ಚಿತ್ರದುರ್ಗದವರಿಗೆ ತಮ್ಮ ಊರಿನ ಇತಿಹಾಸ ಕೋಟೆಕೊತ್ತಲಗಳು, ಪಾಳೇಗಾರರು, ನೆಲಜಲದ ಬಗ್ಗೆ ಬಹಳ ಪ್ರೀತಿ, ಮತ್ತವರ ಪ್ರೀತಿಗೆ ಅಷ್ಟೆ ಪಾತ್ರವಾದುದೆಂದರೆ ಮೆಣಸಿನಕಾಯಿ ಬೋಂಡಾ ಮತ್ತು ಈರುಳ್ಳಿ ಮಿಶ್ರಿತ ಮಂಡಕ್ಕಿ ಖಾರ, ದುರ್ಗ-ದಾವಣಗೆರೆ ಜನರ ಅತ್ಯಂತ ಪ್ರೀತಿಪಾತ್ರವಾದ ತಿನಿಸುಗಳ ಸಾಲಿನಲ್ಲಿ ಇವಕ್ಕೇ ಪ್ರಥಮ ಸ್ಥಾನ. ಶ್ರೀಸಾಮಾನ್ಯರಿಂದ ಹಿಡಿದು ಶ್ರೀಮಂತರವರೆಗೆ ಎಲ್ಲರ ನಾಲಿಗೆ ಬಯಸುವ, ಮನ ತಣಿಸುವ, ಹೊಟ್ಟೆ ತುಂಬಿಸುವ ರುಚಿಕರ ತಿನಿಸು, ಕಾರಣ ದುರ್ಗದ ಯಾವ ಬೀದಿಗೆ ಕಾಲಿಟ್ಟರೂ ಮೂರು ನಾಲ್ಕಾದರೂ ಮೆಣಸಿನಕಾಯಿ ಬೋಂಡಾ ಅಂಗಡಿಗಳನ್ನು ಕಾಣಬಹುದು. ಇವಕ್ಕೇನು ಅಂಗಡಿಗಳೇ ಆಗಬೇಕೆಂದಿಲ್ಲ. ಪುಟ್ಟ ಡಬ್ಬವಾದರೂ ಸಾಕು. ಕನಿಷ್ಟ ಫುಟ್ಪಾತ್ ಆದರೂ ಸರಿಯೇ ಗಮಗಮಿಸುವ ಮೆಣಸಿನಕಾಯಿ, ಗರಿಗರಿ ಎನ್ನುವ ಮಂಡಕ್ಕಿ ಚೌಚೌರೆಡಿ. ಅಲ್ಲೆ ಸಾಲುಗಟ್ಟಿನಿಂತು ಬಾಯಲ್ಲಿ ನೀರು ಸುರಿಸುತಾ ಖಾರ ಹೆಚ್ಚಾದಾಗ ಕಣ್ಣಲ್ಲಿ ನೀರೂರಿಸುತ್ತಾ ‘ಹಾ..ಹಾ…’ ಎಂದು ಒಳಗೆ ಉಸಿರೆಳೆದುಕೊಳ್ಳುತ್ತ ಮೆಣಸಿನಕಾಯಿ ಬೋಂಡಾವನ್ನು ಮೆಣಸಿನಕಾಯಿ ಸಮೇತ ತಿನ್ನುವುದೇ ಒಂದು ಮಜ. ಜೊತೆಗೆ ಪುಟ್ಟ ಪಾಸ್ಟಿಕ್ ಬಟ್ಟಲುಗಳಲ್ಲಿ ಮಂಡಕ್ಕಿ ಖಾರ ಅದರ ಜೊತೆಗೆ ಸಣ್ಣಗೆ ಎಚ್ಚಿ ಹಾಕಿದ ಈರುಳ್ಳಿ, ಕೊತ್ತಂಬರಿ ಸೊಪ್ಪು ಇದ್ದರಂತೂ ಸ್ವರ್ಗಕ್ಕೆ ಮೂರೇ ಗೇಣು. ನಿಂತಲ್ಲೆ ಸವಿದು ಪೇಪರ್ ನಲ್ಲಿ ಕೈವರೆಸಿಕೊಂಡು ಮುಂದಿನ ಕೆಲಸಕ್ಕೆ ನಡೆದು ಬಿಡುತ್ತಾರೆ. ಈ ಜನ ಖಾರವೆಂದು ಎಂದೂ ನೀರು ಕೇಳಿದವರಲ್ಲ ಮಾರುವವರೂ ನೀರು ಶೇಖರಿಸಿಟ್ಟುಕೊಳ್ಳುವ ಗೋಜಿಗೆ ಹೋಗುವವರಲ್ಲ. ಮೆಣಸಿನಕಾಯಿ ಬೋಂಡಾ ಖಾರವಾಗಿದ್ದಷ್ಟೂ ಡಿಮಾಂಡ್ ಹೆಚ್ಚು. ಒಂದಾದ ಮೇಲೊಂದರಂತೆ ಏಳೆಂಟು ಮೆಣಸಿನಕಾಯಿಗಳನ್ನು ಚಪ್ಪರಿಸಿ ತಿನ್ನುವ ಭೂಪರುಂಟು. ಮುದುಕರೂ ಈ ವಿಷಯದಲ್ಲಿ ಹಿಂದೆ ಬೀಳುವುದಿಲ್ಲ. ಬೊಚ್ಚುಬಾಯಿಗೂ ಹಿಟ್ಟು ಹಚ್ಚಿದ ಗರಿಗರಿ ಮೆಣಸಿನಕಾಯಿ ಬೇಕು. ಇಲ್ಲಿನವರಿಗೆ ಖಾರದ್ದಾಗಲಿ ಅಲ್ಸರ್, ಗ್ಯಾಸ್ಟ್ರಿಕ್, ಡಯೇರಿಯಾಗಳ ಚಿಂತೆ ಇಲ್ಲ. ಅವೆಲ್ಲಾ ಇದ್ದರೂ ಮೆಣಸಿನಕಾಯಿ ಬೋಂಡಾನೂ ಜೊತೆಗಿರಬೇಕು. ಅದಕ್ಕೇ ಇರಬಹುದು ಇಲ್ಲಿನವರು ಒಂದಿಷ್ಟು ಮುಂಗೋಪಿಗಳು – ಪಾಳೇಗಾರರಂತೆ.

