ಕೂಡದ ಕಾಲಕೆ……..

ಕೂಡದ ಕಾಲಕೆ……..

ಚಿತ್ರ: ಅಪೂರ್ವ ಅಪರಿಮಿತ
ಚಿತ್ರ: ಅಪೂರ್ವ ಅಪರಿಮಿತ

ಅವಳು ಹಾಗೆ ಕೂತು ಎಷ್ಟು ಹೊತ್ತಾಗಿತ್ತೋ? “ನೀನು ತೋಟಕ್ಕೆ ಹೋಗಿ ಹುಲ್ಲು ತಂದು ಹಸುಗಳಿಗೆ ಹಾಕು. ಹಾಗೆ ಕುಕ್ಕೆ ತೆಗೆದುಕೋ. ಅಡಿಕೆ ಸಿಕ್ಕಿದ್ದನ್ನು ಅದರಲ್ಲಿ ಹಾಕಿಕೊಂಡು ಬಾ. ನನಗೆ ತುಂಬಾ ಕೆಲಸವುಂಟು.”

ಅಪ್ಪ ಹಾಗೆ ಹೇಳುತ್ತಿರುವುದು ಅದು ಎಷ್ಟನೆಯ ಬಾರಿಯೋ? ತೋಟಕ್ಕೆ ಹೋಗಲು ತನಗೂ ಇಷ್ಟವೇ. ಎಳೆಯವಳಿದ್ದಾಗ ತೆಂಗಿನ ಮರ ಹತ್ತಲು ಯತ್ನಿಸಿ ಬಿದ್ದದ್ದು ಎಷ್ಟು ಸಲವೋ? ಹಲಸಿನ ಮರದ ಕೊಂಬೆಗೆ ಹಗ್ಗ ಕಟ್ಟಿ ಜೋಕಾಲಿಯಾಡಿದ್ದು ಲೆಕ್ಕ ವಿಟ್ಟವರಾರು? ಅಕ್ಕ, ತಂಗಿಯರೊಂದಿಗೆ ತೋಟಸುತ್ತಿ, ಅಡಿಕೆ ಹೆಕ್ಕಿ, ಸೋಗೆ ರಾಶಿ ಹಾಕುವುದು ಒಂದು ಸಂಭ್ರಮ. ಮಳೆಗಾಲದಲ್ಲಿ ಸೋಗೆಗಳನ್ನು ಅಂಗಳಕ್ಕೆ ತಂದು ಜಾರದಂತೆ ಹರಡುವುದು, ಸೋಗೆ ತುಂಡು ಮಾಡಿ ಹಟ್ಟಿಗೆ ಹಾಕುವುದು, ದನಗಳಿಗೆ ಹುಲ್ಲು ಹಾಕುವುದು ಎಲ್ಲವೂ ಖುಷಿಯ ವಿಷಯಗಳೇ. ಇವೆಲ್ಲದರ ನಡುವೆ ಓದಲು, ಬರೆಯಲು ಬಿಡುವೇ ಸಿಗುತ್ತಿರಲಿಲ್ಲ.

ಕಾಲೇಜಿಗೆ ಸೇರಿದ ಮೇಲೆ ಜೀವನದ ಬಗ್ಗೆ ಭಿನ್ನವಾಗಿ ಯೋಚಿಸಲು ಸಾಧ್ಯವಾದದ್ದು ಶ್ಯಾಮಮೇಸ್ಟ್ರಿಂದಾಗಿ, ಶ್ಯಾಮ ಮೇಷ್ಟ್ರೆಂದರೆ ಎಲ್ಲರಿಗೂ ಇಷ್ಟ. ಅವರಿದ್ದಲ್ಲಿ ಹೊಸ ಆಲೋಚನೆ, ಚಿಂತನೆ, ಉತ್ಸಾಹ, ಉಲ್ಲಾಸ ಮತ್ತು ಉತ್ತೇಜನ ಸಿಗುತ್ತಿತ್ತು ಅವರ ಕತೆಗಳನ್ನು ಓದಿದ ಮೇಲೆ ಅವಳಿಗೂ ತಾನು ಬರೆಯಬೇಕೆಂಬ ಹಂಬಲ ಮೂಡಿದ್ದು. ಆದರೆ ತಿದ್ದಿಸುವುದು ಯಾರಿಂದ? ಮೇಷ್ಟ್ರು ತುಂಬ ದೊಡ್ಡವರು. ಅವರಲ್ಲಿ ಇವನ್ನು ತೋರಿಸುವುದು ಹೇಗೆ?

