ನವಿಲುಗರಿ – ೩

ನವಿಲುಗರಿ – ೩

‘ಎಲ್ಲಿ ಹಾಳಾಗಿ ಹೋಗಿದ್ಯೋ ಹಡಬೆನಾಯಿ?’ ಅಬ್ಬರಿಸಿದ ಲಾಯರ್ ವೆಂಕಟ ‘ಗರಡಿ ಮನೆಗೆ… ಬರ್ತಾ ರಾಜಯ್ಯ ಮೇಷ್ಟ್ರು ಸಿಕ್ಕಿದ್ದರು. ಸ್ವಲ್ಪ ಲೇಟಾಯಿತು’ ತಡಬಡಾಯಿಸಿದ ರಂಗ.

“ನಿನ್ನನ್ನೇನು ದೊಡ್ಡ ಗಾಮ ಪೈಲ್ವಾನ್ ಅಂಡ್ಕೊಂಡಿದಿಯೇನಲೆ, ಪಾಳೇಗಾರರ ಮನೇರ ಮುಂದೆ ಜಗಳಕ್ಕೆ ಹೋಗಿದ್ದೆಯಂತೆ ? ಯಾಕೆ ಬದುಕೋ ಆಸೆ ಇಲ್ವಾ ?” ಕಾಲೇಜು ಮೇಷ್ಟ್ರು ಗಣೇಶನ ದನಿಯಲ್ಲಿ ನಡುಕ.

