೇಜಿನ ಉದ್ದಗಲಕ್ಕೆ ತಿರುಗಾಡುವ ಮಡಪ್ಪಾಡಿಯ ಬಗ್ಗೆ ಎಲ್ಲರಿಗೂ ಗುಮಾನಿಯೇ. ಅವನ ಮೊಬೈಲು ತರಗತಿಯಲ್ಲೊಮ್ಮೆ ಮೊಳಗಿ ಒಬ್ಬ ಮೇಡಂ ಅವನಿಗೆ ಸಹಸ್ರ ನಾಮಾರ್ಚನೆಯನ್ನು ಮಾಡಿದ್ದರು. ಮಡಪ್ಪಾಡಿ ಅಂಥದ್ದಕ್ಕೆಲ್ಲಾ ಬಗ್ಗುವ ಕುಳವೇ ಅಲ್ಲ.

ಒಂದು ಗಂಟೆ, ಎರಡು ಗಂಟೆ. ಎರಡುಗಂಟೆ ನೀರಲ್ಲಿ ಚಿನ್ನಾಟ. ಎಷ್ಟು ಚೆನ್ನಾಗಿದೆ ಇದು ಈ ದೇವರ ಗುಂಡಿ! ಇದಕ್ಕೆ ನೇರ ದಾರಿಯಿಲ್ಲ. ಖಾಸಗಿಯವರ ಮನೆಯಂಗಳ, ತೋಟ ದಾಟಿ ಬರಬೇಕು. ಗುಂಡಿಯ ನೀರು ತೋಡಾಗಿ ಹರಿಯುತ್ತದೆ. ಇಕ್ಕೆಲಗಳಲ್ಲಿ ಖಾಸಗಿ ತೋಟಗಳು. ಇದು ಸರಕಾರದ ವಶದಲ್ಲಿರಬೇಕಿತ್ತು. ಮನಸ್ಸು ಮಾಡಿದರೆ ಪ್ರವಾಸೋದ್ಯಮ ಇಲಾಖೆ ಇದನ್ನು ಸುಳ್ಯದ ಅರ್ಧಿತ ಪ್ರವಾಸಧಾಮವಾಗಿ ಬದಲಾಯಿಸಬಹುದು. ಇದು ಧ್ಯಾನಕ್ಕೆ, ಅಂತರಾವಲೋಕನಕ್ಕೆ, ಪ್ರಕೃತಿಯೊಡನೆ ಅನುಸಂಧಾನಕ್ಕೆ, ಏಕತಾನತೆ ಹೋಗಲಾಡಿಸಿ ಅನಂತ ಚೈತನ್ಯ ದಕ್ಕಿಸಿಕೊಳ್ಳುವುದಕ್ಕೆ ಅತ್ಯಂತ ಸೂಕ್ತ ಪ್ರದೇಶ. ಯುರೋಪಿನ ರಾಷ್ಟ್ರಗಳಲ್ಲಿ ಗುಹೆಯನ್ನೂ ಪ್ರವಾಸೀ ಕೇಂದ್ರವನ್ನಾಗಿ ಪರಿವರ್ತಿಸುವುದನ್ನು ಕಂಡಿದ್ದೆ. ಆ ರಾಷ್ಟ್ರಗಳ ಪ್ರವಾಸೋದ್ಯಮ ಪರಿಸ್ಥತಿಯನ್ನು ಕಂಡಮೇಲೆ ನಮ್ಮ  ಪ್ರವಾಸೋದ್ಯಮ ಮತ್ತು ಪುರಾತತ್ವ ಇಲಾಖೆಗಳು ಉಸಿರಾಡುವುದನ್ನು ನಿಲ್ಲಿಸಿ ಎಷ್ಟೋ ವರ್ಷಗಳಾಗಿವೆ ಎಂಬ ತೀರ್ಮಾನಕ್ಕೆ ಬಂದಿದ್ಧೀನೆ.