“ಪ್ರತಿಯೊಬ್ಬರಲ್ಲೂ ಒಂದು ವಿಶಿಷ್ಟವಾದ ಶಕ್ತಿ ಇರುತ್ತದೆ. ಅದೇನೆಂದು ಕಂಡು ಹಿಡಿದು ಬೆಳೆಸಲು ಸಾಧ್ಯವಾಗಬೇಕು. ನಮ್ಮ ಭಾವನೆಗಳನ್ನು ಮುಕ್ತವಾಗಿ ಒಬ್ಬರಲ್ಲಾದರೂ ಹಂಚಿಕೊಳ್ಳಬೇಕು. ಅದೂ ಆಗದಿದ್ದರೆ ಕತೆಯೋ, ಕವನವೋ ಬರೆದು ಬಿಡಬೇಕು. ಮನಸ್ಸನ್ನು ತೆರೆದಿಡದಿದ್ದರೆ ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ.

ಶ್ಯಾಮ ಮೇಷ್ಟ್ರು ಹೇಳಿದ್ದು ಅವಳಿಗರ್ಥವಾಗಿತ್ತು. ಅವಳು ತೊಳಲಿದ್ದಳು. ಎಲ್ಲವನ್ನೂ ಹೇಳಿಕೊಳ್ಳುವುದು ಯಾರಿಂದ ಸಾಧ್ಯ? ಎಷ್ಟು ಭಾವಗಳು ಮನಸ್ಸನ್ನು ಕಾಡುವುದಿಲ್ಲ. ಅವಗಳು ಹೆಚ್ಚಾಗಿ ಸಂಚಾರಿ ಭಾವಗಳು. ಸ್ಥಿರವಲ್ಲದ ಭಾವಗಳನ್ನು ಹೇಳಿಕೊಂಡು ಏನು ಸುಖ?

ಒಂದು ದಿನ ಶ್ಯಾಮ ಮೇಷ್ಟ್ರು ಪಾಠದ ಮಧ್ಯದಲ್ಲಿ ’ಕಾವ್ಯ ಬಾ ಇಲ್ಲಿ’ ಎಂದು ಕರೆದರು. ಅವಳು ಏನನ್ನೋ ಯೋಚಿಸುತ್ತಿದ್ದವಳು ತಬ್ಬಿಬ್ಬಾಗಿ ಎದ್ದು ನಿಂತಳು. ಇದ್ದಕ್ಕಿದ್ದಂತೆ ಯಾರೋ ಒಬ್ಬಾತನನ್ನು ವೇದಿಕೆಗೆ ಕರೆದು ಟಾಪಿಕ್ಕು ಕೊಟ್ಟು ಪಾಠ ಮಾಡುವಂತೆ ಹೇಳುವುದು ಅವರದೊಂದು ಅಭ್ಯಾಸ. ಇಂದು ತಾನು ಬಲಿಪಶುವಾದೆನೇ ಎಂದು ನಡುಗುತ್ತಾ ಅವರ ಬಳಿಗೆ ಹೋದರೆ ಅವರೊಂದು ಪತ್ರಿಕೆ ತೆಗೆದು ಪುಟ ತಿರುವಿ ಕೊಟ್ಟರು. ’ಈಗ ಕಾವ್ಯ ಕತೆ ಓದುತ್ತಾಳೆ.”