“ಊರು ಉಸಾಬರಿಯೆಲ್ಲಾ ನಿನಗ್ಯಾಕೋ ? ಯಾರು ಯಾರಿಗಾದ್ರೂ ಅಪಮಾನ ಮಾಡ್ಲಿ ನ್ಯಾಯ ಹೇಳೋಕೆ ನೀನೇನು ಪಂಚಾಯ್ತಿ ಮೆಂಬರಾ ?” ಫ್ಯಾಕ್ಟರಿ ಪರಮೇಶನೂ ಅಂಜಿದ್ದ. ‘ದುಡಿದು ಹಾಕ್ತಿದಿರಲ್ಲ ದಂಡಿಗಟ್ಟಲೆ ತಿಂತಾನೆ ದಂಡೆ ಭಸ್ಕಿ ಹೊಡಿತಾನೆ… ಕೊಬ್ಬು, ಅವರಿವರ ಮೇಲೆ ಕುಸ್ತಿಗೆ ಬೀಳ್ತಾನೆ, ಯಾವನಾದ್ರೂ ಕೈ ಕಾಲೋ ತೆಗೆದ್ರೆ ಮತ್ತೆ ಕೂಳಿಗೆ ದಂಡವಾಗಿ ಮೂಲೆಗೆ ಬೀಳ್ತಾನೆ’ ಲಾಯರ್ ಸತಿ ಪಾರ್ವತಿಯ ಜಡ್ಜಮೆಂಟ್ ಹೊರಬೀಳುತ್ತದೆ. ‘ಏನಾದ್ರೂ ಮಾಡ್ಕೊಂಡು ಸಾಯಿ… ನನ್ನ ಬ್ಲೌಸ್ ಈಸ್ಕೊಂಡು ಬಂದ್ಯಾ?’ ಗಣೇಶನ ಹೆಂಡತಿ ಅದನ್ನು ಒಪ್ಪಿಸಿದ. ‘ನನ್ನ ಪಾರ್ಕರ್ ಪೆನ್ ಎಲ್ಲೊ? ದುಡ್ಡು ನುಂಗಿಬಿಟ್ಯಾ?’ ಮಾಧುರಿಯ ದನಿ ಸೈರನ್ ಆಗುವ ಮೊದಲೆ ಅಂಗಿಯ ಜೇಬಲ್ಲಿ ವಿರಮಿಸಿದ್ದ ಪೆನ್ ಒಪ್ಪಿಸಿದ. ‘ನಮ್ಮ ಬೂಟ್ಗೆ ಪಾಲಿಶ್ ಹಾಕೋ ರಂಗಾ’ ಮಕ್ಕಳ ಆರ್ಭಟ ‘ಓಕೆ ಒಂದ್ನಿಮಿಷ’ ಬೂಟ್ಗಳಿಗೆ ರಂಗ ಪಾಲಿಶ್ ತಿಕ್ಕಿ ಹೊಳಪು ಮೂಡಿಸಿದ ಮಕ್ಕಳಿಗೆ ತೊಡಿಸಿದ. ನನ್ನ ಕೋಟು ಇಸ್ತ್ರಿ ಮಾಡಿದೆಯೇನೋ? ಲಾಯರ್ ರಂಗನನ್ನು ಹೊಡೆಯಲು ಬಂದ. ‘ನನ್ನ ಬೈಕ್ ಯಾಕೋ ಸ್ಟಾರ್ಟಿಂಗ್ ಟ್ರಬಲ್ಲು ಒಂದಿಷ್ಟು ನೋಡೋ’ ಕಾಲೇಜ್ ಮೇಷ್ಟ್ರ ತಹತಹ ‘ನನ್ನ ಕಾರಿಗೆ ನೀನು ಪೆಟ್ರೋಲ್ ಹಾಕಿಸಿದಿಯೇನಯ್ಯ’ ಫ್ಯಾಕ್ಟರಿ ಸೂಪರ್‌ವೈಸರ ಕೂಗಾಟ, ‘ನನ್ನ ಚಪ್ಪಲಿ ಹರಿದಿದೆಯಲ್ಲೋ ಇಲ್ಲಿ ಯಾವನೋ ಇದಾನೆ ರಿಪೇರಿ ಮಾಡೋನು?’ ಪಾರ್ವತಿಯ ಪರದಾಟ. ರಂಗ ಕಿಂಚಿತ್ತೂ ಧಾವಂತಪಟ್ಟುಕೊಳ್ಳಲಿಲ್ಲ ಬೇಸರಿಸಲೂ ಇಲ್ಲ. ಇದೆಲ್ಲಾ ದಿನದ ಗೋಳು ಅಳೋರು ಯಾರು? ಲಾಯರ್ ಕೋಟಿಗೆ ಇಸ್ತ್ರಿ ಉಜ್ಜಿದ, ಹೊರಹೋಗಿ ಬೈಕ್ ಹತ್ತಿ ಸ್ಟಾರ್ಟ್ ಮಾಡಿದ ಆಗಲಿಲ್ಲ. ಯಾವುದೋ ವೈರ್ ಎಳೆದು ಬಗ್ಗಿ ಕುಂತು ಯಾವ ವೈರ್‌ಗೆ ಯಾವುದನ್ನು ಸೇರಿಸಿದನೋ! ‘ಕಿಕ್’ ಹೊಡೆದಾಗ ಗಾಡಿ ಗುರುಗುಟ್ಟಿತು. ಪಾರ್ವತಿಯ ಚಪ್ಪಲಿ ಎತ್ತಿಕೊಂಡು ಧೂಳು ಜಾಡಿಸಿ ಹರಿದ ಉಂಗುಷ್ಟ ಜೋಡಿಸಿ ಹೊಲಿಗೆ ಹಾಕಿಕೊಟ್ಟ ‘ಚಪ್ಪಲಿ ಹೊಲಿಯೋ ಸಾಮಾನೆಲ್ಲಾ ಇಟ್ಕೊಂಡಿದಿಯೇನೋ!’ ಪಾರ್ವತಿಗೆ ಅಚ್ಚರಿ. ‘ಮನೇಲಿ ಇಷ್ಟು ಜನ ಇದ್ದೀರ ಅಂದೇಲೆ ನಮ್ಮ ಕೆಲಸ ನಾವೇ ಮಾಡಿಕೊಳ್ಳೋದು ಮೇಲು’ ರಂಗ ಮಾತನಾಡುತ್ತಲೇ ಅವರವರ ಪಾದರಕ್ಷೆಗಳಿಗೆ ತಕ್ಕ ಬಣ್ಣದ ಪಾಲಿಶ್ ತೆಗೆದು ಹಾಕಿ ಗಸಗಸನೆ ತೀಡಿ ಮಿಂಚು ತರಿಸಿದ. “ನನ್ನ ಗಾಡಿಗೆ ಪೆಟ್ರೋಲ್ ಕತೆ ಹೆಂಗೋ? ಫ್ಯಾಕ್ಟರಿಗೆ ಹೆಂಗೋ ಹೂಗ್ಲಿ? ಪರಮೇಶಿ ರೇಗಿದ. ‘ಪೆಟ್ರೋಲ್ ಹಾಕ್ಸು ಅಂದೆ. ಕಾಸು ಕೊಟ್ಟೆಯಾ? ನಾನೇನ್ ಮಾಡ್ಲಿ ಬುಕ್ಕ ಲಿಂಗ್‌ಪಕೀರ… ಲಾಯರ್ ಸಾಹೇಬರ ‘ಸ್ಕೂಟರ್ ಮೇಲೆ ಹೋಗು’ ರಂಗ ಪರಿಹಾರ ಸೂಚಿಸಿದ. ‘ಅವರು ಹೋದ್ರೆ ನಾನೇನ್ ನಡ್ಕೊಂಡ್ ಹೋಗ್ಲಾ?’ ಪಾರ್ವತಿ ಬುಸುಗುಟ್ಟಿದಳು. ‘ಸರಿಸರಿ… ಲೆಕ್ಚರರ್ ಗಣೇಶನ ಹಿಂದಿನ ಸೀಟು ರಾಗಿಣಿ ಅವರಿಗೆ ರಿಸರ್ವ್… ಏನ್ ಮಾಡೋದೀಗ?’ ರಂಗ ಕಿಸಕ್ಕನೆ ನಕ್ಕ.