 

ವಿಚಿತ್ರವೆಂದರೆ ಬೆಳಿಗ್ಗೆಯೇ ಈ ಅಂಗಡಿಗಳು ತೆರೆದುಕೊಳ್ಳುತ್ತವೆ. ಬಾಣಲೆಯಲ್ಲಿ ಕೊತಕೊತನೆ ಕುದಿವ ಎಣ್ಣೆಯಲ್ಲಿ ಹಿಟ್ಟು ಹಚ್ಚಿದ ಮೆಣಸಿನ ಕಾಯಿಗಳು ತೇಲಲಾರಂಭಿಸುತ್ತವೆ. ಗಮ್ಮನೆ ವಾಸನೆ ಕೇರಿಕೇರಿಗಳಲ್ಲಿ ವ್ಯಾಪಿಸುತ್ತಿದ್ದಂತೆ ಮನೆಯವರು ಹುಡುಗರನ್ನು ಓಡಿಸುತ್ತಾರೆ , ‘ಮೆಣಸಿನಕಾಯಿ ತತಾರಲೆ’ ಎಂದು. ಹುಡುಗ ರಸ್ತೆಯಲ್ಲಿ ಬರುವಾಗಲೇ ಪೊಟ್ಟಣದಲ್ಲಿದ್ದ ಬಿಸಿ ಮೆಣಸಿನಕಾಯಿಯ ರುಚಿ ನೋಡಿ ನಂತರವೆ ಹೆತ್ತವರಿಗೆ ಅರ್ಪಿಸುತ್ತಾನೆ. ಇಲ್ಲಿನವರಿಗೆ ಬೆಳಗಿನ ಜೊತೆ ಮೆಣಸಿನಕಾಯಿ ಬೇಕೇ ಬೇಕು. ಮಧಾಹ್ನದ ಊಟಕ್ಕೆ ತಪ್ಪಿದರೂ ರಾತ್ರಿ ಊಟಕ್ಕಂತೂ ಮುದ್ದೆಗೆ ಬಿಸಿ ಬಿಸಿ ತಾಜಾ ಮೆಣಸಿನಕಾಯಿ ಇರಲೇಬೇಕು. ಸಂಜೆಯ ತಿಂಡಿಗೆ ಮಂಡಕ್ಕಿ ಚೌಚೌ ಅನ್ನೇ ಬಹಳ ಜನ ಆರಿಸಿಕೊಳ್ಳುವುದು. ಇವುಗಳು ಸುಲಭ ಬೆಲೆಗೆ ಎಲ್ಲರಿಗೂ ಕೈಗೆಟುಕುವ, ನಾಲಿಗೆಗೆ ಹಿತ ನೀಡುವ ಊಟದೊಂದಿಗೆ ಉಪ್ಪಿನಕಾಯಿ ಗಿಂತಲೂ ಮುದನೀಡುವ, ಮುದ್ದೆಗೆ ರುಚಿ ಹೆಚ್ಚಿಸುವ ಬೇಳೆಸಾರು ಅನ್ನಕ್ಕೆ ‘ಕಿಕ್’ ಕೊಡುವ ಇಂತಹ ತನಗಿರುವ ಹತಾರು ವಿಶಿಷ್ಟ ಸಾಮರ್ಥ್ಯಗಳಿಂದಲೇ ಇರಬೇಕು – ದುರ್ಗದವರಿಗೆ ಮೆಣಸಿನಕಾಯಿ ಎಂದರೆ ಬಲು ಪ್ರೀತಿ. ಗಂಡು ಹೆಣ್ಣುಮಕ್ಕಳು ಮುದುಕರೆನ್ನದೆ ಸರ್ವರ ಪ್ರೀತಿಯ ತಿನಿಸಿದು.

ನಾನು ಚಿಕ್ಕವನಿದ್ದಾಗ ಊರು ಇಷ್ಟೊಂದು ಬೆಳೆದಿರಲಿಲ್ಲ. ರಂಗಯ್ಯನ ಬಾಗಿಲ ಬಳಿ ನಿಂಗಜ್ಜನ ಅಂಗಡಿಯ ಮೆಣಸಿನಕಾಯಿಗಾಗಿ ಸಂತೇಪೇಟೆ ಜನವೂ ಬೆಳಿಗ್ಗೆಯೇ ಬಂದು ಮುಕುರುತ್ತಿದ್ದುದುಂಟು. ಒಳ್ಳೆ ರುಚಿ ಗಾತ್ರವೂ ಅಷ್ಟೆ. ಆಗೆಲ್ಲಾ ನಾಲಾಣೆಗೆ ಎರಡು ಮೆಣಸಿನಕಾಯಿ. ಈಗ ರೂಪಾಯಿಗೆ ಒಂದು – ಬೀದಿ ಬದಿಯ ಅಂಗಡಿಗಳಲ್ಲಿ. ಅಪರೂಪಕ್ಕೆ ಹೋಟೆಲ್ ಗಳಲ್ಲಿ ಮಾಡಿದಾಗ ರೇಟು ಜಾಸ್ತಿ ನಿಂಗಜ್ಜನನ್ನು ಬಿಟ್ಟರೆ ತಿಂಡಿ ಗಂಗಣ್ಣನೆಂದೇ ಫೇಮಸ್ ಆದವರಿದ್ದರು. ಸಂತೆಪೇಟೆ ಸರ್ಕಲ್ನಲ್ಲೇ ದೊಡ್ಡ ಅಂಗಡಿ, ಅಲ್ಲಿ ಹೋದವರಿಗೆ ಕೂರಲು ಬೆಂಚು, ಕುಡಿಯಲು ನೀರಿನ ವ್ಯವಸ್ಥೆಯೂ ಇದ್ದು ; ಪೇಟೆಗೆ ಬಂದವರು ತಿಂಡಿ ಗಂಗಣ್ಣನ ಅಂಗಡಿಯ ತಿನಿಸುಗಳನ್ನು ಅಲ್ಲಿ ತಿನ್ನುವುದಷ್ಟೇ ಅಲ್ಲ ಮನೆಗೂ ಪಾರ್ಸಲ್ ಒಯುತ್ತಿದ್ದರು. ಗಂಡ ಹೆಂಡತಿ ವ್ಯಾಪಾರಕ್ಕೆ ನಿಂತರೆಂದರೆ ತಿನ್ನುವ ಬಾಯಿಗಳಿಗೆ ಪುರುಸೊತ್ತಿಲ್ಲ. ಕಟ್ಟಿಕೊಡುವ ಕೈಗಳಿಗೂ ಬಿಡುವಿಲ್ಲ. ನೂರಾರು ಗಿರಾಕಿಗಳನ್ನು ಅವರಿಬ್ಬರೇ ಸಂಭಾಳಿಸುತ್ತಿದ್ದರು. ಸಂತೆಯ ದಿನವಂತೂ ತಿಂಡಿ ಗಂಗಣ್ಣನ ಅಂಗಡಿ ಮುಂದೂ ಸಂತೆ ನೆರೆಯುತ್ತಿತ್ತು, ತಾಜಾ ತುಪ್ಪದಲ್ಲಿ ಮಾಡಿದ ಗಂಗಣ್ಣನ ಅಂಗಡಿ ಮೈಸೂರುಪಾಕ್ ಎಂದರೆ ಎಲ್ಲಿಲ್ಲದ ಡಿಮಾಂಡ್. ಹೊಸದಾಗಿ ಮದುವೆಯಾದವನು ಮಲ್ಲಿಗೆ ಪೊಟ್ಟಣದ ಜೊತೆ ಮೈಸೂರುಪಾಕ್ ಒಯುವುದು ಇಲ್ಲಿನ ಸಂಪ್ರದಾಯ ಆಗಿತ್ತು. ಗಂಗಣ್ಣನ ನಂತರ ವಿದ್ಯಾವಂತರಾದ ಮಕ್ಕಳಿಗೆ ಅಂಗಡಿ ಬೇಕಾಗಲಿಲ್ಲ, ಗಂಗಣ್ಣನಂಗ್ಡಿ ತಿಂಡಿ ರುಚಿ ಈಗ ಬರೀ ಸವಿನೆನಪಷ್ಟೆ.

