Kanavi‘ಆಯ್ಕೆ ಸಮಿತಿಯಿಲ್ಲಿ ನೀವಿದ್ದರೆ ರಾಷ್ಟ್ರಕವಿ ಗೌರವಕ್ಕೆ ಯಾರನ್ನು ಸೂಚಿಸುತ್ತಿದ್ದಿರಿ?’

ಕವಿ ಜಿ.ಎಸ್. ಶಿವರುದ್ರಪ್ಪ ಅವರಿಗೆ ಕವಿ ಗೌರವ ದೊರೆತಹೊಸತದು. ಸಂವಾದ ಕಾರ್ಯಕ್ರಮವೊಂದರಲ್ಲಿ ಸಹೃದಯರೊಬ್ಬರು ಮೇಲಿನ ಪ್ರಶ್ನೆ ಕೇಳಿದಾಗ ಇಡೀ ಸಭಾಂಗಣ ಮೈಯೆಲ್ಲ ಕಿವಿಯಾಗಿತ್ತು. ಜಿ‌ಎಸ್‌ಎಸ್ ತಣ್ಣಗೆ ಹೇಳಿದರು:

ರಾಷ್ಟಕವಿ ಆಯ್ಕೆ ಸಮಿತಿಯಲ್ಲಿ ನಾನಿದ್ದಿದ್ದರೆ ಚಂದ್ರಶೇಖರ ಕಂಬಾರ ಮತ್ತು ಚೆನ್ನವೀರ ಕಣವಿಯವರ ಹೆಸರು ಸೂಚಿಸುತ್ತಿದ್ದೆ.

ಆ ಸಭೆಯಲ್ಲಿ ಹಾಜರಿದ್ದು ಜಿ‌ಎಸ್‌ಎಸ್ ಮಾತುಗಳನ್ನು ಕೇಳಿದ್ದರೆ ಕಣವಿ ಅಥವಾ ಕಂಬಾರರು ಅನಿರ್ವಚನೀಯ ಆನಂದದಲ್ಲಿ ತೋಯ್ದು ಹೋಗುತ್ತಿದ್ದರೇನೋ? ಓರಗೆಯ ಕವಿಯಿಂದ ದೊರೆತ ಆ ಮೆಚ್ಚುಗೆ ಕಂಬಾರ ಹಾಗೂ ಕಣವಿ ಅವರಿಗೆ ಸಂದ ಇತರ ಯಾವ ಪುರಸ್ಕಾರಗಳಿಗಿಂತಲೂ ಕಡಿಮೆಯಾದುದಲ್ಲ.