‘ರೀ, ನೀವು ಫ್ಯಾಕ್ಟರಿಗಾದ್ರೂ ಹೊಗಿ ಬಿಡಿ. ಈಗ ನಾನ್ ಹೇಗೆ ಫ್ಯಾಕ್ಟರಿಗೆ ಹೋಗೋದು? ಈವತ್ತು ಫ್ಯಾಕ್ಟರಿನಲ್ಲಿ ಚೆಕ್ಕಿಂಗ್ ಇದೆ’ ಮಾಧುರಿ ತೊಳಲಾಟ.

‘ನಾನ್‌ ಸೂಪರ್‌ವೈಸರ್, ನನಗಿಂತ ನಿನ್ನ ಜವಾಬ್ದಾರಿನೇ ಹೆಚ್ಚು ಅನ್ನೋ ಹಾಗೆ ಆಡ್ತೀಯಲ್ಲೇ ಆಪ್ಟರ್‌ ಆಲ್…’ ಪರಮೇಶಿ ಮುಂದೆ ಏನೋ ಹೇಳುವವನಿದ್ದ.

‘ಸ್ಟಾಪ್ ಇಟ್… ಆಫ್ಟರ್ ಆಲ್ ಅಂತೆಲ್ಲಾ ಅಂದ್ರೆ ನಾನ್ ಸುಮ್ನಿರೋಲ್ಲ. ಅಷ್ಟು ದೊಡ್ಡ ಮನುಷ್ಯ ನನ್ನನ್ನ ಯಾಕ್ರಿ ದುಡಿಯೋಕೆ ಕಳ್ಸಿದ್ರಿ’ ಕೇಳಿದಳು.

‘ದುಡ್ಡಿನ ಆಸೆ ನಿಂಗೆ, ನೀನೇ ಸೇರ್‍ಕೊಂಡೆ… ದುಡಿದ ದುಡ್ಡಲ್ಲಿ ಒಂದು ಪೈಸೆ ಕೊಟ್ಟಿದೆಯೇನೆ ನನ್ಗೆ? ಎಲ್ಲಾ ದುಡ್ದೂ ಬಂಗಾರದ ಅಂಗ್ದಿ ಬಟ್ಟೆ ಅಂಗ್ಡಿಯೋನ್ಗೆ ಸುರಿತಿಯಾ?’ ಪರಮೇಶಿ ಜೋರಾದ. ಸುತ್ತಮುತ್ತಲಿನವರಿಗೋ ತಮಾಷೆ.

‘ತಿಂಗ್ಯಾ ಖರ್ಚಿಗೆ ಅಂತ ಮನೆಗೆ ಕೊಡ್ತಿಲ್ವೇನ್ರಿ? ಇಲ್ಲದಿದ್ದರೆ ಲಾಟ್ರಿ ಹೊಡಿತಿದ್ರಿ…’ ಮಾಧುರಿ ಸೊಕ್ಕಿನ ನಗೆ ನಕ್ಕಾಗ ಉಳಿದಿಬ್ಬರು ವಾರಗಿತ್ತಿಯರಿಗೂ ಉರಿಯಿತು..

