ಗೆಲವಿರಲಿ, ಬರದಿರಲಿ ಎದುರು ಸೋಲು
ಎಲ್ಲೆಡೆಗು ನಡೆದಾಗ ಗೆಲುವೆ ಮುಂಬರಲಿ
ಗೆಲುವಿನಾಶಯ ಜೀವ ಜಗದಿ ಮೇಲು
ಸೋಲಿನಲ್ಲೇನಿಹುದು; ಗೆಲುವೆಮಗೆ ಕಾದಿರಲಿ

ಒಲವು ಗೆಲವಿನೆಡೆಗೆ ಒಯ್ಯುತಲಿರಲಿ
ತಿಳಿದಿರಲಿ; ಬರುವವೇನೋ ನೂರಾರು ಸೋಲುಗಳು
ಕಲ್ಲು-ಮುಳ್ಳಿಲ್ಲದ ದಾರಿ ಆವುದಿಹದಲಿ?
ಹಳ್ಳ-ಕೊಳ್ಳಗಳಿಲ್ಲದೆ ಓಡಿಹುದಾವದಾರಿ ಜಗದೊಳು

ಹಳ್ಳ ಹಾಯಿತೆಂದು ಹಿಮ್ಮೆಟ್ಟಿ ಹೊರಡದಿರು
ಹಿರಿಯಗಿರಿಯೊಂದು ಬಂತೆಂದು ಕುಂದದಿರು ಎದೆಯಲ್ಲಿ
ಬಿಸಿಲು ಉರಿಯಾದೊಡೆ ಬಿಸಿಯುಸಿಯದಿರು
ಬಿದ್ದರೊಮ್ಮೇನಾಯಿತು, ಏಳದಲೆ ಬೀಳಬೇಕೆ ಇಲ್ಲಿ ?

ಬಂದ ಸೋಲನು ಜೈಸದೆ ಮಾಣದಿರು
ಸೋಲನೂಕಿ ಗೆಲುವಾದೊಡೆ; ನಗದಿರು ಸೋತವರಿಗಾಗಿ
ಗೆಲುವಿನೊಡೆ ಕೈ ಮಾಡಿ ಕರೆಯಲು ಮರೆಯದಿರು
ವಿಜಯದೊಡೆ ಮುನ್ನಡೆ ಗೆಲವಿನಹಂಕಾರವನು ನೀಗಿ
*****