ಇಲ್ಲಿಂದ ಪಟ್ಟೆಗಾಗಿ ಭಾಗಮಂಡಲಕ್ಕೆ ಒಮ್ಮೆ ಕಾಲೇಜು ಮಕ್ಕಳೊಡನೆ ಮಳೆಗಾಲದಲ್ಲಿ ಹೋಗಿದ್ದೆ. ಕಣಿಯೂರು ಜತೆಗಿದ್ದರು. ನಡೆದಷ್ಟೂ ಮುಗಿಯದ ಹಾದಿ. ಮೈಯಿಡೀ ಮುತ್ತಿಕೊಳ್ಳುವ ಕಾಡ ಜಿಗಣೆಗಳು. ತೊಡಿಕ್ಕಾನ ಬಿಡುವಾಗ ಸಂಜೆ ಐದರ ಹತ್ತಿರವಾಗಿತ್ತು. ಭಾಗಮಂಡಲಕ್ಕೆ ಮುಟ್ಟಿದ್ದು ಮಧ್ಯರಾತ್ರಿಯಲ್ಲಿ. ದೇವಾಲಯದ ತಣ್ಣನೆಯ ನೆಲದಲ್ಲಿ ಹಸಿದ ಹೊಟ್ಟೆಯಲ್ಲಿ ಮಲಗಿದವರಿಗೆ ಹೇಗೆ ನಿದ್ದೆ ಬಂದೀತು? ಆದರೆ ಅಂತಹ ಅನುಭವ ಭಾಗ್ಯ ಎಷ್ಟು ಜನರಿಗೆ ದೊರೆತೀತು ?

ಒಲ್ಲದ ಮನಸ್ಸಿನಿಂದ ಜಲಧಾರೆಯ ಆಲಿಂಗನದ ಬಂಧನ ಬಿಡಿಸಿಕೊಂಡು ತೊಡಿಕ್ಕಾನದತ್ತ ನಡೆದವು. ನಮ್ಮ ಚೇತನಕುಮಾರನ ಚಿಕ್ಕಪ್ಪನ ಮನೆಯಲ್ಲಿ ಚಹಾ ಮತ್ತು ಬಿಸ್ಕತ್ತು ನಮ್ಮನ್ನು ಕಾಯುತ್ತಿದ್ದವು. ಬಿಟ್ಟಿ ಸಿಕ್ಕಾಗ ನಮ್ಮ ಚಕ್ರವರ್ತಿಗಳ ಸಾಹಸ ನೋಡಬೇಕು. ಪ್ರತಿಯೊಬ್ಬನೂ ಪರಮ ವೀರ ಚಕ್ರ ಪ್ರಶಸ್ತಿಗೆ ಅರ್ಹನು! ಊಟದ ಸಮಯವೆಂದು ನಾನು ಬಿಸ್ಕತ್ತು ತೆಗೆದು ಕೊಳ್ಳಲಿಲ್ಲ. ಒತ್ತಾಯಕ್ಕೆ ಕೈಯಲ್ಲಿರಿಸಿದ ಬಿಸ್ಕತ್ತುಗಳನ್ನು ಅಲ್ಲೇ ಹಟ್ಟಿಯಲ್ಲಿದ್ದ ದನಗಳಿಗೆ ತಿನ್ನಿಸಿದೆ. ದನವೊಂದು ತನ್ನ ದೊರಗು ನಾಲಿಗೆಯಿಂದ ನನ್ನ ಕೈ ನೆಕ್ಕಿ ಕೃತಜ್ಞತೆ ಸಲ್ಲಿಸಿತು. ಎಳವೆಯಲ್ಲಿ ರಜಾದಿನಗಳಲ್ಲಿ ನಾನು ಗೋಪಾಲಕನಾಗಿ ಕಳೆಯುತ್ತಿದ್ದ ದಿನಗಳು ನೆನಪಾದವು.

ತೊಡಿಕ್ಕಾನ ದೇವಾಲಯದಲ್ಲಿ ಮಧ್ಯಾಹ್ನದ ಭರ್ಜರಿ ಊಟ. ಬಿಸ್ಕತ್ತು ಚಹಾ ಬಿಟ್ಟಿ ಸಿಕ್ಕಿತೆಂದು ಇಳಿಕೆಯ ಸೀಮಾಂತ ತುಷ್ಟಿಗುಣ ನಿಯಮ ಅನ್ವಯವಾಗುವರೆಗೂ ಹೇರಿಕೊಂಡವರ ಹೊಟ್ಟೆಯಲ್ಲಿ ಜಾಗವೆಲ್ಲಿರಬೇಕು ? ಬೆಳ್ತಿಗೆ ಅನ್ನ, ತಿಳಿಸಾರು, ಸಾಂಬಾರು, ಮಜ್ಜಿಗೆ, ಒಂದು ತುಂಡು ಉಪ್ಪಿನಾಯಿ. ಸ್ವರ್ಗಕ್ಕೆ ಕಿಚ್ಚು ಹಚ್ಚೆಂದ. ನಾನು ಹೊಟ್ಟೆ ಬಿರಿಯುವಷ್ಟು ಉಂಡೆ.