ಅವಳು ಕಣ್ಣರಳಿಸಿ ನೋಡಿದಳು. “ಮೊದಲ ಗೆಲುವು” ಕತೆಯ ಶೀರ್ಷಿಕೆ ನೋಡಿದಾಗ ಅವಳ ಹೃದಯ ಸ್ತಬ್ಧವಾದಂತಾಯಿತು. ಅವಳೇ ಬರೆದ ಕತೆ! ಮೊತ್ತಮೊದಲ ಬಾರಿಗೆ ತನ್ನ ಹೆಸರು ಪತ್ರಿಕೆಯೊಂದರಲ್ಲಿ ಅಚ್ಚಾಗಿದೆ! ಅವಳ ಹಣೆಯಲ್ಲಿ ಬೆವರು ಕಾಣಿಸಿಕೊಂಡಿತು. ಮೂಗಿನಿಂದ ಕೆಳಗೆ ತುಟಿಯಿಂದ ಮೇಲೆ ಮುತ್ತಿನಂತೆ ನಿಂತ ಬೆವರ ಹನಿಗಳನ್ನು ನೋಡಿ “ಕಾವ್ಯಳಿಗೆ ಮೀಸೆ ಬಂತು” ಎಂದು ಶ್ಯಾಮ ಮೇಷ್ಟ್ರು ಹೇಳಿದಾಗ ಕ್ಲಾಸಲ್ಲಿ ನಗುವೋ ನಗು. ಅವಳ ಇದ್ದ ಧೈರ್ಯವೂ ಹೋಗಿ ಕೈ ನಡುಗುತ್ತಿದ್ದುದನ್ನು ಕಂಡು “ಹೋಗಿಬಿಡು ಪುಣ್ಯಾತ್ಗಿತ್ತಿ. ಇನ್ನು ಇಲ್ಲಿ ನೀನು ಬಿದ್ದುಬಿಟ್ಟರೆ ಅದೊಂದು ಫಜೀತಿ” ಎಂದಾಗ ಬಡಜೀವ ಬದುಕಿತೆಂದು ಅವಳು ಹೇಗೋ ವಾಪಾಸಾಗಿದ್ದಳು.

ಶ್ಯಾಮ ಮೇಷ್ಟ್ರು ಅಂದು ಹೇಳಿದ್ದು ಕತೆಗಳ ಬಗ್ಗೆಯೇ. ಕನ್ನಡದ, ಹಿಂದಿಯ, ವಿಶ್ವದ ಕತೆಗಾರರ ಬಗ್ಗೆ. “ಬರೆಯುವವರು ನನಗಿಷ್ಟವಾಗುತ್ತಾರೆ. ಅದೊಂದು ಒಳ್ಳೆಯ ಹವ್ಯಾಸ. ಬರೆಯುವವರಿಗೆ ಬೇಕಿದ್ದರೆ ನಾನು ಸಹಾಯ ಮಾಡಬಲ್ಲೆ. ಕಾವ್ಯ ಬರೆದದ್ದು ಅವಳ ಹರೆಯಕ್ಕೆ ಸಹಜವಾದದ್ದು. ಇದು ಮೊದಲ ಘಟ್ಟ. ಅನುಭವ ದೊರೆತಂತೆ, ಬೆಳೆಯಲು ಸಾಧ್ಯವಾಗುತ್ತದೆ. “ತನ್ನ ಬಾಲಿಶ ಕತೆಯನ್ನು ಉತ್ತೇಜಿಸುವ ಆ ಮಾತು ಅವಳನ್ನು ಇಡೀ ಕಾಡಿದವು. ಅನುಭವಗಳೆಷ್ಟಿಲ್ಲ? ತನ್ನ ಕುಟುಂಬ, ತನ್ನ ಜೀವನದಲ್ಲಾದ ಘಟನೆಗಳು. ಆದರೆ ಅನುಭವಕ್ಕೆ ಬಂದುದೆಲ್ಲವನ್ನು ಬರೆಯಲು ಸಾಧ್ಯವಾ? ಬರೆದರೆ ಅದನ್ನು ದಕ್ಕಿಸಿಕೊಳ್ಳಲು ಸಾಧ್ಯವಾ?

ಎರಡು ವರ್ಷ ಕಣ್ಣು ತಪ್ಪಿಸಿ ಓಡಾಡುತ್ತಿದ್ದವಳನ್ನು ಕೊನೆಯ ವರ್ಷದ ಕೊನೆಯ ದಿನಗಳಲ್ಲೊಂದರಲ್ಲಿನಿಲ್ಲಿಸಿ ಕೇಳಿದ್ದರು. “ನಿನ್ನದು ಪಲಾಯನ ಸ್ವಾಭಾವ. ಯಾಕೆ ಕೀಳರಿಮೆಯಿಂದ ನರಳುತ್ತಿ? ಬರೆದುದಷ್ಟನ್ನು ತೋರಿಸು. ಚೆನ್ನಾಗಿದ್ದರೆ ಒಂದು ಸಂಕಲನ ತಂದು ಬಿಡಬಹುದು.”

