ಗೋಡ್ರ ಮಿಡ್‌ನೈಟ್ ಪ್ರೋಗ್ರಾಮು, ಸಡನ್ ಭಕ್ತ ಕನಕನಾದ ಸಿದ್ರಾಮು!

ಚಾಮುಂಡೇಶ್ವರಿ ಕ್ಷೇತ್ರದ ಯಲಕ್ಷನ್ ಡಿಕ್ಲೇರ್ ಆದ ದಿನದಿಂದ್ಲೆ ದ್ಯಾವೇಗೋಡ್ರು ಸಿದ್ರಾಮು ಮ್ಯಾಗೆ ವಾರ್ ಡಿಕ್ಲೇರ್ ಮಾಡವರೆ. ಸಿದ್ರಾಮು ಸೋಲೇ ತನ್ನ ಲೈಫ್‌ನ ವೆರಿಬಿಗ್ ಅಂಡ್ ಲಾಸ್ಟ್ ಅಚೀವ್‌ಮೆಂಟು. ಆಮ್ಯಾಲೆ ವಾನಪ್ರಸ್ಥಕ್ಕೆ ರೆಡಿ ಅಂತ್ಲೂ ಡೈಲಾಗ್ ಹೊಡೆದಾರ್ರಿ! ಅದಕ್ಕೆಂತ್ಲೆ ಕಳೆದ ಮಟ್ಟ ಮಂಗಳವಾರ  ಸರಿರಾತ್ರಿನಾಗೆ ಅಂಬರೀಸ್ನ ಖಾಸಾ ಸಿಸ್ಯ ಮೈಸೂರ್ನಾಗಿರೋ ಸಂದೇಸು ನಾಗರಾಜನ ಮನೆಯಾಗ ಇಟ್ಕಂಡು ಅವನ ಹೆಗಲಮ್ಯಾಗೆ ಕೈ ಹಾಕಿ, ನೋಡಯ್ಯಾ ಅಂಬಿನ ನಂಬ್ಕೊಂಡ್ರೆ ಚೆಂಬೇ ಗತಿ. ಅಂಬಿ ಈಗ ಡ್ರಮ್‌ನಂಗಾಗವ್ನೆ ಸಿಲಿಮಾಕ್ಕೂ ನಾಲಾಯ್ಕಕು. ಸೆಂಟ್ರಲ್‌ನಾಗಿರೋನು ಸ್ಟೇಟ್ ರಾಜಕೀಯದಾಗೆ ಯಾವತ್ತೂ ವೀಕೆ. ಆತನಿಂದ ಉಪೇಗಿಲ್ಲ. ನಮ್ತಾವ್ಕೆ ಬಾ. ಟುಡೆ ಆರ್ ಟುಮಾರೋ ಮಿನೀಟ್ರು ಆದಿ ಅಂತ ಸಂದೇಸ ನೀಡಿ ಬುಟ್ಟಿಗೆ ಹಾಕ್ಕೊಂಡೇ ಬಿಟ್ಟರು.

ಅಲ್ಲಿಂದ ನೆಟ್ಟಗೆ ಐಬಿಗೋಗಿ ಕಾಂಗ್ರೆಸ್ ಲೀಡರ್ ಬಸವೇಗೋಡ್ನ ಬರ ಹೇಳಿದರು. ಉಳಿದಿರೋ ಮಂಡಳಿಗೋ ಬೋರ್ಡಿಗೋ ಅಧ್ಯಕ್ಷನ್ನ ಮಾಡ್ತೀನಿ ಅಂತ ಹ್ಯಾಂಡ್ಲು ಹೊಡ್ದು ಫೋಟೋಗೆ ಪೋಜ್ ಕೊಟ್ಟರು. ಕಾಂಗ್ರೆಸ್ನ ಪುಡಿ ಪುಕ್ಕಗಳ ಮನೆಗೂ ನುಗ್ಗಿ ದೋಸ್ತಿ ಮಾಡ್ಕೊಂಡರು. ಮಧ್ಯರಾತ್ರಿನೇ ನಂಜನಗೂಡಿಗೆ ನಂಜುಕಾರುತ್ತ ಹೊಂಟ ಗೌಡಪ್ಪಂದು ಕಾರಲ್ಲೇ ನಿದ್ದೆ. ಬೆಳಗಿನ ಜಾವದ ಫಸ್ಟ್ ಪೂಜೆ ಅಂಡ್ ಪ್ರೇಯರ್ ಆವಯ್ಯಂದೆ. ಒಂದು ಗಂಟೆ ಕಣ್ಣು ಮುಚ್ಚಿ ಧ್ಯಾನಮಾಡೋರಂಗೆ ಕುತ್ಕಂಡು ಅಳಿದುಳಿದ ನಿದ್ದೆ ಪೂರೈಸಿ ಏರಿದ್ದು ಚಾಮುಂಡಿ ಹಿಲ್ಸ್‌ಗೆ.

