ಮೂಲ: ವಿಲಿಯಂ ಬಟ್ಲರ್ ಏಟ್ಸ್
ಇಲ್ಲಿ ಬಾಗಿಲಿನ ಬಲಭಾಗದಲ್ಲೇ ಇದೆ ಕಂಚಿನ ಶಿರ;
ಮಾನುಷ, ಅತಿಮಾನುಷ, ದುಂಡನೆ ಹಕ್ಕಿಗಣ್ಣು
ಇನ್ನೆಲ್ಲ ಉದುರಿ ನಿಸ್ತಬ್ಬ ನಿಶ್ಚೇಷ್ಟಿತ.
ಗೋರಿಯಲೆಯುವ ಜೀವ ದಿಗಂತದುದ್ದಕ್ಕೂ ಬೀಸಿ ಹಾಯುತ್ತಿದೆ
(ಉಳಿದೆಲ್ಲ ಅಳಿದರೂ ಬೇರೆ ಏನೋ ಸುಳಿಯಬಹುದು ಅಲ್ಲಿ);
ತನ್ನ ಶೂನ್ಯತೆಯರಿವು ತರುವ ಸನ್ನಿಯ ಭಾವೋದ್ವೇಗದುಗ್ರತೆಯನ್ನು
ಶಮನವಾಗಿಸುವಂಥದೇನೂ ಅಲ್ಲಿಲ್ಲ.
ಗೋರಿಯಲೆದವಳಲ್ಲ ಹಿಂದೆ. ಇಡಿ ವ್ಯಕ್ತಿತ್ವ
ಘನ ಉದಾತ್ತತೆಯ ಪ್ರಭೆಯಿಂದ ತುಂಬಿದ ಹಾಗೆ.
ಬಲು ಸಭ್ಯ ಮಹಿಳೆ; ಹೇಳಬಲ್ಲರು ಯಾರು,
ವ್ಯಕ್ತಿತ್ವವೊಂದರ ಯಾವ ಮುಖ ಅದರ ನಿಜ ಸಾರ ತೋರೀತೆಂದು?
ಸಾರವೂ ಭಿನ್ನ ಮೂಲಾಂಶಗಳ ಮಿಶ್ರಣ
ಇದ್ದೀತು ಎಂದ ಮೇಧಾವಿ ಮೆಕ್ ಟ್ಯಾಗರ್‍ಟ್.
ಅಷ್ಟು ಸ್ವಲ್ಪದರಲ್ಲೆ ಉಸಿರು ಕಟ್ಟಿಸುವಂತೆ
ಬಾಳು ಸಾವುಗಳ ವಿರುದ್ಧ ತುದಿಯೆರಡನ್ನೂ ಬೆರಸಿ ಕಡೆದಂಥ ಮುಖ.
ಆರಂಭದಲ್ಲಿ ಇನ್ನೂ ಎಲ್ಲ ಹೊಸತು, ನಯ,
ಆ ದಿನಗಳಲ್ಲಿ ಕಂಡಿದ್ದೆ ಅವಳಲ್ಲೊಂದು
ವನ್ಯ ಉಚ್ಛೃಂಖಲತೆ, ನನಗೆ ಅನಿಸಿತ್ತಂದು
ಬಾಳು ಮುಂದೆಂದೊ ತಪ್ಪದೆ ಹಾಯಬೇಕಾದ
ಘೋರದರ್‍ಶನವೊಂದು ಅವಳಂತರಾತ್ಮವನ್ನೆ ಸಿಡಿಸಿಬಿಟ್ಟಿತೆಂದು.
ತನ್ನದಲ್ಲದ್ದೆಲ್ಲವನ್ನೂ ತನ್ನಾಚೆಗೆ ಕೊಡವಿ ನಡೆಯುವ ನೆಲೆಗೆ
ಸ್ನೇಹ ಕಲ್ಪನೆಯನ್ನು ನಡೆಸಿಬಿಟ್ಟಿತು; ನಾನು ಉದ್ವೇಗಗೊಂಡಿದ್ದೆ,
ನನ್ನ ಮಗುವೇ, ನನ್ನ ಮಗುವೆ ಎಂದಲ್ಲ ಕಡೆ ಉದ್ಗರಿಸಿ ತೊಳಲಿದ್ದೆ.
ಅಥವಾ ಅವಳನ್ನೊಂದು ಅಲೌಕಿಕ ಶಕ್ತಿಯೆಂದು ಬಗೆದೆ ನಾನು
ಕಠೋರ ನೇತ್ರವೊಂದು ಅವಳ ಕಣ್ಣನ್ನು ಹಾದು
ಈ ಕೀಳುಲೋಕದ ಪತನ ಕ್ಷತಿಗಳನ್ನು ನೋಡಿತೆಂಬಂತೆ;
ಕ್ಷುದ್ರಮೂಲಗಳು ಉನ್ನತಿಗೆ ಏರಿದ್ದನ್ನು
ಹಿರಿಮೂಲಗಳ ಸಾರ ಆರಿಹೋದದ್ದನ್ನು
ಪರಂಪರಾರ್‍ಜಿತ ಮುತ್ತನ್ನೆತ್ತಿ ಹಂದಿಗಳತ್ತ ಬೀಸಿ ಒಗೆದದ್ದನ್ನು
ಕೋಡಂಗಿ ಕೇಡಿಗರು ಭವ್ಯ ಕಣಸುಗಳನ್ನು
ಗೇಲಿಮಾಡಿದ್ದನ್ನು ಕಂಡಿತೆಂಬಂತೆ,
ಏನುಳಿಯಿತಿನ್ನು ತಪ್ಪಿಸಲು ನರಮೇಧಕ್ಕೆ ಎಂದು ಬೆರಗಾದಂತೆ.
*****