ಅವಳಿಗಂದು ಸರಿಯಾಗಿ ನಿದ್ದೆ ಮಾಡಲಾಗಲಿಲ್ಲ. ತನ್ನದೊಂದು ಸಂಕಲನ! ಅವಳದನ್ನು ಕನಸಲ್ಲೂ ಯೋಚಿಸಿರಲಿಲ್ಲ. ವಸ್ತುಗಳೇನೋ ಇದ್ದವು. ಬರೆಯ ಹೊರಟರೆ ಒಂದೇ ಪುಟಕ್ಕೆ ಕಲಾಸ್. ಕೆಲವೊಮ್ಮೆ ಅಂತ್ಯವೇ ಹೊಳೆಯೋದಿಲ್ಲ. ಅವನ್ನೆಲ್ಲಾ ಹಿಡಿದುಕೊಂಡು ಬಂದು ಅವರಿಗೆ ತೋರಿಸಲು ಮನಸ್ಸಾಗಲಿಲ್ಲ.

ಅಂದು ಯಾವುದೋ ಸ್ಟ್ರೈಕು. ಹೆಚ್ಚಿನವರು ಬೇಗನೆ ಮನೆ ಸೇರಿದ್ದರು. ತಾನು ಗೆಳತಿ ಜತೆ ಕ್ಲಾಸಲ್ಲೇ ಕೂತು ಏನೋ ಬರೆಯುತ್ತಿದ್ದಾಗ ಯಾರೋ ಬಂದ ಸದ್ದು. ತಲೆಯೆತ್ತಿದರೆ ಶ್ಯಾಮ ಮೇಸ್ಟ್ರು! “ನಿನಗಿದು ಕೊನೇ ಛಾನ್ಸು. ಈಗ ಒಂದು ಸಂಕಲನ ಬಂದರೆ ನಿನ್ನ ಫ಼್ರೆಂಡ್ಸುಗಳಾದ್ರೂ ತಗೋತಾರೆ. ಕಾಲೇಜು ಬಿಟ್ಟ ಮೇಲೆ ಯಾರೂ ಬಳಿಗೆ ಸುಳಿಯೋದಿಲ್ಲ. ಎಲ್ಲಿ ತೋರಿಸು ನಿನ್ನ ಕತೆಗಳನ್ನು.

ಅವರ ಎದುರಲ್ಲೇ ಕೂತು ಅಷ್ಟು ಕತೆಗಳ ಮೇಲೆ ಚಕಚಕ ಕಣ್ಣಾಡಿಸಿದ ಮೇಷ್ಟ್ರ ಮುಖದಲ್ಲಿ ನಗು. “ಹ್ಞೂಂ, ಎಲ್ಲಾ ಕಲ್ಪನಾ ವಿಹಾರ. ಸ್ವಲ್ಪ ವಾಸ್ತವತೆ ಇರಲಿ. ನಿನ್ನ ಅನುಭವಗಳನ್ನು ಬರದರೆ ಚೆನ್ನ.”

ಅವಳ ಮುಖ ಸಣ್ಣದಾದುದನ್ನು ನೋಡಿ ತಕ್ಷಣ ಮೇಸ್ಟ್ರು ರಾಗ ಬದಲಾಯಿಸಿ ಬಿಟ್ಟರು.
“ಖುಷಿಯಾಯಿತು ನನಗೆ. ಇಷ್ಟಾದರೂ ಬರೆಯುವವರು ಯಾರಿದ್ದಾರೆ? ಈ ಕತೆ ಇದೆಯಲ್ಲಾ? ಇಲ್ಲಿ ಚೆನ್ನಾಗಿದೆ. ಇಲ್ಲಿ ತಿದ್ದಬೇಕು. ಇದು ಸಹಜವಾಗಿದೆ. ಇರಲಿ. ಇದು ಅಸಹಜ, ಬಿಟ್ಟುಬಿಡು.”

ಹಾಗೆ ಹೇಳಿದ ಮೇಸ್ಟ್ರು ಮೂರು ದಿನಗಳಲ್ಲಿ ಅವಳ ಒಂದೆರಡು ಕತೆಗೆ ರಕ್ತಮಾಂಸ ತುಂಬಿದರು, ವಾಸ್ತವದ ಹಿನ್ನೆಲೆಗೆ ಕಲ್ಪನೆಯ ಮೆರುಗು ನೀಡಿ ಹೊಸಹುಟ್ಟು ನೀಡದರು. ಅವಳ ಕಥಾಸಂಕಲನ “ನೀಲನದಿ” ಹೊರಬಂತು. ಅವಳಿಗೆ ಒಂದಷ್ಟು ಹೆಸರೂ ಬಂತು.