ಕನ್ನಡದ ಕಾವ್ಯ ಸಂದರ್ಭದಲ್ಲಿ ಜಿ‌ಎಸ್‌ಎಸ್ ಜೊತೆಜೊತೆಯಲ್ಲೇ ಸಾಗಿದ್ದವರು ಕಣವಿ. ಇಬ್ಬರ ಕಾವ್ಯವೂ ಪ್ರಸನ್ನಮುಖಿ. ಇಬ್ಬರೂ ಬೆಳಕಿಗಾಗಿ ಹಂಬಲಿಸಿದವರು; ಸಹೃದಯರಿಂದ ಸಮನ್ವಯ ಕವಿ ಎಂದು ಕರೆಸಿ ಕೊಂಡವರು. ಆದರೆ ‘ಸಮನ್ವಯ’ ವಿಶೇಷಣದ ಬಗ್ಗೆ ತಮ್ಮ ಗೆಳೆಯನಂತೆ ಕಣವಿ ಅವರಿಗೆ ಬೇಜಾರಿಲ್ಲ ‘ಕಾವ್ಯ ಹುಟ್ಟೋದೇ ಸಮನ್ವಯದಿಂದ. ನನ್ನ ಕಾವ್ಯರಚನೆಗೆ ಸ್ಪೂರ್ತಿ ಜನ, ಪ್ರಕೃತಿ’. ನಾವು ಪ್ರತಿನಿತ್ಯ ಏನು ನೋಡುತ್ತೀವಿ, ಕೇಳುತ್ತೀವಿ ಮತ್ತು ಅನುಭವಿಸುತ್ತೀವಿ ಅದೇ ಕವಿತೆಯಾಗಿದೆ ಎನ್ನುವುದು ಕಣವಿ ನಂಬಿಕೆ. ಧಾರನಾಡ ಜಿಲ್ಲೆಯ ಗದಗ ತಾಲ್ಲೂಕಿನ ಹೊಂಬಳ ಕವಿಯವರ ಹುಟ್ಟೂರು (ಜನನ: ಜೂನ್ ೨೮, ೧೯೨೮). ಶಾಲಾ ಮಾಸ್ತರರಾದ ಕಣವಿಯರ ತಂದೆ ಸಕ್ಕೆರಪ್ಪನವರಿಗೆ ವಚನ. ಕಾವ್ಯ ವಾಚನಗಳಲ್ಲಿ ವಿಶೇಷ ಅಭಿರುಚಿ. ಅಪ್ಪನ ಸಾಹಿತ್ಯ ಪ್ರೀತಿ ಬಾಲಕ ಕಣವಿಯೆದೆಯಲ್ಲಿ ಕವಿತೆಯ ಓನಾಮ ಬಿತ್ತಿತು. ಅವರ ಮೊದಲ ಕವಿತೆ ‘ಸೃಷ್ಟಿಯಸೊಬಗು’ ಶಾಲಾ ಪತ್ರಿಕೆಯಲ್ಲಿ ಅಚ್ಚಾಯಿತು. ಅಲ್ಲಿಂದ ಶುರುವಾದ ಕಣವಿ ಕಾವ್ಯಕೃಷಿ ನಿರಂತರವಾಗಿ ಮುಂದುವರೆದಿದೆ. ಈ ಅರ್ಧ ಶತಮಾನದ ಒಟದಲ್ಲಿ ಆಯಾಕಾಲದ ವಿಚಾರಗಳಿಗೆ, ಸಂಘರ್ಷಗಳಿಗೆ ಸ್ಪಂದಿಸುತ್ತ ತಾಜಾತನವನ್ನು ಉಳಿಸಿಕೊಂಡುಬಂದಿರುವುದು ಅವರ ಕಾವ್ಯದ ಹೆಚ್ಚುಗಾರಿಕೆ. ಮೊದಲ ಸಂಕಲನ ‘ಕಾವ್ಯಾಕ್ಷಿ’ ಬಿಡುಗಡೆಯಾದಾಗ (೧೯೪೯) ಕಣವಿಯವರ ವಯಸ್ಸು ಇಪ್ಪತ್ತೊಂದು. ನವೋದಯದ ಕಾವು ಪ್ರಬಲವಾಗಿದ್ದ ಕಾಲವದು. ಕುವೆಂಪು, ಬೇಂದ್ರೆ, ಮಧುರ ಚನ್ನರ ಕವಿತೆಗಳಿಂದ ಕಣವಿ ಪ್ರಭಾವಿತರಾದರು. ಸೌಂದರ್ಯಾನುಭೂತಿ. ನಿಸರ್ಗಾರಾಧನೆ ಅವರ ಕಾವ್ಯದ್ರವ್ಯಗಳಾದವು. ‘ಕಾರ್ಲೇಕರ ಮೋಡ’, ‘ಆಕಾಶ ಬುಟ್ಟಿ’, ‘ಮಧುಚಂದ್ರ’ ಸಂಕಲನಗಳು ಹೊರಬಂದುದು ನವೋದಯದ ಗುಂಗಿನಲ್ಲಿಯೇ. ಈ ಗೀತ ಅನುರಣಿಸುತ್ತಿರುವಾಗಲೇ ನವ್ಯದ ‘ಜೀವಧ್ವನಿ’ ಮಿಡಿಯತೊಡಗಿತು. ಕಣವಿ ನವ್ಯದ ಆಶಯಗಳಿಗೂ ದನಿಯಾದರು ‘ಎರಡು ದಡ’ಗಳಲ್ಲೂ ಸಂದ ಯಶಸ್ಸು ಅವರದು.