ಹೊರಗೆ ಬೈಸಿಕಲ್ಲು ನಿಲ್ಲಿಸಿದಲ್ಲಿಗೆ ಬಂದು ನೋಡುತ್ತೇನೆ. ಅದರ ಹ್ಯಾಂಡಲ್ಲಿಗೆ ಸಿಕ್ಕಿಸಿದ್ದ ಫಲಕವೇ ಇಲ್ಲ. ಪರಿಸರ ಪ್ರೇಮ ಉದ್ದೀಪನಗೊಳಿಸುವ ಫೋಷಣೆಗಳಿದ್ದ ಫಲಕವದು. ಈಗ ಹಗ್ಗ ಮಾತ್ರ ನೇತಾಡುತ್ತಿದೆ. ಯಾವ ಭಯೋತ್ಪಾದಕನದ್ದು ಈ ಕೆಲಸವೆಂದು ನೋಡಿದರೆ ದೊಡ್ಡ ದನವೊಂದು ಅಲ್ಲೇ ನಿಂತು ಮೆಲುಕಾಡುತ್ತಿದೆ. ಅದರ ಮುಖದಲ್ಲಿ ಪರಿಸರ ಸಂರಕಿಸಿದ ತೃಪ್ತಿ ಇತ್ತು!

ಪೆರುವೋಲುಗಳ ಮೀನುಗುಂಡಿ

ದೇವರ ಗುಂಡಿಯಿಂದ ನೀರು ಹರಿದು ತೊಡಿಕ್ಕಾನದಲ್ಲಿ ಮೀನುಗುಂಡಿ ನಿರ್ಮಾಣವಾಗಿದೆ. ಅದರಲ್ಲಿ ವಿವಿಧ ಗಾತ್ರದ ಪೆರುವೋಲು ಮೀನುಗಳು. ಶಿಶಿಲದಲ್ಲಿ ಕಪಿಲಾನದಿಯ ಮತ್ಸ್ಯತೀರ್ಥದಲ್ಲಿ ಪೆರುವೋಲುಗಳು ರಾಶಿ ರಾಶಿ ಕಾಣಸಿಗುತ್ತವೆ. ತೊಡಿಕ್ಕಾನದ ಮೀನ ಗುಂಡಿಯಲ್ಲಿ ಅದರ ಕಾಲು ಭಾಗವೂ ಇರಲಿಕ್ಕಿಲ್ಲ. ಆದರೂ ಆ ಮೀನುಗಳನ್ನು ನೋಡಿಯೇ ಮೀನಾಕ್ಷಿ ಎಂಬ ಹೆಸರು ಕವಿಗಳ ಮನದಲ್ಲಿ ಮೂಡಿರಬೇಕು. ಅಕ್ಕಿ ಹಾಕಿದಾಗ ಅವು ತಿನ್ನುವುದನ್ನು ನೋಡುವುದೇ ಒಂದು ಮೋಜು. ಕಾವೇರಿ ನದಿಯಲ್ಲಿ ತುಂಬಾ ಕಾಣಸಿಗುತ್ತವೆ. ಮೆಹಶೀರ್‌ ಎಂದು ಅವಕ್ಕೆ ನಾಮಕರಣ ಮಾಡಿ ಅವನ್ನು ಗಾಳ ಹಾಕಿ ಹಿಡಿಯುವ ಆನಂದವನ್ನು ವಿದೇಶೀಯರಿಗೆ ಕಲ್ಪಸಿಕೊಡಲಾಗುತ್ತದೆ. ಕೆಲವು ಕಡೆ ಡೈನಮೈಟ್‌ ಸಿಡಿಸಿ ಮೀನುಗಳನ್ನು ಕೊಂದು ಮಾರುವವರೂ, ಅವರ ಅಭಿವೃದ್ಧಿಗೆ ಮಾರ್ಗೋಪಾಯಗಳನ್ನು ಚಿಂತಿಸುವ ಕಾನೂನು ರಕಕರೂ ಇದ್ದಾರೆ.