‘ಅಮ್ಮಾ ತಾಯಿ, ನಾವೂ ತಿಂಗ್ಳಾ ಇಷ್ಟು ಅಂತ ಕೊಟ್ಟೆ ತಿಂತಿರೋದು ಬಿಟ್ಟಿ ಅಲ್ಲ’ ಸಿಡುಕಿದರು ಪಾರ್ವತಿ, ರಾಗಿಣಿ.

‘ಸ್ಟಾಪ್ ಸ್ಟಾಪ್… ಈಗ ಫ್ಯಾಕ್ಟರಿ ಸಾಹೇಬರ ಕಾರಿಗೆ ಪೆಟ್ರೋಲ್ ಬೇಕು ಫ್ಯಾಕ್ಟರಿಗೆ ಹೋಗುವಷ್ಟಿದೆ… ಜಗಳ ನಿಲ್ಸಿ ಪ್ಲೀಸ್’ ರಂಗ ನಕ್ಕು ಹೇಳಿದ.

‘ನೀರಲ್ಲಿ ಬೆರಳು ಅದ್ದಿ ಪೆಟ್ರೋಲ್ ಮಾಡೋಕೆ ನಾನೇನ್ ಕರಡಿ ಬಾಬಾನೆ…? ಲೆಕ್ಚರರ್ ಸಾಹೇಬರ ಟ್ಯಾಂಕ್ ಫುಲ್ ಇತ್ತು. ತೆಗೆದು ಅಡ್ಜಸ್ಟ್ ಮಾಡಿದೀನಿ’ ಸಮಜಾಯಿಸಿದ. ‘ನಮ್ಮ ಬೈಕ್ ಎಲ್ಲಾದರೂ ಅರ್ಧದಾರೀಲಿ ನಿಲ್ಲೇಕು… ನಿನ್ನಾ ನಿನ್ನಾ’ ಹಲ್ಲು ಮಸೆದಳು ಹೈಸ್ಕೂಲ್ ಟೀಚರ್ ರಾಗಿಣಿ.

‘ಹಾಗೇನೂ ಆಗೋದಿಲ್ಲ ಮೇಡಮ್… ಅಡ್ಜಸ್ಟ್ ಮಾಡ್ಕೊಬೇಕು. ಅಡ್ಡಸ್ಟ್ ಮೆಂಟ್ ಇಲ್ಲದೆ ಹೋದ್ರೆ ಲೈಫಲ್ಲಿ ಡಿಸ್‌ಅಪಾಯಿಂಟ್ ಗ್ಯಾರಂಟಿ. ಯಾರಿಗೂ ತಾವು ಬಯಸಿದಂತಹ ನೌಕರಿ, ಜೀವನ, ಜೀವನಸಂಗಾತಿ, ವಿಧೇಯರಾದ ಮಕ್ಕಳು ಸಿಗೋದಿಲ್ಲ. ಸಿಕ್ಕಿದ್ದರಲ್ಲೇ ತೃಪ್ತಿ, ಆನಂದ ಪಡೆಯೋದನ್ನೇ ನಾನು… ಅಡ್ಡಸ್ಟ್ಮೆಂಟ್ ಅನ್ನೋದು…