ದುರ್ಗದವರ ಟೇಸ್ಟು ಇಷ್ಟೆ ಅಂದುಕೊಳ್ಳಬೇಡಿ. ಇಲ್ಲಿ ಸವಿರುಚಿ ನೀಡುವ ಪ್ರಸಿದ್ಧ ಹೊಟೇಲ್‌ಗಳಿವೆ. ನಾವು ಚಿಕ್ಕವರಿದಾಗ ನಾರಾಣಪ್ಪನ ಹೋಟ್ಲು ಅಂತ ಒಂದಿತ್ತು. ಕೆಂಪನೆಯ, ಮೀಸೆ ಹೊತ್ತ ಮನುಷ್ಯ. ನಾರಾಣಪ್ಪನ ಹೋಟ್ಲು ಮಸಾಲೆದೋಸೆಗೆ ಜನ ‘ಕ್ಯೂ’ ನಿಂತು ಕಾಯುತ್ತಿದ್ದರು. ಆ ಹೊಟೇಲಿನ ಹೈಲೈಟ್ ಎಂದರೆ ಬಾದಾಮಿ ಹಲ್ವ, ದ್ರಾಕ್ಷಿ, ಗೋಡಂಬಿ ಶುದ್ಧ ಬಾದಾಮಿಯಿಂದ ತಯಾರಿಸಿದ, ತುಪ್ಪದಲ್ಲಿ ತೇಲುವ ಬಾದಾಮಿ ಹಲ್ವವನ್ನು ಪುಟ್ಟ ಬಟ್ಟಲಲ್ಲಿ ಹಾಕಿಕೊಡುತ್ತಿದ್ದರು (ಈಗ ಕರ್ಡ್ಸ್ ಕೊಡುವಂತೆ). ಬೆಲೆ ಏರಿದಂತೆ ಅದರ ಗಾತ್ರ ಕುಗ್ಗಿ ಅದನ್ನೇ ಪಾಸ್ಟಿಕ್ ಪೇಪರ್ ನಲ್ಲಿ ಪಾರ್ಸೆಲ್ ರೀತಿ ಕೊಡುತ್ತಿದ್ದುದುಂಟು. ಈಗ ಅದೂ ಇಲ್ಲ ಈ ನಾರಾಣಪ್ಪನ ಹೋಟ್ಲು ಎಷ್ಟು ಪ್ರಖ್ಯಾತಿ ಎಂದರೆ ದುರ್ಗಕ್ಕೆ ಬಂದವರು ಇಲ್ಲಿಯ ತಿಂಡಿಗಳ ರುಚಿ ನೋಡದೆ ಹೋಗುತ್ತಿರಲಿಲ್ಲ. ೧೯೫೩ – ೫೪ ರಲ್ಲಿರಬಹುದು, ಮೈಸೂರು ಮಹಾರಾಜರು ಚಿತ್ರದುರ್ಗಕ್ಕೆ ಬಂದಾಗ ಅವರ ತಿಂಡಿ-ತಿನಿಸುಗಳನ್ನು ಊಟೋಪಚಾರಗಳನ್ನು ನೋಡಿಕೊಳ್ಳಲು ಸರಕಾರ ನಾರಾಣಪ್ಪನ ಹೋಟೆಲ್ಗೆ ಶರಣಾಗಿದ್ದಿತು. ಈಗ ಅವರಿಲ್ಲದಿದ್ದರೂ ಸರ್ಕಲ್ ನಲ್ಲಿ ಇದೇ ಹೊಟೆಲ್ ಈಗ ‘ಟ್ಯೂರಿಸ್ಟ್ ಹೋಟೆಲ್’ ಎಂದು ತನ್ನದೇ ಆದ ಖ್ಯಾತಿ ಗಳಿಸಿಕೊಂಡಿದೆ. ಇಲ್ಲಿಯ ಪೂರಿ, ಸಾಗು, ಖಾರಾಬಾತ್ ತಿನ್ನಲೆಂದೇ ಸಂಜೆ ಜನ ಜಮಾಯಿಸುವುದುಂಟು, ಬಾದಾಮಿ ಹಲ್ವ ಈಗಲೂ ಸಿಗುತ್ತದಾದರೂ ಆ ತಾಜಾತನ ಮಾತ್ರ ಕಾಣದು. ಮೊದಲು ಹೊಟೇಲ್ ಗಳಲ್ಲಿ ಸಿಹಿತಿಂಡಿಗಳ ದೊಡ್ಡ ಬೀರುವೇ ದೀಪ ಹಚ್ಚಿಕೊಂಡು ಮಿರುಗುತ್ತಾ ಸ್ವಾಗತಿಸುತ್ತಿದ್ದುದುಂಟು. ಎಂತಹ ಪುಟ್ಟ ಹೊಟೇಲ್ ನಲ್ಲೂ ಸಿಹಿ ತಿನಿಸಿನ ಬೀರು ಇದ್ದರೇನೇ ಶೋಭಾಯಮಾನ. ಅದರೊಳಗೆ ಮಕಮಲ್ ಪೂರಿ, ಕರ್ಜಿಕಾಯಿ, ಜಹಾಂಗೀರ್, ಬಾದೂಷ, ರವೆ ಉಂಡೆ, ಜಿಲೇಬಿ, ಜಾಮೂನು, ಲಡ್ಡು ರಾಶಿಗಳು ಕೂತಿರುತ್ತಿದ್ದವು. ತಮ್ಮ ನೈಜ ಬಣ್ಣಗಳಿಂದ ಆಕರ್ಷಿಸುತ್ತಿದ್ದವು. ಆದರೆ ಈಗೆಲ್ಲ ಸಿಹಿ ತಿಂಡಿಗಳ ಬೀರು? ಪ್ರಾಯಶಃ ದುರ್ಗವಷ್ಟೇ ಅಲ್ಲ ಎಲ್ಲೂ ಇಂತಹ ಬೀರುಗಳು ಮಾಯವಾಗಿವೆ. ಹೊಟೇಲಲ್ಲಿ ಏನಿದ್ದರೂ ಜಾಮೂನು ಇಲ್ಲವೆ ಕೇಸರಿಬಾತ್ ಲಭ್ಯ ಇದಕ್ಕೆ ಬೀದಿಗೊಂದು ಸ್ವೀಟ್‌ಸ್ಟಾಲ್ ಆಗಿರುವುದೂ ಕಾರಣವಾಗಿರಬಹುದು.

