ದೇವಿ ನಿನ್ನ ಬೇಡುವೆ
ಕಾಯೊ ದೂರ ಮಾಡದೆ,
ಶಕ್ತಿ ನೀಡು ಬಾಳುವಂತೆ ಸತ್ಯ ಧರ್ಮ ಮೀರದೆ.

ಸೂರ್ಯನಾಗಿ ಮೇಲೆ ಚಲಿಸಿ
ಕತ್ತಲನ್ನು ಹರಿಸುವೆ,
ಮೋಡವಾಗಿ ನೀರು ಸುರಿಸಿ
ಲೋಕಕನ್ನ ಉಣಿಸುವೆ,
ಪ್ರಾಣವಾಯುವಾಗಿ ಸುಳಿದು
ಕಾಣದಂತೆ ಕಾಯುವೆ,
ತಂದೆ ನಿನ್ನ ಕರುಣೆಯ ಹೇಗೆ ತಾನೆ ಮರೆಯುವೆ?

ಹರಿಸಿನಲ್ಲು ಹೂವಿನಲ್ಲು
ನಿನ್ನ ಹೆಜ್ಜೆಗುರುತಿದೆ,
ಕೋಟಿ ಹಕ್ಕಿ ಕಂಠದಲ್ಲಿ
ನಿನ್ನ ಸ್ತೋತ್ರ ಚಿಮ್ಮಿದೆ.
ಎಲೆ ಎಲೆಯೂ ನಿನ್ನ ಚಿತ್ರ-
ಕಲೆಯ ಘನತೆ ಸಾರಿದೆ,
ಎಲ್ಲೆಲ್ಲೂ ನೀನೆ ತಂದೆ ನಿನ್ನದಲ್ಲದೇನಿದೆ?

ಈ ಲೋಕ ನೀನು ಇರುವ
ಸುಂದರ ದೇವಾಲಯ,
ಒಳಗೆ ಕೂತು ಮಿಡಿವೆಯಂತೆ
ಇದರ ಎಲ್ಲ ನಾಡಿಯ.
ಇದರ ಸೇವೆ ನಿನ್ನ ಪೂಜೆ
ಎಂಬ ಋಷೀವಾಣಿಯ,
ನಂಬಿದೆವು ಹರಸು ನಮ್ಮ, ನಾವು ಕಲಿವ ಶಾಲೆಯ.
*****

ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್
Latest posts by ಲಕ್ಷ್ಮೀನಾರಾಯಣ ಭಟ್ಟ ಎನ್ ಎಸ್ (see all)