ಪಾಪದ ಮೀನುಗಳವು. ಅವು ಯಾರ ತಂಟೆಗೂ ಹೋಗುವುದಿಲ್ಲ. ಯಾರ ನೆಮ್ಮದಿಯನ್ನೂ ಹಾಳು ಗೆಡಹುವುದಿಲ್ಲ. ಒಂದು ಚಾಡಿ, ತರಲೆ, ಹೊಟ್ಟೆಕಿಚ್ಚಿನ ಮಾತಿಲ್ಲ. ಅವೆಲ್ಲವನ್ನೂ ತುಂಬಿಕೊಂಡಿರುವ ಮನುಷ್ಯ ಮೀನುಗಳನ್ನು ನಿರ್ದಯವಾಗಿ ಕೊಂದು ತಿನ್ನುತ್ತಾನೆ. ಇಲ್ಲಿ ಮತ್ತು ಶಿಶಿಲದಲ್ಲಿ ಇವು ದೇವರ ಮೀನುಗಳು. ಹಾಗಾಗಿ ಮಾನವನ ಹೊಟ್ಟೆಯೆಂಬ ಗೋರಿಯೊಳಗೆ ಇವು ಪ್ರವೇಶಿಸುವುದಿಲ್ಲ. ಆದರೆ ಶಿಶಿಲದಲ್ಲಿ ಒಮ್ಮೆ ಇಬ್ಬರು ಅಪ್ಪಟ ಖದೀಮರು ರಣಹಗಲು ಪೆರುವೋಲು ಮೀನುಗಳನ್ನು ಬಲೆಹಾಕಿ ಹಿಡಿದು ದೊಡ್ಡ ಚೀಲಗಳಲ್ಲಿ ತುಂಬಿಸಿಕೊಂಡು ದುಡುದುಡು ನಡೆದರು. ಹೊಳೆ ದಾಟಿ ಎರಡು ಫರಲಾಂಗು ಹೋಗುವ ಮೊದಲೇ ಸಿಕ್ಕಿಬಿದ್ದರು. ಕ್ರೋಧೋನ್ಮತ್ತ ಜನ ಅವರನ್ನು ಹಿಡಿದು ಸಾಮೂಹಿಕ ಪಾದರಕ್ಷಾ ಪೂಜೆಯಿಂದ ಪರಮ ಪವಿತ್ರರನ್ನಾಗಿ ಮಾಡಿದರು. ಪಾದರಕೆಗಳ ಮಾಲೆ ಹಾಕಿ ಸಾರ್ವಜನಿಕ ಅಭಿನಂದನೆ ಮಾಡಿಬಿಟ್ಟರು. ಮರುದಿನ ರಾಶಿರಾಶಿ ಪೆರುವೋಲುಗಳು ಮತ್ಸ್ಯತೀರ್ಥದಲ್ಲಿ ತೇಲುತ್ತಿದ್ದವು. ನಿನ್ನೆಯ ಸನ್ಮಾನಿತರು ಎರಡು ಎಂಡೋಸಲ್ಫಾನ್‌ ಡಬ್ಬಿಗಳಿಗೆ ತೂತು ಕೊರೆದು ಕಲ್ಲುಕಟ್ಟಿ ಅಲ್ಲಿ ಮುಳುಗಿಸಿದ್ದರು. ಅಂತಹಾ ಮಹಾನ್‌ ಸಾಧನೆಗಾಗಿ ಆ ಸನ್ಮಾನಿತರನ್ನು ಪೋಲೀಸರು ಸ್ಟೇಶನ್ನಿಗೆ ಕರೆದೊಯ್ದು ತ್ರಿಕಾಲ ಪೂಜೆ ಸಪ್ತಾಹ ನಡೆಸಿದರು. ಆದರೆ ಕೋರ್ಟಲ್ಲಿ ಅಪರಾಧ ಸಾಬೀತಾಗಲಿಲ್ಲ. ಕೇಸಿನಿಂದ ಅವರಿಬ್ಬರಿಗೂ ಖುಲಾಸೆಯಾಯಿತು. ಶಿಶಿಲದ ಜನ ಮೀನುಗಳಿಗೆ ಗೋರಿ ಕಟ್ಟಿ ಮೀನಿನ ಬೃಹತ್‌ ಸಿಮೆಂಟು ಪ್ರತಿಕೃತಿ ರಚಿಸಿ ನೆನಪನ್ನು ಶಾಶ್ವತಗೊಳಿಸಿದರು. ಯಾರು ತಮ್ಮ ಸಾಮೂಹಿಕ ಕಗ್ಗೊಲೆಗೆ ಕಾರಣರಾದರೋ ಅವರಿಗೆ ಆ ಮೀನುಗಳು ಏನನ್ನೂ ಮಾಡಿರಲಿಲ್ಲ.