ಅಲ್ಲಿ ಅಮ್ಮನವರಿಗೆ ಪೆಶಲ್ ಪೂಜೆ. ಬುಧವಾರ ಬೆಳಿಗ್ಗೆ ೫ ಗಂಟೆಗೆ ಬೆಟ್ಟ ಇಳಿದ ಗೋಡ್ರು, ಯರಗನಹಳ್ಳಿ ಸಾರ್ವಜನಿಕ ಸಭೆನಾಗ ಪ್ರತ್ಯಕ್ಷ. ಸಿದ್ರಾಮುಗೆ ಸಹಸ್ರಾರ್ಚನೆ. ಇಲಿವಾಲದಾಗೆ ಇಳ್ದು ಛತ್ರದ ಓಪನಿಂಗ್ ಸೆರಮನಿ. ಹುಣಸೂರಿಗೆ ಹಾರಿ ತಂಬಾಕು ರೈತರ ಜೊತೆ ತಾಂಬೂಲ ಅಗಿದದ್ದು ಓಟಿಗಾಗಿ ಅಲ್ವೆ. ಪಿರಿಯಾಪಟ್ಟಣದಾಗೆ ಬಲಗಾಲಿಕ್ಕಿ ಇಧಾನ ಪರಿಷತ್ ಮೆಂಬರ್ಸ್‌ಗೆ ಶಾಲು ಹೊದ್ದಿಸಿ ಸನ್ಮಾನ. ತದನಂತರ ರಿಟರಂಡು-ಟು-ಮೈಸೂರು. ಅಲ್ಲಿ ವೀರಪ್ಪನ ದೋಸ್ತಿ ಕಾಂಗೈ ವಕೀಲ ಸುಬ್ಬುಕಿಸ್ಣನ ಮನೆಗೆ ನುಗ್ಗಿ ತಾಬಾ ಮಾಡಿ, ಸುಣ್ಣದ ಕೇರಿಗೆ ಹಾರಿ ಉದ್ಘಾಟನೆ ಮಾಡಿ, ಸಂಜೆ ಹೊತ್ತಿಗೆ ಜಟ್ಟಿಗಳ ಜೊತೆ ಕುಸ್ತಿ ಬಿದ್ದು. ಒಳಮೀಸಲಾತಿ ಪಟ್ಟು ಹಾಕಿದುರ್ರಿ.

ಅಲ್ಲಿಂದ ಸೀದಾ ಬ್ರಾಂಬ್ರ ಮಹಾಸಭೇಗೆ ನುಗ್ಗಿ ಕಣ್ಣೀರು ಹಾಕಿ ಕಣ್ಣೀರಿಂದ್ಲೆ ಅವರ ಫೂಟ್‌ವಾಶ್ ಮಾಡಿದ ಗೋಡ್ರು, ಹನ್ನೊಂದು ಗಂಟೆಗೆಲ್ಲಾ ಮಾದೇವಪ್ರಸಾದ್ನ ಮನೆಯಾಗೆ ಪ್ರಸಾದ ಸ್ವೀಕರಿಸಿ ಕ್ಯಾಂಡಿಡೇಟ್‌ಗಳ ಇಂಟ್ರೋ ಮಾಡಿದರು. ರಾಜಸೇಕರಮೂತ್ರಿ ಸಿಸ್ಯ ಸಿವಬಸಪ್ಪನ ಸೆಲೆಕ್ಟು ಆತು. ಆದರೆ ತಮ್ಮವನೇ ಆದ ಗುರುಸಾಮಿ ಗುರುಗುಟ್ಟೋವಾಗ ತೇಲ್‌ಮಾಲಿಶ್ ಮಾಡಲು ಇನ್ನಿಲ್ಲದ ಯತ್ನ ಮಾಡಿದ್ದು ಗೋಡ್ರ ದತ್ತುಪುತ್ರ ದತ್ತ. ಒಕ್ಕಲಿಗರು ಹಿಂದುಳಿದೋರು ಜಟ್ಟಿ, ಬ್ರಾಂಬ್ರು ಇತ್ಯಾದಿ ಜಾತಿಗಳ ಮನೆಗಳಿಗೆಲ್ಲಾ ಅಲೆದು ಮಠಗಳಿಗೆ ನುಗ್ಗಿ ಮಾಸ್ವಾಮಿಗಳ ಪಾದ ತೊಳೆದು ನೀರು ಕುಡಿದರೆಂಬಲ್ಲಿಗೆ ಗೋಡ್ರ ಟೂರು ಎಂಡಾತು.

