ಏನ ಪಾಡಲಿ ನಿನ್ನ ಆಮೋದಕಿಂದು
ನೀನಿತ್ತ ಪ್ರೇರಣೆಯು ನಿನ್ನದೀ ಮುರುಳಿ
ಘನ ಪದಕೆ ಪದವಿಟ್ಟು ಧನಿ ಧನಿಯ ಧಾಟಿಯಲಿ
ಘನವರಣ ಹನಿರಸದ ಬಲು ಸಿವುರಿನ
ಎಣಿಸಿಟ್ಟ ಪ್ರಾಸಗಳ ಜೋಡಿಸಿದ ಮೇಣಗಳ
ಕಣಕಣನೆ ದನಿಗೊಡುವ ಗಜ ಗಬ್ಬುಬೇಕೆ

ಕಿರಿ ಪಿರಿಯ ನವನುಡಿಯ ಹೊಳೆ ಹೊನ್ನ ಸರಿಗೆಯಲಿ
ಸರಿದಿಟ್ಟು ತರತರದೈಸಿರಿರಾಗ ವರಸೆಯಲಿ
ಮರಮಠಳಿ ಶೃತಿನೋಡಿ ಹೊಂಗಳಲ ಪ್ರಾಣಗಳ
ಬೆರಳಲ್ಲಿ ನುಡಿಸುತ್ತ ಮನ ಮರೆಸಲೊ

ಹೊಸಪದವ ಹಳೆಪದವ ಹೊಸದಿಟ್ಟು ಹೊಸಪರಿಯ
ಹೊಸಧಾಟಿ ಹೊಸಭಾವ ಪೊಸೆವೊಂದು ಲಾವಣಿಯ
ನಸುನಗುತ ರಸವರಿದು ನೀ ಮೋದ ಪಡುವಂಥ
ಮಿಸುನಿಯಾ ಸ್ಪರ್ಶದಾ ಕೃತಿಯೊಂದು ಬೇಕೋ

ಚಳವಳಿಯ ಭಾವಕಿವೆ ಕಿಡಿ ಇಡುವ ಪದಗಳಿವು
ತಿಳವನ್ಹಿ ಬಿಳಿಜೋತಿಗಿದೆ ಭಕುತ ಮನಧವಿಸು
ಹೊಳೆಯಾಯ್ತು ಗುಪ್ತಾಗ್ನಿ ಉಕ್ಕುತಿದೆ ಜ್ವಾಲೆಯಿದು
ತಿಳಿಹು ಮನದಿಷ್ಟಾರ್ಥ ಪಾಡಲೇನ

ಗುಡ್ಡ ಕಾಡಿನ ರೂಪು ಅಡ್ಡವಿಸಿ ವರಣಿಸಲೊ
ಗುಡ್ಡದಿಂ ಧಡಧಡನೆ ಹಾರ್ವುದರ ಶೃತಿಗೆ?
ಹೆಡ್ಡರೆಲ್ಲರು ಕೂಡಿ ಧೂಳ ರೌರವದಲ್ಲಿ
ಅಡ್ಡಾಡಿ ಮೈಮರವ ಪರಿಯ ಬಣ್ಣಿಸಲೊ?

ನಗರಗಳು ಬೆಳೆದಳಿದು ಹನುಮ ಭೀಮರು ಎದ್ದು
ಜಗವ ತಲ್ಲಣಗೊಳಿಸೆ! ಕಂತಿ ಪಂಪರ ಕವಿತೆ!
ಚಿಗಿದು ಮೊಳಗಲು! ಇಳೆಯು ನಲಿದೊಲಿಯು ತಿರುವಾಗ!
ಜಗದಲ್ಲಿ ಬೆಳದಿಳಿದ ಕಥೆಗಳವು ಬೇಕೆ?

ಆದಿ ಕವಿಯಿಂದೀಚೆ ಪದಶಿಲ್ಪಿಗಳನೆಲ್ಲ
ಸೋದರರ! ಕೊಳಲ ಭಾಂಧವರನ್ನು ಮಾಯೆಯಲಿ
ಓದದರ ಮುಂದೆತ್ತಿ ಸುಳಿದಾಡಿಸುತಲಿನ್ನು
ಹೋದ ವೈಭವವನ್ನು ಕಾಣಿಸಲೊ ಕನಸಲ್ಲಿ?

ಇದ್ದಾಗ ಕರೆ ಎನದೆ ಕೂಡೆನದೆ ಕೊಳ್ಳೆನದೆ
ಹೊಯ್ದೆಸೆದ ಕಲ್ಲಲ್ಲಿ ಹೂತಿಟ್ಟ ಭಕ್ತನನು
ಮುದ್ದಿಟ್ಟು! ಕಡೆಕಡೆಗೆ ಪಾಡುವರು ರಗಳೆಗಳ!
ಸುಯ್ದೆದ್ದು ಮನವದನು ಕೇಳುತಿದೆ ಕೇಳೈ!

ಗೆಳೆಯರಾಗುಂಪಿನದು ಮಧುಯುಗದ! ಮುಧುಗಾನ
ಮೋಳಗುತಿದೆ ಮಹಿಷೂರ ಹೊಂಗಳಲ! ಸವಿಗಾನ
ಬಲು ರವದ ಹೆದ್ದುಂಬೆ! ಹೊಯ್ಸಳನ ಹೆಗ್ಗಾನ
ನಿಲದಿನ್ನು ಪೇಳೈ ಪಾಲಿಸಪ್ಪಣೆಯ
*****