ಬರುವಾಗ ಮಳೆ. ಮೈಗದು ಹಿತವಾಗಿತ್ತು. ‘ದೇವರು ಕೊನೆಗೂ ಮಡಪ್ಪಾಡಿಗೆ ಸ್ನಾನ ಮಾಡಿಸಿ ಬಿಟ್ಟ’ ಎಂದು ವಿನೋದ್‌ ಹೇಳಿದ. ದೇವರ ಗುಂಡಿಯಲ್ಲಿ ಸ್ನಾನ ಮಾಡಿ ನಿನ್ನ ಪಾಪಗಳನೆಲ್ಲಾ ಪರಿಹರಿಸಲಿಕ್ಕಿದ್ದ ಏಕೈಕ ಅವಕಾಶವನ್ನು ಕಳಕೊಂಡೆಯಲ್ಲಾ  ಎಂದು ಮಡಪ್ಪಾಡಿಯನ್ನು ಆಕೇಪಿಸಿದೆ. ಪಿ. ಯು. ಸಿ. ದಂಡ ಯಾತ್ರೆಯಲ್ಲಿ ಹೇಗೋ ದಿಗ್ವಿಜಯಿಯಾಗಿ ಮೂರು ವರ್ಷ ಮನೆಪಾಲಾಗಿ ಶಿಕಣಕ್ಕೆ ತಿಲಧಾರೆ ಬಿಟ್ಟಿದ್ದವ ನನ್ನ ಕಾಟ ತಾಳಲಾರದೆ ಕಾಲೇಜು ಸೇರಿದ್ದ. ಈಗ ಕೆಲವು ಮದನಾಕಿಯರ ಮನಗೆದ್ದ ಮನಸಿಜನಾಗಿದ್ದಾನೆ ಎಂಬ ಅನಧಿಕೃತ ಸುದ್ದಿ ಬಿಡುಗಡೆಯಾಗಿತ್ತು. ನನ್ನಿಂದಾಗಿ ಅವನಿಗೆ ಒದಗಿ ಬಂದ ಸೌಭಾಗ್ಯಕ್ಕಾಗಿ ಅವನು ಕೃತಜ್ಞನಾಗಿದ್ದ. ನಾನು ಏನು ಹೇಳಿದರೂ ನಿಮಗೆ ಯಾವತ್ತೂ ನಾನು ಋಣಿ. ಏನು ಬೇಕಾದರೂ ಹೇಳಿ ಎನ್ನುತ್ತಿದ್ದ. ಈಗ ನನ್ನ ಬಳಿಗೆ ಬಂದ ಮೆಲುದನಿಯಲ್ಲಿ ಹೇಳಿದ. ಚಡ್ಡಿ ತರುತ್ತಿದ್ದರೆ ನಾನೂ ಸ್ನಾನ ಮಾಡುತ್ತಿದ್ದೆ!

ಪಯಸ್ವಿನಿ ಸೇತುವೆ ಬಳಿ ಮೇದಿನಿ ಕಾದಿದ್ದಳು. ಯಾಕೋ ಒಂದು ಬಾರಿ ಅವಳು ನನ್ನ ಮಗನ ಬಗ್ಗೆ ವಿಚಾರಿಸಿದ್ದಳು. ಸೊಸೆಯಾಗುವ ಅಂದಾಜಿದ್ದರೆ ಅವನನ್ನೇ ಕೇಳಬೇಕಾಗುತ್ತದೆ  ಎಂದು ಛೇಡಿಸಿದ್ದೆ. ಅವಳನ್ನು ನೋಡಿ ಚಕ್ರವರ್ತಿಗಳು ದುಂಬಾಲು ಬಿದ್ದರು. ಮನೆಗೆ ಕರಕೊಂಡು ಹೋಗು. ಚಹಾ ತಿಂಡಿ ಕೊಡು. ಅವಳ ಮುಖ ಬಾಡಿತು. ಮನೆಯಲ್ಲಿ ಏನು ಸಮಸ್ಯೆಯೊ? ಶುಭಸ್ಯಂ ಶೀಘ್ರಂ. ಬೇಗದಲ್ಲೇ ನಮಗೆಲ್ಲಾ ಔತಣ ಹಾಕಿಸುತ್ತಾಳೆ ಬಿಡಿ. ಈಗ್ಯಾಕೆ ಗೋಳು ಹೊಯ್ಯುತ್ತೀರಿ ಎಂದು ಸಮಾಧಾನಿಸಿದೆ. ಅವಳ ಮುಖದಲ್ಲೀಗ ಕೃತಜ್ಞತಾ ಭಾವವಿತ್ತು.

ಅರಂತೋಡು ಶಿಬಿರದ ಬಳಿಬಂದಾಗ ವಶಿಷ್ಠ ಗೋಗರೆದ. ಸರ್‌ ಒಂದೇ ಒಂದು ಸಲ ಕ್ಯಾಂಪಿಗೆ ಹೋಗಿ ಬರುತ್ತೇನೆ. ಐದೇ ನಿಮಿಷ. ಪ್ಲೀಸ್‌. ಎಲ್ಲರೂ ಅವನ ಮಾತಿಗೆ ನಕ್ಕರು. ಹೃದಯ ಗೆದ್ದವಳು! ಸಾಮೂಹಿಕ ಪ್ರತಿಭಟನೆಯ ಸ್ವರ ಹೊರಟಿತು. ಬೇಡವೇ ಬೇಡ. ಅವನನ್ನು ಬಿಡಬೇಡಿ. ಕೂಲಾಗಿ ನಾನೆಂದೆ. ಏಕಮುಖ ಸಂಚಾರವನ್ನು ಇಲ್ಲಿಗೇ ನಿಲ್ಲಿಸೋಣ. ಅದೆಲ್ಲಾ ಬೇಡ ವಶಿಷ್ಠ. ಅವನ ಮುಖ ಕಳೆಗುಂದಿತು. ಆಹಾ! ಇವನ ಮುಖವೇ ! ಆಗ ಎಲ್ಲರೆದುರು ಬಿದ್ದದ್ದು ಸಾಲದಾ ಎಂದು ಚೊಕ್ಕಾಡಿ ವಿನಯ ಕೇಳಿದ. ವಶಿಷ್ಠ ಮತ್ತೆ ಸೊಲ್ಲೆತ್ತಲಿಲ್ಲ.