‘ನೀನೊಂದು ಯೂಸ್ಲೆಸ್ ಎಲಿಮೆಂಟ್ ಅಡ್ಜಸ್ಟ್‍ಮೆಂಟ್ ಬಗ್ಗೆ ಲೆಕ್ಚರ್‌ ಕೊಡ್ತಾನೆ. ಹೋಗಯ್ಯಾ ಒಳ್ಗೆ ದಂಡಿ ಕೆಲಸ ಬಿದ್ದಿದೆ’ ಗಣೇಶ ಸಿಡುಕಿದ. ರಂಗ ಒಳಹೋಗುವಾಗಲೇ ಬಿಸಿಬಿಸಿ ದೋಸೆಯ ಪ್ಲೇಟುಗಳನ್ನು ಹಿಡಿದು ಬಂದ ಕಾವೇರಿ ಅವರಿಗೆಲ್ಲಾ ಸಪ್ಲೆ ಮಾಡಿದಳು. ‘ಅಯ್ಯೋ ಪುಣ್ಯಾತ್ಗಿತ್ತಿ. ಇಷ್ಟು ಹೊತ್ತಿಗಾದ್ರೂ ತಿಂಡಿ ಕಾಣಿಸಿದೆಯಲ್ಲಾ’ ರಾಗಿಣಿ ಕೆಟ್ಟ ರಾಗ ತೆಗೆಯುತ್ತಲೇ ದೋಸೆ ಮುಕ್ಕಿದಳು. ‘ಡರ್’ ಎಂದು ತೇಗುವವರೆಗೂ ತಿಂದು ಅವರುಗಳು ವಾಹನಗಳಲ್ಲಿ ಶಬ್ದ ಮಾಡುತ್ತಾ ಹೋದದ್ದನ್ನು ಕಿಟಕಿಯಲ್ಲಿಂದ ನೋಡಿದ ಮೇಲೆಯೇ ಕಮಲಮ್ಮ, ಕಾವೇರಿಗೆ ನಿರಾಳತೆ. ಉಸ್ಸಪ್ಪ ಎಂದು ಕೂತರು. ರಂಗ ಸ್ನಾನ ಮುಗಿಸಿ ಬಂದವನೆ ‘ನಂಗೆ ಟಿಫಿನ್ನು’ ಎಂದು ಅಡಿಗೆ ಕೋಣೆಗೆ ನುಗ್ಗಿದ. ‘ತಡಿಯೋ ಬಿಸಿಬಿಸಿಯಾಗಿ ಮಾಡ್ಕೊಡ್ತೀನಿ’ ಕಮಲಮ್ಮ ಸೆರಗು ಸೊಂಟಕ್ಕೆ ಸಿಕ್ಕಿಸಿದರು. ‘ಬೇಡಮ್ಮ… ನನ್ಗೆ ಕಾಲೇಜಿಗೆ ಟೈಮ್ ಆಗುತ್ತೆ, ಹಾಕಿರೋದನ್ನೇ ಕೊಡು… ಅದೂ ಇವತ್ತು ಮೊದಲನೆ ದಿನ ಲೇಟಾಗಿ ಹೋಗಬಾರಲ್ಲ’ ಆತುರ ವ್ಯಕ್ತಪಡಿಸಿದ. ಅವನಿಗೆ ತಣ್ಣನೆ ದೋಸೆಯನ್ನೇ ಪೇರಿಸಿಕೊಟ್ಟ ಕಮಲಮ್ಮ ಗಬಗಬನೆ ತಿನ್ನುವ ಅವನನ್ನೇ ನೋಡುತ್ತಾ ಬಿಸಿಬಿಸಿ ದೋಸೆ ಹುಯ್ದರು.

‘ಚೆನ್ನಾಗಿ ತಿನ್ನಣ್ಣ… ನಿನ್ನ ಬಾಡಿಗೆ ಈ ದೋಸೆ ಇಡ್ಲಿ ಸೂಟ್ ಆಗಲ್ಲ. ರಾಗಿಮುದ್ದೆ ಸೊಪ್ಪಿನ ಸಾರೇ ಸರಿ. ಬಾದಾಮಿ ಗೋಡಂಬಿ ಉತ್ತುತ್ತಿ ಕಲ್ಲುಸಕ್ಕರೆ ಕೊಡೋ ಅಷ್ಟು ಶಕ್ತಿ ನಮಗಿಲ್ಲವೆ’ ಹನಿಗಣ್ಣಾದಳು ಕಾವೇರಿ.