ಇತ್ತಾ ಕಡೆ ಸಿದ್ರಾಮು ದೂ ಕಸರತ್ತು. ಲೋಹಿಯಾವಾದಿ ನಾಸ್ತಿಕನೆಂದೇ ಪ್ರೊಜೆಕ್ಟ್ ಆಗಿದ್ದ ಸಿದ್ರಾಮು ಗೆಲ್ಲಲೇ ಬೇಕಂತ ಭಕ್ತ ಕನಕನಾಗಿ ಮಾರ್ಪಟ್ಟು ಮಠ ದೇವಾಲಯ ಜ್ಯೋತಿಷಿಗಳ್ತಾವ ಹೋಗಿ ಬೊಕ್ಕು-ಬಾರ್ಲು ಬಿದ್ದಿದ್ದೇ ಬಿದ್ದಿದ್ದೋ! ಸಿದ್ಧಗಂಗಾಮಠಕ್ಕೆ ಹೋಗಿ ಸ್ವಾಮೇರಿಗಿಂತ ಹೆಚ್ಚು ನೆಲಕ್ಕೆ ಬಾಗಿ ಆಶೀರ್ವಾದ ತಕ್ಕಂಡುಹೊರಗಡೆ ಬಂದ್ರೆ ಪೇಪರ್ನೋರ ಹಾವಳಿ. ಅವರಿಂದ ವಿವಿಧ ಬಗೆಯ ಪ್ರಶ್ನಾವಳಿ. ನೋಡ್ರಿ ನಾನು ಯಾವತ್ತು ದೇವರಿಲ್ಲ ಅಂದೋನಲ್ಲ ಇದಾನೆ ಅಂತು ಅಂದೋನಲ್ಲ. ಮಠ ಮಂದಿರಗಳಿಗೆ ಹೋಗ್ತೀನಿ ಅಂದೋನಲ್ಲ. ಹೋಗಲ್ಲ ಅಂದೋನೂ ಅಲ್ಲ. ಜನರ ಅಖಂಡ ಸೇವೆನಾಗೆ ದೇವರ ಕಂಡೋನು. ಅಧಿಕಾರದಾಗಿದ್ದೆ ಟೇಮಿರಲಿಲ್ಲ. ಈಗ ಟೇಮು ಬಂದೇತೆ ಬಂದಿವ್ನಿ ತಪ್ಪಾ? ನಾನೇನು ಎಗೇನ್ ಅಂಡ್ ಎಗೇನ್ ದೇವಸ್ಥಾನಕ್ಕೆ ನುಗ್ಗಿ ಹೋಮ ಯಜ್ಞ ಮಾಡಿಸೋನೂ ಅಲ್ಲ. ಅದೆಲ್ಲಾ
ವಾಮಚಾರಿಗಳಿಗೇ ಸೈ ಅಂತ ಪೇಪರಿನೋರ ಮೇಲೆ ಕಿಡಿಕಾರಬೇಕೆ!