ನಿಜ ದುಃಖ ಮರೆಯಬಹುದೇ !

ನಮ್ಮ ಮುಂದಿನ ನಿಲುಗಡೆ ಮಮತಾಳ ಮನೆಯಂಗಳ. ರಸ್ತೆಗೇ ತಾಗಿಕೊಂಡಂತಿರುವ ಅಂಗಳದಲ್ಲಿ ಅವಳು ನಮಗಾಗಿ ಕಾದಿದ್ದಳು. ಎಂದಿನಂತೆ ಅವಳ ಮುಖದಲ್ಲಿ ಗೆಲುವಿರಲಿಲ್ಲ. ಕೆಲವು ದಿನಗಳ ಹಿಂದೆ ಅವಳ ಚಿಕ್ಕಮ್ಮ ಮತ್ತು ಮೂರು ವರ್ಷಗಳ ಪುಟ್ಟ ತಮ್ಮನ ಶವಗಳು ಪಯಸ್ವಿನಿಯಲ್ಲಿ ಸಿಕ್ಕಿದ್ದವು. ಎಲ್ಲರ ಮನಕಲಕಿದ್ದ ದಾರುಣ ವಿದ್ಯಮಾನವದು. ಮಮತಾ ಅದನ್ನು ವಿಪರೀತ ಹಚ್ಚಿಕೊಂಡಿದ್ದಳು. ಅಮ್ಮ ಮತ್ತು ತಂಗಿಗಾಗಿ ಬದುಕಿದ್ದೇನೆ ಸರ್‌ ಎಂದು ಮೂರು ಬಾರಿ ಕಣ್ಣೀರಿಟ್ಟಿದ್ದಳು. ಮನೋತಜ್ಞ ಮಿತ್ರ ಹೇಮನಾಥ ಕುರುಂಜಿ ಕೌನ್ಸೆಲಿಂಗ್‌ ಮೂಲಕ ಅವಳ ಖಿನ್ನತೆಯನ್ನು ದೂರಮಾಡಲು ಯತ್ನಿಸಿದ್ದರು. ಆದರೆ ಸಮಸ್ಯೆ ಪರಿಹಾರವಾಗಿರಲಿಲ್ಲ. ನಮ್ಮಲ್ಲಿ ಅನೇಕ ಜಾತಿ ಸಂಘಟನೆಗಳಿವೆ. ಶೋಷಿತರ ನೋವು ಪರಿಹರಿಸಲು ಅವು ಯಾಕೆ ಮುಂದಾಗುತ್ತಿಲ್ಲವೊ !

ಮಮತಾಳ ಅಮ್ಮ ಹೊರಬಂದು ನಮ್ಮನ್ನು ಸ್ವಾಗತಿಸಿದರು. ಅವರ ಮುಖದಲೂ ಖಿನ್ನತೆ ಮಡುಗಟ್ಟಿತ್ತು. ಮಮತಾಳ ಮನೆಯಲ್ಲಿ ಚಹಾ ಮತ್ತು ತಿಂಡಿ ದೊರೆಯಿತು. ಎಳನೀರು ಸಿಗುತ್ತದೆಂದು ನೀವು ಹೇಳಿದ್ರಲ್ಲಾ ಸರ್‌ ಎಂದು ಶ್ರೀರಾಜ ರಾಗವೆಳೆದ. ಅದನ್ನು ಕೇಳಿಸಿಕೊಂಡ ಮಮತಾ ಎಳನೀರು ತೆಗೆಯುವವರು ಸಿಗಲಿಲ್ಲ. ತಪ್ಪು ತಿಳಿಯಬೇಡಿ ಎಂದು ಗಂಭೀರವಾಗಿಯೇ ಹೇಳಿದಳು. ಈ ನಡುವೆ ಅವಳ ಪುಟ್ಟ ನಾಯಿಯನ್ನು ಕೆಣಕ ಹೋಗಿ ಗಂಗಾಧರ ಕಚ್ಚಿಸಿಕೊಂಡ. ಪುಣ್ಯಕ್ಕೆ ಗಾಯವಾಗಲಿಲ್ಲ.