ಡಿಗ್ರಿಯಲ್ಲಿ ಅವಳಿಗೆ ಫಸ್ಟ್ ಕ್ಲಾಸ್ ಬಂತು. ಆದರೆ ಮುಂದೆ ಹೋಗಲು ಅಪ್ಪ-ಅಮ್ಮ ಬಿಡಲೇ ಇಲ್ಲ. ಮೇಷ್ಟ್ರಿಗೆ ಫೋನ್ ಮಾಡಿ ತಿಳಿಸಿದ್ದಕ್ಕೆ “ಎಂ.ಎ. ಗೆ ಕಟ್ಟು. ಪುಸ್ತಕ ಕೊಡ್ತೀನಿ. ಗೊತ್ತಾಗದ್ದು ಹೇಳ್ಕೊಡ್ತೀನಿ. ಒಳ್ಳೆ ರಿಸಲ್ಟು ಬಂದರೆ ಕೆಲ್ಸಾನೂ ಗ್ಯಾರಂಟಿ. ” ಎಂದ್ರು. ಒಂದೇ ಮಾತಲ್ಲಿ ಮೇಸ್ಟ್ರು ಅವಳಲ್ಲಿ ಹೊಸ ಉತ್ಸಾಹ ಉಕ್ಕಿಸಿದ್ದರು. ಮೊದಲವರ್ಷ ಪ್ರಥಮ ದರ್ಜೆ ಮಾರ್ಕ್ಸ್ ಬಂತು. ಈ ಮಧ್ಯೆ ಕಛೇರಿಯೊಂದರಲ್ಲಿ ಕೆಲಸ ಸಿಕ್ಕಿತು. ತಿಂಗಳಿಗೆ ಸಾವಿರದೈನೂರು. ಮನೆಯೆಂಬ ಪ್ರಪಂಚದಿಂದ ಹೊರಬಂದು ಸಹದ್ಯೋಗಿಗಳೊಂದಿಗೆ ಸಂತೋಷದಿಂದ ಕಾಲ ಕಳೆಯುವಂತಾಯ್ತು. ಅವಳ ಕತೆಗಿಂತಲೂ ಅವಳನ್ನು ಮೆಚ್ಚಿ ಕತೆಗಳನ್ನು ಹೊಗಳುವವರ ಮಧ್ಯೆ ಅವಳಾ ಮೈಮರೆಯತೊಡಗಿದಳು.

ಮೇಸ್ಟ್ರು ಆಗಾಗ ಹೇಳುತ್ತಿದ್ದರು. “ನಾಲ್ಕು ತಿಂಗಳು ರಜಾ ಹಾಕು. ಎಪ್ಪತ್ತು ಪರ್ಸೆಂಟು ತೆಗಿ. ಎಂ.ಫಿಲ್. ಮಾಡು. ಹಾಗೆ ಮುಂದೊಂದು ದಿನ ನೀನು ಡಾ. ಕಾವ್ಯ ಎಂದು ಹಾಕಿಕೊಳ್ಳುವಂತಾಗಬೇಕು. ಸಣ್ಣಪುಟ್ಟ ಹೊಗಳಿಗೆಗೆ ಮೈಮರೆಯದೆ ಮಹತ್ತ್ವಾಕಾಂಕ್ಷೆ ಯಿಂದ ಓದು.”

ಮೇಸ್ಟ್ರಿಗೆ ಹೊಟ್ಟಿಕಿಚ್ಚು ಬಂತೇ? ತನಗೆ ಕೆಲಸ ಸಿಕ್ಕಿದ್ದು‌ಇವರಿಗೆ ಇಷ್ಟವಿಲ್ಲವೇ?ಇಷ್ಟಕ್ಕೂ ಎಂ.ಎ. ಏನು ಮಹಾ? ಕಳೆದ ವರ್ಷ ಓದಿ, ಫಸ್ಟ್ ಕ್ಲಾಸ್ ಬಂದಿದ್ದೇನೆ. ಈ ವರ್ಷವೂ ಬರುತ್ತೆ. ಏನೋ ಮಾಡಿದ ಪುಟ್ಟ ಸಹಾಯ ಮಾಡಿದ್ದಕ್ಕೆ  ನಾನೇನು ಇವರಂದಂತೆ ಕೇಳಬೇಕಾ? ಕಛೇರಿಗೆ ಸೇರಿದಮೇಲೆ ತಾನೆಷ್ಟು ಸಂತೋಷವಾಗಿದ್ದೇನೆ ಎಂದು ಇವರಿಗೇನು ಗೊತ್ತು? ತನ್ನ ಮೊಬೈಲಿಗೆ ಪುರುಸತ್ತೇ ಇಲ್ಲ. ಆಗಾಗ ಅಫೀಸಿನವರೊಂದಿಗೆ ಪ್ರವಾಸ ಹೋಗುವ ಅವಕಾಶ ಬೇರೆ. ಅವಳು ಮೇಸ್ಟ್ರನ್ನು ದೂರವೇ ಇಟ್ಟಳು.