‘ನೋಡೇ, ಏನೇನೋ ತಿಂದು ಖಂಡಬಲ ಎಷ್ಟು ಗಳಿಸಿಕೊಂಡ್ರೇನು ಬಂತು, ಗುಂಡಿಗೆ ಬಲ ಇರ್‍ಬೇಕು ಕಾವೇರಿ. ಅದು ನನಗಿದೆ… ಆನೆ, ಮಾಂಸ ತಿಂದಾ ಹಾಗಿರೋದು? ಸೊಪ್ಪು ತಿನ್ನುತ್ತೆ ಸೊಪ್ಪು’ ಕಾವೇರಿಯನ್ನು ನಗಿಸಿದ ರಂಗ ಬಿಸಿಬಿಸಿ ದೋಸೆಗಳನ್ನು ಅವನ ಡಬ್ಬಿಗೆ ಹಾಕಿಕೊಡುತ್ತಲೇ ಕಮಲಮ್ಮ ಅವನು ದೊಡ್ಡ ಮನುಷ್ಯರ ಮಕ್ಕಳ ಮೇಲೆ ಗುದ್ದಾಡಿದ್ದರ ಬಗ್ಗೆ ಆಕ್ಷೇಪವೆತ್ತಿದಳು. ‘ನಾನೇನ್ ಅವರ ತಂಟೆಗೆ ಹೋಗಲಿಲ್ಲಮ್ಮ ಅವರೇ ಬಂದರು ಹೊಡೆಸಿದರು. ಹ್ಯಾಗೆ ಸುಮ್ನಿರ್‍ಲಿ ನಾನೂ ತದಕ್ದೆ. ಆ ತಾತ ಇದಾನಲ್ಲ ಆತನೇ ಅವರಿಗೆ ಬೈದು ‘ಹೋಗು’ ಅಂತ ನನಗೆ ಸನ್ನೆ ಮಾಡಿದರು. ತಪ್ಪು ನಂದೇ ಆಗಿದ್ದರೆ ಕಂಬಕ್ಕೆ ಕಟ್ಟಿಸಿರೋರು’ ತಾಯಿ ಗಾಬರಿಗೊಂಡ ಮನಕ್ಕೆ ಸಾಂತ್ವನ ಹೇಳಿದ. ‘ಆದರೂ ದೊಡ್ಡವರ ಮೇಲೆ ಪೈಪೋಟಿ ತರವಲ್ಲ. ಬಡವಾ ನೀ ಮಡಗಿದಂಗಿರು ಅಂದವರೆ ಹಿರಿಯರು. ನಾಳೆ ನಿನಗೇನಾದ್ರೂ ಆದ್ರೆ ನಮಗ್ಯಾರಣ್ಣ ಗತಿ?’ ಕಾವೇರಿ ಕಣ್ಣೀರಾದಳು.

‘ಹೌದಪ್ಪ ತಪ್ಪು ಯಾರದ್ದಾದರೂ ಆಗಿಲ್ಲಿ ದಂಡ ವಿಧಿಸೋಕೆ ನೀನ್ಯಾರು? ಉಪ್ಪು ತಿಂದೋರು ನೀರು ಕುಡಿತಾರೆ. ಆದ್ರೂ ನೀನು ಮೇಷ್ಟ್ರ ಸಲುವಾಗಿ ಅವರ ಪರ ನಿಂತೆಯಲ್ಲ ನೀನ್ ಕಣಪ್ಪ ನಿಜವಾದ ಶಿಷ್ಟ…. ತಾಯಿಯ ಹೃದಯದಿಂದ ಮೆಚ್ಚಿಗೆಯ ಮಾತುಗಳೂ ಬಂದವು. ರಂಗ ಹಿರಿಹಿರಿ ಹಿಗ್ಗಿದ.

‘ಅಲ್ಲಮ್ಮ’ ಇದನ್ನ ಅರ್ಥ ಮಾಡ್ಕೊಳ್ದೆ ಈ ಮನೆ ದೊಡ್ಡಮನುಷ್ಯರು ಅವರ ಹೆಂಡ್ತೀರು ಹ್ಯಾಗೆ ಹಂಗಿಸಿದರು ನೋಡ್ದಾ? ರಂಗ ಮುನಿದ.