ಸ್ವೀಟ್‌ಸ್ಟಾಲ್ ಎಂದೊಡನೆ ‘ಕಾಂತಿ ಸ್ವೀಟ್‌ಸ್ಟಾಲ್’ ಗಕ್ಕನೆ ಕಣ್ಣಮುಂದೆ ಬರುತ್ತದೆ. ಚಂಪಾಕಲಿ, ಅನಾರ್ಕಲಿ, ಬಾಸುಂಡಿ, ಕುಂದಾ, ಖೋವಾ ನಮಗೆ ತಿಳಿಯದ ಅದೆಷ್ಟು ಹೆಸರುಗಳ ಸಿಹಿ ತಿನಿಸುಗಳು ದಸರಾ ಬೊಂಬೆಗಳಂತೆ ಚೆಂದವಾಗಿ ಗಾಜಿನ ಬೀರಲ್ಲಿ ಕೂತಿದ್ದು ಕೈಬೀಸಿ ಕರೆಯುತ್ತವೆ. ಇಲ್ಲಿನ ಲಾಡು ಉಂಡೆಯ ರುಚಿ ಅವರ್ಣನೀಯ. ಸ್ಪೆಷಲ್ ಮೈಸೂರುಪಾಕ್ ಅಂತು ಬಾಯಲ್ಲಿಟ್ಟರೆ ಕರಗುತ್ತದೆಂದರೆ ಖಂಡಿತ ಉಪೇಕ್ಷೆಯಾಗದು. ಇಲ್ಲಿ ಸಿಗುವ ಬಾದಾಮಿ ಹಾಲಿನ ರುಚಿ ಮತ್ತೆಲ್ಲೂ ಅಲಭ್ಯ, ಬೆಳಗಿನಿಂದ ಸಂಜೆವರೆಗೂ ಹೆಂಗಸರು, ಮಕ್ಕಳು, ಹುಡುಗರು, ಹುಡುಗಿಯರು ಸಿಹಿ ತಿನ್ನತ್ತಲೋ, ಬಾದಾಮಿ ಹಾಲು ಸವಿಯುತ್ತಲೋ ನಿಂತಿರುವುದೇ ಇಲ್ಲಿನ ಶುಚಿರುಚಿಗೆ ಸಾಕ್ಷಿ. ಸಖತ್ ವ್ಯಾಪಾರವಾಗುವ ಈ ಸ್ವೀಟ್‌ಸ್ಟಾಲ್‌ನ ಮಾಲೀಕರಿಬ್ಬರು ಸಿಹಿ ತಿನಿಸುಗಳಖಿಗಿಂತಲೂ ಹೆಚ್ಚು ಸಿಹಿಯಾಗಿ ವರ್ತಿಸುವುದೂ ವ್ಯಾಪಾರ ಕುದುರಲು ಕಾರಣವಾಗಿರಬಹುದು. ಇಲ್ಲಿ ಎಲ್ಲದಕ್ಕೂ ಕಾಯಬೇಕಲ್ಲ ಎಂಬುದೇ ಬಹು ದೊಡ್ಡ ಬೇಸರ.