ಅಲ್ಲಿಂದ ತಟ್ಟನೆ ಮಾಯವಾದ ಸಿದ್ದು ಬೆಂಗಳೂರಿನಾಗಿರೋ ಶಾರದ ಪೀಠದ ಜ್ಯೋತಿಷಿ ಸೋಮಯಾಜಿ ಮುಂದೆ ‘ಡೈವ್’ ಹೊಡೆದು ಪಂಚಾಂಗ ತೆಗೆಸಿ ಸಸ್ಯಾಸ್ತ್ರ ಕೇಳಲಾಗಿ ಸೋಮಾಯಾಜಿ ಕೇಳಿದ, ‘ಅಯ್ಯಾ ನಿನ್ನ ಡೇಟ್ ಆಫ್ ಬರ್ತು? ಟೈಮು? ಯಾವ ಡೇ ಬಾರನ್ನು ನೀನು?’ ಸಿದ್ರಾಮು ತಬ್ಬಿಬ್ಬು. ನಾವು ಮೊದ್ಲೆ ಒಬಿಸಿ. ನನ್ನ ಪೇರೆಂಟ್ಸ್‌ಗೇ ಗೊತ್ತಿಲ್ಲ. ನಾ ಹೆಂಗೆ ಹೇಳ್ಳಿ ಬುದ್ಧಿ ಅಂತ ಹಲ್ಲು ಕಿರಿಯಲಾಗಿ ಸಿದ್ರಾಮು ನಾಡಿ ಹಿಡಿದು ಎಕ್ಸಾಂ ಮಾಡಿ ರಿಸಲ್ಟ್‌ನ ಒಂದು ವಾರ ಬಿಟ್ಟು ಹೇಳ್ತೀನಿ ಅಂದ ಸೋಮಯಾಜಿ. ಸಿದ್ರಾಮು ಗಾಬರಿಗೊಂಡ, ಹೆದರಕಂಬಾಡ ಕಂದಾ. ಇಡೀ ಚಾಮುಂಡೇಶ್ವರಿ ಕ್ಷೇತ್ರಕ್ಕೆ ದಿಗ್ಭಂಧನ ಹಾಕಿದ್ದೀನಿ. ಗೋಡ ಅವನ ಮಗನ ಆಟ ಏನು ನೆಡೆಯಾಕಿಲ್ಲ ಅಂತ ಢೈರ್ಯ ಹೇಳ್ದ ಜೋತಿಷಿ ದಕ್ಷಿಣೆ ಕಿತ್ತ. ಅಲ್ಲಿಂದ ಸೀದಾ ವಿಜಯನಗರದಾಗಿರೋ ಆದಿ ಚುಂಚನಗಿರಿ ಮಠಕ್ಕೆ ಅರ್ಲಿ ಮಾರ್ನಿಂಗೇ ದಾಳಿಯಿಟ್ಟು ಬಾಲ ಗಂಗಾಧರ ಬಾಲ ನೀವಿದ ಸಿದ್ದು ಅಲ್ಲಿಂದೆದ್ದು ನುಗ್ಗಿದ್ದು ಸುತ್ತೂರುಮಠಕ್ಕೆ.

ಅಲ್ಲಿ ಸುತ್ತೂರು ಸ್ವಾಮೇರ ಸುತ್ತಾ ಸುತ್ತಿ ಅವರ ಬ್ಲೆಸಿಂಗ್ಸ್ ತಕ್ಕಂಡು ಈಚೆಕಡೆ ಬಂದ ಸಿದ್ರಾಮುಗೆ ಆರಾಮಾಗಿರೋಕೆ ಬಿಡಬೇಕಲ್ಲ ಪೇಪರ್ ಮಂದಿ. ಇಂಟ್ರೂಗೆ ನಿಂತರು. ಸಾರ್, ನಿಮ್ಮನ್ನ ಗೋಡ್ರು ಆಷಾಢಭೂತಿ ಅಂತಾರಲ್ಲ? ಅಂತ ಕೆಣಕಿದರು. ನೋಡ್ರಪಾ ತಮ್ಮದು ಜಾತ್ಯಾತೀತ ಪಕ್ಷ ಅಂತ ಹೇಳೋ ಗೋಡ ಕೋಮುವಾದಿ ಪಕ್ಷದ ದೋಸ್ತಿ ಮಾಡಿದ್ದು, ದೋಸ್ತಿ ಸರ್ಕಾರಕ್ಕೂ ನನಗೂ ಸಂಬಂಧವೇ ಇಲ್ಲ ಅಂತ ಬೊಗಳಿ ತಾನೇ ಒಳಗಿಂದೊಳ್ಗೆ ಆಡಳಿತ ನೆಡೆಸ್ತಿರೋದು ಆಷಾಢಭೂತಿ ನಿಲುವು ಆಗೋದಿಲ್ಲೇನ್ರಿ? ಸಿದ್ರಾಮುಗೆ ರೇಗಿತ್ತು.

