ಕಡಲೊಳಗಿನ ಹನಿ ಹನಿ
ಸೂರ್ಯನೊಳಗಿನ ಬೆಳಕ ರೇಖೆಗಳು
ಎಲ್ಲ ಜಂಜಡವ ಹೊತ್ತು ಸಾಗಿದ ಕಾಲ.

ಮನದ ಭಾಷೆದ ಅರಳಿದ ಶಬ್ದ
ಶಬ್ದದೊಳಗಿನ ನಿಶ್ಶಬ್ದ
ಎಲ್ಲ ಮಥಿಸಿದ ಆತ್ಮ ಸಂಗಾತ.

ಕನವರಿಸಿದ ಏಕಾಂತ
ಮೊಳಕೆ ಒಡೆಯುವ ಬೀಜ
ಎಲ್ಲ ಫಸಲೊಡೆದ ಪೈರು.

ಕುಡಿ ಒಡೆದ ಚಿಗುರು
ಸ್ಪರ್ಶಗಳ ಲಯ ಬಾಷೆ
ಎಲ್ಲ ಹೆಮ್ಮರವಾಗುವ ವೃಕ್ಷ.

ಹನಿಗೆ ಚಿಗುರಿದ ಬೇರು
ಘನಕೆ ಅರಳಿದ ಕೊಯ್ಲ
ಎಲ್ಲ ಸುಗ್ಗೀ ಹಿಗ್ಗಿನ ಮ್ಯಾಳ.

ಚಿಗುರಿ ಹುಟ್ಟಿ ಬೆಳೆದು ಸುಳಿದ
ದಿಕ್ಕಿಗೆ ಚಲಿಸಿದ ಗಾಳಿ ಗಂಧ
ಎಲ್ಲ ಬಾಗಿಲು ತೆರೆದು ದಾಟಿ ಹೋದ ಹಕ್ಕಿ.

ಮಥಿಸಿದ ಬೆಳಕು ಚಿಗುರು ಭಾಷೆ
ಅರ್ವಿಭಾವಕೆ ಒಲುಮೆಯ ಹಾಡು
ಜಗದ ನೆಲಮುಗಿಲುಗಳ ಎಲ್ಲ ರೂಪಾಂತರ.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)