ಇನ್ನು ಮತ್ತೆ ಹೊಟೇಲ್‌ಗಳ ವಿಚಾರಕ್ಕೆ ಬಂದರೆ ‘ಲಕ್ಷ್ಮಿ ಟಿಫನ್ ರೂಮ್’ ಮರೆಯುವುದೇ ಇಲ್ಲ. ಮಲ್ಲಿಗೆ ಹೂವಿನಂತಹ ಖಾಲಿ ದೋಸೆ, ಹದವಾದ ಚಟ್ನಿಗಾಗಿ ಇಲ್ಲಿಗೆ ಬರದವರೇ ಇಲ್ಲ, ಹಳೆ ಕಾಲದ ಗುಜರಿ ಹೊಟೇಲ್‌ನಂತೆ ಈಗಲೂ ಇದ್ದು ಯಾವುದೇ ಮಾರ್ಪಾಡುಗಳಾಗಿಲ್ಲ. ರುಚಿಯಲ್ಲೂ ಅಷ್ಟೆ ಸುಮಾರು ನಲವತ್ತು ಜನ ಕೂರಬಹುದಾದಷ್ಟು ಪುಟ್ಟ ಪ್ರಾಚೀನ ಹೊಟೇಲ್. ನಮ್ಮಲ್ಲಿಗೆ ಯಾರೇ ಸಾಹಿತಿಗಳು ಬರಲಿ ನಾವು ಬೆಟ್ಟಕ್ಕೆ (ಕೋಟೆಗೆ) ಕರೆದೊಯ್ಯುವುದು ವಾಡಿಕೆ, ಅಂತೆಯೇ ಬೆಟ್ಟ ಏರುವ ಮುನ್ನ ಬೆಟ್ಟದ ಹಾದಿಯಲ್ಲಿರುವ (ಚಿಕ್ಕಪೇಟೆ) ಲಕ್ಷ್ಮಿ ಟಿಫನ್ ರೂಮ್ಗೂ ಕರೆದೊಯುವುದು ಹೆಮ್ಮೆಯ ವಿಷಯ. ಚಟ್ನಿ ಎರಡನೇ ಬಾರಿ ಕೇಳುವಂತಿಲ್ಲ ಎಂದು ಹಿಂದೆಲಾ ಕಿರಿಕಿರಿ ಮಾಡುತ್ತಿದ್ದ ಮಾಲಿಕ. ಜನರ ಪ್ರತಿಭಟನೆ ತಾಳಲಾರದೆ ಕಬ್ಬಿಣದ ತಂತಿ ಬೋನು ಸುತ್ತ ಕಟ್ಟಿಸಿಕೊಂಡು ಕೂತು ರಕ್ಷಣೆ ಮಾಡಿಕೊಳ್ಳುತ್ತಿದ್ದರು. ಈಗಲೂ ಅದೇ ಸಂಪ್ರದಾಯ ಮುಂದುವರೆದಿದೆ. ಮೊದಲು ತಿನ್ನವ ತಿಂಡಿಗಳಿಗೆ ಟಿಕೆಟ್ ಪಡೆಯಬೇಕೆಂಬ ರೂಲು, ಪ್ಲೇಟುಗಳಲ್ಲಿ ಕೈ ತೊಳೆಯಬಾರದು, ಗದ್ದಲ ಮಾಡಬಾರದು, ಸಿಗರೇಟ್ ಸೇದಬಾರದು ಎಂದೆಲಾ ರೂಲ್ಸ್‌ನ ಪಟ್ಟಿ ನೇತುಹಾಕಿ ಜನರ ಆಕ್ರೋಶಕ್ಕೆ ಮಾಲಿಕ ತುತ್ತಾದರೂ ವ್ಯಾಪಾರ ಮಾತ್ರ ನಿರಾತಂಕ, ಮಾಲೀಕನನ್ನು ಬೈದುಕೊಂಡೇ ಬಂದು ಜನ ಖಾಲಿ ದೋಸೆ ಸವಿದು ಹೋಗುವುದು ಮಾತ್ರ ತಪ್ಪಲಿಲ್ಲ. ಈಗ ಹೊಟೇಲ್ ರೂಲ್ಸ್‌ನಲ್ಲಿ ಸುಧಾರಿಸಿದೆ. ಒಳ್ಳೇ ಕಾಫಿ ಬೇಕಾ? ಅದಕ್ಕೂ ನೀವು ಈ ಹೊಟೇಲ್ಗೇ ಬರಬೇಕು. ಸಿನಿಮಾದವರು, ಸಾಹಿತಿಗಳು ದುರ್ಗಕ್ಕೆ ಬಂದಾಗ ನಮ್ಮ ಮಾನ ಉಳಿಸುವ ಹೊಟೇಲ್ ಇದು. ಅಡಿಗರು, ಹಾ.ಮಾ.ನಾ., ಶಿವರುದ್ರಪ್ಪ, ಎಂ.ಕೆ. ರಾಮಾನುಜಂ, ಹನೂರು ಇಂಥವರ ನೆಚ್ಚಿನ ಹೋಟೆಲ್‌ ಇದು.

ಇಷ್ಟೆ ಮಜ ಕೊಡುವ ಮತ್ತೊಂದು ಹೋಟೇಲ್ ಸರ್ಕಲ್ ನ ಹಿಂಬದಿಯ ಗಲ್ಲಿಯಲ್ಲಿ ಅವಿತು ಕೂತು ಕೈಬೀಸಿ ಕರೆಯುತ್ತಿದೆ. ‘ಚನ್ನಗಿರಿ ಹೊಟೇಲ್’ ಅಂತಾರೆ. ಇದರ ಒರಿಜಿನಲ್ ಹೆಸರು ಶ್ರೀಕೃಷ್ಣಭವನ. ಇಲ್ಲೂ ಅಷ್ಟೆ ಬಾಯಲಿಟ್ಟರೆ ಕರಗುವಂತಹ ಮಸಾಲೆದೋಸೆ, ಖಾಲಿದೋಸೆಗಳ ಪೈಪೋಟಿ, ಗಲ್ಲಿಯಲ್ಲಿದ್ದರೂ ಹೊಟೇಲ್ ಒಳಗೆ ಜನಜಾತ್ರೆ, ‘ಏನಿದೆ ?’ ಎಂದು ಕೇಳುವ ಗಿರಾಕಿಗೆ ಮಾಣಿ ಸಂಪ್ರದಾಯದಂತೆ ರಾಗಬದ್ದವಾಗಿ ಗಂಟೆಗಟ್ಟಲೆ ತಿನಿಸುಗಳ ಹೆಸರು ಹೇಳಿ ದಣಿಯುತ್ತಾನೆ. ನಂತರ ಗಿರಾಕಿ ಆರ್ಡರ್ ಮಾಡುತಾನೆ ‘ಒಂದು ಪ್ಲೇಟ್ ಖಾಲಿ ತಾ’. ಇದು ಇಲ್ಲಿನ ಮಾಮೂಲಿ ದೃಶ್ಯ, ಮಸಾಲೆದೋಸೆ ಪ್ರಿಯರ ಸ್ವರ್ಗ ಚನ್ನಗಿರಿ ಹೊಟೇಲ್. ಇಲ್ಲಿಗೆ ಬರುವ ಜನ ಚಟ್ನಿಯ ರುಚಿಗೆ ಮನಸೋಲುತ್ತಾರೆ. ಚಟ್ನಿ ಬಟ್ಟಲಲ್ಲಿ ಹಾಕಿಸಿಕೊಂಡು ಚಪ್ಪರಿಸುವವರುಂಟು. ನಮ್ಮ ವೆಂಕಣ್ಣಾಚಾರ್, ಅ.ರಾ.ಸೇ.ಯನ್ನು ಇಲ್ಲಿಗೆ ಕರೆತರುವದು ವಾಡಿಕೆ, ಮಾಲೀಕ ಆನಂದ ರಾವ್ ಉಳ್ಳೂರ್ ಧಾರಾಳಿ, ಸಾಹಿತ್ಯ, ಸಾಂಸ್ಕೃತಿಕ ಚಟುವಟಕೆಗಳಲ್ಲಿತೊಡಗಿಸಿಕೊಂಡಂತಹ ಅಪರೂಪದ ಸಂಸ್ಕಾರವಂತರು – ಸಖತ್ ದುಡಿಮೆಗಾರರು.