ಅದೆಂಗಾರ ಹೋಗ್ಲಿಸಾ ಉಡುಪಿ ಮಠವನ್ನು ನೀವು ಸರ್ಕಾರದ ವಶಕ್ಕೆ ತಗೋಳ್ಳೋಕೆ ಹಠಹಿಡಿದಿರಿ. ಅದು ಉಡುಪಿ ಮಠ ಅಲ್ಲ… ದೇವಸ್ಥಾನ ಅಂದು ಪೇಜಾವರರ ಮನ ನೋಯಿಸಿ ಶಾಪಕ್ಕೂ ಗುರಿಯಾಗಿದ್ದೀರಿ. ಹಿಂಗಾಗಿಯೇ ನಿಮಗೆ ಈ ದುಸ್ಥಿತಿ ಬಂದದಂತೆ ನಿಜವಾ ಸಾ? / ಯಾವನ್ರಿ ಹಂಗದೋನು ಬೋ…. ಮಗ? ಅವನ ಹಲ್ಲು ಮುರಿತೀನಿ / ನಾವಲ್ಲ ಸಾ…..  ಯಡೂರಪ್ಪ ಹಂಗೆ ಗೆಸ್ ಮಾಡಿ ಹೇಳವರೆ / ಅವರ ಗೆಸ್ಸು ಮಿಸ್ ಹೊಡಿತದೆ ಬಿಡ್ರಿ / ಮೂವತ್ತೆರಡೂ ಹಲ್ಲುಗಳನ್ನು ತೋರಿದರು ಸಿದ್ರಾಮು. ಅಂದಂಗೆ ಸಾ, ನೀವು ಇತ್ತಾಕಡೆ ಬರುತ್ಲು ಸಿ‌ಎಂ ಕೊಮಾಸಾಮಿ ಕೂಡ ಸೋಮಾಯಾಜಿನಾ ಮೀಟ್ ಮಾಡಿದ್ದರು ಸಾ. ನೀವು ಪಿ‌ಎಂ ಆಗ್ತೀರಾ ಕೊಮಾಸಾಮಿ ಅಂತ ಆ ಬ್ರಾಮ್ಣ ಆಸೀರ್ವಾದ ಮಾಡವನಂತೆ ಸಾ / ಮಾಡ್ಕಳಿ ಬಿಡ್ರಿ. ಪಿ.ಎಂ. ಅಂದರೆ ಪೋಸ್ಟ್‌ಮಾರ್ಟಂ ಅಂತ್ಲೂ ಮೀನಿಂಗ್ ಆತದೆ ಕಣ್ರಿ / ಗೊಳ್ಳನೆ ನಕ್ಕ ಸಿದ್ರಾಮು ಪಂಚೆ ಕೊಡವಿಕೊಂಡು ಟವೆಲ್ ಹೆಗಲಮ್ಯಾಲೆ ಒಗೆದರು. ನೋಡ್ರಿ, ಇಲ್ಲಿಗಂಟ ಗೆದ್ದದ್ದು ನಾನೇ ಕಣ್ರಿ. ಜೆಡಿ‌ಎಸ್ ಅಲ್ಲ. ಈ ಸಲ ವಿನ್ ಆಗೋದು ನಾನೆಯಾ ಅಂದವರೆ ಅಂತರ್ಧಾನರಾದರು.