ಸುಳ್ಯದ ಹಾದಿಯಲ್ಲಿ ಎಡ ಬದಿಯಲ್ಲಿ ಸಿಕ್ಕಿತು ಅರಂಬೂರು ತೂಗುಸೇತುವೆ. ಸುಳ್ಯ ಸ್ಕೌಟ್ಸ್‌ಗೈಡ್ಸ್‌ ಸೇವಾ ಸಂಸ್ಥೆಯ ಅಧ್ಯಕ ಬಾಪೂ ಸಾಹೇಬರ ನೇತೃತ್ವದಲ್ಲಿ ತೂಗುಸೇತುವೆ ಸರದಾರ ಎಂದು ಈಗ ಖ್ಯಾತರಾಗಿರುವ ರೊಟೇರಿಯನ್ನು ಗಿರೀಶ್‌ ಭಾರದ್ವಾಜ್‌ರ ಮೊತ್ತಮೊದಲ ನಿರ್ಮಾಣವದು. ಹಳ್ಳಿಯ ಜನರ ಮನೋಬಲ ಮತ್ತು ಒಗ್ಗಟ್ಟಿಗೊಂದು ದೃಷ್ಟಾಂತ. ಸೇತುವೆಯ ಆಚೆ ತುದಿಯಿಂದ ಸುಮಾರು ನೂರು ಮೀಟರ್‌ ದೂರದಲ್ಲಿದೆ ಲೋಕೇಶ ರೈಯ ಮನೆ. ಬೈಸಿಕಲ್ಲು ಸವಾರಿಗೊತ್ತಿಲ್ಲವೆಂದು ಅವನು ಮನೆಯಲ್ಲೆ ಉಳಿದಿದ್ದ. ನಮ್ಮನ್ನು ನೋಡಿ ಇವ ಗಂಗೆ ಹುಳದ ಹಾಗೆ ಮನೆಯಲ್ಲಿ ಮುದುಡಿಕೊಂಡಿದ್ದವನನ್ನು ಎಳಕೊಂಡು ಬಂದಿದ್ದೇವೆ ಎಂದು ರಂಜನ್‌, ಸುಬ್ರಹ್ಮಣ್ಯ, ಪ್ರದೀಪ, ಜಯಪ್ರಕಾಶ ಮುಂತಾದವರು ಅವನನ್ನು ನನ್ನೆದುರು ವಿಚಾರಣಾಧೀನ ಕೈದಿಯಂತೆ ಹಾಜರು ಪಡಿಸಿದರು. ಅವನು ಸರಿಸುಮಾರು ಐವತ್ತು ವರ್ಷಗಳ ಹಿಂದಿನ ಹಳ್ಳಿಯ ಮದುವಣಗಿತ್ತಿಯಂತೆ ನಾಚಿ ನೀರಾಗಿ ನನ್ನೆದುರು ತಲೆತಗ್ಗಿಸಿ ನಿಂತ. ವಿಚಾರಣೆಗೆ ವಾಯಿದೆ ನೀಡಿ ಮುಂದಕ್ಕೆ ಹಾಕಿದೆ !

ಅರಂಬೂರು ಚಡಾವು ಹತ್ತುವಾಗ ಶಿವಪ್ರಸಾದನ ಟಯರು ಪಂಕ್ಚರ್‌ ಯಾವುದೋ ಓಬೀರಾಯನ ಕಾಲದ ಲೇಡೀಸು ಸೈಕಲ್ಲದು. ಕನಿಷ್ಠ ಮೂರು ದಶಕಗಳ ಸಾರ್ಥಕ ಸೇವೆ ಸಲ್ಲಿಸಿ ಈಗ ಸೀನಿಯರು ಸಿಟಿಜನ್ನಾಗಿ ವಿಶ್ರಾಂತಿಯಲ್ಲಿರಬೇಕಾದುದನ್ನು ಇವ ಬಾಡಿಗೆಗೆ ತಂದಿದ್ದ. ಇವನ ಮುಖದ ಹೈಪರ್‌ ಬೋಳತನದ ಲಕಲಕ ಕಳೆಯನ್ನು ನೋಡಿ ಬೈಸಿಕಲ್ಲು ಅಂಗಡಿಯವನು ಇವನಿಗೆ ದೊಡ್ಡ ಉಂಡೆ ನಾಮತಿಕ್ಕಿದ್ದ. ಈಗ ಬಾಲ ಸುಟ್ಟ ಬೆಕ್ಕಿನಂತೆ ಇವನು ಬೈಸಿಕಲ್ಲನ್ನು ನೂಕಿಕೊಂಡೇ ಹೋಗಬೇಕಾಯಿತು.