ಮತ್ತೆ ಹೆಸರಿಸಲೇಬೇಕಾದ ಹೊಟೇಲ್ ಒಂದು ದೊಡ್ಡ ಪೇಟೆಯಲ್ಲಿದೆ – ‘ಮೈಸೂರ್ ಕೆಫೆ’ ನಾನು ಚಿಕ್ಕವನಾಗಿದ್ದಾಗ ಇಲ್ಲಿ ಹೋಟೆಲ್ ಇಟ್ಟವರೆಲಾ ಪಾಪರ್ ತೆಗೆದದ್ದಿದೆ. ಈ ಜಾಗ ಆಗಿ ಬರೋದಿಲ್ಲ ಎಂದೇ ಜನ ನಂಬಿದ್ದುಂಟು. ಆದರೆ ಮೈಸೂರು ಕೆಫೆ ಆರಂಭವಾಗಿ ಮೂವತ್ತು ವರ್ಷಗಳ ಮೇಲಾಗಿರಬಹುದೇನೋ. ಅದರ ರುಚಿರುಚಿಯಾದ ತಿಂಡಿಗೆ ಇಂದಿಗೂ ಅಂದಿಗೂ ಒಂದೇ ಡಿಮಾಂಡ್. ಇಲ್ಲಿನ ಇಡ್ಲಿ, ವಡೆ, ಸಾಂಬಾರ್ ನ ಮಜ ಬಲ್ಲವನೇ ಬಲ್ಲ. ಜನ ಬಟ್ಟಲುಗಳಲ್ಲಿ ಸಾಂಬಾರ್ ಹಾಕಿಸಿಕೊಂಡು ಹಬೆಯಾಡುವ ಸಾಂಬಾರ್ ಸವಿಯುತ್ತ ನಿಮೀಲ ನೇತ್ರರಾಗಿ ಆನಂದತುಂದಿಲರಾಗುವುದುಂಟು. ಮಾಲೀಕ ಅಣ್ಣಾದೊರೆ ನಾಟಕ ಪ್ರೇಮಿ. ಕಲಾವಿದರ ಗೆಳೆಯನಾದುದರಿಂದ ಇಲ್ಲಿ ಸದಾ ದೊಡ್ಡ ಗರಡಿ ಕಲಾವಿದರು, ದೊಡ್ಡ ಪೇಟೆ ಗೆಳೆಯರ ಬಳಗ ಹಾಜರಿರುತ್ತದೆ. ನಮ್ಮ ಇತಿಹಾಸ ಸಂಶೋಧಕ ಲಕ್ಷ್ಮಣ ತೆಲಗಾವಿಯ ಫೇವರೇಟ್ ಹೊಟೇಲ್ ಇದು. ದುರ್ಗಕ್ಕೆ ತೆಲಗಾವಿ ಬಂದರೆ ಸಿಗುವ ಸ್ಥಳ ಮೇಲುದುರ್ಗ. ಅದನ್ನು ಬಿಟ್ಟರೆ ಮೈಸೂರು ಕೆಫೆ.

ಇನ್ನೊಂದಿದೆ ದುರ್ಗದವರ ನಾಲಿಗೆಯಲ್ಲಿ ನೀರೂರಿಸುವ ಹೊಟೇಲ್ – ಅದೇ ‘ಕ್ಲಬ್ ಹೋಟೆಲ್’ ಯಾವುದೇ ಸರಕಾರಿ ನೌಕರ ಆಫೀಸಿನಲ್ಲಿ ‘ಸೀಟ್‌’ ಮೇಲಿಲ್ಲವೆಂದರೆ ಅಂವಾ ಕ್ಲಬ್ ಹೊಟೇಲ್ ನಲ್ಲಿ ಸಿಗೋದು ಗ್ಯಾರಂಟಿ. ಗರಿಗರಿಯಾದ ಮೆಣಸಿನಕಾಯಿ, ರೋಸ್ಟ್ ಮಸಾಲೆಗೆಂದು ಇಲ್ಲಿ ಕಾರುಗಳು ‘ಕ್ಯೂ’ ನಿಲುವುದೊಂದು ವಿಶೇಷ. ಸರಕಾರಿ ಕಚೇರಿಗಳ ಮಧ್ಯೆ ವಿರಮಿಸಿರುವ, ಅಫಿಶಿಯಲ್‌ ಕ್ಲಬ್‌ ಪಕ್ಕ ವಿಜೃಂಭಿಸುವ ಈ ಸಾದಾ ಹೋಟೆಲ್ ತನ್ನ ಶಿಸ್ತು ರುಚಿಶುಚಿಗಳಿಂದ ಪ್ರಖ್ಯಾತ.

ಇನ್ನು ನ್ಯೂ ಸರ್ಕಲ್ ರೆಸ್ಟೋರೆಂಟ್ ಪೇಟೆ ಬೀದಿಯಲ್ಲೇ ಇದೆ. ಬಾಯಲ್ಲಿಟ್ಟರೆ ಕರಗುವ ಕೋಡುಬಳೆ, ಕುರುಂ ಕುರುಂ ನಿಪ್ಪಟ್ಟು ಚಕ್ಕುಲಿಗಳ ಸವಿ ಸವಿಯಬೇಕೆಂದರೆ ಮಂದಿ ಇಲ್ಲಿಗೇ ಬರಬೇಕು. ಹೊಟೇಲ್ ಮಯೂರ ಹೊಸದಾಗಿ ಆಗಿದೆ. ಗಾರ್ಡನ್ ಇದೆ. ಎಲಾ ತರಹದ ಡಿಷಸ್‌ಗಳೂ ಉಂಟು, ಸಂಸಾರ ಸಮೇತ ಬಂದು ತಿಂದುಂಡು ಕಾಲ ಕಳೆಯಲು ಅಡ್ಡಿಯಿಲ್ಲ.