ಎಲ್ಲಾ ಪಕ್ಷದೋರು ನಾಮಿನೇಶನ್ ಸಲ್ಲಿಸೋಕೆ ಕರ್ಕೊಂಡು ಬಂದ ಜನಸಾಗರ ನೋಡಿದ ಮೈಸೂರಿಗರು ಈಟುಬ್ಯಾಗ ದಸರಾ ಬಂದಿದ್ದಾತೆ! ಎಂದು ಮೂಗಿನ ಮ್ಯಾಗೆ ಬೆಳ್ಳು ಇಟ್ಕಂಡರು. ಅಂಬರೀಸು ಸೆಂಟ್ರಲ್ ಮಿನೀಟ್ರಾಗಿ ಕ್ಯಾನ್ವಾಸ್ಗೆ ಇಳಿದಿರೋದ್ರಿಂದ ಕಾಂಗ್ರೆಸ್ ವರ್ಚಸ್ಸೇನೋ ಡಬ್ಬಲ್ ಆಗೇತ್ರಿ. ಆದರೆ ಔಟ್‌ಡೇಟೆಡ್ ಸಿವಬಸಜ್ಜ ಕ್ಯಾಂಡಿಡೇಟು ಆಗಿರೋದ್ರಿಂದ ಜೆಡಿ‌ಎಸ್ ಸರ್ವನಾಶ ಗ್ಯಾರಂಟಿ ಕಣ್ರಿ. ದಿಸ್ ಈಸ್ ಆಲ್ ರಾಜಸೇಕರ ಮೂತ್ರಿ ಎಂಬ ಓಲ್ಡ್ ಮ್ಯಾನ್ ಟ್ರಿಕ್ಸು.. ಐ ನೋಸ್. ಹಿಂಗಂತ ಭವಿಷ್ಯ ನುಡಿದಿರೋದು ನಾನಲ್ರಿ. ಜೆಡಿಯುಗೆ ಜಂಪ್ ಮಾಡಿರೋ ಗುರುಸ್ವಾಮಿ! ಯಾರ ಭವಿಷ್ಯ ಹೆಂಗೈತೋ ಯಾರ್ ನೋಸ್. ಚಾಮುಂಡಿ ಓನ್ಲಿ ನೋಸ್….  ಏನಂತಿರಾ?
*****

(೧೭-೧೨-೨೦೦೬)

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಕೌತುಕದ ಕಣ್ಣ ಮಿಂಚಿನಿಂದ
Next post ಈ ಜನ

ಸಣ್ಣ ಕತೆ

  • ಕಲ್ಪನಾ

    ಚಿತ್ರ: ಟಾಮ್ ಬಿ ಇದು ಇಪ್ಪತ್ತು ವರ್ಷಗಳ ಹಿಂದಿನ ಕಥೆ! ಮಾತನಾಡುವ ಸಿನಿಮಾ ಪ್ರಪಂಚ ಅದೇ ಆಗ ದಕ್ಷಿಣ ಭಾರತದಲ್ಲಿ ತಲೆಯೆತ್ತಿದ್ದಿತು! ಸಿನಿಮಾದಲ್ಲಿ ಪಾತ್ರವಹಿಸುವ ನಟಿನಟಿಯರನ್ನು ಅಚ್ಚರಿಯ… Read more…

  • ಜಡ

    ಮಾರಯ್ಯನನ್ನು ಅವನ ಹಳ್ಳಿಯಲ್ಲಿ ಹಲವರು ಹಲವು ಹೆಸರುಗಳಿಂದ ಕರೆಯುತ್ತಿದ್ದರು. ಹಾಗಾಗಿ ಅವನ ನಿಜವಾದ ಪೂರ್ತಿ ಹೆಸರು ಮಾರಯ್ಯನೆಂಬುವುದು ಸಮಯ ಬಂದಾಗ ಅವನಿಗೆ ಒತ್ತಿ ಹೇಳಬೇಕಾಗಿ ಬರುತ್ತಿತ್ತು. ಅಂತಹ… Read more…

  • ವರ್ಗಿನೋರು

    ಆಗ್ಲೇ ವಾಟು ವಾಲಿತ್ತು. ಯೆಷ್ಟು ವಾಟು ವಾಲ್ದ್ರೇನು? ಬಳ್ಳಾರಿ ಬಿಸ್ಲೆಂದ್ರೆ ಕೇಳ್ಬೇಕೇ? ನಡೆವ... ದಾರ್ಗೆ ಕೆಂಡ ಸುರ್ದಂಗೆ. ನೆಲಂಭೋ ನೆಲಾ... ಝಣ ಝಣ. ‘ಅಲ್ಗೆ’ ಕಾದಂಗೆ. ಕಾಲಿಟ್ರೆ… Read more…

  • ಕೊಳಲು ಉಳಿದಿದೆ

    ಮಾತಿನ ತೆರೆ ಒಂದು "ನೋಡಿ, ಜನರು ನನ್ನನ್ನು ನೋಡಿ ನಗುತ್ತಾರೆ! ಈ ಬಂಗಾರದ ಕೃಷ್ಣನ ಮೂರ್ತಿ ಇವಳ ಕೈಯಲ್ಲಿ ಯಾವಾಗಲೂ ಏಕೆ ಎಂದು ಕೇಳುತ್ತಾರೆ! ನನ್ನ ಹತ್ತರ… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

cheap jordans|wholesale air max|wholesale jordans|wholesale jewelry|wholesale jerseys