ನಮ್ಮ ತಂಡ ಹೊರಟಲ್ಲಿಗೇ ವಾಪಾಸ್ಸಾಯಿತು. ಮೇಜರ್‌ ಗಿರಿಧರ್‌ ಎನ್‌. ಸಿ. ಸಿ. ತರಗತಿ ತೆಗೆದುಕೊಳ್ಳುತ್ತಿದ್ದರು. ಚಕ್ರವರ್ತಿಗಳಲ್ಲಿ ಹದಿನಾಲ್ಕು ಮಂದಿ ಎನ್ಸಿಸಿ ಕ್ಯಾಡೆಟ್ಸು. ಅವರು ಮೇಜರಿಗೆ ತಮ್ಮ ಸಾಹಸವನ್ನು ರಿಪೋರ್ಟು ಮಾಡಿದರು.  ವೆರಿಗುಡ್‌. ನಿಮಗಿವತ್ತು ಅಟಂಡೆನ್ಸು ಕೊಡುತ್ತೇನೆ. ನಿಮ್ಮ ಸಾಹಸ ಮುಂದುವರಿಯಲಿ ಎಂದು ಅವರೆಂದರು. ಅವರ ಜತೆ ಮಾತಾಡಲೆಂದು ಬಂದಿದ್ದ ದೈಹಿಕ ಶಿಕಣ ನಿರ್ದೇಶಕ ಪೀಡಿ ರಾಧಾಕೃಷ್ಣ ಯುವಕರೆಂದರೆ ಹೀಗೆ ಸಾಹಸ ಮಾಡಬೇಕು. ಮುಂದಿನ ಬೈಸಿಕಲ್ಲು ಜಾಥಾಕ್ಕೆ ದೊಡ್ಡ ಗ್ರ್ಯಾಂಟು ಕೊಡಿಸೋಣು ಎಂದು ನಾಯಕ ಪಾವನಕೃಷ್ಣನ ಬೆನ್ನು ತಟ್ಟಿದರು.

ಚಕ್ರವರ್ತಿಗಳ ವದನಾರವಿಂದಂಗಳಲ್ಲಿ ಧನ್ಯತೆಯ ಭಾವವಿತ್ತು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಭವಿಷ್ಯದಲ್ಲಿ ಪ್ರಪಂಚ ಹೀಗಾಗಬಹುದು
Next post ಜನಾರಣ್ಯದಿಂದ ಮರುಭೂಮಿಗೆ

ಸಣ್ಣ ಕತೆ

 • ಹುಟ್ಟು

  ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

 • ದಾರಿ ಯಾವುದಯ್ಯಾ?

  ಮೂವತೈದು ವರ್‍ಷಗಳ ನಂತರ ಅಮಲ ನಿನ್ನೂರಿಗೆ ಬರುತ್ತಿದ್ದೇನೆ ಅಂತ ಫೋನ ಮಾಡಿದಾಗ ಮೃಣಾಲಿನಿಗೆ ಆಶ್ಚರ್‍ಯ ಮತ್ತು ಆತಂಕ ಕಾಡಿದವು. ಬರೋಬ್ಬರಿ ಮೂವತ್ತೈದು ವರ್ಷಗಳ ಹಿಂದೆ ವಿಶ್ವವಿದ್ಯಾಲಯದ ಕ್ಯಾಂಪಸ್… Read more…

 • ಗ್ರಹಕಥಾ

  [ಸತಿಯು ಪತಿಯ ಹಾಗೂ ಪತಿಯು ಸತಿಯ ಮನೋವೃತ್ತಿಗಳನ್ನು ಅರಿತು ಪರಸ್ಪರರು ಪರಸ್ಪರರನ್ನು ಸಂತೋಷಗೊಳಿಸಿದರೆ ಮಾತ್ರ ಸಂಸಾರವು ಉಭಯತರಿಗೂ ಸುಖಮಯವಾಗುತ್ತದೆ ಹೊರತಾಗಿ, ಅವರಲ್ಲಿ ಯಾರಾದರೊಬ್ಬರು ಅಹಂಭಾವದಿಂದ ಪ್ರೇರಿತರಾಗಿ, ಪರರ… Read more…

 • ಮೃಗಜಲ

  "People are trying to work towards a good quality of life for tomorrow instead of living for today, for many… Read more…

 • ದಿನಚರಿಯ ಪುಟದಿಂದ

  ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…