‘ನಾವು ಈ ಮನೇಲಿ ಕೆಲಸದೋರು. ಕೆಲಸದವರಿಗೇನಿದೆಯಪ್ಪಾ ಮರ್ಯಾದೆ? ಬೇಗ ನೀನು ಓದು ಮುಗಿಸಿ ಒಂದು ನೌಕರಿ ಹಿಡಿಬೇಕು ಆಗ್ಲೆನಪ್ಪಾ ನಾವೂ ನಾಲ್ಕು ಜನರಂತೆ ಮರ್ಯಾದೆಯಿಂದ ಬಾಳೋಕೆ ಸಾಧ್ಯ?’ ಮಗನ ಮೈದಡವುತ್ತಲೇ ಎಚ್ಚರಿಸಿದರವನ ಜವಾಬ್ದಾರಿಯ ಬಗ್ಗೆ ಕಮಲಮ್ಮ.

‘ಆಯ್ತಮ್ಮ ಕಾಲೇಜಿಗೆ ಫಸ್ಟ್ ಎಂಟ್ರಿ ಕೊಡ್ತಿದೀನಿ ನಿನ್ನ ಬ್ಲೆಸಿಂಗ್ಸ್ ಇರ್‍ಲಿ ಮಮ್ಮಿ’ ನಗುತ್ತಾ ತಾಯಿ ಕಾಲಿಗೆರಗಿ, ‘ಬರ್ತಿನಿ ಕಣೆ ಕಾವೇರಿ’ ಎಂದು ಬ್ಯಾಗ್ ಹೆಗಲಿಗೇರಿಸಿ ಮನೆಯಿಂದಾಚೆ ಓಡಿದವನೆ ಕಾರ್‌ಶೆಡ್‍ನಲ್ಲಿದ್ದ ತನ್ನ ಡಕೋಟಾ ಸೈಕಲ್ಲೇರಿ ಬೀದಿಗಿಳಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಏನು ಪಾಡಲಿ
Next post ಪ್ರೇಮ ಪುಷ್ಟ

ಸಣ್ಣ ಕತೆ

  • ನಂಟಿನ ಕೊನೆಯ ಬಲ್ಲವರಾರು?

    ಕುಳಿತವನು ಅಲುಗದಂತೆ ತದೇಕ ಚಿತ್ತದಿಂದ ಕಡಲನ್ನು ನೋಡುತ್ತಿದ್ದ. ಹಾಗೇ ಕುಳಿತು ಅರ್ಧಗಂಟೆ ಕಳೆದಿತ್ತು. ಮೊಲದ ಬಾರಿಗೆ ಕಡಲ ಕಂಡವನ ಚಿತ್ತ ಕಲಕುವುದೇಕೆಂದು ಕುಳಿತಲ್ಲೇ ಅವನನ್ನು ಬಿಟ್ಟು ತಿರುಗಾಡಿ… Read more…

  • ಮೌನರಾಗ

    ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…

  • ಜೋತಿಷ್ಯ

    ತಮಿಳು ಮೂಲ: ಕೊನಷ್ಟೈ "ನೀವು ಏನು ಬೇಕಾದರೂ ಹೇಳಿ, ನನಗೆ ಜ್ಯೋತಿಷ್ಯದಲ್ಲಿ ನಂಬಿಕೆ ತಪ್ಪುವುದಿಲ್ಲ. ಅದರಲ್ಲಿಯೂ ರಾಮಲಿಂಗ ಜೋಯಿಸರಲ್ಲಿ ಪೂರ್ಣ ನಂಬಿಕೆ"ಎಂದಳು ಕಮಲಾ. ಸಮಯ, ಸಂಧ್ಯಾ ಕಾಲ.… Read more…

  • ಬೆಟ್ಟಿ

    ಮೃದುವಾಗಿ ಯಾರೋ ತೋಳು ತಟ್ಟಿದಂತಾಯಿತು. ಪುಸ್ತಕದಿಂದ ತಟ್ಟನೆ ತಲೆ ಎತ್ತಿದಳು ಲಿಂಡಾ. ನೀಲಿಕಣ್ಣುಗಳಲ್ಲಿ ಆಶ್ಚರ್ಯ ಮೂಡಿತ್ತು. "ಮದರ್ ಕರೆಯುತ್ತಿದ್ದಾರೆ..." ಅಷ್ಟೇ ಹೇಳಿ ಮೇರಿ ಸಿಸ್ಟರ್ ಹೊರಟರು. ಅವಳ… Read more…

  • ಧನ್ವಂತರಿ

    ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…

cheap jordans|wholesale air max|wholesale jordans|wholesale jewelry|wholesale jerseys