ಹೀಗೇ
ನಡೆಯುತ್ತಾ ನಡೆಯುತ್ತಾ
ಅರ್ಧದಲ್ಲೇ ಥಟ್ಟನೆ
ಎಲ್ಲ ನಿಂತು

ಗಾಳಿ ಸ್ತಬ್ಧ
ನೀರು – ಬೇರು ಸ್ತಬ್ಧ
ಜೀವ – ಜೀವನವೇ ಸ್ತಬ್ಧ!

ಎಲ್ಲ ಗಮ್ಮತ್ತುಗಳೂ
ಮೈ ಮುದುರಿ
ಕೌದಿ ಹೊದ್ದು ತೆಪ್ಪಗೆ
ಮಲಗಿಬಿಟ್ಟಿವೆಯೇ?

ಮದಿರೆಯ
ಬಟ್ಟಲೂ ಖಾಲಿ
ನಶೆಯೂ ಇಳಿದು
ಗಂಟೆಗಳೇ ಸರಿದಿವೆ!

ಗಮನಿಸಿಯೂ
ಗಮನಿಸದಂತೆ
ಮೌನ ಹೊದ್ದು
ಕೌತುಕದ ಕಣ್ಣರಳಿಸಿದೆ
ಸೂರ್ಯನ ಮೂರನೇ ಕಣ್ಣು!

ಕಾಯಿಸದೇ ಹಾಲಿನ ಕೆನೆಯೆಲ್ಲಿ?
ನೋಯಿಸದೇ ಹೊಮ್ಮುವ
ಜೀವವೆಲ್ಲಿ?

ಸೂರ್ಯನ ಕೌತುಕವ
ಕಣ್ಣಿನ ಮಿಂಚಿಂದ
ನಿಧಾನಕ್ಕಾದರೂ ಸರಿ
ಮತ್ತೆ ಹನಿ ಒಸರಬೇಕು
ಹಸಿಮಣ್ಣಲಿ ಬೀಜ
ಬಿತ್ತಬೇಕು
ಜೀವಂತಿಕೆ ಉಕ್ಕಬೇಕು

ಸ್ತಬ್ಧತೆಯ ಮೀರಿ
ಢಣಗುಡುವ ಘಂಟಾನಾದ
ಮೊಳಗಲೇಬೇಕು!
*****