ದುರ್ಗದಲ್ಲಿ ಅತ್ಯಂತ ತಾಜಾ ಪ್ರ್ಯೂಟ್ ಜ್ಯೂಸ್ ನ ಸೆಂಟರ್ ಒಂದಿದೆ. ಘಮಘಮಿಸುವ ಸೇಬು, ಪೈನಾಪಲ್, ಮಾವು, ಕಿತ್ತಲೆ, ಮೋಸುಂಬೆ, ದ್ರಾಕ್ಷಿಗಳ ರಾಶಿರಾಶಿ ಕಣ್ಣುಗಳಿಗೆ ತಂಪು ನೀಡಿದರೆ ತಾಜಾ ಹಣ್ಣಿನ ರಸ ಗಂಟಲಿಗಿಳಿಯುತ್ತಿದ್ದರೆ ಅದುವೇ ಪರಮಾನಂದದ ತುತ್ತತುದಿ. ಬಿಸಿಲ ಬೇಗೆಯ ಬಂಡೆಗಳ ನಾಡ ಜನರಿಗೆ ತಂಪುಕಂಪು ತಾಜಾ ಹಣ್ಣಿನ ತಣ್ಣನೆಯ ರಸದ ಸವಿ ಹತ್ತಿಸಿದವರು, ಜಭಿವುಲ್ಲಾ. ಮೊದಲು ಜಾಗವಿಲ್ಲದೆ ಎಲ್ಲಂದರಲ್ಲಿ ಬೇಸಿಗೆಯಲ್ಲಿ ಹುಟ್ಟಿಕೊಳ್ಳುತ್ತಿದ್ದ ಈ ಜ್ಯೂಸ್ ಅಂಗಡಿ ಈಗ ಖಾಯಂ ನೆಲೆಕಂಡಿದೆ. ಈ ಜ್ಯೂಸ್ ಸೆಂಟರ್ ಭಾವೈಕ್ಯತೆಯ ಸಂಗಮದಂತಿದೆ. ಮುರುಗೇ ಸ್ವಾಮಿಗಳ ಚಿತ್ರಪಟ, ಮಠದ ಭಾವಚಿತ್ರಗಳನ್ನು ಬರೆಸಿ ಅಂಗಡಿ ಸುತ್ತ ಶೃಂಗರಿಸುವ ಜಭಿವುಲಾ ವಾಪಾರದಲ್ಲಿ ಚಾಣಾಕ್ಷ. ಅಂಗಡಿ ಸುತ್ತಾ ವಿವಿಧ ಹಣ್ಣಿನ ರಾಶಿಗಳು, ತರಾವರಿ ಗಿಡಗಳ ಗಾರ್ಡನ್, ಬಣ್ಣದ ಛತ್ರಿಗಳು ವಿಶೇಷ ಶೋಭೆ ತಂದಿದೆ. ಹೊಸದಾಗಿ ಮದುವೆಯಾದ ಜೋಡಿಗಳು ಪ್ಯೂಟ್ ಜ್ಯೂಸ್ ಅಂಗಡಿಗೆ ಬಂದು ಬಣ್ಣದ ಛತ್ರಿಗಳ ನೆರಳಲ್ಲಿ ತುಂಬಿದ ಗ್ಲಾಸ್‌ಗಳಲ್ಲಿ ಹಣ್ಣಿನ ರಸವನ್ನು ‘ಸ್ಟ್ರಾ’ನಲ್ಲಿ ಹೀರುತಾ ಮೈಮರೆಯುವುದನ್ನು ನೋಡಬೇಕೆಂದರೆ ನೀವೂ ಜೋಡಿಯಾಗಿ ಬಂದರೇನೇ ಮಜಾ, ಗಂಡಾಗಲಿ, ಹೆಣ್ಣಾಗಲಿ ಮೀಸೆಗೆ ಹತ್ತಿದ್ದ ನೊರೆಯನ್ನು ನಾಲಿಗೆಯಿಂದ ಒಳಗೆ ಸವರಿಕೊಳ್ಳುವ ಮೈಮರೆವ ಜೋಡಿಗಳನ್ನು ನೋಡುತಾ ಮೈಮರೆಯಲೆಂದೇ ಬರುವವರಿದ್ದಾರೆನ್ನಿ!

ಇಲ್ಲಿಂದ ಧರ್ಮಶಾಲಾ ರಸ್ತೆ ಕಡೆ ಹೊರಟರೆ ಒಂದು ಪುಟ್ಟ ಮೆಣಸಿನಕಾಯಿ ಬೋಂಡಾ ಅಂಗಡಿ ಇದೆ. ರಾತ್ರಿಯಂತೂ ಜನ ಇಲ್ಲಿ ಮುಗಿಬೀಳುತಾರೆ. ಹೆಂಗಸರದ್ದೇ ಭರ್ಜರಿ ವ್ಯಾಪಾರ. ಗುರುರಾಜನ ಮೆಣಸಿನಕಾಯಿ ರುಚಿ ಮಡಿವಂತರ ಮಡಿ ಕೆಡಿಸಿದೆ. ಒಪ್ಪತ್ತಿಗೆ ಗುರುರಾಜನ ಅಂಗಡಿ ಬೋಂಡವಾದರೂ ಆದೀತು ಎನ್ನುವಂತಾಗಿಬಿಟ್ಟಿದೆ.

ಜೋಗಿಮಟ್ಟಿ ರಸ್ತೆಯ ಬಳಿ ಶ್ರೀನಿವಾಸ ಶೆಟ್ಟಿ ಹಾಕುವ ಹಿಟ್ಟು ಹಚ್ಚಿದ ಮೆಣಸಿನಕಾಯಿಗೆ ಹಗಲು ರಾತ್ರಿ ಬಿಡುವಿಲ್ಲದ ವ್ಯಾಪಾರ. ಅಂತೆಯೇ ತಿಪ್ಪಜ್ಜಿ ಸರ್ಕಲ್ ನಲ್ಲಿರುವ ತಿಂಡಿ ನಿಂಗಜ್ಜನ ಸೋದರ ಚಂದ್ರಣ್ಣ ಮಾಡುವ ಆಂಬೋಡೆಯ ರುಚಿ ತಿಂದರೆ ಮಾತ್ರ ವರ್ಣಿಸಬಲ್ಲಿರೇನೋ. ಎಷ್ಟು ಆಂಬೋಡೆ ಕರೆದರೂ ಕ್ಷಣದಲ್ಲೇ ಚಟ್, ನಮ್ಮ ಮಂಜಣ್ಣನ ಪುಟ್ಟ ಹೊಟೇಲ್ ಕೆಳಗಿನ ಬಸ್‌ಸ್ಟ್ಯಾಂಡ್ ನಲ್ಲಿದೆ. ಅಲ್ಲಂತೂ ಸಾಹಿತಿಗಳು, ಪ್ರಖ್ಯಾತ ಸಿನಿಮಾ ನಿರ್ದೇಶಕರು, ಪತ್ರಕರ್ತರು ಎಲ್ಲರೂ ಆಗಾಗ ಜಮಾಯಿಸುವುದುಂಟು. ತಿನಿಸಿಗಿಂತಲೂ ಮಂಜಣ್ಣನ ಪ್ರೀತಿ ಉಪಚಾರದ ರುಚಿಯೇ ಹೆಚ್ಚು ಸದಾ ನಗುತಾ ಪಾದರಸದಂತೆ ಓಡಾಡುತ್ತ ಗಿರಾಕಿಗಳನ್ನು ತಣಿಸುವ ಮಂಜಣ್ಣನಿಗೆ ಸಾಹಿತಿಗಳು ಕಲಾವಿದರೆಂದರೆ ಹೆಚ್ಚು ಆಸ್ತೆ-ಗೌರವ. ವಿಶೇಷ ಉಪಚಾರವೂ ನಮ್ಮಂತವರಿಗುಂಟು. ನಾವಲ್ಲಿ ಗಂಟೆಗಟ್ಟಲೆ ಕೂತು ಚರ್ಚಿಸಿದರೂ ಮಂಜಣ್ಣನಿಗೆ ಬೇಸರವಿಲ್ಲ. ‘ಫ್ರೀಯಾಗಿ ಟೀ’ ಸಪ್ಲೈಗೂ ರೆಡಿ.