ಸುನೀತಗಳ ರಚನೆಯಲ್ಲವರದು ವಿಶೇಷ ಪರಿಣತಿ. ವ್ಯಕ್ತಿಚಿತ್ರಗಳನ್ನು ಕವಿತೆಯಾಗಿಸುವುದರಲ್ಲಿ ಅವರು ಸುನೀತಗಳನ್ನು ಬಳಸಿಕೊಂಡ ಬಗೆ ಅನನ್ಯವಾದುದು. ಅಸಹಜತೆ ಹಾಗೂ ಕಸರತ್ತುಗಳಿಂದ ದೂರವಾದ ಅವರ ಕಾವ್ಯ ‘ಕಾರ್ತೀಕದ ಮೋಡ’ದಂತೆ ಮೋಹಕವಾದುದು.
‘ಸಹಜ ನಡೆದರೂ ಭೂಮಿಯ ಲಯದಲಿ
ಪದಗಳನಿರಿಸಿದ ಹಾಗೆ
ವಿಶ್ವದ ರಚನೆಯ ಹೊಳಹಿನಲ್ಲಿ
ಕಂಗೊಳಿಸಿತು ಕವಿತೆಯು ಹೀಗೆ’

ಮೇಲಿನ ಸಾಲುಗಳು ಕಣವಿ ಕಾವ್ಯಕ್ಕೂ ಹೊಂದುವಂತಹವು. ಭಾವಗೀತೆಗಳ ಮೂಲಕ ನಿರಕ್ಷರರನ್ನೂ ಕಣವಿ ತಲುಪಿದ್ದಾರೆ. ಅವರ ‘ಹೂವುಹೊರಳುವವು ಸೂರ್ಯನ ಕಡೆಗೆ/ ನಮ್ಮ ದಾರಿ ಬರಿ ಚಂದ್ರನ ಕಡೆಗೆ ಜನಪ್ರಿಯ ಗೀತೆ. ‘ವಿಶ್ವ ವಿನೂತನ’ ಕನ್ನಡ ನಾಡಗೀತೆಗಳ ಪಟ್ಟಿಯಲ್ಲಿ ಸೇರುವಂಥ ಕವಿತೆ. ‘ಈ ಗೀತೆಯನ್ನು ಕೇಳಿ ರೋಮಾಂಚನವಾಯಿತು’ ಎಂದು ಕುವೆಂಪು ಮೆಚ್ಚುಗೆಯಿಂದ ಕಣವಿಯವರ ಬೆನ್ನುತಟ್ಟಿದ್ದುಂಟು.

ಗದ್ಯ ರಚನೆಯಲ್ಲೂ ಕಣವಿ ಸಾಧನೆ ಗಮನಾರ್ಹ. ‘ಸಾಹಿತ್ಯ ಚಿಂತನೆ’, ‘ಕಾವ್ಯಾನುಸಂಧಾನ’, ‘ಸಮಾಹಿತ’, ‘ಸಮತೋಲನ’, ‘ಮದುರಚೆನ್ನ’, ‘ವಚನಾಂತರಂಗ’, ‘ಶುಭನುಡಿಯೆ ಹಕ್ಕಿ’ ಅವರ ಕೆಲ ಗದ್ಯಕೃತಿಗಳು.

ವಿದ್ಯಾವರ್ಧಕ ಸಂಘದ ಏಕೀಕರಣ ಚಳವಳಿಯ ಕಾರ್ಯಕ್ರಮಗಳಲ್ಲಿ ಸಕ್ರಿಯ ಪಾತ್ರವಹಿಸಿದ್ದ ಕಣವಿ. ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನಪೀಠದಲ್ಲಿ ಗೌರವಸಂದರ್ಶಕ ಪ್ರಾದ್ಯಾಪಕರಾಗಿ, ಪ್ರಸಾರಾಂಗದ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ಹಾಸನದಲ್ಲಿ ನಡೆದ ೬೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಕಣವಿಯವರಿಗೆ ಪಂಪ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (‘ಜೀವಧ್ವನಿ’ ಸಂಗ್ರಹಕ್ಕೆ), ಹಂಪಿಕನ್ನಡ ವಿಶ್ವವಿದ್ಯಾಲಯದ ‘ನಾಡೋಜ’ ಸೇರಿದಂತೆ ಹಲವು ಗೌರವಗಳು ಸಂದಿವೆ.
*****