ಇದಾಗಿ ಹತ್ತು ವರ್ಷಗಳಾಗಿವೆ. ಈಗಲೂ ಅವಳು ಅದೇ ಕಛೇರಿಯಲ್ಲಿದ್ದಾಳೆ. ಈಗ ಎರಡು ಸಾವಿರದ್ಯೈನೂರು ಸಿಗುತ್ತೆದೆ. ಕೈಹಿಡಿದವ ಊರಲ್ಲೊಂದು ಅಂಗಡಿ ಇಟ್ಟಿದ್ದಾನೆ.ಅವನಿಗೆ ಇಲ್ಲದ ಕಲ್ಯಾಣಗುಣಗಳೇ ಇರಲಿಲ್ಲ! ಅವಳ ನಾಲ್ಕು ಹೆಣ್ಣು ಮಕ್ಕಳನ್ನು ನೋಡಿ ಗಂಡ ಹೆದರಿಸುತ್ತಾನೆ.”ಇನ್ನೊಂದು ಮದುವೆಯಾಗಿ ಗಂಡು ಮಗುವನ್ನು ಪಡೆಯುತ್ತೇನೆ.”

ಅವಳು ಮನಸ್ಸಲ್ಲೇ ಅಂದುಕೊಳ್ಳುತ್ತಾಳೆ. “ಮಕ್ಕಳು ಹೆಣ್ಣೋ ಗಂಡೋ ಆಗಲು ತಂದೆಯೇ ಕಾರಣ.” ಗಟ್ಟಿ ಹೇಳಿದರೆ ತುಳಿತ ಗ್ಯಾರಂಟಿಯೆಂದು ಮೌನ ತಾಳುತ್ತಾಳೆ. ತನಗೆಲ್ಲಿದೆ ಅಷ್ಟು ಸ್ವಾತಂತ್ರ್ಯ? ಮೇಸ್ಟ್ರು ಹೇಳಿದ ಮಾತು ನೆನಪಾಗುತ್ತಿದೆ. ತಾನಂದು ಅವರು ಹೇಳಿದಂತೆ ಕೇಳುತ್ತಿದ್ದರೆ!!………..
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ತ್ರಿಪದಿಗಳು
Next post ಕತ್ತಲೆ ಕಂಡರಾಗದ ಸೂರ್ಯ

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ನಂಬಿಕೆ

    ಮಧ್ಯರಾತ್ರಿ ನಿದ್ದೆಯಿಂದ ಎಚ್ಚೆತ್ತ ಕಾದ್ರಿ ಒಮ್ಮೆ ಎಡಕ್ಕೆ ಮತ್ತೊಮ್ಮೆ ಬಲಕ್ಕೆ ಹೊರಳಾಡಿದ. ಹೂ... ಹೂ.... ನಿದ್ರೆ ಬರಲಾರದು. ಎದ್ದು ಕುಳಿತು ಪಕ್ಕದ ಚಾಪೆಯತ್ತ ಕಣ್ಣಾಡಿಸಿದ ಪಾತು ಅವನ… Read more…

  • ಹುಟ್ಟು

    ಶಾದಿ ಮಹಲ್‌ನ ಒಳ ಆವರಣದಲ್ಲಿ ದೊಡ್ಡ ಹಾಲ್‌ನಲ್ಲಿ ಹೆಂಗಸರೆಲ್ಲಾ ಸೇರಿದ್ದರು. ಹೊರಗಡೆ ಹಾಕಿದ್ದ ಶಾಮಿಯಾನದಲ್ಲಿ ಗಂಡಸರು ನೆರೆದಿದ್ದರು. ಒಂದು ಕಡೆಯ ಎತ್ತರವಾದ ವೇದಿಕೆಯ ಮೇಲೆ ಮದುವೆ ಗಂಡು,… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

cheap jordans|wholesale air max|wholesale jordans|wholesale jewelry|wholesale jerseys