ದಸರಾ, ದೀಪಾವಳಿ, ಯುಗಾದಿ ಬಂತೆಂದರೆ ಪಂಚೆಯುಟ್ಟ ಗಂಡಸರು ರೇಶಿಮೆ ಸೀರೆ ಹೆಂಗಸರು, ಚೂಡಿದ್ದಾರ ಹುಡುಗಿಯರು, ಟೈಟ್ ಜೀನ್ಸ್ ಹುಡುಗರು ಒಟ್ಟಿಗೆ ತಡಬಡಾಯಿಸುವ ಇಕ್ಕಟ್ಟಾದ ಓಣಿಯೊಂದಿದೆ. ಅದೂ ಸರ್ಕಲ್‌ನಿಂದ ಸಂತೆಬಾಗಿಲೆಡೆಗೆ ಹೋಗುವ ಬೀದಿ. ಹಬ್ಬಗಳಲ್ಲಿ ಇಲ್ಲೇ ಗಣಪತಿ ವಿಗ್ರಹಗಳ ಮಾರಾಟ, ಮಾವಿನ ಎಲೆ, ಬಾಳೆದೆಲೆ, ಬಾಳೆಕಂದುಗಳು, ಎಲೆ ಅಡಿಕೆ, ಹಣ್ಣು, ಹೂವುಗಳು ಸಿಗುವ ತಾಣ. ಹೂವುಗಳ ವಾಸನೆ, ಹಣ್ಣಿನ ಪರಿಮಳ, ಹಸಿರೆಲೆಗಳ ಪೆಂಪು ಇವುಗಳ ಜೊತೆಗೆ ಅಭ್ಯಂಜನ ಮಾಡಿರುವ ಸುವಾಸಿನಿಯರ ದೇಹದಿಂದ ಹೊರಹೊಮ್ಮವ ರೇಶಿಮೆಯ ಕಂಪೂ ಮೇಳೈಸಿ ಇಡೀ ಬೀದಿ ಸುವಾಸನೆಯ ಸೌಂದರ್ಯದ ಪ್ರತೀಕವಾಗಿ ಬಿಡುತ್ತದೆ. ಇಲ್ಲಿ ದಿನವಿಡೀ ನಿಂತರೂ ಸಮಯ ಹೋದದ್ದೇ ಗೊತ್ತಾಗದು, ಎಚ್ಚರ!

ಬಿಸಿಲ ಬೇಗೆಯ ಬಂಡೆಗಳ ನಾಡಿನಲ್ಲಿ ಐಸ್ಕ್ರೀಂ ಸೆಂಟರ್’ಗಳಿಗೂ ಅಂತಹ ಕೊರತೆಯೇನಿಲ್ಲ. ಇಂಜಿನಿಯರಿಂಗ್, ಡೆಂಟಲ್ ಹುಡುಗ, ಹುಡುಗಿಯರ ಮೋಜನ್ನು ನೋಡಬೇಕೆಂದೇ ಜೆ.ಸಿ.ಆರ್. ಬಡಾವಣೆಯ ಅರುಣ್ ಐಸ್ಕ್ರೀಂ ಮುಂದೆ ಹಾದರೆ ಸಾಕು. ಬೈಕುಗಳ ಮೇಲೆಯೇ ಜೋಡಿಗಳು ಕೂತು ತಂಪಾಗುತ್ತಿರುತ್ತಾರೆ. ಈಗೀಗ ಸುರಭಿ ಐಸ್ಕ್ರೀಂ ಕೂಡ ಅಂದ ಹೆಚ್ಚಿಸಿಕೊಳ್ಳುತ್ತಲಿದೆ. ಈ ಊರಿನ ಜನ ಇತರೆ ಊರಿನ ಜನರೊಂದಿಗೆ ಬೆರೆತು ಪಾನಿಪುರಿ, ಪಾವ್ ಬಾಜಿ ಗೀಳಿಗೂ ಬಿದ್ದಿದ್ದಾರೆ. ಸಂಜೆ ಸಾಗರ್ ದರ್ಶನ್ ಹೌಸ್‌ಫುಲ್. ದುರ್ಗದವರಿಗೆ ಬೇಲ್ ಪೂರಿ ತಿನ್ನುವ ಶೋಕಿಯೂ ಇತ್ತೀಚೆಗೆ ಹತ್ತಿಕೊಂಡಿದೆ. ಬ್ರೆಡ್ ಬೇಕರಿಗಳ ಮುಂದೂ ಹೆಂಗಸರದ್ದೇ ನಡಾವಳಿ.

ದುರ್ಗದವರು ಏನೇ ಸವಿದರೂ ದಿನದ ಮೊದಲ ಮತ್ತು ಕೊನೆಯ ಆಯ್ಕೆ ಮಾತ್ರ ಮೆಣಸಿನಕಾಯಿ ಬೋಂಡಾ. ದುರ್ಗಕ್ಕೆ ಬಂದಾಗ ‘ಮಿಸ್’ ಮಾಡಿಕೊಳ್ಳಬೇಡಿ. ಹುಡುಕುವ ಅಗತ್ಯವಿಲ್ಲ. ಬಸ್‌ಸ್ಟ್ಯಾಂಡ್ ಹೊರಬಂದರೆ ನಿಮ್ಮನ್ನು ಸ್ವಾಗತಿಸುವ ಮೊದಲು ತಿನಿಸು ಅದೆ!
*****

ವೇಣು ಬಿ ಎಲ್
Latest posts by ವೇಣು ಬಿ ಎಲ್ (see all)